Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಬಿ.ಎನ್. ರಾವ್-ಅಂಬೇಡ್ಕರ್: ಸಂವಿಧಾನ...

ಬಿ.ಎನ್. ರಾವ್-ಅಂಬೇಡ್ಕರ್: ಸಂವಿಧಾನ ರಚಿಸಿದ್ದು ಯಾರು?

ಗಿರೀಶ್ ತಾಳಿಕಟ್ಟೆಗಿರೀಶ್ ತಾಳಿಕಟ್ಟೆ19 Jan 2026 10:00 AM IST
share
ಬಿ.ಎನ್. ರಾವ್-ಅಂಬೇಡ್ಕರ್: ಸಂವಿಧಾನ ರಚಿಸಿದ್ದು ಯಾರು?

ಕೆಲವೇ ತಿಂಗಳ ಅವಧಿಯಲ್ಲಿ ತನ್ನ ಕಾರ್ಯ ಮುಗಿಸಿಕೊಟ್ಟು, ಮ್ಯಾನ್ಮಾರ್ ಸಂವಿಧಾನ ರಚನಾ ಕಾರ್ಯದತ್ತ ಹೊರಟುಹೋದ ರಾವ್ ಅವರನ್ನು 2 ವರ್ಷ, 11 ತಿಂಗಳು, 18 ದಿನಗಳ ಕಾಲ ಕಾನೂನು ಅಧ್ಯಯನ ನಡೆಸಿ ಬರೋಬ್ಬರಿ 7,600 ತಿದ್ದುಪಡಿಗಳ ಮೂಲಕ ವಿಸ್ತೃತ ರೂಪ ನೀಡಿದ ಅಂಬೇಡ್ಕರ್ ಅವರಿಗೆ ಸರಿಸಮನೆಂದು ವಾದಿಸಲು ಹೋಗುವುದು ಅಂಬೇಡ್ಕರರಿಗೆ ಮಾಡಿದ ಅವಮಾನವಾಗುವುದಿಲ್ಲ; ಬದಲಿಗೆ, ಇತಿಹಾಸದ ಕುರಿತು ನಮ್ಮ ಅಜ್ಞಾನದ ಪ್ರದರ್ಶನವಾದೀತಷ್ಟೆ.

ಭಾಗ - 2

ಸಂವಿಧಾನ ರಚನಾ ಸಭೆಯ ತಮ್ಮ ಅಂತಿಮ ಭಾಷಣದಲ್ಲಿ ಬಿ.ಎನ್. ರಾವ್ ಅವರ ಕೊಡುಗೆಯನ್ನು ಸ್ವತಃ ಅಂಬೇಡ್ಕರ್ ಕೊಂಡಾಡಿದ್ದನ್ನು ಉಲ್ಲೇಖಿಸಿ, ರಾವ್ ಅವರನ್ನು ನಿಜವಾದ ಸಂವಿಧಾನ ಶಿಲ್ಪಿ ಎಂದು ಬಿಂಬಿಸಲು ಹಲವರು ಪ್ರಯತ್ನಿಸುತ್ತಾರೆ. ವಾಸ್ತವವೇನೆಂದರೆ, ಅಂಬೇಡ್ಕರ್ ತಮ್ಮ ಆ ಭಾಷಣದಲ್ಲಿ ರಚನೆಗೆ ಸಹಕರಿಸಿದ ಪ್ರತಿಯೊಬ್ಬರನ್ನು ಸ್ಮರಿಸಿ ಧನ್ಯವಾದ ಅರ್ಪಿಸಿದ್ದರು. ರಚನಾ ಸಮಿತಿಯ ಅಧ್ಯಕ್ಷರಾಗಿ ಅದು ಅವರ ಕರ್ತವ್ಯವೂ ಆಗಿತ್ತು. ಇನ್ನು ಅಧಿಕಾರಿಗಳ ವಿಚಾರಕ್ಕೆ ಬಂದಾಗ, ಬಿ.ಎನ್. ರಾವ್ ಮಾತ್ರವಲ್ಲದೆ, ಪ್ರಧಾನ ಕರಡು ಬರಹಗಾರ ಎಸ್.ಎನ್. ಮುಖರ್ಜಿಯವರನ್ನೂ ಅಂಬೇಡ್ಕರ್ ತುಂಬಾ ಕೃತಜ್ಞತಾಪೂರ್ವಕವಾಗಿ ಸ್ಮರಿಸಿದ್ದಾರೆ. ಹಾಗೆ ನೋಡಿದರೆ ಬಿ.ಎನ್. ರಾವ್ ಅವರಿಗಿಂತ ಮುಖರ್ಜಿಯವರ ಪಾತ್ರ ಅಪಾರವಾದುದು. ಅಗತ್ಯಕ್ಕೆ ತಕ್ಕಂತೆ ವಿದೇಶಿ ಕಾನೂನು ಅವಕಾಶಗಳನ್ನು ಕ್ರೋಡೀಕರಿಸಿ ಕೊಡುವಷ್ಟಕ್ಕೆ ರಾವ್ ಅವರ ಕೆಲಸ ಮುಗಿದಿತ್ತು. ಆದರೆ ಅಂಬೇಡ್ಕರರು ಅವುಗಳನ್ನು ಅಧ್ಯಯನ ಮಾಡಿ, ಭಾರತದ ಸಂಕೀರ್ಣ ಸಮಾಜಕ್ಕೆ ತಕ್ಕಂತೆ ತಿದ್ದುಪಡಿ-ವಿಸ್ತರಣೆಗಳಿಗೆ ಒಳಪಡಿಸಿ ಸಭೆಯಲ್ಲಿ ಮಂಡಿಸಿದಾಗ, ವಿಸ್ತೃತ ಚರ್ಚೆ ನಡೆದವು. ಕೆಲವರು ಆಕ್ಷೇಪ ವ್ಯಕ್ತಪಡಿಸಿದರು, ಕೆಲವರು ಸುಧಾರಣೆಗಳನ್ನು ಸೂಚಿಸಿದರು. ಅನುದಿನದ ಸಭೆಯ ಚರ್ಚೆಯಲ್ಲಿ ಹಾಜರಿದ್ದು, ಅಷ್ಟೂ ಚರ್ಚೆಗಳನ್ನು ದಾಖಲಿಸಿಕೊಂಡು, ಸಭೆಯ ಅಂತಿಮ ತೀರ್ಮಾನದಂತೆ ಅನುಚ್ಛೇದಗಳನ್ನು ಕಾನೂನಿನ ಪರಿಭಾಷಾ ಮಿತಿಯಲ್ಲಿ ತಿದ್ದುಪಡಿ ಮಾಡಿದ್ದು ಮುಖರ್ಜಿಯವರು. ಮುಖರ್ಜಿಯವರು ಇಲ್ಲದೆ ಹೋಗಿದ್ದರೆ ಈ ಸಂವಿಧಾನವನ್ನು ಅಂತಿಮಗೊಳಿಸಲು ನಮ್ಮ ರಚನಾ ಸಭೆಗೆ ಇನ್ನೂ ಹಲವು ವರ್ಷಗಳು ಬೇಕಾಗುತ್ತಿತ್ತೇನೋ ಎಂದು ಸ್ವತಃ ಅಂಬೇಡ್ಕರ್ ತಮ್ಮ ಭಾಷಣದಲ್ಲಿ ಹೇಳಿದ್ದಾರೆ. ಆದರೆ ಮುಖರ್ಜಿಯವರ ಉಲ್ಲೇಖವನ್ನು ಸ್ಮರಿಸದ ಮನುವಾದಿಗಳು ಬ್ರಾಹ್ಮಣರೆಂಬ ಕಾರಣಕ್ಕೆ ರಾವ್ ಅವರ ಉಲ್ಲೇಖವನ್ನು ಪುನರುಚ್ಚರಿಸುತ್ತಿದ್ದಾರೆ.

ಬಿ.ಎನ್. ರಾವ್ ಅವರು ಕ್ರೋಡೀಕರಿಸಿ ಕೊಟ್ಟ ಕಾನೂನುಗಳ ಕರಡು ಪ್ರತಿಗೂ, ಅಂತಿಮವಾಗಿ ಅಂಬೇಡ್ಕರ್ ನೇತೃತ್ವದ ರಚನಾ ಸಮಿತಿಯಡಿ ಅಂಗೀಕಾರಗೊಂಡ ಕರಡು ಪ್ರತಿಗೂ ನಡುವೆ ಇರುವ ವ್ಯತ್ಯಾಸವನ್ನು ಅರ್ಥ ಮಾಡಿಕೊಂಡಾಗ ಸಂವಿಧಾನ ರಚನೆಯಲ್ಲಿ ರಾವ್ ಅವರ ಮಿತಿಯೂ ಅರ್ಥವಾಗುತ್ತದೆ; ಅಂಬೇಡ್ಕರ್ ಅವರ ಶ್ರಮವೂ ಕಾಣುತ್ತದೆ. 1947ರ ಅಕ್ಟೋಬರ್‌ನಲ್ಲಿ ಬಿ.ಎನ್. ರಾವ್ ತಮ್ಮ ಸಂಗ್ರಹ ವರದಿಯನ್ನು ಅಂಬೇಡ್ಕರ್ ನೇತೃತ್ವದ ರಚನಾ ಸಮಿತಿಗೆ ಸಲ್ಲಿಸುತ್ತಾರೆ. ಆಗ ಅವರ ವರದಿಯಲ್ಲಿ 13 ಶೆಡ್ಯೂಲ್‌ಗಳು ಮತ್ತು 243 ಆರ್ಟಿಕಲ್‌ಗಳು ಇರುತ್ತವೆ. ಇವೆಲ್ಲವೂ ನೆಹರೂ ನೇತೃತ್ವದಲ್ಲಿ ರಚನಾ ಸಭೆ ಅನುಮೋದಿಸಿದ್ದ ಭಾರತ ಸಂವಿಧಾನದ objective resolutionಗೆ ಅನುಗುಣವಾಗಿ ವಿದೇಶಿ ಕಾನೂನುಗಳಿಂದ ಸಂಗ್ರಹಿಸಿದ ಕರಡು ಕಾಯ್ದೆಗಳಷ್ಟೆ. ಈ ಕಾನೂನು ಅವಕಾಶಗಳು ಭಾರತದ ಸಮಾಜಕ್ಕೆ ಎಷ್ಟು ಸರಿಹೊಂದುತ್ತವೆ, ಯಾವುದನ್ನು ಹೇಗೆಲ್ಲ ಮರುರೂಪಿಸಬೇಕು ಎಂದು ಸತತ 141 ದಿನಗಳ ಕಾಲ ಹಗಲುರಾತ್ರಿ ಅಧ್ಯಯನಶೀಲರಾಗುವ ಅಂಬೇಡ್ಕರ್ ಬಿ.ಎನ್. ರಾವ್ ನೀಡಿದ್ದ 243 ಆರ್ಟಿಕಲ್‌ಗಳನ್ನು 395 ಆರ್ಟಿಕಲ್‌ಗಳಿಗೆ ವಿಸ್ತರಿಸುತ್ತಾರೆ ಮತ್ತು 13 ಶೆಡ್ಯೂಲ್‌ಗಳನ್ನು 8 ಶೆಡ್ಯೂಲ್‌ಗೆ ಕಡಿತಗೊಳಿಸುತ್ತಾರೆ. ಅಂದರೆ ಬಿ.ಎನ್. ರಾವ್ ನೀಡಿದ್ದ ಅಸ್ಥಿಪಂಜರಕ್ಕೆ ಅಂಬೇಡ್ಕರ್ ರಕ್ತಮಾಂಸ ಜೀವ ತುಂಬುವ ಕೆಲಸ ಮಾಡುತ್ತಾರೆ.

ಬಿ.ಎನ್. ರಾವ್ ರೂಪಿಸುವಾಗ ಕೇವಲ ಒಂದು ಕಾನೂನು-ಆಡಳಿತಾತ್ಮಕ ಕಟ್ಟಳೆಗಳ ಸಂಗ್ರಹವಾಗಿದ್ದ frameworಗೆ ಅಂಬೇಡ್ಕರ್ ಹೇಗೆಲ್ಲ ಜೀವ ತುಂಬಿದರು ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕೆಂದರೆ ನಾವು ಸಂವಿಧಾನದ ಪೀಠಿಕೆಗೆ ರಾವ್ ಹೇಗೆ ಸಲಹೆ ಕೊಟ್ಟಿದ್ದರು, ಅಂಬೇಡ್ಕರ್ ಹೇಗೆ ಅದನ್ನು ವ್ಯಾಖ್ಯಾನಿಸಿದರು ಎಂಬುದನ್ನು ಗಮನಿಸಬೇಕು. ‘‘We, the people of India, seeking to promote the common good, do hereby, through our chosen representatives, enact, adopt and give to ourselves this constitution’’ ಎಂದು ದಾಖಲಿಸಲು ರಾವ್ ಸಲಹೆ ನೀಡಿದ್ದರು. ಆದರೆ ಇಲ್ಲಿ ‘common good’ ಎನ್ನುವುದು ಮೇಲ್ನೋಟಕ್ಕೆ ಪ್ರಗತಿಪರವಾಗಿ ಗೋಚರಿಸಿದರೂ, ಜಾತಿವ್ಯವಸ್ಥೆಯಿಂದ ಬಾಧಿತವಾದ ಭಾರತದ ಸಮಾಜದಲ್ಲಿ ಒಂದೊಂದು ಸಮುದಾಯದ ದೃಷ್ಟಿಯಲ್ಲಿ ಒಂದೊಂದು ರೀತಿಯಾಗಿ common good ವ್ಯಾಖ್ಯಾನಗೊಳ್ಳಬಹುದಿತ್ತು. ಇದನ್ನು ಮನಗಂಡ ಅಂಬೇಡ್ಕರ್ Justice, Liberty, Equality, or Fraternity ಎಂಬ ಕ್ರಾಂತಿಕಾರಿ ಆಧಾರಸ್ತಂಭಗಳನ್ನು ಪೀಠಿಕೆಯೊಳಗೆ ಸೇರಿಸಿ, ಕಾನೂನು ಗ್ರಂಥವಾಗಬಹುದಿದ್ದ ಸಂವಿಧಾನವನ್ನು ಸಾಮಾಜಿಕ ಪ್ರಣಾಳಿಕೆಯಾಗಿ ರೂಪಾಂತರಿಸಿದರು. ಜಾತಿಯಿಂದ ವಿಭಜಿತವಾದ ಸಮಾಜದಲ್ಲಿ ಭ್ರಾತೃತ್ವವನ್ನು ನೀವು ಬಾಳ್ವಿಕೆಯ ಆತ್ಮವಾಗಿಸದೆ ಹೋದರೆ, ‘ಸಾಮಾನ್ಯ ಒಳಿತು’ ಎಂಬ ಆಶಯ ಅರ್ಥಕಳೆದುಕೊಳ್ಳಲಿದೆ ಎಂಬುದು ಅಂಬೇಡ್ಕರರ ವಾದವಾಗಿತ್ತು.

ರಾವ್ ವರದಿಯಲ್ಲಿ ಕೇವಲ ಘೋಷಣಾತ್ಮಕವಾಗಿ ಉಲ್ಲೇಖವಾಗಿದ್ದ ಮೂಲಭೂತ ಹಕ್ಕುಗಳನ್ನು ಪರಿಷ್ಕರಿಸಿ ಆರ್ಟಿಕಲ್ 17ರ ಮೂಲಕ ಅಸ್ಪಶ್ಯತೆಯನ್ನು ತೊಡೆದುಹಾಕಿದ್ದು, ಆರ್ಟಿಕಲ್ 32ರ ಸೇರ್ಪಡೆ ಮೂಲಕ ಸಂವಿಧಾನಾತ್ಮಕ ರಕ್ಷಣೆಗಳನ್ನು ಒದಗಿಸಿದ್ದು ಅಂಬೇಡ್ಕರ್. ರಾವ್ ವರದಿಯಲ್ಲಿ ತಾಂತ್ರಿಕವಾಗಿ ಕಾನೂನಿನ ದೃಷ್ಟಿಯಲ್ಲಿ ಮಾತ್ರ ಘೋಷಿಸಲಾಗಿದ್ದ ‘ಸಮಾನತೆ’ಯನ್ನು ಮರುವ್ಯಾಖ್ಯಾನಿಸಿ ವಿಸ್ತರಿಸಿದ ಅಂಬೇಡ್ಕರರು ಎಸ್‌ಸಿ/ಎಸ್‌ಟಿ ಮೀಸಲಾತಿಯ ಮೂಲಕ ಅವಕಾಶಗಳಲ್ಲೂ ಸಮಾನತೆಯನ್ನು ಲಭ್ಯವಾಗಿಸಿದರು. ರಾವ್ ತಮ್ಮ ವರದಿಯಲ್ಲಿ ನಿರ್ದೇಶಾತ್ಮಕ ತತ್ವಗಳನ್ನು ಆಡಳಿತಾತ್ಮಕ ನಿಬಂಧನೆಗಳ ರೂಪದಲ್ಲಿ ಹಕ್ಕುಗಳ ಜೊತೆಗೇ ಬೆಸೆದು ಕೊಟ್ಟಿದ್ದರು. ಅವುಗಳನ್ನು ಪರಿಚ್ಛೇದ 4ರಲ್ಲಿ ಪ್ರತ್ಯೇಕವಾಗಿ ವಿಂಗಡಿಸಿದ ಅಂಬೇಡ್ಕರರು ಸರಕಾರದ ನೈತಿಕ ಪ್ರಜ್ಞೆಯಾಗಿ ವ್ಯಾಖ್ಯಾನಿಸಿದರು. ಇವು ಕೇವಲ ಕೆಲವು ಉದಾಹರಣೆಗಳಷ್ಟೆ. ಪ್ರತೀ ಅನುಚ್ಛೇದದ ಪ್ರತೀ ಉಪಬಂಧಗಳನ್ನು ಹೀಗೆ ಆಳವಾಗಿ ತರ್ಕಿಸಿ, ಸುದೀರ್ಘವಾಗಿ ಚರ್ಚೆಗೆ ಒಳಪಡಿಸಿ, ಅವುಗಳ ಮೂಲಕ ದೇಶದ ಚಲನೆಯ ದಿಕ್ಕನ್ನು ನಿರ್ಧರಿಸಿದ್ದು ಅಂಬೇಡ್ಕರ್ ನೇತೃತ್ವದ ರಚನಾ ಸಮಿತಿ. ಕೆಲವೇ ತಿಂಗಳ ಅವಧಿಯಲ್ಲಿ ತನ್ನ ಕಾರ್ಯ ಮುಗಿಸಿಕೊಟ್ಟು, ಮ್ಯಾನ್ಮಾರ್ ಸಂವಿಧಾನ ರಚನಾ ಕಾರ್ಯದತ್ತ ಹೊರಟುಹೋದ ರಾವ್ ಅವರನ್ನು 2 ವರ್ಷ, 11 ತಿಂಗಳು, 18 ದಿನಗಳ ಕಾಲ ಕಾನೂನು ಅಧ್ಯಯನ ನಡೆಸಿ ಬರೋಬ್ಬರಿ 7,600 ತಿದ್ದುಪಡಿಗಳ ಮೂಲಕ ವಿಸ್ತೃತ ರೂಪ ನೀಡಿದ ಅಂಬೇಡ್ಕರ್ ಅವರಿಗೆ ಸರಿಸಮನೆಂದು ವಾದಿಸಲು ಹೋಗುವುದು ಅಂಬೇಡ್ಕರರಿಗೆ ಮಾಡಿದ ಅವಮಾನವಾಗುವುದಿಲ್ಲ; ಬದಲಿಗೆ, ಇತಿಹಾಸದ ಕುರಿತು ನಮ್ಮ ಅಜ್ಞಾನದ ಪ್ರದರ್ಶನವಾದೀತಷ್ಟೆ.

ಇನ್ನು ಅಂಬೇಡ್ಕರರು ಸಂವಿಧಾನ ರಚನೆಗೆ ತಮ್ಮನ್ನು ತಾವು ಎಷ್ಟು ಸಮರ್ಪಿಸಿಕೊಂಡಿದ್ದರು ಎಂಬುದನ್ನು ಹೊಸದಾಗಿ ನಿರೂಪಿಸುವ ಅಗತ್ಯವಿಲ್ಲ. ನವೆಂಬರ್ 5, 1948ರ ರಚನಾ ಸಭೆಯಲ್ಲಿ ಸದಸ್ಯ ಟಿ.ಟಿ. ಕೃಷ್ಣಾಮಾಚಾರಿಯವರು ಮಾಡಿರುವ ಈ ಭಾಷಣದ ತುಣುಕು ಸಾಕು.. ‘‘ಕರಡು ರಚನಾ ಸಮಿತಿಗೆ ಸಭೆಯಿಂದ ನೇಮಿಸಲ್ಪಟ್ಟ ಏಳು ಸದಸ್ಯರಲ್ಲಿ ಒಬ್ಬರು ಸಭೆಗೆ ರಾಜೀನಾಮೆ ನೀಡಿದ್ದರು ಮತ್ತು ಅವರ ಬದಲಿಗೆ ಬೇರೆಯವರನ್ನು ನೇಮಿಸಲಾಯಿತು ಎಂಬ ವಿಷಯ ಸಭೆಗೆ ಬಹುಶಃ ತಿಳಿದಿರಬಹುದು. ಇನ್ನೊಬ್ಬರು ನಿಧನರಾದರು ಮತ್ತು ಅವರ ಸ್ಥಾನಕ್ಕೆ ಯಾರನ್ನೂ ನೇಮಿಸಲಿಲ್ಲ. ಮತ್ತೊಬ್ಬರು ದೂರದ ಅಮೆರಿಕದಲ್ಲಿ ಉಳಿದರು ಮತ್ತು ಅವರ ಸ್ಥಾನವೂ ಭರ್ತಿಯಾಗಲಿಲ್ಲ. ಇನ್ನುಳಿದ ಒಬ್ಬಿಬ್ಬರು ದಿಲ್ಲಿಯಿಂದ ಬಹಳ ದೂರದಲ್ಲಿದ್ದರು ಮತ್ತು ಬಹುಶಃ ಅನಾರೋಗ್ಯದ ಕಾರಣದಿಂದಾಗಿ ಸಮಿತಿಯ ಕರ್ತವ್ಯಗಳಿಗೆ ಹಾಜರಾಗಲು ಅವರಿಗೆ ಸಾಧ್ಯವಾಗಲಿಲ್ಲ. ಹೀಗಾಗಿ, ಅಂತಿಮವಾಗಿ ಈ ಸಂವಿಧಾನವನ್ನು ರಚಿಸುವ ಸಂಪೂರ್ಣ ಹೊಣೆಗಾರಿಕೆಯು ಡಾ. ಅಂಬೇಡ್ಕರ್ ಅವರ ಮೇಲೆ ಬಿತ್ತು. ಅವರೇ ಈ ಮಹತ್ವದ ದಾಖಲೆಯನ್ನು ಸಿದ್ಧಪಡಿಸುವಲ್ಲಿ ಪ್ರಮುಖ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಅವರು ಈ ಕಾರ್ಯವನ್ನು ಅತ್ಯಂತ ಶ್ಲಾಘನೀಯವಾಗಿ ಪೂರೈಸಿರುವುದಕ್ಕಾಗಿ ನಾವೆಲ್ಲರೂ ಅವರಿಗೆ ಚಿರಋಣಿಯಾಗಿದ್ದೇವೆ ಎಂಬಲ್ಲಿ ನನಗೆ ಯಾವುದೇ ಅನುಮಾನವಿಲ್ಲ.’’

ಅಂಬೇಡ್ಕರ್ ಅವರನ್ನು ನಾವು ಯಾಕೆ ಸಂವಿಧಾನ ಶಿಲ್ಪಿ ಎಂದು ಪರಿಗಣಿಸುತ್ತೇವೆ ಎಂದು ಅರ್ಥ ಮಾಡಿಸಲು ಇಷ್ಟು ವಿವರಣೆ ಸಾಕು. ಇದರ ನಂತರವೂ ಬಿ.ಎನ್. ರಾವ್ ಅವರನ್ನು ಶಿಲ್ಪಿಯಾಗಿ ಮೊಂಡುವಾದ ಮುಂದುವರಿಸುವವರಿಗೆ ಒಂದು ಪ್ರಶ್ನೆಯಿದೆ. ಇತ್ತೀಚೆಗೆ ಕೇಂದ್ರ ಸರಕಾರ ವಕ್ಫ್ ತಿದ್ದುಪಡಿ ಮಸೂದೆ ಮಂಡಿಸಿತು. ಈ ಕಾಯ್ದೆ ಜಾರಿಗೆ ತಂದಿದ್ದು ಯಾರು? ಎಂದು ಪ್ರಶ್ನೆ ಕೇಳಿದರೆ, ಬಹಳಷ್ಟು ಬಲಪಂಥೀಯರು ಹೆಮ್ಮೆಯಿಂದ ಮೋದೀಜಿಯ ಹೆಸರು ಹೇಳುತ್ತಾರೆ. ಇನ್ನೂ ನಿರ್ದಿಷ್ಟವಾಗಿ ಹೇಳಬಯಸುವವರು, ಮಸೂದೆಯನ್ನು ಮಂಡಿಸಿದ ಗೃಹಮಂತ್ರಿ ಅಮಿತ್ ಶಾ ಅವರ ಹೆಸರು ಹೇಳುತ್ತಾರೆ. ಸ್ವಲ್ಪ ವಿಶಾಲವಾಗಿ ನೋಡುವವರಾದರೆ ಬಿಜೆಪಿ ಸರಕಾರದ ಹೆಸರು ಉಲ್ಲೇಖಿಸುತ್ತಾರೆ. ಅದು ನಿಜವೂ ಹೌದು. ಆದರೆ ಮೋದಿಯವರಾಗಲಿ, ಶಾ ಅವರಾಗಲಿ ಮಸೂದೆಯ ಕರಡು ಪ್ರತಿಯನ್ನು ಕೂತು ಬರೆದಿರುವುದಿಲ್ಲ. ಅವರ ನಿರ್ದೇಶನಗಳ ಮೇಲೆ ಯಾರೋ ಐಎಎಸ್ ಅಧಿಕಾರಿ, ಕಾನೂನು ತಜ್ಞರು ಅದನ್ನು ರಚಿಸಿರುತ್ತಾರೆ. ಆದರೂ ಅದು ಆ ಐಎಎಸ್ ಅಧಿಕಾರಿಯ ಮಸೂದೆ ಎಂದು ಹೇಳಲಾಗದು. ಯಾಕೆಂದರೆ, ಆ ಅಧಿಕಾರಿ ಕೇವಲ ತನಗೆ ವಹಿಸಿದ ಹೊಣೆಯ ತಾಂತ್ರಿಕ ಕೆಲಸ ಮಾಡಿ ಮುಗಿಸಿರುತ್ತಾನೆ. ಆ ಮಸೂದೆ ಆಶಯ, ಉದ್ದೇಶ, ದುರುದ್ದೇಶ, ಪರಿಣಾಮ, ದುಷ್ಪರಿಣಾಮ ಆತನಿಗೆ ಸಂಬಂಧಿಸಿದ್ದಲ್ಲ. ಅದರ ಹೊಣೆಯೂ ಆತನದಲ್ಲ. ಸಂವಿಧಾನ ರಚನೆಯಲ್ಲಿ ಬಿ.ಎನ್. ರಾವ್ ಪಾತ್ರ ಕೂಡಾ ಇಷ್ಟಕ್ಕೆ ಸೀಮಿತವಾದುದು!

Tags

B. N. RauAmbedkarConstitution
share
ಗಿರೀಶ್ ತಾಳಿಕಟ್ಟೆ
ಗಿರೀಶ್ ತಾಳಿಕಟ್ಟೆ
Next Story
X