ಬೂಕರ್ ಇಂಟರ್ ನ್ಯಾಷನಲ್ ಪ್ರಶಸ್ತಿ ವಿಚಾರ | ಮೂಲ ಕತೆಗಳ ಸತ್ವ ಮತ್ತು ಅನುವಾದಿತ ಕತೆಗಳ ಶಕ್ತಿ

ಮೂಲ ಕೃತಿ ರಚನೆ ಮತ್ತು ಅನುವಾದದ ಕಾರ್ಯ ಇವೆರಡೂ ಭಿನ್ನ ನೆಲೆಗಳು, ಆದರೆ ಪರಸ್ಪರ ಪೂರಕವಾದ ನೆಲೆಗಳು, ವಿರುದ್ಧವಾದುದು ಅಲ್ಲ ಎಂಬ ನಿಲುವನ್ನು ಇಬ್ಬರು ಅವರ ಮಾತುಗಳಲ್ಲಿ ಪ್ರಕಟಿಸಿದರು. ಲೇಖಕರು ಮತ್ತು ಅನುವಾದಕರ ಸಾಹಿತ್ಯಕ ಕೆಲಸಗಳನ್ನು ಅಭೇದವಾಗಿ ಪರಿಗಣಿಸಿ, ಅವರ ಕೆಲಸ ಭಿನ್ನವಾಗಿದ್ದರೂ, ಜಾಗತಿಕ ನೆಲೆಯಲ್ಲಿ ಗೌರವಿಸುವ ಉದ್ದೇಶವನ್ನು ಬೂಕರ್ ಇಂಟರ್ ನ್ಯಾಷನಲ್ ಪ್ರಶಸ್ತಿ ಹೊಂದಿದೆ. ಈ ಆಶಯವನ್ನು ಅರ್ಥಮಾಡಿಕೊಂಡು ಈ ಇಬ್ಬರು ಲೇಖಕರಿಗೆ ನಾವು ಅಭಿನಂದನೆಗಳನ್ನು ಸಲ್ಲಿಸಬೇಕು.
ಬಾನು ಮುಷ್ತಾಕ್ ಮತ್ತು ದೀಪಾ ಭಾಸ್ತಿ ಇವರಿಗೆ ಬೂಕರ್ ಇಂಟರ್ ನ್ಯಾಷನಲ್ ಪ್ರಶಸ್ತಿ ಸಂದಿರುವುದು ಸದ್ಯದ ಮಹತ್ವದ ಸುದ್ದಿಯಾಗಿದೆ. ಇದಕ್ಕೆ ಲೇಖಕರು, ಕನ್ನಡಿಗರೆಲ್ಲರೂ ಸಂಭ್ರಮ ಪಡುತ್ತಿದ್ದಾರೆ. ಪತ್ರಿಕೆಗಳಲ್ಲಿ, ಸಾಮಾಜಿಕ ಮಾಧ್ಯಮಗಳಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ. ಬಾನು ಮುಷ್ತಾಕ್ ಕನ್ನಡದ ಪ್ರಸಿದ್ಧ ಲೇಖಕಿ ಮತ್ತು ಸಂಸ್ಕೃತಿ ಚಿಂತಕಿ. ದೀಪಾ ಭಾಸ್ತಿ ಈಗಾಗಲೇ ಇಂಗ್ಲಿಷ್ ಲೇಖನಗಳು ಮತ್ತು ಅನುವಾದ ಕೃತಿಗಳ ಮೂಲಕ ಛಾಪು ಮೂಡಿಸಿದ ಬರಹಗಾರ್ತಿ. ಹಾಗಾಗಿ ಈ ಪ್ರಶಸ್ತಿ ಕನ್ನಡ ಸಾಹಿತ್ಯ ಮತ್ತು ಅನುವಾದ ಕ್ಷೇತ್ರಕ್ಕೆ ಒಟ್ಟಾಗಿ ಸಂದ ಗೌರವವಾಗಿದೆ. ಲೇಖಕರು ಮತ್ತು ಅನುವಾದಕರಿಗೆ ಒಟ್ಟಿಗೆ ಒಂದೇ ವೇದಿಕೆಯಲ್ಲಿ ನೀಡಲಾಗುವ ಪ್ರಶಸ್ತಿ ಗೌರವ ಇದಾಗಿದೆ. ಬಾನು ಮುಷ್ತಾಕ್ ಮತ್ತು ದೀಪಾ ಭಾಸ್ತಿ ಜೊತೆಯಾಗಿ ವೇದಿಕೆ ಏರಿ ಪ್ರಶಸ್ತಿ ಫಲಕವನ್ನು ಸ್ವೀಕರಿಸಿ ಅಕ್ಕಪಕ್ಕ ನಿಂತದ್ದನ್ನು ನಾವೆಲ್ಲರೂ ನೋಡಿದ್ದೇವೆ. ಲೇಖಕಿಯಾಗಿ ಬಾನು ಅವರ ಕೃತಿಗಳ ವಸ್ತು ಮತ್ತು ವೈಚಾರಿಕ ನೆಲೆಗಳನ್ನು ಹಂಚಿಕೊಂಡು, ಇದು ಕನ್ನಡ ಸಾಹಿತ್ಯ ಜಗತ್ತು ಮತ್ತು ಕನ್ನಡಿಗರಿಗೆ ಸಂದ ಗೌರವ ಎಂದು ಹೇಳಿ, ವೈಯಕ್ತಿಕವಾಗಿಯೂ ಬಹಳ ಸಂಭ್ರಮ ತಂದ ಪ್ರಶಸ್ತಿ ಎಂದು ಮನದಾಳದ ಮಾತುಗಳನ್ನು ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಹಂಚಿಕೊಂಡಿದ್ದರು. ದೀಪಾ ಭಾಸ್ತಿಯವರು ಕನ್ನಡ ಎಂದರೆ ಜೇನು ಹಾಲು ಅಮೃತ ಎಂಬ ವರ್ಣನೆಯಿರುವ ರಾಜ್ ಕುಮಾರ್ ಹಾಡನ್ನು ಪ್ರಸ್ತಾವಿಸಿ, ಕನ್ನಡ ಭಾಷೆಯ ಸೊಗಸು ಸೊಬಗನ್ನು ಇಂಗ್ಲಿಷ್ ಭಾಷೆಯ ಮೂಲಕ ಜಾಗತಿಕ ಓದುಗರಿಗೆ ತಲುಪಿಸಲು ಸಾಧ್ಯವಾದುದಕ್ಕೆ ಧನ್ಯತೆಯ ಭಾವವನ್ನು ವ್ಯಕ್ತಪಡಿಸಿದರು. ಇಬ್ಬರು ಆಡಿದ ಮಾತುಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು. ಮೂಲ ಲೇಖಕರು ಹೇಳಬೇಕಾದ ಮಾತುಗಳನ್ನು ಬಾನು ಮುಷ್ತಾಕ್ ಆಡಿದರು. ಅನುವಾದಕರು ಆಡಬೇಕಾದ ಮಾತುಗಳನ್ನು ದೀಪಾ ಹೇಳಿದರು. ಮೂಲ ಕೃತಿ ರಚನೆ ಮತ್ತು ಅನುವಾದದ ಕಾರ್ಯ ಇವೆರಡೂ ಭಿನ್ನ ನೆಲೆಗಳು, ಆದರೆ ಪರಸ್ಪರ ಪೂರಕವಾದ ನೆಲೆಗಳು, ವಿರುದ್ಧವಾದುದು ಅಲ್ಲ ಎಂಬ ನಿಲುವನ್ನು ಇಬ್ಬರು ಅವರ ಮಾತುಗಳಲ್ಲಿ ಪ್ರಕಟಿಸಿದರು. ಲೇಖಕರು ಮತ್ತು ಅನುವಾದಕರ ಸಾಹಿತ್ಯಕ ಕೆಲಸಗಳನ್ನು ಅಭೇದವಾಗಿ ಪರಿಗಣಿಸಿ, ಅವರ ಕೆಲಸ ಭಿನ್ನವಾಗಿದ್ದರೂ, ಜಾಗತಿಕ ನೆಲೆಯಲ್ಲಿ ಗೌರವಿಸುವ ಉದ್ದೇಶವನ್ನು ಬೂಕರ್ ಇಂಟರ್ ನ್ಯಾಷನಲ್ ಪ್ರಶಸ್ತಿ ಹೊಂದಿದೆ. ಈ ಆಶಯವನ್ನು ಅರ್ಥಮಾಡಿಕೊಂಡು ಈ ಇಬ್ಬರು ಲೇಖಕರಿಗೆ ನಾವು ಅಭಿನಂದನೆಗಳನ್ನು ಸಲ್ಲಿಸಬೇಕು.
ಸಾಹಿತ್ಯದ ಕಾದಂಬರಿ ಪ್ರಕಾರಕ್ಕೆ ನೀಡಲಾಗುವ ಪ್ರಶಸ್ತಿಯ ಹೆಸರು ದಿ ಬೂಕರ್ ಪ್ರೈಝ್. ಇದರ ಸ್ಥಾಪನೆಯಾದುದು 1969. ಆರಂಭದಲ್ಲಿ ಇಟ್ಟಿದ್ದ ಹೆಸರು ಬೂಕರ್ - ಮೆಕ್ ಕಾನ್ನೆಲ್ ಪ್ರೈಝ್ (1969 - 2001). ಆಮೇಲೆ ಮ್ಯಾನ್ ಬೂಕರ್ ಪ್ರೈಝ್ ಎಂಬ ಹೆಸರು ಚಾಲ್ತಿಗೆ ಬಂತು (2002ರಿಂದ) (Man Group sponsored prize). ಬ್ರಿಟಿಷ್, ಐರಿಷ್ ಮತ್ತು ಕಾಮನ್‌ವೆಲ್ತ್ ದೇಶಗಳ ಲೇಖಕರ ಇಂಗ್ಲಿಷ್ ಸಾಹಿತ್ಯ/ ಕಾದಂಬರಿಗಳಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಸಾಹಿತ್ಯದ/ ಕಾದಂಬರಿಯ ರಚನೆ, ಓದು ಮತ್ತು ಚರ್ಚೆಯನ್ನು ಹೆಚ್ಚು ವ್ಯಾಪಕವಾದ ನೆಲೆಯಲ್ಲಿ ಉತ್ತೇಜಿಸುವುದು ಈ ಪ್ರಶಸ್ತಿಯ ಪ್ರಧಾನ ಉದ್ದೇಶವಾಗಿದೆ. ಬೂಕರ್ ಇಂಟರ್‌ನ್ಯಾಷನಲ್ ಪ್ರಶಸ್ತಿಯು ಅನುವಾದಕರಿಗೆ ಸಲ್ಲುವ ಪ್ರಶಸ್ತಿ. ಅನುವಾದಿತ ಕಾದಂಬರಿಗಳಿಗೆ ಕೊಡಲಾಗುವ ಈ ಪ್ರಶಸ್ತಿಯನ್ನು ಆಮೇಲೆ ಇತರ ಗದ್ಯಪ್ರಕಾರಗಳ ಅನುವಾದ ಕೃತಿಗಳಿಗೆ ವಿಸ್ತರಿಸಿದ್ದಾರೆ. ಉದಾಹರಣೆಗೆ ಈ ಬಾರಿಯ ಪ್ರಶಸ್ತಿ ಬಾನು ಮುಷ್ತಾಕ್ ಅವರ ಕತೆಗಳ ಅನುವಾದ, ದೀಪಾ ಭಾಸ್ತಿಯವರ ‘ಹಾರ್ಟ್ ಲ್ಯಾಂಪ್’ ಕೃತಿಗೆ. ಇದರಿಂದ ಸ್ಪಷ್ಟವಾಗುವ ಅಂಶವೆಂದರೆ ಬೂಕರ್‌ಇಂಟರ್‌ನ್ಯಾಷನಲ್ ಪ್ರಶಸ್ತಿ ನಿಗದಿಯಾಗಿರುವುದು ಸಾಹಿತ್ಯ ಕೃತಿಗೆ ಅಲ್ಲ, ಇತರ ಭಾಷೆಗಳ/ಪ್ರಾದೇಶಿಕ ಭಾಷೆಗಳ ಸಾಹಿತ್ಯ ಕೃತಿಗಳ ಇಂಗ್ಲಿಷ್ ಅನುವಾದಿತ ಕೃತಿಗೆ. ಮೂಲ ಸಾಹಿತ್ಯ ಕೃತಿಗೆ ಈ ಪ್ರಶಸ್ತಿ ಅಲ್ಲ ಅಂತ ಹೇಳುವುದು ಕೂಡ ಪೂರ್ತಿ ಸರಿಯಲ್ಲ. ಏಕೆಂದರೆ ಪ್ರಶಸ್ತಿ ಸ್ವೀಕರಿಸಲು ಮೂಲ ಕೃತಿಯ ಲೇಖಕರನ್ನು ಮತ್ತು ಅನುವಾದಕರನ್ನು ಆಹ್ವಾನಿಸುತ್ತಾರೆ. ಸಮಾನವಾಗಿ ಗೌರವಿಸುತ್ತಾರೆ. ಪ್ರತಿಕ್ರಿಯೆ ನೀಡಲು ಇಬ್ಬರಿಗೂ ಅವಕಾಶ ನೀಡುತ್ತಾರೆ. ಪ್ರಶಸ್ತಿಯ ಮೊತ್ತ 50,000 ಪೌಂಡ್ ಇದನ್ನು ಇಬ್ಬರಿಗೂ ಘೋಷಿಸಿ ಸಮಾನವಾಗಿ ಹಂಚುತ್ತಾರೆ. ಇದರ ಅರ್ಥ ಏನೆಂದರೆ ಪ್ರಾದೇಶಿಕ ಭಾಷೆಗಳಲ್ಲಿ ಬರೆಯುವ ಲೇಖಕರ ಬರವಣಿಗೆಯ ಗುಣಮಟ್ಟ ಜಾಗತಿಕ ಮಟ್ಟದ್ದಾಗಿರುತ್ತದೆ. ದಮನಿತ ಅಲಕ್ಷಿತ ಸಮುದಾಯಗಳ ಮೌಖಿಕ ಧ್ವನಿಗಳನ್ನು ಜಾಗತಿಕ/ದೇಶಗಳ ಅಕ್ಷರ ಪರಂಪರೆಗೆ ಜೋಡಿಸುವ ಅನನ್ಯ ಹೊಣೆಗಾರಿಕೆಯನ್ನು ಪ್ರಾದೇಶಿಕ ಲೇಖಕರು ನಿರ್ವಹಿಸುತ್ತಾರೆ. ಪ್ರಾದೇಶಿಕ ಸಾಹಿತ್ಯ ಅಂದರೆ ಅಂತಹ ಕೃತಿಗಳು ಒಳಗೊಂಡಿರುವ ವಿವರಗಳು ಪ್ರಾದೇಶಿಕ, ಆದರೆ ಆ ವಿವರಗಳ ಮೂಲಕ ಪ್ರಕಟಿಸುವ ಮೌಲ್ಯಗಳು, ಧೋರಣೆಗಳು ಜಾಗತಿಕವೇ ಆಗಿರುತ್ತವೆ. ಈ ಅರ್ಥದಲ್ಲಿ ಬಾನು ಮುಷ್ತಾಕ್ ಅವರು ಜಗತ್ತಿನ ಒಬ್ಬ ಲೇಖಕರು. ಇಂತಹ ಲೇಖಕರ ಸಾಹಿತ್ಯದ ಮಹತ್ತಿಕೆಯನ್ನು ಇಂಗ್ಲಿಷ್ ಅನುವಾದದ ಮೂಲಕ ಹೆಚ್ಚು ಓದುಗರಿಗೆ ತಲುಪಿಸುವ ಕಷ್ಟಕರವಾದ, ಭೌದ್ಧಿಕವಾದ ಅಪಾರ ಪರಿಶ್ರಮ ಅಪೇಕ್ಷಿಸುವ ಕೆಲಸವನ್ನು ಅನುವಾದಕರು ಮಾಡುತ್ತಾರೆ. ಹಾಗಾಗಿ ಅನುವಾದಕರಾದ ದೀಪಾ ಭಾಸ್ತಿಯವರ ಕೆಲಸವು ಕೂಡ ಮುಖ್ಯವಾಗುತ್ತದೆ. ಪ್ರಶಸ್ತಿಯ ಹಿನ್ನೆಲೆಯಲ್ಲಿ ಹೇಳುವುದಾದರೆ ‘ಬಾನು ದೀಪ’ ಇವರಲ್ಲಿ ಯಾರೊಬ್ಬರೂ ಅಮುಖ್ಯರಲ್ಲ. ಇಬ್ಬರೂ ಮುಖ್ಯರೇ. ಇಬ್ಬರ ಸಾಧನೆಗಳು ಮುಖ್ಯ, ಇಬ್ಬರು ಮಾಡಿರುವ ಕೆಲಸಗಳು ಮುಖ್ಯ. ಡಾ. ಪುರುಷೋತ್ತಮ ಬಿಳಿಮಲೆಯವರು ಬರೆದ ಮಾತನ್ನು ನೆನಪಿಸಿಕೊಳ್ಳಬಹುದು: ‘‘2025ರ ಬೂಕರ್ ಇಂಟರ್‌ನ್ಯಾಷನಲ್ ಪ್ರಶಸ್ತಿ ಪಡೆದ ಬಾನು ಮುಷ್ತಾಕ್ ಕನ್ನಡದ ಮಹತ್ವದ ಲೇಖಕರು, ಅವರಿಗೆ ಅಭಿನಂದನೆಗಳು. ಅನುವಾದಕಿ ದೀಪಾ ಭಾಸ್ತಿ ಇತಿಹಾಸ ನಿರ್ಮಿಸಿದ್ದಾರೆ.’’ ಬಾನು ಮುಷ್ತಾಕ್ ಮಹತ್ವದ ಲೇಖಕರು ಎಂಬುದು ಕನ್ನಡದ ಎಲ್ಲ ವಿಮರ್ಶಕರು ಓದುಗರು ಒಪ್ಪಿದ ಮಾತು. ಅವರ ಬರವಣಿಗೆಯ ಶಕ್ತಿಗಳೇನು? ಮಾತು, ಬರವಣಿಗೆ ಮತ್ತು ಹೋರಾಟಗಳ ಮೂಲಕ ಅಪರಿಚಿತ ಜಗತ್ತಿನ ಕರೆಗಳಿಗೆ ಸ್ಪಂದಿಸಿದ ವಿನ್ಯಾಸಗಳೇನು? ಹೆಣ್ಣಿನ ಶಕ್ತಿ ಮತ್ತು ಮಿತಿಗಳ ಸೂಕ್ಷ್ಮಗಳನ್ನು ವಿಸ್ತರಿಸಿದ ನೆಲೆಗಳು ಯಾವುವು? ಈ ಬಗ್ಗೆ ಚರ್ಚೆಗಳು ನಡೆದಿವೆ/ಇನ್ನಷ್ಟು ನಡೆಯಲಿವೆ. ಈ ಭಾಗವನ್ನು ನಾನು ವಿಸ್ತರಿಸಲು ಹೋಗುವುದಿಲ್ಲ. ಬಿಳಿಮಲೆಯವರು ಹೇಳಿದ, ದೀಪಾ ಇತಿಹಾಸ ನಿರ್ಮಿಸಿದ್ದಾರೆ ಎಂಬ ಹೇಳಿಕೆಯನ್ನು ಅವರು ಮಾಡಿದ ಅನುವಾದದ ಹಿನ್ನೆಲೆಯಲ್ಲಿ ಸ್ವಲ್ಪ ಪರಿಶೀಲಿಸುವ ಅಗತ್ಯವಿದೆ.
‘ಹೆಜ್ಜೆ ಮೂಡದ ಹಾದಿ’ (1990), ‘ಬೆಂಕಿ ಮಳೆ’ (1999), ‘ಎದೆಯ ಹಣತೆ’ (2004), ‘ಸಫೀರಾ’ ( 2007), ‘ಬಡವರ ಮಗಳು ಹೆಣ್ಣಲ್ಲ’ (2012), ಹೆಣ್ಣು ಹದ್ದಿನ ಸ್ವಯಂವರ (2023) - ಇವು ಬಾನು ಮುಷ್ತಾಕ್ ಅವರ ಕತಾ ಸಂಕಲನಗಳು. ಅವರ ಆಯ್ದ ಐವತ್ತು ಕತೆಗಳ ಸಂಕಲನ ‘ಹಸೀನಾ ಮತ್ತು ಇತರ ಕತೆಗಳು’. ಎದೆಯ ಹಣತೆ ಎಂಬುದು ಒಂದು ಸಂಕಲನದ ಹೆಸರೂ ಹೌದು, ಒಂದು ಕತೆಯ ಹೆಸರೂ ಹೌದು. ಬಾನು ಅವರ ಐವತ್ತಕ್ಕಿಂತ ಹೆಚ್ಚು ಕತೆಗಳಲ್ಲಿ ಒಟ್ಟು ಹನ್ನೆರಡು ಕತೆಗಳನ್ನು ಆಯ್ದು ಇಂಗ್ಲಿಷ್‌ಗೆ ಅನುವಾದ ಮಾಡಿದ ಸಂಪುಟಕ್ಕೆ ದೀಪಾ ಅವರು ‘ಹಾರ್ಟ್ ಲ್ಯಾಂಪ್’ ಎಂಬ ಹೆಸರನ್ನು ಇಟ್ಟಿದ್ದಾರೆ. ಎದೆಯ ಹಣತೆ ಹಾರ್ಟ್ ಲ್ಯಾಂಪ್ ಆಗಿದೆ. ಹೆಣ್ಣಿನ ಎದೆಯ ದನಿಗಳಿರುವ, ಆ ದನಿಗಳು ಬೆಳಕು ಆಗುವುದನ್ನು ಧ್ವನಿಸುವ ಕತೆಗಳನ್ನು ದೀಪಾ ಆಯ್ಕೆ ಮಾಡಿದ್ದಾರೆ ಎಂಬುದು ಸ್ಪಷ್ಟ. ಬಾನು ಅವರ ಎಲ್ಲ ಕತೆಗಳನ್ನು ಓದಿದ ದೀಪಾ ಅವರ ಆಯ್ಕೆಯ ಹಿಂದಿನ ರಾಜಕೀಯ ಇದುವೇ ಆಗಿದೆ. ಕತೆಗಳ ಹೆಸರುಗಳು ಇಂತಿವೆ: 1. ಶಹಿಸ್ತ ಮಹಲ್‌ನ ಕಲ್ಲು ಚಪ್ಪಡಿಗಳು 2. ಬೆಂಕಿ ಮಳೆ 3. ಕರಿ ನಾಗರಗಳು 4. ಹೃದಯದ ತೀರ್ಪು 5. ಕೆಂಪು ಲುಂಗಿ 6 ಎದೆಯ ಹಣತೆ 7. ಹೈ ಹೀಲ್ಡ್ ಷೂ 8. ಮೆಲುದನಿಗಳು 9. ಸ್ವರ್ಗವೆಂದರೆ 10. ಕಫನ್ 11. ಅರಬ್ಬಿ ಮೇಷ್ಟ್ರು ಮತ್ತು ಗೋಬಿ ಮಂಚೂರಿ 12. ಒಮ್ಮೆ ಹೆಣ್ಣಾಗು ಪ್ರಭುವೇ. ಕತೆಗಳ ಇಂಗ್ಲಿಷ್ ಶೀರ್ಷಿಕೆಗಳು: 1.Stone steps for Shaista Mahal 2. Fire Rain 3. Black Cobras 4. A Decision of the Heart. 5. Red Lungi 6. Heart Lamp. 7. High Heeled Shoe 8. Soft Whispers 9. A Taste of Heaven 10. The Shroud 11. The Arabic Teacher and Gobi Manchuri 12. Be a Woman Once, Oh Lord!. ಈ ಕತೆಗಳನ್ನು ಆಯ್ಕೆ ಮಾಡಿಕೊಳ್ಳುವಾಗ, ಅನುವಾದ ಮಾಡುವಾಗ, ಕೆಲವು ಪದಗಳ ಅರ್ಥ ನಿಷ್ಕರ್ಷೆ ಮಾಡುವಾಗ ದೀಪಾ ಅವರು ಬಾನು ಅವರ ಜೊತೆ ಸಮಾಲೋಚನೆ ನಡೆಸಿರಬಹುದು. ಹಾಗಾಗಿಯೇ ಹಾರ್ಟ್ ಲ್ಯಾಂಪ್ ಕತೆಗಳ ಪಠ್ಯದ ನಿರ್ಮಾಪಕರು ಮೂವರು ಎಂದು ದೀಪಾ ಹೇಳಿದ್ದು! ಮೂಲ ಪಠ್ಯದ ಕೆಲವು ಪಾರಿಭಾಷಿಕ ಪದಗಳನ್ನು ಉಳಿಸಿಕೊಂಡಿರುವುದು ಕೆಲವು ಕತೆಗಳ ಶೀರ್ಷಿಕೆ ನೋಡಿದರೆ ಗೊತ್ತಾಗುತ್ತದೆ. ಕೊಡಗಿನ ಗೌರಮ್ಮನವರ ಕತೆಗಳನ್ನು, ಶಿವರಾಮ ಕಾರಂತರ ‘ಅದೇ ಊರು ಅದೇ ಮರ’ ಕಾದಂಬರಿಯನ್ನು ಅನುವಾದ ಮಾಡಿ ಅನುವಾದದಲ್ಲಿ ದೀಪಾ ಸ್ವಲ್ಪಮಟ್ಟಿಗೆ ಪಳಗಿದ್ದರು. ಅನುವಾದದ ಬಗೆಗೆ ನನಗೆ ಸ್ವಲ್ಪ ಅನುಭವ ಇತ್ತು. ಬಿ. ಸುರೇಂದ್ರ ರಾವ್ ಮತ್ತು ನಾನು ತುಳುವಿನ ಮುಖ್ಯ ಎನ್ನಬಹುದಾದ ಏಳು ಕೃತಿಗಳನ್ನು ಇಂಗ್ಲಿಷ್‌ಗೆ ಅನುವಾದ ಮಾಡಿದ್ದೆವು(ಅದರಲ್ಲಿ ಕಾದಂಬರಿಗಳು, ನೀಳ್ಗತೆ, ಆಧುನಿಕ ಕಾಲದ ಕವನಗಳು, ಕತೆಗಳು, ತುಳು ಜನಪದ ಕತೆಗಳು, ಕೆಲಸ ಮತ್ತು ಕುಣಿತದ ಹಾಡುಗಳು ಸೇರಿವೆ). ತುಳುವಿನಿಂದ ಇಂಗ್ಲಿಷ್‌ಗೆ ಸುಮಾರು ಎರಡು ಸಾವಿರ ಪುಟಗಳಷ್ಟು ಅನುವಾದ ಮಾಡಿದ್ದರ ಕಾರಣದಿಂದ ಅನುವಾದದ ಕುರಿತಂತೆ ದೀಪಾ ಅವರು ನನ್ನಲ್ಲಿ ಚರ್ಚಿಸುತ್ತಿದ್ದರು. ನಮ್ಮ ಅನುವಾದಗಳ ಕುರಿತಂತೆ ಹಲವು ಲೇಖನಗಳನ್ನು ಬರೆದು ಪ್ರತಿಷ್ಠಿತ ಇಂಗ್ಲಿಷ್ ಸಂಚಿಕೆಗಳಲ್ಲಿ ಅವರು ಪ್ರಕಟಿಸಿದ್ದರು. ಅನುವಾದದ ಬಗೆಗಿನ ಅವರ ಕೆಲವು ಪ್ರಬುದ್ಧ ಮಾತುಗಳು ಹೀಗಿವೆ: ‘‘ಕನ್ನಡದಿಂದ ಇಂಗ್ಲಿಷ್‌ಗೆ ಅನುವಾದ ಮಾಡುವುದೆಂದರೆ ಅದು ಕನ್ನಡಕ್ಕೆ ಹತ್ತಿರವಾಗುವ ಮಾರ್ಗ’’, ‘‘ಬಾನು ಅವರ ಕತೆಗಳಲ್ಲಿ ನಾನು ಕಂಡ ಜಗತ್ತು ತೀರ ಅಪರಿಚಿತವಾಗಿ ಏನೂ ಇರಲಿಲ್ಲ. ಅವರ ಕೃತಿಗಳು ನನಗೆ ಭಾಷೆ ಮತ್ತು ಆ ಸಾಮಾಜಿಕ ನೆಲೆಗಟ್ಟಿಗೆ ಇನ್ನೂ ಹೆಚ್ಚಿನ ಸಾಮೀಪ್ಯ ಒದಗಿಸಿದುವು.’’, ‘‘ಎಲ್ಲಾ ಭಾಷೆಗಳಲ್ಲಿ ಆಗುತ್ತಿರುವಂತೆಯೇ ಕನ್ನಡದಲ್ಲೂ ಶಕ್ತ ಪ್ರತಿಭಟನೆಯ ಸೊಲ್ಲುಗಳು ಕೇಳಿ ಬರುತ್ತಾ ಇವೆ.’’, ‘‘ಕನ್ನಡವೂ ಸೇರಿದಂತೆ ಜಗತ್ತಿನ ಭಾಷೆಗಳು ತಮ್ಮದೇ ನೆಲೆಯಲ್ಲಿ ವಿಶಿಷ್ಟ, ಪರಿಪೂರ್ಣ ಹಾಗೂ ಅಂತಃಸತ್ವದಿಂದ ಶ್ರೀಮಂತವಾಗಿವೆ.’’, ‘‘ಅನುವಾದ ಎನ್ನುವುದು ಸ್ವತಂತ್ರವಾದ ಮೂರನೆಯ ಪಠ್ಯ’’ (ಪ್ರೀತಿ ನಾಗರಾಜ್ ಜೊತೆ ಸಂದರ್ಶನದಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳಿವು). ಅನುವಾದದ ಕುರಿತು ಅನುಭವದ ನೆಲೆಯಲ್ಲಿ ಮಾತನಾಡುವ ಶೈಕ್ಷಣಿಕ ಶಕ್ತಿಯನ್ನು ದೀಪಾ ಹೊಂದಿದ್ದಾರೆ.
ಒಂದು ಭಾಷೆ ಜಾಗತಿಕ ಮಟ್ಟದಲ್ಲಿ ತಲೆ ಎತ್ತಿ ನಿಲ್ಲುವಂತೆ ಮಾಡಲು ಅನುವಾದ ಕೂಡ ಮುಖ್ಯ. ಕನ್ನಡದಿಂದ ಬೇರೆ ಭಾಷೆಗಳಿಗೆ, ಇತರ ಭಾಷೆಗಳಿಂದ ಕನ್ನಡಕ್ಕೆ ಕೃತಿಗಳು ಅನುವಾದಗೊಳ್ಳಬೇಕು. ಸಾಹಿತ್ಯ ಮತ್ತು ಸಂಸ್ಕೃತಿಗಳ ಕುರಿತಂತೆ ಜಾಗತಿಕ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ನಡೆದಿರುವ/ ನಡೆಯುತ್ತಿರುವ ಚರ್ಚೆಗಳು, ಸಾಹಿತ್ಯದ ಸ್ವರೂಪ ಮತ್ತು ವಿಮರ್ಶೆಯ ಬಗೆಗಿನ ಸಿದ್ಧಾಂತಗಳು, ಸಣ್ಣ ಸಣ್ಣ ಸಮುದಾಯಗಳು ನಡೆಸುವ ಪ್ರತಿಭಟನೆಯ ನೆಲೆಗಳು, ಜನಪದ ಸಮುದಾಯಗಳ ದೇಸಿ ಜ್ಞಾನಪರಂಪರೆಗಳು, ರಾಷ್ಟ್ರ ಮತ್ತು ರಾಷ್ಟ್ರೀಯತೆಯ ಆಧುನಿಕ ನಿರ್ವಚನಗಳು ಮೊದಲಾದ ಸಂಗತಿಗಳ ಅರಿವು ಬಾನು ಮುಷ್ತಾಕ್ ಅವರ ಕತೆಗಳು ಮತ್ತು ದೀಪಾ ಅವರ ಅನುವಾದದ ಮೂಲಕ ವಿಸ್ತಾರಗೊಂಡಿವೆ. ದೀಪಾ ಅವರಿಗೆ ಅನುವಾದ ಅಂದರೆ ಮೂಲಕೃತಿಯನ್ನು ಅದರ ಸಾಂಸ್ಕೃತಿಕ ಚೌಕಟ್ಟಿನ ಸಮೇತ ಮೂಲಭಾಷೆಯಿಂದ ಅನುವಾದಿತ ಭಾಷೆಗೆ ವರ್ಗಾಯಿಸುವುದಾಗಿದೆ. ಅನುವಾದಿಸಿದ ಕತೆಗಳಿಗೆ ಅಮರತ್ವ ಬರುವಂತೆ ಮಾಡಿದ್ದಾರೆ. ಅಂದರೆ ಕನ್ನಡ ಕತೆಗಳ ಬದುಕನ್ನು ಇಂಗ್ಲಿಷ್ ಅನುವಾದದಲ್ಲಿ ಮುಂದುವರಿಸಿದ್ದಾರೆ. ಅನುವಾದದ ಓದುಗನನ್ನು ಮೂಲಕೃತಿಯ ಓದುಗನ ಸ್ಥಾನದಲ್ಲಿ ತಂದು ನಿಲ್ಲಿಸಲು ಯತ್ನಿಸಿದ್ದಾರೆ. ಲಕ್ಷ್ಯಭಾಷೆಯ ಓದುಗರಿಗೆ ಓದಿ ಆಸ್ವಾದಿಸುವಂತಹ ಪಠ್ಯವನ್ನು ಸಿದ್ಧಪಡಿಸಿದ್ದಾರೆ. ಮೂಲಕೃತಿಗೆ ಇರುವ ಗೌರವವನ್ನು ಎತ್ತಿಹಿಡಿದಿದ್ದಾರೆ. ಮೂಲ ಕನ್ನಡ ಕತೆಗಳನ್ನು ಮರುಸೃಷ್ಟಿಸುವ ಕೆಲಸವನ್ನು ಮಾಡಿದ್ದಾರೆ. ಇದು ಭಾಷಿಕ ಮತ್ತು ಸಾಂಸ್ಕೃತಿಕ ಸೀಮೆಗಳನ್ನು ದಾಟಿಸುವ ಕೆಲಸ. ಕನ್ನಡ ಕತೆಗಳನ್ನು ರೂಪಿಸಿದ ಸಂಸ್ಕೃತಿ, ಸಾಹಿತ್ಯ ಸಂದರ್ಭ, ಭಾಷೆಯ ವ್ಯಾಕರಣ, ಚಾರಿತ್ರಿಕ ಸಂದರ್ಭ, ವೈಚಾರಿಕತೆ ಇವುಗಳ ಅರಿವು ಅವರಿಗಿದೆ. ಕತೆಗಳ ಓದಿನಿಂದ ಅವರಿಗೆ ದಕ್ಕಿದ ಅರ್ಥಗಳನ್ನು ಅನುವಾದದಲ್ಲಿ ಕಟ್ಟಿದ್ದಾರೆ. ಬಾನು ಅವರ ಕತೆಗಳನ್ನು ದೀಪಾ ಅವರು ಗ್ರಹಿಸಿದ ಒಂದು ಕ್ರಮವನ್ನು ಅನುವಾದದಲ್ಲಿ ಕಾಣಬಹುದು. ದೀಪಾ ಅವರು ಅನುವಾದ ಅಪೇಕ್ಷಿಸುವ ಓದನ್ನು ಮಾಡಿದ್ದಾರೆ. ಅವರು ಅನುವಾದಕ್ಕೆ ಎತ್ತಿಕೊಂಡ ಕತೆಗಳ ಯೋಗ್ಯತೆ, ಅರ್ಹತೆ, ಶ್ರೇಷ್ಠತೆ, ಮೌಲ್ಯಗಳ ಬಗ್ಗೆ ಅವರಿಗೆ ಸಂಪೂರ್ಣ ವಿಶ್ವಾಸವಿತ್ತು. ಅನುವಾದದ ಕೆಲಸವನ್ನು ಅಗೆಯುವ ಬಗೆಯುವ ಗಣಿಗಾರಿಕೆಯ ಕೆಲಸ ಎಂದು ಕರೆಯುತ್ತಾರೆ. ಈ ಗಣಿಗಾರಿಕೆಯ ದಾಳಿ ಮರುಸೃಷ್ಟಿಗಾಗಿ ನಡೆಯುತ್ತದೆ. ಕನ್ನಡದಲ್ಲಿ ನಮಗೆ ಪರಿಚಿತ ಇರುವ ಪಠ್ಯವನ್ನು ಅಪರಿಚಿತ ವಲಯದಲ್ಲಿ ಪರಿಚಿತಗೊಳಿಸಲು ಅನುವಾದಕರು ಬಹಳ ಶ್ರಮಪಟ್ಟಿದ್ದಾರೆ. ಅನುವಾದದ ಮೂಲಕ ಬಾನು ಅವರ ಕತೆಗಳ ಮೇಲೆ ಹೊಸ ಬೆಳಕು ಚೆಲ್ಲಿದ್ದಾರೆ. ಅನುವಾದದ ಮೂಲಕ ಬಾನು ಮುಷ್ತಾಕ್ ಅವರ ಕತೆಗಳ ಓದುಗರ ಸಂಖ್ಯೆಯನ್ನು ದೊಡ್ಡ ಪ್ರಮಾಣದಲ್ಲಿ ಹೆಚ್ಚಿಸಿದ್ದಾರೆ. ಇಂಗ್ಲಿಷ್ ಆವೃತ್ತಿಯ ಓದುಗರು ಬಾನು ಮುಷ್ತಾಕ್ ಅವರ ಕನ್ನಡ ಕತೆಗಳನ್ನೇ ಓದುತ್ತಿದ್ದಾರೆ! ದೀಪಾ ಭಾಸ್ತಿ ನಿರ್ಮಿಸಿರುವ ಈ ಇತಿಹಾಸವನ್ನೆ ಡಾ. ಬಿಳಿಮಲೆಯವರು ಪ್ರಸ್ತಾವಿಸಿದ್ದು ಎಂದು ನಾನು ಭಾವಿಸಿದ್ದೇನೆ. ಹಾಗಾಗಿ ಈ ಬೂಕರ್ ಇಂಟರ್‌ನ್ಯಾಷನಲ್ ಪ್ರಶಸ್ತಿ ಮೂಲಕೃತಿಯೂ ಸೇರಿದಂತೆ ಅನುವಾದಕ್ಕೆ ಸಂದಿದೆ. ಮೌಲ್ಯಮಾಪಕರು ಹಾರ್ಟ್ ಲ್ಯಾಂಪ್‌ನ್ನು ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೆ ಎಂದರೆ ಅದು ಮೂಲ ಕತೆಗಳ ಸತ್ವ ಮತ್ತು ಅನುವಾದಿತ ಕತೆಗಳ ಮರುಸೃಷ್ಟಿಯ ಶಕ್ತಿಯನ್ನು ಹೇಳುತ್ತದೆ ಎಂದು ಅರ್ಥವಲ್ಲದೆ ಬೇರೇನಲ್ಲ.







