ಡ್ರ್ಯಾಗನ್ ಫ್ರೂಟ್ ಕೃಷಿ ಮಾಡಿ ಮಾದರಿಯಾದ ಬಿಎಸ್ಸಿ ಪದವೀಧರ ಮುನಿರಾಜು
ವರ್ಷಕ್ಕೆ 15 ಲಕ್ಷ ರೂ. ಆದಾಯ

ಬೆಂಗಳೂರು: ಇತ್ತೀಚೆಗೆ ಉದ್ಯೋಗಕ್ಕಾಗಿ ನಗರಗಳಿಗೆ ವಲಸೆ ಬರುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹತ್ತಾರು ಎಕರೆ ಕೃಷಿ ಭೂಮಿಯನ್ನು ಹೊಂದಿದವರು ನೀರಾವರಿಯಿಲ್ಲದೆ ಅಥವಾ ಕೃಷಿಯಲ್ಲಿ ನಷ್ಟವಾಗಿ ಖಾಸಗಿ ಉದ್ಯೋಗಕ್ಕಾಗಿ ನಗರವನ್ನು ಸೇರುತ್ತಿದ್ದಾರೆ. ಆದರೆ ಹೆಚ್ಚಿನ ನೀರಾವರಿ ಅಗತ್ಯವಿಲ್ಲದೆ ‘ಡ್ರ್ಯಾಗನ್ ಫ್ರೂಟ್’ ಕೃಷಿ ಮಾಡಿ ಮುನಿರಾಜು ಡಿ. ಅವರು ಇತರರಿಗೆ ಮಾದರಿಯಾಗಿದ್ದಾರೆ.
ಮುನಿರಾಜು ಡಿ. ಮೂಲತಃ ಕೃಷಿ ಕುಟುಂಬದವರಾಗಿದ್ದು, ಕೋಲಾರ ಜಿಲ್ಲೆಯ ಕೋರಗಂಡಹಳ್ಳಿ ಗ್ರಾಮದವರು. ಬಿಎಸ್ಸಿ ಪದವೀಧರರಾಗಿದ್ದು, ಖಾಸಗಿ ಕಂಪೆನಿಯ ಉದ್ಯೋಗದ ಜೊತೆಗೆ ಡ್ರ್ಯಾಗನ್ ಫ್ರೂಟ್ ಕೃಷಿ ಮಾಡುತ್ತಿದ್ದಾರೆ. ಮೊದಲು ಟೊಮೆಟೊ, ತರಕಾರಿ, ಸೊಪ್ಪು ಸೇರಿ ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಿದ್ದರು. ಯೂಟ್ಯೂಬ್‌ನಲ್ಲಿ ಪ್ರಸಾರಗೊಂಡಿದ್ದ ವೀಡಿಯೊವೊಂದನ್ನು ನೋಡಿ, ಅದರಿಂದ ಸ್ಫೂರ್ತಿ ಪಡೆದು, ಸುಮಾರು ಐದು ವರ್ಷಗಳಿಂದ ಡ್ರ್ಯಾಗನ್ ಫ್ರೂಟ್ ಬೆಳೆಯುತ್ತಿದ್ದಾರೆ.
ಕೋಲಾರ ಮತ್ತು ಬೆಂಗಳೂರಿನ ಹೊರವಲಯದಲ್ಲಿರುವ ಹೆಸರಘಟ್ಟ ಬಳಿ ಒಟ್ಟು 6 ಎಕರೆ ಜಮೀನಿನಲ್ಲಿ ಡ್ರ್ಯಾಗನ್ ಫ್ರೂಟ್ ಬೆಳೆಯನ್ನು ಬೆಳೆದು ಯುವ ಜನರಿಗೆ ಮಾದರಿಯಾಗಿದ್ದಾರೆ. ಗ್ರಾಹಕರು ಖುದ್ದಾಗಿ ತೋಟಕ್ಕೆ ಭೇಟಿ ನೀಡಿ ಡ್ರ್ಯಾಗನ್ ಫ್ರೂಟ್ ಖರೀದಿ ಮಾಡುತ್ತಿದ್ದಾರೆ. ಮುನಿರಾಜು ಡಿ. ಅವರು ಡ್ರ್ಯಾಗನ್ ಫ್ರೂಟ್ ಬೆಳೆದು ವರ್ಷಕ್ಕೆ 15 ಲಕ್ಷ ರೂ.ಗಳವರೆಗೆ ಆದಾಯವನ್ನು ಗಳಿಸುತ್ತಿದ್ದಾರೆ.
ಒಂದು ಡ್ರ್ಯಾಗನ್ ಹಣ್ಣು 300 ರಿಂದ 800 ಗ್ರಾಂ ತೂಕವಿದ್ದು, ಕೆಂಪು ಅಥವಾ ಹಳದಿ ಬಣ್ಣದ ಸಿಪ್ಪೆ ಮತ್ತು ಕಪ್ಪುಬೀಜಗಳೊಂದಿಗೆ ಬಿಳಿ ಅಥವಾ ಕೆಂಪು ತಿರುಳನ್ನು ಹೊಂದಿರುತ್ತದೆ. ರುಚಿಯಲ್ಲಿ ಸಿಹಿ ಮತ್ತು ಸ್ವಲ್ಪ ಹುಳಿಯಾಗಿದೆ. ಇದನ್ನು ಸಿಪ್ಪೆ ಸುಳಿದು ಹಾಗೆಯೇ ತಿನ್ನಬಹುದು ಅಥವಾ ಜ್ಯೂಸ್, ಸಲಾಡ್, ಅಥವಾ ಮೊಸರಿನೊಂದಿಗೆ ಬೆರೆಸಿ ತಿನ್ನಬಹುದು.
ಡ್ರ್ಯಾಗನ್ ಫ್ರೂಟ್‌ನಲ್ಲಿ ವಿಟಮಿನ್ ಸಿ, ಫೈಬರ್, ಮೆಗ್ನೀಸಿಯಮ್ ಮತ್ತು ಕಬ್ಬಿಣದಂತಹ ಪೋಷಕಾಂಶಗಳು ಹೇರಳವಾಗಿವೆ. ಹೆಚ್ಚಿ ನ ಫೈಬರ್ ಅಂಶವು ಮಲಬದ್ಧತೆಯನ್ನು ನಿವಾರಿಸಲು ಮತ್ತು ಕರುಳಿನ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಹೃದಯದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ಸಂಶೋಧನೆಗಳಿಂದ ರುಜುವಾತವಾಗಿದೆ.
ಮಾರುಕಟ್ಟೆ ವ್ಯವಸ್ಥೆ: ಡ್ರ್ಯಾಗನ್ ಫ್ರೂಟ್‌ಗಳಿಗೆ ಮಾರುಕಟ್ಟೆ ಸಮಸ್ಯೆ ಉದ್ಬವವಾಗುವುದಿಲ್ಲ. ಮೇ ತಿಂಗಳಿಂದ ನವೆಂಬರ್‌ವರೆಗೆ ಹಣ್ಣು ಬಿಡುವ ಕಾಲವಾಗಿರುತ್ತದೆ. ಹಣ್ಣುಗಳನ್ನು ಗ್ರಾಹಕರು ನೇರವಾಗಿ ರೈತ ಮುನಿರಾಜು ಡಿ. ಅವರ ತೋಟಕ್ಕೆ ಬಂದು ತೆಗೆದುಕೊಂಡು ಹೋಗುತ್ತಾರೆ. ಹಾಗೆಯೇ ನಗರದ ವಿವಿಧ ಮಾರುಕಟ್ಟೆಗಳಿಗೆ ಹಣ್ಣುಗಳನ್ನು ತೆಗೆದುಕೊಂಡು ಮಾರಾಟ ಮಾಡುತ್ತಾರೆ. ಕೆ.ಜಿ.ಗೆ 80ರಿಂದ 120 ರೂ.ಗಳವರೆಗೆ ಡ್ರ್ಯಾಗನ್ ಫ್ರೂಟ್ ಮಾರಾಟವಾಗುತ್ತಿದೆ.
ಡ್ರ್ಯಾಗನ್ ಹಣ್ಣು ಸಸಿಗಳ ಮಾರಾಟ: ಡ್ರ್ಯಾಗನ್ ಹಣ್ಣು ಬೀಜ ಅಥವಾ ಕತ್ತರಿಸಿದ ಭಾಗಗಳಿಂದ ಬೆಳೆಯುತ್ತದೆ. ಕತ್ತರಿಸಿದ ಭಾಗಗಳಿಂದ ಹೆಚ್ಚಾಗಿ ಬೆಳೆ ಬೆಳೆಯುತ್ತಿದ್ದಾರೆ. ಡಿಸೆಂಬರ್ ತಿಂಗಳಿನಲ್ಲಿ ಡ್ರ್ಯಾಗನ್ ಸಸಿಗಳನ್ನು ಮಾರಾಟ ಮಾಡುತ್ತಾರೆ. ಮೇ ತಿಂಗಳಿಂದ ನವೆಂಬರ್ ತಿಂಗಳವರೆಗೆ ಹಣ್ಣು ಬಿಡುವ ಕಾಲವಾಗಿರುವುದರಿಂದ ಸಸಿಗಳನ್ನು ಕತ್ತರಿಸುವುದಿಲ್ಲ, ಹೀಗಾಗಿ ಈ ವೇಳೆ ಸಸಿ ಮಾರಾಟ ಮಾಡುವುದಿಲ್ಲ. ಒಂದು ಸಸಿಗೆ 20 ರೂ.ಗಳಂತೆ ಮುನಿರಾಜು ಡಿ. ಅವರು ಮಾರಾಟ ಮಾಡುತ್ತಿದ್ದಾರೆ.
ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಪ್ರಶಂಸೆ: ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಮುನಿರಾಜು ಡಿ. ಅವರ ತೋಟಕ್ಕೆ ಭೇಟಿ ನೀಡಿ, ಪ್ರಶಂಸೆ ವ್ಯಕ್ತಪಡಿಸಿದ್ದರು.
ಡ್ರ್ಯಾಗನ್ ಫ್ರೂಟ್ ಬೆಳೆಯುವುದು ಹೇಗೆ?
ಡ್ರ್ಯಾಗನ್ ಹಣ್ಣು ಬೆಳೆಯಲು ಹೆಚ್ಚಿನ ನೀರಾವರಿಯ ಅವಶ್ಯ ಇರುವುದಿಲ್ಲ. ಬರಿದಾಗುವ ಮಣ್ಣಿನಲ್ಲಿ ಬೆಳೆಯಬಹುದು. ನೆಲದಲ್ಲಿ ಒಂದು ಕಲ್ಲು ಕಂಬವನ್ನು ನೆಟ್ಟಿ, ಕಂಬದ ತುದಿಯಲ್ಲಿ ಸಿಮೆಂಟ್‌ನಿಂದ ಮಾಡಿದ ಚಕ್ರವನ್ನು ಇಡಬೇಕು. ಕಂಬದ ಪಕ್ಕ ನಾಲ್ಕು ದಿಕ್ಕಿನಲ್ಲಿ ಡ್ರ್ಯಾಗನ್ ಹಣ್ಣಿನ ನಾಲ್ಕು ಸಸಿಗಳನ್ನು ನೆಡಬೇಕು. ಸಸಿಯು 12ರಿಂದ 15 ತಿಂಗಳ ಒಳಗಾಗಿ ಮೊದಲ ಫಸಲನ್ನು ಬಿಡುತ್ತದೆ. ಈ ಬೆಳೆ ಬೆಳೆಯಲು ಒಂದು ಎಕರೆಗೆ ಮೊದಲ ವರ್ಷದಲ್ಲಿ 2 ಲಕ್ಷ ರೂ. ಖರ್ಚು ಬರುತ್ತದೆ. ನಂತರದ ವರ್ಷಗಳಲ್ಲಿ ಒಂದು ಲಕ್ಷ ರೂ.ಗಳವರೆಗೆ ನಿರ್ವಹಣಾ ವೆಚ್ಚವನ್ನು ಭರಿಸಬೇಕು ಎಂದು ರೈತ ಮುನಿರಾಜು ಡಿ. ತಿಳಿಸಿದ್ದಾರೆ.







