ಬುಡ್ಡರ ಮನೆ: ಪುರಾತನ ನಾಗರಿಕತೆಯ ಅಪರೂಪದ ಕುರುಹು
ಮೂರು ಸಾವಿರ ವರ್ಷಗಳ ಐತಿಹಾಸಿಕ ತಾಣಕ್ಕೆ ಬೇಕಿದೆ ಕಾಯಕಲ್ಪ

ಯಾದಗಿರಿ: ಸಾವಿರಾರು ವರ್ಷಗಳ ಹಿಂದಿನ ಮಾನವ ಬದುಕು, ಸಂಸ್ಕೃೃತಿ ಮತ್ತು ಅಂತ್ಯಸಂಸ್ಕಾರ ಪದ್ಧತಿಯ ಅಪರೂಪದ ಕುರುಹುಗಳನ್ನು ತನ್ನೊಳಗೆ ಹುದುಗಿಸಿಕೊಂಡಿರುವ ರಾಜನಕೋಳೂರಿನ ‘ಬುಡ್ಡರ ಮನೆ’ಗಳ ತಾಣ ಇಂದು ಸೂಕ್ತ ಸಂರಕ್ಷಣೆ, ಪ್ರಚಾರ ಮತ್ತು ಮೂಲಸೌಕರ್ಯಗಳ ಕೊರತೆಯಿಂದ ನಿರ್ಲಕ್ಷ್ಯಕ್ಕೊಳಗಾಗಿದೆ.
ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ರಾಜನಕೋಳೂರು ಗ್ರಾಮದ ಹೊರವಲಯದಲ್ಲಿರುವ ಈ ಪ್ರಾಚೀನ ಕಲ್ಲಿನ ರಚನೆಗಳು ಸ್ಥಳೀಯರಿಗೆ ‘ಬುಡ್ಡರ ಮನೆ’ಗಳೆಂದು ಪರಿಚಿತವಾಗಿವೆ. ಹೊರನೋಟಕ್ಕೆ ಚಿಕ್ಕ ಮನೆಗಳಂತೆ ಕಾಣುವ ಇವು ವಾಸ್ತವವಾಗಿ ಬೃಹತ್ ಶಿಲಾಯುಗದ ಮೆಗಾಲಿಥಿಕ್ ಸಮಾಧಿ ರಚನೆಗಳು. ಪುರಾತತ್ವ ಅಧ್ಯಯನಗಳ ಪ್ರಕಾರ, ಇವು ಸುಮಾರು 2,600ರಿಂದ 2,900 ವರ್ಷಗಳಷ್ಟು ಹಳೆಯದಾಗಿದ್ದು, ದಕ್ಷಿಣ ಭಾರತದ ಪ್ರಾಚೀನ ನಾಗರಿಕತೆಯ ಮಹತ್ವದ ಕುರುಹುಗಳಾಗಿ ಪರಿಗಣಿಸಲ್ಪಡುತ್ತವೆ.
ಮನೆಗಳಲ್ಲ; ಸಾವಿರಾರು ವರ್ಷಗಳ ಹಿಂದಿನ ಸಮಾಧಿಗಳು
ಮೂರು ಅಥವಾ ಅದಕ್ಕಿಂತ ಹೆಚ್ಚು ಬೃಹತ್ ಚಪ್ಪಡಿ ಕಲ್ಲುಗಳನ್ನು ನಿಲ್ಲಿಸಿ, ಅವುಗಳ ಮೇಲೆ ಮತ್ತೊಂದು ದೊಡ್ಡ ಕಲ್ಲನ್ನು ಹೊದಿಕೆಯಂತೆ ಇರಿಸಿ ನಿರ್ಮಿಸಿರುವ ಈ ರಚನೆಗಳು ದೂರದಿಂದ ನೋಡಿದಾಗ ಸಣ್ಣ ಕಲ್ಲಿನ ಮನೆಗಳಂತೆ ಕಾಣುತ್ತವೆ. ಆದರೆ ಇವು ಪ್ರಾಚೀನ ಕಾಲದಲ್ಲಿ ಮೃತರನ್ನು ಸಮಾಧಿ ಮಾಡಲು ಬಳಸಲಾಗುತ್ತಿದ್ದ ಪವಿತ್ರ ಸ್ಥಳಗಳಾಗಿದ್ದವು ಎನ್ನುವುದು ಪುರಾತತ್ವ ಅಧ್ಯಯನಗಳಿಂದ ತಿಳಿದುಬರುತ್ತದೆ.
ಇಲ್ಲಿನ ರಚನೆಗಳು ಡೋಲ್ಮೆನ್, ಸಿಸ್ಟ್ ಸೇರಿದಂತೆ ಮೆಗಾಲಿಥಿಕ್ ಸಮಾಧಿ ವಾಸ್ತುಶೈಲಿಯ ಲಕ್ಷಣಗಳನ್ನು ಹೊಂದಿವೆ. ಯಾವುದೇ ಸಿಮೆಂಟ್ ಅಥವಾ ಗಾರೆ ಬಳಸದೆಯೇ ಬೃಹತ್ ಕಲ್ಲುಗಳನ್ನು ಪರಸ್ಪರ ಜೋಡಿಸಿ ನಿರ್ಮಿಸಿರುವುದು ಅಂದಿನ ಜನರ ಕಲ್ಲು ಸಂಸ್ಕೃರಣಾ ಕೌಶಲ್ಯ ಹಾಗೂ ತಾಂತ್ರಿಕ ಜ್ಞಾನಕ್ಕೆ ಸಾಕ್ಷಿಯಾಗಿದೆ.
ಬ್ರಿಟಿಷ್ ಅಧಿಕಾರಿ ಹಾಗೂ ಪುರಾತತ್ವಶಾಸ್ತ್ರಜ್ಞ ಮೆಡೋಸ್ ಟೇಲರ್ ಅವರು 1850ರ ದಶಕದಲ್ಲಿ ಈ ಭಾಗಕ್ಕೆ ಭೇಟಿ ನೀಡಿ ಇಲ್ಲಿನ ಮೆಗಾಲಿಥಿಕ್ ಸಮಾಧಿಗಳ ಬಗ್ಗೆ ಅಧ್ಯಯನ ನಡೆಸಿದ್ದರು ಎಂದು ದಾಖಲೆಗಳಲ್ಲಿ ಉಲ್ಲೇಖಿಸಲಾಗಿದೆ. ಈ ಕಾರಣದಿಂದಲೂ ರಾಜನಕೋಳೂರು ಪ್ರದೇಶವು ದಕ್ಷಿಣ ಭಾರತದ ಪ್ರಾಚೀನ ಸಮಾಧಿ ಸಂಸ್ಕೃೃತಿಯ ಅಧ್ಯಯನದಲ್ಲಿ ಮಹತ್ವ ಪಡೆದಿದೆ.
ಮಡಕೆ, ಕಬ್ಬಿಣದ ವಸ್ತುಗಳೂ ಪತ್ತೆ
ಮೆಗಾಲಿಥಿಕ್ ಸಮಾಧಿಗಳು ಕೇವಲ ಮೃತದೇಹಗಳನ್ನು ಹೂಳುವ ಸ್ಥಳಗಳಾಗಿರಲಿಲ್ಲ. ಅವು ಅಂದಿನ ಜನರ ಸಾಮಾಜಿಕ ನಂಬಿಕೆಗಳು, ಅಂತ್ಯಸಂಸ್ಕಾರ ಪದ್ಧತಿ, ತಂತ್ರಜ್ಞಾನ ಮತ್ತು ಜೀವನಶೈಲಿಯ ಕುರಿತು ಮಾಹಿತಿ ನೀಡುವ ಪುರಾತತ್ವ ಸಾಕ್ಷ್ಯಗಳು. ವಿವಿಧ ಅಧ್ಯಯನಗಳಲ್ಲಿ ಇಂತಹ ಸಮಾಧಿಗಳಲ್ಲಿ ಕಪ್ಪು-ಕೆಂಪು ಮಡಕೆಗಳು, ಕಬ್ಬಿಣದ ಆಯುಧಗಳು, ಮೂಳೆಗಳ ಅವಶೇಷಗಳು ಹಾಗೂ ಇತರ ಸಮಾಧಿ ವಸ್ತುಗಳು ಪತ್ತೆಯಾಗಿರುವುದು ವರದಿಯಾಗಿದೆ. ಇಂತಹ ಪುರಾತತ್ವ ಅವಶೇಷಗಳು ಆ ಕಾಲದಲ್ಲಿ ಈ ಪ್ರದೇಶದಲ್ಲಿ ನೆಲೆಸಿದ್ದ ಜನರ ಬದುಕಿನ ಕುರಿತು ತಿಳಿದುಕೊಳ್ಳಲು ಸಂಶೋಧಕರಿಗೆ ನೆರವಾಗುತ್ತವೆ.
ಸಂರಕ್ಷಣೆ ಇಲ್ಲದಿದ್ದರೆ ಕಳೆದುಹೋಗುವ ಅಪಾಯ
ಇಷ್ಟೊಂದು ಮಹತ್ವ ಹೊಂದಿರುವ ತಾಣಕ್ಕೆ ಅಗತ್ಯ ಮಟ್ಟದ ಸಂರಕ್ಷಣೆ ಮತ್ತು ಪ್ರವಾಸೋದ್ಯಮ ಮೂಲಸೌಕರ್ಯ ಕಲ್ಪಿಸದಿರುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ. ತಾಣದ ಕುರಿತು ಸಮರ್ಪಕ ಮಾಹಿತಿ ನೀಡುವ ಫಲಕಗಳು, ದಾರಿದೀಪಗಳು, ಕುಡಿಯುವ ನೀರು, ಕುಳಿತುಕೊಳ್ಳುವ ವ್ಯವಸ್ಥೆ, ಸ್ವಚ್ಛತೆ ಹಾಗೂ ಭದ್ರತಾ ವ್ಯವಸ್ಥೆಗಳ ಕೊರತೆ ಕಂಡುಬರುತ್ತಿದೆ.
ಕಲ್ಲಿನ ರಚನೆಗಳು ನೈಸರ್ಗಿಕ ಸವೆತ, ಹವಾಮಾನ ವೈಪರೀತ್ಯ ಹಾಗೂ ಮಾನವ ಚಟುವಟಿಕೆಗಳಿಂದ ಹಾನಿಗೊಳಗಾಗುವ ಸಾಧ್ಯತೆಯೂ ಇದೆ. ಪುರಾತತ್ವ ತಾಣಗಳ ಸಂರಕ್ಷಣೆಯಲ್ಲಿ ಕೇವಲ ಕಲ್ಲಿನ ರಚನೆಗಳನ್ನು ಉಳಿಸುವುದಷ್ಟೇ ಅಲ್ಲದೆ, ಅವುಗಳ ಸುತ್ತಲಿನ ಪ್ರದೇಶವನ್ನು ಗುರುತಿಸಿ ರಕ್ಷಿಸುವುದು, ಅನಧಿಕೃತ ಕಲ್ಲು ತೆಗೆಯುವಿಕೆ ಅಥವಾ ಹಾನಿಕಾರಕ ಚಟುವಟಿಕೆಗಳಿಗೆ ಕಡಿವಾಣ ಹಾಕುವುದು ಕೂಡ ಮುಖ್ಯವಾಗಿದೆ.
ಪ್ರವಾಸೋದ್ಯಮಕ್ಕೆ ಅಪಾರ ಅವಕಾಶ
ಯಾದಗಿರಿ ಜಿಲ್ಲೆಯಲ್ಲಿ ಐತಿಹಾಸಿಕ ಮತ್ತು ಪುರಾತತ್ವ ಮಹತ್ವದ ಹಲವು ಸ್ಥಳಗಳಿದ್ದರೂ, ಅವುಗಳ ಬಗ್ಗೆ ರಾಜ್ಯ ಮತ್ತು ದೇಶದ ಪ್ರವಾಸಿಗರಿಗೆ ಸಮರ್ಪಕ ಮಾಹಿತಿ ತಲುಪಿಲ್ಲ. ರಾಜನಕೋಳೂರಿನ ಬುಡ್ಡರ ಮನೆಗಳನ್ನು ಇತರ ಸ್ಥಳೀಯ ಐತಿಹಾಸಿಕ ತಾಣಗಳೊಂದಿಗೆ ಸಂಪರ್ಕಿಸುವ ಪುರಾತತ್ವ ಮತ್ತು ಸಾಂಸ್ಕೃೃತಿಕ ಪ್ರವಾಸೋದ್ಯಮ ವಲಯ ರೂಪಿಸಿದರೆ ಈ ಪ್ರದೇಶದ ಪ್ರವಾಸೋದ್ಯಮಕ್ಕೆ ಉತ್ತೇಜನ ದೊರೆಯಬಹುದು.
ತಾಣದ ಬಳಿ ಮಾಹಿತಿ ಕೇಂದ್ರ, ಸ್ಥಳೀಯ ಇತಿಹಾಸ ವಿವರಿಸುವ ಫಲಕಗಳು, ಮಾರ್ಗಸೂಚಿ ಫಲಕಗಳು, ಸುರಕ್ಷಿತ ನಡಿಗೆ ಮಾರ್ಗ, ಕುಡಿಯುವ ನೀರು, ಶೌಚಾಲಯ, ಆಸನ ವ್ಯವಸ್ಥೆ ಹಾಗೂ ಪಾರ್ಕಿಂಗ್ ಸೌಲಭ್ಯ ಕಲ್ಪಿಸಬಹುದು. ವಿದ್ಯಾರ್ಥಿಗಳು, ಇತಿಹಾಸಾಸಕ್ತರು ಮತ್ತು ಸಂಶೋಧಕರಿಗೆ ಅಧ್ಯಯನ ಪ್ರವಾಸಗಳನ್ನು ಆಯೋಜಿಸುವ ಮೂಲಕ ತಾಣದ ಮಹತ್ವವನ್ನು ಜನರಿಗೆ ಪರಿಚಯಿಸಬಹುದು.
ಸ್ಥಳೀಯ ಯುವಕರಿಗೆ ಪ್ರವಾಸಿ ಮಾರ್ಗದರ್ಶಕರಾಗಿ ತರಬೇತಿ ನೀಡುವುದು, ಸ್ಥಳೀಯವಾಗಿ ಲಭ್ಯವಿರುವ ಸಾಂಸ್ಕೃೃತಿಕ ಸಂಪನ್ಮೂಲಗಳ ಆಧಾರದ ಮೇಲೆ ಸಣ್ಣ ಪ್ರಮಾಣದ ಪ್ರವಾಸೋದ್ಯಮ ಚಟುವಟಿಕೆಗಳನ್ನು ಉತ್ತೇಜಿಸುವುದು ಕೂಡ ಗ್ರಾಮೀಣ ಆರ್ಥಿಕತೆಗೆ ನೆರವಾಗಬಹುದು.
ಬೃಹತ್ ಕಲ್ಲುಬಂಡೆಗಳ ಅಡಿಯಲ್ಲಿ ಹುದುಗಿರುವ ನೂರಾರು ಬುಡ್ಡರ ಮನೆಗಳು (ಮೆಗಾಲಿಥಿಕ್ ಸಮಾಧಿಗಳು) ಕೇವಲ ಮೃತರ ಸಮಾಧಿಗಳಲ್ಲ. ಅವು ನಮ್ಮ ನೆಲದ ಪ್ರಾಚೀನ ನಾಗರಿಕತೆ, ಪೂರ್ವಜರ ಬದುಕು ಮತ್ತು ಸಂಸ್ಕೃೃತಿಯ ಕುರಿತಾದ ಜೀವಂತ ಕುರುಹುಗಳು. ಇಂತಹ ಅಪರೂಪದ ಐತಿಹಾಸಿಕ ತಾಣವನ್ನು ವೈಜ್ಞಾನಿಕವಾಗಿ ಸಂರಕ್ಷಿಸಿ ಮುಂದಿನ ಪೀಳಿಗೆಗೆ ಉಳಿಸಬೇಕಾಗಿದೆ.
ವೀರಣ್ಣ ಕಲಕೇರಿ, ಸಾಹಿತಿ, ಕೆಂಭಾವಿ
ರಾಜನಕೋಳೂರಿನ ಈ ಐತಿಹಾಸಿಕ ತಾಣಕ್ಕೆ ಇದುವರೆಗೂ ಸಮರ್ಪಕ ನಾಮಫಲಕವೂ ಅಳವಡಿಸಿಲ್ಲ. ಪ್ರವಾಸಿಗರ ಅನುಕೂಲಕ್ಕಾಗಿ ಕುಡಿಯುವ ನೀರು, ಆಸನ, ಶೌಚಾಲಯ ಹಾಗೂ ಸ್ವಚ್ಛತಾ ವ್ಯವಸ್ಥೆ ಕಲ್ಪಿಸಬೇಕು. ತಾಣದ ಭದ್ರತೆಗಾಗಿ ಸಿಸಿ ಕ್ಯಾಮೆರಾ ಅಳವಡಿಸಿ, ಅಗತ್ಯ ಮೂಲಸೌಕರ್ಯ ಒದಗಿಸುವ ಮೂಲಕ ಸಮಗ್ರ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಬೇಕು.
ಸಂಗನಗೌಡ ಧನರಡ್ಡಿ, ಸ್ಥಳೀಯರು
ತುರ್ತು ಗಮನಕ್ಕೆ ಒತ್ತಾಯ
ಪ್ರಾಚೀನ ಮಾನವರ ಬದುಕು, ನಂಬಿಕೆ ಮತ್ತು ಸಂಸ್ಕೃೃತಿಯ ಹೆಗ್ಗುರುತಾಗಿರುವ ಈ ಅಪರೂಪದ ತಾಣವನ್ನು ಕೇವಲ ‘ಬುಡ್ಡರ ಮನೆ’ಗಳೆಂಬ ಸ್ಥಳೀಯ ಹೆಸರಿನ ವ್ಯಾಪ್ತಿಯಲ್ಲಿ ನೋಡದೆ, ಪುರಾತತ್ವ ಪರಂಪರೆಯ ಭಾಗವಾಗಿ ಸಂರಕ್ಷಿಸುವ ಅಗತ್ಯವಿದೆ.
ಪುರಾತತ್ವ ಇಲಾಖೆ, ಪ್ರವಾಸೋದ್ಯಮ ಇಲಾಖೆ ಹಾಗೂ ಸ್ಥಳೀಯ ಆಡಳಿತ ಸಮನ್ವಯದಿಂದ ತಾಣದ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಬೇಕು. ಮೊದಲು ತಾಣದ ವೈಜ್ಞಾನಿಕ ಸಮೀಕ್ಷೆ ಹಾಗೂ ದಾಖಲೀಕರಣ ನಡೆಸಿ, ನಂತರ ಸಂರಕ್ಷಣೆ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂಬುದು ಇತಿಹಾಸಾಸಕ್ತರ ಒತ್ತಾಯವಾಗಿದೆ.
ಡಿಜಿಟಲ್ ದಾಖಲೀಕರಣ ಅಗತ್ಯ
ಇಂತಹ ಅಪರೂಪದ ಪುರಾತತ್ವ ತಾಣಗಳ ಡಿಜಿಟಲ್ ದಾಖಲೀಕರಣಕ್ಕೂ ಆದ್ಯತೆ ನೀಡಬೇಕಿದೆ. ಪ್ರತಿಯೊಂದು ಕಲ್ಲಿನ ರಚನೆಯ ಸ್ಥಳ, ಗಾತ್ರ, ವಿನ್ಯಾಸ ಮತ್ತು ಸ್ಥಿತಿಯನ್ನು ದಾಖಲಿಸಿ, ಛಾಯಾಚಿತ್ರ ಹಾಗೂ 3ಡಿ ತಂತ್ರಜ್ಞಾನದ ಮೂಲಕ ದಾಖಲೆ ಸಿದ್ಧಪಡಿಸಿದರೆ ಭವಿಷ್ಯದ ಸಂಶೋಧನೆ ಮತ್ತು ಸಂರಕ್ಷಣಾ ಕಾರ್ಯಗಳಿಗೆ ಅದು ನೆರವಾಗಲಿದೆ.
ತಾಣದ ಇತಿಹಾಸ, ಪುರಾತತ್ವ ಮಹತ್ವ ಮತ್ತು ಸಂಶೋಧನಾ ಮಾಹಿತಿಯನ್ನು ಕನ್ನಡ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಡಿಜಿಟಲ್ ರೂಪದಲ್ಲಿ ಲಭ್ಯವಾಗುವಂತೆ ಮಾಡುವುದು ಪ್ರವಾಸಿಗರನ್ನು ಆಕರ್ಷಿಸುವುದರ ಜೊತೆಗೆ ವಿದ್ಯಾರ್ಥಿಗಳಿಗೆ ಉಪಯುಕ್ತವಾಗಲಿದೆ.






