ಬುದ್ಧಗುರುವೆಂಬ ಕಾಲಾತೀತ ಕಾರುಣ್ಯದ ಬೆಳಕು

ಬುದ್ಧಗುರು ಹುಟ್ಟಿ ಎರಡೂವರೆ ಸಹಸ್ರಮಾನಗಳು ಕಳೆದುಹೋಗಿವೆ. ಸಕಲ ಜೀವರಾಶಿಯ ಒಳಿತಿಗಾಗಿ ಸತತವಾಗಿ ಧ್ಯಾನಿಸಿದ ಕಾರಣ, ಬುದ್ಧ ಇಂದಿಗೂ ಜಗತ್ತಿನಾದ್ಯಂತ ಜನಸಮುದಾಯಗಳಲ್ಲಿ ಸಂಚಲನ ಮೂಡಿಸುತ್ತಲೇ ಇದ್ದಾನೆ. ಮಾನವ ದೃಢಸಂಕಲ್ಪ ಮಾಡಿದರೆ ಎಷ್ಟು ಉತ್ತುಂಗಕ್ಕೆ ಏರಬಲ್ಲ ಎಂಬುದಕ್ಕೆ ಬುದ್ಧ ಜ್ವಲಂತ ಉದಾಹರಣೆ. ವಿಶೇಷವೆಂದರೆ ಬುದ್ಧ ಹುಟ್ಟಿದ್ದು, ಜ್ಞಾನೋದಯ ಪಡೆದದ್ದು, ಮಹಾಪರಿನಿಬ್ಬಾಣ ಹೊಂದಿದ್ದು ವೈಶಾಖ ಶುಕ್ಲಪೂರ್ಣಿಮೆಯಂದು. ಇದನ್ನು ‘ಬುದ್ಧಪೂರ್ಣಿಮೆ’ ಎಂದೂ ಕರೆಯಲಾಗುತ್ತದೆ. ಬುದ್ಧನದು ತುಂಬುಹುಣ್ಣಿಮೆಯಂತೆ ಸದಾ ಎಲ್ಲರಿಗೂ ಹಿತವಾದ ತಂಬೆಳಕು ನೀಡುವ ವ್ಯಕ್ತಿತ್ವ.
ಮಹಾ ಕಾರುಣ್ಯ ಸಂಕೇತವಾಗಿರುವ ಬುದ್ಧಗುರು ಅವತಾರ ಪುರುಷನಲ್ಲ ಚಾರಿತ್ರಿಕ ವ್ಯಕ್ತಿ. ಈತ ಮೋಕ್ಷದಾತನಲ್ಲ ಮಾರ್ಗದಾತ. ಸರಿ ಸುಮಾರು ಕ್ರಿ.ಪೂ.563 ರಿಂದ ಕ್ರಿ.ಪೂ.483 ಬುದ್ಧಗುರುವಿನ ಜೀವಿತಕಾಲ. ಅಹಿಂಸೆಯ ಮೂಲಕ ಸಮಾಜವನ್ನು ಸುಧಾರಿಸಿದ ಪ್ರಪ್ರಥಮ ಸುಧಾರಕನಾದ ಬುದ್ಧಗುರು ಜನತೆಗೆ ನಂಬಿಸಲ್ಪಟ್ಟ ಆತ್ಮ, ದೇವರು, ಹಣೆಬರಹ, ವಿಧಿ, ಕರ್ಮಸಿದ್ಧಾಂತ, ಚಾತುರ್ವರ್ಣ, ಜಾತಿಪದ್ಧತಿ, ಲಿಂಗಭೇದ, ವರ್ಗ ತಾರತಮ್ಯಗಳನ್ನು ನಿರಾಕರಿಸಿದ. ಯಾಗಯಜ್ಞ, ಪ್ರಾಣಿಬಲಿಗಳನ್ನು ವಿರೋಧಿಸಿದ. ಅಲೌಕಿಕತೆಯ ಬಗೆಗೆ ತಲೆಕೆಡಿಸಿಕೊಳ್ಳುವ ಬದಲಿಗೆ ಲೌಕಿಕ ಜಗತ್ತನ್ನು ದುಃಖಗಳಿಂದ ವಿಮೋಚನೆಗೊಳಿಸಲು ಪ್ರಯತ್ನಿಸಿದ. ಜೀವಪರ ವೈಚಾರಿಕತೆಯನ್ನು ಬೋಧಿಸಿದ ಕಾರಣವಾಗಿ ಬುದ್ಧ ಗುರುವಿನ ಚಿಂತನೆಗಳು ನಮ್ಮ ದೇಶದ ಗಡಿಯನ್ನೂ ದಾಟಿ ಚೀನಾ, ಟಿಬೆಟ್, ಥಾಯ್ಲೆಂಡ್, ಕೊರಿಯಾ, ಜಪಾನ್, ಶ್ರೀಲಂಕಾ ಮುಂತಾದ ದೇಶಗಳಿಗೂ ವ್ಯಾಪಿಸಿತು.
ಬುದ್ಧಗುರುವಿನ ಮೊದಲ ಹೆಸರು ಸಿದ್ಧಾರ್ಥ ಗೌತಮ. ಈತ ಒಬ್ಬ ರೋಗಿ, ಮುದುಕ, ಶವ ಹಾಗೂ ಸನ್ಯಾಸಿಯನ್ನು ನೋಡಿ ವೈರಾಗ್ಯಗೊಂಡು ಮಧ್ಯರಾತ್ರಿ ಯಾರಿಗೂ ಹೇಳದೆ ಕೇಳದೆ ಮನೆಬಿಟ್ಟು ಹೋದನೆಂಬ ಕಥೆಯೇ ಹೆಚ್ಚು ಜನಜನಿತವಾಗಿದೆ. ಆದರೆ ಬುದ್ಧಗುರುವಿನ ಬಗೆಗೆ ಅತ್ಯಂತ ಶ್ರದ್ಧೆಯಿಂದ ಅಧ್ಯಯನ ಮಾಡಿದ ಸ್ವತಃ ತಾವೇ ಬೌದ್ಧರಾದ ಬಾಬಾಸಾಹೇಬ್ ಅಂಬೇಡ್ಕರ್ ಹಾಗೂ ಧರ್ಮಾನಂದ ಕೋಸಂಬಿ ಅವರು ಪಾಲಿ ಭಾಷೆಯ ‘ಅತ್ತದಂಡ ಸುತ್ತ’ವನ್ನು ಆಧಾರವಾಗಿಸಿಕೊಂಡು ತಮ್ಮ ಬರಹಗಳ ಮೂಲಕ ಸಿದ್ಧಾರ್ಥ ಮನೆ ಬಿಟ್ಟು ಹೋಗಲು ಶಾಕ್ಯ ಹಾಗೂ ಕೊಲಿಯಾ ಬುಡಕಟ್ಟುಗಳ ನಡುವೆ ರೋಹಿಣಿ ನದಿ ವಿಷಯವಾಗಿ ನಡೆದ ಸಂಘರ್ಷವೇ ಕಾರಣ ಎಂಬುದನ್ನು ತಿಳಿಸಿದ್ದಾರೆ.
ಹೀಗೆ ಮನೆ ಬಿಟ್ಟು ಜನರಿಂದ ದೂರ ಹೋದ ಸಿದ್ಧಾರ್ಥ ಬುದ್ಧನಾಗಿ, ಮತ್ತೆ ಜನತೆಯ ಬಳಿಗೇ ಬಂದದ್ದು ವಿಶೇಷ. ಬುದ್ಧನದು ಓದಿನಿಂದ ಪಡೆದ ಒಣಪಾಂಡಿತ್ಯದ ಜ್ಞಾನವಾಗಿರಲಿಲ್ಲ. ಅನುಭವಕೇಂದ್ರಿತ ಜ್ಞಾನವಾಗಿತ್ತು. ಎಲ್ಲರ ನೆಮ್ಮದಿಯ ಬಯಸುವುದಾಗಿತ್ತು. ತಾನು ಪಡೆದ ಜ್ಞಾನವನ್ನು ಜನರೊಂದಿಗೆ ಹಂಚಿಕೊಳ್ಳುವ ಬಯಕೆ ಬುದ್ಧಗುರುವಿನದು. ಅದಕ್ಕಾಗಿ ಆತ ಬಳಸಿದ್ದು ಅಂದಿನ ಜನಸಾಮಾನ್ಯರ ಭಾಷೆಯನ್ನು. ‘ದ್ವೇಷದಿಂದ ಏನನ್ನು ಸಾಧಿಸಲು ಸಾಧ್ಯವಿಲ್ಲ. ಆದರೆ ಪ್ರೀತಿಯಿಂದ ದ್ವೇಷವನ್ನು ಗೆಲ್ಲಬಹುದು’. ‘ಹಸಿದವನಿಗೆ ಏನನ್ನೂ ಬೋಧಿಸಬೇಡ’ ಎಂದು ‘ಕೆಡುಕುಗಳನ್ನು ನಿರಾಕರಿಸು, ಜೀವನವನ್ನು ಪ್ರೀತಿಸು’, ‘ದುರಾಶೆಯೇ ದುಃಖಕ್ಕೆ ಕಾರಣ’ ಇಂತಹ ಪ್ರೀತಿಯ ತತ್ವಗಳನ್ನು ಆಲಿಸಿ ವಿಮೋಚನೆಗೊಂಡ ಜನತೆ ಸಿದ್ಧಾರ್ಥನಿಗೆ ನೀಡಿದ ಹೆಸರು ಬುದ್ಧ. ಪಾಲಿಯಲ್ಲಿ ಬುದ್ಧನೆಂದರೆ ಜ್ಞಾನಿ, ಅರಿವನ್ನು ಪಡೆದಾತ, ಎಚ್ಚೆತ್ತವನು ಎಂದು.
‘ಕೇವಲ ನೀನು ಕೇಳಿರುವುದನ್ನೇ ನಂಬಬೇಡ, ಒಬ್ಬರಿಂದ ಒಬ್ಬರಿಗೆ ಹೇಳಿಕೆಯಿಂದ ಬಂದುದನ್ನೇ ಸತ್ಯವೆಂದು ಪರಿಗಣಿಸಬೇಡ-ಧರ್ಮ ಗ್ರಂಥಗಳು ಪವಿತ್ರವಾದವು ಎಂಬ ಕಾರಣಕ್ಕಾಗಿಯೇ ಅವುಗಳನ್ನು ಒಪ್ಪಬೇಡ. ಯಾರೋ ಊಹಾತ್ಮಕವಾಗಿ ಹೇಳಿದುದನ್ನೇ ದಿಟವೆಂದು ಭ್ರಮಿಸಬೇಡ. ಸನ್ಯಾಸಿ, ಜ್ಯೋತಿಷಿ, ಗುರುವರ್ಯ, ಹಿರಿಯರು ಹೇಳಿದರೆಂಬ ಏಕಮಾತ್ರ ಕಾರಣಕ್ಕೆ ನೀನು ಏನನ್ನೂ ಪ್ರಶ್ನಿಸದೆ, ಯೋಚಿಸದೆ, ನಿನಗೆ ಮನವರಿಕೆಯಾಗದೆ ನಂಬಬೇಡ. ನಿನಗೆ ಸರಿ ಎನಿಸಿದ್ದು ಇನ್ನೊಬ್ಬರಿಗೆ ನಿರಂತರ ಶೋಷಣೆ ಮಾಡುವುದಾದರೆ ಅದನ್ನು ಸಂಪೂರ್ಣವಾಗಿ ನಿರಾಕರಿಸು. ನಿನಗೆ ನೀನೇ ಬೆಳಕು’ ಎನ್ನುವ ಬುದ್ಧಗುರು ಪ್ರಜ್ಞೆ, ಸಮತೆ, ಕಾರುಣ್ಯವನ್ನು ನೈತಿಕ ತತ್ವವಾಗಿಸಿಕೊಂಡ ದಮ್ಮವನ್ನು ಆಚರಿಸಲು ಸಂಘವನ್ನು ಸ್ಥಾಪಿಸಿದ ಸಂಘದೊಳಗೆ ಭಿನ್ನಭೇದಗಳನ್ನು ಮಾಡದೆ ಎಲ್ಲರಿಗೂ ಮುಕ್ತ ಅವಕಾಶ ನೀಡಿದ. ಸಂಘಕ್ಕೆ ಸಾಗರದ ಉಪಮೆ ನೀಡಿದ. ನದಿಗಳಿಗೆ ಹೆಸರಿದೆ. ಆದರೆ ಸಾಗರಕ್ಕೆ ಸೇರಿದ ಮೇಲೆ ಅವು ತಮ್ಮ ಅಸ್ತಿತ್ವ ಕಳೆದುಕೊಳ್ಳುತ್ತವೆ. ಸಾಗರದ ನೀರು ತೆಗೆದು ಇದು ಇಂಥ ನದಿಯ ನೀರು ಎಂದು ಹೇಳಲು ಸಾಧ್ಯವಿಲ್ಲ. ಹಾಗೆ ಸೇರಿದವರೆಲ್ಲ ಒಂದೇ ಎಂದು ಹೇಳಿದ.
ಬುದ್ಧ ಮನಃಶಾಸ್ತ್ರಜ್ಞ ಕೂಡ. ಮಾನವನ ಉನ್ನತಿ ಹಾಗೂ ಅವನತಿಗೆ ಆತನು ಮಾಡುವ ಒಳ್ಳೆಯ ಅಥವಾ ಕೆಡುಕಿನ ಕ್ರಿಯೆಯೇ ಕಾರಣವೆಂದು ಹೇಳಿದ. ಇಂತಹ ನಡವಳಿಕೆಯ ಹಿಂದೆ ವ್ಯಕ್ತಿಯ ಮನಸ್ಸೇ ಮೂಲವಾಗಿರುವುದರಿಂದ ಮನಸ್ಸನ್ನು ಸದಾ ಸ್ವಚ್ಛವಾಗಿ ಇಟ್ಟುಕೊಳ್ಳಲು ಪ್ರೇರೇಪಿಸಿದ. ಸಾಮಾನ್ಯವಾಗಿ ಮನುಷ್ಯರು ತಮ್ಮ ದೈಹಿಕ ಸ್ವಚ್ಛತೆ ಸೌಂದರ್ಯಕ್ಕೆ ಆದ್ಯತೆಯನ್ನು ನೀಡುತ್ತಾರೆ. ಅದು ತಪ್ಪಲ್ಲ. ಆದರೆ ಮನಸ್ಸಿನ ಸ್ವಚ್ಛತೆ ಸೌಂದರ್ಯಕ್ಕೂ ಆದ್ಯತೆ ನೀಡಬೇಕು ಆಗ ವ್ಯಕ್ತಿಯ ಜೊತೆಗೆ ವ್ಯಕ್ತಿತ್ವವೂ ಬೆಳಗುತ್ತದೆ. ಮನದ ಸೌಂದರ್ಯಕ್ಕಾಗಿ ಬುದ್ಧ ಶೋಧಿಸಿದ್ದು ಧ್ಯಾನ.
ಬುದ್ಧಗುರು ಬದುಕಿದ ಕಾಲಘಟ್ಟಗಳಲ್ಲಿದ್ದ ಅಂದಿನ ರಾಜರುಗಳಾದ ಬಿಂಬಸಾರ, ಪ್ರಸೇನಜಿತು ಅವರುಗಳು ಬುದ್ಧಗುರುವಿನೊಂದಿಗೆ ಚರ್ಚಿಸಿ ತಾವು ಕೂಡ ಪರಿವರ್ತನೆ ಗೊಂಡರು. ದಮ್ಮಕ್ಕೆ ರಾಜಾಶ್ರಯ ನೀಡಿ ಸುಮ್ಮನಾಗಲಿಲ್ಲ. ಜೊತೆಗೆ, ತಾವೂ ಸಹ ದುಡಿದರು. ಬುದ್ಧಗುರುವಿನ ಪ್ರೇಮಮಯ ಮಾತು ಮತ್ತು ಸ್ಪರ್ಶದಿಂದ ಅಸಂಖ್ಯಾತ ಜನ ಪರಿವರ್ತನೆಗೊಂಡು ಬದುಕಿಗೆ ನೈತಿಕತೆ ಚೌಕಟ್ಟು ಅಳವಡಿಸಿಕೊಂಡರು. ದಿಕ್ಕುತಪ್ಪಿ ದರೋಡೆಕಾರನಾಗಿದ್ದ ಅಂಗುಲಿಮಾಲಾ, ವೇಶ್ಯೆಯಾಗಿದ್ದ ಅಮ್ರಪಾಲಿ ಬುದ್ಧ ತೋರಿದ ದಮ್ಮದ ಬೆಳಕಿನಲ್ಲಿ ಪುನೀತರಾದರು.
ಮೌರ್ಯ ದೊರೆ ಅಶೋಕ ಚಕ್ರವರ್ತಿ ಕಳಿಂಗ ಯುದ್ಧದ ಬಳಿಕ ಹಿಂಸೆಯನ್ನು ತ್ಯಜಿಸಿ ಬುದ್ಧಗುರುವಿನ ಕಾರುಣ್ಯ ಮಾರ್ಗದ ದೀಕ್ಷೆ ಪಡೆದ. ದಮ್ಮ ಪ್ರಸಾರಕ್ಕಾಗಿ ಸ್ವತಃ ತನ್ನ ಮಗ ಮಹೀಂದ್ರ ಹಾಗೂ ಮಗಳು ಸಂಘಮಿತ್ರೆಯನ್ನು ಹೊರದೇಶಗಳಿಗೆ ಕಳಿಸಿದ. ಅಶೋಕನ ದೆಸೆಯಿಂದ ಶ್ರೀಲಂಕಾ ಮಾತ್ರವಲ್ಲದೆ ಬೇರೆಬೇರೆ ದೇಶಗಳಿಗೆ ಬುದ್ಧತತ್ವ ಪಸರಿಸಿತು. ದಮ್ಮದ ಬಗೆಗೆ ಅಶೋಕ ಅನೇಕ ಶಾಸನಗಳನ್ನು ಬರೆಯಿಸಿದ. ಆತ ಕ್ರಿ. ಪೂ. ಮೂರನೇ ಶತಮಾನದಲ್ಲಿ ಸಾರನಾಥದಲ್ಲಿ ಪ್ರತಿಷ್ಠಾಪಿಸಿದ ಸ್ತಂಭದಲ್ಲಿರುವ ನಾಲ್ಕುತಲೆಯ ಸಿಂಹ ನಮ್ಮ ರಾಷ್ಟ್ರ ಲಾಂಛನವಾಗಿ ಹಾಗೂ ದಮ್ಮಚಕ್ರ ರಾಷ್ಟ್ರದ ತ್ರಿವರ್ಣ ಧ್ವಜದಲ್ಲಿ ಅಳವಡಿಸಲಾಗಿದ್ದು, ಹೆಮ್ಮೆಯ ಸಂಗತಿಗಳಾಗಿವೆ.
ಅಶೋಕ ಚಕ್ರವರ್ತಿಯ ಬಳಿಕ ಬುದ್ಧ ದಮ್ಮವನ್ನು ಬೆಂಬಲಿಸಿದ ಪ್ರಮುಖ ರಾಜರುಗಳೆಂದರೆ ಕಾನಿಷ್ಕ, ಗೌತಮೀಪುತ್ರ ಶಾತಕರ್ಣಿ, ಹರ್ಷವರ್ಧನ ಮೊದಲಾದವರು. ಅದರಲ್ಲೂ ರಾಜ್ಯ ವಿಸ್ತರಣೆಗಾಗಿ ಭಾರತಕ್ಕೆ ಬಂದ ಗ್ರೀಕ್ ದೊರೆ ಮಿನಾಂಡರ್(ಅಲೆಗ್ಸಾಂಡರ್ ಮೊಮ್ಮಗ) ಬೌದ್ಧ ಭಿಕ್ಕು ನಾಗಸೇನನ ಸಂಪರ್ಕ ಮತ್ತು ಸಂವಾದದ ಕಾರಣವಾಗಿ ತಾನೇ ಬೌದ್ಧನಾದ. ಇವರಿಬ್ಬರ ನಡುವೆ ಪ್ರಶ್ನೋತ್ತರ ಚರ್ಚೆ ‘ಮಿಲಿಂದ ಪನ್ನಃ’ ಎಂದೇ ಜಗತ್ ಪ್ರಸಿದ್ಧವಾಗಿದೆ.
ವಿಶ್ವವಿದ್ಯಾನಿಲಯಗಳ ಪರಿಕಲ್ಪನೆ ರೂಪುಗೊಂಡದ್ದು ಬುದ್ಧಗುರುವಿನ ತತ್ತ್ವಗಳಿಂದ. ನಲಂದಾ, ತಕ್ಷಶಿಲಾ ಮೊದಲಾದ ವಿಶ್ವವಿದ್ಯಾನಿಲಯಗಳು ಸ್ಥಾಪಿತವಾದವು. ನಲಂದಾ ವಿಶ್ವವಿದ್ಯಾನಿಲಯಕ್ಕೆ ಭೇಟಿ ನೀಡಿದ ಚೀನಾದ ಬೌದ್ಧಯಾತ್ರಿಕ ಫಾಹಿಯಾನ್ ಇಡೀ ಭರತಖಂಡದಾದ್ಯಂತ ಸಂಚರಿಸಿ ಇಲ್ಲಿದ್ದ ಬೌದ್ಧವಿಹಾರ, ಸ್ತೂಪ, ಚೈತ್ಯಾಲಯ ಮುಂತಾದವುಗಳ ಬಗೆಗೆ ದಾಖಲಿಸಿದ್ದಾನೆ. ಈತನ ಬಳಿಕ 300 ವರ್ಷಗಳ ನಂತರ ಮತ್ತೆ ಬಂದವರು ಚೀನಾದ ಬೌದ್ಧಯಾತ್ರಿಕ ಹೂ-ಯನ್-ತ್ಸಾಂಗ್ ಹಾಗೂ ಇತ್ಸಿಂಗ್ ಇಬ್ಬರೂ ಫಾಹಿಯಾನ್ ಗುರುತಿಸಿದ್ದ ಹಲವಾರು ಬೌದ್ಧ ಕೇಂದ್ರಗಳು ನಾಶವಾಗಿರುವ ಬಗ್ಗೆ ದಾಖಲಿಸಿದ್ದಾರೆ. ನೂರಾರು ವರ್ಷಗಳ ತರುವಾಯ ಬುದ್ಧನ ಮಧ್ಯಮ ಮಾರ್ಗವನ್ನು ಜನತೆಯತ್ತ ಕೊಂಡಯ್ಯುವ ಕೆಲಸವನ್ನು ಬೌದ್ಧ ಭಿಕ್ಕು ನಾಗಾರ್ಜುನ ಕೈಗೊಂಡನು.
ಚಾತುರ್ವರ್ಣ, ಜಾತಿಪದ್ಧತಿ, ಅಸ್ಪಶ್ಯತೆ, ಲಿಂಗತಾರತಮ್ಯ, ಕರ್ಮಸಿದ್ಧಾಂತವೇ ಮೊದಲಾದವುಗಳನ್ನು ಆಚರಿಸುತ್ತಿದ್ದವರ ಕಾರಣವಾಗಿ ಕಾಲಕ್ರಮೇಣ ಬೌದ್ಧತತ್ವದ ಬೆಳಕು ಭಾರತದಿಂದಲೇ ಹೊರದೂಡಲ್ಪಟ್ಟಿತು. ಹೀಗೆ ಶತಶತಮಾನಗಳ ಕಾಲ ಭಾರತದಿಂದ ಹೊರಗೆ ಬೆಳಗುತ್ತಿದ್ದ ಬೌದ್ಧಬೆಳಕನ್ನು ಅಂಬೇಡ್ಕರ್ ಅವರು ತಮ್ಮ ವಿಮೋಚನೆಯಾಗಿ ಮಾತ್ರವಲ್ಲ ಇಡೀ ಮನುಕುಲದ ವಿಮೋಚನೆಯಾಗಿ ಕಂಡರು. ಬೌದ್ಧತತ್ವದ ಪ್ರಜಾಸತ್ತಾತ್ಮಕ ಚಿಂತನೆಗಳನ್ನು ಜನಸಮುದಾಯದ ಸಂಸ್ಕೃತಿಯಾಗಿಸುವ ಸದಾಶಯ ಇದರಲ್ಲಿದೆ.
ಇಂದು ಜಾಗತಿಕ ಮಟ್ಟದಲ್ಲಿ ಬೌದ್ಧ ದಮ್ಮ ಮೂರನೆಯ ಸ್ಥಾನದಲ್ಲಿದೆ. ಬುದ್ಧ ತತ್ವಕ್ಕೆ ಹೆಚ್ಚು ಹೆಚ್ಚು ಜನರು ಆಕರ್ಷಿತರಾಗುತ್ತಿದ್ದಾರೆ. ಇದಕ್ಕೆ ಕಾರಣ ವೈಜ್ಞಾನಿಕ ಚಿಂತನೆಗೆ ಪೂರಕವಾಗಿರುವ ಅದರ ಮಾನವೀಯ ತತ್ವಗಳು. ಇದನ್ನು ಮನಗಂಡ ಕಾರಣಕ್ಕಾಗಿಯೇ ಸೂಕ್ಷ್ಮ ಸಂವೇದನೆಯ ವಿಜ್ಞಾನಿ ಆಲ್ಬರ್ಟ್ ಐನ್‌ಸ್ಟೀನ್ ‘‘ನಾನು ಯಾವುದೇ ಧರ್ಮದ ಅನುಯಾಯಿಯಲ್ಲ. ನನಗೊಂದು ಧರ್ಮ ಬೇಕೆನಿಸಿದರೆ ನನ್ನ ಆಯ್ಕೆ ಬೌದ್ಧ ಧರ್ಮವೇ ಆಗಿರುತ್ತದೆ’’ ಎಂದಿರುವುದು.
ಬುದ್ಧಗುರುವಿನ ವ್ಯಕ್ತಿತ್ವ ಹಾಗೂ ವಿಚಾರಧಾರೆಗಳು ಕಾಲಾತೀತ ಮತ್ತು ಸೀಮಾತೀತವಾಗಿದ್ದು ಇಂದಿಗೂ ಪ್ರಸ್ತುತವಾಗಿವೆ.







