ಒಕ್ಕೂಟ ವ್ಯವಸ್ಥೆಯ ಭಾಗವಾಗಿ ಎತ್ತಬೇಕಾದ ‘ಬಜೆಟ್’ ಸಂಬಂಧಿ ಪ್ರಶ್ನೆಗಳು

ತನ್ನ 16ನೇ ಬಜೆಟ್ ಅನ್ನು ಶುಕ್ರವಾರ ಮಂಡಿಸಿದ ಸಿದ್ದರಾಮಯ್ಯ ಅವರು ಬಜೆಟ್ ಭಾಷಣದ ಪೀಠಿಕೆಯ ಭಾಗವಾಗಿ ನೀಡಿರುವ ಆರ್ಥಿಕ ಸಮೀಕ್ಷೆಯಲ್ಲಿ, ರಾಜ್ಯಕ್ಕೆ ಕೇಂದ್ರಸರಕಾರದಿಂದ ಆಗಿರುವ ತೆರಿಗೆ ಬಾಬ್ತಿನ ಹಂಚಿಕೆಯಲ್ಲಿನ ಅನ್ಯಾಯಗಳ ಬಗ್ಗೆ ಬಹಳ ತಾರ್ಕಿಕವಾದ ಪ್ರಶ್ನೆಗಳನ್ನು ಎತ್ತಿದ್ದಾರೆ. ವಿಶೇಷವಾಗಿ, ತಮಿಳುನಾಡು ಮತ್ತು ಕರ್ನಾಟಕ ರಾಜ್ಯಗಳು ಈ ರೀತಿ, ಸಾಂವಿಧಾನಿಕ ಮೂಲ ಚೌಕಟ್ಟಿನಲ್ಲಿ ಉದ್ದೇಶಪೂರ್ವಕವಾಗಿ ಉಂಟುಮಾಡಲಾಗುತ್ತಿರುವ ಗೊಂದಲಗಳ ಬಗ್ಗೆ ಸಕಾಲಿಕ ಪ್ರಶ್ನೆಗಳನ್ನು ಎತ್ತುತ್ತಿರುವುದು ಅತ್ಯಂತ ಪ್ರಸ್ತುತ. ಈ ಪ್ರಶ್ನೆಗಳು ಇನ್ನಷ್ಟು ವಿಸ್ತೃತವಾಗಿ ಚರ್ಚೆಗೆ ತೆರೆದುಕೊಳ್ಳಬೇಕಿದೆ.
ಸಂವಿಧಾನದ ಏಳನೇ ಷೆಡ್ಯೂಲಿನಲ್ಲಿ ಒಕ್ಕೂಟದ ಜವಾಬ್ದಾರಿ ಹಂಚಿಕೆಯ ಬಗ್ಗೆ ವಿವರಿಸಲಾಗಿದ್ದು, ಅಲ್ಲಿ ಭಾರತ ಸರಕಾರದ ಜವಾಬ್ದಾರಿಗಳ ಪಟ್ಟಿ, ರಾಜ್ಯ ಸರಕಾರಗಳ ಜವಾಬ್ದಾರಿಯ ಪಟ್ಟಿಯ ಜೊತೆಗೆ ಸಮವರ್ತಿ ಪಟ್ಟಿಯೊಂದು ಇದೆ. ಈ ಸಮವರ್ತಿ ಪಟ್ಟಿಯ ವಿಷಯಗಳಿಗೆ ಸಂಬಂಧಿಸಿದಂತೆ ರಾಜ್ಯಗಳು ಕಾನೂನು ರಚಿಸಬಹುದಾದರೂ, ಹಿತಾಸಕ್ತಿ ಸಂಘರ್ಷಗಳು ಏರ್ಪಟ್ಟಲ್ಲಿ ಭಾರತ ಸರಕಾರದ ನಿಲುವೇ ಅಂತಿಮವಾಗಿರುತ್ತದೆ.
ಉದಾರೀಕರಣಕ್ಕೆ ತೆರೆದುಕೊಳ್ಳುವ ಮುನ್ನ ಈ ವಿಚಾರದಲ್ಲಿ ಕೇಂದ್ರ-ರಾಜ್ಯಗಳ ನಡುವೆ ಗಮನಾರ್ಹ ಸಂಘರ್ಷಗಳು ಏರ್ಪಟ್ಟಿದ್ದಿಲ್ಲ. ಆದರೆ, ಜಗತ್ತೇ ಗ್ಲೋಬಲ್ ವಿಲೇಜ್ ಆಗಿ ನಿಂತಿರುವಾಗ, ಸಮವರ್ತಿ ಪಟ್ಟಿಯ ಮೇಲೆ ಭಾರತ ಸರಕಾರದ ಒತ್ತಡ ಒಂದೇ ಸಮನೆ ಬೀಳುತ್ತಿರುವುದನ್ನು ನಾವು ಕೆಲವು ವರ್ಷಗಳಿಂದೀಚೆಗೆ ಗಮನಿಸುತ್ತಿದ್ದೇವೆ. ಕೃಷಿ ಕಾಯ್ದೆಗಳು, ಸಹಕಾರ, ಸಾರಿಗೆ, ಟೋಲ್ ಸಂಗ್ರಹ, ತೆರಿಗೆಗಳು (ಜಿಎಸ್‌ಟಿ ಕಾರಣದಿಂದಾಗಿ)... ಹೀಗೆ ಕಳೆದ 11 ವರ್ಷಗಳಲ್ಲಿ, ರಾಜ್ಯದ ಆಡಳಿತ ವ್ಯಾಪ್ತಿಯಲ್ಲಿ ಭಾರತ ಸರಕಾರವು ಅನಗತ್ಯ ಮೂಗು ತೂರಿಸುತ್ತಿರುವ ಮತ್ತು ರಾಜ್ಯದ ಮೂಗು ಒತ್ತಿ ಬಾಯಿ ಕಳೆಸುವ ಪ್ರಯತ್ನ ಮಾಡುತ್ತಿರುವ ಹಲವಾರು ನಿದರ್ಶನಗಳನ್ನು ಬೊಟ್ಟು ಮಾಡಬಹುದು.
ಉದಾರೀಕರಣ ಮತ್ತು ಭಾರತ ಸರಕಾರದ ‘ಬುಲ್ಲೀಯಿಂಗ್’ ಕಾರಣದಿಂದಾಗಿ, ರಾಜ್ಯ ಸರಕಾರಗಳ ಸ್ವತಂತ್ರ ಶಾಸನ ರಚನೆಯ ಹಕ್ಕು ಕ್ರಮೇಣ ಮೊಟಕಾಗುತ್ತಾ ಬರುತ್ತಿದೆ. ಇದಕ್ಕಾಗಿ ಭಾರತ ಸರಕಾರ ಒಂದು ವನ್ ವೇ ಟ್ರಾಫಿಕ್ ವ್ಯವಸ್ಥೆಯನ್ನು ಬೆಣ್ಣೆಯಿಂದ ಕೂದಲು ಹೆಕ್ಕಿದಷ್ಟು ನಯವಾಗಿ ರೂಪಿಸಿಕೊಂಡಂತಿದೆ. ಈಗ ಜಾರಿಯಲ್ಲಿ ಇಲ್ಲದಿದ್ದರೂ, ತನ್ನ ಅದೃಶ್ಯ ಇರುವಿಕೆಯನ್ನು ಮತ್ತೆ ಮತ್ತೆ ಸಾಬೀತುಪಡಿಸುತ್ತಿರುವ ಬಹುಚರ್ಚಿತ ಕೃಷಿ ಕಾಯ್ದೆಗಳು ಮತ್ತು ಅವುಗಳ ಹಿಂದೆಗೆತದ ಬಳಿಕದ ಸನ್ನಿವೇಶವನ್ನು ವಿವರವಾಗಿ ಗಮನಿಸಿದರೆ ಈ ಲೇಖಕ ಹೇಳುತ್ತಿರುವುದು ಏನೆಂದು ಸ್ಪಷ್ಟವಾಗುತ್ತದೆ.
ಮೊನ್ನೆ ಸಿದ್ದರಾಮಯ್ಯನವರು ಸಮಪಾಲು-ಸಮಬಾಳಿನ ಹೆಸರಿನಲ್ಲಿ ಪ್ರಕಟಿಸಿರುವ ಬಹುತೇಕ ‘ಪಂಚಕಜ್ಜಾಯ ಹಂಚಿಕೆ ಯೋಜನೆ’ಗಳನ್ನೆಲ್ಲ ಗಮನಿಸುತ್ತಾ ಹೋದಾಗ, ಅವೆಲ್ಲವೂ ಭಾರತ ಸರಕಾರದ ಈಗಾಗಲೇ ಪ್ರಕಟಿಸಲಾಗಿರುವ ಯೋಜನೆಗಳ ಅನುಷ್ಠಾನದ ಚಟುವಟಿಕೆಗಳು ಮತ್ತು ಮುಂದುವರಿಕೆಗಳು ಎಂಬುದು ಕಾಣಿಸತೊಡಗುತ್ತದೆ. ಅವುಗಳಲ್ಲೆಲ್ಲ ಒಂದೋ ಕೇಂದ್ರ ವಿತರಿಸುವ ಸಬ್ಸಿಡಿಯ ನಿಯಂತ್ರಣದ ಹಿಡಿತ ಇಲ್ಲವೇ ರಾಜ್ಯದೊಟ್ಟಿಗೆ ಜಂಟಿ ಪಾಲುದಾರಿಕೆಯ ನೊಗದ ಭಾರ ಇದ್ದೇ ಇರುತ್ತದೆ. ಇವೆಲ್ಲ ಇದೇ ರೀತಿ ಮುಂದುವರಿದರೆ ಮತ್ತು ಶಾಸನ ರಚನೆಗೆ ಸಮರ್ಥರಾದವರನ್ನು ರಾಜ್ಯ ವಿಧಾನಮಂಡಲದಲ್ಲಿ ಕುಳ್ಳಿರಿಸುವುದನ್ನು ಮತದಾರರು ಮರೆತೇ ಬಿಟ್ಟರೆ, ಇನ್ನೊಂದಿಷ್ಟು ಸಮಯದಲ್ಲಿ ರಾಜ್ಯಗಳ ವಿಧಾನಮಂಡಲಗಳು ಕೇಂದ್ರದಲ್ಲಿರುವ ಆಡಳಿತ ಪಕ್ಷದ ನಿರ್ಧಾರಗಳಿಗೆ ಕಾರುಕೂನಿಕೆ ಮಾಡುವ ಸದನಗಳಾಗಿ ಉಳಿದರೆ ಅಚ್ಚರಿ ಇಲ್ಲ. ಅವು ಶಾಸಕಾಂಗಗಳಾಗಿ ಉಳಿಯುವುದಿಲ್ಲ.
ಹಾಗಾಗಿ, ರಾಜ್ಯ ಸರಕಾರಗಳು ತೆರಿಗೆ ಹಂಚಿಕೆ ಮತ್ತು ಭಾಷಾ ನೀತಿಗಳನ್ನು ಮುಂದಿಟ್ಟುಕೊಂಡು ಕೇಂದ್ರದ ಜೊತೆ ಸಂಘರ್ಷ ನಡೆಸುವುದನ್ನು ಇನ್ನಷ್ಟು ವಿಸ್ತರಿಸಿಕೊಂಡು, ಆರ್ಥಿಕವಾಗಿ ಉದಾರೀಕೃತ ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ-ರಾಜ್ಯ ಸಂಬಂಧಗಳ ಮರುವ್ಯಾಖ್ಯಾನದ ಕುರಿತೂ ಚರ್ಚಿಸುವುದಕ್ಕೆ ಇದು ಸಕಾಲ.
ಶ್ವೇತ ಪತ್ರ ಹೊರಡಿಸಿ
ಕರ್ನಾಟಕ ಸರಕಾರದ ಬಜೆಟ್‌ಗೆ ಸಂಬಂಧಿಸಿ, ಗುರುತಿಸಬೇಕಾದ ಇನ್ನೊಂದು ಮಹತ್ವದ ಸಂಗತಿ ಇದೆ.
ಬಜೆಟ್‌ಗೆ ಎರಡು ವಾರಗಳ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಒಂದು ಕುತೂಹಲಕರ ಸೋಷಿಯಲ್ ಮೀಡಿಯಾ ಪೋಸ್ಟ್ ಬರೆದಿದ್ದರು. ಅದರಲ್ಲಿ ರಾಜ್ಯದ ಆರ್ಥಿಕ ಇಕ್ಕಟ್ಟಿನ ಬಗ್ಗೆ ಚರ್ಚಿಸುತ್ತಾ, ಹಿಂದಿನ ಬಿಜೆಪಿ ಸರಕಾರವು ಬಜೆಟ್ ನಿಗದಿ ಮಾಡಿದ್ದಕ್ಕಿಂತ ಏಳುಪಟ್ಟು ಹೆಚ್ಚು ಕಾಮಗಾರಿಗಳನ್ನು ತೆಗೆದುಕೊಂಡಿತ್ತು. ಬಂಡವಾಳ ವೆಚ್ಚ ಹೆಚ್ಚಿರುವ ಲೋಕೋಪಯೋಗಿ, ಸಣ್ಣ ನೀರಾವರಿ, ಜಲ ಸಂಪನ್ಮೂಲ, ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ, ವಸತಿ ಇಲಾಖೆಗಳಲ್ಲಿ 31-03-2023ರ ಹೊತ್ತಿಗೆ 2,70,695 ಕೋಟಿ ರೂ.ಗಳಷ್ಟು ಮೊತ್ತದ ಕಾಮಗಾರಿಗಳನ್ನು ಮಂಜೂರು ಮಾಡಿದ ಬಿಜೆಪಿ ಸರಕಾರವು ಅವಕ್ಕೆಲ್ಲ ಅಗತ್ಯ ಅನುದಾನ ಒದಗಿಸಿಲ್ಲ. ಮುಖ್ಯಮಂತ್ರಿಗಳ ವಿವೇಚನಾ ಕೋಟಾದ ಅಡಿಯಲ್ಲಿ 1,66,426 ಕೋಟಿ ರೂ.ಗಳ ಕಾಮಗಾರಿಗೆ ಅನುಮತಿ ನೀಡಲಾಗಿದೆ (ಇದೂ ಮೇಲಿನ ಮೊತ್ತದಲ್ಲಿ ಸೇರಿದೆಯೇ ಎಂಬುದು ಖಚಿತವಿಲ್ಲ) ಎಂದು ಆಪಾದಿಸಿದ್ದರು.
ಈಗ 25-26ರ ಬಜೆಟ್ 4,09,549 ಕೋಟಿ ರೂ. ಗಾತ್ರದ್ದು. ಇದರಲ್ಲಿ 3,11,739 ಕೋಟಿ ರೂ. ರಾಜಸ್ವ ಸ್ವೀಕೃತಿ ಮತ್ತು 71,336 ಕೋಟಿ ರೂ. ಬಂಡವಾಳ ವೆಚ್ಚ ಹಾಗೂ 26,454 ಕೋಟಿ ರೂ. ಸಾಲ ಮರುಪಾವತಿಗೆ ಎಂದು ತೋರಿಸಲಾಗಿದೆ. ಜೊತೆಗೆ 51 ಸಾವಿರ ಕೋಟಿ ರೂ. ಗ್ಯಾರಂಟಿ ಬಾಬ್ತು.
ಹಿಂದಿನ ಬಿಜೆಪಿ ಸರಕಾರವು ಹಾಲಿ ಬಜೆಟ್ ಗಾತ್ರದ ಶೇ. 65ರಷ್ಟು ಕಾಮಗಾರಿಗಳನ್ನು ಈಗಾಗಲೇ ಮಂಜೂರು ಮಾಡಿದ್ದರೆ, ಹಾಲಿ ಸರಕಾರಕ್ಕೆ ಅದನ್ನು ನಿಭಾಯಿಸುವುದನ್ನು ಹೊರತುಪಡಿಸಿ ಬೇರೆ ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳುವುದು ಕಷ್ಟ ಆಗಬೇಕಲ್ಲವೇ? ಈ ಕಾಮಗಾರಿಗಳ ಸದ್ಯದ ಸ್ಥಿತಿ ಏನು? ಈ ಬಾರಿ ಬಜೆಟ್‌ನಲ್ಲಿ ಅವಕ್ಕೇನಾದರೂ ಪ್ರಾವಧಾನ ಮಾಡಲಾಗಿದೆಯೇ? ಮಾಡಲಾಗಿದ್ದರೆ ಎಷ್ಟು ಮೊತ್ತ? ಅಥವಾ ಅವು ನನೆಗುದಿಗೆ ಬಿದ್ದಿವೆಯೇ? ನನೆಗುದಿಗೆ ಬಿದ್ದಿದ್ದರೆ, ಅವು ಹಾಲಿ ಸರಕಾರದ ಆರ್ಥಿಕತೆಯ ಮೇಲೆ ದುಷ್ಪರಿಣಾಮ ಬೀರಿದ್ದು ಹೇಗೆ?.. ಇಂತಹ ಹಲವು ಪ್ರಶ್ನೆಗಳಿಗೆ ಉತ್ತರ ಅಗತ್ಯ ಇದೆ. ಇದನ್ನೆಲ್ಲ ಆ ಎರಡೂ ಪ್ರಮುಖ ಪಕ್ಷಗಳ ನಾಯಕರು ಕೇಳುವುದಿಲ್ಲ. ಏಕೆಂದರೆ ಅವರೆಲ್ಲರೂ ಈ (ಬಜೆಟ್ ಹೊರಗೆ ‘ವರ’ ನೀಡುವುದರಲ್ಲಿ ಮತ್ತು ಸಾಲ ಎತ್ತುವುದರಲ್ಲಿ) ಅಪರಾಧದಲ್ಲಿ ಸಮಾನ ಪಾಲುದಾರರು. ಹಿಂದಿನ ಬಜೆಟ್‌ನಲ್ಲಿ ಗ್ಯಾರಂಟಿಗಳು ಅಬ್ಬರಿಸುತ್ತಿದ್ದಾಗ, ಸರಕಾರ ದಿವಾಳಿ ಆಗಲಿದೆ ಎಂಬ ಕೂಗು ಎದ್ದಿತ್ತು. ಆಗ ನಿಜಕ್ಕೂ ಪರಿಸ್ಥಿತಿ ಏನೆಂಬ ಬಗ್ಗೆ ಸರಕಾರವು ವಿಧಾನಮಂಡಲದಲ್ಲಿ ಶ್ವೇತಪತ್ರವೊಂದನ್ನು ಮಂಡಿಸಿದರೆ ದೂದ್ ಕಾ ದೂದ್ ಪಾನೀ ಕಾ ಪಾನಿ ಆಗಿಬಿಡುತ್ತಿತ್ತು. ಅದಾಗಿ ಒಂದು ವರ್ಷ ಕಳೆದಿದೆ. ಈಗ ಸರಕಾರ ದಿವಾಳಿ ಆಗದಿದ್ದರೂ, ಅಗತ್ಯ ವೆಚ್ಚಗಳಿಗೆ, ಪಾವತಿಗೆ ಸಂಬಂಧಿಸಿದಂತೆ ಕೆಲವೆಡೆ ಏದುಸಿರು ಬಿಡುತ್ತಿರುವುದು ಕಾಣಿಸುತ್ತಿದೆ. ಕಳೆದ ಹಣಕಾಸು ವರ್ಷದಲ್ಲಿ ಸರಕಾರ ಖರ್ಚಿನ ಹಲವು ಬಾಬ್ತುಗಳಲ್ಲಿ (ಅದರಲ್ಲೂ ಸಂಬಳ, ಗ್ಯಾರಂಟಿ, ಅನುದಾನಗಳಂತಹವು) ತಾರಮ್ಮಯ್ಯ ಮಾಡಿರುವುದು ಸತ್ಯ. ಅದನ್ನೇ ಹಿಡಿದುಕೊಂಡು ಪ್ರತಿಪಕ್ಷಗಳು ಖಜಾನೆ ಖಾಲಿ ಎಂದು ಸರಕಾರವನ್ನು ಹಣಿಯುತ್ತಿವೆ. ಸರಕಾರ ಈ ವಿಚಾರದಲ್ಲಿ ಇನ್ನೂ ಪಾರದರ್ಶಕವಾಗಿ ವ್ಯವಹರಿಸುವುದನ್ನು, ಶ್ವೇತಪತ್ರವೊಂದನ್ನು ಸದನದ ಮುಂದಿಡುವುದನ್ನು ವಿಳಂಬ ಮಾಡಿದರೆ, ಮುಂದಿನ ಚುನಾವಣೆಗಳು ಸಮೀಪಿಸುವ ಹೊತ್ತಿಗೆ ಸರಕಾರದ ಸ್ಥಿತಿ ಇನ್ನಷ್ಟು ದಯನೀಯಗೊಳ್ಳುವುದರಲ್ಲಿ ಅನುಮಾನ ಬೇಡ.
ಆರ್ಥಿಕ ಶಿಸ್ತು
ಆರ್ಥಿಕ ಹೊಣೆಗಾರಿಕೆ ಅಧಿನಿಯಮದ ಪ್ರಕಾರ ರಾಜ್ಯ ಸರಕಾರವು ತನ್ನ ವಿತ್ತೀಯ ಕೊರತೆಯನ್ನು ಜಿಎಸ್‌ಡಿಪಿಯ ಶೇ. 3ರ ಒಳಗೂ ಮತ್ತು ಒಟ್ಟು ಹೊಣೆಗಾರಿಕೆಯನ್ನು ಜಿಎಸ್‌ಡಿಪಿಯ ಮೊತ್ತದ ಶೇ. 25ರ ಒಳಗೂ ಇರಿಸಿಕೊಂಡಿರಬೇಕು. ಈ ಚೌಕಟ್ಟನ್ನು ಪಾಲಿಸಲು ಸರಕಾರಗಳು (ಭಾರತ ಸರಕಾರವೂ ಸೇರಿದಂತೆ) ಕಾಗದ-ಪೆನ್ನಿನ ಲೆಕ್ಕಾಚಾರವೊಂದನ್ನು ಹಿಡಿತಕ್ಕೆ ತೆಗೆದುಕೊಂಡಿರುವಂತೆ ಕಾಣಿಸುತ್ತಿದೆ. ಒಟ್ಟು ಬಜೆಟ್ ಗಾತ್ರ (ಅದೂ ಸಾಲ ತಂದು)ವನ್ನು ಇಂತಿಷ್ಟು ಟ್ರಿಲಿಯನ್ ಎಂದು ಏರಿಸುವ ತಂತ್ರಕ್ಕೂ, ಏರುತ್ತಿರುವ ಸಾಲ ಸಹಿತ ಈ ಶಿಸ್ತಿನ ಚೌಕಟ್ಟಿನ ಒಳಗೆ ಉಳಿದಿರುವುದಕ್ಕೂ ಇರುವ ಸಂಬಂಧ ಆರ್ಥಿಕ ತಜ್ಞರ ಅಧ್ಯಯನಕ್ಕೆ ಯೋಗ್ಯ.
ಕರ್ನಾಟಕ ಸರಕಾರದ ವಿತ್ತೀಯ ಕೊರತೆ ಬಜೆಟ್ ವರ್ಷಕ್ಕೆ ಶೇ. 2.95, ರಾಜಸ್ವ ಕೊರತೆ 19,262 ಕೋಟಿ ರೂ. (ಜಿಎಸ್‌ಡಿಪಿಯ ಶೇ. 0.63) ಮತ್ತು ಒಟ್ಟು ಹೊಣೆಗಾರಿಕೆ 7,64,655 ಕೋಟಿ ರೂ. (ಜಿಎಸ್‌ಡಿಪಿಯ ಶೇ. 24.91) ಎಂದು ಬಜೆಟ್ ದಾಖಲೆಗಳು ತೋರಿಸುತ್ತಿವೆ. ಸರಕಾರ ತನ್ನ ಸಾಲದ ಗಾತ್ರ 1,16,000 ಕೋಟಿ ರೂ. ಎಂದು ತೋರಿಸಿದ್ದು, ಇದು ಒಟ್ಟು ಬಜೆಟ್‌ನ ಕಾಲು ಪಾಲು ಗಾತ್ರದ್ದು.
ಒಂದೆಡೆ ಕೇಂದ್ರದ ಪಾಲು ಸ್ವೀಕೃತಿ ಕಡಿಮೆ ಆಗುತ್ತಿರುವಾಗ, ಇನ್ನೊಂದೆಡೆ ಸಾಲ ಹೆಚ್ಚಿದಂತೆ ಮರುಪಾವತಿಯ ಬಾಧ್ಯತೆಗಳೂ ಹೆಚ್ಚುತ್ತಿರುವಾಗ (2021-22ರಲ್ಲಿ ರಾಜ್ಯದ ಬಡ್ಡಿ ಪಾವತಿಯ ಪ್ರಮಾಣ ಶೇ. 13 ಇದ್ದದ್ದು, ಈಗ 25-26ಕ್ಕೆ ಶೇ. 15.6ಕ್ಕೆ ಏರಿದೆ) ರಾಜ್ಯ ಸರಕಾರ ತನ್ನ ಅಭಿವೃದ್ದಿ ಹೊಣೆಗಾರಿಕೆಗಳನ್ನು ಪೂರೈಸಲು ಇನ್ನಷ್ಟು ಸಾಲದ ಮೊರೆ ಹೋಗುವ ಸನ್ನಿವೇಶ ಎದುರಾಗುತ್ತಿದೆ. ರಾಜಸ್ವ ಸ್ವೀಕೃತಿ ವಾರ್ಷಿಕ ಶೇ. 13 ದರದಲ್ಲಿ ಏರುತ್ತಿದ್ದರೂ ಅದು ಸಾಕಾಗುವ ಸ್ಥಿತಿ ಇಲ್ಲ. ಹಾಗಾಗಿ, ಈ ಲೆಕ್ಕಾಚಾರದ ಕಾಗದ-ಪೆನ್ನು (ಅಥವಾ ಎಕ್ಸೆಲ್ ಶೀಟ್!) ಕೌಶಲಗಳು ನಾಳೆ ರಾಜ್ಯವನ್ನು ಸಾಲದ ಸುಳಿಗೆ ಸಿಲುಕಿಸದಿರಲಿ ಎಂಬ ಎಚ್ಚರ ಎಲ್ಲರಲ್ಲೂ ಮೂಡುವುದು ಅಗತ್ಯವಿದೆ. ಕೇಂದ್ರ ಸರಕಾರದ ಸಾಲ ಇದಕ್ಕಿಂತ ದೊಡ್ಡ ಗಾತ್ರದ್ದು ಎಂಬ ವಾದ ಈ ಪ್ರಶ್ನೆಗೆ ಉತ್ತರ ಆಗಬಾರದು







