ಕಾರ್ಖಾನೆಗಳಿಗೆ ಅಧಿಕಾರಶಾಹಿ ಕೃಪಾಕಟಾಕ್ಷ?
ನಿಯಮ ಬದಿಗಿಟ್ಟು ಕಾರ್ಖಾನೆ ವಿಸ್ತರಣೆಗೆ ಅನುಮತಿ: ಆರೋಪ

ಕೊಪ್ಪಳ: ಜಿಲ್ಲೆಯ ವಿವಿಧ ಭಾಗಗಳಲ್ಲಿ ಕಾರ್ಖಾನೆಗಳು ತಲೆ ಎತ್ತುತ್ತಿರುವ ಬೆನ್ನಲ್ಲೇ ರೈತರಿಗೆ ನೀರಿನ ಸಮಸ್ಯೆ ಎದುರಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಒಂದೆಡೆ ಕೆಳಭಾಗದ ರೈತರಿಗೆ ಸಮರ್ಪಕ ನೀರು ದೊರೆಯುತ್ತಿಲ್ಲ ಎನ್ನಲಾಗುತ್ತಿದ್ದರೆ, ಮತ್ತೊಂದೆಡೆ ತುಂಗಭದ್ರಾ ಜಲಾಶಯದಿಂದ ಕಾರ್ಖಾನೆಗಳಿಗೆ ನೀರು ಹರಿಸಲಾಗುತ್ತಿದೆ ಎಂಬ ವಿಚಾರ ಚರ್ಚೆಗೆ ಗ್ರಾಸವಾಗಿದೆ.
ಇದರ ನಡುವೆ ಕೊಪ್ಪಳ ನಗರದಿಂದ ಸುಮಾರು 15 ಕಿ.ಮೀ. ದೂರದಲ್ಲಿರುವ ಮುಕುಂದ ಸುಮಿ ಸ್ಪೆಷಲ್ ಸ್ಟೀಲ್ ಲಿಮಿಟೆಡ್ ಕಾರ್ಖಾನೆಯ ವಿಸ್ತರಣೆಗೆ 66.2 ಹೆಕ್ಟೇರ್ ಪ್ರದೇಶದಲ್ಲಿ ಅನುಮತಿ ನೀಡಿರುವ ವಿಚಾರವೂ ವಿವಾದಕ್ಕೆ ಕಾರಣವಾಗಿದೆ. ಕಾರ್ಖಾನೆ ವಿಸ್ತರಣೆಗೆ ಸಂಬಂಧಿಸಿದ ನಿಯಮಗಳನ್ನು ಅಧಿಕಾರಿಗಳು ಸಮರ್ಪಕವಾಗಿ ಪಾಲಿಸಿಲ್ಲ ಎಂಬ ಆರೋಪಗಳು ಕೇಳಿಬರುತ್ತಿದ್ದು, ಈ ಬೆಳವಣಿಗೆ ಕುರಿತು ರೈತರು ಮತ್ತು ಸಾರ್ವಜನಿಕರು ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ.
ನೀರು ಬಿಡುವ ವಿಚಾರದಲ್ಲಿ ಗೊಂದಲ :
ತುಂಗಭದ್ರಾ ಜಲಾಶಯದಿಂದ ಕಾರ್ಖಾನೆಗಳಿಗೆ 50 ಕ್ಯೂಸೆಕ್ಸ್ ನೀರು ಹರಿಸಲಾಗುತ್ತಿದೆ ಎಂದು ಕೆಎನ್‌ಎನ್‌ಎಲ್‌ನ ಅಧೀಕ್ಷಕ ಎಂಜಿನಿಯರ್ ಶ್ರೀನಿವಾಸ ಮಲ್ಲಿಗವಾಡ ಅವರು ಹೇಳಿರುವುದಾಗಿ ವರದಿಯಾಗಿದೆ. ಆದರೆ, ಕಾರ್ಖಾನೆಗಳಿಗೆ ನೀರು ಬಿಡದಂತೆ ಸ್ಪಷ್ಟ ಆದೇಶ ನೀಡಲಾಗಿದೆ ಎಂದು ಸಚಿವರು ಹೇಳುತ್ತಿದ್ದಾರೆ.
ಒಂದೇ ವಿಚಾರಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಮತ್ತು ಸಚಿವರಿಂದ ವಿಭಿನ್ನ ಹೇಳಿಕೆಗಳು ಬಂದಿರುವುದು ಸಾರ್ವಜನಿಕರಲ್ಲಿ ಗೊಂದಲಕ್ಕೆ ಕಾರಣವಾಗಿದೆ. ಜಲಾಶಯದ ನೀರನ್ನು ಕಾರ್ಖಾನೆಗಳಿಗೆ ಯಾವ ಆದೇಶದ ಆಧಾರದ ಮೇಲೆ, ಎಷ್ಟು ಪ್ರಮಾಣದಲ್ಲಿ ಹರಿಸಲಾಗುತ್ತಿದೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಮತ್ತು ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಶಿವರಾಜ್ ತಂಗಡಗಿ ಈ ವಿಚಾರ ಗಮನದಲ್ಲಿದ್ದರೂ ಗೊತ್ತಿಲ್ಲದಂತೆ ವರ್ತಿಸುತ್ತಿದ್ದಾರೆಯೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಎದ್ದಿದ್ದು, ಕಾರ್ಖಾನೆಗೆ ಅಧಿಕಾರಿಗಳು ಸಚಿವರ ಅರಿವಿನಿಂದಲೇ ಬೆಂಬಲ ನೀಡುತ್ತಿದ್ದಾರೆಯೇ? ಅಥವಾ ಸಚಿವರಿಗೆ ಈ ವಿಚಾರ ತಿಳಿಯದಷ್ಟು ಅದಕ್ಷತೆ ಇದೆಯೇ ಎಂಬ ಚರ್ಚೆಯೂ ರೈತರ ನಡುವೆ ನಡೆಯುತ್ತಿದೆ.
ಕೈಗಾರಿಕೆ ವಿಸ್ತರಣೆಗೆ ನೀಡಿರುವ ಅನುಮತಿಯ ಆಲಿಕೆ ಸಭೆಯ ಆಯೋಜನೆ ಈ ಅನುಮಾನಗಳಿಗೆ ಪುಷ್ಠಿ ನೀಡುವ ರೀತಿಯಲ್ಲಿದೆ. ಯಾವುದೇ ಕೈಗಾರಿಕೆ ಸ್ಥಾಪನೆ ಅಥವಾ ವಿಸ್ತರಣೆಗೆ ಸಂಬಂಧಿಸಿದಂತೆ ಪರಿಸರ ನಿಯಮಗಳ ಪ್ರಕಾರ ಬಾಧಿತ ಪ್ರದೇಶಗಳಲ್ಲಿ ಸಾರ್ವಜನಿಕ ಆಲಿಕೆ ಸಭೆ ನಡೆಸಬೇಕಾಗಿದೆ. ಆದರೆ, ಮುಕುಂದ ಸುಮಿ ಸ್ಪೆಷಲ್ ಸ್ಟೀಲ್ ಲಿಮಿಟೆಡ್ ಕಾರ್ಖಾನೆ ವಿಸ್ತರಣೆಗೆ ಸಂಬಂಧಿಸಿದ ಸಾರ್ವಜನಿಕ ಆಲಿಕೆ ಸಭೆಯನ್ನು ಬಾಧಿತ ಗ್ರಾಮದಲ್ಲಿ ನಡೆಸದೆ, ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಅವರ ತವರು ಕ್ಷೇತ್ರವಾಗಿರುವ ಕಾರಟಗಿ ತಾಲೂಕಿನ ನಂದಿಹಳ್ಳಿ ಗ್ರಾಮದಲ್ಲಿ ನಡೆಸಲು ಉದ್ದೇಶಿಸಲಾಗಿದೆ ಎಂದು ಪರಿಸರ ಇಲಾಖೆಯ ಅಧಿಕಾರಿಗಳು ಜಿಲ್ಲಾಧಿಕಾರಿಗೆ ಬರೆದ ಪತ್ರದಲ್ಲಿ ತಿಳಿಸಿರುವುದಾಗಿ ಹೇಳಲಾಗಿದೆ.
ಇದಕ್ಕೆ ವಿರುದ್ಧವಾಗಿ, ಕಾರ್ಖಾನೆ ಪತ್ರಿಕೆಗಳಲ್ಲಿ ಪ್ರಕಟಣೆ ನೀಡಿ, ಸಾರ್ವಜನಿಕ ಆಲಿಕೆ ಸಭೆಯನ್ನು ಬಾಧಿತ ಗ್ರಾಮವಾದ ಕನಕಪುರದಲ್ಲಿ ಇದೇ ತಿಂಗಳ 29ರಂದು ನಡೆಸಲಾಗುವುದು ಎಂದು ತಿಳಿಸಿದೆ. ಅಧಿಕಾರಿಗಳ ಪತ್ರದಲ್ಲಿರುವ ಮಾಹಿತಿ ಹಾಗೂ ಕಾರ್ಖಾನೆ ನೀಡಿರುವ ಪ್ರಕಟಣೆಯಲ್ಲಿ ವ್ಯತ್ಯಾಸ ಕಂಡುಬಂದಿರುವುದು ಮತ್ತಷ್ಟು ಪ್ರಶ್ನೆಗಳಿಗೆ ಕಾರಣವಾಗಿದೆ.
ಸಲಹಾ ಸಂಸ್ಥೆ ಬಗ್ಗೆಯೂ ಆರೋಪ :
ಈ ಕುರಿತು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ. ಚಂದ್ರಶೇಖರ್ ಅವರು ದಾಖಲೆಗಳನ್ನು ಬಿಡುಗಡೆ ಮಾಡಿ ಹಲವು ಆರೋಪಗಳನ್ನು ಮಾಡಿದ್ದಾರೆ. ಕಪ್ಪುಪಟ್ಟಿಗೆ ಸೇರಿಸಲಾದ ಹಾಗೂ ನ್ಯಾಯಾಲಯದ ಕೆಂಗಣ್ಣಿಗೆ ಗುರಿಯಾದ ಸಲಹಾ ಸಂಸ್ಥೆಯೊಂದರಿಂದ ಕಾರ್ಖಾನೆ ವಿಸ್ತರಣೆಯ ಕರಡು ಸಿದ್ಧಪಡಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಕಾರ್ಖಾನೆ ವಿಸ್ತರಣೆಗೆ ಸಂಬಂಧಿಸಿದ ಗಂಭೀರ ಅಂಶಗಳು ಶಾಸಕರು ಮತ್ತು ಸಂಸದರ ಗಮನದಲ್ಲಿದ್ದರೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅವರು ದೂರಿದ್ದಾರೆ.
300ಕ್ಕೂ ಹೆಚ್ಚು ದಿನಗಳಿಂದ ಧರಣಿ :
ಕೊಪ್ಪಳ ನಗರಕ್ಕೆ ಹೊಂದಿಕೊಂಡಿರುವ ಬಲ್ಡೋಟ ಕಾರ್ಖಾನೆ ವಿಸ್ತರಣೆಯನ್ನು ತಡೆಯಬೇಕು ಎಂದು ಆಗ್ರಹಿಸಿ ಸ್ಥಳೀಯರು 300ಕ್ಕೂ ಹೆಚ್ಚು ದಿನಗಳಿಂದ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ. ಇದರ ನಡುವೆಯೇ ಮತ್ತೊಂದು ಕಾರ್ಖಾನೆ ವಿಸ್ತರಣೆಗೆ ಮುಂದಾಗಿರುವುದು ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಜಲಾಶಯ ಇರುವ ಜಿಲ್ಲೆಯ ಕೆಲ ತಾಲೂಕುಗಳಿಗೂ ಸಮರ್ಪಕ ನೀರು ಒದಗಿಸಲು ಸಾಧ್ಯವಾಗುತ್ತಿಲ್ಲ. ಜಲಾಶಯ ನಿರ್ಮಾಣಕ್ಕಾಗಿ ರೈತರಿಂದ ಭೂಮಿ ಪಡೆಯಲಾಗಿದೆ. ಕಾಲುವೆಗಳ ನಿರ್ಮಾಣಕ್ಕೂ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗಿದೆ. ಜಲಾಶಯದ ನೀರು ಮತ್ತು ಭೂಮಿಯ ಲಭ್ಯತೆಯ ಕಾರಣದಿಂದ ಜಿಲ್ಲೆಯಲ್ಲಿ ಕೈಗಾರಿಕೆಗಳು ಸ್ಥಾಪನೆಯಾಗಿವೆ. ಆದರೆ, ಕೈಗಾರಿಕೆಗಳಿಗಾಗಿ ಮತ್ತೆ ರೈತರ ಭೂಮಿಯೇ ಬಳಕೆಯಾಗುತ್ತಿದೆ. ಸ್ಥಳೀಯ ರೈತರು ಮತ್ತು ಜನರ ಹಿತಾಸಕ್ತಿಯನ್ನು ಕಡೆಗಣಿಸಲಾಗುತ್ತಿದೆ ಎಂಬುದು ಸಾರ್ವಜನಿಕರ ಆರೋಪವಾಗಿದೆ.
‘‘ಜಿಲ್ಲೆಯ ಮಣ್ಣು ಮತ್ತು ನೀರನ್ನು ಕೈಗಾರಿಕೆಗಳಿಗೆ ನೀಡಲಾಗುತ್ತಿದೆ. ರೈತರ ಸಮಸ್ಯೆಗಳನ್ನು ಕೇಳುವವರೇ ಇಲ್ಲದಂತಾಗಿದೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಈ ವಿಚಾರದಲ್ಲಿ ಸ್ಪಷ್ಟ ಉತ್ತರ ನೀಡಬೇಕು’’ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಈ ಕುರಿತು ಮಾಹಿತಿ ಪಡೆಯಲು ಸಂಬಂಧಪಟ್ಟ ಅಧಿಕಾರಿಯನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ, ಅವರು ಅಸಮಾಧಾನ ವ್ಯಕ್ತಪಡಿಸಿ ಕರೆ ಕಡಿತಗೊಳಿಸಿದ್ದಾರೆ. ಸರಕಾರದ ಆದೇಶದ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಕೆಎನ್‌ಎನ್‌ಎಲ್ ಅಧೀಕ್ಷಕ ಎಂಜಿನಿಯರ್ ಶ್ರೀನಿವಾಸ ಮಲ್ಲಿಗವಾಡ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದರೂ ಅವರು ಸಂಪರ್ಕಕ್ಕೆ ಸಿಗಲಿಲ್ಲ.






