ಬಸ್ ಅನಾನುಕೂಲ: ವಿದ್ಯಾಭ್ಯಾಸಕ್ಕೆ ತೊಂದರೆ; ಹೆಚ್ಚಿನ ಬಸ್ ಬಿಡಲು ವಿದ್ಯಾರ್ಥಿಗಳು, ಸಾರ್ವಜನಿಕರ ಆಗ್ರಹ

ಮರಿಯಮ್ಮನಹಳ್ಳಿ: ಮರಿಯಮ್ಮನಹಳ್ಳಿಯಿಂದ ಗರಗ ಮಾರ್ಗವಾಗಿ ಸಂಡೂರಿನ ಯಶವಂತನಗರಕ್ಕೆ ತೆರಳುವ ಬಸ್‌ಗಳ ಕೊರತೆಯಿಂದ ಶಾಲಾ ಕಾಲೇಜ್ ವಿದ್ಯಾರ್ಥಿಗಳು, ಹಳ್ಳಿ ಭಾಗದ ಪ್ರಯಾಣಿಕರಿಗೆ ಅನಾನುಕೂಲವಾಗಿದ್ದು, ಈ ಭಾಗದಲ್ಲಿ ಹೆಚ್ಚುವರಿ ಬಸ್‌ಗಳನ್ನು ನಿಯೋಜಿಸಬೇಕು ಎಂಬುವುದು ಪ್ರಯಾಣಿಕರ ಒಕ್ಕೊರಲ ಆಗ್ರಹ.
ನಿತ್ಯವೂ ತಳ್ಳಾಟದ ಪ್ರಯಾಣ: ಮರಿಯಮ್ಮನಹಳ್ಳಿ ವಾಣಿಜ್ಯ ಕೇಂದ್ರ ಮಾತ್ರವಲ್ಲದೆ, ಶಿಕ್ಷಣ ಕೇಂದ್ರವೂ ಆಗಿದ್ದು, ಹೋಬಳಿಯ ಜನರು ವ್ಯಾಪಾರ ವಹಿವಾಟು, ಆಸ್ಪತ್ರೆ, ಶಾಲಾ ಕಾಲೇಜುಗಳಿಗೆ ಪಟ್ಟಣವನ್ನು ಅವಲಂಬಿಸಿದ್ದಾರೆ. ಸಂಡೂರು ತಾಲೂಕಿನ ಯಶವಂತ ನಗರಕ್ಕೂ ನೂರಾರು ಪ್ರಯಾಣಿಕರು ನಿತ್ಯವೂ ಸಂಚರಿಸುತ್ತಾರೆ. ಇಷ್ಟಿದ್ದರೂ ಹೊಸಪೇಟೆಯ ರಸ್ತೆ ಸಾರಿಗೆ ಘಟಕದ ಇಲಾಖೆಯಿಂದ ಬೆಳಗ್ಗೆ 9:30 ಸಂಜೆ 6:30ಕ್ಕೆ ವ್ಯವಸ್ಥೆ ಕಲ್ಪಿಸಿದೆ. ಪ್ರಯಾಣಿಕರಿಗೆ ಇನ್ನೂ ಹೆಚ್ಚು ಬಸ್ ಓಡಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ. ಈಗಿರುವ ಬಸ್‌ಗಳಲ್ಲಿ ಜನದಟ್ಟಣೆಯಿಂದ ನೂಕಾಟ, ತಳ್ಳಾಟ ಹೆಚ್ಚುತ್ತಿದ್ದು, ಬಸ್ಸಿಗೆ ಜೋತು ಬಿದ್ದು ಪ್ರಯಾಣ ಮಾಡಬೇಕಿದೆ. ವಯೋವೃದ್ಧರು, ಮಕ್ಕಳು, ವಿದ್ಯಾರ್ಥಿಗಳು ಅನಿವಾರ್ಯವಾಗಿ ಆಟೋ, ಅವರಿವರ ಬೈಕ್ ಅವಲಂಬಿಸಬೇಕಾದ ಸ್ಥಿತಿ ಬಂದಿದೆ.
ಸ್ಪಂದಿಸದ ಅಧಿಕಾರಿಗಳು: ಮರಿಯಮ್ಮನಹಳ್ಳಿಯಿಂದ ಗರಗ-ಯಶವಂತ ನಗರಕ್ಕೆ ಹೆಚ್ಚುವರಿ ಬಸ್ ಬಿಡುವಂತೆ ಹೊಸಪೇಟೆ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಮಾಡಲಾಗಿದ್ದರೂ ಪ್ರಯೋಜನವಾಗಿಲ್ಲ. ನಮ್ಮ ಗೋಳು ಕೇಳೋರು ಇಲ್ಲ.
ಬಸ್ ಓಡಿಸುವಂತೆ ಆಗ್ರಹ: ಹೊಸಪೇಟೆ ಸಾರಿಗೆಯಿಂದ ಅಥವಾ ಸಂಡೂರು ಡಿಪೋದಿಂದ ಬೆಳಗ್ಗೆ 7ಕ್ಕೆ ಹೆಚ್ಚುವರಿ ಬಸ್ ಬಿಡುವ ಮೂಲಕ ಅನುಕೂಲ ಕಲ್ಪಿಸಬೇಕು ಎಂಬುದು ಜನರ ಆಗ್ರಹ.
ಬಸ್ ಕೊರತೆಯಿಂದವಿದ್ಯಾರ್ಥಿಗಳು ಶಾಲೆ ತಪ್ಪಿಸಿಕೊಳ್ಳುವುದು, ರೋಗಿಗಳು ಸಮಯಕ್ಕೆ ಸರಿಯಾಗಿ ಚಿಕಿತ್ಸೆಗೆ ಹೋಗದಿರುವಂತಾಗಿದೆ. ಆಧಿಕಾರಿಗಳು ಹೆಚ್ಚುವರಿ ಬಸ್ ವ್ಯವಸ್ಥೆ ಕಲ್ಪಿಸಬೇಕು.
-ವಿನೋದ, ವಿದ್ಯಾರ್ಥಿ, ನಾಗಲಾಪುರ ತಾಂಡಾ
ಜಿಲ್ಲೆಯಲ್ಲಿ ಜನರಿಗೆ ಬಸ್ ಸೌಕರ್ಯ ಒದಗಿಸಲು ಬಸ್‌ಗಳ ಕೊರತೆಯಿದ್ದು, ಸರ್ಕಾರಕ್ಕೆ ಹಲವು ಬಾರಿ ಬೇಡಿಕೆ ಸಲ್ಲಿಸಿದ್ದೇವೆ. ಮರಿಯಮ್ಮನಹಳ್ಳಿ, ಯಶವಂತನಗರಕ್ಕೆ ಬಸ್ ಸಂಚಾರದ ಅವಶ್ಯವಿದ್ದರೆ, ಇನ್ನೂ ಎರಡು ಬಸ್ ಓಡಿಸಲಾಗುವುದು.
-ರಾಜೇಶ ಉದ್ದಾರ್, ಕರ್ನಾಟಕ ವಿಭಾಗಿಯ ನಿಯಂತ್ರಣಾಧಿಕಾರಿ, ವಿಜಯನಗರ ಜಿಲ್ಲೆ







