ರಸ್ತೆಯುದ್ದಕ್ಕೂ ಬೆಳೆದು ನಿಂತ ಜಾಲಿ ಗಿಡ ಅಪಘಾತದ ಭೀತಿಯಲ್ಲಿ ವಾಹನ ಸವಾರರು

ಔರಾದ್, ಗಡಿ ಕುಶನೂರ್ ಹಾಗೂ ಖಾನಾಪುರ್ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಲ್ಲಿ ಪ್ರತಿನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ಆದರೆ, ರಸ್ತೆಯ ಬದಿಯಲ್ಲಿ ಗಿಡಗಳು ಬೆಳೆದು ರಸ್ತೆಯ ಎರಡು ಬದಿ ಚಾಚಿಕೊಂಡಿರುವುದರಿಂದ ರಸ್ತೆಯ ತಿರುವುಗಳಲ್ಲಿ ಎದುರುಗಡೆ ಬರುವ ವಾಹನಗಳು ಕಾಣಿಸದೆ ಹಲವು ಅಪಘಾತಗಳಾಗುತ್ತಿವೆ. ಜತೆಗೆ, ವಾಹನ ಸವಾರರು ಪ್ರತಿನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ.
ಗಡಿ ಕುಶನೂರ್ ಹಾಗೂ ಖಾನಾಪುರ್ ಗ್ರಾಮಗಳ ನಡುವಿನ ರಸ್ತೆ ಅಪಘಾತಗಳ ತಾಣವಾಗಿ ಮಾರ್ಪಟ್ಟಿದ್ದು, ಇದಕ್ಕೆಲ್ಲ ಕಾರಣ ರಸ್ತೆ ಬದಿಯಲ್ಲಿ ಬೆಳೆದು ನಿಂತಿರುವ ಜಾಲಿ ಗಿಡಗಳಾಗಿವೆ. ಮುಳ್ಳಿನ ಗಿಡಗಳು ರಸ್ತೆಯ ಅಕ್ಕಪಕ್ಕದಲ್ಲೆಲ್ಲ ಬೆಳೆದಿದ್ದು, ರಸ್ತೆಯ ಮೇಲೂ ಕೂಡ ಚಾಚಿಕೊಂಡಿವೆ. ರಸ್ತೆಯುದ್ದಕ್ಕೂ ಹಲವಾರು ತಿರುವುಗಳಿದ್ದು, ಯಾವುದೇ ರೀತಿಯ ರಸ್ತೆ ಸುರಕ್ಷತೆ ಕುರಿತು ಸೂಚನಾ ಫಲಕಗಳಿಲ್ಲ. ಇದರಿಂದಾಗಿ ಅಪಘಾತಕ್ಕೆ ಆಹ್ವಾನ ನಿಡುವಂತಾಗಿದೆ.
ಬೈಕ್‌ಗಳಲ್ಲಿ ಸಂಚರಿಸುವ ಸವಾರರಿಗೆ ಮುಳ್ಳುಗಳು ಕೈಕಾಲು, ಮುಖಕ್ಕೆ ತಾಗಿ ಗಾಯಗಳನ್ನು ಮಾಡಿಕೊಂಡಿರುವ ಘಟನೆಗಳು ನಡೆದಿವೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಈ ಗಿಡಗಳು ತೆರವುಗೊಳಿಸುವಂತೆ ಸಾರ್ವಜನಿಕರು ಅಗ್ರಹಿಸಿದ್ದಾರೆ.
ಈ ಕುರಿತು ಸಾರಿಗೆ ಇಲಾಖೆಯವರ ಸಂಪರ್ಕ ಮಾಡಿದಾಗ, ಇದು ಲೋಕೋಪಯೋಗಿ ಇಲಾಖೆಗೆ ಬರುತ್ತದೆ. ಅವರು ಗಿಡಗಳು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದಿದ್ದಾರೆ.
ರಸ್ತೆಯುದ್ದಕ್ಕೂ ತಿರುವುಗಳಿದ್ದು, ಜೀವ ಕೈಯಲ್ಲಿ ಹಿಡಿದು ಹೋಗುತ್ತಿದ್ದೇವೆ. ಸೂಚನಾ ಫಲಕವಿಲ್ಲದ ಕಾರಣ ಅಪಘಾತಗಳಾಗುತ್ತಿವೆ. ಸಂಬಂಧಪಟ್ಟ ಅಧಿಕಾರಿಗಳು ಸೋಚನಾ ಫಲಕಗಳನ್ನು ಅಳವಡಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಗ್ರಾಮಸ್ಥರಾದ ಕಾಶಿನಾಥ್ ಬೆಳ್ಳೆ, ಖಾನಾಪುರ, ರಾಜಪ್ಪ ಹಂಗರಗೆ ಗಡಿಕುಶನೂರ್ ಆಗ್ರಹಿಸಿದ್ದಾರೆ.
ರಸ್ತೆಯುದ್ದಕ್ಕೂ ಜಾಲಿ ಗಿಡಗಳು ಬೆಳೆದಿರುವ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಹೇಳಿ ಸಮಸ್ಯೆ ಬಗೆಹರಿಸುವೆ.
-ಮಹೇಶ್ ಪಾಟೀಲ್, ತಹಶೀಲ್ದಾರ್, ಔರಾದ್






