ಬರಡು ಭೂಮಿಯಲ್ಲಿ ಬೆಣ್ಣೆ ಹಣ್ಣು ಬೆಳೆ : ಜಗಳೂರು ರೈತನ ಯಶೋಗಾಥೆ

ಜಗಳೂರು: ಸಾಮಾನ್ಯವಾಗಿ ಮಳೆ ಆಶ್ರಯಿತ, ಅತೀ ಹಿಂದುಳಿದ ಪ್ರದೇಶವೆಂದು ಗುರುತಿಸಲ್ಪಡುವ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ರೈತರು ಈಗ ಸಾಂಪ್ರದಾಯಿಕ ಬೆಳೆಗಳಿಂದ ಹೊರಬಂದು ಹೊಸ ಪ್ರಯೋಗಗಳಿಗೆ ಮುಂದಾಗುತ್ತಿದ್ದಾರೆ. ಇದಕ್ಕೆ ತಾಜಾ ಉದಾಹರಣೆ ಮುಗ್ಗಿದ ರಾಗಿಹಳ್ಳಿಯ ಪ್ರಗತಿಪರ ರೈತ ಜಿ.ಕೆ. ಶಿವರುದ್ರಪ್ಪ. ಇವರು ಕೇವಲ ಒಂದೂವರೆ ಎಕರೆ ಜಮೀನಿ ನಲ್ಲಿ ಬೆಣ್ಣೆ ಹಣ್ಣು (ಅವಕಾಡೋ) ಬೆಳೆದು ಲಕ್ಷಾಂತರ ರೂಪಾಯಿ ಆದಾಯದ ನಿರೀಕ್ಷೆಯಲ್ಲಿದ್ದಾರೆ.
ಕಡಿಮೆ ನೀರು, ಹೆಚ್ಚಿನ ಆದಾಯ:
ಅಡಿಕೆ ಮತ್ತು ತೆಂಗಿನಂತಹ ಹೆಚ್ಚು ನೀರು ಬೇಡುವ ಬೆಳೆಗಳಿಗೆ ಪರ್ಯಾಯವಾಗಿ ಶಿವರುದ್ರಪ್ಪ ಅವರು ಬೆಣ್ಣೆ ಹಣ್ಣನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಸುಮಾರು 220 ಗಿಡಗಳನ್ನು ನಾಟಿ ಮಾಡಲಾಗಿದ್ದು, ಅದರಲ್ಲಿ 150 ಗಿಡಗಳು ಈಗಾಗಲೇ ಫಲ ನೀಡಲು ಆರಂಭಿಸಿವೆ. ಒಂದು ಗಿಡಕ್ಕೆ ಕನಿಷ್ಠ 30 ಕೆ.ಜಿ. ಇಳುವರಿ ಸಿಗಲಿದ್ದು, ಮಾರುಕಟ್ಟೆಯಲ್ಲಿ ಕೆ.ಜಿ.ಗೆ 150 ರಿಂದ 200 ರೂಪಾಯಿ ಬೆಲೆ ಇದೆ. ಒಂದು ಹಂಗಾಮಿನಲ್ಲಿ ಸುಮಾರು 6 ರಿಂದ 7 ಲಕ್ಷ ರೂಪಾಯಿ ಆದಾಯ ಗಳಿಸಬಹುದು ಎಂದು ಅವರು ವಿಶ್ವಾಸ ವ್ಯಕ್ತಪಡಿಸುತ್ತಾರೆ.
ನರೇಗಾ ಯೋಜನೆಯ ಆಸರೆ:
ಈ ಸಾಧನೆಯ ಹಿಂದೆ ಸರಕಾರದ ನರೇಗಾ ಯೋಜನೆಯ ಬೆಂಬಲವೂ ಇದೆ. ಸುಮಾರು 50 ಸಾವಿರ ರೂಪಾಯಿ ಸಹಾಯಧನ ಸೇರಿದಂತೆ ಒಟ್ಟು 1.5 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ತೋಟವನ್ನು ನಿರ್ಮಿಸಲಾಗಿದೆ. ವೈಜ್ಞಾನಿಕವಾಗಿ 6x6 ಮೀಟರ್ ಅಂತರದಲ್ಲಿ ಕಸಿ ಗಿಡಗಳನ್ನು ನೆಟ್ಟು, ಸಾವಯವ ಗೊಬ್ಬರದ ಮೂಲಕ ಪೋಷಣೆ ಮಾಡಲಾಗುತ್ತಿದೆ. ಸಸಿ ನೆಟ್ಟ ಮೂರು ವರ್ಷಕ್ಕೇ ಫಲ ಬರಲಾರಂಭಿ ಸುವುದು ಈ ಬೆಳೆಯ ವಿಶೇಷ.
ಆರೋಗ್ಯದ ಭಂಡಾರಕ್ಕೆ ಹೆಚ್ಚಿ ದ ಬೇಡಿಕೆ:
ಅವಕಾಡೋ ಕೇವಲ ರೈತರಿಗೆ ಲಾಭದಾಯಕವಲ್ಲ, ಗ್ರಾಹಕರಿಗೆ ಆರೋಗ್ಯದ ವರದಾನವೂ ಹೌದು. ಇದರಲ್ಲಿ ಆರೋಗ್ಯಕರ ಕೊಬ್ಬು, ವಿಟಮಿನ್ ಎ, ಸಿ, ಇ, ಕೆ ಮತ್ತು ಪೊಟ್ಯಾಸಿಯಂ ಸಮೃದ್ಧವಾಗಿದೆ. ಹೃದಯದ ಆರೋಗ್ಯ ಕಾಪಾಡಲು, ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಮತ್ತು ಚರ್ಮದ ಕಾಂತಿ ಹೆಚ್ಚಿಸಲು ಇದು ರಾಮಬಾಣ. ಇತ್ತೀಚೆಗೆ ಜಿಮ್‌ಗೆ ಹೋಗುವವರು ಮತ್ತು ಆರೋಗ್ಯ ಪ್ರೇಮಿಗಳಲ್ಲಿ ಈ ಹಣ್ಣಿನ ಜ್ಯೂಸ್ ಹಾಗೂ ಸಲಾಡ್‌ಗಳಿಗೆ ಭಾರೀ ಬೇಡಿಕೆ ಸೃಷ್ಟಿಯಾಗಿದೆ.
ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚುತ್ತಿರುವುದರಿಂದ ಅವಕಾಡೋ ಕೃಷಿ ಮುಂಬರುವ ದಿನಗಳಲ್ಲಿ ಈ ಭಾಗದ ರೈತರ ಪಾಲಿನ ಆರ್ಥಿಕ ಶಕ್ತಿಯಾಗುವುದರಲ್ಲಿ ಸಂಶಯವಿಲ್ಲ.
-ಪ್ರಭುಶಂಕರ್, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ
ಮಾದರಿ ಕೃಷಿಕ
ದಾವಣಗೆರೆಯ ಜ್ಯೂಸ್ ಅಂಗಡಿಯೊಂದರಲ್ಲಿ ಹಣ್ಣಿನ ರುಚಿ ಕಂಡು ಆಕರ್ಷಿತರಾದ ಶಿವರುದ್ರಪ್ಪ, ಇಂದು ತಮ್ಮೂರಲ್ಲೇ ಅದನ್ನು ಬೆಳೆದು ಇತರರಿಗೆ ಮಾದರಿಯಾಗಿದ್ದಾರೆ. ಬರೀ ಅಡಿಕೆ ಬೆಳೆಯನ್ನೇ ನಂಬಿ ಕೂರುವ ಬದಲು, ಕಡಿಮೆ ನೀರಿನಲ್ಲಿ ಬೆಳೆಯುವ ಇಂತಹ ವಾಣಿಜ್ಯ ಬೆಳೆಗಳತ್ತ ರೈತರು ಮುಖ ಮಾಡಬೇಕು ಎಂಬುದು ಇವರ ಕಿವಿಮಾತು.






