ಉಪಚುನಾವಣೆ ಫಲಿತಾಂಶ: ಕಾಂಗ್ರೆಸ್‌ನಲ್ಲೇಕೆ ಚೇತರಿಕೆ ಕಾಣುತ್ತಿಲ್ಲ?

✍️ ಅಜಿತ್ ಕೆ.ಸಿ.
ನಾಲ್ಕು ರಾಜ್ಯಗಳ ಐದು ವಿಧಾನಸಭೆ ಕ್ಷೇತ್ರಗಳಿಗೆ ಜೂನ್ 19ರಂದು ನಡೆದಿದ್ದ ಉಪಚುನಾವಣೆ ಫಲಿತಾಂಶ ಇತ್ತೀಚೆಗೆ ಪ್ರಕಟವಾಗಿದೆ. ಬಿಜೆಪಿ, ಕಾಂಗ್ರೆಸ್ ಮತ್ತು ಟಿಎಂಸಿ ತಲಾ ಒಂದು ಕ್ಷೇತ್ರಗಳನ್ನು ಗೆದ್ದಿವೆ. ಎಎಪಿ ಎರಡು ಸ್ಥಾನಗಳನ್ನು ಗೆದ್ದುಕೊಂಡಿದೆ.
ಈ ಫಲಿತಾಂಶವನ್ನು ನೋಡುತ್ತಲೇ ಎದ್ದು ಕಾಣುವ ಅಂಶಗಳನ್ನು ಹೀಗೆ ಪಟ್ಟಿ ಮಾಡಬಹುದು.
1. ಕೇರಳದಲ್ಲಿ ಎಲ್‌ಡಿಎಫ್ ಅಭ್ಯರ್ಥಿಗೆ ಆಗಿರುವ ಸೋಲು ಸ್ಪಷ್ಟವಾಗಿ ಆಡಳಿತ ವಿರೋಧಿ ಅಲೆಯನ್ನು ಸೂಚಿಸುತ್ತದೆ.
2. ಎಎಪಿ ಗುಜರಾತ್ ಮತ್ತು ಪಂಜಾಬ್ ಎರಡೂ ಕಡೆ ತನ್ನ ಕ್ಷೇತ್ರಗಳನ್ನು ಉಳಿಸಿಕೊಂಡಿರುವುದು, ಅದು ತನ್ನ ನಾಯಕರನ್ನೂ ಮೀರಿ ದೇಶದ ವಿವಿಧೆಡೆ ಜನಪ್ರಿಯತೆ ಗಳಿಸುತ್ತಿದೆ ಎಂಬುದನ್ನು ತೊರಿಸುತ್ತದೆ.
3. ಬಿಜೆಪಿಗೆ ಅದರ ಭದ್ರ ನೆಲೆಯಾಗಿರುವ ಗುಜರಾತಿನಲ್ಲಿಯೂ ತಾನು ಆಡಿದ್ದೆಲ್ಲ ನಡೆಯದು ಎಂಬುದು ಮನವರಿಕೆಯಾಗುವ ಸಮಯ ಇದಾಗಿದೆ. ಅಲ್ಲದೆ, ಪಶ್ಚಿಮ ಬಂಗಾಳದಲ್ಲಿನ ಅದರ ಸೋಲು ಕೂಡ, ಅದರ ವಿಭಜಕ ರಾಜಕೀಯದ ವಿರುದ್ಧದ ಎಚ್ಚರಿಕೆಯಾಗಿದೆ.
4. ಮಮತಾ ಬ್ಯಾನರ್ಜಿ ತಮ್ಮ ದೃಢ ಮನಸ್ಥಿತಿ ಮತ್ತು ಬಿಜೆಪಿಯ ಯಾವುದೇ ಆಟಗಳನ್ನು ಎದುರಿಸುವ ದಿಟ್ಟತನದಿಂದಲೇ ಗೆಲ್ಲಬಲ್ಲವರಾಗಿದ್ದಾರೆ. ಬಿಜೆಪಿಯ ಹುನ್ನಾರಗಳ ಹೊರತಾಗಿಯೂ ಟಿಎಂಸಿ ಕಾಣುತ್ತಲೇ ಬಂದಿರುವ ಗೆಲುವುಗಳು ಇದಕ್ಕೆ ಸಾಕ್ಷಿ.
5. ಇನ್ನು ಕಾಂಗ್ರೆಸ್ ಸ್ಥಿತಿ ಶೋಚನೀಯವಾಗುತ್ತಿದೆ ಮತ್ತು ಅದರ ಈ ಶೋಚನೀಯ ಸ್ಥಿತಿ ಗುಜರಾತ್‌ಗೆ ಮಾತ್ರ ಸೀಮಿತವಲ್ಲ.
ಇದನ್ನು ನೋಡಿಕೊಂಡರೆ, ಕೇರಳದ ಗೆಲುವನ್ನು ಸಂಭ್ರಮಿಸುವ ಸ್ಥಿತಿಯಲ್ಲೂ ಅದು ಇಲ್ಲ. ಅದು ಕಾಂಗ್ರೆಸ್ ಸಾಧನೆ ಎನ್ನುವುದಕ್ಕಿಂತಲೂ ಆಡಳಿತ ವಿರೋಧಿ ಅಲೆಯ ಪರಿಣಾಮ ಮಾತ್ರವೇ ಎಂಬ ಅನುಮಾನವೂ ಕಾಡುತ್ತದೆ.
ಗುಜರಾತ್, ಕೇರಳ, ಪಶ್ಚಿಮ ಬಂಗಾಳ ಮತ್ತು ಪಂಜಾಬ್‌ನ ಐದು ವಿಧಾನಸಭಾ ಸ್ಥಾನಗಳಿಗೆ ಉಪಚುನಾವಣೆ ನಡೆದಿತ್ತು. ಗುಜರಾತ್‌ನ ಎರಡು ಸ್ಥಾನಗಳಾದ ವಿಸಾವದರ್ ಮತ್ತು ಕಾಡಿ, ಪಂಜಾಬ್‌ನ ಲುಧಿಯಾನ ಪಶ್ಚಿಮ, ಕೇರಳದ ನೀಲಂಬೂರ್ ಮತ್ತು ಪಶ್ಚಿಮ ಬಂಗಾಳದ ಕಾಲಿಗಂಜ್ ಕ್ಷೇತ್ರಗಳಿಗೆ ಉಪಚುನಾವಣೆ ನಡೆದಿತ್ತು.
ಗುಜರಾತ್‌ನ ಎರಡು ಕ್ಷೇತ್ರಗಳಾದ ವಿಸಾವದರ್ ಮತ್ತು ಕಾಡಿ ಕ್ಷೇತ್ರಗಳಲ್ಲಿ ಕ್ರಮವಾಗಿ ಈ ಹಿಂದೆ ಎಎಪಿ ಮತ್ತು ಬಿಜೆಪಿ ಗೆದ್ದಿದ್ದವು. ಉಪಚುನಾವಣೆಯಲ್ಲಿಯೂ ಎರಡೂ ಪಕ್ಷಗಳು ತಮ್ಮ ಕ್ಷೇತ್ರ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿವೆ.
ಆದರೆ, ವಿಸಾವದರ್ ಕ್ಷೇತ್ರದಲ್ಲಿ ಗೆದ್ದಿದ್ದ ಎಎಪಿ ನಾಯಕನನ್ನು ತನ್ನ ತೆಕ್ಕೆಗೆ ಸೆಳೆದುಕೊಂಡು ಈ ಉಪಚುನಾವಣೆಗೆ ಕಾರಣವಾದ ಬಿಜೆಪಿಗೆ ಮಾತ್ರ ಇದು ನಿಜಕ್ಕೂ ಮುಖಭಂಗ ಉಂಟುಮಾಡಿದ ಫಲಿತಾಂಶವಾಗಿದೆ.
ವಿಸಾವದರ್ ಕ್ಷೇತ್ರವನ್ನು ಆಪ್‌ನಿಂದ ಕಸಿದುಕೊಳ್ಳಬೇಕೆಂಬ ಬಿಜೆಪಿ ಲೆಕ್ಕಾಚಾರ ಫಲಿಸಿಲ್ಲ. ಅಲ್ಲಿ ಎಎಪಿ ತನ್ನ ಹಿಡಿತ ಕಾಯ್ದುಕೊಳ್ಳುವುದರೊಂದಿಗೆ, ಗುಜರಾತಿನಲ್ಲಿ ಬಿಜೆಪಿಗೆ ಪೈಪೋಟಿಯೊಡ್ಡುವ ಪಕ್ಷವಾಗಿ ತಾನು ಹೆಚ್ಚು ಗಟ್ಟಿಯಾಗುತ್ತಿರುವುದನ್ನು ಸೂಚಿಸಿದೆ.
ಹಾಗಾದರೆ ಕಾಂಗ್ರೆಸ್ ಕಥೆಯೇನು? ಗುಜರಾತಿನ ಬಗ್ಗೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಮಹತ್ವಾಕಾಂಕ್ಷೆ ಇಟ್ಟುಕೊಂಡಿರುವ ರಾಹುಲ್ ಗಾಂಧಿಯವರ ಕನಸಿನ ಕಥೆಯೇನು?
ಇನ್ನು ಕೇರಳದ ನೀಲಂಬೂರ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆರ್ಯಾಡನ್ ಶೌಕತ್ ಗೆಲುವು ಸಾಧಿಸಿದ್ದಾರೆ.
ಹಿಂದಿನ ಚುನಾವಣೆಯಲ್ಲಿ ಸಿಪಿಎಂ ಬೆಂಬಲದೊಂದಿಗೆ ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದಿದ್ದ ಪಿ.ವಿ. ಅನ್ವರ್ ಅವರ ರಾಜೀನಾಮೆಯಿಂದಾಗಿ ನೀಲಂಬೂರ್ ಕ್ಷೇತ್ರದಲ್ಲಿ ಉಪಚುನಾವಣೆ ನಡೆದಿತ್ತು.
ಪಶ್ಚಿಮ ಬಂಗಾಳದ ಕಾಲಿಗಂಜ್ ಕ್ಷೇತ್ರವನ್ನು ಮತ್ತೆ ಟಿಎಂಸಿಯೇ ಗೆಲ್ಲುವುದರೊಂದಿಗೆ, ಬಿಜೆಪಿ ಕನಸನ್ನು ಭಗ್ನಗೊಳಿಸಿದೆ. ಟಿಎಂಸಿಯ ಅಲಿಫಾ ಅಹ್ಮದ್ ಭಾರೀ ದೊಡ್ಡ ಅಂತರದ ಗೆಲುವು ಸಾಧಿಸಿದ್ದಾರೆ. ಟಿಎಂಸಿ ನಾಯಕ ನಾಸಿರುದ್ದೀನ್ ಅಹ್ಮದ್ ಅವರ ಮರಣದ ನಂತರ ಕಾಲಿಗಂಜ್‌ನಲ್ಲಿ ಉಪಚುನಾವಣೆ ನಡೆದಿತ್ತು.
ಪಂಜಾಬ್‌ನ ಲುಧಿಯಾನ ಪಶ್ಚಿಮ ಕ್ಷೇತ್ರದಲ್ಲಿ ಎಎಪಿಯ ಸಂಜೀವ್ ಅರೋರಾ ಗೆಲುವು ಸಾಧಿಸಿದ್ದಾರೆ. ಎಎಪಿ ಶಾಸಕ ಗುರುಪ್ರೀತ್ ಬಸ್ಸಿ ಗೋಗಿ ಅವರ ನಿಧನ ಇಲ್ಲಿ ಉಪಚುನಾವಣೆಗೆ ಕಾರಣವಾಗಿತ್ತು.
ಕೇರಳದ ನೀಲಂಬೂರ್ ಹೊರತುಪಡಿಸಿದರೆ ಇತರ 4 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಎಲ್ಲಿ ಅಡಗಿಹೋಗಿದೆ ಎಂದು ಕೇಳುವಂತಾಗಿದೆ.
ಗುಜರಾತಿನ ವಿಸಾವದರ್ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ನಿತಿನ್ ರಣಪಾರಿಯಾ ಕಣದಲ್ಲಿದ್ದರು. ಕಾಡಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅದೇ ಕ್ಷೇತ್ರದ ಮಾಜಿ ಶಾಸಕ ರಮೇಶ್ ಚಾವ್ಡಾ ಅವರನ್ನು ಕಣಕ್ಕಿಳಿಸಿತ್ತು.
ಪಶ್ಚಿಮ ಬಂಗಾಳದ ಕಾಲಿಗಂಜ್‌ನಲ್ಲಿ ಎಡರಂಗ ಬೆಂಬಲಿತ ಕಾಂಗ್ರೆಸ್ ಅಭ್ಯರ್ಥಿ ಕಬೀಲುದ್ದೀನ್ ಶೇರ್ ಕಣದಲ್ಲಿದ್ದರು.
ಪಂಜಾಬ್‌ನ ಲುಧಿಯಾನ ಪಶ್ಚಿಮದಲ್ಲಿ ಕಾಂಗ್ರೆಸ್‌ನಿಂದ ಭರತ್ ಭೂಷಣ್ ಆಶು ಕಣದಲ್ಲಿದ್ದರು.
ಫಲಿತಾಂಶ ಬಂದಾಗ, ವಿಸಾವದರ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೂರನೇ ಸ್ಥಾನದಲ್ಲಿದ್ದರು. ಕಾಡಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿಜೆಪಿಗೆ ಸಮೀಪದ ಪ್ರತಿಸ್ಪರ್ಧೆ ಒಡ್ಡಿದ್ದರೂ ಅಂತರ ದೊಡ್ಡದಿತ್ತು. ಕಾಲಿಗಂಜ್ ಕ್ಷೇತ್ರದಲ್ಲಿಯೂ ಕಾಂಗ್ರೆಸ್ ಮೂರನೇ ಸ್ಥಾನದಲ್ಲಿತ್ತು. ಪಂಜಾಬ್‌ನಲ್ಲಿ ಕೂಡ ಕಾಂಗ್ರೆಸ್‌ಗೆ ಎಎಪಿ ವಿರುದ್ಧ ಗೆಲ್ಲುವುದು ಸಾಧ್ಯವಾಗಲಿಲ್ಲ. ಗುಜರಾತ್‌ನಲ್ಲಿ ಕಾಂಗ್ರೆಸ್ ಸ್ಥಿತಿ ಶೋಚನೀಯ.
ಬಂದಿರುವುದು 2022ರ ಚುನಾವಣೆಗಿಂತ ಕಡಿಮೆ ಮತಗಳು.
ಕಳೆದ ಬಾರಿ ಇದೇ ಕ್ಷೇತ್ರದಲ್ಲಿ 16,963 ಮತಗಳನ್ನು ಪಡೆದಿದ್ದ ಕಾಂಗ್ರೆಸ್ ಈಗ ಕೇವಲ ಐದು ಸಾವಿರಕ್ಕೆ ಇಳಿದಿದೆ. ಮುಂದಿನ ಹಾದಿ ತುಂಬಾ ಕಷ್ಟಕರವಾಗಿದೆ ಎಂಬುದು ಇಲ್ಲಿಂದಲೇ ಸ್ಪಷ್ಟವಾಗುವಂತಿದೆ. ಮುಂದಿನ ಚುನಾವಣೆಯಲ್ಲಿ ಗುಜರಾತಿನಲ್ಲಿ ಚುನಾವಣಾ ಆಟವೇನಿದ್ದರೂ ಬಿಜೆಪಿ ಮತ್ತು ಎಎಪಿ ನಡುವೆ ಇರುತ್ತದೆಯೆ? ಗುಜರಾತ್ ಕೋಟೆಯನ್ನು ಒಡೆಯಬೇಕು ಎಂಬ ಕಾಂಗ್ರೆಸ್ ಕನಸು ಬರೀ ಕನಸಾಗಿಯೇ ಉಳಿಯುತ್ತದೆಯೆ?
ಕಾಂಗ್ರೆಸ್ ಪಕ್ಷ 2025ನ್ನು ಸಾಂಸ್ಥಿಕ ಪುನರ್ ರಚನೆ ವರ್ಷ ಎಂದೇ ಕರೆದುಕೊಂಡಿದೆ.
ವಿಶೇಷವಾಗಿ ಉತ್ತರ ಮತ್ತು ಪೂರ್ವದ ಜನನಿಬಿಡ ರಾಜ್ಯಗಳಲ್ಲಿ ಕಾಂಗ್ರೆಸ್ ನೆಲೆ ಕಳೆದುಕೊಳ್ಳುತ್ತಿರುವ ಹೊತ್ತು ಇದು.
ಬಿಜೆಪಿಯ ಧಾರ್ಮಿಕ ಅಜೆಂಡಾವನ್ನು ತಟಸ್ಥಗೊಳಿಸುವ ನಿಟ್ಟಿನ ಕಾಂಗ್ರೆಸ್ ಅಭಿಯಾನ ಮಹಾರಾಷ್ಟ್ರ ಮತ್ತು ಹರ್ಯಾಣದಲ್ಲಿ ವಿಫಲವಾಯಿತು. ಮೋದಿ ಸರಕಾರದ ಅದಾನಿ-ಅಂಬಾನಿ ಸಂಪರ್ಕದ ಬಗೆಗಿನ ಕಾಂಗ್ರೆಸ್ ದಾಳಿ ಕೂಡ ಮತದಾರರನ್ನು ಸೆಳೆಯುವಲ್ಲಿ ಗೆಲ್ಲದೇ ಹೋಯಿತು. ಇದೆಲ್ಲಕ್ಕಿಂತಲೂ ಹೆಚ್ಚಾಗಿ, ಗುಜರಾತ್‌ನಲ್ಲಿ ಅದು ಅಧಿಕಾರ ಕಳೆದುಕೊಂಡೇ 30 ವರ್ಷಗಳಾಗಿವೆ.
ಮೊನ್ನೆ ಎಪ್ರಿಲ್‌ನಲ್ಲಿ ಅಹಮದಾಬಾದ್‌ನಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಹೊಸ ಸಂಕಲ್ಪಗಳನ್ನು ಮಾಡಲಾಯಿತು. ಮುಖ್ಯವಾಗಿ, ಗುಜರಾತ್ ಚುನಾವಣೆಗಾಗಿ ದೊಡ್ಡ ಮಟ್ಟದ ಸಿದ್ಧತೆ ಅದರ ಸಂಕಲ್ಪಗಳಲ್ಲಿ ಒಂದಾಗಿತ್ತು. ಅದಾದ ಬಳಿಕ ಗುಜರಾತಿನಲ್ಲಿಯೇ ಎದುರಾದ ಮೊದಲ ಚುನಾವಣೆಯ ಪರೀಕ್ಷೆಯಲ್ಲಿ ಕಾಂಗ್ರೆಸ್ ತನ್ನ ಹಳೆಯ ದಾರಿದ್ರ್ಯದ ಸ್ಥಿತಿಯನ್ನೇ ಪ್ರದರ್ಶನ ಮಾಡಿದೆ.ರಾಜ್ಯಾಧ್ಯಕ್ಷ ಶಕ್ತಿ ಸಿಂಗ್ ಗೋಹಿಲ್ ನಿರಾಶೆ ವ್ಯಕ್ತಪಡಿಸಿ ರಾಜೀನಾಮೆ ನೀಡಿದ್ದಾರೆ. ಎಲ್ಲಿ ಏನಾಗುತ್ತಿದೆ ಎಂಬುದು ಕಾಂಗ್ರೆಸ್ ನಾಯಕತ್ವದ ಲೆಕ್ಕಕ್ಕೇ ಸಿಗುತ್ತಿಲ್ಲವೆ?
ರೇಸ್ ಕುದುರೆ ಮತ್ತು ದಿಬ್ಬಣದ ಕುದುರೆಗಳ ನಡುವಿನ ವ್ಯತ್ಯಾಸ ಗುರುತಿಸಬೇಕಾದ ಅಗತ್ಯದ ಬಗ್ಗೆಯೂ ರಾಹುಲ್ ಗಾಂಧಿ ಮಾತಾಡಿದ್ದರು.
ಕಾಂಗ್ರೆಸ್‌ಗೆ ನಾಯಕತ್ವವನ್ನು ಕೊಟ್ಟದ್ದು ಗುಜರಾತ್ ಎಂದು ಕೂಡ ರಾಹುಲ್ ಹೇಳಿದ್ದರು.
ಬ್ರಿಟಿಷರ ಎದುರಲ್ಲಿ ಮಹಾತ್ಮಾ ಗಾಂಧಿ ನಾಯಕತ್ವ ಗೆದ್ದದ್ದನ್ನು ನೆಪಿಸಿಕೊಳ್ಳುತ್ತ ಅವರು, ‘‘ಗುಜರಾತ್ ನಮ್ಮ ಮೂಲ ನಾಯಕತ್ವವನ್ನು ಕಾಂಗ್ರೆಸ್ ಪಕ್ಷಕ್ಕೆ ನೀಡಿತು ಮತ್ತು ಆ ನಾಯಕತ್ವ ನಮಗೆ ಯೋಚಿಸುವ ಸಾಮರ್ಥ್ಯವನ್ನು ನೀಡಿತು’’ ಎಂದಿದ್ದರು.
ಗಾಂಧೀಜಿ ಇಲ್ಲದಿದ್ದರೆ ಕಾಂಗ್ರೆಸ್ ಮೂಲಕ ದೇಶಕ್ಕೆ ಸ್ವಾತಂತ್ರ್ಯ ಸಿಗುತ್ತಿರಲಿಲ್ಲ ಮತ್ತು ಗುಜರಾತ್ ಇಲ್ಲದಿದ್ದರೆ ಗಾಂಧೀಜಿ ಇರುತ್ತಿರಲಿಲ್ಲ ಎಂದಿದ್ದರು.
ಗುಜರಾತ್ ನಮಗೆ ಸರ್ದಾರ್ ಪಟೇಲ್ ಅವರನ್ನು ಕೊಟ್ಟಿದೆ ಎಂದಿದ್ದರು.
‘‘ಮತ್ತೆ ನಾವು ಜನರ ವಿಶ್ವಾಸ ಗಳಿಸಬೇಕಾಗಿದೆ. ನಮ್ಮ ಜವಾಬ್ದಾರಿಗಳನ್ನು ಪೂರೈಸುವವರೆಗೂ ಗುಜರಾತ್ ಜನರು ನಮ್ಮನ್ನು ಆಯ್ಕೆ ಮಾಡುವುದಿಲ್ಲ. ಮೊದಲು ನಾವು ಅವರ ವಿಶ್ವಾಸವನ್ನು ಗಳಿಸಬೇಕು’’ ಎಂದಿದ್ದರು.
ರಾಹುಲ್ ಅವರ ಪ್ರಾಮಾಣಿಕತೆ ಖಂಡಿತವಾಗಿಯೂ ಅವರ ಮಾತುಗಳಲ್ಲಿ ವ್ಯಕ್ತವಾಗುತ್ತದೆ.
ಆದರೆ, 30 ವರ್ಷಗಳಿಂದ ಒಂದು ರಾಜ್ಯದಲ್ಲಿ ಅದು ಜನರ ವಿಶ್ವಾಸ ಗಳಿಸಲಾರದೆ ಇರುವಾಗ, ಈಗಲೂ ಅದು ಸಾಧ್ಯವಾಗುವ ಸೂಚನೆಗಳು ಇಲ್ಲದಿರುವಾಗ, ಇದು ದೊಡ್ಡ ಕಳವಳದ ಪ್ರಶ್ನೆಯಾಗುತ್ತದೆ.
ಪಂಜಾಬ್ ಕಾಂಗ್ರೆಸ್‌ನ ಭದ್ರ ನೆಲೆಯಾಗಿತ್ತು. ಹೊಸ ಪಕ್ಷವೊಂದರ ಎದುರಲ್ಲಿ ಅದನ್ನು ಕೂಡ ಕಾಂಗ್ರೆಸ್ ಕಳೆದುಕೊಂಡು ಕುಳಿತುಬಿಟ್ಟಿದೆ.
ಹಿಂದಿ ಭಾಷಿಕ ರಾಜ್ಯಗಳಲ್ಲಿಯೂ ಅದರ ಹಿಡಿತ ತಪ್ಪಿಹೋಗಿದೆ. ಕೈಯಲ್ಲಿದ್ದುದೆಲ್ಲವನ್ನೂ ಬೇರೆ ಬೇರೆ ಕಾರಣಗಳಿಂದಾಗಿ ಕಳೆದುಕೊಂಡಿದೆ. ಹೀಗಿರುವಾಗ ಕೇರಳದ ಕ್ಷೇತ್ರವೊಂದರ ಉಪಚುನಾವಣೆಯಲ್ಲಿನ ಅದರ ಗೆಲುವನ್ನು ಏನೆಂದು ಗ್ರಹಿಸಬೇಕು.
ದಕ್ಷಿಣದ ರಾಜ್ಯಗಳಲ್ಲಿ ಉಳಿಸಿಕೊಂಡಿರುವ ಅದರ ಹಿಡಿತವನ್ನೂ ತಪ್ಪಿಸುವ ಆಟಗಳು ಸುತ್ತಲಿಂದ ನಡೆದೇ ಇರುವಾಗ, ಕೊಂಚ ಮೈಮರೆವು ಕೂಡ ಕಾಂಗ್ರೆಸ್ ಪಕ್ಷಕ್ಕೆ ಆಘಾತಕಾರಿ ಆಗಬಹುದಾದ ಅಪಾಯಗಳಿವೆ.
ಕೇರಳದಲ್ಲಿನ ಆಡಳಿತ ವಿರೋಧಿ ಅಲೆಯ ಸಂಪೂರ್ಣ ಲಾಭವನ್ನಾದರೂ ಕಾಂಗ್ರೆಸ್ ಪಡೆಯುವ ಸ್ಥಿತಿಯಲ್ಲಿದೆಯೆ?
ತರೂರ್ ಥರದ ನಾಯಕರ ವರ್ತನೆ, ಅಂಥವರನ್ನು ಸಹಿಸಿಕೊಳ್ಳಬೇಕಾದ ಕಾಂಗ್ರೆಸ್‌ನ ಅನಿವಾರ್ಯತೆ ಇವೆಲ್ಲವೂ ಅದರೆದುರು ಇರುವ ಅಸಾಧಾರಣ ಸವಾಲಿನ ಸೂಚನೆಗಳೇ ಆಗಿವೆ.
ಕೇರಳದಲ್ಲಿ ಪಿಣರಾಯಿ ವಿಜಯನ್ ನೇತೃತ್ವದ ಎಲ್‌ಡಿ ಎಫ್‌ಗೆ ಮುಂದಿನ ಹಾದಿ ಕಠಿಣವಾಗುವ ಸಾಧ್ಯತೆಗಳಿವೆ.
ಈ ಉಪಚುನಾವಣೆ ಗೆಲ್ಲುವ ಮೂಲಕ ಮುಂದಿನ ವರ್ಷದ ವಿಧಾನಸಭಾ ಚುನಾವಣೆಗೆ ಜನಾಭಿಪ್ರಾಯ ರೂಪಿಸುವ ಉಮೇದಿನಲ್ಲಿ ಪಿಣರಾಯಿ ಇದ್ದರು. ಆದರೆ ಆ ಲೆಕ್ಕಾಚಾರ ತಲೆಕೆಳಗಾಗಿದೆ. ನಿಲಂಬೂರ್‌ನಲ್ಲಾಗಿರುವ ಸೋಲು ಪಿಣರಾಯಿ ಸರಕಾರ ಆತ್ಮ ವಿಮರ್ಶೆಗೆ ಮುಂದಾಗಬೇಕು ಅನಿವಾರ್ಯತೆ ಸೃಷ್ಟಿಸಿದೆ. ಆದರೆ ಪರಿಸ್ಥಿತಿಯ ಲಾಭವನ್ನು ಸಂಪೂರ್ಣವಾಗಿ ಪಡೆದುಕೊಳ್ಳುವ ಸ್ಥಿತಿಯಲ್ಲಿ ಕಾಂಗ್ರೆಸ್ ಹಾಗೂ ಯುಡಿಎಫ್ ಇದೆಯೇ ಎಂಬುದು ದೊಡ್ಡ ಪ್ರಶ್ನೆ.
ಪ್ರತೀ ಐದು ವರ್ಷಗಳಿಗೊಮ್ಮೆ ಎಲ್‌ಡಿಎಫ್ ಹಾಗೂ ಯುಡಿಎಫ್ ನಡುವೆ ಅಧಿಕಾರ ಬದಲಾಯಿಸುತ್ತ ಬಂದಿದ್ದ ಕೇರಳಿಗರು ಕಳೆದ ಬಾರಿ ಮಾತ್ರ ಎಲ್‌ಡಿಎಫ್‌ಗೆ ಸತತ ಎರಡನೇ ಅವಧಿಗೆ ಅಧಿಕಾರ ನೀಡಿದ್ದರು. ಆದರೆ ಸತತ ಮೂರನೇ ಬಾರಿ ಗೆಲ್ಲುವುದು ಎಲ್‌ಡಿಎಫ್ ಪಾಲಿಗೆ ಹರಸಾಹಸದಂತೆ ಕಾಣುತ್ತಿದೆ.
ಯುಡಿಎಫ್ ಈಗಿನಿಂದಲೇ ಗೊಂದಲಕ್ಕೆ ಎಡೆಯಿಲ್ಲದಂತೆ ತಯಾರಿ ನಡೆಸಿದರೆ ಮುಂದಿನ ವರ್ಷ ಅದು ಅಧಿಕಾರ ಹಿಡಿಯುವ ಸಾಧ್ಯತೆ ಕೇರಳದಲ್ಲಿ ಕಾಣುತ್ತಿದೆ.
ಆದರೆ ಒಂದು ವರ್ಷ ತೀರಾ ಸಣ್ಣ ಅವಧಿಯೂ ಅಲ್ಲ,
ಪಿಣರಾಯಿ ಅಷ್ಟು ಸುಲಭವಾಗಿ ಶರಣಾಗುವ ನಾಯಕನೂ ಅಲ್ಲ. ಇದನ್ನು ಕಾಂಗ್ರೆಸ್ ತಿಳಿದುಕೊಳ್ಳಬೇಕಾಗಿದೆ.
ಇನ್ನು, ಎಎಪಿ ದೇಶದ ಅಲ್ಲಲ್ಲಿ ಬಲಗೊಳ್ಳುತ್ತಿದೆ ಎಂಬುದು ಸ್ಪಷ್ಟವಾಗುತ್ತಿದೆ. ಬಿಜೆಪಿಯ ಕೋಟೆಯಾಗಿರುವ ಗುಜರಾತಿನಲ್ಲಿ ಬಲಗೊಳ್ಳುತ್ತಿದೆ ಎಂಬುದು ಒಂದೆಡೆಯಾದರೆ, ಪಂಜಾಬ್ ಗದ್ದುಗೆಗೆ ಕಾಂಗ್ರೆಸ್ ಅನ್ನು ಬಿಡದ ಮಟ್ಟಿಗೆ ಅದು ಭದ್ರವಾಗಿರುವುದು ಕಾಣುತ್ತಿದೆ.
ಒಂದೆಡೆ ಕಾಂಗ್ರೆಸ್‌ಗೆ ಬಾಗಿಲುಗಳು ಮುಚ್ಚಿಕೊಳ್ಳುತ್ತಿರುವ ಹಾಗೆ ಕಾಣಿಸುತ್ತಿರುವಾಗ, ಎಎಪಿ ಅವಕಾಶಗಳು ಹೆಚ್ಚು ಹೆಚ್ಚು ತೆರೆದುಕೊಳ್ಳುತ್ತಿರುವ ಹಾಗಿದೆ.
ದಿಲ್ಲಿಯಲ್ಲಿ ಬಿಜೆಪಿ ಎದುರು ಆಘಾತಕಾರಿ ಸೋಲನುಭವಿಸಿ ಮನೆ ಸೇರಿರುವ ಎಎಪಿ ನಾಯಕರು ಈಗ ಮೈಕೊಡವಿಕೊಂಡು ಮತ್ತೆ ದೇಶದ ವಿವಿಧೆಡೆ ಸಂಘಟನೆಗೆ ಮುಂದಾಗಬಹುದು.
ದಿಲ್ಲಿಯಲ್ಲೂ ಈಗಾಗಲೇ ಸವಾಲು ಎದುರಿಸುತ್ತಿರುವ ರೇಖಾ ಗುಪ್ತಾ ನೇತೃತ್ವದ ಬಿಜೆಪಿ ಸರಕಾರಕ್ಕೆ ತಲೆನೋವಾಗಬಹುದು.
ಮಮತಾ ಬ್ಯಾನರ್ಜಿ ಅವರಿಗೆ ಅವರ ವಿರುದ್ಧದ ಬಿಜೆಪಿ ದ್ವೇಷವೇ ಬಲವಾದಂತಿದೆ.
ಬಿಜೆಪಿ ದ್ವೇಷ, ಧ್ರುವೀಕರಣ ಮಮತಾ ಅವರನ್ನು ಇನ್ನೂ ಬಲಪಡಿಸುತ್ತದೆ.
ಬಿಜೆಪಿ ತನ್ನ ದ್ವೇಷ ಭಾಷಣ, ಕೋಮುವಾದಿ ರಾಜಕೀಯ, ಸುಳ್ಳಾರೋಪ ಹೆಚ್ಚಿಸುತ್ತಾ ಹೋದಷ್ಟು ಅದರ ಸಂಪೂರ್ಣ ಲಾಭ ಮಮತಾಗೆ ಆಗುತ್ತಿದೆಯೇ ಎಂಬ ಅನುಮಾನ ಮೂಡುತ್ತಿದೆ.
ಇದರ ನಡುವೆ ಅಲ್ಲಿ ಸಿಪಿಎಂ ಎಲ್ಲಿಯೂ ಕಾಣುತ್ತಿಲ್ಲ.







