ಬಿವೈಬಿಎಫ್‌ಸಿ ಮುಂಬೈ ಮಡಿಲಿಗೆ ಆಲ್ ಸ್ಟಾರ್ ಕೊಡಗು ವರ್ಲ್ಡ್ ಕಪ್
ಐತಿಹಾಸಿಕ ಫುಟ್ಬಾಲ್ ಪಂದ್ಯಾವಳಿಗೆ ವರ್ಣರಂಜಿತ ತೆರೆ

ಮಡಿಕೇರಿ: ಗೋಣಿಕೊಪ್ಪದ ಆಲ್ ಸ್ಟಾರ್ ಯೂತ್ ಕ್ಲಬ್ ವತಿಯಿಂದ ಮೇ 1ರಿಂದ 4ರವರೆಗೆ ಗೋಣಿಕೊಪ್ಪಲಿನ ಜಿಎಂಪಿ ಶಾಲಾ ಮೈದಾನದಲ್ಲಿ ಆಯೋಜಿಸಿದ್ದ ಕೊಡಗು ವರ್ಲ್ಡ್ ಕಪ್ ಆಲ್ ಇಂಡಿಯಾ ಸೂಪರ್ ಫೈವ್ಸ್ ಫುಟ್ಬಾಲ್ ಪಂದ್ಯವಾಳಿಯ ಫೈನಲ್ ಪಂದ್ಯದಲ್ಲಿ ಬಿವೈಬಿ ಎಫ್‌ಸಿ ಮುಂಬೈ ತಂಡವು ಕಲ್ಲುಬಾಯ್ಸ್ ಕಲ್ಲುಬಾಣೆ ತಂಡವನ್ನು 3-1 ಗೋಲುಗಳ ಅಂತರದಿಂದ ಗೆಲುವು ಸಾಧಿಸುವುದರ ಮೂಲಕ ಆಲ್ ಸ್ಟಾರ್ ಕೊಡಗು ವರ್ಲ್ಡ್ ಕಪ್ ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿಕೊಂಡಿದೆ.
ಕೇರಳದ ಮೂಲದ ಆಟಗಾರರನ್ನೊಳಗೊಂಡ ಕಲ್ಲುಬಾಯ್ಸ್ ಕಲ್ಲುಬಾಣೆ ಹಾಗೂ ಬಿವೈಬಿ ಎಫ್‌ಸಿ ಮುಂಬೈ ತಂಡಗಳ ನಡುವಿನ ಜಿದ್ದಾಜಿದ್ದಿನ ಫೈನಲ್ ಪಂದ್ಯದಲ್ಲಿ ಮುಂಬೈ ತಂಡವು ಮೊದಲಾರ್ಧದ ಆರಂಭದಲ್ಲೇ ಗೋಲು ಬಾರಿಸಿ ಮುನ್ನಡೆ ಪಡೆಯಿತು. ಆದರೆ, ಆಕ್ರಮಣಕಾರಿ ಆಟಕ್ಕೆ ಮುಂದಾದ ಕಲ್ಲುಬಾಯ್ಸ್ ತಂಡವು ಮೊದಲಾರ್ಧದಲ್ಲೇ ಮುಂಬೈ ತಂಡಕ್ಕೆ ಎದಿರೇಟು ನೀಡಿ ಗೋಲು ಬಾರಿಸಿ ಸಮಬಲ ಸಾಧಿಸಿತ್ತು.
ಬಳಿಕ ದ್ವಿತೀಯಾರ್ಧದಲ್ಲಿ ಮುಂಬೈ ತಂಡವು 2 ಗೋಲುಗಳನ್ನು ಬಾರಿಸಿ ವಿಜಯದಮಾಲೆ ಖಚಿತಪಡಿಸಿಕೊಂಡಿತು. ಅಂತಿಮವಾಗಿ ನಿಗದಿತ ಸಮಯದಲ್ಲಿ 3-1 ಗೋಲುಗಳ ಅಂತರದಿಂದ ಗೆಲುವು ಸಾಧಿಸುವ ಮೂಲಕ ಮುಂಬೈ ತಂಡವು ಕೊಡಗು ವರ್ಲ್ಡ್ ಕಪ್ ಪ್ರಶಸ್ತಿಗೆ ಮುತ್ತಿಟ್ಟಿತು.
ಬೆಳಗ್ಗಿನ ಜಾವ ಫೈನಲ್ ಕಾದಾಟ: ಆಲ್ ಸ್ಟಾರ್ ಕೊಡಗು ವರ್ಲ್ಡ್ ಕಪ್ ಫುಟ್ಬಾಲ್ ಪಂದ್ಯಾವಳಿಯ ಕೊನೆಯ ದಿನ ರವಿವಾರ ಭಾರೀ ಮಳೆ ಸುರಿದಿದ್ದರಿಂದ ಪಂದ್ಯವು ತಡವಾಗಿ ಆರಂಭಗೊಂಡಿತ್ತು. ಕ್ವಾರ್ಟರ್ ಫೈನಲ್ ಪಂದ್ಯ ಆರಂಭವಾಗುತ್ತಿದ್ದಂತೆ ಜನರು ಕಿಕ್ಕಿರಿದು ಸೇರಿದ್ದು, ಇಡೀ ಗ್ಯಾಲರಿ ಸಂಪೂರ್ಣ ಭರ್ತಿಯಾಗಿ, ಪ್ರೇಕ್ಷಕರು ನಿಂತುಕೊಂಡೇ ಪಂದ್ಯವನ್ನು ವೀಕ್ಷಿಸುತ್ತಿದ್ದರು.
ಬೆಳಗ್ಗಿನ ಜಾವ 4 ಗಂಟೆಗೆ ಫೈನಲ್ ಪಂದ್ಯ ನಡೆಯುವ ಸಂದರ್ಭದಲ್ಲಿಯೂ ಇಡೀ ಗ್ಯಾಲರಿ ಭರ್ತಿಯಾಗಿತ್ತು. ಕ್ರೀಡಾಭಿಮಾನಿಗಳು ರಾತ್ರಿ 8 ಗಂಟೆಯಿಂದ ಬೆಳಗ್ಗಿನ ಜಾವ 4:45 ಗಂಟೆಯವರೆಗೂ ಪಂದ್ಯವನ್ನು ವೀಕ್ಷಣೆ ಮಾಡಿದ್ದು ವಿಶೇಷವಾಗಿತ್ತು.
ಕೊಡಗು ಜಿಲ್ಲೆಯ ಕ್ರೀಡಾ ಇತಿಹಾಸದಲ್ಲಿ ಐತಿಹಾಸಿಕ ಕ್ಷಣಕ್ಕೆ ರವಿವಾರ ಮಧ್ಯರಾತ್ರಿ ಗೋಣಿಕೊಪ್ಪಲಿನ ಜಿಎಂಪಿ ಶಾಲಾ ಮೈದಾನ ಸಾಕ್ಷಿಯಾಗಿತ್ತು. ಒಂದೆಡೆ ಇಡೀ ಗ್ಯಾಲರಿಯಲ್ಲಿ ಜನಸ್ತೋಮ, ಮತ್ತೊಂದೆಡೆ ಆಟಗಾರರ ಆಟದ ಕಾಲ್ಚೆಳಕ ನೆರೆದಿದ್ದ ಕ್ರೀಡಾ ಪ್ರೇಕ್ಷಕರಿಗೆ ಗೋಣಿಕೊಪ್ಪಲಿನ ದಸರಾ ಅನುಭವವನ್ನು ಮರುಕಳಿಸುವಂತೆ ಮಾಡಿತ್ತು. ಮೈದಾನದಲ್ಲಿ ಪಟಾಕಿಗಳ ಆರ್ಭಟದ ಜೊತೆಗೆ ಡಿಜೆಗೆ ಇಡೀ ಗ್ಯಾಲರಿಯಲ್ಲಿ ಕುಳಿತಿದ್ದ ಜನತೆ ಕುಣಿದು ಕುಪ್ಪಳಿಸಿ ಕೊಡಗು ವರ್ಲ್ಡ್ ಫುಟ್ಬಾಲ್ ಪಂದ್ಯಾವಳಿಯನ್ನು ಆನಂದಿಸಿದರು. ಮಂಗಳೂರು, ಕೇರಳ, ಮೈಸೂರು, ಬೆಂಗಳೂರು ಹಾಗೂ ಕೊಡಗು ಜಿಲ್ಲೆಯ ವಿವಿಧ ಭಾಗಗಳಿಂದ ಒಟ್ಟು 20 ಸಾವಿರಕ್ಕೂ ಅಧಿಕ ಮಂದಿ ಕೊಡಗು ವರ್ಲ್ಡ್ ಕಪ್ ಫುಟ್ಬಾಲ್ ಪಂದ್ಯಾವಳಿ ವೀಕ್ಷಿಸಿದ್ದಾರೆ.
‘ಡ್ರಗ್ಸ್ ಬಿಡಿ, ಫುಟ್ಬಾಲ್ ಆಡಿ’ ಸಂದೇಶ: ಸಮಾಜದಲ್ಲಿ ಇತ್ತೀಚಿನ ದಿನಗಳಲ್ಲಿ ಮಾದಕ ವ್ಯಸನಗಳಿಂದಾಗುತ್ತಿರುವ ದುಷ್ಪರಿಣಾಮದ ಬಗ್ಗೆ ಎಲ್‌ಇಡಿ ಪರದೆಯಲ್ಲಿ ಐದು ನಿಮಿಷಗಳ ಕಾಲ ಕಿರು ವೀಡಿಯೊ ಚಿತ್ರಣವನ್ನು ಪ್ರದರ್ಶಿಸಲಾಯಿತು.
ಆಲ್ ಸ್ಟಾರ್ ತಂಡದ ಮಾದಕ ವ್ಯಸನಗಳ ಜಾಗೃತಿ ಕಾರ್ಯಕ್ಕೆ ಕಿರು ವಿಡಿಯೋ ಪ್ರದರ್ಶನದ ನಂತರ ಮೈದಾನದಲ್ಲಿ ನೆರೆದಿದ್ದ ಜನತೆ ಎದ್ದು ನಿಂತು ಚಪ್ಪಾಳೆ ತಟ್ಟಿ Say Not Drugs, Say Yes Football ಎಂಬ ಘೋಷವಾಕ್ಯವನ್ನು ಕೂಗುವುದರ ಮೂಲಕ ಶ್ಲಾಘನೆ ವ್ಯಕ್ತಪಡಿಸಿದರು.
ಸೆಮಿಫೈನಲ್ ಪಂದ್ಯದ ಫಲಿತಾಂಶ: ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಕಲ್ಲುಬಾಯ್ಸ್ ತಂಡವು 4-0 ಗೋಲುಗಳ ಅಂತರದಿಂದ ಸಿದ್ದಾಪುರ ಫ್ರೆಂಡ್ಸ್ ತಂಡವನ್ನು ಮಣಿಸಿ ಫೈನಲ್‌ಗೆ ಲಗ್ಗೆಯಿಟ್ಟಿತು. ದ್ವಿತೀಯ ಸೆಮಿಫೈನಲ್ ಪಂದ್ಯದಲ್ಲಿ ಬಿವೈಬಿಎಫ್‌ಸಿ ಮುಂಬೈ ತಂಡವು ಅಮಿಗೋಸ್ ಕಲ್ಲುಬಾಯ್ಸ್ ತಂಡದ ವಿರುದ್ಧ ಪೆನಾಲ್ಟಿ ಶೂಟೌಟ್‌ನಲ್ಲಿ ರೋಚಕ ಗೆಲುವು ಸಾಧಿಸಿ ಫೈನಲ್‌ಗೆ ಅರ್ಹತೆ ಪಡೆದುಕೊಂಡಿತು.
ತೃತೀಯ ಸ್ಥಾನಕ್ಕೆ ಟಾಸ್ ಮೂಲಕ ಆಯ್ಕೆ ನಡೆಯಿತು. ತೃತೀಯ ಸ್ಥಾನವನ್ನು ಅಮಿಗೋಸ್ ಕಲ್ಲುಬಾಣೆ ಪಡೆದುಕೊಂಡರೆ, ನಾಲ್ಕನೇ ಸ್ಥಾನವನ್ನು ಫ್ರೆಂಡ್ಸ್ ಎಫ್.ಸಿ. ಸಿದ್ದಾಪುರ ಪಡೆಯಿತು. ಪಂದ್ಯಾಕೂಟದಲ್ಲಿ ತೀರ್ಪುಗಾರರಾಗಿ ಕಾರ್ತಿಕೇಯನ್, ದಿನೇಶ್, ಮೋಹನ್ ಹಾಗೂ ಪ್ರಭು ಕಾರ್ಯ ನಿರ್ವಹಿಸಿದರು.







