ಮಲೆ ಮಹದೇಶ್ವರದಲ್ಲಿ ಸಚಿವ ಸಂಪುಟ ಸಭೆ: 3,647.42 ಕೋಟಿ ರೂ. ಮೌಲ್ಯದ 78 ಯೋಜನೆಗಳ ಅನುಷ್ಠಾನ

PC: x.com/CMofKarnataka
ಚಾಮರಾಜನಗರ(ಮಲೆ ಮಹದೇಶ್ವರ), ಎ.24: ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಚಾಮರಾಜನಗರದ ಮಲೆಮಹದೇಶ್ವರ ಬೆಟ್ಟದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಬರೋಬ್ಬರಿ 3647.42 ಕೋಟಿ ರೂ., ಮೌಲ್ಯದ 78 ಯೋಜನೆಗಳ ಅನುಷ್ಠಾನಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಈ ಮೂಲಕ ಚಾಮರಾಜನಗರಕ್ಕೆ ಅಂಟಿರುವ ಹಿಂದುಳಿದ ಜಿಲ್ಲೆ ಹಣೆಪಟ್ಟಿ ನಿರ್ಮೂಲನೆಗೆ ರಾಜ್ಯ ಸರಕಾರ ಮುಂದಾಗಿದೆ.
ವಿಭಾಗವಾರು ಸಚಿವ ಸಂಪುಟ ಸಭೆ ನಡೆಸಿ ಆಯಾ ವಿಭಾಗದಲ್ಲಿ ಹೆಚ್ಚಿನ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು ಎಂಬ ಉದ್ದೇಶದೊಂದಿಗೆ ಗುರುವಾರ ಬೆಂಗಳೂರಿನಿಂದ ಹೊರಭಾಗದ ಮಲೆ ಮಹದೇಶ್ವರ ಬೆಟ್ಟದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಪ್ರಸಕ್ತ ವಾರ್ಷಿಕ ಸಾಲಿನ 9ನೇ ಸಚಿವ ಸಂಪುಟ ಸಭೆ ಜರುಗಿತು.
ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ,, ಮೈಸೂರು, ಮಂಡ್ಯ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಿಗೆ ಹೆಚ್ಚಿ ಅನುಕೂಲವಾಗುವಂತೆ ಸಚಿವ ಸಂಪುಟ ಸಭೆಯಲ್ಲಿ ಯೋಜನೆಗಳ ಅನುಷ್ಠಾನಕ್ಕೆ ಅನುಮೋದನೆ ನೀಡಲಾಗಿದೆ ಎಂದರು.
ಪ್ರಮುಖವಾಗಿ 1787 ಕೋಟಿ ರೂ. ಮೊತ್ತದ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಒಪ್ಪಿಗೆ ಸೂಚಿಸಲಾಯಿತು. ಅದರೊಂದಿಗೆ ಆರೋಗ್ಯ ಕ್ಷೇತ್ರಕ್ಕಾಗಿ 228 ಕೋಟಿ ರೂ., 315 ಕೋಟಿ ರೂ., ಮೊತ್ತದ ಕುಡಿಯುವ ನೀರಿನ ಯೋಜನೆಗಳಿಗೆ ಸಂಪುಟ ಸಭೆಯಲ್ಲಿ ಚರ್ಚಿಸಿ ಅನುಮೋದಿಸಲಾಗಿದೆ ಎಂದು ಉಲ್ಲೇಖಿಸಿದರು.
ಅದೇ ರೀತಿ, ಚಾಮರಾಜನಗರ, ಮೈಸೂರು, ಮಂಡ್ಯ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಜಿಲ್ಲೆಗಳ ರೈತರಿಗೆ ಅನುಕೂಲವಾಗುವಂತಹ ನೀರಾವರಿ ಯೋಜನೆಗಳಿಗೆ ಸಂಪುಟ ಸಭೆಯಲ್ಲಿ ಅನುಮೋದಿಸಲಾಗಿದೆ.ಮಂಡ್ಯ ಜಿಲ್ಲೆ ಮಳ್ಳವಳ್ಳಿ ತಾಲೂಕಿನ ಕುಂತೂರು ಹಾಗೂ ಇತರ ಕೆರೆಗಳಿಗೆ ನೀರು ತುಂಬಿಸುವ ಏತ ನೀರಾವರಿ ಯೋಜನೆ, ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪು ತಾಲೂಕಿನ ಗಡಿ ರಂಗಾಪುರ ಮತ್ತು ಇತರ 19 ಕೆರೆಗಳನ್ನು ನೀರು ತುಂಬಿಸುವ ಏತ ನೀರಾವರಿ ಯೋಜನೆ, ಕಡೂರು ತಾಲೂಕಿ 25 ಕೆರೆಗಳಿಗೆ ನೀರು ತುಂಬಿಸುವುದು. ಹಾಗೇ, ಮೈಸೂರು ಜಿಲ್ಲೆ ವರುಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸರಣಿ ಚೆಕ್ ಡ್ಯಾಂ ನಿರ್ಮಾಣ, ಸುವರ್ಣಾವತಿ ನದಿ ವ್ಯಾಪ್ತಿಯ ಸರಣಿ ಕೆರೆಗಳ ಅಭಿವೃದ್ಧಿ, ಪಿರಿಯಾಪಟ್ಟಣ ಏತ ನೀರಾವರಿ ಕಾಲುವೆ ಸರಪಳಿಯ 52 ಕಿಮೀವರೆಗೆ ಮರು ದುರಸ್ತಿ ಕಾಮಗಾರಿ, ಕಬಿನಿ ಅಣೆಕಟ್ಟಿನ ಮುಂಭಾಗ ದುರಸ್ತಿ ಸೇರಿದಂತೆ 1,787 ಕೋಟಿ ರೂ., ವೆಚ್ಚದ 29 ಕಾಮಗಾರಿಗಳಿಗೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದಿಸಲಾಗಿದೆ ಎಂದೂ ಅವರು ಮಾಹಿತಿ ನೀಡಿದರು.
ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಮಾತನಾಡಿ, ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ 228 ಕೋಟಿ ರೂ. ಮೊತ್ತದ ಯೋಜನೆಗಳಿಗೆ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ಪ್ರಮುಖವಾಗಿ ಕೊಳ್ಳೆಗಾಲದಲ್ಲಿ 250 ಹಾಸಿಗೆ ಸಾಮರ್ಥ್ಯದ ಜಿಲ್ಲಾಸ್ಪತ್ರೆ ನಿರ್ಮಾಣ, ಹನೂರಿನಲ್ಲಿ ತಾಲೂಕು ಆಸ್ಪತ್ರೆ ನಿರ್ಮಾಣಕ್ಕೆ ಅನುಮೋದಿಸಲಾಗಿದೆ. ಮೈಸೂರು ಜಿಲ್ಲೆಯ ಸಾಲಿಗ್ರಾಮ ಮತ್ತು ತಗಡೂರಿನಲ್ಲಿನ ಸಮುದಾಯ ಆರೋಗ್ಯ ಕೇಂದ್ರವನ್ನು 82 ಕೋಟಿ ರೂ., ವೆಚ್ಚದಲ್ಲಿ 100 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸುವುದಕ್ಕೂ ಒಪ್ಪಿಗೆ ನೀಡಲಾಗಿದೆ ಎಂದು ವಿವರಿಸಿದರು.
ಎಸ್ಸಿ, ಎಸ್ಟಿ ಸಮುದಾಯದವರ ಅನುಕೂಲಕ್ಕಾಗಿ 203 ಕೋಟಿ ರೂ., ವೆಚ್ಚದ 4 ಯೋಜನೆಗಳಿಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಪ್ರಮುಖವಾಗಿ ಮೈಸೂರಿನ ಅಶೋಕಪುರಂನಲ್ಲಿನ ಪರಿಶಿಷ್ಟ ಜಾತಿ ಮತ್ತು ಕಾಡಂಚಿನ ಗ್ರಾಮಗಳಲ್ಲಿನ ಹಾಡಿಗಳಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಪಂಗಡ ಹಾಗೂ ಶಿವಮೊಗ್ಗ ಜಿಲ್ಲೆಯ ಮಲ್ಲಿಗೇನಹಳ್ಳಿಯಲ್ಲಿನ ಹಕ್ಕಿಪಿಕ್ಕಿ ಜನಾಂಗದವರ ಬಾಕಿ ವಿದ್ಯುತ್ ಬಿಲ್ನ್ನು ಸರಕಾರದಿಂದ ಪಾವತಿಸುವುದು. ಬುಡಕಟ್ಟು ಸಮುದಾಯದ ಜನರು ವಾಸಿಸುವ ಗ್ರಾಮ ಅಥವಾ ಪ್ರದೇಶಗಳಲ್ಲಿ ರಸ್ತೆ, ಕುಡಿಯುವ ನೀರು, ವಿದ್ಯುತ್ ಸೇರಿದಂತೆ ಇನ್ನಿತರ ಮೂಲಸೌಕರ್ಯ ಒದಗಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ, ಕೆ.ವೆಂಕಟೇಶ್ ಸೇರಿದಂತೆ ಪ್ರಮುಖರಿದ್ದರು.
ನ್ಯಾ. ಮೈಕಲ್ ಡಿ.ಕುನ್ಹಾ 2ನೇ ವರದಿಗೆ ಅಂಗೀಕಾರ
ಈ ಹಿಂದೆ ಬಿಜೆಪಿ ಸರಕಾರದ ಅವಧಿಯಲ್ಲಿ ಕೋವಿಡ್ ಸಂದರ್ಭದಲ್ಲಿ ನಡೆದಿದೆ ಎನ್ನಲಾದ ಅಕ್ರಮ ಪತ್ತೆಗೆ ರಚಿಸಲಾಗಿರುವ ನ್ಯಾ.ಮೈಕಲ್ ಡಿ.ಕುನ್ಹಾ ಕೋವಿಡ್ ವಿಚಾರಣಾ ಆಯೋಗ ಸಲ್ಲಿಸಿದ್ದ 2ನೇ ವರದಿಗೆ ಸಚಿವ ಸಂಪುಟ ಸಭೆಯಲ್ಲಿ ಆಂಗೀಕರಿಸಲಾಗಿದೆ.
ಒಟ್ಟು 1,808 ಪುಟಗಳ 7 ಸಂಪುಟದ 2 ವರದಿಯು ಬಿಬಿಎಂಪಿಯ ನಾಲ್ಕು ವಲಯಗಳು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಗದಗ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ನಡೆದ ಅಕ್ರಮಕ್ಕೆ ಸಂಬಂಧಿಸಿದ ವರದಿಯನ್ನು ನ್ಯಾ. ಕುನ್ಹಾ ಆಯೋಗ ನೀಡಿತ್ತು.
ವರದಿಯಲ್ಲಿ ಬಿಬಿಎಂಪಿಯ ನಾಲ್ಕು ವಲಯಗಳು ಹಾಗೂ ಬೆಂಗಳೂರು ಗ್ರಾಮಾಂತರ, ಗದಗ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ 150 ಕೋಟಿ ರು.ಗೂ ಹೆಚ್ಚಿನ ಮೊತ್ತದ ಅಕ್ರಮ ನಡೆದಿರುವ ಕುರಿತಂತೆ ಉಲ್ಲೇಖಿಸಲಾಗಿತ್ತು. ಅಲ್ಲದೆ, ಬೆಂಗಳೂರು ಗ್ರಾಮಾಂತರ, ಗದಗ ಮತ್ತು ಕೊಪ್ಪಳ ಜಿಲ್ಲೆಗಳ ಹಿಂದಿನ ಜಿಲ್ಲಾಧಿಕಾರಿಗಳ ವಿರುದ್ಧ ಕ್ರಮಕ್ಕೂ ಶಿಫಾರಸು ಮಾಡಲಾಗಿದೆ.
ಆಕ್ಸಿಜನ್ ದುರಂತ ಕುಟುಂಬಸ್ಥರಿಗೆ ಉದ್ಯೋಗ
ಚಾಮರಾಜನಗರ ಆಕ್ಸಿಜನ್ ದುರಂತ ಕುಟುಂಬ ಸದಸ್ಯರಿಗೆ ಇನ್ನು ಕೆಲಸ ಸಿಕ್ಕಿಲ್ಲ ಎಂದು ಕೇಳಿದಾಗ, ಈ ಕುಟುಂಬ ಸದಸ್ಯರಿಗೆ ಉದ್ಯೋಗ ನೀಡುವುದಾಗಿ ನಾವು ಮಾತು ಕೊಟ್ಟಿದ್ದೆವು. ಕೆಲವರಿಗೆ ಹೊರಗುತ್ತಿಗೆ ಆಧಾರದ ಮೇಲೆ ತಾತ್ಕಾಲಿಕವಾಗಿ ಕೆಲಸ ನೀಡಲಾಗಿದೆ. ಕೆಲವರಿಗೆ ನೀಡಬೇಕಾಗಿದೆ. ಇದಕ್ಕೆ ಶಾಶ್ವತ ಪರಿಹಾರ ನೀಡಬೇಕಿದ್ದು, ಪ್ರತಿಯೊಬ್ಬರ ವಿದ್ಯಾರ್ಹತೆ ಹಾಗೂ ಇತರ ವಿಚಾರಗಳ ಪರಿಶೀಲನೆ ಮಾಡುತ್ತಿದ್ದೇವೆ ಎಂದು ಉತ್ತರಿಸಿದರು.
ಸಂಪುಟ ಸಭೆಯ ಪ್ರಮುಖ ನಿರ್ಧಾರ
►ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಚಿಕ್ಕಕಲ್ಲೂರಿನ ಮಂಟೇಸ್ವಾಮಿ, ರಾಚಪ್ಪಾಜಿ ಹಾಗು ಸಿದ್ದಪ್ಪಾಜಿ ಕ್ಷೇತ್ರಗಳ ಅಭಿವೃದ್ಧಿ ಪ್ರಾಧಿಕಾರ ರಚನೆ
►ಮೈಸೂರು ಇಳವಾಲದಲ್ಲಿ ಅಂತರ್ರಾಷ್ಟ್ರೀಯ ಮಟ್ಟದ ಕ್ರೀಡಾಂಗಣ ನಿರ್ಮಾಣ
►ಮಾನವ-ಆನೆ ಸಂಘರ್ಷ ತಡೆಗೆ 210 ಕೋಟಿ ರೂ., ಒದಗಿಸಲು ನಿರ್ಧಾರ. ಅದರ ಮೂಲಕ ಕಾಡಂಚಿನಲ್ಲಿ ರೈಲ್ವೆ ಬ್ಯಾರಿಕೇಡ್ಗಳ ನಿರ್ಮಾಣ
►ಮೈಸೂರು ವಿಮಾನನಿಲ್ದಾಣ ರನ್ ವೇ ವಿಸ್ತರಣೆಗೆ 101 ಕೋಟಿ ರೂ., ವೆಚ್ಚದಲ್ಲಿ ಭೂಸ್ವಾಧಿನ ಪ್ರಕ್ರಿಯೆ
►ಮೈಸೂರು ನಗರದ ಹಳೇ ಜಿಲ್ಲಾಧಿಕಾರಿ ಕಚೇರಿಯಲ್ಲಿ 30 ಕೋಟಿ ರೂ., ವೆಚ್ಚದಲ್ಲಿ ಮ್ಯೂಸಿಯಂ ನಿರ್ಮಾಣ
►ಚಾಮರಾಜನಗರದಲ್ಲಿ ಹೊಸ ಪ್ರವಾಸಿ ಮಂದಿರ ನಿರ್ಮಾಣ
►ಚಾಮರಾಜನಗರದಲ್ಲಿ 15 ಕೋಟಿ ರೂ., ವೆಚ್ಚದಲ್ಲಿ ಕ್ರೀಡಾಂಗಣ ನಿರ್ಮಾಣ
►ಆನೆಗುಂದಿಯಲ್ಲಿನ ಶ್ರೀ ಕೃಷ್ಣದೇವರಾಯ ಸಮಾಧಿ ಅಭಿವೃದ್ಧಿಗೆ ನಿರ್ಧಾರ
►ಚಾಮರಾಜನಗರ ಜಿಲ್ಲೆಯ ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ ಸುಧಾರಿಸಲು 315 ಕೋಟಿ ರೂ. ವೆಚ್ಚದಲ್ಲಿ ಯೋಜನೆ ಅನುಷ್ಠಾನ6
►ದಕ್ಷಿಣ ಕರ್ನಾಟಕ ಪ್ರವಾಸಿ ವೃತ್ತ ಸ್ಥಾಪನೆಗೆ 231.78 ಕೋಟಿ ರೂ., ವೆಚ್ಚದ ಯೋಜನೆ ಸೇರಿದಂತೆ ಪ್ರವಾಸೋದ್ಯಮ ಅಭಿವೃದ್ಧಿ 300 ಕೋಟಿ ರೂ., ಒದಗಿಸಲು ತೀರ್ಮಾನ







