ಪಾಕಿಸ್ತಾನದ ಮೇಲಿನ ಟ್ರಂಪ್ ಪ್ರೇಮ ಭಾರತ ನಿರ್ಲಕ್ಷಿಸಲು ಸಾಧ್ಯವೇ?

ಇತ್ತೀಚೆಗೆ ಭಾರತ-ಪಾಕಿಸ್ತಾನ ಕದನ ವಿರಾಮದಲ್ಲಿ ಯಾರ ಪಾತ್ರವೂ ಇಲ್ಲ ಎಂದು ಪ್ರಧಾನಿ ಮೋದಿ ಟ್ರಂಪ್‌ಗೆ ಫೋನ್‌ನಲ್ಲಿ ಹೇಳಿದ್ದಾರೆ ಎಂದು ಭಾರತ ಅಧಿಕೃತವಾಗಿ ಜಗತ್ತಿಗೆ ತಿಳಿಸಿದೆ.
ಅದಾಗಿ 24 ಗಂಟೆ ಕಳೆಯುವುದರೊಳಗೇ, ಟ್ರಂಪ್ ಕದನ ವಿರಾಮಕ್ಕೆ ತಾನೇ ಕಾರಣ ಎಂದು ಮತ್ತೆ ಹೇಳಿದ್ದಾರೆ.
ಪಾಕಿಸ್ತಾನದ ಸೇನಾ ಮುಖ್ಯಸ್ಥರಿಗೆ ಶ್ವೇತಭವನದಲ್ಲಿ ಔತಣಕೂಟದ ಬಳಿಕ ಟ್ರಂಪ್ ಹೇಳಿದ್ದನ್ನು ಗಮನಿಸಿ: ‘‘ಯುದ್ಧವನ್ನು ಕೊನೆಗೊಳಿಸಿದ್ದಕ್ಕಾಗಿ ನಾನು ಅವರಿಗೆ (ಪಾಕಿಸ್ತಾನದ ಸೇನಾ ಮುಖ್ಯಸ್ಥ ಆಸಿಮ್ ಮುನೀರ್‌ಗೆ ) ಧನ್ಯವಾದ ಹೇಳಲು ಬಯಸುತ್ತೇನೆ ಮತ್ತು ಪ್ರಧಾನಿ ಮೋದಿ ಅವರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ.. ಇಬ್ಬರು ಅತ್ಯಂತ ಬುದ್ಧಿವಂತ ಜನರು ಆ ಯುದ್ಧವನ್ನು ಮುಂದುವರಿಸದಿರಲು ನಿರ್ಧರಿಸಿದ್ದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ಅದು ಪರಮಾಣು ಯುದ್ಧವಾಗಿರಬಹುದು. ಅವರಿಬ್ಬರೂ ಪರಮಾಣು ಶಕ್ತಿಗಳು, ದೊಡ್ಡವರು, ದೊಡ್ಡ, ದೊಡ್ಡ ಪರಮಾಣು ಶಕ್ತಿಗಳು ಮತ್ತು ಅವರು ಅದನ್ನು ನಿರ್ಧರಿಸಿದರು’’ ಎಂದು ಟ್ರಂಪ್ ಹೇಳಿದ್ದಾರೆ.
ಹಾಗಾದರೆ ಟ್ರಂಪ್ ಭಾರತದ ಬಗ್ಗೆ ಕೀಟಲೆ ಮಾಡುತ್ತಿದ್ದಾರೆಯೆ? ಆಸಿಮ್ ಮುನೀರ್‌ರನ್ನು ಪ್ರಧಾನಿ ಮೋದಿ ಜೊತೆ ಸಮೀಕರಿಸಿ ಮಾತಾಡಿ ಟ್ರಂಪ್ ಭಾರತಕ್ಕೆ ಅದೆಂತಹ ಅವಮಾನ ಮಾಡುತ್ತಿದ್ದಾರೆ?
ಅವರ ಈ ಹೇಳಿಕೆಗಳನ್ನು ಕೇಳಿದ ನಂತರ, ಪಹಲ್ಗಾಮ್ ದಾಳಿಯ ನಂತರ ಟ್ರಂಪ್ ಪಾಕಿಸ್ತಾನಕ್ಕೆ ಏಕೆ ಇಷ್ಟೊಂದು ಮಹತ್ವ ನೀಡುತ್ತಿದ್ದಾರೆ ಎಂಬ ಪ್ರಶ್ನೆ ಏಳುತ್ತದೆ. ಭಾರತದ ವಿದೇಶಾಂಗ ನೀತಿ ಅಧಿಕೃತವಾಗಿ ಮೌನವಾಗಿರುವ ಬದಲು ಇದರ ಬಗ್ಗೆ ಅಧಿಕೃತವಾಗಿ ಮಾತನಾಡಬೇಕಿದೆ.
ಮುನೀರ್ ಅವರಿಗೆ ಆಹ್ವಾನದ ಬಗ್ಗೆ ಪತ್ರಕರ್ತ ಸುಶಾಂತ್ ಸಿಂಗ್ ಬರೆದಿದ್ದಾರೆ.
ಪಾಕಿಸ್ತಾನಿ ಸೇನಾ ಮುಖ್ಯಸ್ಥರನ್ನು ಈ ಮಟ್ಟದಲ್ಲಿ ಅಧಿಕೃತವಾಗಿ ಆಹ್ವಾನಿಸಿರುವುದು ಇದೇ ಮೊದಲು. ಅದೂ ಅವರು ಯಾವುದೇ ರಾಜಕೀಯ ಸ್ಥಾನದಲ್ಲಿ ಇಲ್ಲದಿರುವಾಗ ಇದು ನಡೆದಿದೆ.
ಅಯ್ಯುಬ್ ಖಾನ್, ಝಿಯಾವುಲ್ ಹಕ್ ಮತ್ತು ಪರ್ವೇಝ್‌ಮುಷರ‌್ರಫ್ ಅವರು ರಾಷ್ಟ್ರಗಳ ಮುಖ್ಯಸ್ಥರಾದಾಗ ಮಾತ್ರ ಅಮೆರಿಕದ ಅಧ್ಯಕ್ಷರನ್ನು ಭೇಟಿ ಮಾಡಲು ಸಾಧ್ಯವಾಯಿತು.
ಪಾಕಿಸ್ತಾನದ ಮಾಜಿ ಸೇನಾ ಜನರಲ್ ಪರ್ವೇಝ್ ಮುಷರ‌್ರಫ್ ಕೊನೆಯ ಬಾರಿಗೆ ಅಮೆರಿಕದ ಅಧ್ಯಕ್ಷರನ್ನು ಭೇಟಿಯಾಗಿದ್ದು 2001ರಲ್ಲಿ. ಅಂದಿನಿಂದ, ಯಾವುದೇ ಅಮೆರಿಕದ ಅಧ್ಯಕ್ಷರು, ಸೇನಾ ಜನರಲ್ ಅವರನ್ನು ಭೇಟಿ ಮಾಡಿಲ್ಲ. ಹಾಗಾದರೆ ಮುನೀರ್ ಮತ್ತು ಟ್ರಂಪ್ ನಡುವಿನ ಭೇಟಿ ಸಾಮಾನ್ಯ ಘಟನೆಯೇ?
ಭಾರತದ ವಿದೇಶಾಂಗ ನೀತಿಯಲ್ಲಿ ಏನಾಗುತ್ತಿದೆ?
ಪಾಕಿಸ್ತಾನ ಸೇನಾ ಮುಖ್ಯಸ್ಥರಿಗೆ ಅಮೆರಿಕ ಇಷ್ಟೊಂದು ಗೌರವ ನೀಡುತ್ತಿದ್ದರೆ, ಭಾರತದ ದೃಷ್ಟಿಕೋನವೇನು?
2014ರ ಮೊದಲಿನ ಆ ರಾಷ್ಟ್ರ ಎಲ್ಲಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ ಕೂಡ ಕೇಳಿದ್ದಾರೆ.
ಯಾರ ಮಧ್ಯಸ್ಥಿಕೆಯನ್ನೂ ಎಂದಿಗೂ ಸ್ವೀಕರಿಸಿಲ್ಲ ಮತ್ತು ಎಂದಿಗೂ ಹಾಗೆ ಮಾಡುವುದಿಲ್ಲ ಎಂದು ಭಾರತ ಸ್ಪಷ್ಟವಾಗಿ ಹೇಳಿದೆ. ಇದು ಯಾವಾಗಲೂ ಭಾರತದ ನಿಲುವು.
ಆದರೆ ಇದರ ನಂತರವೂ, ಟ್ರಂಪ್ ಮಧ್ಯವರ್ತಿಯಂತೆ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಭಾರತ ನಿರಾಕರಿಸಿದ 24 ಗಂಟೆಗಳ ಒಳಗೆ ಅವರು ಅದನ್ನೇ ಮತ್ತೆ ಹೇಳುತ್ತಾರೆ.
ಮುನೀರ್ ಅವರಿಗೆ ಶ್ವೇತಭವನಕ್ಕೆ ನೇರ ಪ್ರವೇಶ ಹೇಗೆ ಸಿಗುತ್ತಿದೆ? ಇದರ ಹಿಂದಿನ ಕಾರಣವೇನಿರಬಹುದು?
ಅಮೆರಿಕ ಮತ್ತು ಪಾಕಿಸ್ತಾನ ಹೀಗೆ ಹತ್ತಿರವಾಗುತ್ತಿರುವುದು ಭಾರತ ಮತ್ತು ಅಮೆರಿಕ ನಡುವಿನ ಸಂಬಂಧಗಳ ಮೇಲೆ ಯಾವ ಪರಿಣಾಮ ಬೀರುತ್ತದೆ?
ಇದರ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ. ಸರಕಾರ ಯಾವುದೇ ಹೇಳಿಕೆಯನ್ನು ನೀಡುತ್ತಿಲ್ಲ.
ಮುನೀರ್ ಭೇಟಿಯ ನಂತರ ಟ್ರಂಪ್ ಪಾಕಿಸ್ತಾನವನ್ನು ಹೊಗಳುತ್ತಿದ್ದಾರೆ. ಇರಾನ್ ಬಗ್ಗೆ ಅವರ ತಿಳುವಳಿಕೆ ತುಂಬಾ ಚೆನ್ನಾಗಿದೆ ಎನ್ನುತ್ತಿದ್ದಾರೆ.
ಇರಾನ್ ಬಗ್ಗೆ ಪಾಕಿಸ್ತಾನದ ಸೇನಾ ಮುಖ್ಯಸ್ಥರ ಅಭಿಪ್ರಾಯವನ್ನು ಕೇಳಲಾಗುತ್ತಿದ್ದರೆ, ಭಾರತದ ಅಭಿಪ್ರಾಯವನ್ನು ಏಕೆ ಕೇಳುತ್ತಿಲ್ಲ?
ಜಾಗತಿಕ ವಿಷಯಗಳ ಬಗ್ಗೆ ಪ್ರಧಾನಿ ಮೋದಿಗೂ ಉತ್ತಮ ತಿಳುವಳಿಕೆ ಇದೆ ಎಂದು ಇಲ್ಲಿ ಹೇಳಲಾಗುತ್ತಿದೆ. ಆದರೆ ಟ್ರಂಪ್ ಮೋದಿ ಬಗ್ಗೆ ಅಂತಹ ಮಾತುಗಳನ್ನು ಹೇಳಲಿಲ್ಲ.
ಜಾಗತಿಕ ವಿಷಯಗಳ ಬಗ್ಗೆ ತನ್ನ ಅಭಿಪ್ರಾಯವನ್ನು ಪಡೆಯಲಾಗಿದೆ ಎಂದು ಭಾರತ ಹೇಳುತ್ತಿತ್ತು.
ತನ್ನ ಅಭಿಪ್ರಾಯಗಳನ್ನು ಕೇಳಲಾಗುತ್ತಿದೆ ಎನ್ನುತ್ತಿತ್ತು.ಆದರೆ ಟ್ರಂಪ್ ಇರಾನ್ ಬಗ್ಗೆ ಪಾಕಿಸ್ತಾನದ ಅಭಿಪ್ರಾಯವನ್ನು ಹೊಗಳುತ್ತಿದ್ದಾರೆ.
ಭಾರತದ ವಿದೇಶಾಂಗ ಸಚಿವಾಲಯ ದೀರ್ಘ ಹೇಳಿಕೆಗಳನ್ನು ನೀಡುತ್ತದೆ. ಕದನ ವಿರಾಮದಲ್ಲಿ ಅವರ ಪಾತ್ರವಿಲ್ಲ ಎಂದು ಪ್ರಧಾನಿ ಮೋದಿ ಟ್ರಂಪ್‌ಗೆ ಫೋನ್‌ನಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ ಎಂದು ವರದಿಯಾಗಿದೆ.
ಈ ಇಡೀ ಘಟನೆಯ ವೇಳೆ, ಭಾರತ-ಯುಎಸ್ ವ್ಯಾಪಾರ ಒಪ್ಪಂದ ಅಥವಾ ಭಾರತ ಮತ್ತು ಪಾಕಿಸ್ತಾನದ ನಡುವೆ ಅಮೆರಿಕದ ಮಧ್ಯಸ್ಥಿಕೆ ಕುರಿತು ಯಾವುದೇ ಮಟ್ಟದಲ್ಲಿ
ಯಾವುದೇ ಮಾತುಕತೆ ನಡೆದಿಲ್ಲ ಎಂದು ಪ್ರಧಾನಿ ಮೋದಿ ಅಧ್ಯಕ್ಷ ಟ್ರಂಪ್‌ಗೆ ಸ್ಪಷ್ಟವಾಗಿ ಹೇಳಿದರು.
ಕದನ ವಿರಾಮ ಪಾಕಿಸ್ತಾನದ ಒತ್ತಾಯದ ಮೇರೆಗೆ ನಡೆಯಿತು. ಭಾರತ ಎಂದಿಗೂ ಮಧ್ಯಸ್ಥಿಕೆಯನ್ನು ಒಪ್ಪಿಕೊಂಡಿಲ್ಲ ಅಥವಾ ಒಪ್ಪುವುದಿಲ್ಲ ಎಂದು ಪ್ರಧಾನಿ ಮೋದಿ ಒತ್ತಿ ಹೇಳಿದರು.
ಈ ವಿಷಯದ ಬಗ್ಗೆ ಭಾರತದಲ್ಲಿ ಸಂಪೂರ್ಣ ರಾಜಕೀಯ ಒಮ್ಮತವಿದೆ.
ಆದರೆ ಸತ್ಯವೆಂದರೆ ಅಮೆರಿಕದಿಂದ ಕರೆ ಬರುತ್ತಿತ್ತು. ಭಾರತವೇ ಅದನ್ನು ಒಪ್ಪಿಕೊಂಡಿದೆ.
ಪ್ರಶ್ನೆ ಟ್ರಂಪ್ ಅವರ ಹೇಳಿಕೆಯ ಬಗ್ಗೆ ಅಲ್ಲ. ಈ 35 ನಿಮಿಷಗಳ ಸಂಭಾಷಣೆಯಲ್ಲಿ, ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ಸಹಾಯ ಮಾಡುವುದಾಗಿ ಅಮೆರಿಕ ಹೇಳಿದೆಯೆ?
ಹಾಗಾದರೆ ಅದು ಏನು ಸಹಾಯ ಮಾಡಿದೆ?
ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಅಮೆರಿಕ ಭಾರತಕ್ಕೆ ಸಹಾಯ ಮಾಡುತ್ತಿದೆ ಎಂದು ಅನ್ನಿಸುತ್ತದೆಯೆ?
ಕದನ ವಿರಾಮಕ್ಕೆ ತಾನೇ ಕಾರಣ ಎಂದು ಟ್ರಂಪ್ ಹೇಳುವುದನ್ನು ಸರಿಯಾಗಿ ನಿಲ್ಲಿಸಿಲ್ಲ. ಈಗ ಅವರು ಪಾಕಿಸ್ತಾನದ ಸೇನಾ ಮುಖ್ಯಸ್ಥ ಆಸಿಮ್ ಮುನೀರ್ ಯುದ್ಧ ನಿಲ್ಲಿಸುವಲ್ಲಿ ತುಂಬಾ ಸಹಾಯ ಮಾಡಿದ್ದಾರೆ ಎಂದು ಬೇರೆ ಹೇಳುತ್ತಿದ್ದಾರೆ.
ಅಮೆರಿಕ ಯುದ್ಧ ನಿಲ್ಲಿಸಲು ಮಧ್ಯಸ್ಥಿಕೆ ವಹಿಸಿದೆ ಮತ್ತು ಪಾಕಿಸ್ತಾನದ ಸೈನ್ಯ ಯುದ್ಧ ನಿಲ್ಲಿಸಲು ಸಹಾಯ ಮಾಡಿದೆ ಎಂಬಂತೆ ಹೇಳಲಾಗುತ್ತಿದೆ.
ನಮ್ಮ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರು ಅಮೆರಿಕದ ಪಾತ್ರವಿಲ್ಲ ಎಂದು ಹೇಳಿದರು. ಪಾಕಿಸ್ತಾನದ ಕೋರಿಕೆಯ ಮೇರೆಗೆ ಭಾರತ ಯುದ್ಧವನ್ನು ನಿಲ್ಲಿಸಿತು.
ಪ್ರಶ್ನೆ, ಪಾಕಿಸ್ತಾನದ ಕೋರಿಕೆಯ ಮೇರೆಗೆ ಭಾರತ ತನ್ನ ಯಶಸ್ವಿ ಕಾರ್ಯಾಚರಣೆಯನ್ನು ಏಕೆ ನಿಲ್ಲಿಸಿತು? ಮೂರು ದಿನಗಳಲ್ಲಿ ಏಕೆ ಹಿಂದೆ ಸರಿಯಲಾಯಿತು? ಭಾರತವೇ ಮುನ್ನಡೆ ಸಾಧಿಸಿದ್ದಾಗ ಹಿಂದೆ ಸರಿದದ್ದೇಕೆ?
ಪಾಕಿಸ್ತಾನ ವಿನಂತಿ ಮಾಡಿದೊಡನೆ, ಅದು ಭಯೋತ್ಪಾದಕ ದೇಶವೆಂಬುದನ್ನು ಮರೆತುಬಿಡಲು ಸಾಕಾಯಿತೆ? ಪಾಕಿಸ್ತಾನವನ್ನು ಏಕೆ ನಂಬಲಾಯಿತು?
ಎಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ಭಯೋತ್ಪಾದಕ ದಾಳಿ ನಡೆಸಿದ ಭಯೋತ್ಪಾದಕರು ಎಲ್ಲಿದ್ದಾರೆ ಎಂಬುದಕ್ಕೂ ಉತ್ತರವಿಲ್ಲ. ಅವರನ್ನು ಇನ್ನೂ ಏಕೆ ಹಿಡಿಯಲಾಗಿಲ್ಲ?
ಕದನ ವಿರಾಮದಲ್ಲಿ ಟ್ರಂಪ್ ಅವರ ಯಾವುದೇ ಪಾತ್ರವಿಲ್ಲ ಎಂದು ಮೋದಿ ಹೇಳುತ್ತಿದ್ದಂತೆ, ಈವರೆಗೂ ಬಾಯಿಗೆ ಬೀಗ ಹಾಕಿಕೊಂಡಿದ್ದ ಮಡಿಲ ಮೀಡಿಯಾಗಳು ಎದ್ದು ನಿಂತು ಮತ್ತೆ ಸಿಕ್ಕಾಪಟ್ಟೆ ಉತ್ಸಾಹದಿಂದ ಅರಚಾಡತೊಡಗಿದವು.
ಪ್ರಧಾನಿ ಮೋದಿ ಟ್ರಂಪ್ ಬಾಯಿ ಮುಚ್ಚಿಸಿದ್ದಾರೆ ಎಂದೆಲ್ಲ ಕೊಚ್ಚಿಕೊಳ್ಳಲಾಯಿತು. ಈಗ ಟ್ರಂಪ್ ಮತ್ತೆ ಮಾತನಾಡಿದಾಗ ಅಂತ ಯಾವ ಹೆಡ್‌ಲೈನ್‌ಗಳೂ ಇಲ್ಲ. ಮತ್ತೆ ಮಡಿಲ ಮೀಡಿಯಾ ಸೈಲೆಂಟಾಗಿಬಿಟ್ಟಿದೆ.
ಅದು ಜನರನ್ನು ಮೂರ್ಖರನ್ನಾಗಿ ಮಾಡುವುದೇ ಹೀಗೆ.
ಭಾರತದ ಹೇಳಿಕೆಯ ನಂತರ ಟ್ರಂಪ್ ಅವರನ್ನು ಕೇಳಿದಾಗ, ಅವರು ತಮ್ಮ ಉತ್ತರದಲ್ಲಿ ಭಾರತದ ಉತ್ತರವನ್ನು ಗಮನಿಸಲಿಲ್ಲ. ಅವರು ನೇರವಾಗಿ, ತಾನೇ ಯುದ್ಧ ನಿಲ್ಲಿಸಿದೆ ಎಂದು ಹೇಳುತ್ತಿದ್ದಾರೆ.
‘‘ನಾನು ಪಾಕಿಸ್ತಾನವನ್ನು ಪ್ರೀತಿಸುತ್ತೇನೆ’’ ಎನ್ನುತ್ತಾರೆ.
ಯುದ್ಧ ನಿಲ್ಲಿಸಿದ ಕ್ರೆಡಿಟ್ ಅನ್ನು ಅವರು ತೆಗೆದುಕೊಳ್ಳುತ್ತಿದ್ದಾರೆ. ಯುದ್ಧ ತಪ್ಪಿಸುವ ತನ್ನ ನಿರ್ಧಾರವನ್ನು ಶ್ಲಾಘಿಸಲು ಮುನೀರ್ ತಮಗೆ ಕರೆ ಮಾಡಿದ್ದಾಗಿ ಟ್ರಂಪ್ ಹೇಳಿದ್ದಾರೆ.
ಎರಡು ದೇಶಗಳ ನಡುವಿನ ಕದನ ವಿರಾಮಕ್ಕಾಗಿ ಮುನೀರ್ ಟ್ರಂಪ್‌ಗೆ ಕ್ರೆಡಿಟ್ ನೀಡುತ್ತಿದ್ದಾರೆ. ಇದಕ್ಕಾಗಿ ನೊಬೆಲ್ ಶಾಂತಿ ಪ್ರಶಸ್ತಿ ನೀಡಬೇಕೆಂದು ಮುನೀರ್ ಪ್ರತಿಪಾದಿಸುತ್ತಿದ್ದಾರೆ.
ಇರಾನ್‌ನ ಪರಮಾಣು ತಾಣಗಳ ಮೇಲೆ ಇಸ್ರೇಲ್ ದಾಳಿಯನ್ನು ತಡೆಯಲು ಟ್ರಂಪ್‌ಗೆ ಸಾಧ್ಯವಾಗಲಿಲ್ಲ.ಹಾಗಿರುವಾಗ, ಅವರು ಭಾರತದ ಬಗ್ಗೆ ಯುದ್ಧ ನಿಲ್ಲಿಸಿದಂತಹ ಹೇಳಿಕೆಗಳನ್ನು ಹೇಗೆ ನೀಡುತ್ತಿದ್ದಾರೆ?
ಇದು ಭಾರತದ ಪರಮಾಣು ಸಾರ್ವಭೌಮತ್ವದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುವುದಿಲ್ಲವೇ?
ಭಾರತ ಇರಾನ್‌ನ ಪರಮಾಣು ಸಾರ್ವಭೌಮತ್ವದ ಹಕ್ಕಿನ ಬಗ್ಗೆ ಏಕೆ ಮಾತನಾಡುತ್ತಿಲ್ಲ? ಕಳೆದ 1 ತಿಂಗಳಲ್ಲಿ ಡೊನಾಲ್ಡ್ ಟ್ರಂಪ್ ಅವರು ಭಾರತ-ಪಾಕಿಸ್ತಾನದ ಸಂಘರ್ಷದಲ್ಲಿ ತಾವು ಮಧ್ಯಸ್ಥಿಕೆ ವಹಿಸಿದ್ದಾಗಿ 13-14 ಬಾರಿ ಹೇಳಿಕೊಂಡಿದ್ದಾರೆ.
ಇದು ಒಪ್ಪುವಂಥದ್ದಲ್ಲ.
ಭಾರತದ ಪ್ರಧಾನ ಮಂತ್ರಿ ಹುದ್ದೆಗೆ ಜಾಗತಿಕವಾಗಿ ಒಂದು ಗಂಭೀರತೆ, ಘನತೆ, ಪ್ರತಿಷ್ಠೆ ಇದೆ. ಅವರನ್ನು ಪಾಕಿಸ್ತಾನದ ಜನರಲ್ ಮುನೀರ್ ಅವರೊಂದಿಗೆ ಸಮೀಕರಿಸುವುದು ಒಪ್ಪಲಾಗದ ವಿಷಯ.
ಟ್ರಂಪ್ ಹೇಳಿದ್ದನ್ನೇ ಹೇಳುತ್ತಿರುವ ಬಗ್ಗೆ ಪ್ರಧಾನಿಯೇ ಬಹಿರಂಗವಾಗಿ ಉತ್ತರಿಸಬೇಕಿದೆ.
ಇಂದು, ಇಡೀ ಜಗತ್ತಿನಲ್ಲಿ ಭಾರತದ ವಿದೇಶಾಂಗ ನೀತಿಯ ಬಗ್ಗೆಯೇ ಪ್ರಶ್ನೆ ಎದ್ದಿದೆ. ಪ್ರಧಾನಿ ಮೌನವಾಗಿದ್ದಾರೆ.
ಆದರೆ ಅವರು ಇದನ್ನು ಗಂಭೀರವಾಗಿ ಪರಿಗಣಿಸಬೇಕಿದೆ ಮತ್ತು ಅವರ ಹುದ್ದೆಯ ಘನತೆ, ಗೌರವ ಉಳಿಸಲು, ಟ್ರಂಪ್ ಹೇಳಿಕೆಗಳು ತಪ್ಪು ಎಂದು ಸಾರ್ವಜನಿಕವಾಗಿ ಹೇಳಬೇಕಿದೆ.
ಭಾರತೀಯ ಅಧಿಕಾರಿಯೊಬ್ಬರು ಅದಕ್ಕೆ ಉತ್ತರಿಸಿದರೆ ಉಪಯೋಗವಿಲ್ಲ. ಭಾರತದ ಪ್ರಧಾನ ಮಂತ್ರಿಯೇ ಅದಕ್ಕೆ ಉತ್ತರಿಸಬೇಕು.
ಮೋದಿ ಅವರನ್ನು ವಾಶಿಂಗ್ಟನ್‌ಗೆ ಬರುವಂತೆ ಕೇಳಿದಾಗ,
ಪ್ರಧಾನಿ ಮೋದಿ ತಮ್ಮ ಇತರ ಕಾರ್ಯಕ್ರಮಗಳನ್ನು ಉಲ್ಲೇಖಿಸಿ ನಿರಾಕರಿಸಿದರು. ಆದರೆ ಯಾವುದೇ ದೇಶದ ಪ್ರಧಾನಿಯನ್ನು ಹೀಗೆ ಕರೆಯುವುದು ಗೌರವಯುತವೇ? ನೀವು ನೊಯ್ಡಾಗೆ ಬಂದಿದ್ದರೆ ದಿಲ್ಲಿಗೂ ಬನ್ನಿ ಎಂದು ಕರೆದ ಹಾಗಾಯಿತಲ್ಲವೆ?
ಅಮೆರಿಕದ ಅಧ್ಯಕ್ಷರು ಈ ಮೊದಲು ಈ ರೀತಿ ಆಹ್ವಾನಿಸಿದ್ದಿದೆಯೆ? ನೀವು ಕೆನಡಾದಿಂದ ವಾಷಿಂಗ್ಟನ್ ಮೂಲಕ ದಿಲ್ಲಿಗೆ ಹೋಗಬಹುದು ಎಂದರೆ ಏನರ್ಥ?
ಜಿ 7 ಆರಂಭಕ್ಕೆ ಒಂದು ವಾರ ಇರುವಾಗಲೂ, ಆಹ್ವಾನ ಬಂದಿರಲಿಲ್ಲ. ಭಾರತ ಈ ಬಾರಿ ಭಾಗವಹಿಸುತ್ತದೆಯೇ ಎಂಬ ಅನುಮಾನವಿತ್ತು. ಆಹ್ವಾನ ಕೊನೆಯ ಕ್ಷಣದಲ್ಲಿ ಬಂತು ಮತ್ತು ಪ್ರಧಾನಿ ಮೋದಿ ಅದನ್ನು ಸ್ವೀಕರಿಸಿದರು.
ಪ್ರಧಾನಿ ಮೋದಿಯನ್ನು ಜಿ 7ಗೆ ಆಹ್ವಾನಿಸುವುದರ ಹಿಂದೆ ಟ್ರಂಪ್ ಯೋಜನೆ ಏನಾದರೂ ಇದ್ದಿರಬಹುದೆ?
ಅಲ್ಲಿಂದ ಅಮೆರಿಕಕ್ಕೆ ಕರೆಸಿ ಮತ್ತೊಂದು ಬಲೆಗೆ ಸಿಲುಕಿಸಬಹುದು ಎಂದೇನಾದರೂ ಇತ್ತೆ? ಟ್ರಂಪ್ ಜಿ7 ಸಭೆಯನ್ನು ತಪ್ಪಿಸಿಕೊಂಡಿರುವುದರ ಹಿಂದೆ ಯಾವುದೇ ತುರ್ತು ಕಾರಣವಿದೆ ಎಂದು ಅವರ ವೇಳಾಪಟ್ಟಿ ಸೂಚಿಸುವುದಿಲ್ಲ.
ವಿದೇಶಾಂಗ ನೀತಿಯ ಬಗ್ಗೆ ಇಲ್ಲಿನ ಹಿಂದಿ ಮಾತನಾಡುವ ರಾಜ್ಯಗಳಲ್ಲಿ ದಾರಿತಪ್ಪಿಸುವ ಪ್ರಚಾರ ಮಾಡಲಾಗುತ್ತಿತ್ತು.
ಹಿಂದಿ ಮಾತನಾಡುವ ರಾಜ್ಯಗಳ ಜನರಿಗೆ ವಿದೇಶಾಂಗ ನೀತಿಯ ಫಲಿತಾಂಶ ಏನೆಂದು ಹೇಳಲಾಗಿಲ್ಲ.
ಅಮೆರಿಕ ಭಾರತದ ಜನರನ್ನು ಕೈಕೋಳ ಹಾಕಿ ಕಳಿಸಿದಾಗ, ಭಾರತ ಇದನ್ನು ಆಕ್ಷೇಪಿಸಲಿಲ್ಲ. ಆದರೆ ಭಾಷಣದಲ್ಲಿ ಮಾತ್ರ, ಜಗತ್ತು ಭಾರತದ ಮಾತನ್ನು ಕೇಳುತ್ತಿದೆ ಎಂದು ಅಬ್ಬರಿಸಲಾಗುತ್ತಿದೆ.
ಈ ಮಾರ್ಚ್ 16ರಂದು ಲೆಕ್ಸ್ ಫ್ರೀಡ್‌ಮನ್ ಅವರೊಂದಿಗಿನ ಸಂದರ್ಶನದಲ್ಲಿ ಮೋದಿ, ‘‘ಭಾರತ ಶಾಂತಿಯ ಬಗ್ಗೆ ಮಾತನಾಡುವಾಗ, ಜಗತ್ತು ನಮ್ಮ ಮಾತನ್ನು ಕೇಳುತ್ತದೆ. ಏಕೆಂದರೆ ಭಾರತ ಗೌತಮ ಬುದ್ಧ ಮತ್ತು ಮಹಾತ್ಮಾ ಗಾಂಧಿಯವರ ದೇಶ’’ ಎಂದು ಹೇಳಿದರು.
ಬಿಜೆಪಿ ಸಂಸದ ರವಿಶಂಕರ್ ಪ್ರಸಾದ್ ಸಂಸದರ ತಂಡದೊಂದಿಗೆ ವಿದೇಶ ಪ್ರವಾಸ ಮುಗಿಸಿ ಪಾಟ್ನಾಗೆ ಹಿಂದಿರುಗಿದಾಗ, ರಾಹುಲ್ ಗಾಂಧಿಯವರಿಗೆ ವಿದೇಶಾಂಗ ನೀತಿ ಅರ್ಥವಾಗುತ್ತಿಲ್ಲ ಎಂದು ಹೇಳಿದರು.
ರಾಹುಲ್ ಗಾಂಧಿ ಮತ್ತು ದೇಶದ ಉಳಿದವರಿಗೂ ಅರ್ಥವಾಗುವಂತೆ ಈ ಪ್ರಶ್ನೆಗಳಿಗೆ ಉತ್ತರಿಸುವುದಕ್ಕಾದರೂ ಪ್ರಧಾನಿ ಸಂಸತ್ತಿನ ಅಧಿವೇಶನ ಕರೆಯಬೇಕಲ್ಲವೆ?
ವಿದೇಶಾಂಗ ನೀತಿಯ ಮಾಸ್ಟರ್ಸ್ ಎಂದು ಹೇಳಿಕೊಂಡವರು, ಈ ಸರಳ ಪ್ರಶ್ನೆಗಳಿಗೆ ಏನು ಉತ್ತರಿಸಬೇಕೆಂದು ಅವರೇ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲವೆ?
ಮೊದಲ ಅವಧಿಯಲ್ಲಿ, ಅಧ್ಯಕ್ಷ ಟ್ರಂಪ್ ಮತ್ತು ಪ್ರಧಾನಿ ಮೋದಿ ನಡುವಿನ ಸ್ನೇಹದ ಬಗ್ಗೆ ದೊಡ್ಡ ಕಥೆಗಳನ್ನು ಹಬ್ಬಿಸಲಾಯಿತು. ರ್ಯಾಲಿಗಳ ಮೇಲೆ ರ್ಯಾಲಿಗಳು ನಡೆದವು.
ಆದರೆ ಇಷ್ಟೆಲ್ಲಾ ಆದ ಮೇಲೆ ಈಗ, ಪಾಕಿಸ್ತಾನಕ್ಕೆ ಒಳ್ಳೆಯ ದಿನಗಳು ಬಂದಿವೆ. ಪಾಕಿಸ್ತಾನದ ಜನರಲ್ ಮುನೀರ್‌ಗೆ ಒಳ್ಳೆಯ ದಿನಗಳು ಬಂದಿವೆ.
ಪ್ರಶ್ನೆ ಕೇಳಬೇಕಾದ ನಾವು ಸುಮ್ಮನಿದ್ದೇವೆ.







