Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಕೆಪಿಎಸ್‌ಸಿ ಸುಧಾರಣೆ ಸಾಧ್ಯವೇ?

ಕೆಪಿಎಸ್‌ಸಿ ಸುಧಾರಣೆ ಸಾಧ್ಯವೇ?

ಶಶಿಕಾಂತ ಯಡಹಳ್ಳಿಶಶಿಕಾಂತ ಯಡಹಳ್ಳಿ2 Aug 2026 11:23 AM IST
share
ಕೆಪಿಎಸ್‌ಸಿ ಸುಧಾರಣೆ ಸಾಧ್ಯವೇ?

ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ)ಕ್ಕೆ ಭಾರತದ ಸಂವಿಧಾನದ 315 ಮತ್ತು 323 ನೇ ವಿಧಿಗಳ ಅಡಿಯಲ್ಲಿ ಸ್ವತಂತ್ರ ಸಂಸ್ಥೆ ಸ್ಥಾನಮಾನ ಕೊಡಲಾಗಿದೆ. ಈ ಸಂಸ್ಥೆಗೆ ಅಧ್ಯಕ್ಷರು ಮತ್ತು ಸದಸ್ಯರನ್ನು ರಾಜ್ಯಪಾಲರು ನೇಮಕಮಾಡುತ್ತಿದ್ದು ಅವರ ಅವಧಿ ಆರು ವರ್ಷಗಳದ್ದಾಗಿರುತ್ತದೆ.

ಇದು ಸರಕಾರಿ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಕೆಲಸವನ್ನು ಮಾಡುತ್ತಿದೆ.

ಮೈಸೂರು ಸಂಸ್ಥಾನದಲ್ಲಿ 1892ರಲ್ಲೇ ದಿವಾನ್ ಕೆ. ಶೇಷಾದ್ರಿ ಅಯ್ಯರ್‌ರವರ ಕಾಲದಲ್ಲಿ ಸಿವಿಲ್ ಸರ್ವೀಸ್ ಪರೀಕ್ಷೆಗಳು ಪ್ರಾರಂಭವಾದವು. ನಂತರ 1921ರಲ್ಲಿ ಕೇಂದ್ರಿಕೃತ ನೇಮಕಾತಿ ಮಂಡಳಿ ಬಂತು. ಸ್ವಾತಂತ್ರ್ಯಾನಂತರ ಸಾಂವಿಧಾನಾತ್ಮಕ ಸ್ಥಾನಮಾನ ಪಡೆದು ಆಧುನಿಕ ರೂಪ ಪಡೆಯಿತು.

1951 ಮೇ 18ರಂದು ಆರಂಭಗೊಂಡ ಈ ಸರಕಾರಿ ಸಂಸ್ಥೆಗೆ ಈಗ 75 ವರ್ಷಗಳು ತುಂಬಿವೆ. 1973ರಲ್ಲಿ ಮೈಸೂರು ರಾಜ್ಯ ‘ಕರ್ನಾಟಕ’ ಎಂದು ಮರುನಾಮಕರಣ ಆದಾಗ ‘ಕರ್ನಾಟಕ ಲೋಕಸೇವಾ ಆಯೋಗ’ ಎನ್ನುವ ಹೆಸರು ಅಸ್ತಿತ್ವಕ್ಕೆ ಬಂತು. ಅವತ್ತಿನಿಂದ ರಾಜ್ಯದ ಅತ್ಯುನ್ನತ ನೇಮಕಾತಿ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ. ಕಾಲಕಾಲಕ್ಕೆ ಸಿವಿಲ್ ಮತ್ತು ಇಲಾಖಾ ಪರೀಕ್ಷೆಗಳನ್ನು ನಡೆಸುವುದು, ನೇಮಕಾತಿ ವಿಧಾನಗಳ ಬಗ್ಗೆ ಸರಕಾರಕ್ಕೆ ಸಲಹೆ ಕೊಡುವುದು ಹಾಗೂ ಭಡ್ತಿ, ವರ್ಗಾವಣೆ ಮತ್ತು ಶಿಸ್ತು ಕ್ರಮಗಳ ಬಗ್ಗೆ ಸಲಹೆ ಕೊಡುವ ಕೆಲಸವನ್ನು ಕೆಪಿಎಸ್‌ಸಿ ಮಾಡುತ್ತಾ ಬಂದಿದೆ.

ಆದರೆ ಕಳೆದ ಕೆಲವು ದಶಕಗಳಿಂದ ನಡೆದ ಹಲವು ವಿವಾದಗಳು ಮತ್ತು ಹಗರಣಗಳು ಈ ಸಂಸ್ಥೆಯ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸುವಂತಿವೆ.

ಕಳೆದ ಎರಡು ದಶಕಗಳಿಂದ ಕೆಪಿಎಸ್‌ಸಿ ನೇಮಕಾತಿ ಪ್ರಕ್ರಿಯೆಯಲ್ಲಿ ಹಲವು ದೊಡ್ಡ ಹಗರಣಗಳಿಗೆ ಸಾಕ್ಷಿಯಾಗಿದೆ. ಲಂಚ ಹಗರಣ, ನೆಪೋಟಿಸಂ, ಒಎಂಆರ್ ತಿದ್ದುಪಡಿ, ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಮಧ್ಯವರ್ತಿಗಳ ತಂತ್ರಗಳು ಆಗಾಗ ಸದ್ದು ಮಾಡುತ್ತಲೇ ಇವೆ. 2011ರಲ್ಲಿ ಗೆಜೆಟೆಡ್ ಪ್ರೊಬೇಷನರಿ ನೇಮಕಾತಿಯಲ್ಲಿ ರೂ. 45 ಲಕ್ಷದಿಂದ 1.5 ಕೋಟಿಯ ವರೆಗೆ ಲಂಚ ಪಡೆದ ಆರೋಪ ಬಂದಿತ್ತು. ಸಿಐಡಿ ತನಿಖೆಗೂ ಸರಕಾರ ಆದೇಶಿಸಿತ್ತು. ಯಾರಿಗೂ ಶಿಕ್ಷೆಯಾಗಲೇ ಇಲ್ಲ. 2025ರಲ್ಲಿ ಸರಕಾರ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡದೆ ಪ್ರಕರಣವೇ ಮುಚ್ಚಿಹೋಯಿತು.

2021ರಲ್ಲಿ ಈಆಂ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆಯಾಗಿ ಪರೀಕ್ಷೆಯನ್ನೇ ರದ್ದು ಪಡಿಸಲಾಗಿತ್ತು.

2023ರಲ್ಲಿ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಹುದ್ದೆ ಆಯ್ಕೆಯಲ್ಲಿ ಒಎಂಆರ್ ಶೀಟ್ ತಿದ್ದುಪಡಿ ಮಾಡಿದ ಹಗರಣ ಬೆಳಕಿಗೆ ಬಂದಿತ್ತು. 10 ಅಭ್ಯರ್ಥಿಗಳ ಆಯ್ಕೆಯನ್ನು ರದ್ದು ಪಡಿಸಲಾಯಿತು.

ಈಗ 2026ರಲ್ಲಿ ಸಂಸ್ಥೆ ಅಧ್ಯಕ್ಷರ ನೇಪೋಟಿಸಂ ಅಂದರೆ ಕೌಟುಂಬಿಕ ಒಲವು ಪ್ರಕರಣ ಈಗ ಸುದ್ದಿಯಲ್ಲಿದೆ. ಈಗ ಕೆಪಿಎಸ್‌ಸಿ ಅಧ್ಯಕ್ಷರಾಗಿದ್ದ ಶಿವಶಂಕರಪ್ಪ ಸಾಹುಕಾರ್ ನಕಲಿ ಆದಾಯ ಪ್ರಮಾಣ ಪತ್ರ ಸೃಷ್ಟಿಸಿ ಒಬಿಸಿ ಮೀಸಲಾತಿ ಕೋಟಾದಲ್ಲಿ ತನ್ನ ಪುತ್ರಿಯರಿಗೆ ಇಂಡಸ್ಟ್ರಿಯಲ್ ಎಕ್ಸ್‌ಟೆನ್ಶನ್ ಆಫೀಸರ್ ಹಾಗೂ ಜೂನಿಯರ್ ಇಂಜಿನಿಯರ್ ಹುದ್ದೆಗಳಿಗೆ ಆಯ್ಕೆ ಮಾಡಿಕೊಂಡಿದ್ದರು. ಇದು ಬಹಿರಂಗವಾಗುತ್ತಿದ್ದಂತೆ ಜುಲೈ13ರಂದು ರಾಜ್ಯಪಾಲರು ಶಿವಶಂಕರಪ್ಪನವರನ್ನು ಅಮಾನತು ಮಾಡಿ ಕಲಂ 317 (1) ರ ಅಡಿಯಲ್ಲಿ ಸುಪ್ರೀಂ ಕೋರ್ಟ್ ತನಿಖೆಗೆ ಶಿಫಾರಸು ಮಾಡಿದರು.

ಅಷ್ಟೇ ಅಲ್ಲ, ಈ ಮಹಾಭ್ರಷ್ಟ ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರ್ 400 ವೆಟರ್ನರಿ ಆಫೀಸರ್ ಹುದ್ದೆ ನೇಮಕಾತಿಯಲ್ಲಿ ಲಂಚಾವತಾರಿಯಾದರು. ಪ್ರತಿಯೊಂದು ಹುದ್ದೆಗೂ 70ರಿಂದ 80 ಲಕ್ಷ ರೂ. ಎಂದು ಫಿಕ್ಸ್ ಮಾಡಿ ಪಡೆದಿದ್ದರು. ಅದಕ್ಕಾಗಿ ಹಣ ಕೊಟ್ಟವರ ಒಎಂಆರ್ ಶೀಟನ್ನು ತಿದ್ದುಪಡಿ ಮಾಡಿದ್ದರು. ಪ್ರಶ್ನೆಪತ್ರಿಕೆಯನ್ನೂ ಮಾರಿಕೊಂಡಿದ್ದರು. ರೆಸಾರ್ಟ್ ಗಳಲ್ಲಿ ಉತ್ತರಗಳನ್ನು ಬರೆಯಿಸಿದ್ದರೆನ್ನಲಾಗಿದೆ. ಈ ಭ್ರಷ್ಟಾಚಾರಿಯ ಲಂಚಬಾಕತನ ವೀಡಿಯೊ ಮೂಲಕ ಬಹಿರಂಗವಾಗಿ ಶಿವಶಂಕರ್ ಮತ್ತು ಇತರ 29 ಅಭ್ಯರ್ಥಿಗಳ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ. ಶಿವಶಂಕರ್ ಮೇಲೆ ವೆಟರ್ನರಿ ಹುದ್ದೆ ಲಂಚ ಹಾಗೂ ಅವರ ಪುತ್ರಿಯರ ಅಕ್ರಮ ನೇಮಕಾತಿ ಪ್ರಕರಣ ಕುರಿತು ಎರಡು ಎಫ್‌ಐಆರ್ ದಾಖಲಿಸಲಾಗಿದೆ. ಕೆಪಿಎಸ್‌ಸಿ ಆಂತರಿಕ ತನಿಖಾ ಸಂಸ್ಥೆ ಸಮಿತಿ ರಚಿಸಿದೆ. ಆಯ್ಕೆ ಪಟ್ಟಿಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ. ಸಂಪೂರ್ಣ ಹಗರಣದ ತನಿಖೆಯನ್ನು ಸಿಐಡಿ ಸಂಸ್ಥೆಗೆ ವಿಚಾರಣೆಗಾಗಿ ವರ್ಗಾಯಿಸಲಾಗಿದೆ.

ಕರ್ನಾಟಕ ಹೈಕೋರ್ಟ್ ಈ ಹಗರಣವನ್ನು Daylight fraud ಎಂದು ಕರೆದು ಸಿಬಿಐ ತನಿಖೆ ಬಗ್ಗೆ ಸರಕಾರದಿಂದ ಸಮರ್ಥನೆ ಕೇಳುತ್ತಿದೆ. ವಿರೋಧ ಪಕ್ಷಗಳು 800 ಕೋಟಿ ರೂ. ಹಗರಣ ಎಂದು ಆರೋಪಿಸಿ ಸಿಬಿಐ ಅಥವಾ ನ್ಯಾಯಾಂಗ ತನಿಖೆಗೆ ಆಗ್ರಹಿಸುತ್ತಿವೆ.

ಸರಕಾರಿ ಹುದ್ದೆ ನೇಮಕಾತಿಯ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯ ಕೊರತೆ ಹೆಚ್ಚಾಗಿದೆ. ಮಧ್ಯವರ್ತಿ ಏಜೆಂಟ್‌ಗಳ ಪ್ರಭಾವ ಅತಿಯಾಗಿದೆ. ಒಎಂಆರ್ ತಿದ್ದುಪಡಿ, ಕೃತಕ ಅಂಕಗಳ ಹೆಚ್ಚಳ, ಪ್ರಭಾವಿಗಳಿಗೆ ಆದ್ಯತೆ, ಪ್ರಶ್ನೆ ಪತ್ರಿಕೆ ಸೋರಿಕೆ, ಪರೀಕ್ಷೆ ರದ್ದು ಮತ್ತು ಮರುಪರೀಕ್ಷೆಗಳಿಂದಾಗಿ ನಿಜವಾದ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತಿದೆ. ಆಯ್ಕೆ ಪ್ರಕ್ರಿಯೆಯ ಅತಿಯಾದ ವಿಳಂಬದಿಂದಾಗ ಕೆಲವು ಅಭ್ಯರ್ಥಿಗಳ ವಯಸ್ಸಿನ ಮಿತಿ ಮೀರಿ ಹೋಗಿರುತ್ತದೆ. ಹೀಗಾಗಿ ಈ ಎಲ್ಲಾ ಹಗರಣಗಳಿಂದಾಗಿ ಕೆಪಿಎಸ್‌ಸಿ ಮೇಲೆ ನಂಬಿಕೆ ಇಲ್ಲವಾಗಿದೆ. ಕೆಪಿಎಸ್‌ಸಿ ಆಯ್ಕೆ ಪ್ರಕ್ರಿಯೆಯ ಸುಧಾರಣೆಗಾಗಿ ಪಿಸಿ ಹೊಟಾ ಸಮಿತಿ ವರದಿ ಕೊಟ್ಟಿದೆಯಾದರೂ ಅವುಗಳ ಅನುಷ್ಠಾನವನ್ನು ಬೇಕೆಂತಲೇ ಜಾರಿಗೆ ತರಲಾಗಿಲ್ಲ.

ವಿರೋಧ ಪಕ್ಷ ಬಿಜೆಪಿ ಕೆಪಿಎಸ್‌ಸಿಯಲ್ಲಿ ನಡೆದ ಭ್ರಷ್ಟಾಚಾರವನ್ನು ಪ್ರಶ್ನಿಸುತ್ತಿದೆ. ಆದರೆ ಈ ಸಾಹುಕಾರ ಕೆಪಿಎಸ್‌ಸಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು ಬಿಜೆಪಿಯ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ. 2019ರಲ್ಲಿ ಯಡಿಯೂರಪ್ಪನವರ ಸರಕಾರ ಇದ್ದಾಗ ಇದೇ ಶಿವಶಂಕರಪ್ಪ ಕೆಪಿಎಸ್‌ಸಿಗೆ ಸದಸ್ಯರಾಗಿ ನೇಮಕವಾಗಿದ್ದರು. ಹಿಂದಿನ ಅಧ್ಯಕ್ಷರಾಗಿದ್ದ ಷಡಕ್ಷರಿ ಸ್ವಾಮಿಯವರು ನಿವೃತ್ತರಾದ ನಂತರ ಯಡಿಯೂರಪ್ಪನವರ ಶಿಫಾರಸಿನ ಮೇಲೆ ರಾಜ್ಯಪಾಲರು 2021 ಎಪ್ರಿಲ್ 4ರಂದು ಶಿವಶಂಕರಪ್ಪ ಸಾಹುಕಾರ ಅವರನ್ನು ಅಧ್ಯಕ್ಷರಾಗಿ ನೇಮಕ ಮಾಡಿದ್ದರು.

ಈ ಭ್ರಷ್ಟ ಶಿವಶಂಕರಪ್ಪ ಸಾಹುಕಾರ ವಿರುದ್ಧ ಹರಿಹಾಯ್ದು ಕಾಂಗ್ರೆಸ್ ಸರಕಾರವನ್ನು ಪ್ರಶ್ನಿಸುತ್ತಿರುವ ಬಿಜೆಪಿಗರಿಗೆ ಹಾಗೆ ಆರೋಪಿಸುವ ನೈತಿಕತೆಯೇ ಇಲ್ಲವಾಗಿದೆ. ಯಾಕೆಂದರೆ ಈ ಮಹಾಭ್ರಷ್ಟನನ್ನು ಬಿಜೆಪಿ ಸರಕಾರವೇ ಶಿಫಾರಸು ಮಾಡಿದೆ. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಬಗ್ಗೆ ಕಾಂಗ್ರೆಸಿಗರು ಬಿಜೆಪಿಯನ್ನು ಪ್ರಶ್ನಿಸಿದ ತಕ್ಷಣ ಬಿಜೆಪಿಗರು ಕೆಪಿಎಸ್‌ಸಿ ಭ್ರಷ್ಟಾಚಾರದ ಬಗ್ಗೆ ಆಕ್ಷೇಪಿಸುತ್ತಾರೆ. ಹೀಗೆ ಆರೋಪ ಪ್ರತ್ಯಾರೋಪಗಳ ನಡುವೆ ಕಷ್ಟಪಟ್ಟು ಓದಿ ಪರೀಕ್ಷೆ ಬರೆದು ಹುದ್ದೆಯ ಆಕಾಂಕ್ಷಿಯಾದವರಿಗೆ ತೀವ್ರ ಹತಾಶೆಯಾಗಿದೆ.

ಇಡೀ ವ್ಯವಸ್ಥೆ ಈಗ ಭ್ರಷ್ಟಾಚಾರದಿಂದ ತತ್ತರಿಸಿದೆ. ಲಂಚವಿಲ್ಲದೆ ಯಾವ ಕೆಲಸವೂ ಆಗದಂತಹ ದುಸ್ಥಿತಿಗೆ ಸರಕಾರಿ ವ್ಯವಸ್ಥೆ ತಲುಪಿದೆ. ಲಂಚಕೊಟ್ಟು ಅಕ್ರಮವಾಗಿ ಸರಕಾರಿ ಹುದ್ದೆಗೆ ಆಯ್ಕೆಯಾದವರು ಲಂಚ ಪಡೆಯುವ ಮೂಲಕವೇ ಅಕ್ರಮ ಹಣ ಸಂಪಾದನೆಯಲ್ಲಿ ನಿರತರಾಗುತ್ತಾರೆ. ಸರಕಾರಿ ವ್ಯವಸ್ಥೆಯಲ್ಲಿ ಲಂಚ ಎನ್ನುವುದು ಹಾಸುಹೊಕ್ಕಾಗಿದ್ದು ಪ್ರಾಮಾಣಿಕತೆ ಎನ್ನುವುದು ಅಪರೂಪದಲ್ಲಿ ಅಪರೂಪ ಎನ್ನುವಂತಾಗಿದೆ. ಈ ಭ್ರಷ್ಟಾಚಾರದ ಮೂಲ ಬೇರು ಇರುವುದೇ ಕೆಪಿಎಸ್‌ಸಿ ಆಯ್ಕೆ ಪ್ರಕ್ರಿಯೆಯಲ್ಲಿ. ಮೊದಲು ಈ ಮೂಲದ ವ್ಯಾಧಿಗೆ ಚಿಕಿತ್ಸೆ ಕೊಡಬೇಕಿದೆ. ವ್ಯವಸ್ಥೆಯೇ ಭ್ರಷ್ಟವಾಗಿರುವಾಗ ಲಂಚಾವತಾರಕ್ಕೆ ಮದ್ದರೆಯುವವರು ಯಾರು ಎನ್ನುವುದೇ ಪ್ರಶ್ನೆ. ಕಳ್ಳ ಬೆಕ್ಕುಗಳೇ ಆಯಕಟ್ಟಿನ ಜಾಗದಲ್ಲಿ ಝಂಡಾ ಹೂಡಿರುವಾಗ ಭ್ರಷ್ಟ ಬೆಕ್ಕುಗಳಿಗೆ ಗಂಟೆ ಕಟ್ಟುವವರು ಯಾರು? ಭ್ರಷ್ಟ ವ್ಯವಸ್ಥೆಯನ್ನು ಸುಧಾರಿಸುವವರು ಯಾರು?

Tags

KPSC
share
ಶಶಿಕಾಂತ ಯಡಹಳ್ಳಿ
ಶಶಿಕಾಂತ ಯಡಹಳ್ಳಿ
Next Story
X