ನಾಯಿಗಳಿಗೆ ‘ಕ್ಯಾನೈನ್ ಪಾರ್ವೊ’, ‘ಡಿಸ್ಟೆಂಪರ್’ ರೋಗ
ಗ್ರಾಮೀಣ ಪ್ರದೇಶದಲ್ಲಿ ತೀವ್ರಗೊಂಡಿರುವ ಮಾರಣಾಂತಿಕ ವೈರಸ್

ಮಂಗಳೂರು: ಮಳೆಗಾಲ ಆರಂಭವಾದ ಬೆನ್ನೆಲ್ಲೇ ಮನುಷ್ಯನಿಗೆ ಸೊಳ್ಳೆಗಳಿಂದ ಹರಡುವ ಡೆಂಗಿ, ಮಲೇರಿಯಾದಂತಹ ರೋಗ ಕಾಣಿಸಿಕೊಳ್ಳುವುದು ಮಾಮೂಲಿ. ಅದೇ ರೀತಿ ಇದೀಗ ಸಾಕುಪ್ರಾಣಿಗಳ ಸರದಿ. ನಾಯಿಗಳು ಸಾಂಕ್ರಾಮಿಕ ರೋಗಗಳಿಗೆ ಬಲಿಯಾಗುತ್ತಿವೆ.
‘ಕ್ಯಾನೈನ್ ಪಾರ್ವೊವೈರಸ್’ ಮತ್ತು ಕ್ಯಾನೈನ್ ಡಿಸ್ಟೆಂಪರ್ (ಮೆದುಳು ಜ್ವರ) ಸಾಂಕ್ರಾಮಿಕ ರೋಗದಿಂದಾಗಿ ನಾಯಿಗಳು ಸಾಯುತ್ತಿವೆ. ದ.ಕ. ಜಿಲ್ಲೆಯಲ್ಲೂ ಈ ಕಾಯಿಲೆ ತೀವ್ರಗೊಂಡಿದ್ದು, ನಗರ ಪ್ರದೇಶಗಳಿಗಿಂತ ಗ್ರಾಮೀಣ ಪ್ರದೇಶಗಳ ನಾಯಿ ಗಳು ಈ ರೋಗಕ್ಕೆ ಹೆಚ್ಚು ಬಲಿಯಾಗುತ್ತಿವೆ ಎಂದು ಮೂಲಗಳು ತಿಳಿಸಿವೆ.
ವೈರಸ್‌ನಿಂದ ಹರಡುವ ಕ್ಯಾನೈನ್ ಡಿಸ್ಟೆಂಪರ್ ರೋಗಕ್ಕೆ ಸಣ್ಣ ಮರಿಗಳಿಂದ ಹಿಡಿದು ದೊಡ್ಡ ನಾಯಿ ಗಳು ಕೂಡ ಬಲಿಯಾಗುತ್ತಿವೆ.
ನಾಯಿಮರಿಗಳಿಗೆ ಹೆಚ್ಚಾಗಿ ಬಾಧಿಸುವ ‘ಕ್ಯಾನೈನ್ ಪಾರ್ವೊವೈರಸ್’ ಮತ್ತು ಕ್ಯಾನೈನ್ ಡಿಸ್ಟೆಂಪರ್ ಎಲ್ಲಡೆ ತೀವ್ರಗೊಂಡಿದೆ. ಮಾರಕ ಕಾಯಿಲೆ ಆಗಿರುವ ಕ್ಯಾನೈನ್ ಪಾರ್ವೊ ವೈರಸ್ ಆರಂಭದಲ್ಲಿ ನಾಯಿಯ ಜಠರ ಕರುಳಿನ ಪ್ರದೇಶ ಮತ್ತು ಮೂಳೆ ಮಜ್ಜೆಯ ಮೇಲೆ ದಾಳಿ ಮಾಡುತ್ತದೆ. ಅನಾರೋಗ್ಯಕ್ಕೀಡಾದ ನಾಯಿಗಳು ಆಹಾರ ಮತ್ತು ನೀರನ್ನು ಸೇವಿಸದಿರುವುದು, ವಾಂತಿ ಮತ್ತು ಅತಿಸಾರ, ಹೊಟ್ಟೆ ನೋವು ಮತ್ತು ಉಬ್ಬುವುದು, ಜ್ವರ ಅಥವಾ ಕಡಿಮೆ ದೇಹದ ಉಷ್ಣತೆ, ನಿರ್ಜಲೀಕರಣ ಮತ್ತಿತರ ತೀವ್ರ ಲಕ್ಷಣ ಗಳು ಕಂಡು ಬರುತ್ತದೆ.
ನಾಯಿಮರಿಗಳು ಬಲಿ: ಕ್ಯಾನೈನ್ ಪಾರ್ವೊ ವೈರಸ್ ರೋಗಕ್ಕೆ 6ರಿಂದ 20 ವಾರಗಳ ನಾಯಿ ಮರಿಗಳು ಬಲಿಯಾಗುತ್ತಿವೆ. ನಾಯಿ ಮರಿಗಳಿಗೆ ಮೊದಲ ವರ್ಷ 3 ಬಾರಿ ಲಸಿಕೆ ಹಾಕಿಸಿ, ಅನಂತರ ಪ್ರತಿವರ್ಷ ಲಸಿಕೆ ಹಾಕಿದರೆ ಅವುಗಳನ್ನು ಇಂತಹ ಕಾಯಿಲೆಗಳಿಂದ ರಕ್ಷಿಸಲು ಸಾಧ್ಯ. ನಾಯಿಯನ್ನು ಸಾಕುವವರು ತಮ್ಮ ಊರಿನ ಸರಕಾರಿ ಪಶು ಚಿಕಿತ್ಸಾ ಕೇಂದ್ರವನ್ನು ಸಂಪರ್ಕಿಸಿ, ತಜ್ಞರಿಂದ ಸೂಕ್ತ ಸಲಹೆ ಪಡೆದರೆ ಉತ್ತಮ ಎಂದು ದ.ಕ. ಪಶುಪಾಲನಾ ಇಲಾಖೆಯ ಉಪ ನಿರ್ದೇಶಕ (ಪಾಲಿಕ್ಲಿನಿಕ್) ಡಾ.ಗೋಪಾಲ ಕೃಷ್ಣ ಭಟ್ ಅಭಿಪ್ರಾಯಪಟ್ಟಿದ್ದಾರೆ.
ಲಸಿಕೆ ದುಬಾರಿ: ರೇಬಿಸ್‌ಗೆ ಉಚಿತವಾಗಿ ಸರಕಾರಿ ಆಸ್ಪತ್ರೆಗಳಲ್ಲಿ ಲಸಿಕೆ ಲಭ್ಯವಿದೆ. ಆದರೆ ‘ಕ್ಯಾನೈನ್ ಪಾರ್ವೊವೈರಸ್’ ಮತ್ತು ಕ್ಯಾನೈನ್ ಡಿಸ್ಟೆಂಪರ್‌ಯ ಲಸಿಕೆ ಸ್ವಲ್ಪ ದುಬಾರಿ ಆಗಿರುವುದರಿಂದ ಸರಕಾರಿ ಪಶು ಚಿಕಿತ್ಸಾಲಯಗಳಲ್ಲಿ ಲಸಿಕೆ ಲಭ್ಯವಿಲ್ಲ. ಲಸಿಕೆಯನ್ನು ಮೆಡಿಕಲ್‌ಗಳಿಂದ ಖರೀದಿಸಿ ನೀಡಬೇಕಾಗಿದೆ.
ಸೋಂಕಿತ ನಾಯಿಗಳ ಮಲದೊಂದಿಗೆ ನೇರ ಅಥವಾ ಪರೋಕ್ಷ ಸಂಪರ್ಕದ ಮೂಲಕ ಪಾರ್ವೊ ಹರಡುತ್ತದೆ. ಲಸಿಕೆ ಪಡೆಯದ ಪಾರ್ವೊವೈರಸ್ ಸೋಂಕಿಗೆ ಒಳಗಾದ ನಾಯಿ ಬದುಕುಳಿಯುವುದು ಕಡಿಮೆ. ರೋಗ ಬಾಧಿತ ನಾಯಿ ಚಿಕಿತ್ಸೆ ಪಡೆಯುವಾಗ ನಾಯಿಯ ವಯಸ್ಸು, ಗಾತ್ರ ಮತ್ತು ಅದು ಯಾವ ರೀತಿ ಅನಾರೋಗ್ಯದಿಂದ ಬಳಲುತ್ತಿದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಹೆಚ್ಚಿನ ನಾಯಿಗಳು ಚಿಕಿತ್ಸೆಯಿಲ್ಲದೆ ಬದುಕುಳಿಯುವುದಿಲ್ಲ. ಪ್ರಾಥಮಿಕ ಹಂತದಲ್ಲೇ ಚಿಕಿತ್ಸೆ ದೊರೆತರೆ ನಾಯಿ ಚೇತರಿಸಿಕೊಳ್ಳುವ ಸಾಧ್ಯತೆ ಇರುತ್ತದೆ.
ನಿರ್ದಿಷ್ಟ ಚಿಕಿತ್ಸೆ ಇಲ್ಲ: ಕೆನೈನ್ ಡಿಸ್ಟೆಂಪರ್ ಒಂದು ವೈರಸ್ ಕಾಯಿಲೆಯಾಗಿದ್ದು, ಇದಕ್ಕೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಇಲ್ಲ . ಕೆನೈನ್ ಡಿಸ್ಟೆಂಪರ್ ಮತ್ತು ಪಾರ್ವೊವೈರಸ್ ರೋಗದ ಲಕ್ಷಣ ಸಾಮಾನ್ಯವಾಗಿ ಒಂದೇ ರೀತಿಯದ್ದಾಗಿರುತ್ತವೆ. ಇದು ಶ್ವಾಸಕೋಶ, ಜಠರ ಕರುಳು ಮತ್ತು ನರಮಂಡಲದ ಮೇಲೆ ದಾಳಿ ಮಾಡುವ ವೈರಸ್ ಕಾಯಿಲೆಯಾಗಿದೆ.
ಈ ಸೋಂಕು ಆರಂಭದಲ್ಲಿ ಕಣ್ಣು ಮತ್ತು ಮೂಗಿನಲ್ಲಿ ಸೋರುವಿಕೆ, ಕೆಮ್ಮು, ವಾಂತಿ ಮತ್ತು ಅತಿಸಾರಕ್ಕೆ ಕಾರಣವಾಗುತ್ತದೆ. ಸೌಮ್ಯ ಸೋಂಕು ಹೊಂದಿರುವ ನಾಯಿಗಳು ಶಕ್ತಿಯ ಕೊರತೆ, ಹಸಿವು ಕಡಿಮೆಯಾಗುವುದು, ಜ್ವರ, ಕೆಮ್ಮು, ಉಸಿರಾಟದ ತೊಂದರೆ ಮತ್ತು ಮೂಗಿನಿಂದ ದ್ರವ ಸೋರಿಕೆಯನ್ನು ಪ್ರದರ್ಶಿಸಬಹುದು. ತೀವ್ರ ರೋಗ ಬಾಧಿತ ನಾಯಿಗಳಲ್ಲಿ ಜ್ವರ, ಮೂಗು ಸೋರುವಿಕೆ, ಕಾಂಜಂಕ್ಟಿವಿಟಿಸ್, ಕೆಮ್ಮು, ಉಸಿರಾಟದ ತೊಂದರೆ, ವಾಂತಿ, ಅತಿಸಾರ, ತೂಕ ನಷ್ಟ ಮತ್ತು ನಿರ್ಜಲೀಕರಣ ಸಮಸ್ಯೆ ಕಂಡು ಬರುತ್ತದೆ.
ದ.ಕ. ಜಿಲ್ಲೆಯಲ್ಲಿ ‘ಕ್ಯಾನೈನ್ ಪಾರ್ವೊವೈರಸ್’ ಮತ್ತು ಕ್ಯಾನೈನ್ ಡಿಸ್ಟೆಂಪರ್ ಈಗ ಎಲ್ಲೆಡೆ ಸ್ವಲ್ಪ ಜಾಸ್ತಿ ಇದೆ. ಲಸಿಕೆ ಹಾಕಿಸುವುದರಿಂದ ಈ ಎರಡು ಮಾರಣಾಂತಿಕ ವೈರಸ್ ಮಾತ್ರವಲ್ಲದೆ ನಾಯಿಗಳನ್ನು ಬಾಧಿಸುವ 7-8 ಕಾಯಿಲೆಗಳನ್ನು ತಡೆಗಟ್ಟಲು ಸಾಧ್ಯವಿದೆ. ಆದ ಕಾರಣ ನಾಯಿ ಸಾಕುವವರು ತಮ್ಮ ನಾಯಿಗಳ ಆರೋಗ್ಯದ ವಿಚಾರದಲ್ಲಿ ಕಾಳಜಿ ವಹಿಸಬೇಕಾಗಿದೆ.
-ಡಾ.ಗೋಪಾಲ ಕೃಷ್ಣ ಭಟ್,
ಉಪ ನಿರ್ದೇಶಕ (ಪಾಲಿ ಕ್ಲಿನಿಕ್) ದ.ಕ. ಪಶುಪಾಲನೆ, ಪಶುವೈದ್ಯಕೀಯ ಇಲಾಖೆ







