ಪೊಲೀಸರಿಗೂ ತಟ್ಟಿದ ಜಾತಿಯ ಪೀಡೆ

ಸಾಂದರ್ಭಿಕ ಚಿತ್ರ | Photo : PTI
ಬೆಂಗಳೂರು : ಸಮಾಜಕ್ಕೆ ಹಗಲು-ಇರುಳು ಕಾವಲಾಗಿರುವ ರಾಜ್ಯ ಪೊಲೀಸ್ ಇಲಾಖೆಗೂ ಸಮಾಜದ ಜಾತಿ ಪೀಡೆಯ ಸಮಸ್ಯೆ ಎದುರಾಗಿದ್ದು, ಜಾತಿ ಹೆಸರು ಕಿವಿಗೆ ಬಿದ್ದ ತಕ್ಷಣ ದಲಿತ ಸಮುದಾಯದ ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ಬಾಡಿಗೆ ಮನೆಗಳನ್ನು ನೀಡಲು ಸವರ್ಣೀಯರು ನಿರಾಕರಿಸುತ್ತಿರುವ ಅವಮಾನಕರ ಸಂಗತಿ ಬೆಳಕಿಗೆ ಬಂದಿದೆ.
ರಾಜಧಾನಿ ಬೆಂಗಳೂರು ನಗರ ಸೇರಿದಂತೆ ರಾಜ್ಯದ ಬಹುತೇಕ ಕಡೆಗಳಲ್ಲಿ ಮಾಂಸಾಹಾರ ಸೇವನೆ ಮಾಡುವವರಿಗೆ ಬಾಡಿಗೆ ಮನೆ ನೀಡಲು ನಿರಾಕರಿಸುವುದು ಮಾತ್ರವಲ್ಲದೆ, ನಾಜೂಕಾಗಿ ಇದು ‘ವೆಜ್ ಓನ್ಲಿ’ (ಸಸ್ಯಾಹಾರಿಗಳಿಗೆ ಮಾತ್ರ) ಎಂದು ಮನೆಯ ಮುಂದೆ ಸವರ್ಣೀಯರು ಫಲಕ ಹಾಕುತ್ತಿದ್ದರು. ಈ ಬಗ್ಗೆ ಹಲವು ಚರ್ಚೆಗಳು ನಡೆದರೂ ಯಾವುದೇ ಬದಲಾವಣೆ ಕಂಡುಬಂದಿರಲಿಲ್ಲ. ಆದರೆ, ಇದೀಗ ಅಚ್ಚರಿ ಎಂದರೆ, ಎಸ್ಸಿ, ಎಸ್ಟಿ ಸಮುದಾಯದ ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ಬಾಡಿಗೆ ಮನೆಗಳನ್ನು ನೀಡಲು ನಿರಾಕರಿಸುತ್ತಿರುವುದು ಗೊತ್ತಾಗಿದೆ.
ಎಪ್ರಿಲ್ ತಿಂಗಳಲ್ಲಿ ವಿಧಾನಸೌಧದಲ್ಲಿ ನಡೆದ ಸರಕಾರಿ ವಿಧಾನಸಭಾ ಭರವಸೆಗಳ ಸಮಿತಿಯ ಸಭೆಯ ಮುಂದೆ ಅಧ್ಯಕ್ಷರೂ ಸೇರಿದಂತೆ ಹಲವು ಸದಸ್ಯರು ಈ ಅಂಶ ಪ್ರಸ್ತಾಪ ಮಾಡಿದ್ದಾರೆ. ಕೆಲವು ಪ್ರದೇಶಗಳಲ್ಲಿ ಎಸ್ಸಿ-ಎಸ್ಟಿ ವರ್ಗಕ್ಕೆ ಸೇರಿದ ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ಬಾಡಿಗೆ ಮನೆಗಳನ್ನು ಜಾತಿ ಆಧಾರದ ಮೇಲೆ ನೀಡದೆ ಸವರ್ಣೀಯರು ನಿರಾಕರಿಸುತ್ತಿರುವ ಕುರಿತು ಗಂಭೀರ ಚರ್ಚೆ ನಡೆಸಿದ್ದಾರೆ.
ದೂರದ ಪ್ರದೇಶಗಳಿಂದ ಠಾಣೆ ಹಾಗೂ ನಿಯೋಜಿಸಿದ ಸ್ಥಳಗಳಿಗೆ ಪ್ರಯಾಣ ಬೆಳೆಸಬೇಕು. ನಿತ್ಯ ಇದರಿಂದ ಒತ್ತಡ ಹೆಚ್ಚಾಗುತ್ತಿದೆ. ಇದರ ಬದಲಾಗಿ ಹತ್ತಿರದಲ್ಲಿಯೇ ಬಾಡಿಗೆ ಮನೆ ಮಾಡಿಕೊಂಡು ನೆಲೆಸಲು ಬಯಸುವ ಎಸ್ಸಿ-ಎಸ್ಟಿ ವರ್ಗಕ್ಕೆ ಸೇರಿದ ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ಸವರ್ಣೀಯರು ಬಾಡಿಗೆ ಮನೆಗಳನ್ನು ನೀಡುತ್ತಿಲ್ಲ. ಜಾತಿ ಕೇಳಿದ ತಕ್ಷಣ ಮನೆ ಖಾಲಿ ಇಲ್ಲವೆಂದು ಸಬೂಬು ಹೇಳುತ್ತಿದ್ದಾರೆ. ಈ ಬಗ್ಗೆ ಅಧಿಕೃತ ದೂರುಗಳು ಸಲ್ಲಿಕೆಯಾಗಿವೆ ಎಂದು ಸಭೆಯಲ್ಲಿ ಪ್ರಸ್ತಾಪಿಸಲಾಗಿದೆ.
ಆನಂತರ, ಸರಕಾರಿ ವಿಧಾನಸಭಾ ಭರವಸೆಗಳ ಸಮಿತಿಯ ಸಭೆಯೂ ಆಯಾ ಘಟಕಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿ, ಸಿಬ್ಬಂದಿ ಜಾತಿ ಆಧಾರದ ಮೇಲೆ ಮನೆಯನ್ನು ಬಾಡಿಗೆಗೆ ನೀಡುತ್ತಿಲ್ಲ ಎನ್ನುವ ಮನವಿಯನ್ನು ಗಂಭೀರ ಪರಿಗಣಿಸಲಾಗಿದ್ದು, ಆದ್ಯತೆಯ ಮೇಲೆ ಖಾಲಿ ಇರುವ ವಸತಿ ಗೃಹಗಳನ್ನು ಹಂಚಿಕೆ ಮಾಡುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಶಿಫಾರಸು ಮಾಡಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಪೊಲೀಸ್ (ಹೆಸರು ಹೇಳಲು ಇಚ್ಛಿಸದ) ಅಧಿಕಾರಿಯೊಬ್ಬರು ‘‘ನಾನು ಹಿಂದೆ ಗಿರಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದ್ದೆ. ಕೆಆರ್ ಪುರಂನಿಂದ ಅಲ್ಲಿಗೆ ಹೋಗಬೇಕಾಗಿತ್ತು. ಹಲವು ಬಾರಿ ಹತ್ತಿರದಲ್ಲಿಯೇ ಮನೆ ಬಾಡಿಗೆ ಪಡೆಯಲು ಮುಂದಾದ ವೇಳೆ ನೀವು ಮಾಂಸಾಹಾರ ಸೇವನೆ ಮಾಡುತ್ತೀರಾ ಕೊಡುವುದಿಲ್ಲ ಎಂದು ನೇರವಾಗಿಯೇ ಹೇಳುತ್ತಿದ್ದರು. ಇದು ನನ್ನ ಒಬ್ಬನ ಸಮಸ್ಯೆ ಮಾತ್ರವಲ್ಲ ಅನೇಕರು ಈಗಲೂ ಸಂಕಷ್ಟದಲ್ಲಿದ್ದಾರೆ’’ ಎಂದು ಬೇಸರ ವ್ಯಕ್ತಪಡಿಸಿದರು. ಮತ್ತೋರ್ವ ಪೊಲೀಸ್ ಸಿಬ್ಬಂದಿ ಈ ಕುರಿತು ಪ್ರತಿಕ್ರಿಯಿಸಿ ‘‘ನನ್ನ ಕೆಲಸಕ್ಕೆ ಮತ್ತು ಮಗಳಿಗೆ ಶಾಲೆ ಹತ್ತಿರವಾಗುತ್ತದೆ ಎಂದು ಠಾಣೆಯ ಬಳಿಯೇ ಒಂದು ಮನೆಯೊಂದನ್ನು ಬಾಡಿಗೆಗೆ ಪಡೆಯಲು ಮುಂದಾಗಿದ್ದೆ. ಅದರಂತೆ ಮುಂಗಡವಾಗಿ ಹಣವೂ ನೀಡಿದ್ದೆ. ಆನಂತರ, ತಾತ್ಕಾಲಿಕ ಕರಾರು ಪ್ರಕ್ರಿಯೆ ವೇಳೆ ಜಾತಿ ದಾಖಲೆ ಕಂಡುಬಂದ ಬಳಿಕ ಮನೆ ಬಾಡಿಗೆ ನೀಡಲು ನಿರಾಕರಣೆ ಮಾಡಲಾಯಿತು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾನೂನು ರಕ್ಷಣೆ ಮಾಡುವ ಪೊಲೀಸ್ ಸಿಬ್ಬಂದಿಗೆ ಈ ರೀತಿ ಆಗಿದೆ ಎಂದರೆ ಅಚ್ಚರಿಯಾಗಿದೆ. ಇದೊಂದು ಅಸ್ಪೃಶ್ಯತೆ ಆಚರಣೆಯ ಭಾಗವಾಗಿದೆ. ರಾಜ್ಯ ಸರಕಾರ ಇದನ್ನು ನಿಯಂತ್ರಣ ಮಾಡಲು ಜಾಗೃತಿ ಮಾತ್ರವಲ್ಲದೆ, ಅಗತ್ಯ ಕಾನೂನು ರೂಪಿಸಬೇಕು.
-ಮಾವಳ್ಳಿ ಶಂಕರ್, ದಲಿತ ಮುಖಂಡ






