ನಾರಾಯಣಪುರದಲ್ಲಿ ಕಣ್ಮುಚ್ಚಿದ ಸಿಸಿ ಕ್ಯಾಮರಾಗಳು

ಹುಣಸಗಿ: ವೇಗವಾಗಿ ಅಭಿವೃದ್ಧಿಗೊಳ್ಳುತ್ತಿರುವ ತಾಲೂಕಿನ ನಾರಾಯಣಪುರ ಗ್ರಾಮದ ಪ್ರಮುಖ ಪ್ರದೇಶಗಳಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮರಾಗಳು ಕಳೆದ ಎರಡು ವರ್ಷಗಳಿಂದ ತಾಂತ್ರಿಕ ದೋಷದಿಂದ ಕಾರ್ಯನಿರ್ವಹಿಸದೆ ಇರುವುದರಿಂದ ಗ್ರಾಮದಲ್ಲಿ ಸಾರ್ವಜನಿಕ ಸುರಕ್ಷತೆ ಗಂಭೀರ ಪ್ರಶ್ನಾರ್ಥಕವಾಗಿದ್ದು, ಅಪರಾಧ ಪ್ರಕರಣಗಳ ತನಿಖೆಯಲ್ಲಿ ಪೊಲೀಸ್ ಇಲಾಖೆಯೂ ತೀವ್ರ ಅಸಹಾಯ ಸ್ಥಿತಿಯನ್ನು ಎದುರಿಸುತ್ತಿದೆ.
ರಾಜ್ಯದ ಜೀವನಾಡಿ ಎಂದು ಪರಿಗಣಿಸಲ್ಪಡುವ ಬಸವಸಾಗರ ಜಲಾಶಯದ ಹೃದಯಭಾಗದಲ್ಲಿರುವ ನಾರಾಯಣಪುರ ಗ್ರಾಮದಲ್ಲಿ ಯುಕೆಪಿ ಹಾಗೂ ಕೆಬಿಜೆಎನ್‌ಎಲ್ ಪ್ರಮುಖ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. ಗಡಿ ರಾಜ್ಯಗಳು ಹಾಗೂ ಜಿಲ್ಲೆಗಳನ್ನುಸಂಪರ್ಕಿಸುವ ಪ್ರಮುಖ ಮಾರ್ಗವಾರುವುದರಿಂದ ಇಲ್ಲಿ ಹಗಲು ರಾತ್ರಿ ನಿರಂತರ ವಾಹನ ಸಂಚಾರ ನಡೆಯುತ್ತಿದೆ. ಇಂತಹ ಸಂವೇದನಶೀಲ ಪ್ರದೇಶದಲ್ಲಿ ಭದ್ರತಾ ದೃಷ್ಟಿಯಿಂದ ಅಳವಡಿಸಲಾದ ಸಿಸಿ ಸಿಸಿಟಿವಿ ಕ್ಯಾಮರಾಗಳು ಕಾರ್ಯನಿರ್ವಹಿಸದೇ ಇರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ಗ್ರಾಮದಲ್ಲಿ ಪ್ರತೀ ಭಾನುವಾರ ವಾರದ ಸಂತೆ ನಡೆಯುತ್ತಿದ್ದು, ಸುತ್ತಮುತ್ತಲಿನ ಗ್ರಾಮಗಳಿಂದ ನೂರಾರು ವ್ಯಾಪಾರಸ್ಥರು ಆಗಮಿಸುತ್ತಾರೆ. ಈ ಸಂದರ್ಭ ಅಂಗಡಿ ಕಳ್ಳತನ, ಅಕ್ರಮ ಚಟುವಟಿಕೆಗಳು, ಅಪಹರಣ ಸೇರಿದಂತೆ ವಿವಿಧ ಅಪರಾಧಗಳನ್ನು ತಡೆಯಲು ಹಾಗೂ ಸಂಭವಿಸಿದ ಘಟನೆಗಳ ಪತ್ತೆಗೆ ಸಿಸಿಟಿವಿ ಕ್ಯಾಮರಾಗಳು ಅತ್ಯಂತ ಅಗತ್ಯವಾಗಿವೆ.
ಪೊಲೀಸ್ ಗಸ್ತು ವೇಳೆ ಸಂಭವಿಸುವ ಘಟನೆಗಳ ದಾಖಲಾತಿಗೂ ಕ್ಯಾಮರಾಗಳು ಸಹಕಾರಿಯಾಗುತ್ತವೆ. ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಗಮನ ಹರಿಸಿ ಸಿಸಿಟಿವಿ ಕ್ಯಾಮರಾಗಳ ದುರಸ್ತಿ ಕಾರ್ಯವನ್ನು ಶೀಘ್ರವಾಗಿ ಕೈಗೊಳ್ಳಬೇಕು ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.
ತೆರೆಯದ ಕಣ್ಣುಗಳು
ಕೊಡೇಕಲ್ ರಸ್ತೆ, ವಾಲ್ಮೀಕಿ ನಗರ, ಕೆಬಿಜೆಎನ್‌ಎಲ್ ಕಚೇರಿ ಸುತ್ತಮುತ್ತ, ಬಸ್ ನಿಲ್ದಾಣ, ಕ್ರೀಡಾಂಗಣ ಸೇರಿದಂತೆ ಗ್ರಾಮದಲ್ಲಿ ಅಳವಡಿಸಲಾಗಿದ್ದ ಸುಮಾರು 18ಕ್ಕೂ ಹೆಚ್ಚು ಸಿಸಿ ಕ್ಯಾಮರಾಗಳು ಸದ್ಯ ಸಂಪೂರ್ಣವಾಗಿ ಕಾರ್ಯನಿರ್ವಹಿಸದೆ ಇರುವುದು ಭವಿಷ್ಯದಲ್ಲಿ ಅನಾಹುತಗಳಿಗೆ ಆಹ್ವಾನ ನೀಡುವಂತಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.
ಗ್ರಾಮ ದಿನದಿಂದ ದಿನಕ್ಕೆ ವಿಸ್ತಾರಗೊಳ್ಳುತ್ತಿದ್ದು ವ್ಯಾಪಾರ ಚಟುವಟಿಕೆಗಳು ಹೆಚ್ಚಾಗುತ್ತಿವೆ. ರೈತರು ಮತ್ತು ವ್ಯಾಪಾರಿಗಳನ್ನು ಒಳಗೊಂಡ ಈ ಗ್ರಾಮದಲ್ಲಿ ಯಾವುದೇ ಘಟನೆ ನಡೆದರೂ ಪತ್ತೆ ಹಚ್ಚಲು ಸಿಸಿಟಿವಿ ಕ್ಯಾಮರಾಗಳು ಅನಿವಾರ್ಯ.
-ಹಣಮಂತ್ರಾಯ ಪತ್ತಾರ, ಗ್ರಾಮಸ್ಥ
ಸಿಸಿಟಿವಿ ಕ್ಯಾಮರಾಗಳಲ್ಲಿ ತಾಂತ್ರಿಕ ದೋಷ ಉಂಟಾಗಿರುವುದರಿಂದ ಪ್ರಕರಣಗಳ ತನಿಖೆಗೆ ತೊಂದರೆ ಆಗುತ್ತಿದೆ. ಈ ಕ್ಯಾಮರಾಗಳನ್ನು ದಾನಿಗಳ ನೆರವಿನಿಂದ ಅಳವಡಿಸಲಾಗಿತ್ತು. ಇನ್ನೊಂದು ವಾರದೊಳಗೆ ದುರಸ್ತಿ ಕಾರ್ಯ ಕೈಗೊಳ್ಳಲಾಗುವುದು.-
-ಅಯ್ಯಪ್ಪ ಪಿಎಸ್ಸೈ, ನಾರಾಯಣಪುರ







