ನೆಹರೂ ಚಾಚಾ ಮತ್ತು ಕೋಳಿ ಮಾಂಸ

ನೆಹರೂ ಚಾಚಾ ಅಂದರೆ ಎಲ್ಲರಿಗೆ ಬಲು ಪ್ರೀತಿ. ಹೊಚ್ಚ ಹೊಸ ಸೇತುವೆ ಬಿದ್ದರೆ, ರಸ್ತೆ ಕುಸಿದರೆ, ಕಟ್ಟಡ ಉರುಳಿದರೆ, ಶಾಲೆಯ ಹಂಚು ಜಾರಿದರೆ, ಮಳೆ ನೀರು ಸೋರಿದರೆ ನೆಹರೂ ಚಾಚಾರನ್ನು ಹೊಣೆಯಾಗಿಸಿ ಬಯ್ಯಲೇ ಬೇಕು. ನೆಹರೂ ಸರಿಯಾಗಿ ಕೆಲಸ ಮಾಡಿದ್ದರೆ ಈಗ ಹೀಗೆಲ್ಲ ಆಗುತ್ತಿತ್ತೇ? ಪಾಪ, ಬ್ರಿಟಿಷರನ್ನು ಅವರೆಲ್ಲ ಸೇರಿ ಓಡಿಸಿದಾಗ ಈ ದೇಶ ಕಡು ಬಡತನದಲ್ಲಿತ್ತು, ಊಟಕ್ಕೆ ಧಾನ್ಯಗಳೂ ಇರಲಿಲ್ಲ, ಅನಕ್ಷರತೆ ಶೇ.80ರಷ್ಟಿತ್ತು, ಮಲೇರಿಯಾ- ಕ್ಷಯ-ಕಾಲರಾಗಳಿಂದ ವರ್ಷಕ್ಕೆ 30 ಲಕ್ಷ ಜನರು ಸಾಯುತ್ತಿದ್ದರು, ರಸ್ತೆಗಳಾಗಲೀ, ಆಸ್ಪತ್ರೆಗಳಾಗಲೀ ಸರಿಯಿರಲಿಲ್ಲ. ಜೊತೆಗೆ, 560ಕ್ಕೂ ಹೆಚ್ಚು ಸಣ್ಣ ಅರಸೊತ್ತಿಗೆಗಳ ಸಮಸ್ಯೆ, ವಿಭಜನೆಯ ಸಮಸ್ಯೆ, ಕೋಮು ದಳ್ಳುರಿ ಎಲ್ಲವೂ ಇದ್ದವು. ಇವನ್ನೆಲ್ಲ ನಿಭಾಯಿಸಿ ದೇಶವನ್ನು ಸ್ವಾವಲಂಬನೆಯತ್ತ ಒಯ್ದು ಅರುವತ್ತರ ದಶಕದ ಆರಂಭದ ಹೊತ್ತಿಗೆ ಮಹಾ ರೋಗಗಳನ್ನು ನಿಯಂತ್ರಿಸಿ, ಅತ್ಯುತ್ತಮ ಶಿಕ್ಷಣ ಸಂಸ್ಥೆಗಳನ್ನು, ಆಸ್ಪತ್ರೆಗಳನ್ನು, ಅಣೆಕಟ್ಟುಗಳನ್ನು, ಬೃಹತ್ ಉದ್ಯಮಗಳನ್ನು ಕಟ್ಟಿ, ಎಪ್ಪತ್ತರ ದಶಕದ ನಡುವಲ್ಲಿ ಭಾರತವು ಪರಮಾಣು ಶಕ್ತ ಬಲಿಷ್ಠ ರಾಷ್ಟ್ರವಾಗಿ, ಉಪಗ್ರಹ ಉಡಾಯಿಸಬಲ್ಲ ವೈಜ್ಞಾನಿಕ ಶಕ್ತಿಯಾಗಿ ಬೆಳೆಯುವಂತೆ ಮಾಡಿದ ಚಾಚಾ ನೆಹರೂಗೆ ಈಗ 2026ರಲ್ಲಿ ಮಳೆ ನೀರು ಸೋರುವುದಕ್ಕೂ ಬೈಗುಳ!
ಕೋಳಿ ಮಾಂಸವೂ ನೆಹರೂ ಚಾಚಾರ ಹಾಗೆಯೇ. ಡೆಂಗಿ, ಮಲೇರಿಯಾ ಬಂದರೆ ಕೋಳಿ ಕೂಡದು. ಜಾಂಡೀಸ್ ಬಂದರೆ ಕೋಳಿಯನ್ನು ನೋಡಲೂ ಬಾರದು. ಹೃದಯಾಘಾತ, ಡಯಾಬಿಟಿಸ್, ಪಾರ್ಶ್ವವಾಯು ಇದ್ದರೆ ಕೋಳಿ ನಿಷಿದ್ಧ. ಮೊಡವೆಗೂ ಅದುವೇ ಕಾರಣ, ಮೂತ್ರಪಿಂಡಗಳ ಕಾಯಿಲೆಗೂ ಕಾರಣ ಅದುವೇ. ಕೋಳಿ ಮಾಂಸ ಮೂಸಿದರೆ ದೇವಾಲಯಕ್ಕೆ ಹೋಗಬಾರದು, ಬ್ರಹ್ಮಕಲಶ ಆಗುವವರೆಗೆ ಕೋಳಿ ಬೇಯಿಸಬಾರದು! ದೇಶದಲ್ಲಿ ಇಂದಿನ ಎಲ್ಲಾ ಸಮಸ್ಯೆಗಳಿಗೆ ನೆಹರೂ ಚಾಚಾ ಹೇಗೆ ಕಾರಣರೋ ಹಾಗೆಯೇ ಮನುಷ್ಯನ ಎಲ್ಲಾ ಸಮಸ್ಯೆಗಳಿಗೆ ಕೋಳಿ ಮಾಂಸವೇ ಕಾರಣ! ದೇಹಕ್ಕೂ, ಮನಸ್ಸಿಗೂ ಒಳಿತನ್ನು ಮಾಡಬಲ್ಲ, ಅನೇಕ ಪೌಷ್ಟಿಕಾಂಶಗಳಿರುವ, ಮಿತ ದರದಲ್ಲಿ ಎಲ್ಲೆಡೆ ಲಭ್ಯವಿರುವ ಕೋಳಿ ಮಾಂಸವನ್ನು ಬಯ್ಯಲೇ ಬೇಕು, ಎಲ್ಲ ಆಸ್ಪತ್ರೆಗಳು, ವೈದ್ಯರು, ಪಥ್ಯ ತಜ್ಞರು ಕೊಡುವ ಪಥ್ಯ ಪಟ್ಟಿಗಳಲ್ಲಿ ಕೋಳಿ ಮಾಂಸಕ್ಕೆ ಕತ್ತರಿ ಹಾಕಿರಲೇ ಬೇಕು!
ನೆಹರೂ ಚಾಚಾರನ್ನು ಬಯ್ಯದಿದ್ದರೆ ಇಂದಿನ ಕಳ್ಳಕಾಕರಿಗೆ, ಸುಳ್ಳುಬಾಕರಿಗೆ ಕಾರುಬಾರು ಮಾಡಲಾಗದು, ಸಿಮೆಂಟಿನಲ್ಲಿ, ಮರಳಿನಲ್ಲಿ ದರೋಡೆ ಮಾಡಲಾಗದು, ನೆಹರೂ ಚಾಚಾ ಕಟ್ಟಿದ್ದನ್ನು ತಮ್ಮ ಮಿತ್ರರಿಗೆ ಚಿಕ್ಕಾಸಿಗೆ ಮಾರಲಿಕ್ಕೂ ಆಗದು. ತಾವು ಭಯಂಕರ ಸಂಭಾವಿತರು, ಅಪ್ರತಿಮ ದೇಶಭಕ್ತರು ಅಂತೆಲ್ಲ ಹೇಳಿಕೊಳ್ಳಬೇಕಾದರೆ ನೆಹರೂ ಚಾಚಾರನ್ನು ಬಯ್ಯಲೇ ಬೇಕು. ಹಾಗಾಗಿ ದೇಶ ಕಟ್ಟಿದ ನೆಹರೂಗೆ ಬೈಗಳು, ದೇಶ ಕುಟ್ಟುತ್ತಿರುವವರಿಗೆ ಭಜನೆಗಳು! ಹಾಗೆಯೇ, ಕೋಳಿ ಮಾಂಸವನ್ನು ಬಯ್ದು ಸಕ್ಕರೆ, ಹಾಲು, ಹಣ್ಣು ತಿನ್ನಿಸಿದರೆ ಮಾತ್ರವೇ ಬಗೆಬಗೆಯ ರೋಗಗಳಲ್ಲಿ ಹೆಚ್ಚಳವಾದೀತು. ವೈದ್ಯರಿಗೂ, ಆಸ್ಪತ್ರೆಗಳಿಗೂ ಪ್ರಯೋಜನವಾದೀತು. ಹಾಗಾಗಿ ರೋಗಕಾರಕ ಸಕ್ಕರೆ-ಹಾಲನ್ನು ಉತ್ತೇಜಿಸುವುದು, ರೋಗವುಂಟು ಮಾಡದ ಕೋಳಿ ಮಾಂಸವನ್ನು ನಿರುತ್ತೇಜಿಸುವುದು!
ನೆಹರೂ ಚಾಚಾ ಕೋಳಿ-ಮೀನು ತಿನ್ನುವವರಾಗಿದ್ದರು, ಅವರ ಮಗಳು, ಮೊಮ್ಮಕ್ಕಳು, ಮರಿಮಕ್ಕಳು ಎಲ್ಲರೂ ಮಾಂಸಾಹಾರ ತಿನ್ನುವವರೇ. ಅವರ ಪಕ್ಷದವರೂ ತಿನ್ನುವವರೇ. ಅವರಲ್ಲಿ ಸಾತ್ವಿಕ ಆಹಾರದವರು ಯಾರೂ ಇಲ್ಲ. ಆದ್ದರಿಂದ ನೆಹರೂ ಚಾಚಾ ಬಗ್ಗೆ ಹೀಗೆಲ್ಲ ಬರೆದದ್ದಕ್ಕೆ ಭಾವನೆಗಳಿಗೆ ಧಕ್ಕೆಯಾಯಿತೆಂದು ಅವರಾರೂ ಕಿರುಚಲಿಕ್ಕಿಲ್ಲ. ಕೋಳಿಗಳೂ ದೂರಲಿಕ್ಕಿಲ್ಲ. ಸಾತ್ವಿಕ ಆಹಾರ ತಿನ್ನುತ್ತೇವೆ ಎಂದು ಭಾವನೆಗಳಿಗೆ ಧಕ್ಕೆ ಮಾಡಿಕೊಳ್ಳುತ್ತಲೇ ಇರುವವರಿಗೂ ಇದರಿಂದ ಬೇಜಾರಾಗಲಿಕ್ಕಿಲ್ಲ, ಇವು ಅವರ ವ್ಯಾಪ್ತಿ ಪ್ರದೇಶದಿಂದ ಹೊರಗಿವೆಯಲ್ಲ?
(ಲೇಖಕರು ಖ್ಯಾತ ವೈದ್ಯರು, ಚಿಂತಕರು)






