ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ದುರಂತ ಪ್ರಕರಣ | ಮೃತರ ಕುಟುಂಬಕ್ಕೆ ಸರಕಾರಿ ಉದ್ಯೋಗ: ದಾಖಲೆ ಸಲ್ಲಿಸಲು ಸೂಚನೆ

ಚಾಮರಾಜನಗರ, ಡಿ.7: ಕಳೆದ ಐದು ವರ್ಷಗಳ ಹಿಂದೆ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ ಸೊಂಕಿತರಿಗೆ ಆಕ್ಸಿಜನ್ ಸಕಾಲದಲ್ಲಿ ಪೂರೈಕೆವಾಗದೇ ಸಾವನ್ನಪ್ಪಿದ ಸೊಂಕಿತರ ಕುಟುಂಬಸ್ಥರಿಗೆ ಸರಕಾರಿ ಉದ್ಯೋಗ ನೀಡಲು ಸಲುವಾಗಿ ಅರ್ಹ ಸಂತ್ರಸ್ತ ಕುಟುಂಬಸ್ಥರು ಅಗತ್ಯ ದಾಖಲೆಗಳನ್ನು ಒದಗಿಸುವಂತೆ ಸಂತ್ರಸ್ತರಿಗೆ ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡೀನ್ ಮತ್ತು ನಿರ್ದೇಶಕ ಡಾ.ಮಂಜುನಾಥ್ ನೋಟಿಸ್ ಜಾರಿ ಮಾಡಿದ್ದಾರೆ.
ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ ಮೃತಪಟ್ಟ ರೋಗಿಗಳ ಅವಲಂಬಿತರಿಗೆ ವಿಶೇಷ ನೇಮಕಾತಿಯಡಿ ಉದ್ಯೋಗ ಒದಗಿಸಲು ಅಗತ್ಯ ದಾಖಲೆಗಳನ್ನು ಸಿಮ್ಸ್‌ಡೀನ್ ಮತ್ತು ನಿರ್ದೇಶಕ ಡಾ.ಮಂಜುನಾಥ್ ಅವರಲ್ಲಿ ತುರ್ತಾಗಿ ಸಲ್ಲಿಸುವಂತೆ ಸೂಚನೆ ನೀಡಲಾಗಿತ್ತು. ಅದರಂತೆ 31 ಮೃತರ ಅವಲಂಬಿತರ ಪೈಕಿ 25 ಸಂತ್ರಸ್ತರು ಅರ್ಜಿಯೊಂದಿಗೆ ಕೆಲವು ದಾಖಲೆಗಳನ್ನು ಮಾತ್ರ ಸಲ್ಲಿಸಿದ್ದು, ಉಳಿದ 6 ಸಂತ್ರಸ್ತರು ಯಾವುದೇ ಅರ್ಜಿಯನ್ನು ಸಲ್ಲಿಸದೇ ಇರುವುದರಿಂದ 6 ಸಂತ್ರಸ್ತರಿಗೆ ನೋಟಿಸ್ ನೀಡಲಾಗಿದೆ.
ನೋಟಿಸ್ ಬಂದಿರುವ ಕೆಲವು ಸಂತ್ರಸ್ತರು ಕೇವಲ 3 ದಿನಗಳಲ್ಲಿ ದಾಖಲೆ ಒದಗಿಸುವುದು ಹೇಗೆ ಎಂದು ಆತಂಕಗೊಂಡಿದ್ದಾರೆ. ಸಂತ್ರಸ್ತರ ಪರ ಹೋರಾಟಗಾರರು ಕೂಡ ಸಿಮ್ಸ್ ನಿರ್ದೇಶಕರಿಂದ ಬಂದಿರುವ ದಿಢೀರ್ ನೋಟಿಸ್ ನೀಡಿರುವುದರ ವಿರುದ್ಧ ಬೇಸರ ಹೊರಹಾಕಿದರು.
ಆಕ್ಸಿಜನ್ ಕೊರತೆಯಿಂದ ಮೃತಪಟ್ಟ 31 ಜನರ ಅವಲಂಬಿತರ ಪೈಕಿ 25 ಜನರು ಅರ್ಜಿಯೊಂದಿಗೆ ದಾಖಲೆಗಳನ್ನು ಸಲ್ಲಿಸಿದ್ದು, ಉಳಿಕೆ 6 ಸಂತ್ರಸ್ತರು ಯಾವುದೇ ಅರ್ಜಿಯನ್ನು ಸಲ್ಲಿಸದೇ ಇರುವುದರಿಂದ ಸರಕಾರಕ್ಕೆ ಸೂಕ್ತ ಪ್ರಸ್ತಾವ ಸಲ್ಲಿಸಿ ಅನುಮೋದನೆ ಪಡೆಯಲು ವಿಳಂಬವಾಗುತ್ತಿದೆ. ಆದ್ದರಿಂದ ಈ ಪತ್ರ ತಲುಪಿದ 3 ದಿನಗಳೊಳಗೆ ನಿಗದಿತ ನಮೂನೆುಂಲ್ಲಿ ಅರ್ಜಿ ಹಾಗೂ ಅಗತ್ಯ ಮೂಲ ದಾಖಲೆಗಳನ್ನು ಸಲ್ಲಿಸಬೇಕು. ತಪ್ಪಿದ್ದಲ್ಲಿ ವಿಶೇಷ ನೇಮಕಾತಿ ಯಡಿ ಉದ್ಯೋಗ ನೀಡುವ ಪ್ರಕ್ರಿಯೆಯಿಂದ ನಿಮ್ಮ ಹೆಸರನ್ನು ಕೈ ಬಿಡಲಾಗುವುದು ಎಂದು ಸಿಮ್ಸ್ ಡೀನ್ ಮತ್ತು ನಿರ್ದೇಶಕ ಡಾ.ಮಂಜುನಾಥ್ ನೋಟಿಸ್ ನೀಡಿದ್ದಾರೆ.
ಆಕ್ಸಿಜನ್ ದುರಂತದಲ್ಲಿ ಮೃತಪಟ್ಟ ಕುಟುಂಬಸ್ಥರಲ್ಲಿ ಯಾರು ದಾಖಲೆ ನೀಡಿಲ್ಲ ಅವರು ಡಿ.12ರೊಳಗೆ ದಾಖಲೆಗಳನ್ನು ನೀಡುವಂತೆ ಅವಕಾಶ ಮಾಡಿಕೊಡಲಾಗಿದೆ. ಕಂದಾಯ ಇಲಾಖೆಯಲ್ಲಿ ಮಾಹಿತಿ ನೀಡುವಂತೆ ಸೂಚನೆ ನೀಡಲಾಗಿದೆ. ಡಿ.17 ರಂದು ವೈದ್ಯಕೀಯ ಶಿಕ್ಷಣ ಸಚಿವರ ಅಧ್ಯಕ್ಷತೆಯಲ್ಲಿ ಸಭೆ ಇದ್ದು, ಅದರಲ್ಲಿ ಅನುಮೋದನೆ ಪಡೆದು 31 ಸಂತ್ರಸ್ತರಿಗೂ ನೇಮಕಾತಿ ಆದೇಶ ನೀಡುತ್ತೇವೆ.
-ಸಿ.ಟಿ.ಶಿಲ್ಪಾನಾಗ್, ಜಿಲ್ಲಾಧಿಕಾರಿ, ಚಾಮರಾಜನಗರ
ಚಾಮರಾಜನಗರ ಸಿಮ್ಸ್ ಡೀನ್ ಮತ್ತು ನಿರ್ದೇಶಕರು ಕೆಲವು ಸಂತ್ರಸ್ತರಿಗೆ ದಾಖಲೆ ಸಲ್ಲಿಸುವಂತೆ ನೋಟಿಸ್ ನೀಡಿದ್ದಾರೆ. ನಮಗೂ ಕೂಡ ಸ್ಪಷ್ಟವಾದ ಮಾಹಿತಿ ತಿಳಿದಿಲ್ಲ.
-ಸಿ.ಎಂ.ಕೃಷ್ಣಮೂರ್ತಿ, ಹೋರಾಟಗಾರ, ಚಾಮರಾಜನಗರ







