ಚಾಮರಾಜನಗರ: ಐದು ಸರಕಾರಿ ಶಾಲೆಗಳ ಎಸ್‌ಡಿಎಂಸಿಗೆ ಒಂದು ಲಕ್ಷ ರೂ. ಬಹುಮಾನ

ಚಾಮರಾಜನಗರ, ಮಾ.29: ಅಂತರ್‌ರಾಜ್ಯ ಗಡಿ ಚಾಮರಾಜನಗರ ಜಿಲ್ಲೆಯಲ್ಲಿರುವ ಸರಕಾರಿ ಶಾಲೆಯಗಳಲ್ಲಿ ಪೈಕಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ 5 ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳಿಗೆ (ಎಸ್‌ಡಿಎಂಸಿ) 1 ಲಕ್ಷ ರೂ. ನಗದು ಬಹುಮಾನ ಒಲಿದು ಬಂದಿದೆ.
ಚಾಮರಾಜನಗರ ಜಿಲ್ಲೆಯಲ್ಲಿ ಸರಕಾರಿ ಶಾಲೆಗಳಲ್ಲಿ ಎಸ್‌ಡಿಎಂಸಿಗಳು ಶಾಲೆಯ ಮೇಲ್ವಿಚಾರಣೆ ಮತ್ತು ಪಾಲಕರ ಸಹಭಾಗಿತ್ವದ ಮೂಲಕ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿವೆ. ಹೀಗಾಗಿ, ಶಿಕ್ಷಣ ಇಲಾಖೆ ಉತ್ತಮವಾಗಿ ಕಾರ್ಯನಿರ್ವಹಿಸುವ ಎಸ್‌ಡಿಎಂಸಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವಿದ್ಯಾವಾಹಿನಿ ಪೋರ್ಟಲ್‌ನ ಸಮೀಕ್ಷೆ ನಡೆಸಿದೆ. ಇದರಲ್ಲಿ ಆಯ್ಕೆ ಮಾಡಿದ ಜಿಲ್ಲೆಯ 5 ಶಾಲೆಗಳಿಗೆ 2025-26ನೇ ಸಾಲಿನ ಉತ್ತಮ ಎಸ್‌ಡಿಎಂಸಿಗಳು ಎಂದು ಗುರುತಿಸಿ ತಲಾ 1 ಲಕ್ಷ ರೂ. ಅನುದಾನವನ್ನು ಬಿಡುಗಡೆ ಮಾಡಿದೆ.
ಉತ್ತಮ ಎಸ್‌ಡಿಎಂಸಿಗಳಾಗಿ ಗುರುತಿಸಿಕೊಂಡಿರುವ ಚಾಮರಾಜನಗರ ಜಿಲ್ಲೆಯ 5 ತಾಲೂಕುಗಳ ಎಸ್‌ಡಿಎಂಸಿಗಳಲ್ಲಿ ಚಾಮರಾಜನಗರದ ಮಲ್ಲಯ್ಯನಪುರದ ಅದರ್ಶ ವಿದ್ಯಾಲಯ, ಗುಂಡ್ಲುಪೇಟೆ ತಾಲೂಕಿನ ಭೀಮನಬೀಡು ಸರಕಾರಿ ಪ್ರೌಢ ಶಾಲೆ, ಯಳಂದೂರು ತಾಲೂಕಿನ ಮದ್ದೂರಿನ ಸರಕಾರಿ ಪ್ರೌಢಶಾಲೆ, ಕೊಳ್ಳೆಗಾಲದ ಮುಡಿಗುಂಡದ ಆದರ್ಶ ವಿದ್ಯಾಲಯ, ಹನೂರು ತಾಲೂಕಿನ ರಾಮಾಪುರದ ಸರಕಾರಿ ಪ್ರೌಢಶಾಲೆ (ಬಾಲಕರು) ಆಯ್ಕೆಯಾಗಿವೆ.
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ಮುಡಿಗುಂಡ ಬಳಿ ಇರುವ ಆದರ್ಶ ಶಾಲೆಯ ಎಸ್‌ಡಿಎಂಸಿ ತಂಡ ಶೈಕ್ಷಣಿಕ ಅಭ್ಯುದಯಕ್ಕೆ ತುಂಬಾ ಸಹಕಾರ ನೀಡುತ್ತಿದೆ. ಇದರ ಜತೆಗೆ ಶಾಲೆಯ ಮೂಲ ಸೌಕರ್ಯ ಅಭಿವೃದ್ಧಿಗೂ ಹೆಗಲು ನೀಡುತ್ತಿದೆ. ಇದರಿಂದಾಗಿ ಮಕ್ಕಳಿಗೆ ಒಳ್ಳೆಯ ಕಲಿಕಾ ವಾತಾವಣ ಸೃಷ್ಟಿಯಾಗಿದೆ. ಉತ್ತಮ ಎಸ್‌ಡಿಎಂಸಿ ಪ್ರಶಸ್ತಿ ಬಂದಿರುವುದು ನಮಗೆಲ್ಲಾ ಸಂತಸ ತಂದಿದೆ.
-ಆರ್.ಪ್ರಿಯದರ್ಶಿನಿ, ಮುಖ್ಯ ಶಿಕ್ಷಕಿ,
ಆದರ್ಶ ವಿದ್ಯಾಲಯ, ಕೊಳ್ಳೇಗಾಲ
ಉತ್ತಮ ಎಸ್ ಡಿ ಎಂ ಸಿಗಳಿರುವ ಐದು ಶಾಲೆಗಳಿಗೆ ಸಿಕ್ಕಿರುವ ಅನುದಾನದಲ್ಲಿ ಶಾಲೆಯ ಶೈಕ್ಷಣಿಕ ಚಟುವಟಿಕೆಗಳಿಗೆ ಹಾಗೂ ಮೂಲ ಸೌಕರ್ಯಗಳಾದ ಪ್ರಯೋಗಾಲಯ, ಇಕೋ ಕ್ಲಬ್ ಚಟುವಟಿಕೆ, ಕಲಿಕಾ ಮೇಳಗಳು, ಉದ್ಯೋಗ ಮೇಳ, ಇಂಟರ್‌ನೆಟ್ ಸೌಲಭ್ಯ, ಯುಪಿಎಸ್, ಸಿಸಿಟಿವಿ ಕ್ಯಾಮರಾ ಮತ್ತು ಮಕ್ಕಳ ಸೃಜನಶೀಲತೆಯನ್ನು ಹೆಚ್ಚಿಸುವಂತಹ ಚಟುವಟಿಕೆಗಳಿಗೆ ಬಳಸಿಕೊಳ್ಳಬಹುದು. ಅದಕ್ಕಾಗಿ ಎಸ್‌ಡಿಎಂಸಿಗಳ ಸಭೆ ನಡೆಸಿ ನಿರ್ಣಯ ಕೈಗೊಂಡು ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಬೇಕು. ನಂತರ ಆಯಾ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಯಿಂದ ಅನುಮೋದನೆ ಪಡೆದು ನಿಯಮಾನುಸಾರ ಅನುದಾನ ಬಳಕೆ ಮಾಡಲು ಸಮಗ್ರ ಶಿಕ್ಷಣ ಕರ್ನಾಟಕ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿ ಉಪ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.
ಮಕ್ಕಳ ಶೈಕ್ಷಣಿಕ ಪ್ರಗತಿಗೆ ಎಸ್‌ಡಿಎಂಸಿ ತಂಡದವರು ಬದ್ಧರಾಗಿದ್ದೇವೆ. ಈ ನಿಟ್ಟಿನಲ್ಲಿ ಎಲ್ಲ ಸದಸ್ಯರ ಕೊಡುಗೆ ಅಪಾರವಾಗಿದೆ. ಅಮೂಲ್ಯವಾದ ಸಮಯ ಮತ್ತು ಸ್ವಂತ ಹಣ ಖರ್ಚು ಮಾಡುತ್ತಿದ್ದಾರೆ, ಶಿಕ್ಷಕ ವರ್ಗ ಮತ್ತು ಎಸ್‌ಡಿಎಂಸಿ ಪರಿಶ್ರಮದಿಂದ ಉತ್ತಮ ಎಸ್ ಡಿಎಂಸಿಯಾಗಿ ಆಯ್ಕೆಯಾಗಿದೆ.
-ಗಾಳಿಪುರ ಮಹೇಶ್,
ಎಸ್‌ಡಿಎಂಸಿ ಸದಸ್ಯ, ಆದರ್ಶ ವಿದ್ಯಾಲಯ, ಚಾಮರಾಜನಗರ







