ಮುದ್ದೇಬಿಹಾಳ ಆಸ್ಪತ್ರೆಯಲ್ಲಿ ಅವ್ಯವಸ್ಥೆ

ಮುದ್ದೇಬಿಹಾಳ: ಪಟ್ಟಣದ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ.
ದೀರ್ಘಕಾಲದಿಂದ ದುರಸ್ತಿ ನೆಪದಲ್ಲಿ ಸ್ಥಗಿತಗೊಂಡಿದ್ದ ಚಿಕಿತ್ಸೆಗಳು ಮರುಪ್ರಾರಂಭಗೊಂಡ ಹಿನ್ನೆಲೆಯಲ್ಲಿ ನೂರಾರು ತಾಯಂದಿರು ಹಸುಗೂಸು ಗಳೊಂದಿಗೆ ಆಸ್ಪತ್ರೆಗೆ ಆಗಮಿಸಿದ್ದು, ಸಂಖ್ಯೆಯಲ್ಲಿ ಧಿಡೀರ್ ಏರಿಕೆ ಕಂಡುಬಂದ ಹಿನ್ನೆಲೆ ಸರಿಯಾದ ವ್ಯವಸ್ಥೆ ಇಲ್ಲದರಿಂದ ಗರ್ಭಿಣಿ, ಬಾಣಂತಿಯರು ಪೇಚಾಡುವಂತಹ ಸನ್ನಿವೇಶ ನಿರ್ಮಾಣವಾಗಿದೆ.
ಏಕಾಏಕಿ ಹೆಚ್ಚಾದ ಜನಸಂದಣಿಯನ್ನು ಎದುರಿಸಲು ಆಸ್ಪತ್ರೆ ಸಮರ್ಪಕ ಸಿದ್ಧತೆ ಮಾಡಿಕೊಳ್ಳದೇ ಇರುವುದಾಗಿ ಆರೋಪಗಳು ಕೇಳಿಬಂದಿವೆ. ಬಿಪಿ, ಶುಗರ್ ಸೇರಿದಂತೆ ಅಗತ್ಯ ರಕ್ತ ಪರೀಕ್ಷೆಗಳನ್ನು ಸಮಯಕ್ಕೆ ಸರಿಯಾಗಿ ಹಾಗೂ ಸೂಕ್ತ ರೀತಿಯಲ್ಲಿ ನಡೆಸದಿರುವುದರಿಂದ ಹಸಗೂಸುಗಳೊಂದಿಗೆ ಬಂದಿದ್ದ ಬಾಣಂತಿಯರು, ಗರ್ಭಿಣಿಯರು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಸಿಗೆಯ ತೀವ್ರ ಬಿಸಿಲಿನ ನಡುವೆಯೇ ಜನರು ಆಸ್ಪತ್ರೆಗೆ ಆಗಮಿಸುತ್ತಿರುವ ಪರಿಸ್ಥಿತಿಯಲ್ಲಿ, ಗರ್ಭಿಣಿಯರು ಮತ್ತು ಅವರ ಜೊತೆಗಿನವರಿಗಾಗಿ ಕುಡಿಯುವ ನೀರು, ವಿಶ್ರಾಂತಿ ಸ್ಥಳ ಹಾಗೂ ತ್ವರಿತ ವೈದ್ಯಕೀಯ ಸೇವೆಗಳ ಕೊರತೆ ಮತ್ತಷ್ಟು ತೊಂದರೆ ಉಂಟುಮಾಡುತ್ತಿದೆ. ಗಂಟೆಗಟ್ಟಲೆ ಸಾಲಿನಲ್ಲಿ ನಿಂತು ಚಿಕಿತ್ಸೆ ಪಡೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಕೆಲವು ಸಂಧರ್ಭದಲ್ಲಿ ಆಸ್ಪತ್ರೆ ಸಿಬ್ಬಂದಿಗಳು ಹಾಗೂ ಕಾದು ಕಾದು ಬಸವಳಿದ ಜನರ ನಡುವೆ ಮಾತಿನ ಚಕಮಕಿ ಕೂಡ ನಡೆದಿದೆ.
ಆಸ್ಪತ್ರೆಯ ಆಡಳಿತವು ಈ ಅವ್ಯವಸ್ಥೆಯನ್ನು ತಕ್ಷಣ ಸರಿಪಡಿಸಿ, ಗರ್ಭಿಣಿಯರು ಹಾಗೂ ಶಿಶುಗಳಿಗೆ ಅಗತ್ಯವಿರುವ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಒದಗಿಸ ಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
ನಾವು ಚಿಕಿತ್ಸೆಗಾಗಿ ಬರುತ್ತೇವೆ, ಕಷ್ಟ ಅನುಭವಿಸಲು ಅಲ್ಲ. ಗರ್ಭಿಣಿಯರಿಗೆ, ಹಸುಗೂಸು ಹೊಂದಿರುವ ಬಾಣಂತಿಯರಿಗೆ ಹಾಗೂ ಶಿಶುಗಳಿಗೆ ಸೂಕ್ತ ಸೌಲಭ್ಯ ಒದಗಿಸುವುದು ಆಸ್ಪತ್ರೆಯ ಮೊದಲ ಕರ್ತವ್ಯವಾಗಬೇಕು.
-ಜಿ.ಎಂ. ರಾಠೋಢ, ಬಾಣಂತಿ ಮಹಿಳೆ






