ನವೀಕರಣಗೊಂಡ ಕೊಪ್ಪಳ ರೈಲು ನಿಲ್ದಾಣದಲ್ಲಿ ಅವ್ಯವಸ್ಥೆ

ಕೊಪ್ಪಳ: ಸುಮಾರು 21.14 ಕೋಟಿ ರೂ. ವೆಚ್ಚದಲ್ಲಿ ನವೀಕರಣಗೊಂಡ ಕೊಪ್ಪಳ ರೈಲು ನಿಲ್ದಾಣದಲ್ಲಿ ಹಲವು ಅವ್ಯವಸ್ಥೆಗಳು ಕಂಡುಬಂದಿದ್ದು, ಕಾಮಗಾರಿಯ ಗುಣಮಟ್ಟದ ಕುರಿತು ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ನಿಲ್ದಾಣದ ಚಾವಣಿಯಿಂದ ನೀರು ಸೋರುವುದು, ಪೈಪ್‌ಲೈನ್ ಒಡೆದಿರುವುದು ಮತ್ತು ಪ್ರಯಾಣಿಕರು ಕುಳಿತು ಕೊಳ್ಳಲು ಹಾಕಿದ್ದ ಕಬ್ಬಿಣದ ಆಸನಗಳು ಕಿತ್ತಿರುವುದು ಸೇರಿದಂತೆ ಅನೇಕ ಸಮಸ್ಯೆಗಳು ನಿಲ್ದಾಣ ಉದ್ಘಾಟನೆಯಾದ ಬೆನ್ನಲ್ಲೇ ಕಂಡು ಬಂದಿದ್ದು, ಇದರಿಂದ ನಿಲ್ದಾಣದ ಕಾಮಗಾರಿಯಲ್ಲಿ ಅಕ್ರಮ ನಡೆದಿದೆ ಎಂಬ ಗುಮಾನಿ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ವರ್ಚುವಲ್ ಮೂಲಕ ನವೀಕೃತ ಕೊಪ್ಪಳ ರೈಲು ನಿಲ್ದಾಣವನ್ನು ಉದ್ಘಾಟಿಸಿದ್ದರು. ಆದರೆ ಉದ್ಘಾಟನೆಯ ಹಿಂದಿನ ದಿನ ಸುರಿದ ಒಂದೇ ಮಳೆಗೆ ಕಾರ್ಯಕ್ರಮಕ್ಕಾಗಿ ನಿರ್ಮಿಸಿದ್ದ ವೇದಿಕೆ, ಆಸನಗಳು ಹಾಗೂ ಧ್ವನಿವರ್ಧಕ ಉಪಕರಣಗಳು ಮಳೆ ನೀರಿನಲ್ಲಿ ನೆನೆದಿದ್ದವು. ಪ್ಲಾಟ್‌ಫಾರ್ಮ್‌ಗೂ ನೀರು ನುಗ್ಗಿತ್ತು. ಬಳಿಕ ರೈಲ್ವೆ ಸಿಬ್ಬಂದಿ ಅಗತ್ಯ ವ್ಯವಸ್ಥೆ ಮಾಡಿಕೊಂಡು ಕಾರ್ಯಕ್ರಮ ನಡೆಸಿದ್ದರು.
ಈ ರೈಲ್ವೆ ನಿಲ್ದಾಣವನ್ನು ಹಳೇಯ ಕಟ್ಟಡವನ್ನು ಕೆಡವಿ ಸುಮಾರು 21.14 ಕೋಟಿ ವೆಚ್ಚದಲ್ಲಿ ಅಂಬ್ರೇಲಾ ಮಾದರಿಯಲ್ಲಿ ನವೀಕರಣಮಾಡಲಾಗಿದೆ, ಹವಾನಿಯಂತ್ರಿತ ಪ್ರಯಾಣಿಕರ ವಿಶ್ರಾಂತಿ ಕೊಠಡಿ, ವಿಶಾಲವಾದ ಟಿಕೇಟ್ ಕೌಂಟರ್‌ಗಳು, ಎಸ್ಕಲೇಟರ್‌ಗಳು ಮತ್ತು ಲಿಪ್ಟ್‌ಗಳು ಸೇರಿದಂತೆ ಇರತೆ ಸೌಲಭ್ಯಗಳನ್ನು ಒದಗಿಸಲಾಗಿದೆ. ಆದ್ರೆ ಒಂದೇ ಪ್ಲಾಟ್ ಪಾರಂ ನಲ್ಲಿ ಮಾತ್ರ ಸೌಚಾಲಯವನ್ನು ನಿರ್ಮಾಣ ಮಾಡಲಾಗಿದ್ದು ಇನ್ನೋಂದು ಪ್ಲಾಟ್ ಪಾರಂ ನಲ್ಲಿ ಸೌಚಾಲಯವೇ ಇಲ್ಲ ಇದರಿಂದ ಪ್ರಯಾಣಿಕರಿಗೆ ತೊಂದರೆ ಉಂಟಾಗುತ್ತದೆ.
ರೈಲ್ವೆ ನಿಲ್ದಾಣದ ಕಾಮಗಾರಿಯಲ್ಲಿ ಅಕ್ರಮ ನಡೆದಿದ್ದು ಕೂಡಲೆ ಇಲಾಖೆ ಉನ್ನತ ಮಟ್ಟ ತನಿಖೆ ನಡೆಸಲು ನಗರದ ಸಾರ್ವಜನಿಕರು ಆಗ್ರಹಿಸಿದ್ದಾರೆ.
ರೈಲ್ವೆ ಪಾರ್ಕಿಂಗ್‌ನಲ್ಲಿ ಹೆಚ್ಚಿನ ಹಣ ವಸೂಲಿ ಆರೋಪ: ದೂರದ ಊರುಗಳಿಗೆ ಪ್ರಯಾಣಿಸುವ ಪ್ರಯಾಣಿಕರು ತಾವು ತಂದ ವಾಹನಗಳನ್ನು ರೈಲ್ವೆ ನಿಲ್ದಾಣದ ಪಾರ್ಕಿಂಗ್ ನಲ್ಲಿ ಬಿಟ್ಟು ಹೋಗುತ್ತಾರೆ ಆದ್ರೆ ಪಾಕೀಂಗ್ ನಿರ್ವಹಣೆಯ ಜವಾಬ್ದಾರಿಯನ್ನು ತೆಗೆದು ಕೊಂಡ ಗುತ್ತಿಗೆದಾರರು ನಿಗದೀತ ಮೊತ್ತಕ್ಕಿಂತ ಹೆಚ್ಚು ಹಣ ವಸೂಲಿ ಮಾಡುತ್ತಾರೆ ಆದ್ರೆ ಕಡಿಮೆ ಹಣದ ರಸಿದಿ ಕೊಡುತ್ತಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿಸುತ್ತಿದ್ದಾರೆ.
ಸರಕಾರ ಈ ನಿಲ್ದಾಣಕ್ಕೆ ಹಣ ನೀಡಿದೆ ಅನ್ನುವುದು ಬಿಟ್ಟರೆ ಅಭಿವೃದ್ಧಿ ಅನ್ನುವುದು ಏನು ಇಲ್ಲ, ಪೂರ್ಣ ಕಳಪೆ ಕಾಮಗಾರಿ ನಡೆದಿದೆ. ಹೊಸ ಕಟ್ಟಡ ಸೋರುತ್ತಿದೆ, ಮೂಲಭೂತ ಸೌಕರ್ಯ ಕೂಡ ಇಲ್ಲದಂತಾಗಿದೆ. ಇದನ್ನು ಗಮನಿಸಿದರೆ ಭ್ರಷ್ಟಾಚಾರ ಅನ್ನುವುದು ಬರೀ ರಾಜ್ಯ ಮಟ್ಟದಲ್ಲಿ ಅಲ್ಲ ರಾಷ್ಟ್ರ ಮಟ್ಟದಲ್ಲಿ ಕೂಡ ಇದೇ ಎನ್ನುವುದಕ್ಕೆ ಈ ನಿಲ್ದಾಣವೇ ಸಾಕ್ಷಿ. ಈ ಕುರಿತು ಉನ್ನತ ಮಟ್ಟದ ತನಿಖೆ ನಡೆಯಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ಮಾಡಲಾಗುವುದು.
-ಬಸವರಾಜ್ ಶೀಲವಂತರ್ ಗೌರವಾಧ್ಯಕ್ಷ, ರೈಲ್ವೆ ಜನಪರ ಹೋರಾಟ ಸಮಿತಿ, ಕೊಪ್ಪಳ
ಕೊಪ್ಪಳ ನಿಲ್ದಾಣದ ಅವ್ಯವಸ್ಥೆಯನ್ನು ನೋಡಿದರೆ, ಇಲ್ಲಿ ಕಳಪೆ ಕಾಮಗಾರಿ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಅದಲ್ಲದೆ ನಿಲ್ದಾಣದ ಹೊರಗಡೆ ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಮಾಡಿಲ್ಲ. ಆಟೋ ನಿಲ್ದಾಣಕ್ಕೂ ವ್ಯವಸ್ಥೆ ಸರಿಯಿಲ್ಲ, ಕೇವಲ ಬೋರ್ಡ್ ಹಾಕಿದ್ದಾರೆ. ಇದನ್ನೆಲ್ಲಾ ಗಮನಿಸಿದರೆ ಇಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬುದು ತಿಳಿದು ಬರುತ್ತದೆ, ಈ ಕುರಿತು ಸಮಗ್ರ ತನಿಖೆ ಆಗಲೇ ಬೇಕು.
-ಎಸ್.ಎ.ಗಫಾರ್ ಅಧ್ಯಕ್ಷ, ರೈಲ್ವೆ ಜನಪರ ಹೋರಾಟ ಸಮಿತಿ, ಕೊಪ್ಪಳ






