ವಿದೇಶಿ ತಳಿಯ ರೆಡ್ ಗ್ಲೋಬ್ ದ್ರಾಕ್ಷಿ ಬೆಳೆದು ಯಶಸ್ಸು ಕಂಡ ಚಿಕ್ಕಬಳ್ಳಾಪುರದ ರೈತ

ಚಿಕ್ಕಬಳ್ಳಾಪುರ: ಸಾಂಪ್ರದಾಯಿಕ ದ್ರಾಕ್ಷಿ ತಳಿಗಳ ಬೆಳೆಗಾರರು ಈಗ ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ಹೊಸ ತಳಿಗಳತ್ತ ಮುಖ ಮಾಡುತ್ತಿದ್ದಾರೆ. ಇದೇ ಸಾಲಿನಲ್ಲಿ ಚಿಕ್ಕಬಳ್ಳಾಪುರ ತಾಲೂಕಿನ ಅಜ್ಜವಾರ ಗ್ರಾಮದ ಪ್ರಗತಿಪರ ರೈತ ಕೆ.ಆರ್.ರೆಡ್ಡಿ ಅವರು ಕಳೆದ 11 ವರ್ಷಗಳಿಂದ ಅಮೆರಿಕನ್ ಮೂಲದ ರೆಡ್ ಗ್ಲೋಬ್ ದ್ರಾಕ್ಷಿ ಬೆಳೆದು ಉತ್ತಮ ಆದಾಯ ಗಳಿಸಿ ಇತರ ರೈತರಿಗೆ ಮಾದರಿಯಾಗಿದ್ದಾರೆ.
ತೋಟದಲ್ಲಿ ಬೆಳೆದ ದ್ರಾಕ್ಷಿ ಗೊಂಚಲುಗಳು ಉತ್ತಮ ಗಾತ್ರ ಮತ್ತು ಗುಣಮಟ್ಟದಿಂದ ಗಮನ ಸೆಳೆಯುತ್ತಿದ್ದು, ಒಂದೊಂದು ಗೊಂಚಲು ಸುಮಾರು 2 ಕೆ.ಜಿ.ವರೆಗೆ ತೂಕ ಹೊಂದಿದೆ. ಆಕರ್ಷಕ ಕೆಂಪು ಬಣ್ಣ, ದೊಡ್ಡ ಗಾತ್ರ ಹಾಗೂ ಸಿಹಿ ರುಚಿಯಿಂದ ರೆಡ್ ಗ್ಲೋಬ್ ದ್ರಾಕ್ಷಿಗೆ ದೇಶೀಯ ಮತ್ತು ಅಂತರ್‌ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇದೆ ಎನ್ನಲಾಗಿದೆ. ಹೆಚ್ಚಿನ ಆದಾಯ ತಂದುಕೊಡುವ ಸಾಮರ್ಥ್ಯ ಹೊಂದಿರುವ ಈ ತಳಿಯನ್ನು ಅಜ್ಜವಾರ ಗ್ರಾಮದ ತೋಟದಲ್ಲಿ ಸುಮಾರು 3 ಎಕರೆ ಪ್ರದೇಶದಲ್ಲಿ ಬೆಳೆಸಿದ್ದು ಗಮನ ಸೆಳೆದಿದೆ.
11 ವರ್ಷಗಳಿಂದ ಕೆ.ಆರ್.ರೆಡ್ಡಿ ಅವರು ತಮ್ಮ ತೋಟದಲ್ಲಿ ರೆಡ್ ಗ್ಲೋಬ್ ದ್ರಾಕ್ಷಿ ಬೆಳೆ ಬೆಳೆದು ಉತ್ತಮ ಗುಣಮಟ್ಟದ ಫಸಲು ಪಡೆದುಕೊಳ್ಳುತ್ತಿದ್ದಾರೆ. ಮಾರುಕಟ್ಟೆ ಬೇಡಿಕೆ ಹಾಗೂ ಗುಣಮಟ್ಟ ಎರಡನ್ನೂ ಸಮತೋಲನದಲ್ಲಿ ಕಾಯ್ದುಕೊಂಡು ಯಶಸ್ಸು ಸಾಧಿಸಿದ್ದಾರೆ. ಇನ್ನು ಈ ದ್ರಾಕ್ಷಿಯ ಶೇಖರಣಾ ಸಾಮರ್ಥ್ಯ ಉತ್ತಮವಾಗಿದ್ದು,ಕಟಾವು ನಂತರವೂ ಸುಮಾರು 20 ದಿನಗಳವರೆಗೆ ಗುಣಮಟ್ಟ ಉಳಿಯುತ್ತದೆ.ಇದರಿಂದ ಸಣ್ಣ ಹಾಗೂ ದೊಡ್ಡ ವ್ಯಾಪಾರಿಗಳಿಗೆ ನಷ್ಟದ ಸಾಧ್ಯತೆ ಕಡಿಮೆ ಆಗುತ್ತದೆ ಎನ್ನುತ್ತಾರೆ ದ್ರಾಕ್ಷಿ ಬೆಳೆಗಾರ ಕೆ.ಆರ್.ರೆಡ್ಡಿ..
ಕೃಷಿ ಸಾಮರ್ಥ್ಯಕ್ಕೆ ಹೊಸ ದಿಕ್ಕು :
ವಿವಿಧ ತಳಿಯ ದ್ರಾಕ್ಷಿ, ಡ್ರಾಗನ್ ಫ್ರೂಟ್ ಸಹಿತ ವಿಭಿನ್ನ ಬೆಳೆಗಳಲ್ಲಿ ಯಶಸ್ಸು ಕಂಡಿರುವ ಚಿಕ್ಕಬಳ್ಳಾಪುರ ಜಿಲ್ಲೆಯ ರೈತರು ಹೊಸ ಪ್ರಯೋಗಗಳ ಮೂಲಕ ಕೃಷಿಯಲ್ಲಿ ಹೊಸ ಸಾಧ್ಯತೆಗಳನ್ನು ತೆರೆದಿಡುತ್ತಿದ್ದಾರೆ. ಉಷ್ಣ ಪ್ರದೇಶಗಳಲ್ಲಿಯೂ ಆ್ಯಪಲ್ ಬೆಳೆ ಸಾಧ್ಯ ಎಂಬುದನ್ನು ತೋರಿಸಿರುವ ಚಿಕ್ಕಬಳ್ಳಾಪುರದ ಅಡ್ಡಗಲ್ ಗ್ರಾಮದ ರೈತ ಅನಿಲ್ ಎಂಬವರು ಆ್ಯಪಲ್ ಬೆಳೆದು ಗಮನ ಸೆಳೆದಿದ್ದಾರೆ. ಸಾಂಪ್ರದಾಯಿಕ ಬೆಳೆಗಳ ಜೊತೆಗೆ ಹೊಸ ತಳಿಗಳನ್ನು ಬೆಳೆಯುವುದನ್ನು ಅಳವಡಿಸಿಕೊಳ್ಳುವ ಮೂಲಕ ಚಿಕ್ಕಬಳ್ಳಾಪುರ ಜಿಲ್ಲೆಯ ರೈತರು ಕೃಷಿ ಕ್ಷೇತ್ರದಲ್ಲಿ ಹೊಸ ಮಾದರಿ ನಿರ್ಮಿಸುತ್ತಿದ್ದು, ಜಿಲ್ಲೆಯ ಕೃಷಿ ಸಾಮರ್ಥ್ಯಕ್ಕೆ ಹೊಸ ದಿಕ್ಕು ನೀಡುತ್ತಿದ್ದಾರೆ.
11 ವರ್ಷಗಳಿಂದ ನಷ್ಟ ಅನುಭವಿಸಿಲ್ಲ :
ಅಮೆರಿಕ, ಇಸ್ರೇಲ್ ಮತ್ತು ಚೀನಾ ದೇಶಗಳಲ್ಲಿ ಹೆಚ್ಚು ಬೆಳೆಯುವ ಈ ತಳಿಯನ್ನು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಯಶಸ್ವಿಯಾಗಿ ಬೆಳೆಸಿರುವುದು ಸಂತೋಷ ತಂದಿದೆ. 2015ರಲ್ಲಿ ಮೊದಲಿಗೆ 3 ಎಕರೆ ಪ್ರದೇಶದಲ್ಲಿ ಬೆಳೆ ಆರಂಭಿಸಿದ್ದೆವು. 11 ವರ್ಷಗಳಿಂದ ರೆಡ್ ಗ್ಲೋಬ್ ಬೆಳೆ ಬೆಳೆಯುತ್ತಿದ್ದು ನಷ್ಟದ ಪರಿಸ್ಥಿತಿ ಎದುರಾಗಿಲ್ಲ. ಕುಟುಂಬದ ಕೃಷಿ ಹಿನ್ನೆಲೆ ಹಾಗೂ ಕೃಷಿ ವಿಜ್ಞಾನಿಗಳ ಮಾರ್ಗದರ್ಶನದಿಂದ ವರ್ಷದಿಂದ ವರ್ಷಕ್ಕೆ ಉತ್ತಮ ಇಳುವರಿ ಮತ್ತು ಲಾಭ ಸಿಗುತ್ತಿದೆ. 3 ಎಕರೆ ಪ್ರದೇಶದಲ್ಲಿ ಬೆಳೆದ ರೆಡ್ ಗ್ಲೋಬ್ ದ್ರಾಕ್ಷಿಗೆ ಎಕರೆಗೆ ಸರಾಸರಿ 50 ಟನ್ ಇಳುವರಿ ಬಂದಿದೆ. ಒಂದು ಎಕರೆಗೆ ಸುಮಾರು 1.50 ಲಕ್ಷ ರೂ. ವೆಚ್ಚ ಬರುತ್ತದೆ. ಕೋಲ್ಕತಾ, ಕಾಶ್ಮೀರ ಮತ್ತು ಒಡಿಶಾದಿಂದ ವ್ಯಾಪಾರಿಗಳು ನೇರವಾಗಿ ತೋಟಕ್ಕೆ ಬಂದು ಖರೀದಿ ಮಾಡುತ್ತಿದ್ದಾರೆ. ಈ ವರ್ಷ ಹೆಚ್ಚಿನ ಉಷ್ಣಾಂಶ ಇದ್ದರೂ ಬೆಳೆ ಉತ್ತಮವಾಗಿ ಬಂದಿದ್ದು ಬೆಲೆಯೂ ಅನುಕೂಲಕರವಾಗಿದೆ. ಕಳೆದ ವರ್ಷ ಪ್ರತೀ ಕೆ.ಜಿಗೆ 140 ರೂ. ಇದ್ದ ದರ, ಈ ವರ್ಷ ತೋಟದಲ್ಲಿಯೇ 152 ರೂ.ಗೆ ಮಾರಾಟವಾಗಿದೆ.
-ಕೆ.ಆರ್.ರೆಡ್ಡಿ, ರೆಡ್ ಗ್ಲೋಬ್ ದ್ರಾಕ್ಷಿ ಬೆಳೆಗಾರ






