ಪ್ರವಾಸಿಗರನ್ನು ಸೆಳೆಯುತ್ತಿರುವ ಚಿತ್ರಾಬಿ ಜಲಪಾತ

ಶಿವಮೊಗ್ಗ, ಸೆ.21: ದಟ್ಟ ಕಾನನದ ನಡುವೆ ಬಂಡೆಗಳನ್ನು ಸೀಳಿ ಹಾಲ್ನೊರೆಯಂತೆ ಧರೆಗೆ ಧುಮ್ಮಿಕ್ಕುವ ಚಿತ್ರಾಬಿ ಜಲಪಾತ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.
ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಕಬ್ಬಿನಾಲೆ ಗ್ರಾಮದ ದಟ್ಟ ಕಾಡಿನ ಕಡಿದಾದ ಹಾದಿಯಲ್ಲಿ ಸಾಗುತ್ತಾ ಹೋದಂತೆ ಭೋರ್ಗರೆಯುವ ನೀರಿನ ಸದ್ದು ಕಿವಿಗೆ ಕೇಳುತ್ತದೆ. ನೀರಿನ ಸದ್ದು ಆಲಿಸುತ್ತಾ ಸಾಗಿದರೆ ಕಾಣ ಸಿಗುವುದೇ ಬಂಡೆಗಳನ್ನು ಸೀಳಿಕೊಂಡು ಧುಮ್ಮಿಕ್ಕುವ ಚಿತ್ರಾಬಿ ಜಲಪಾತ.
ಕಬ್ಬಿನಾಲೆ ಗ್ರಾಮದಿಂದ 4 ಕಿ.ಮೀ. ನಡೆದುಕೊಂಡು ಅದೇ ರಸ್ತೆಯಲ್ಲಿ ಮುಂದೆ ಸಾಗಿದರೆ ಚಿತ್ರಾಬಿ ಜಲಪಾತ ಸಿಗುತ್ತದೆ. ಪ್ರವಾಸಿಗರು ಕಚ್ಚಾ ರಸ್ತೆಯಲ್ಲಿಯೇ ಬೈಕುಗಳು, ಕಾರುಗಳನ್ನು ಪಾರ್ಕಿಂಗ್ ಮಾಡಿಕೊಂಡು ಕಬ್ಬಿನಾಲೆ ಗ್ರಾಮದಿಂದ ಬೆಟ್ಟ ಏರಿಕೊಂಡು ಕಾಲ್ನಡಿಗೆಯಲ್ಲೇ ಸಾಗಿದರೆ ಚಿತ್ರಾಬಿ ಜಲಪಾತವನ್ನು ನೋಡಬಹುದು. ಜೊತೆಗೆ ಕಾಡಿನ ಮಧ್ಯೆ ಚಾರಣ ಮಾಡುವ ಅವಕಾಶವೂ ಸಿಗುತ್ತದೆ. ಈ ಜಲಪಾತ ನೋಡಲು ಬಹಳ ಸುಂದರವಾಗಿದೆ.
ಚಿತ್ರಾಬಿ ಜಲಪಾತ ನೋಡಲು ಯಾವುದೇ ಶುಲ್ಕವಿಲ್ಲ, ಸಮಯದ ನಿರ್ಬಂಧವಿಲ್ಲ, ಆದರೆ ಅರಣ್ಯ ಪ್ರದೇಶದ ಒಳಗೆ ಇರುವುದರಿಂದ ಎಚ್ಚರಿಕೆಯಿಂದ ಹೋಗಬೇಕಾಗುತ್ತದೆ.





