ನಾಗರಿಕ ಸಮಾಜ ತಲೆ ತಗ್ಗಿಸುವಂತಿದೆ

ಆಸ್ಪತ್ರೆಗೆ ಭೇಟಿ ನೀಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸಂತ್ರಸ್ತೆಯ ಆರೋಗ್ಯ ವಿಚಾರಿಸುತ್ತಿರುವುದು.
ಮಾನ್ಯರೇ,
ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯದ ಕಹಳೆ ಊದಿದ ಧೀರ ಮಹಿಳೆ ಚೆನ್ನಮ್ಮ. ಇಂತಹ ಕೆಚ್ಚೆದೆಯ ಮಹಿಳೆಯನ್ನು ನೀಡಿದ ಜಿಲ್ಲೆ ಬೆಳಗಾವಿ. ಇಲ್ಲಿಯೇ ಮಹಿಳೆಯನ್ನು ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿ, ಕಂಬಕ್ಕೆ ಕಟ್ಟಿಹಾಕಿ ಥಳಿಸಿರುವಂತಹ ಘಟನೆ ನಡೆದಿರುವುದು ಇಡೀ ಮನುಷ್ಯ ಕುಲವೇ ತಲೆ ತಗ್ಗಿಸುವಂತೆ ಆಗಿದೆ.
ಇದು ವಿಕೃತ, ವಿಕಾರ, ರಾಕ್ಷಸ ಪ್ರವೃತ್ತಿ ಮನಸ್ಸುಗಳಿಂದ ನಡೆದಿರುವಂತಹ ಘನಘೋರ ಕೃತ್ಯವಾಗಿದೆ. ಪ್ರೀತಿ- ಪ್ರೇಮದ ಹೆಸರಲ್ಲಿ ಒಬ್ಬ ತಾಯಿಯನ್ನು ಬೆತ್ತಲೆ ಗೊಳಿಸಿ ಥಳಿಸಿರುವುದು ನಾಗರಿಕ ಸಮಾಜಕ್ಕೆ ನಾಚಿಕೆಯಾಗುವಂತಿದೆ.
ಈ ಕೃತ್ಯಕ್ಕೆ ಕಾರಣರಾದವರನ್ನು ಸರಕಾರ ತಕ್ಷಣ ಬಂಧಿಸಿ, ಕಠಿಣ ಕಾನೂನು ವಿಧಿಸಿ ಅವರು ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳದಂತೆ ಕ್ರಮಕೈಗೊಳ್ಳಬೇಕಾಗಿದೆ. ನೊಂದ ತಾಯಿಯ ಮನಸ್ಸಿಗೆ ಸಾಂತ್ವನ, ಧೈರ್ಯ, ಪರಿಹಾರ ನೀಡಬೇಕಿರುವುದು ಸರಕಾರದ ಕರ್ತವ್ಯವಾಗಿದೆ. ಇಂತಹ ಕೃತ್ಯಗಳು ಪದೇಪದೇ ಮರು ಹುಟ್ಟು ಪಡೆಯದಂತೆ ಸರಕಾರ ಅತ್ಯಂತ ಕಠಿಣವಾದ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.
ಮಣಿಪುರದಲ್ಲಿ ಮಹಿಳೆಯರನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿದಂತಹ ಪ್ರಕರಣ, ಚಿಕ್ಕ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯಗಳು, ಭ್ರೂಣ ಹತ್ಯೆಗಳ ಸುದ್ದಿಗಳ ಜೊತೆ ಕಿತ್ತೂರಿನ ಇಂತಹ ತಲೆ ತಗ್ಗಿಸುವ ಪ್ರಕರಣಗಳು ಮಾನವ ಘನತೆಗೆ ವಿರುದ್ಧವಾಗಿದೆ.
-ಖುಷಿ ನಾಗರಾಜ್, ದಾವಣಗೆರೆ







