ಸಿಜೆಪಿ ಮತ್ತು ಜೆನ್‌ಜಿಫಿಕೇಶನ್: ಪ್ರಸ್ತುತ ಬೆಳವಣಿಗೆ, ಭವಿಷ್ಯದ ಸಾಧ್ಯತೆ

ಯುವಜನತೆಯ ಈ ನೈತಿಕ ಹೋರಾಟ ಇಪ್ಪತ್ತೊಂದನೇ ಶತಮಾನದ ಡಿಜಿಟಲ್ ಯುಗದ ಫಲಶ್ರುತಿ ಎಂದರೆ ತಪ್ಪಾಗಲಾರದು. ಈ ಘಟನೆಯಿಂದಲೇ ತಕ್ಷಣ ದೊಡ್ಡ ರಾಜಕೀಯ ಬದಲಾವಣೆ ಉಂಟಾಗುತ್ತದೆ ಎಂದು ನಿರೀಕ್ಷಿಸುವುದು ಮೂರ್ಖತನವಾಗುತ್ತದೆ. ಇದನ್ನು ಕೇವಲ ಕ್ಷಣಿಕ ಭಾವೋದ್ರೇಕವೆಂದು ತಳ್ಳಿಹಾಕುವುದೂ ದೂರದೃಷ್ಟಿಯ ಕೊರತೆಯಾಗುತ್ತದೆ. ಸದ್ಯಕ್ಕೆ ಸಿಜೆಪಿ ರಾಜಕೀಯ ಪರ್ಯಾಯವಂತೂ ಅಲ್ಲ. ಆದರೆ ಇವರು ಮೋದಿಯವರ ನಾರ್ಸಿಸಂ ಮತ್ತು ಸರಕಾರದ ಫ್ಯಾಶಿಸಂ ಆಡಳಿತವನ್ನು ತಮ್ಮದೇ ವ್ಯಂಗ್ಯ, ವಿಡಂಬನೆ ಮೂಲಕ ದಿಟ್ಟವಾಗಿ ಟೀಕಿಸುತ್ತಿದ್ದಾರೆ. ಅವರ ವೈಭವೀಕರಿಸಲ್ಪಟ್ಟ ವಿಶ್ವಗುರುತನದ ಟೊಳ್ಳುತನವನ್ನು ಬಟಾ ಬಯಲುಗೊಳಿಸಿದ್ದಾರೆ. ಈ ‘56 ಇಂಚಿನ ಎದೆ’ಯ ವ್ಯಕ್ತಿತ್ವವನ್ನು Delegitimization ಗೊಳಿಸುತ್ತಿದ್ದಾರೆ.
ಇತ್ತೀಚಿನ ಬೆಳವಣಿಗೆಗಳು
ಕಳೆದ ಒಂದು ತಿಂಗಳಿಂದ ನಡೆಯುತ್ತಿರುವ ಸಿಜೆಪಿ(ಕಾಕ್ರೋಚ್ ಜನತಾ ಪಕ್ಷ) ಪ್ರತಿಭಟನೆ ಈಗ ತಾರ್ಕಿಕ ಹಂತಕ್ಕೆ ತಲುಪುತ್ತಿದೆ. ಪ್ರಶ್ನೆಪತ್ರಿಕೆ ಸೋರಿಕೆಯ ಕಾರಣಕ್ಕೆ ನೀಟ್‌ನ(ರಾಷ್ಟ್ರೀಯ ಅರ್ಹತಾ ಹಾಗೂ ಪ್ರವೇಶ ಪರೀಕ್ಷೆ) ಮೊದಲ ಪರೀಕ್ಷೆ ರದ್ದುಗೊಂಡು ಎರಡನೇ ಬಾರಿ ನಡೆಸಬೇಕಾಯಿತು. ಈ ಹಗರಣದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಅದರ ಮೊದಲ ಬೇಡಿಕೆಯಾಗಿತ್ತು. ಅಧಿಕೃತ ಮಾಹಿತಿ ಪ್ರಕಾರ 2014ರಿಂದ ಇಂದಿನವರೆಗೆ ಸುಮಾರು 152 ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳು ಸೋರಿಕೆಯಾಗಿವೆ. ಈ ಸೋರಿಕೆಗಳಿಂದ ವರ್ಷಗಳ ಕಾಲ ಶ್ರಮಪಟ್ಟು ಓದಿದ ಲಕ್ಷಾಂತರ ಯುವಜನತೆಯ ಜೀವನ ಹಾಳಾಗಿದೆ. ಅವರಲ್ಲಿ ಅನೇಕರ ಪೋಷಕರು ಮಕ್ಕಳ ವಿದ್ಯಾಭ್ಯಾಸಕ್ಕಾಗಿ, ಪರೀಕ್ಷಾ ಶುಲ್ಕ ಕಟ್ಟಲು ತಮ್ಮ ಜಮೀನು ಅಥವಾ ಮನೆಯನ್ನು ಮಾರಬೇಕಾದ ಪರಿಸ್ಥಿತಿ ಎದುರಿಸಿದ್ದಾರೆ. ನೀಟ್ ಹಗರಣದ ನಂತರ ಖಿನ್ನತೆಗೆ ಒಳಗಾದ 22 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡರು. ಇದು ಪ್ರಭುತ್ವ ಮತ್ತು ಕಾರ್ಯಾಂಗದ ವೈಫಲ್ಯದ ಕಾರಣ ಉಂಟಾದ ಬಿಕ್ಕಟ್ಟು.
ಇದನ್ನು ಪ್ರಶ್ನಿಸಿ ಸಿಜೆಪಿ ಪಕ್ಷದವರು ದಿಲ್ಲಿಯ ಜಂತರ್‌ಮಂತರ್‌ನಲ್ಲಿ ಕಳೆದ ಒಂದು ತಿಂಗಳಿಂದ ಪ್ರತಿಭಟನೆ ಮಾಡುತ್ತಿದ್ದಾರೆ. ಇವರನ್ನು ಬೆಂಬಲಿಸಿ ಸೋನಂ ವಾಂಗ್ಚುಕ್ ನಿರಂತರ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದರು. ಆದರೆ ಅವರನ್ನು ಪೊಲೀಸರು ವೇದಿಕೆಯಿಂದಲೇ ಬಲವಂತವಾಗಿ ಕರೆದೊಯ್ದು ಬಂಧನದಲ್ಲಿಟ್ಟರು. ಆನಂತರವೂ ಅವರು ಉಪವಾಸವನ್ನು ಮುಂದುವರಿಸಿದ್ದರು. ಈಗ ಅವರು ಯುವಜನತೆಯ ಹೋರಾಟದ ಮುಖ್ಯ ಬೇಡಿಕೆಯಾಗಿದ್ದ ಧರ್ಮೆಂದ್ರ ಪ್ರಧಾನ್ ರಾಜೀನಾಮೆ ಕುರಿತು ಪ್ರಸ್ತಾಪಿಸದೆ ಉಪವಾಸ ಕೊನೆಗೊಳಿಸಿದ್ದಾರೆ.
ಈ ಸಂಸತ್ ಚಲೋ ಜಾಥಾಗೆ ದಿಲ್ಲಿಯ ಬೆಳಗಿನ ಮೊದಲ ಕಿರಣ ಮೂಡುವ ಮುನ್ನವೇ ಲಕ್ಷಾಂತರ ಜನಸಂಖ್ಯೆಯ ಯುವಜನತೆ ಜಂತರ್‌ಮಂತರ್‌ಗೆ ಧಾವಿಸಿದರು. ಇವರು ಪಂಜಾಬ್, ಉತ್ತರ ಪ್ರದೇಶ, ಮಧ್ಯ ಪ್ರದೇಶ, ಹರ್ಯಾಣ ಹಾಗೂ ಮಹಾರಾಷ್ಟ್ರ ರಾಜ್ಯಗಳಿಂದ ರೈಲಿನಲ್ಲಿ, ಬಸ್ಸಿನಲ್ಲಿ, ವಿಮಾನದಲ್ಲಿ, ಮೆಟ್ರೋದಲ್ಲಿ ಬಂದರು. ಪ್ರತೀ ಗಂಟೆಗೂ ಅವರ ಸಂಖ್ಯೆ ಹೆಚ್ಚುತ್ತಲೇ ಹೋಯಿತು. ತಮ್ಮ ಪೋಷಕರು(ಬಹುತೇಕ) ಇದೇ ಬಿಜೆಪಿಯನ್ನು ಬೆಂಬಲಿಸಿ ಮಾಡಿದ ಅನ್ಯಾಯವನ್ನು ಸರಿಪಡಿಸಲು, ತಮ್ಮ ಹಕ್ಕುಗಳನ್ನು ಮರಳಿ ಪಡೆದುಕೊಳ್ಳಲು ಎಂಬಂತೆ ಹರಿದು ಬಂದ ಈ ಜೆನ್ ಜಿ(14-29 ವಯಸ್ಸು) ತಾವು ಪ್ರಜಾಪ್ರಭುತ್ವದ ನಾಗರಿಕರು ಎಂಬಂತೆ ದಿಟ್ಟವಾಗಿ ಮಾತನಾಡುತ್ತಿದ್ದರು. ಜುಲೈ 20ರ ವೇಳೆಗೆ ಈ ಯುವಜನತೆ ದೊಡ್ಡ ಶಕ್ತಿಯಾಗಿ ರೂಪಾಂತರಗೊಂಡಿರುವುದು ಸ್ಪಷ್ಟವಾಯಿತು.
ಜುಲೈ 20ರಂದು ಜಂತರ್‌ಮಂತರ್‌ನಿಂದ ಸಂಸದ್ ಕಡೆಗೆ ಆವರಿಸಿದ ಈ ಪ್ರತಿಭಟನೆಯ ಅಲೆ ಈ ಪ್ರಮಾಣದಲ್ಲಿ ದೊಡ್ಡದಾಗಿರುತ್ತದೆ ಎಂಬುದನ್ನು ಪೊಲೀಸರು ಮತ್ತು ಕೇಂದ್ರ ಗೃಹ ಸಚಿವಾಲಯ ಅಂದಾಜಿಸಿರಲಿಲ್ಲ. ಇದಕ್ಕಾಗಿ ಯಾವುದೇ ಸಿದ್ಧತೆ ಮಾಡಿಕೊಂಡಿರಲಿಲ್ಲ. ಈ ಪ್ರತಿಭಟನೆಯ ಮಾಹಾಪೂರವನ್ನು ತಡೆಗಟ್ಟಲು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಿದರು. ಬಸ್ಸುಗಳನ್ನು ತಡೆದರು, ರಸ್ತೆಗಳನ್ನು ಬಂದ್ ಮಾಡಿದರು, ಮೆಟ್ರೋ ನಿಲ್ದಾಣಗಳನ್ನು ಮುಚ್ಚಿದರು. ಇಂಟರ್ನೆಟ್ ಸಂಪರ್ಕವನ್ನು ಅಸ್ತವ್ಯಸ್ತಗೊಳಿಸಲು ಪ್ರಯತ್ನಿಸಿದರು. ಈ ಪ್ರತಿಭಟನೆಯನ್ನು ಹತ್ತಿಕ್ಕಲು ಪೊಲೀಸರು ಬ್ಯಾರಿಕೇಡ್‌ಗಳಿಗೆ ವೆಲ್ಡಿಂಗ್‌ಮಾಡಿದರು. ಅದಕ್ಕೆ ವಿದ್ಯುತ್ ಹರಿಸಿದರು ಎನ್ನುವ ಆರೋಪ ಕೇಳಿಬಂತು. ಕಲ್ಲುಗಳಿಂದ ತುಂಬಿದ ಲಾರಿಗಳನ್ನು ತಡೆಗೋಡೆಗಳಾಗಿ ನಿಲ್ಲಿಸಿದರು. ಮುಂಚಿತವಾಗಿಯೇ ಹಾನಿಗೊಳಗಾದ ವಾಹನಗಳನ್ನು ತಂದಿಟ್ಟು ಈ ಜೆನ್‌ಜಿ ಹಿಂಸಾಚಾರ ನಡೆಸಿದ್ದಾರೆ ಮತ್ತು ಇದರಿಂದ ಬಚಾವಾಗಲು ಪೊಲೀಸರು ಆತ್ಮರಕ್ಷಣೆಗಾಗಿ ಕ್ರಮ ಕೈಗೊಂಡಿದ್ದಾರೆ ಎಂಬ ಸುಳ್ಳು ಸುದ್ದಿ ಪ್ರಚಾರ ಮಾಡಲು ಪ್ರಯತ್ನಿಸಿದರು. ಆರ್‌ಎಎಫ್(ರ್ಯಾಪಿಡ್ ಆ್ಯಕ್ಷನ್ ಫೋರ್ಸ್) ಸಿಬ್ಬಂದಿ ಕಾರ್ಯಾಚರಣೆಗೆ ಮುನ್ನ ತಮ್ಮ ಸಮವಸ್ತ್ರಗಳಿಂದ ಹೆಸರಿನ ಫಲಕಗಳನ್ನು ತೆಗೆದುಹಾಕಿದರು. ಲಾಠಿ ಮತ್ತು ಕೋಲುಗಳಿಂದ ಶಸ್ತ್ರಸಜ್ಜಿತವಾಗಿದ್ದ ಸಾಮಾನ್ಯ ಉಡುಪಿನ ಗೂಂಡಾಗಳ ದೊಡ್ಡ ಗುಂಪನ್ನೂ ಜೊತೆಗೆ ಕರೆತಂದರು. ಪೊಲೀಸರು ಮತ್ತು ಆರ್‌ಎಎಫ್ ಹಿಂಸಾತ್ಮಕವಾಗಿ ಲಾಠಿ ಬೀಸಿದರು. ಮಕ್ಕಳ ತಲೆಗಳನ್ನು ಒಡೆದರು, ಕೈಕಾಲುಗಳನ್ನು ಮುರಿದರು. ಅಶ್ರುವಾಯು ಸಿಡಿಸಿದರು. ಪೊಲೀಸರಿಗೆ ಬೆಂಬಲವಾಗಿ ಮಡಿಲ ಮಾಧ್ಯಮಗಳು ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡಲು ಸಿದ್ಧವಾಗಿದ್ದರು. ಆದರೆ ಯಾವುದೂ ಫಲ ನೀಡಲಿಲ್ಲ. ಯುವಜನತೆ ತಮ್ಮ ಜಾಥಾವನ್ನು ಮುಂದುವರಿಸಿದರು. ಪ್ರತಿರೋಧವನ್ನು ದಿಟ್ಟವಾಗಿ ದಾಖಲಿಸಿದರು. ಈ ಯುವ ಪ್ರತಿಭಟನಾಕಾರರು ರೀಲ್ಸ್‌ಗಳು ಮೀಮ್‌ಗಳು ಮತ್ತು ವೀಡಿಯೊಗಳ ಮೂಲಕ ಪೊಲೀಸರ ಪ್ರಯತ್ನವನ್ನು ವಿಫಲಗೊಳಿಸಿದರು. ಮೋದಿ ಮತ್ತು ಅವರ ಸಚಿವ ಸಂಪುಟವನ್ನು ವಿಂಡಬನಾತ್ಮಕವಾಗಿ ಗೇಲಿ ಮಾಡಿದರು.
ಮೋದಿ ಸರಕಾರದ ದಮನ ನೀತಿ ಕೈಗೂಡದೆ ಯುವಜನತೆಯ ನೈತಿಕ ಹೋರಾಟ ದೇಶದ ಜನರ ಮುಂದೆ ಅನಾವರಣಗೊಂಡಿತು. ಇದು ಇಪ್ಪತ್ತೊಂದನೇ ಶತಮಾನದ ಡಿಜಿಟಲ್ ಯುಗದ ಫಲಶ್ರುತಿ ಎಂದರೆ ತಪ್ಪಾಗಲಾರದು. ಈ ಘಟನೆಯಿಂದಲೇ ತಕ್ಷಣ ದೊಡ್ಡ ರಾಜಕೀಯ ಬದಲಾವಣೆ ಉಂಟಾಗುತ್ತದೆ ಎಂದು ನಿರೀಕ್ಷಿಸುವುದು ಮೂರ್ಖತನವಾಗುತ್ತದೆ. ಇದನ್ನು ಕೇವಲ ಕ್ಷಣಿಕ ಭಾವೋದ್ರೇಕವೆಂದು ತಳ್ಳಿಹಾಕುವುದೂ ದೂರದೃಷ್ಟಿಯ ಕೊರತೆಯಾಗುತ್ತದೆ. ಸದ್ಯಕ್ಕೆ ಸಿಜೆಪಿ ರಾಜಕೀಯ ಪರ್ಯಾಯವಂತೂ ಅಲ್ಲ. ಆದರೆ ಇವರು ಮೋದಿಯವರ ನಾರ್ಸಿಸಂ ಮತ್ತು ಸರಕಾರದ ಫ್ಯಾಶಿಸಂ ಆಡಳಿತವನ್ನು ತಮ್ಮದೇ ವ್ಯಂಗ್ಯ, ವಿಡಂಬನೆ ಮೂಲಕ ದಿಟ್ಟವಾಗಿ ಟೀಕಿಸುತ್ತಿದ್ದಾರೆ. ಅವರ ವೈಭವೀಕರಿಸಲ್ಪಟ್ಟ ವಿಶ್ವಗುರುತನದ ಟೊಳ್ಳುತನವನ್ನು ಬಟಾ ಬಯಲುಗೊಳಿಸಿದ್ದಾರೆ. ಈ ‘56 ಇಂಚಿನ ಎದೆ’ಯ ವ್ಯಕ್ತಿತ್ವವನ್ನು Delegitimization ಗೊಳಿಸುತ್ತಿದ್ದಾರೆ.
ಮುಂದಿನ ರಾಜಕೀಯ ಸಾಧ್ಯತೆಗಳು
ಈ ಜೆನ್‌ಜಿ ಯಾವುದೇ ಸೈದ್ಧಾಂತಿಕ ಸಂಘಟನೆಗೆ ಸೇರಿಕೊಂಡವರಲ್ಲ, ಇವರಿಗೆ ಯಾವುದೇ ಸಿದ್ಧಾಂತದ ಅರಿವು ಮತ್ತು ಗ್ರಹಿಕೆಯೂ ಇದ್ದಂತಿಲ್ಲ. ಸಿಜೆಪಿಯ ಹೋರಾಟವು ನಿರ್ದಿಷ್ಟ ಸೈದ್ಧಾಂತಿಕ ಪ್ರಣಾಳಿಕೆ ಇಲ್ಲದ ಮುಕ್ತ ವೇದಿಕೆ ಎನ್ನುವ ಕಾರಣಕ್ಕೆ ಯುವಜನತೆ ಅತ್ಯುತ್ಸಾಹದಿಂದ ಪಾಲ್ಗೊಂಡರು. ಯಾವುದೇ ಸಂಘಟನೆ, ನಾಯಕತ್ವವಿಲ್ಲದ ಈ ಪ್ರತಿಭಟನೆ ಎಷ್ಟು ದಿನಗಳ ಕಾಲ ಮುಂದುವರಿಯುತ್ತದೆ ಎನ್ನುವ ಪ್ರಶ್ನೆಗೆ ಸದ್ಯಕ್ಕಂತೂ ಉತ್ತರವಿಲ್ಲ. ಈಗ ಕೇವಲ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಎನ್ನುವ ಒಂದಂಶದ ಬೇಡಿಕೆ ಮುಂದಿಟ್ಟುಕೊಂಡು ಹೋರಾಟ ಮಾಡುತ್ತಿದ್ದಾರೆ. ಈ ಕ್ಷಣಕ್ಕೆ ತಮ್ಮ ಶೈಕ್ಷಣಿಕ ಭವಿಷ್ಯಕ್ಕೆ ಮಾರಕವಾಗಿರುವ ಮೋದಿ ನೇತೃತ್ವದ ಸರಕಾರದ ವಿರುದ್ಧ ಸಿಟ್ಟಾಗಿದ್ದಾರೆ ಮತ್ತು ಅವರಿಂದ ಉತ್ತರದಾಯಿತ್ವ ಕೇಳುತ್ತಿದ್ದಾರೆ ಎನ್ನುವುದು ಮಾತ್ರ ಸತ್ಯ. ಇದರಾಚೆಗೆ ಇವರಿಂದ ಭವಿಷ್ಯದಲ್ಲಿ ಶಿಕ್ಷಣದ ಸಮಗ್ರ ಬದಲಾವಣೆಗಾಗಿ ಸಂಘಟಿತರಾಗುತ್ತಾರೆ ಎಂದು ಆಶಿಸಲು ಸಾಧ್ಯವಿಲ್ಲ ಮತ್ತು ಅಂತಹ ನಿರೀಕ್ಷೆ ಇಟ್ಟುಕೊಳ್ಳುವುದು ತಪ್ಪಾಗುತ್ತದೆ.
ಭಾರತದಂತಹ ಆಂಶಿಕ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾರ್ವಜನಿಕ ಆಕ್ರೋಶ, ಪ್ರತಿಭಟನೆ ಸರ್ವೇ ಸಾಮಾನ್ಯವಾಗಿರುತ್ತದೆ. ಅದರ ಆಯಸ್ಸು ಆ ಚಳವಳಿಯ ಸಾಮರ್ಥ್ಯ ಹಾಗೂ ಕಾರ್ಯತಂತ್ರ ಮತ್ತು ಪ್ರಭುತ್ವದ ಧೋರಣೆ ಹಾಗೂ ನಿಲುವಿನ ಮೇಲೆ ಅವಲಂಬಿತವಾಗಿರುತ್ತದೆ. ಮೋದಿ ಆಡಳಿತದ ಕಳೆದ ಹನ್ನೆರಡು ವರ್ಷಗಳಲ್ಲಿ 2019-20ರ ಸಿಎಎ-ಎನ್‌ಆರ್‌ಸಿ ವಿರುದ್ಧದ ಹೋರಾಟ, 2020-21ರ ಮೂರು ಕೃಷಿ ಮಸೂದೆಗಳ ವಿರುದ್ಧ ರೈತರ ಹೋರಾಟದ ನಂತರ ಈಗ 2026ರಲ್ಲಿ ಸಿಜೆಪಿಯ ನೀಟ್ ಹಗರಣದ ವಿರುದ್ಧದ ಹೋರಾಟಗಳು ಮಾತ್ರ ದೊಡ್ಡ ಮಟ್ಟದಲ್ಲಿ ಸಂಚಲನ ಮೂಡಿಸಿವೆ. ಇದರ ಪೈಕಿ ಸಿಎಎ ಹೋರಾಟದಲ್ಲಿ ಭಾಗವಹಿಸಿದ ಸಾಮಾಜಿಕ ಕಾರ್ಯಕರ್ತರು, ಮುಸ್ಲಿಮ್‌ಮುಖಂಡರು, ಮಹಿಳೆಯರು, ವಿದ್ಯಾರ್ಥಿಗಳ ವಿರುದ್ಧ ಯುಎಪಿಎ ಕಾಯ್ದೆ ಹೇರಿ ಬಂಧಿಸಿದ ಮೋದಿ ಸರಕಾರ ಆ ಪ್ರತಿಭಟನೆಯನ್ನು ಸದ್ಯಕ್ಕಂತೂ ನಿಷ್ಕ್ರಿಯಗೊಳಿಸಿದೆ ಮತ್ತು ನಾಗರಿಕ ಸಮಾಜ ಹಾಗೂ ವಿರೋಧ ಪಕ್ಷಗಳು ಈ ಸಿಎಎ ವಿರುದ್ಧದ ಹೋರಾಟಕ್ಕೆ ಯಾವುದೇ ಬಗೆಯ ಬೆಂಬಲ ಸೂಚಿಸದೆ ದೂರವುಳಿದವು. ಈ ಕಾರಣದಿಂದ ಇದರಲ್ಲಿ ಭಾಗವಹಿಸಿದ ಸಂಘಟನೆಗಳು ಮತ್ತು ವ್ಯಕ್ತಿಗಳು ಅನಾಥರಾದರು ಮತ್ತು ಮೋದಿ ಸರಕಾರದ ಫ್ಯಾಶಿಸಂ ದಬ್ಬಾಳಿಕೆಗೆ ಸುಲಭದ ಬಲಿಪಶುಗಳಾದರು. ಕೃಷಿ ಮಸೂದೆಯ ವಿರುದ್ಧದ ರೈತರ ಹೋರಾಟಕ್ಕೆ ವಿರೋಧ ಪಕ್ಷಗಳು ಬೇಷರತ್ ಬೆಂಬಲ ನೀಡಿದರು ಮತ್ತು ಉ.ಪ್ರ., ಹರ್ಯಾಣ ಹಾಗೂ ಪಂಜಾಬ್ ಭಾಗದ ರೈತ ಸಂಘಟನೆಗಳು ಒಗ್ಗಟ್ಟಾಗಿ ಒಂದು ವರ್ಷ ಕಾಲ ಈ ಚಳವಳಿಯನ್ನು ಮುಂದುವರಿಸಿದರು. ಕಡೆಗೂ ಚುನಾವಣಾ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಮೋದಿ ಸರಕಾರ ಮೂರು ಮಸೂದೆಗಳನ್ನು ಹಿಂಪಡೆಯಿತು. ವಿಪರ್ಯಾಸವೆಂದರೆ ನಂತರ ನಡೆದ ಉ.ಪ್ರ. ಹಾಗೂ ಹರ್ಯಾಣದ ಚುನಾವಣೆಗಳಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿತು ಮತ್ತು ರೈತ ಹೋರಾಟಕ್ಕೆ ಯಾವುದೇ ಬೆಂಬಲ ಕೊಡದೆ ತಟಸ್ಥವಾಗಿದ್ದ ಆಪ್ ಪಕ್ಷ ಪಂಜಾಬ್‌ಚುನಾವಣೆಯಲ್ಲಿ ಗೆದ್ದಿತು. ಇದು ಪ್ರಜಾಪ್ರಭುತ್ವದ ವೈರುಧ್ಯ ಎನ್ನುವುದು ನಿಜವಾದರೂ ಸಹ ಬಿಜೆಪಿ ಮತ್ತು ಆರೆಸ್ಸೆಸ್ ಸಂಘಟನೆಯ ಹಿಂದುತ್ವ ರಾಜಕಾರಣದ ಪ್ರಾಬಲ್ಯ, ಮತಧರ್ಮ ಧ್ರುವೀಕರಣ, ಸಂಘಟನೆಯ ಶಕ್ತಿ ಹಾಗೂ ಚುನಾವಣಾ ಆಕ್ರಮ ಮುಖ್ಯ ಕಾರಣಗಳು ಎಂಬುದು ಸಹ ವಾಸ್ತವ.
ಈ ಹಿನ್ನೆಲೆಯಲ್ಲಿ ಸಿಜೆಪಿ ಮತ್ತು ಯವಜನತೆಯ ಈ ಹೋರಾಟ ಭವಿಷ್ಯದಲ್ಲಿ ಯಾವ ಬಗೆಯ ರಾಜಕೀಯ ಬದಲಾವಣೆಗಳಿಗೆ ಕಾರಣವಾಗುತ್ತದೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ. ಸದ್ಯಕ್ಕಂತೂ ಮೋದಿ ಸರಕಾರಕ್ಕೆ ತಾತ್ಕಾಲಿಕ ಹಿನ್ನಡೆಯಾಗಿದೆ. ಇದನ್ನು ಬಳಸಿಕೊಂಡು ವಿರೋಧ ಪಕ್ಷಗಳು ರಾಜಕೀಯವಾಗಿ ಹೇಗೆ ಮುನ್ನಡೆಸುತ್ತಾರೆ ಎಂದು ಕಾದು ನೋಡಬೇಕು. ಯುವಜನತೆಯ ಈ ಆಕ್ರೋಶ ಕ್ಷಣಿಕ ಎಂದು ಹೇಳಲು ಸಾಧ್ಯವಿಲ್ಲದಿದ್ದರೂ ದಿಢೀರನೆ ಹುಟ್ಟಿಕೊಂಡ ಅಸಂಘಟಿತ ಹೋರಾಟ ಎಂದು ಹೇಳಬಹುದು. ಈ ಚಳವಳಿಯಲ್ಲಿ ಸಾಮಾಜಿಕ ರಚನೆಯ ಸ್ವರೂಪ ಹೇಗಿದೆ ಎಂದು ಸ್ಪಷ್ಟವಾಗಿ ಗೋಚರಿಸುತ್ತಿಲ್ಲ. ಇದುವರೆಗೂ ಬಿಜೆಪಿ ಬೆಂಬಲಿಗರಾಗಿದ್ದ ಈ ಯುವಜನತೆಯ ಬಹುತೇಕ ಪೋಷಕರು ಅಂದರೆ ಮಧ್ಯಮವರ್ಗ ಸಿಜೆಪಿ ಪ್ರತಿಭಟನೆಯಲ್ಲಿ ಅನಿವಾರ್ಯವಾಗಿ ಭಾಗವಹಿಸಬೇಕಿದೆ. ಇದು ಮುಂದಿನ ರಾಜಕೀಯ ದಿಕ್ಕನ್ನು ಬದಲಿಸುತ್ತದೆಯೇ? ಅನುಮಾನ. ಸದ್ಯಕ್ಕೆ ಈ ಜೆನ್‌ಜಿ ಹೋರಾಟ ಯಾವುದೇ ಸಾಮಾಜಿಕ ಆಶಯಗಳನ್ನು ಕೈಗೆತ್ತಿಕೊಳ್ಳದೆ 1974ರ ಜೆ.ಪಿ.ಯವರ ಭ್ರಷ್ಟಾಚಾರ ವಿರೋಧಿ ಆಂದೋಲನದ ಸ್ವರೂಪದಲ್ಲಿದೆ.
ಮೋದಿ ಮತ್ತು ಶಾ ಆಂತರ್ಯದಲ್ಲಿ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷ ನಡೆಸುತ್ತಿರುವ ನೀಟ್ ವಿರುದ್ಧದ ರಚನಾತ್ಮಕ ಹೋರಾಟ ಹೆಡ್‌ಲೈನ್‌ನಲ್ಲಿ ಇರುವುದಕ್ಕಿಂತ ಸಿಜೆಪಿ ಪಕ್ಷದ ಪ್ರತಿಭಟನೆ ಮುಖ್ಯ ಚರ್ಚೆಯಲ್ಲಿ ಇದ್ದಷ್ಟು ತಮಗೆ ಅನುಕೂಲ ಎಂದು ಭಾವಿಸಿದ್ದರು. ಆದರೆ ದಿನಕಳೆದಂತೆ ಎಲ್ಲವೂ ತಲೆಕೆಳಗಾಗಿ ಯುವಜನತೆಯ ಹೋರಾಟ ಕೇಂದ್ರ ಸರಕಾರಕ್ಕೆ ನುಂಗಲಾರದ ಬಿಸಿ ತುಪ್ಪವಾಗಿದೆ. ತಮ್ಮ ವಿರುದ್ಧದ ಯಾವುದೇ ಚಳವಳಿಯನ್ನು ಪೊಲೀಸ್ ವ್ಯವಸ್ಥೆ ಹಾಗೂ ಯುಎಪಿಎ ಕರಾಳ ಕಾಯ್ದೆ ಮೂಲಕ ದಮನ ಮಾಡುತ್ತಿದ್ದ ‘ಮೋಶಾ’ ಜೋಡಿ ಈ ಜೆನ್‌ಜಿ ಪ್ರತಿಭಟನೆಯನ್ನು ಎದುರಿಸಲು ಸಾಧ್ಯವಾಗದೆ ವಿಚಲಿತವಾಗಿದೆೆ. ಪತ್ರಕರ್ತ ವರ್ಗೀಸ್ ಕೆ. ಜಾರ್ಜ್ ‘‘ಈಗಿನ 20 ಪ್ಲಸ್ ವಯಸ್ಸಿನ ಹೋರಾಟಗಾರರು 2014ರಲ್ಲಿ ಮೋದಿ ಅಧಿಕಾರಕ್ಕೆ ಬಂದಾಗ ಎಂಟರಿಂದ ಹನ್ನೆರೆಡು ವಯಸ್ಸಿನವರಾಗಿದ್ದರು. ಈ ಯುವಜನತೆಯ ತಂದೆತಾಯಿ ಮೋದಿಯವರನ್ನು ಬೆಂಬಲಿಸಿ ಮತ ಹಾಕಿದರೆ ಇವರ ಮಕ್ಕಳು ತಮ್ಮ ಪೋಷಕರ ಈ ನಿರ್ಧಾರದ ದುಷ್ಪರಿಣಾಮವನ್ನು ಅನುಭವಿಸುತ್ತಿದ್ದಾರೆ. ಮೋದಿ ನೇತೃತ್ವದಲ್ಲಿ ಹಿಂದುತ್ವ 2.0 ತನ್ನ ಬೆಳವಣಿಗೆಯನ್ನು ಕಂಡುಕೊಳ್ಳಲು ವಾಟ್ಸ್‌ಆ್ಯಪ್ ತಲೆಮಾರು ಕಾರಣವಾಗಿದ್ದರೆ ಇನ್‌ಸ್ಟಾಗ್ರಾಂ ತಲೆಮಾರು ಇದನ್ನು ಚಾಲೆಂಜ್ ಮಾಡುತ್ತಿದ್ದಾರೆ’’ ಎಂದು ಬರೆಯುತ್ತಾರೆ.
ಸದ್ಯ ಅ-ಪಾಲಿಟಿಕಲ್ ಆಗಿರುವ ಈ ಸಿಜೆಪಿ ಪಕ್ಷವು ಏಕಾಂಗಿಯಾಗಿ ಬಿಜೆಪಿಯ ದೈತ್ಯಶಕ್ತಿಯೊಂದಿಗೆ ಮುಖಾಮುಖಿಯಾಗುವಷ್ಟು ಬಲಶಾಲಿಯಾಗಿಲ್ಲ. ಇದಿನ್ನೂ ಬಾಲ್ಯಾವಸ್ಥೆಯಲ್ಲಿದೆ. ಸದ್ಯಕ್ಕೆ ಇವರು ಪ್ರತಿರೋಧದ ಸ್ಫೂರ್ತಿಯನ್ನು ಮಾತ್ರ ಕಾಣಿಸಬಲ್ಲರು. ಪರ್ಯಾಯ ರಾಜಕೀಯವನ್ನಲ್ಲ. ಇವರ ಹೋರಾಟದ ನಿರಂತರತೆ ಇನ್ನೂ ಪರೀಕ್ಷೆಗೆ ಒಳಗಾಗಿಲ್ಲ. ಆದರೆ ಇದು ಅಭೂತಪೂರ್ವ ಸಂಘಟನೆಯಾಗಬೇಕಾದರೆ ತನ್ನ ಸಾಮಾಜಿಕ, ಆರ್ಥಿಕ ಪ್ರಣಾಳಿಕೆಯನ್ನು ಸ್ಪಷ್ಟಪಡಿಸಿಕೊಳ್ಳಬೇಕಾಗುತ್ತದೆ. ನಂತರದ ಹಂತದಲ್ಲಿ ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳು ಇವರೊಂದಿಗೆ ಕೈಜೋಡಿಸಬೇಕಾಗುತ್ತದೆ. ಜಂಟಿಯಾಗಿ ಕಾರ್ಯತಂತ್ರ ರೂಪಿಸಬೇಕಾಗುತ್ತದೆ. ಈ ಹಿಂದೆ ಎಪ್ಪತ್ತರ ದಶಕದ ಜೆ.ಪಿ. ಚಳವಳಿಯನ್ನು ಆಗಿನ ಜನಸಂಘ ಮತ್ತು 21ನೇ ಶತಮಾನದ ಅಣ್ಣಾ ಹಝಾರೆ ಪ್ರತಿಭಟನೆಯನ್ನು ಈಗಿನ ಬಿಜೆಪಿ ಸಂಪೂರ್ಣವಾಗಿ ತನ್ನ ಅನುಕೂಲಕ್ಕೆ ಬಳಸಿಕೊಂಡು ಸರಾಗವಾಗಿ ಅಧಿಕಾರ ಪಡೆದುಕೊಂಡರು. ಆದರೆ ಈಗಿನ ಇನಸ್ಟಾಗ್ರಾಂ ಯುಗದ ಜೆನ್ ಜಿಯ ವಿರೋಧದ ಬಿಸಿಯನ್ನು ತಡೆದುಕೊಳ್ಳಲು ಸಾಧ್ಯವಾಗದೆ ಗೊಂದಲದಲ್ಲಿದ್ದಾರೆ. ಇವರ ಸಂಘಟನಾ ಶಕ್ತಿ ಮತ್ತು ಹಣಬಲದ ಮುಂದೆ ಸಿಜೆಪಿ ಮತ್ತು ವಿರೋಧ ಪಕ್ಷಗಳು ಸರಿಸಾಟಿಯಲ್ಲದೇ ಹೋದರೂ ಸಹ ಐಕ್ಯ ಹೋರಾಟ ಮತ್ತು ಸಂಘಟನೆ ಬದಲಾವಣೆ ತರಬಲ್ಲದು. ವರ್ಗೀಸ್‌ಹೇಳಿದಂತೆ ಜೆನ್‌ಜಿ ಪ್ರತಿಭಟನೆ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ರಿಸ್ಕ್‌ಗಳನ್ನು ಹಾಗೂ ಅವಕಾಶಗಳನ್ನು ಕಲ್ಪಿಸುತ್ತದೆ. ಯಾರಿಗೆ ಏನು ಎನ್ನುವುದು ಮುಂದಿನ ದಿನಗಳಲ್ಲಿ ಗೊತ್ತಾಗುತ್ತದೆ.






