ಅಧಿಕಾರಿಗಳ ನಿರ್ಲಕ್ಷ್ಯದಿಂದ ದುರಸ್ತಿಯಾಗದ ಶುದ್ಧ ನೀರಿನ ಘಟಕಗಳು

ಹೊಸಕೋಟೆ, ನ.16: ಗ್ರಾಮೀಣ ಜನರಿಗೆ ಶುದ್ಧವಾದ ನೀರು ಕೊಡುವ ಉದ್ದೇಶದಿಂದ ಸರಕಾರ ನಿರ್ಮಿಸಿರುವ ಗ್ರಾಮೀಣ ಶುದ್ಧ ನೀರಿನ ಘಟಕಗಳು ತಾಲೂಕಿನಾದ್ಯಂತ ಜನಪ್ರತಿನಿಧಿಗಳ, ಅಧಿಕಾರಿಗಳ ನಿರ್ಲಕ್ಷ್ಯದಿಂದ ದುರಸ್ತಿಗೊಳ್ಳದೆ ನಿಷ್ಪ್ರಯೋಜಕವಾಗಿ ಧೂಳು ತಿನ್ನುತ್ತಿವೆ. ಮತ್ತೊಂದೆಡೆ ಶುದ್ಧ ಕುಡಿಯುವ ನೀರಿಗಾಗಿ ಜನರು ಹಪಹಪಿಸುತ್ತಿದ್ದಾರೆ. ಶುದ್ಧ ನೀರು ಸಿಗದೆ ಫ್ಲೋರೈಡ್‌ಯುಕ್ತ ಬೋರ್‌ವೆಲ್ ನೀರನ್ನೇ ಆಶ್ರಯಿಸಿದ್ದಾರೆ.
ಹೊಸಕೋಟೆ ತಾಲೂಕಿನಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹಲವು ಗ್ರಾಮಗಳ ವ್ಯಾಪ್ತಿಯಲ್ಲಿ ಶುದ್ದಕುಡಿಯುವ ನೀರಿನ ಘಟಕಗಳನ್ನು ನಿರ್ಮಿಸಲಾಗಿದೆ. ಒಂದು ವರ್ಷವೂ ಚಾಲ್ತಿಯಲ್ಲಿ ಇಲ್ಲದೇ ಕೆಟ್ಟುನಿಂತಿವೆ. ಇದು ಕೇವಲ ಒಂದೆರಡು ಹಳ್ಳಿಗಳ ಪರಿಸ್ಥಿತಿ ಅಲ್ಲ. ಬಹುತೇಕ ಗ್ರಾಮಗಳಲ್ಲಿ ಈ ಸಮಸ್ಯೆ ತಲೆದೋರಿದೆ
ನಂದಗುಡಿ ಹೋಬಳಿಯ ನಂದಗುಡಿ ಗ್ರಾಮ ಪಂಚಾಯತ್ ಕೇಂದ್ರವಾಗಿದ್ದು ಗ್ರಾಮದಲ್ಲಿ ಸುಮಾರು 1,500 ಮನೆಗಳಿವೆ. ಹೋಬಳಿ ಕೇಂದ್ರವಾಗಿರುವುದರಿಂದ ಸರಕಾರಿ ನೌಕರರೇ ಹೆಚ್ಚಾಗಿ ಮತ್ತು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಅಲ್ಪಸಂಖ್ಯಾತರು ವಾಸ ಮಾಡುತ್ತಿರುವ ಗ್ರಾಮವಾಗಿದೆ. ನಂದಗುಡಿ ಗ್ರಾಮಕ್ಕೆ ಎರಡು ಶುದ್ಧ ನೀರಿನ ಘಟಕಗಳಲ್ಲಿ ಕುಡಿಯುವುದಕ್ಕೆ ನೀರು ಬಳಸುತ್ತಿದ್ದರು. ಆದರೆ ಗ್ರಾಮದ ಬಸ್ ಸ್ಟ್ಯಾಂಡ್‌ನಲ್ಲಿ ಇದ್ದ ಶುದ್ಧ ನೀರಿನ ಘಟಕ ಕೆಟ್ಟು ಮೂರು ತಿಂಗಳುಗಳಾಗಿವೆ. ಗ್ರಾಮಸ್ಥರು ಕುಡಿಯುವ ನೀರಿಗಾಗಿ ಪರಿತಪಿಸುವಂತಹ ವಾತಾವರಣ ನಿರ್ಮಾಣವಾಗಿದೆ.
ಪಟ್ಟಣ ಪ್ರದೇಶದ ನಾಗರಿಕರಂತೆ ಗ್ರಾಮೀಣ ಭಾಗದ ಜನರೂ ಕೂಡಾ ಆರೋಗ್ಯದ ದೃಷ್ಟಿಯಿಂದ ಶುದ್ದ ಕುಡಿಯುವ ನೀರು ಕುಡಿಯಲೆಂದು ಸರಕಾರ ನೂರಾರು ಕೋಟಿ ವೆಚ್ಚ ಮಾಡಿ ಬಹುತೇಕ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಿದೆ. ಗ್ರಾಮಗಳಲ್ಲಿ ಶುದ್ಧ ನೀರಿನ ಘಟಕಗಳು ದುರಸ್ತಿಗೊಂಡಿದ್ದು, ಅವುಗಳನ್ನು ಸರಿಪಡಿಸುವಂತಹ ಕೆಲಸ ಅವುಗಳ ನಿರ್ವಾಹಣೆ ಜವಾಬ್ದಾರಿ ಹೊತ್ತ ಇಲಾಖೆಯಾಗಲಿ ಅಥವಾ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಾಗಲಿ, ಸ್ಥಳೀಯ ಮಟ್ಟದ ಗ್ರಾಮ ಪಂಚಾಯತ್ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಇದರ ಬಗ್ಗೆ ಗಮನ ಕೊಡದೇ ಇರುವುದು ಹಳ್ಳಿ ಜನರ ದೌರ್ಭಾಗ್ಯವೇ ಸರಿ.
ದುರಸ್ತಿ ಮಾಡುವವರು ಯಾರು? :
ನಿರ್ವಹಣೆ ಕೊರೆತೆಯಿಂದಾಗಿ ಶುದ್ಧ ಕುಡಿಯುವ ನೀರಿನ ಘಟಕಗಳು ಹಾಳಾಗಿವೆ. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹಾಗೂ ತಾಲೂಕು ಪಂಚಾಯತ್ ಅಧಿಕಾರಿಗಳ ನಿರ್ಲಕ್ಷ್ಯದಿಂದ ಗ್ರಾಮೀಣ ಜನರಿಗೆ ಶುದ್ಧ ನೀರು ಸಿಗುತ್ತಿಲ್ಲ ಎಂದು ದೂರುತ್ತಾರೆ ಸ್ಥಳೀಯರು.
ಗ್ರಾಮದಲ್ಲಿ ಎರಡು ಕುಡಿಯುವ ನೀರು ಘಟಕಗಳಿದ್ದರೂ ಅವುಗಳು ಕೆಟ್ಟು ತಿಂಗಳುಗಳು ಕಳೆದರೂ ರಿಪೇರಿ ಮಾಡಿಸುವವರೇ ಇಲ್ಲ. ಪಕ್ಕದ ಎರಡು ಮೂರು ಕಿಲೋಮೀಟರ್ ದೂರ ಹೋಗಿ ನೀರು ತರುವ ಸ್ಥಿತಿ ಎದುರಾಗಿದೆ. ಅಧಿಕಾರಿಗಳಾಗಲಿ ಜನಪ್ರತಿನಿಧಿಗಳಾಗಲಿ ಯಾರೂ ಗಮನ ಹರಿಸುತ್ತಿಲ್ಲ .
-ನಾರಾಯಣಮ್ಮ , ನಂದಗುಡಿ ಗ್ರಾಮಸ್ಥೆ
ನಂದಗುಡಿ ಬಸ್ ಸ್ಟಾಪ್‌ನಲ್ಲಿ ಇರುವ ಶುದ್ಧ ನೀರಿನ ಘಟಕ ನಮ್ಮ ಇಲಾಖೆಯಿಂದ ಖಾಸಗಿ ಅವರಿಗೆ ಒಂದು ವರ್ಷಕ್ಕೆ ಉಸ್ತ್ತುವಾರಿ ನೀಡಲಾಗಿತ್ತು. ಅವರ ಅವಧಿ ಮುಗಿದಿದೆ. ದುರಸ್ತಿ ಆಗದಿರುವುದನ್ನು ಮೇಲಿನ ಅಧಿಕಾರಿಗಳಿಗೆ ಗಮನಕ್ಕೆ ತಂದು ತುರ್ತಾಗಿ ದುರಸ್ತಿ ಮಾಡಿಸಲಾಗುವುದು. ಮತ್ತೊಂದು ಘಟಕ ಪಂಚಾಯತ್ ಅಧೀನದಲ್ಲಿದ್ದು , ಅವರೇ ದುರಸ್ತಿ ಮಾಡಿಸಬೇಕು.
-ಬಾಲು ಚಂದ್ರ, ಎಇಇ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಹೊಸಕೋಟೆ
ನಂದುಗುಡಿ ಗ್ರಾಮದಲ್ಲಿರುವ ಶುದ್ಧ ನೀರಿನ ಘಟಕಗಳು ರಿಪೇರಿ ಆಗಿರುವುದು ನಮ್ಮ ಗಮನಕ್ಕೆ ಬಂದಿದೆ ದುರಸ್ತಿ ಮಾಡಿಸಲು ಕಂಪೆನಿಗಳಿಗೆ ಯಂತ್ರಗಳನ್ನು ತರಲು ತಿಳಿಸಿದ್ದೇವೆ. ಇನ್ನೆರಡು ಮೂರು ದಿನಗಳೊಳಗೆ ಸರಿಪಡಿಸಲಾಗುವುದು.
-ಎಂ ಕೆಂಪಣ್ಣ , ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ನಂದಗುಡಿ







