ಯಾದಗಿರಿಯಲ್ಲಿ ಸ್ವಚ್ಛತೆ ಮರೀಚಿಕೆ
ಎಲ್ಲೆಂದರಲ್ಲಿ ಕಸದ ರಾಶಿ; ಬೇಸತ್ತ ಜನರಿಂದ ಬೆಂಕಿ

ಯಾದಗಿರಿ: ಜಿಲ್ಲಾ ಕೇಂದ್ರ ಯಾದಗಿರಿಯಲ್ಲಿ ಸ್ವಚ್ಛತೆ ಹದಗೆಟ್ಟಿದ್ದು, ನಗರದ ವಿವಿಧ ಬಡಾವಣೆಗಳು ಹಾಗೂ ರಸ್ತೆ ಬದಿಗಳಲ್ಲಿ ಕಸದ ರಾಶಿಗಳು ಹೆಚ್ಚುತ್ತಿವೆ. ನಿಯಮಿತವಾಗಿ ತ್ಯಾಜ್ಯ ವಿಲೇವಾರಿ ಮಾಡದ ನಗರಸಭೆಯ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದ ಹಲವು ಕಡೆ ಕಸ ತೆರವುಗೊಳಿಸದ ಕಾರಣ ಬೇಸತ್ತ ಕೆಲವರು ತ್ಯಾಜ್ಯಕ್ಕೆ ಬೆಂಕಿ ಹಚ್ಚುತ್ತಿದ್ದಾರೆ. ಇದರಿಂದ ಸುತ್ತಮುತ್ತ ದಟ್ಟ ಹೊಗೆ ಆವರಿಸಿ ಪರಿಸರ ಮಾಲಿನ್ಯ ಉಂಟಾಗುತ್ತಿದೆ. ಅದರಲ್ಲೂ ವಿದ್ಯುತ್ ಟಿಸಿ ಸಮೀಪವೇ ಕಸ ಸುಡುತ್ತಿರುವುದು ಅನಾಹುತದ ಭೀತಿ ಮೂಡಿಸಿದೆ.
ಕಸದ ರಾಶಿಗಳಿಂದ ದುರ್ವಾಸನೆ ಹರಡುವುದರ ಜತೆಗೆ ಸೊಳ್ಳೆ, ನೊಣಗಳ ಕಾಟವೂ ಹೆಚ್ಚಾಗಿದೆ. ಇದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಆತಂಕ ಸ್ಥಳೀಯರನ್ನು ಕಾಡುತ್ತಿದೆ.
ನಗರಸಭೆ ಕಸ ಸಂಗ್ರಹಣೆ ಮತ್ತು ವಿಲೇವಾರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಮನೆಮನೆಗೆ ಕಸ ಸಂಗ್ರಹಿಸುವ ವಾಹನಗಳು ನಿಯಮಿತವಾಗಿ ಸಂಚರಿಸುವಂತೆ ನೋಡಿಕೊಳ್ಳಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂಬುದು ಜನರ ಒತ್ತಾಯವಾಗಿದೆ.
ಸ್ವಚ್ಛತಾ ನಿರ್ವಹಣೆ ಯಾರ ಹೊಣೆ? :
ನಗರದ ಸ್ವಚ್ಛತೆ ಕಾಪಾಡುವುದು ನಗರಸಭೆಯ ಜವಾಬ್ದಾರಿ. ಮನೆಮನೆಗೆ ತೆರಳಿ ಕಸ ಸಂಗ್ರಹಿಸುವುದು, ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಸಂಗ್ರಹವಾಗದಂತೆ ನೋಡಿಕೊಳ್ಳುವುದು ಹಾಗೂ ವೈಜ್ಞಾನಿಕವಾಗಿ ವಿಲೇವಾರಿ ಮಾಡುವುದು ಅದರ ಕರ್ತವ್ಯ. ಆದರೆ, ಹಲವು ವಾರ್ಡ್‌ಗಳಲ್ಲಿ ಕಸದ ರಾಶಿಗಳು ಹೆಚ್ಚುತ್ತಿರುವುದು ಸ್ವಚ್ಛತಾ ನಿರ್ವಹಣೆಯಲ್ಲಿನ ಲೋಪವನ್ನು ಎತ್ತಿ ತೋರಿಸುತ್ತಿದೆ.
ನಗರದ ಸ್ವಚ್ಛತೆಗೆ ನಗರಸಭೆ ಮೊದಲ ಆದ್ಯತೆ ನೀಡಿದೆ. ಕೆಲವೊಮ್ಮೆ ಸ್ವಚ್ಛತಾ ಕಾರ್ಯದಲ್ಲಿ ಲೋಪಗಳಾಗಿರಬಹುದು. ಈಗಾಗಲೇ ನಗರಸಭೆ ಸಿಬ್ಬಂದಿಗೆ ನಗರದ ಎಲ್ಲ ವಾರ್ಡ್‌ಗಳಲ್ಲೂ ಸ್ವಚ್ಛತಾ ಕಾರ್ಯ ಕೈಗೊಳ್ಳುವಂತೆ ಸೂಚಿಸಲಾಗಿದೆ. ಸಾರ್ವಜನಿಕರೂ ಎಲ್ಲೆಂದರಲ್ಲಿ ಕಸ ಎಸೆಯದೆ ಸ್ವಚ್ಛತೆ ಕಾಪಾಡಲು ಸಹಕರಿಸಬೇಕು. ನಿಯಮ ಉಲ್ಲಂಘಿಸಿ ಕಸ ಎಸೆಯುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
-ಉಮೇಶ್ ಚವ್ಹಾಣ, ಪೌರಾಯುಕ್ತರು, ನಗರಸಭೆ
ನಗರದ ಪ್ರತಿಯೊಂದು ವಾರ್ಡ್‌ನಲ್ಲೂ ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಎಸೆಯದಂತೆ ನಗರಸಭೆ ಅಧಿಕಾರಿಗಳು ಜಾಗೃತಿ ಮೂಡಿಸಬೇಕು. ಇದರ ಜತೆಗೆ ಸ್ವಚ್ಛತಾ ಸಿಬ್ಬಂದಿಯೂ ತಮ್ಮ ಜವಾಬ್ದಾರಿಯನ್ನು ಅರಿತು ಕಾಳಜಿಯಿಂದ ಕಾರ್ಯನಿರ್ವಹಿಸಬೇಕು. ಕೆಲವು ವಾರ್ಡ್‌ಗಳಿಗೆ ವಾರಗಟ್ಟಲೆ, ತಿಂಗಳುಗಟ್ಟಲೆ ಸ್ವಚ್ಛತಾ ಸಿಬ್ಬಂದಿ ಭೇಟಿ ನೀಡದಿರುವುದರಿಂದ ಕಸದ ರಾಶಿಗಳು ಹೆಚ್ಚಾಗುತ್ತಿವೆ. ನಗರಸಭೆ ಆಡಳಿತ ನಿಯಮಿತವಾಗಿ ಸ್ವಚ್ಛತಾ ಕಾರ್ಯ ಕೈಗೊಂಡು ನಗರದ ಸ್ವಚ್ಛತೆಗೆ ಆದ್ಯತೆ ನೀಡಬೇಕು.
-ವಿಶ್ವರಾಧ್ಯ ದಿಮ್ಮೆ, ಜಿಲ್ಲಾಧ್ಯಕ್ಷ, ನಮ್ಮ ಕರ್ನಾಟಕ ಸೇನೆ
ನಗರಸಭೆಯ ಸಿಬ್ಬಂದಿ ಕೆಲವೊಮ್ಮೆ ಮನೆ ಬಾಗಿಲಿಗೆ ಕಸ ಸಂಗ್ರಹಿಸಲು ಬರುವುದಿಲ್ಲ. ಇದರಿಂದ ಮನೆಯ ಮುಂದೆ ಕಸ ಹಾಕಲು ಸಾಧ್ಯವಾಗದೆ ಖಾಲಿ ಜಾಗಗಳಲ್ಲಿ ಕಸ ಹಾಕುವ ಅನಿವಾರ್ಯತೆ ಎದುರಾಗಿದೆ. ಆದ್ದರಿಂದ ಕಸ ಸಂಗ್ರಹಿಸುವ ವ್ಯವಸ್ಥೆಯನ್ನು ನಿಯಮಿತಗೊಳಿಸಬೇಕು.
-ಶೋಭಾ, ನಗರದ ನಿವಾಸಿ






