ಕೋಚಿಂಗ್ ಸೆಂಟರ್‌ಗಳಿಗೆ ಮಾರ್ಗಸೂಚಿಯ ಅಗತ್ಯವಿದೆ

ಐಎಎಸ್, ಐಪಿಎಸ್, ಇಂಜಿನಿಯರ್ ಅಥವಾ ವೈದ್ಯರಾಗಲು ಅಂತಹ ಭಯಂಕರ ಪೈಪೋಟಿಯಿದೆ. ಈ ಪೈಪೋಟಿಯಲ್ಲಿ ತಮ್ಮ ಮಗ ಅಥವಾ ಮಗಳು ಹೇಗಾದರೂ ಐಎಎಸ್, ಐಪಿಎಸ್, ಇಂಜಿನಿಯರ್ ಅಥವಾ ಡಾಕ್ಟರ್ ಆಗಿ ಬಿಟ್ಟರೆ ಸಾಕು ಎಂಬ ಒತ್ತಡದಲ್ಲಿ ಪೋಷಕರು ಇರುತ್ತಾರೆ. ಪೋಷಕರ ಈ ಭಯ ಹಾಗೂ ಒತ್ತಡದ ಸಂಪೂರ್ಣ ಲಾಭವನ್ನು ಕೋಚಿಂಗ್ ಸೆಂಟರ್‌ಗಳು ಪಡೆದುಕೊಳ್ಳುತ್ತವೆ.
ಭಾರತದ ಕೋಚಿಂಗ್ ಉದ್ಯಮ ಎಂಬುದು ಈಗ ಸುಲಿಗೆಯ ಜಾಲವಾಗಿ ಪರಿವರ್ತನೆಯಾಗಿದೆ. ವಿದ್ಯಾರ್ಥಿಗಳ ಭವಿಷ್ಯ ಮತ್ತು ಅವರ ಪೋಷಕರ ಹಣದ ಜೊತೆ ಈ ಕೋಚಿಂಗ್ ಕೇಂದ್ರಗಳು ಆಟವಾಡುತ್ತಿವೆ.
‘‘ನೀವು ವಿಭಿನ್ನ ಮತ್ತು ಪರಿವರ್ತನಾತ್ಮಕ ಶಿಕ್ಷಕರಾಗಲು ಸಾಧ್ಯವಾದರೆ, 7 ವರ್ಷಗಳಲ್ಲಿ ಕನಿಷ್ಠ 100 ಕೋಟಿ ಸಂಪತ್ತು ಗಳಿಸುತ್ತೀರಿ’’.
ಇಂತಹದೊಂದು ಭರವಸೆಯನ್ನು 2023ರಲ್ಲಿ ಇಂಜಿನಿಯರಿಂಗ್ ತಯಾರಿ ತರಬೇತಿ ಸಂಸ್ಥೆಯಾದ ‘ಫಿಟ್‌ಜಿ’ ನೀಡಿತ್ತು.
ವಿದ್ಯಾರ್ಥಿಗಳಿಗೆ ಐಐಟಿ ಮತ್ತು ಇಂಜಿನಿಯರಿಂಗ್ ಕನಸುಗಳನ್ನು ಮಾರಾಟ ಮಾಡಿದ ತರಬೇತಿ ಕೇಂದ್ರ ಶಿಕ್ಷಕರಿಗೆ ಕೂಡ ಇಂಥದೇ ಕನಸುಗಳನ್ನು ತೋರಿಸಿತ್ತು.
ಆದರೆ ಈ ಜಾಹೀರಾತಿನ ನಂತರ 2 ವರ್ಷಗಳೂ ಪೂರ್ತಿಯಾಗಿಲ್ಲ. ಆಗಲೇ ದೇಶಾದ್ಯಂತ 10ಕ್ಕೂ ಹೆಚ್ಚು ಫಿಟ್‌ಜಿ ಕೇಂದ್ರಗಳನ್ನು ಮುಚ್ಚಲಾಗಿದೆ. ನೂರಾರು ಶಿಕ್ಷಕರನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ ಮತ್ತು ಪೋಷಕರ ಕೋಟ್ಯಂತರ ರೂಪಾಯಿ ಗುಳುಂ ಆಗಿದೆ.
ಈ ಕಥೆ ಫಿಟ್‌ಜಿನದ್ದು ಮಾತ್ರವಲ್ಲ. ಭಾರತದಲ್ಲಿ ಕೋಚಿಂಗ್ ಉದ್ಯಮದಲ್ಲಿ ಬಹಳ ದೊಡ್ಡ ಹಗರಣವೇ ನಡೆಯುತ್ತಿದೆ. ಕೋಚಿಂಗ್ ಕಂಪೆನಿಗಳು ಮುಚ್ಚುತ್ತಿವೆ ಮತ್ತು ಅದು ಗೊತ್ತಿರುವಾಗಲೂ, ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ತರಬೇತಿ ಕೇಂದ್ರಗಳ ಜಾಲದಲ್ಲಿ ಸಿಲುಕಿಕೊಳ್ಳುತ್ತಿದ್ದಾರೆ.
2017ರಲ್ಲಿ ಪತ್ರಿಕೆಯಲ್ಲಿ ಒಂದು ಜಾಹೀರಾತು ಪ್ರಕಟವಾಯಿತು. ಎರಡು ಕೋಚಿಂಗ್ ಸೆಂಟರ್‌ಗಳು ಟಾಪರ್‌ಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದವು ಮತ್ತು ಆ ಪಟ್ಟಿಯಲ್ಲಿ ಒಂಭತ್ತು ವಿದ್ಯಾರ್ಥಿಗಳು ಇದ್ದರು.
ಎರಡೂ ಕೋಚಿಂಗ್ ಸಂಸ್ಥೆಗಳು ಅದೇ ಒಂಭತ್ತು ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದ್ದವು.
2024ರ ಡಿಸೆಂಬರ್ 26ರಂದು ಗ್ರಾಹಕ ರಕ್ಷಣಾ ಪ್ರಾಧಿಕಾರ ಯುಪಿಎಸ್‌ಸಿಗೆ ತರಬೇತಿ ನೀಡುವ ಮೂರು ಕೋಚಿಂಗ್ ಸೆಂಟರ್‌ಗಳಿಗೆ 15 ಲಕ್ಷ ರೂ. ದಂಡ ವಿಧಿಸಿತು. ಈ ಮೂರೂ ಕೋಚಿಂಗ್ ಸೆಂಟರ್‌ಗಳು ಯುಪಿಎಸ್‌ಸಿಯಲ್ಲಿ ಯಶಸ್ವಿಯಾದ ವಿದ್ಯಾರ್ಥಿಗಳನ್ನು ತಮ್ಮ ವಿದ್ಯಾರ್ಥಿಗಳೆಂದು ಘೋಷಿಸಿದ್ದವು.ಆದರೆ ವಾಸ್ತವದಲ್ಲಿ ಈ ಅಭ್ಯರ್ಥಿಗಳು ಸಂದರ್ಶನ ತಯಾರಿಗಾಗಿ ಮಾತ್ರ ಅವರಲ್ಲಿ ನೋಂದಾಯಿಸಿಕೊಂಡಿದ್ದರು.
ಹೀಗೆ ಒಂದೇ ಟಾಪರ್‌ನ ಫೋಟೋವನ್ನು ಬೇರೆ ಬೇರೆ ಕೋಚಿಂಗ್ ಸೆಂಟರ್‌ಗಳು ತಮ್ಮ ವಿದ್ಯಾರ್ಥಿ ಎಂದು ಹೇಳಿಕೊಂಡು ಜಾಹಿರಾತು ಹಾಕುವುದು ಆಗಾಗ ನಡೆಯುತ್ತಲೇ ಇದೆ.
ಆಗಸ್ಟ್ 2024ರಲ್ಲಿ ಜೈಪುರದಲ್ಲಿರುವ ಕೋಚಿಂಗ್ ಸೆಂಟರ್ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟನೆಗೆ ನಿಂತರು. ಕೋಚಿಂಗ್ ಭರವಸೆ ಪ್ರಕಾರ ಸೌಲಭ್ಯಗಳನ್ನು ನೀಡಲಾಗುತ್ತಿಲ್ಲ ಎಂಬುದು ಅವರ ತಕರಾರಾಗಿತ್ತು.
ದಿಲ್ಲಿಯಲ್ಲಿ ಐಎಎಸ್ ಕೋಚಿಂಗ್ ಸೆಂಟರ್‌ನಲ್ಲಿ ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿದರು.
ಈ ಎಲ್ಲಾ ಕಥೆಗಳಲ್ಲಿ ಸಾಮಾನ್ಯವಾಗಿರುವ ಅಂಶವೆಂದರೆ, ಕೋಚಿಂಗ್ ಸೆಂಟರ್‌ಗಳು ವಂಚನೆಯಲ್ಲಿ ತೊಡಗಿವೆ ಎಂಬುದು.
ಫಿಟ್‌ಜಿ ಪೂರ್ಣ ಹೆಸರು ಫೌಂಡೇಶನ್ ಐಐಟಿ ಜೆಇ.
ಅದರ ವೆಬ್‌ಸೈಟ್ ಪ್ರಕಾರ, ದೇಶಾದ್ಯಂತ ಅದರ ಅನೇಕ ಘಟಕಗಳಿವೆ.ವಿದ್ಯಾರ್ಥಿಗಳಿಂದ ಲಕ್ಷಾಂತರ ರೂಪಾಯಿಗಳನ್ನು ತೆಗೆದುಕೊಳ್ಳುವ 73 ಕೇಂದ್ರಗಳಿವೆ. ಆದರೆ ಇನ್ನೂ ಅದು ನಷ್ಟದಲ್ಲಿದೆ ಮತ್ತು ಇದೆಲ್ಲವೂ ಇದ್ದಕ್ಕಿದ್ದಂತೆ ಸಂಭವಿಸಿಲ್ಲ. ಸುಮಾರು 8 ತಿಂಗಳ ಹಿಂದೆ 2024ರ ಜೂನ್ ಜುಲೈನಲ್ಲಿ ಮಧ್ಯಪ್ರದೇಶದ ಇಂದೋರ್‌ನಲ್ಲಿರುವ ಫಿಟ್‌ಜಿ ಮೂರು ಕೇಂದ್ರಗಳನ್ನು ಇದ್ದಕ್ಕಿದ್ದಂತೆ ಮುಚ್ಚಲಾಯಿತು. ನಂತರ ಫಿಟ್‌ಜಿ ಕೇಂದ್ರದಲ್ಲಿ ಸುಮಾರು 100 ಕೋಟಿ ರೂ. ಗಳಿಸಲಾಗುತ್ತಿದೆ ಎಂದು ಹೇಳಲಾಯಿತು. 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಲ್ಲಿ ಕೋಚಿಂಗ್ ಪಡೆಯುತ್ತಾರೆ ಮತ್ತು ಈ ವಿದ್ಯಾರ್ಥಿಗಳ ಶುಲ್ಕ ತಲಾ ರೂ. 1.5 ಲಕ್ಷದಿಂದ 2 ಲಕ್ಷದವರೆಗೆ ಇರುತ್ತದೆ ಎನ್ನಲಾಯಿತು. ಮುಂಗಡ ಶುಲ್ಕವನ್ನು ತೆಗೆದುಕೊಂಡ ನಂತರವೂ, ತರಬೇತಿಯಲ್ಲಿ ಕಲಿಸಲು ಶಿಕ್ಷಕರು ಇರಲಿಲ್ಲ.
ಈಗ ಎಂಟು ತಿಂಗಳ ನಂತರ, ಇಂದೋರ್, ಪ್ರಯಾಗರಾಜ್, ಘಾಜಿಯಾಬಾದ್, ದಿಲ್ಲಿ, ವಾರಣಾಸಿ, ಪುಣೆ, ಭೋಪಾಲ್, ಥಾಣೆ ಮತ್ತು ಪಾಟ್ನಾದಲ್ಲಿ ಫಿಟ್‌ಜಿ ಕೇಂದ್ರಗಳು ಮುಚ್ಚುವ ಹಂತದಲ್ಲಿವೆ. ಆದರೆ ವಿದ್ಯಾರ್ಥಿಗಳ ಪೋಷಕರಲ್ಲೇ ಕೆಲವರು ಇಲ್ಲವೆನ್ನುತ್ತಿದ್ದಾರೆ.
ಫಿಟ್ ಜಿ ಕೇಂದ್ರ ಲಾಭದಲ್ಲಿದೆ, ಅದನ್ನು ಇಲ್ಲಿ ಮುಚ್ಚುವ ಯಾವುದೇ ಪ್ರಶ್ನೆಯಿಲ್ಲ, ನಾವು ಶುಲ್ಕವನ್ನು ಪಾವತಿಸುತ್ತಲೇ ಇರುತ್ತೇವೆ ಎಂದು ತಮ್ಮ ಮಗನ ಕೋಚಿಂಗ್‌ಗಾಗಿ ಈಗಾಗಲೇ 1 ಲಕ್ಷ ರೂ. ಪಾವತಿಸಿದ ಮೀರತ್‌ನ ಪೋಷಕರೊಬ್ಬರು ಹೇಳಿದ್ದಾರೆ.
ಆದರೆ ಈಗ ಕೋಚಿಂಗ್ ಸೆಂಟರ್ ಮುಚ್ಚಲಾಗಿದೆ ಮತ್ತು ಅವರ ಮಗನ ಭವಿಷ್ಯ ಮತ್ತು ಹಣ ಎರಡೂ ಅಲ್ಲಿ ಸಿಲುಕಿಕೊಂಡಿವೆ.
ಅದೇ ರೀತಿ, ಮಹಾರಾಷ್ಟ್ರದ ಥಾಣೆಯಲ್ಲಿ ವಿದ್ಯಾರ್ಥಿಗಳ ಪೋಷಕರು ದಾಖಲಿಸಿದ ಎಫ್‌ಐಆರ್ ಪ್ರಕಾರ, ಥಾಣೆ ಕೇಂದ್ರ 80 ವಿದ್ಯಾರ್ಥಿಗಳಿಂದ ಸುಮಾರು 3.20 ಕೋಟಿ ರೂ. ಶುಲ್ಕವನ್ನು ಪಡೆದಿತ್ತು. ಡಿಸೆಂಬರ್ 5ರಿಂದ ಇದ್ದಕ್ಕಿದ್ದಂತೆ ಅದು ತರಗತಿಗಳನ್ನು ಮುಚ್ಚಿತು.
ಈಗ, ಕೇಂದ್ರಗಳನ್ನು ಒಂದರ ನಂತರ ಒಂದರಂತೆ ಮುಚ್ಚುತ್ತಿರುವಾಗ, ಫಿಟ್‌ಜಿ ಯಿಂದ ಅಧಿಕೃತ ಟಿಪ್ಪಣಿ ಹೊರಬಿದ್ದಿದೆ.
ವ್ಯವಸ್ಥಾಪಕ ಪಾಲುದಾರರ ದುರುಪಯೋಗದಿಂದಾಗಿ 2024ರ ಜನವರಿಯಲ್ಲಿ ಫಿಟ್‌ಜಿ ಆರ್ಥಿಕ ಸ್ಥಿತಿ ಹದಗೆಟ್ಟಿದೆ ಎಂದು ಅದರಲ್ಲಿ ತಿಳಿಸಲಾಗಿದೆ. ಫಿಟ್‌ಜಿ ಪ್ರಕಾರ, ಅದು ತನ್ನ ಯಾವುದೇ ಕೇಂದ್ರಗಳನ್ನು ಮುಚ್ಚಿಲ್ಲ, ಆದರೆ ಕೆಲವು ಕೇಂದ್ರಗಳಲ್ಲಿನ ನಿರ್ವಹಣಾ ತಂಡ ರಾತ್ರೋರಾತ್ರಿ ಪರಾರಿಯಾಗಿದೆ. ಇದು ತನ್ನ ಸ್ಪರ್ಧಿಗಳು ಹೂಡಿರುವ ಪಿತೂರಿ ಎಂದು ಅದು ಹೇಳುತ್ತಿದೆ. ಆದರೆ, ಟಿಪ್ಪಣಿಯಲ್ಲಿ ವಿದ್ಯಾರ್ಥಿಗಳಿಂದ ಪಡೆದ ಶುಲ್ಕ ಮರುಪಾವತಿಯ ಬಗ್ಗೆ ಏನನ್ನೂ ಹೇಳಲಾಗಿಲ್ಲ. ಈಗ ಪ್ರಶ್ನೆ, ಇದು ಯಾರದೋ ಪಿತೂರಿಯೇ ಅಥವಾ ಬೇರೆ ಯಾವುದೋ ಕಟ್ಟುಕಥೆಯೇ?
ಇಂಡಿಯಾ ಟುಡೇ ವರದಿಯ ಪ್ರಕಾರ, ಫಿಟ್‌ಜಿ ಲೆಕ್ಕಪರಿಶೋಧಕರು ಲೆಕ್ಕಪತ್ರ ಅಕ್ರಮಗಳನ್ನು ಎತ್ತಿ ತೋರಿಸಿದ್ದಾರೆ. ಕಂಪೆನಿ 2023ರಲ್ಲಿ 70 ಕೋಟಿ ರೂ. ನಷ್ಟವನ್ನು ದಾಖಲಿಸಿತ್ತು. ಮಾರ್ಚ್ 2023ರ ಹೊತ್ತಿಗೆ ಕಂಪೆನಿಯ ಒಟ್ಟು ನಷ್ಟ 237 ಕೋಟಿ ರೂ.ಗಳನ್ನು ತಲುಪಿತು. ಇದು ಅದರ ಒಟ್ಟು ಬಂಡವಾಳ ಮತ್ತು ಮೀಸಲುಗಳಿಗಿಂತ ಹೆಚ್ಚಾಗಿದೆ.
ಆದರೆ ಈ ಕಥೆ ಕೇವಲ ಫಿಟ್‌ಜಿಯದು ಮಾತ್ರ ಅಲ್ಲ. ಕೋವಿಡ್ ಬಳಿಕ, ಆನ್‌ಲೈನ್ ಶಿಕ್ಷಣದ ಜೊತೆಗೆ, ಭಾರತದ ಎಡ್ ಟೆಕ್ ವಲಯ ಕೂಡ ಭಾರೀ ನಷ್ಟದಲ್ಲಿದೆ. ಕಳೆದ 5 ವರ್ಷಗಳಲ್ಲಿ ಸುಮಾರು 2,148 ಟೆಕ್ ಸ್ಟಾರ್ಟ್‌ಅಪ್‌ಗಳು ಸ್ಥಗಿತಗೊಂಡಿವೆ ಎಂದು ವರದಿಗಳಿವೆ.
ಡೇಟಾ ಪ್ರಕಾರ, ಟೆಕ್ ಸ್ಟಾರ್ಟ್‌ಅಪ್‌ಗಳು 2021ರಲ್ಲಿ 3.6 ಬಿಲಿಯನ್ ಡಾಲರ್ ಸಂಗ್ರಹಿಸಿವೆ. ಅದು 2024ರಲ್ಲಿ 0.64 ಬಿಲಿಯನ್ ಡಾಲರ್‌ಗೆ ಇಳಿದಿದೆ.
ಮುಚ್ಚಲ್ಪಡಲಿರುವ ಸಂಸ್ಥೆಗಳಲ್ಲಿ, ಪ್ರಧಾನಿಯೊಂದಿಗೆ ಪಾಡ್‌ಕಾಸ್ಟ್ ಮಾಡಿದ ಝೆರೊದಾ ಸಂಸ್ಥಾಪಕ ನಿತಿನ್ ಕಾಮತ್ ಅವರ ಪರ್ಯಾಯ ವ್ಯಾಪಾರ ಶಿಕ್ಷಣ ವೇದಿಕೆಯಾದ ಸ್ಟೋ ಸ್ಕೂಲ್ ಸಹ ಇದೆ.
ಅದೇ ರೀತಿ ಬ್ಲೂ ಲರ್ನ್, ಕ್ವಿಜ್ ಮೈಂಡ್, ವೇದು ಅಕಾಡಮಿ, ಆರ್‌ಕೆಎಸ್ ಲಾ ಕ್ಲಾಸಸ್, ಕೀ 17 ಟೆಕ್, ಟ್ರೈ ಬ್ಯಾಕ್ ಬ್ಲೂ ಕೂಡ ಮುಚ್ಚಲಿವೆ ಎಂಬ ಸುದ್ದಿ ಇದೆ.
ಬೈಜೂಸ್ ಎಂಬ ಮತ್ತೊಂದು ಎಜುಟೆಕ್ ಕಂಪೆನಿಯ ಬಗ್ಗೆ ಹೆಚ್ಚಿನವರಿಗೆ ತಿಳಿದಿರಬಹುದು. ಶಾರುಕ್ ಖಾನ್ ಅದರ ಜಾಹೀರಾತನ್ನು ಮಾಡುತ್ತಿದ್ದರು ಮತ್ತು ಒಮ್ಮೆ ಫುಟ್‌ಬಾಲ್ ದಂತಕಥೆ ಲಿಯೋನೆಲ್ ಮೆಸ್ಸಿಯನ್ನು ಜಾಗತಿಕ ಬ್ರಾಂಡ್ ರಾಯಭಾರಿಯನ್ನಾಗಿ ಮಾಡಲಾಗಿತ್ತು.
2022ರಲ್ಲಿ ಬೈಜೂಸ್ ಫಿಫಾ ವಿಶ್ವಕಪ್ ಅನ್ನು ಸಹ ಪ್ರಾಯೋಜಿಸಿತು.
ಅದು ಎಷ್ಟೊಂದು ಹಣವನ್ನು ಗಳಿಸಿತು ಎಂದರೆ ಭಾರತದ ಐದು ಡೆಕಾ ಕಾರ್ನ್ ಸ್ಟಾರ್ಟ್‌ಅಪ್‌ಗಳಲ್ಲಿ ಒಂದು ಎಡ್ ಟೆಕ್ ಕಂಪೆನಿ ಬೈಜೂಸ್.
ಒಂದು ಸ್ಟಾರ್ಟ್‌ಅಪ್‌ನ ಮೌಲ್ಯ 1 ಬಿಲಿಯನ್ ಡಾಲರ್ ತಲುಪಿದರೆ, ಅದನ್ನು ಯುನಿಕಾರ್ನ್ ಎಂದು ಕರೆಯಲಾಗುತ್ತದೆ. ಅದೇ ರೀತಿ, ಡೆಕಾ ಕಾರ್ನ್ ಎಂದರೆ ಸ್ಟಾರ್ಟ್‌ಅಪ್‌ನ ಮೌಲ್ಯ 10 ಬಿಲಿಯನ್ ಡಾಲರ್ ತಲುಪಿರಬೇಕು.
ಆದರೆ ಪರಿಸ್ಥಿತಿ ಹೇಗಿತ್ತೆಂದರೆ ಬೈಜೂಸ್ ನಷ್ಟಕ್ಕೆ ಸಿಲುಕಿತ್ತು. 25,000ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಲಾಯಿತು.
ಕಂಪೆನಿ ವಿದೇಶದಲ್ಲಿ ತನ್ನ ವ್ಯವಹಾರವನ್ನು ವಿಸ್ತರಿಸಲು ಸಾಲವನ್ನು ಸಹ ಪಡೆದಿತ್ತು. ಕಂಪೆನಿಗೆ ಈಗ ಆ ಸಾಲವನ್ನು ಮರುಪಾವತಿಸಲು ಸಾಧ್ಯವಾಗುತ್ತಿಲ್ಲ.
ಪ್ರಸಿದ್ಧ ಹೂಡಿಕೆದಾರ ಡಾ. ಅನಿರುದ್ಧ್ ಮಾಲ್ಪಾನಿ ಅವರು ಬೈಜೂಸ್ ಬಗ್ಗೆ ಬರೆದಿದ್ದಾರೆ. ಅದರಲ್ಲಿ ಬೈಜೂಸ್ ವಿಭಿನ್ನ ಮಾರಾಟ ತಂತ್ರಗಳನ್ನು ಅಳವಡಿಸಿಕೊಳ್ಳುವ ಮೂಲಕ ಬಲವಂತವಾಗಿ ಉತ್ಪನ್ನಗಳನ್ನು ಹೇಗೆ ಮಾರಾಟ ಮಾಡುತ್ತಿತ್ತು ಎಂಬುದನ್ನು ಅವರು ಹೇಳಿದ್ದಾರೆ. ಕಂಪೆನಿಯ ಪ್ರತಿನಿಧಿಗಳು ಶಾಲೆಗಳು ಮತ್ತು ಶಿಕ್ಷಕರ ಬಗ್ಗೆ ತಪ್ಪು ವಿಷಯಗಳನ್ನು ಹೇಳುತ್ತಿದ್ದರು ಎಂದು ಅವರು ಆರೋಪಿಸಿದ್ದಾರೆ.
ತಪ್ಪು ಮಾಹಿತಿ ಒದಗಿಸುವ ಮೂಲಕ, ಕಡಿಮೆ ಶಿಕ್ಷಣ ಪಡೆದ ಪೋಷಕರಿಗೆ ಅವರು ಬೈಜೂಸ್‌ನಲ್ಲಿ ಓದಿಸದಿದ್ದರೆ ಅವರ ಮಕ್ಕಳು ಹಿಂದುಳಿಯುತ್ತಾರೆ ಎಂದು ಬೆದರಿಸುತ್ತಿದ್ದರು.
ಇಎಂಐನಲ್ಲಿ ಅಪ್ಲಿಕೇಶನ್‌ಗಳನ್ನು ಖರೀದಿಸುವಂತೆ ಮಾಡಲಾಗುತ್ತಿತ್ತು ಮತ್ತು ಉಳಿದ ಪಾವತಿಗಾಗಿ ಪದೇ ಪದೇ ಕರೆ ಮಾಡಿ ಕಿರುಕುಳ ಕೊಡುತ್ತಿದ್ದರು ಎಂದು ಡಾ. ಮಾಲ್ಪಾನಿ ಹೇಳುತ್ತಾರೆ.
ಅಂತಹ ಅನೇಕ ವರದಿಗಳು ಹೊರಬಂದವು. ಆದರೆ ಅದರ ಹೊರತಾಗಿಯೂ ಕಂಪೆನಿ ಹಣವನ್ನು ಪಡೆಯುತ್ತಲೇ ಇತ್ತು.
2022ರಲ್ಲಿ ಮಕ್ಕಳ ಹಕ್ಕುಗಳನ್ನು ರಕ್ಷಿಸುವ ಸಂಸ್ಥೆಯಾದ ಎನ್‌ಸಿಪಿಸಿಆರ್, ಬೈಜೂಸ್ ವಿದ್ಯಾರ್ಥಿಗಳ ಫೋನ್ ಸಂಖ್ಯೆಗಳನ್ನು ಕದ್ದು ತನ್ನ ಪ್ಯಾಕೇಜ್‌ಗಳನ್ನು ಖರೀದಿಸುವಂತೆ ಬೆದರಿಸಿ ಕರೆ ಮಾಡುತ್ತಿದೆ ಎಂದು ಆರೋಪಿಸಿತ್ತು.
ಮೊದಲಿಗೆ ಬೈಜೂಸ್ ಆರೋಪಗಳನ್ನು ನಿರಾಕರಿಸಿತ್ತು. ಆದರೆ ನಂತರ ಮಕ್ಕಳ ಒಪ್ಪಿಗೆ ಪಡೆಯುವುದನ್ನು ಖಚಿತಪಡಿಸಿಕೊಳ್ಳು ವುದಾಗಿ ಮತ್ತು ಅವರ ಮಾರಾಟ ಏಜೆಂಟ್‌ಗಳು ಜನರ ಮನೆಗಳಿಗೆ ಹೋಗುವುದನ್ನು ತಡೆಯುವುದಾಗಿ ಭರವಸೆ ನೀಡಿತ್ತು. ಅದಾದ ಬಳಿಕ ಗ್ರಾಹಕ ನ್ಯಾಯಾಲಯದಲ್ಲಿ ಕೇಸ್ ಅನ್ನು ಬೈಜೂಸ್ ಸೋತಿತು.
ಹಣಕಾಸು ಸಚಿವಾಲಯದ ಕಂದಾಯ ಇಲಾಖೆಯ ಮಾಹಿತಿಯ ಪ್ರಕಾರ, 2019-20ರಲ್ಲಿ ಕೋಚಿಂಗ್ ಕೇಂದ್ರಗಳಿಂದ ಜಿಎಸ್‌ಟಿ ಸಂಗ್ರಹ 2,240.73 ಕೋಟಿ ರೂ.ಗಳಾಗಿದ್ದರೆ, 2023-24ರಲ್ಲಿ ಅದು 5,517.45 ಕೋಟಿ ರೂ.ಗಳಿಗೆ ಏರಿತ್ತು.
ಇಲ್ಲಿ ಇನ್ನೊಂದು ವಿಷಯವನ್ನು ಅರ್ಥಮಾಡಿಕೊಳ್ಳಬೇಕು.
ಕೋಚಿಂಗ್ ಕೇಂದ್ರಗಳು ನಿಯಮಗಳನ್ನು ಹೇಗೆ ಉಲ್ಲಂಘಿಸುತ್ತಿವೆ ಎಂಬ ವಿಚಾರ.
ರಾಜಸ್ಥಾನದ ಕೋಟಾದ ಫಿಟ್‌ಜಿ ವೆಬ್‌ಸೈಟ್ ಅನ್ನು ನೀವು ನೋಡಿದರೆ, ಅಲ್ಲಿ ಕೋಚಿಂಗ್ ತರಗತಿಗಳು ಆರನೇ ತರಗತಿಯಿಂದಲೇ ಪ್ರಾರಂಭವಾಗುತ್ತವೆ.
ಅದಕ್ಕೆ ಶುಲ್ಕಗಳು ರೂ. 45,000ರಿಂದ 60,000 ರೂ. ವರೆಗೆ ಇರುತ್ತವೆ.
ಅಲ್ಲದೆ, ಕಂತುಗಳಲ್ಲಿ ಪಾವತಿಸಿದರೆ ಶುಲ್ಕ 47,000 ರೂ. ಆಗುತ್ತದೆ. ಶಿಕ್ಷಣ ಸಚಿವಾಲಯದ ಮಾರ್ಗಸೂಚಿಗಳ ಪ್ರಕಾರ, ಕೋಚಿಂಗ್ ಸೆಂಟರ್‌ಗಳು 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ವಿದ್ಯಾರ್ಥಿಗಳನ್ನು ದಾಖಲಿಸಲು ಸಾಧ್ಯವಿಲ್ಲ.
ಆದರೆ ಪೋಷಕರು ಯುಪಿಎಸ್‌ಸಿಯಿಂದ ವೈದ್ಯಕೀಯ ಮತ್ತು ಇಂಜಿನಿಯರಿಂಗ್‌ವರೆಗಿನ ಓಟದಲ್ಲಿ ಸ್ಪರ್ಧಿಸಲು ಮಕ್ಕಳನ್ನು ತಯಾರು ಮಾಡುವ ಗೀಳಿಗೆ ಬಿದ್ದಿರುವುದರಿಂದ ಇಂಥವೆಲ್ಲ ನಡೆಯುತ್ತಿವೆ.
ಈ ಕೋಚಿಂಗ್ ಸೆಂಟರ್‌ಗಳಲ್ಲಿ ಜನರು ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಬೇಕಾಗಿದೆ. ಐಎಎಸ್, ಐಪಿಎಸ್, ಇಂಜಿನಿಯರ್ ಅಥವಾ ವೈದ್ಯರಾಗಲು ಅಂತಹ ಭಯಂಕರ ಪೈಪೋಟಿಯಿದೆ. ಈ ಪೈಪೋಟಿಯಲ್ಲಿ ತಮ್ಮ ಮಗ ಅಥವಾ ಮಗಳು ಹೇಗಾದರೂ ಐಎಎಸ್, ಐಪಿಎಸ್, ಇಂಜಿನಿಯರ್ ಅಥವಾ ಡಾಕ್ಟರ್ ಆಗಿ ಬಿಟ್ಟರೆ ಸಾಕು ಎಂಬ ಒತ್ತಡದಲ್ಲಿ ಪೋಷಕರು ಇರುತ್ತಾರೆ. ಅದೇ ಒತ್ತಡವನ್ನು ಅವರು ಮಕ್ಕಳಿಗೂ ವರ್ಗಾಯಿಸುತ್ತಾರೆ. ಈ ಕೋಚಿಂಗ್ ಸೆಂಟರ್‌ಗಳು ಅದೇ ಆತಂಕ ಹಾಗೂ ಒತ್ತಡವನ್ನು ದುರ್ಬಳಕೆ ಮಾಡಿಕೊಳ್ಳುತ್ತವೆ. ನಮ್ಮಲ್ಲಿ ಸೇರಿದರೆ ಮಾತ್ರ ನಿಮ್ಮ ಮಕ್ಕಳು ಯುಪಿಎಸ್‌ಸಿ, ನೀಟ್, ಜೆಇಇಯಂತಹ ಸ್ಪರ್ಧಾತ್ಮಕ ಪರೀಕ್ಷೆ ಪಾಸಾಗಲು ಸಾಧ್ಯ ಎಂದು ಹೆದರಿಸಿ ಬಿಡುತ್ತಾರೆ. ಸಾಲದ್ದಕ್ಕೆ ಒಂದು ಟೆಸ್ಟ್ ಮಾಡಿಸಿ ನಿಮ್ಮ ಮಕ್ಕಳು ಕಲಿಕೆಯಲ್ಲಿ ತೀರಾ ಹಿಂದಿದ್ದಾರೆ, ಅವರ ಶಾಲೆಯಲ್ಲಿ ಅಥವಾ ಕಾಲೇಜಲ್ಲಿ ಕಲಿಸುವ ವಿಧಾನ ಏನೇನೂ ಸರಿಯಿಲ್ಲ ಎಂದು ಹೆದರಿಸಿ ಬಿಡುತ್ತಾರೆ.
ಪೋಷಕರ ಈ ಭಯ ಹಾಗೂ ಒತ್ತಡದ ಸಂಪೂರ್ಣ ಲಾಭವನ್ನು ಕೋಚಿಂಗ್ ಸೆಂಟರ್‌ಗಳು ಪಡೆದುಕೊಳ್ಳುತ್ತವೆ. ಹೇಗಾದರೂ ಮಗ, ಮಗಳು ಪಾಸಾದರೆ ಸಾಕು ಎಂದು ಪೋಷಕರು ಎಲ್ಲಿಂದಾದರೂ ತಂದು ಲಕ್ಷಗಟ್ಟಲೆ ಫೀಸು ಕೋಚಿಂಗ್ ಸೆಂಟರ್‌ಗೆ ಕೊಡುತ್ತಾರೆ. ಸರಕಾರ ಕೋಚಿಂಗ್ ಸಂಸ್ಥೆಗಳಿಗೆ ಮಾರ್ಗಸೂಚಿಗಳನ್ನು ಮಾಡುವುದಷ್ಟೇ ಅಲ್ಲ, ಆ ಮಾರ್ಗಸೂಚಿಗಳನ್ನು ಜಾರಿಗೆ ತರಲಾಗುತ್ತಿದೆಯೇ ಅಥವಾ ಇಲ್ಲವೇ ಎಂಬುದನ್ನು ಸಹ ಗಮನಿಸಬೇಕಿದೆ.