ಗ್ರಾಮೀಣ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಕಂಪ್ಯೂಟರ್ ತರಬೇತಿ

ಬೀದರ್: ಅರಿವು ಕೇಂದ್ರ ಯೋಜನೆಯಡಿ ಭಾಲ್ಕಿ ತಾಲೂಕಿನ ಕೋನ ಮೇಳಕುಂದಾ ಗ್ರಾಮ ಪಂಚಾಯತ್‌ನಲ್ಲಿ ಉಚಿತ ಕಂಪ್ಯೂಟರ್ ತರಬೇತಿ ನೀಡಲಾಗುತ್ತಿದ್ದು, ಸುಮಾರು 30 ರಿಂದ 40 ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯುತ್ತಿದ್ದಾರೆ.
ಸರಕಾರ ಯೋಜನೆ ರೂಪಿಸಿದರೂ ಅದನ್ನು ಜಾರಿಗೆ ತರುವುದು ಕೂಡ ಅಷ್ಟೇ ಮುಖ್ಯವಾಗುತ್ತದೆ. ಗ್ರಾಮೀಣ ಭಾಗದ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ರೂಪಿಸಿದ ಈ ಯೋಜನೆಯನ್ನು ಕೋನ ಮೇಳಕುಂದಾ ಗ್ರಾಮ ಪಂಚಾಯತ್ ಉತ್ತಮವಾಗಿ ಸದ್ಬಳಕೆ ಮಾಡಿಕೊಳ್ಳುತ್ತಿದೆ.
ಈ ಕಂಪ್ಯೂಟರ್ ತರಬೇತಿಯಿಂದ ಹೈಸ್ಕೂಲ್, ಪಿಯುಸಿ ಹಾಗೂ ಪದವಿ ವಿದ್ಯಾರ್ಥಿಗಳು ಕೂಡ ಬೇಸಿಕ್ ಕಂಪ್ಯೂಟರ್ ಜ್ಞಾನ ಪಡೆಯುತ್ತಿದ್ದಾರೆ. ಎರಡು ಬ್ಯಾಚ್ ಮಾಡಿ ತರಬೇತಿ ನೀಡಬೇಕು ಎಂದು ಸರಕಾರದ ನಿಯಮವಿದ್ದರೂ ಈ ಪಂಚಾಯತ್‌ನಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಆಸಕ್ತಿ ತೋರುತ್ತಿದ್ದುದರಿಂದ ೩ ಬ್ಯಾಚ್ ಮಾಡಲಾಗಿದೆ. ಮೊದಲ ಬ್ಯಾಚ್ ಬೆಳಗ್ಗೆ 7 ರಿಂದ 9 ಗಂಟೆ, ಎರಡನೇ ಬ್ಯಾಚ್ ಮಧ್ಯಾಹ್ನ 3ರಿಂದ 5 ಹಾಗೂ ಮೂರನೇ ಬ್ಯಾಚ್ ಸಾಯಂಕಾಲ 6 ರಿಂದ 7:30ರವರೆಗೆ ತರಬೇತಿ ನೀಡಲಾಗುತ್ತಿದೆ. ತರಬೇತಿಗಾಗಿ ಸುಮಾರು 5-6 ಕಂಪ್ಯೂಟರ್‌ಗಳಿದ್ದು, ಚಿಕ್ಕದಾದ ಕೋಣೆ ಇದೆ. ಆದರೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳಿಗೆ ಕುಳಿತುಕೊಳ್ಳಲು ತೊಂದರೆಯಾಗುತ್ತಿದ್ದು, ಇದಕ್ಕಾಗಿಯೇ ಒಂದು ಕೋಣೆ ಮತ್ತು ಇನ್ನಷ್ಟು ಕಂಪ್ಯೂಟರ್ ವ್ಯವಸ್ಥೆ ಮಾಡಬೇಕು ಎನ್ನುವುದು ವಿದ್ಯಾರ್ಥಿಗಳ ಮನವಿಯಾಗಿದೆ. ಈ ಕಂಪ್ಯೂಟರ್ ತರಬೇತಿ ಯೋಜನೆಯು 1 ತಿಂಗಳವರೆಗೆ ಮಾತ್ರ ಇದೆ ಎನ್ನುವ ಮಾಹಿತಿ ಇದೆ. ಆದರೆ ವಿದ್ಯಾರ್ಥಿಗಳು ಆಸಕ್ತಿ ತೋರುತ್ತಿರುವುದರಿಂದ ಈ ಉಚಿತ ಕಂಪ್ಯೂಟರ್ ತರಬೇತಿಗೆ ನುರಿತ ಶಿಕ್ಷಕರನ್ನು ನೇಮಿಸಿ ಇದನ್ನು ಮುಂದುವರಿಸಿದರೆ ಬಡ ವಿದ್ಯಾರ್ಥಿಗಳಿಗೆ ಪ್ರಯೋಜನವಾಗಲಿದೆ.
ಒಂದು ತಿಂಗಳ ಕಾಲ ಉಚಿತ ಕಂಪ್ಯೂಟರ್ ತರಬೇತಿ ನೀಡಬೇಕು ಎನ್ನುವ ಯೋಜನೆ ಇದೆ. ಆದರೆ ವಿದ್ಯಾರ್ಥಿಗಳು ಆಸಕ್ತಿ ತೋರುತ್ತಿರುವುದರಿಂದ ಇದನ್ನು ಮುಂದುವರಿಸುವ ಯೋಚನೆ ಇದೆ. ತರಬೇತಿ ಮುಗಿಸಿದ ಕೊನೆಯಲ್ಲಿ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಗುವುದು.
-ವಿಶ್ವಶಾಲಾ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ
ನಾವು ರೈತರ ಮಕ್ಕಳಾಗಿದ್ದು, ನಮಗೆ ಕಂಪ್ಯೂಟರ್ ಕೋರ್ಸ್‌ಗಳ ಬಗ್ಗೆ ಗೊತ್ತಿರಲಿಲ್ಲ. ಗ್ರಾಮ ಪಂಚಾಯತ್‌ನವರು ಉಚಿತ ಕಂಪ್ಯೂಟರ್ ತರಬೇತಿ ನೀಡುತ್ತಿದ್ದು, ಇದರಿಂದ ಕಂಪ್ಯೂಟರ್ ಬಗ್ಗೆ ಜ್ಞಾನ ಸಿಗುತ್ತಿದೆ.
-ಶ್ರುತಿ, 8ನೇ ತರಗತಿ ವಿದ್ಯಾರ್ಥಿನಿ







