ಜಾತಿ-ಉಪಜಾತಿಗಳ ಸಂಖ್ಯಾಬಲದ ಯಾದವಿ ಕಲಹ ನಿಲ್ಲಲಿ

ಸರಕಾರದಿಂದ ಆಯೋಗಕ್ಕೆ ನೀಡಿದ್ದ ವಿಚಾರಣಾ ಮಾರ್ಗಸೂಚಿಯಲ್ಲಿ ಈ ಜಾತಿ ಆ ಜಾತಿಗಳ ನೇರ ಪ್ರಸ್ತಾಪವಿರಲಿಲ್ಲ. ಅದರಲ್ಲಿ ಸುಪ್ರೀಂ ಕೋರ್ಟಿನ ತೀರ್ಪಿನ ಮೇರೆಗೆ ಪರಿಶಿಷ್ಟ ಜಾತಿಗಳ ಅಂತರ ಹಿಂದುಳಿದಿರುವಿಕೆಯನ್ನು ಪ್ರಯೋಗಾತ್ಮಕವಾಗಿ ಪರಿಶೀಲಿಸಲು ಮಾತ್ರ ಸೂಚಿಸಿತ್ತು. ಆದುದರಿಂದ, 5 ಗುಂಪುಗಳ ವಿಂಗಡಣೆಯಲ್ಲಿ ಈ ಮಾದರಿ ಹಂಚಿಕೆ ತತ್ವವನ್ನು ಅಳವಡಿಸಿದಂತೆ ಕಾಣುತ್ತಿದೆ. ಎಡ-ಬಲ ಬಣಗಳಿಂದ ಚದುರಿದ ಉಪಜಾತಿಗಳು ಅತ್ಯಧಿಕವಾಗಿವೆ; ಅವುಗಳ ಕ್ರೋಡೀಕರಣ ಆಯೋಗದ ಪ್ರಥಮ ಆದ್ಯತೆ ಆಗಿರಲಿಲ್ಲ. ಸಮೀಕ್ಷೆಯಲ್ಲಿ ಲಭಿಸಿರುವ ವಿವಿಧ ಸ್ವರೂಪದ ಅಂತರ ಹಿಂದುಳಿದಿರುವಿಕೆ ದತ್ತಾಂಶಗಳ ಮೇರೆಗೆ ಹಂಚಿಕೆ ತತ್ವದಡಿ ಜೋಡಿಸುವಾಗ ಎಡ-ಬಲ ಬಣಗಳ ಉಪ ಜಾತಿಗಳು ಸಹಜವಾಗಿ ಅದಲುಬದಲಾಗಿವೆ ಅಷ್ಟೇ.
ಇಂದು ಪರಿಶಿಷ್ಟರ ಮೀಸಲಾತಿ ಅನೇಕ ಆಯಾಮಗಳ ಚರ್ಚೆಗಳನ್ನು ಹುಟ್ಟು ಹಾಕಿದೆ. ಅದರೊಳಗೆ ಒಳ ಪಂಗಡಗಳ ಸಂಖ್ಯಾಬಲವನ್ನು ಮಾಪನಮಾಡಿ ಮರು ಹಂಚಿಕೆಯ ಮಾನದಂಡಗಳಿಲ್ಲ. ಈ ತಾತ್ವಿಕತೆಗಳು 1960ರಿಂದಲೂ ಹಿಂದುಳಿದ ವರ್ಗಗಳಲ್ಲಿ ಅನುಷ್ಠಾನವಾಗಿವೆ. ಸಾಮಾನ್ಯವಾಗಿ ಜಾತಿ-ಉಪಜಾತಿಗಳ ಉಗಮಕ್ಕೆ ನೂರಾರು ಮಣ್ಣಿನ ಮಕ್ಕಳ ವಾದಗಳಿವೆ. ಒಟ್ಟಾರೆ, ಪ್ರತಿಯೊಂದು ಜಾತಿ-ಉಪ ಜಾತಿಗಳು ಶ್ರೇಷ್ಠತೆಯ ವ್ಯಸನದಿಂದ ದೂರವಾಗಿಲ್ಲ. ಉದಾಹರಣೆಗೆ ಪ್ರಧಾನ ಜಾತಿಯಿಂದ ಕವಲೊಡೆದ ಉಪಜಾತಿಯು (Fusion sub-castes) ತನ್ನ ಮುಖ್ಯ ಜಾತಿಯ ಎಲ್ಲಾ ಸಾಮಾಜಿಕತೆಯನ್ನು ಮೈಗೂಡಿಸಿಕೊಂಡಿರುತ್ತದೆ. ಆದರೆ, ಉಪಜಾತಿಯಿಂದ ಸೀಳಿ ಸಣ್ಣಪುಟ್ಟ ಉಪ ಜಾತಿಗಳಾದವು (Fission sub-castes) ಸಾಮಾನ್ಯವಾಗಿ ಸಮ್ಮಿಶ್ರ ಸಾಮಾಜಿಕತೆಯನ್ನು ಸಾದರಪಡಿಸುತ್ತವೆ. ಈ ಮಾದರಿಗಳು ಎಲ್ಲಾ ವರ್ಣ/ವರ್ಗಗಳಲ್ಲಿವೆ. ಜಾತಿ-ಉಪಜಾತಿಗಳೊಳಗೆ ಬೇರ್ಪಡಿಸಿದ ಸಾಮಾಜಿಕತೆ, ಶ್ರೇಣೀಕರಣ, ಸಹಪಂಕ್ತಿ ಮತ್ತು ಮುಕ್ತ ಸಾಮಾಜಿಕ ಒಡನಾಟಗಳ ನಿಷೇಧವಿದೆ. ಸಾಂಪ್ರದಾಯಿಕ ವೃತ್ತಿ ಸ್ಥಿತಿಸ್ಥಾಪಕತ್ವವಿರುವುದಿಲ್ಲ. ನಾಗರಿಕ ಮತ್ತು ಧಾರ್ಮಿಕ ಒಡನಾಟಗಳ ನಿಷೇಧ ಹಾಗೂ ಮುಕ್ತ ವೈವಾಹಿಕತೆಗಳಿರುವುದಿಲ್ಲ. ಇವುಗಳು ಭಾರತೀಯ ಪ್ರಧಾನ ಸಾಮಾಜಿಕ ಗುಣಲಕ್ಷಣಗಳಾಗಿವೆ. ಅದರಲ್ಲೂ ಪರಿಶಿಷ್ಟರಿಗೆ ಇವೆಲ್ಲವೂ ದೈನಂದಿನ ಬಂಧವಾಗಿರುತ್ತವೆ. ಇಂತಹ ಸಮುದಾಯಗಳು ಸಮನಾಂತರ ನ್ಯಾಯಕ್ಕಾಗಿ (Horizontal Justice) ಒಳ ಮೀಸಲಾತಿಯ ಕಂದೀಲು ಹಿಡಿದು ದೀರ್ಘ ಕಾಲದಿಂದ ಹೋರಾಡುತ್ತಿವೆ.
ರಾಜ್ಯದಲ್ಲಿ ಶಾಸನಬದ್ಧವಾಗಿ ಸೇರಿರುವ (1956) ಪರಿಶಿಷ್ಟ ಜಾತಿಗಳ ಒಳಗೆ 1976 ತರುವಾಯ ಅನೇಕ ಸಾಂಸ್ಥಿಕ ಬದಲಾವಣೆಗಳಾಗಿವೆ. ಅದರಲ್ಲಿಯೂ ಅಸ್ಪಶ್ಯ ಮತ್ತು ಸ್ಪಶ್ಯ ಎಂಬ ಒಳ ಭೇದತೆಗಳು ದೈನಂದಿನ ನಿತ್ಯಾರ್ಚನೆಗಳಾಗುತ್ತಿವೆ. ಡಾ. ಅಂಬೇಡ್ಕರ್‌ರ ಜಾತಿ ವಿನಾಶ ಅಭಿಮತಗಳಿಂದ ಪ್ರಭಾವಿಸಿಕೊಂಡವರು ಕಳಂಕಿತ ಜಾತಿ ನಾಮಗಳಿಂದ ದೂರವಾಗಲು ಮುಂದಾದರು. ಆಗ ಪ್ರಾದೇಶಿಕತೆಯ ಆದಿ ದ್ರಾವಿಡ, ಆದಿ ಆಂಧ್ರ ಮತ್ತು ಆದಿ ಕರ್ನಾಟಕ ಎಂಬ ಜನರಿಕ್ ಪದಗಳು ಎಡ-ಬಲ ಬಣಗಳಲ್ಲಿ ಸಮಗ್ರ ರೂಪದಲ್ಲಿ ಸಾಂಘಿಕವಾದವು. 1980ರಿಂದಾಚೆಗೆ ಇವರ ಸಂಖ್ಯಾಬಲದ ಹಾವು ಏಣಿಯಾಟಕ್ಕೆ ಗ್ರಾಸವಾಗಿವೆ. ಇದರ ನಿವಾರಣೆಗಾಗಿ ನ್ಯಾಯಮೂರ್ತಿ ದಾಸ್ ಆಯೋಗ ಸಮೀಕ್ಷೆಯಲ್ಲಿ ಕರಾರು ವಕ್ಕಾದ ಮಾಹಿತಿಗಳನ್ನು ಕ್ರೋಡೀಕರಿಸಲು ಮುಂದಾಗಿತ್ತು.
ಆಯೋಗದ ಸಮೀಕ್ಷೆಯಿಂದ ಸ್ವೀಕೃತವಾಗಿರುವ 101 ಉಪಜಾತಿಗಳ ಸಂಖ್ಯಾಬಲವನ್ನು ಒಂದು ಸಂಭವನೀಯ ಫಲಿತಗಳಾಗಿ (Pಡಿobಚಿbಟe ಖesuಟಣs) ಸ್ವೀಕರಿಸುವ ಮನೋಧರ್ಮ ಪರಿಶಿಷ್ಟರಲ್ಲಿ ಧಾರಣವಾಗಬೇಕಿದೆ. ಆಗ ಅನುಷ್ಠಾನಕ್ಕೆ ದಾರಿ ತೆರೆಯುತ್ತದೆ. 2011ರಲ್ಲಿ ಆದಿ ದ್ರಾವಿಡರು 7.96 ಲಕ್ಷ, ಆದಿ ಕರ್ನಾಟಕರು 29.21 ಲಕ್ಷ ಮತ್ತು ಆದಿ ಆಂಧ್ರೀಯರು 26 ಸಾವಿರದಷ್ಟಿದ್ದರು. ಹಿಂದಿನ ಒಳ ಮೀಸಲಾತಿ ಹಂಚಿಕೆಯಲ್ಲಿಯೂ ಈ ಪ್ರಾದೇಶಿಕ ಸೂಚಕಗಳು ಎಲ್ಲಿಲ್ಲದ ಅವಾಂತರಗಳನ್ನು ಎಬ್ಬಿಸಿವೆ. ಈ ಸಮೀಕ್ಷೆಯಲ್ಲಿ ಆದಿ ಕರ್ನಾಟಕ ಜನಸಂಖ್ಯೆ ಹೊಲೆಯ ಮತ್ತು ಮಾದಿಗರ ನಡುವೆ ಹಂಚಲ್ಪಟ್ಟಿವೆ. ಮಾದಿಗರು 9.53 ಲಕ್ಷವಿದ್ದವರ (2011) ಪ್ರಜಾಸಂಖ್ಯೆ 27.74 ಲಕ್ಷವಾಗಿ ಮೂರು ಪಟ್ಟಾಗಿದೆ. ಹಾಗೆಯೇ 7.93 ಲಕ್ಷವಿದ್ದ ಹೊಲೆಯರು 24.72 ಲಕ್ಷಕ್ಕೇರಿ ಮೂರುಪಟ್ಟು ವೃದ್ಧಿಸಿದೆ. ಇನ್ನುಳಿದ 1.48 ಲಕ್ಷ ಜನರು ಆದಿ ಕರ್ನಾಟಕರಾಗಿಯೇ ಉಳಿದಿದ್ದಾರೆ. ಅದೇ ಮಾದರಿಯಲ್ಲಿ 7.96 ಲಕ್ಷವಿದ್ದ ಆದಿದ್ರಾವಿಡರು (2011) 3.21ಲಕ್ಷಕ್ಕೆ ಕುಸಿದಿದ್ದಾರೆ. ಈ ಸಮುದಾಯದ ಕುಸಿತವು ಎಡ-ಬಲಗಳ ನಡುವೆ ಹಂಚಲ್ಪಟ್ಟಿವೆ. ಆಶ್ಚರ್ಯವಾಗಿ ಪರೆಯನ್ 2,418 (2011)ರಿಂದ 1.61 ಲಕ್ಷಕ್ಕೇರಿ ಹೊಸದಾಗಿ ದಾಖಲಾಗಿರುವುದು ವೇದ್ಯವಾಗಿದೆ. ಚಲವಾದಿ ಪದಕ್ಕೂ ಭಾರೀ ಮನ್ನಣೆ ಸಿಕ್ಕಿದೆ. ಹಾಗೆಯೇ 33 ಪರಿಶಿಷ್ಟ ಜಾತಿಗಳು 2011ರಲ್ಲಿ ಹೊಂದಿದ್ದ ಪ್ರಜಾ ಸಾಮರ್ಥ್ಯವನ್ನು ದಾಖಲಿಸುವಲ್ಲಿ ವಿಫಲವಾಗಿವೆ. ಇವರಲ್ಲಿ ಹತ್ತು ಸಾವಿರಕ್ಕಿಂತ ಮೇಲ್ಪಟ್ಟು ಕುಗ್ಗಿದವರೆಂದರೆ ಬಾಂಬ್ಹಿ ಸಮೂಹ ಜಾತಿಗಳು (-95,032), ಜಾಂಬವಲು (-11,855), ಮಹಾರ್ ಸಮೂಹ (-11,546), ಮಾಂಗ್(-12784), ಮುಂಡಾಲ (-17183) ಮತ್ತು ಸಮಗಾರ (-11612) ಸೇರಿವೆ.
ಅತ್ಯಧಿಕ ಧನಾತ್ಮಕ ವೃದ್ಧಿ ಕಂಡಿರುವ ಜಾತಿಗಳೆಂದರೆ; ಬಲಗೈ(24,415), ಬಂಜಾರ (1,38,236), ಬೇಡ (ಬುಡ್ಗ) ಜಂಗಮರು (60,498), ಚಲವಾದಿ/ಚನ್ನಯ್ಯ (1,56,822), ಕೊರಮ (34,052), ಮುಕ್ರಿ (20,554), ಶಿಳ್ಲೇಕ್ಯಾತ (10,792), ಮಾಲ (8,817) ಅಡಿಯಾ (8,026), ಅಗೇರ್(7,983), ಅರುಂಧತಿಯಾರ್(6,673), ಭೋವಿ (9,986), ಚನ್ನದಾಸರ್/ಹೊಲೆಯ ದಾಸರ (7,622), ಡೋಹಾರ (6,081), ಹೊಲಾರ್/ವಲೇರ್(9,700), ಹೊಲೆಯ ದಾಸರಿ (2,681), ಕೊರಚ (1,598) ಮಾಲದಾಸರಿ (4,247), ಮೊಗೇರ (4,310) ಶಿಂಧೋಳು/ಚಿಂದೋಳು (3,631), ಸುಡುಗಾಡು ಸಿದ್ಧ(6,974), ತೋಟಿ (2,639) ಮತ್ತು ವೆಲ್ಲುವನ್(1,517) ಇತ್ಯಾದಿ ಸೇರಿವೆ. ನೂರರಷ್ಟಿದ್ದ ಕೆಲವು ಸೂಕ್ಷ್ಮ ಜಾತಿಗಳಲ್ಲೂ ವೃದ್ಧಿಯಾಗಿದೆ. ಅಂದರೆ, ಸಮೀಕ್ಷೆಯಲ್ಲಿ ಜನರು ಮುಕ್ತವಾಗಿ, ಹುಮ್ಮಸ್ಸಿನಿಂದ ಹಕ್ಕಿಗಾಗಿ ಸಕ್ರಿಯರಾಗಿರುವುದು ಗೊಚರವಾಗುತ್ತಿದೆ. ಬಹುಶಃ ಇಷ್ಟೊಂದು ಸಮುದಾಯ ಆಧಾರಿತ ಪ್ರಚಾರ ಆಂದೋಲನ ಹಿಂದಿನ ಯಾವುದೇ ಸಮಗ್ರ ಜನಗಣತಿಗಳಲ್ಲಿ ಜರುಗಿದ್ದರೆ ಯಾವುದೇ ಸಮುದಾಯಗಳ ಅಸ್ಮಿತತೆ ನಾಶವಾಗುತ್ತಿರಲಿಲ್ಲ. ಸರಕಾರ ಜನ ಜಾಗೃತಿಗಾಗಿ ಎಲ್ಲಾ ಸಾಧನಗಳನ್ನು ಬಳಸಿಕೊಂಡ ಫಲಶ್ರುತಿಯೂ ಕೊಡುಗೆ ನೀಡಿದೆ.
ಭಾಗಶಃ ಆದಿ ಕರ್ನಾಟಕ, ಆದಿ ದ್ರಾವಿಡ ಮತ್ತು ಆದಿ ಆಂಧ್ರೀಯ ಸಮಸ್ಯೆ ಬಗೆಹರಿದಂತೆ ಕಾಣುತ್ತಿದೆ. ಸಮೀಕ್ಷೆ ಮೂಲ ಉದ್ದೇಶ ಎಡ-ಬಲ ಬಣಗಳ ನೈಜ ಪ್ರಜಾಸಂಖ್ಯೆಯನ್ನು ಅಖೈರು ಮಾಡುವುದಾಗಿತ್ತು. ಆದಿ ಕರ್ನಾಟಕ (1.47 ಲಕ್ಷ), ಆದಿ ದ್ರಾವಿಡ (3.21 ಲಕ್ಷ) ಮತ್ತು ಆದಿ ಆಂಧ್ರೀಯರು (7,114) ಮೂಲ ಜಾತಿಗಳನ್ನು ದಾಖಲಿಸಲು ನಿರಾಕರಿಸಿದ್ದಾರೆ. ಈ ವಿಚಾರದಲ್ಲಿ ಆಯೋಗಕ್ಕೇ ಯಾರನ್ನು ಕೈ ಹಿಡಿದು ಬರೆಸುವ ಹಕ್ಕನ್ನು ಸರಕಾರ ನೀಡಿರಲಿಲ್ಲ. ಅದು ಸುಪ್ರೀಂ ಕೋರ್ಟ್ ವಿಧಿಸಿರುವ ಪ್ರಯೋಗಾತ್ಮಕ ದತ್ತಾಂಶಗಳನ್ನು ಸಾದರ ಪಡಿಸುವಲ್ಲಿ ಆಯೋಗ ಒಂದಷ್ಟು ಯಶಸ್ಸು ಕಂಡಿದೆ. ಡಾ. ಸಿ.ಎಸ್. ದ್ವಾರಕಾನಾಥ್‌ರ ಉದ್ಯೋಗ ಮಾಹಿತಿ ಕ್ರೋಡೀಕರಣದಲ್ಲಿ ಆಯೋಗ ವಿಫಲವಾಗಿದೆ ಎಂಬ ವಾದಗಳು ಸಕಾಲಿಕವಾಗಿಲ್ಲ. ಇದು 1979ರಿಂದ ಪರಿಶಿಷ್ಟ ಜಾತಿಗಳು ವಿಧಾನ ಸಭೆ/ಲೋಕ ಸಭೆಯಲ್ಲಿ ಗೆದ್ದಿರುವ ಬಗ್ಗೆಯೂ ಮಾಹಿತಿ ನೀಡಿಲ್ಲ. ಸದರಿ ಆಯೋಗ ಅತ್ಯಅಲ್ಪ ಕಾಲಮಿತಿಯಲ್ಲಿ ಸಾಧ್ಯವಾದಷ್ಟು ಪ್ರಗತಿ ಸಾಧಿಸಿದೆ. ಸದಾಶಿವ ಆಯೋಗದಲ್ಲಿದ್ದ ಮಾಹಿತಿ ಕಂಡ ಅನೇಕ ನೌಕಕರು ಬೆಚ್ಚಿ ತಮ್ಮ ನೈಜ ಜಾತಿಗಳನ್ನು ನೀಡದೆ ಫಲಾಯನ ಮಾಡಿದವರೇ ಜಾಸ್ತಿ. ಇನ್ನೂ ಕೆಲವರು ತಮ್ಮ ಸಕ್ಷಮ ಪ್ರಾಧಿಕಾರಿಗಳ ಜೊತೆ ಜಗಳವಾಡಿರುವ ಉದಾಹರಣೆಗಳಿವೆ. ಮೀಸಲಾತಿ ಮೂಲದಿಂದ ಉದ್ಯೋಗ ಅನುಭೋಗ ಪ್ರಮಾಣದಲ್ಲಿ ಬಲ ಬಣ (ಗುಂಪು-ಸಿ) ಮತ್ತು ಸ್ಪಶ್ಯರಿಗಿಂತ (ಗುಂಪು-ಡಿ) ಇ ಗುಂಪಿನ ಜನರಿಕ್ ಜಾತಿ ನಾಮಪದಗಳು ಶೇ.5.35 ಪಡೆದಿದ್ದಾರೆ. ಬಹುಶಃ ಮೀಸಲಾತಿ ಹಂಚಿರುವ ದೃಷ್ಟಿಕೋನದಿಂದ ವಿಶ್ಲೇಷಣೆ ಮಾಡಿದಾಗ ಅತ್ಯಂತ ಸದೃಢರೆಂದು ಅದರ ಫಲಿತಗಳೇ ಷರಾ ಬರೆಯುತ್ತಿದೆ.
ಆದಿ ದ್ರಾವಿಡರಾದ ಅರುಂಧತಿಯಾರ್, ಮಾದಾರಿ, ಮಾದಿಗ, ತೋಟಿ, ಮಾದಿಗ, ಪಾಗಾಡೈ ಮತ್ತು ಚಕ್ಕಲಿಯನ್ ಜಾತಿಗಳು ಆರೇಳು ತಲೆಮಾರಿನಿಂದ ಮೈಸೂರು ರಾಜ್ಯಕ್ಕೆ ವಲಸೆ ಬಂದಿವೆ. ಇವರೆಲ್ಲರೂ ತಮಿಳು ಭಾಷಿಕರಾಗಿ ಸಚೇತನ ಆರಾಧಕರಾಗಿದ್ದಾರೆ. ದಿವಾನ್ ರಂಗಚಾರ್ಲು ಅವರ ಕಾಲದಲ್ಲಿ ಅಧಿಕವಾಗಿ ವಲಸೆ ಬಂದರು. ಅವರನ್ನು ಪೌರ ಕಾರ್ಮಿಕರನ್ನಾಗಿ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ನಾಗರಿಕ ವೃತ್ತಿ ನಿರ್ವಾಹಕರಾಗಿ ನಿಯೋಜಿಸಿದರು. 1931ರ ಜನಗಣತಿ ತರುವಾಯ ಸೇಲಂ, ಈರೋಡ್, ನೀಲಗಿರಿ, ಕೃಷ್ಣಗಿರಿ ಇತ್ಯಾದಿ ಭಾಗಗಳಿಂದ ಬಂದಿರುವವರು ಅತ್ಯಧಿಕವಾಗಿ ಆದಿ ದ್ರಾವಿಡ ಎಂದು ಗುರುತಿಸಿಕೊಂಡಿದ್ಧಾರೆ. ಬ್ರಿಟಿಷ್ ಆಡಳಿತ ಚರ್ಮಗಾರಿಕೆಯನ್ನು ಉತ್ತೇಜಿಸಲು ವೆಲ್ಲೂರು, ತಿರುನಾವೆಲ್ಲಿ, ಮತ್ತು ಮಧುರೆ ಭಾಗಗಳಿಂದ ಅಂದು 5,000 ಅರುಂಧತಿಯಾರ್ ಮತ್ತು ಚಕ್ಕಲಿಯನ್ ಜಾತಿ ಜನರನ್ನು ವಲಸೆ ಮಾಡಿಕೊಂಡು ಚರ್ಮ ಹದಮಾಡುವುದಕ್ಕೆ ಚಾಲನೆ ನೀಡಲಾಗಿತ್ತು (ಆಕರ: ಎನ್.ಸಿ. ಮುನಿಯಪ್ಪ). ಇವರೆಲ್ಲರೂ ಬೆಂಗಳೂರಿನಲ್ಲಿ ನೆಲಸಿದರು. ತೆಲುಗುಭಾಷಿಕ ಮಾದಿಗರು ನೆಲ್ಲೂರು, ಪ್ರಕಾಶಂ, ಪೆನಗೊಂಡ, ಅನಂತಪುರ ಇತರ ಆಂಧ್ರಪ್ರದೇಶಗಳಿಂದ ಬಂದು ಮೈಸೂರು, ಬೆಂಗಳೂರು ಇತ್ಯಾದಿ ಪ್ರದೇಶಗಳಲ್ಲಿ ನೆಲೆಸಿದ್ದಾರೆ. ಪ್ರಾಂತೀಯ ಸರಕಾರಗಳ (1921-31) ನಿರ್ಣಯಗಳಲ್ಲಿ ಎಡ-ಬಲ ಬಣಗಳನ್ನು ನೂತನ ಜನರಿಕ್ ನಾಮ ಸೂಚಕಗಳಲ್ಲಿ ಸೇರಿಸಲು ನಿರ್ಧಾರ ಮಾಡಿವೆ. ಆದುದರಿಂದ, ನ್ಯಾಯಮೂರ್ತಿ ನಾಗ ಮೋಹನ ದಾಸ್ ಆಯೋಗ ವರ್ಗೀಕರಣ ಮಾಡಿರುವ ಇ ಗುಂಪಿನಲ್ಲಿರುವ ಆದಿ ಕರ್ನಾಟಕ, ಆದಿ ದ್ರಾವಿಡ ಮತ್ತು ಆದಿ ಆಂಧ್ರರಲ್ಲಿ ಕೇವಲ ಬಲಗೈ ಉಪ ಜಾತಿಗಳಿವೆ ಅನ್ನುವುದೇ ಸೂಕ್ತವಾದ ಸಾಮಾಜಿಕ ನಿಲುವುಗಳಲ್ಲ ಅನ್ನಿಸುತ್ತದೆ.
ಬಾಂಬೆ ಪ್ರಾಂತದಲ್ಲಿ (1936) ಚನ್ನದಾಸರಿಗಳನ್ನು ಚಕ್ರವಾರ್ಧ್ಯ ದಾಸರಿಗಳೆಂದು ಗುರುತಿಸಲಾಗಿತ್ತು. ಹಿಂದುಳಿದ ವರ್ಗಗಳಲ್ಲೂ ಈ ಪದವಿದ್ದ ಕಾರಣ ಡಾ. ಬಿ.ಆರ್. ಅಂಬೇಡ್ಕರ್ (1950) ಅದರ ಕುಲಶಾಸ್ತ್ರೀಯ ಗುಣಲಕ್ಷಣಗಳ ಮೇಲೆ ಚನ್ನದಾಸರ್/ಹೊಲೆಯ ದಾಸರ್ ಎಂದು ಹೆಸರಿಸಿದರು. ಈ ಸಮಾಜದ ವಕೀಲ ಟಿ.ಕೆ. ದಾಸರ್ ಹೇಳುವಂತೆ ಚನ್ನದಾಸರ್ ಇಷ್ಟೊಂದು ಜನಸಂಖ್ಯೆ ಇರಲು ಸಾಧ್ಯವಿಲ್ಲ. ಕೆಲವು ಹಿಂದುಳಿದ ವರ್ಗಗಳು ಇದರ ಸಮನಾಂತರ ಪದವನ್ನು ನಿರಂತರವಾಗಿ ದುರುಪಯೋಗ ಮಾಡಿರುವ ಕಾರಣ ಜನಸಂಖ್ಯೆ ಗಗನಕ್ಕೇರಿದೆ ಎಂದು ಅಭಿಮತಿಸಿ, ಅವರ ಸಮಾಜದಲ್ಲಿರುವ ದೇವದಾಸಿ ಪದ್ಧತಿ ಬಗ್ಗೆ ಮರುಗಿದರು. ಪರಿಶಿಷ್ಟ ಜಾತಿಗಳಲ್ಲಿ ಕೇವಲ ಚನ್ನದಾಸರಿ ಅಥವಾ ಬೇಡ (ಬುಡ್ಗ) ಜಂಗಮ ಜಾತಿಗಳು ನಿರಂತರವಾಗಿ ದುರುಪಯೋಗ ಆಗಿರುವಂತೆ, ಆದಿದ್ರಾವಿಡ, ಆದಿಕರ್ನಾಟಕ ಮತ್ತು ಆದಿಆಂಧ್ರ ಜೊತೆ ಸಣ್ಣಪುಟ್ಟ ಜಾತಿಗಳಲ್ಲಿಯೂ ವ್ಯಾಪಕ ದುರುಪಯೋಗಗಳಿವೆ.
ಸರಕಾರದಿಂದ ಆಯೋಗಕ್ಕೆ ನೀಡಿದ್ದ ವಿಚಾರಣಾ ಮಾರ್ಗಸೂಚಿಯಲ್ಲಿ ಈ ಜಾತಿ ಆ ಜಾತಿಗಳ ನೇರ ಪ್ರಸ್ತಾಪವಿರಲಿಲ್ಲ. ಅದರಲ್ಲಿ ಸುಪ್ರೀಂ ಕೋರ್ಟಿನ ತೀರ್ಪಿನ ಮೇರೆಗೆ ಪರಿಶಿಷ್ಟ ಜಾತಿಗಳ ಅಂತರ ಹಿಂದುಳಿದಿರುವಿಕೆಯನ್ನು ಪ್ರಯೋಗಾತ್ಮಕವಾಗಿ ಪರಿಶೀಲಿಸಲು ಮಾತ್ರ ಸೂಚಿಸಿತ್ತು. ಆದುದರಿಂದ, 5 ಗುಂಪುಗಳ ವಿಂಗಡಣೆಯಲ್ಲಿ ಈ ಮಾದರಿ ಹಂಚಿಕೆ ತತ್ವವನ್ನು ಅಳವಡಿಸಿದಂತೆ ಕಾಣುತ್ತಿದೆ. ಎಡ-ಬಲ ಬಣಗಳಿಂದ ಚದುರಿದ ಉಪಜಾತಿಗಳು ಅತ್ಯಧಿಕವಾಗಿವೆ; ಅವುಗಳ ಕ್ರೋಡೀಕರಣ ಆಯೋಗದ ಪ್ರಥಮ ಆದ್ಯತೆ ಆಗಿರಲಿಲ್ಲ. ಸಮೀಕ್ಷೆಯಲ್ಲಿ ಲಭಿಸಿರುವ ವಿವಿಧ ಸ್ವರೂಪದ ಅಂತರ ಹಿಂದುಳಿದಿರುವಿಕೆ ದತ್ತಾಂಶಗಳ ಮೇರೆಗೆ ಹಂಚಿಕೆ ತತ್ವದಡಿ ಜೋಡಿಸುವಾಗ ಎಡ-ಬಲ ಬಣಗಳ ಉಪ ಜಾತಿಗಳು ಸಹಜವಾಗಿ ಅದಲುಬದಲಾಗಿವೆ ಅಷ್ಟೇ. ಈ ಸಂಕಷ್ಟ ಸ್ಪಶ್ಯರಿಗಿಲ್ಲ; ಅವುಗಳ ಬಹುತೇಕ ಉಪಜಾತಿಗಳು ಒಂದೆಡೆ ಅಂತರ್ಗತವಾಗಿವೆ. ಹಂಚಿಕೆಯಾಗಿರುವ ಇ ಗುಂಪಿನಲ್ಲಿರುವ 4.75 ಲಕ್ಷ ಜನರನ್ನು ಬಲಬಣದ ಆಗ್ರಹ ಪ್ರಕಾರ ಇವರಿಗೆ ಸೇರಿಸಿದಾಗ ಅವರ ಜನಸಂಖ್ಯೆ ವೃದ್ಧಿಸಿದಂತೆ ಅವುಗಳ ಮೀಸಲಾತಿ ಅನುಭೋಗ ಪ್ರಮಾಣ ದಿಢೀರನೆ ಜಿಗಿಯುತ್ತದೆ. ಅದರ ಔದ್ಯೋಗಿಕ ಅನುಪಾತ ಶೇ.6.81ಕ್ಕೆ ಮತ್ತಷ್ಟು ಜಿಗಿಯುತ್ತದೆ. ಆಗ ಇತರ ಗುಂಪುಗಳ ನಡುವೆ ಅದರ ಅಂತರ ಹಿಂದುಳಿದಿರುವಿಕೆಯು ರಾಚುವ ‘ಪರ್ವತ ಸೃಷ್ಟಿ ಅಭಿವೃದ್ಧಿ’ಯಂತೆ ಕಾಣುವುದು. ಬಲಬಣಕ್ಕೆ ಇ ಗುಂಪನ್ನು ಮರುಹಂಚಿಕೆಯಾದರೆ ಎಡ ಬಣದವರು ತಕರಾರು ಮಾಡದೆ ಇರುತ್ತಾರೆಯೇ? ಪರೆಯನ್/ಪರವನ್ ಅಥವಾ ಮೊಗೇರ್(ಮುಗ್ಗೇರಾ) ಉಪಜಾತಿಗಳನ್ನು ಎಡ ಬಣದವರು ತಮ್ಮವರೆಂದು ಎಲ್ಲಿಯೂ ಪ್ರತಿಪಾದಿಸಿಲ್ಲ. ಈ ಬಗ್ಗೆ ಯಾರೂ ಆಯೋಗದ ಮುಂದೆ ಲಿಖಿತವಾಗಿ ಪ್ರತಿಪಾದಿಸಿಲ್ಲ. ಬಹುಶಃ ಸದಾಶಿವ ಆಯೋಗದ ಸೂತ್ರದಂತೆ ಇಲ್ಲಿಗೆ ಸೇರಿದೆ. ತುಳು ನಾಡಿನ ‘ಮಾರಿ ಹೊಲೆಯ’ ಪದ ಪ್ರಯೋಗ ಮೈದಾನ ಪ್ರದೇಶಗಳ ಸಾಮಾಜಿಕತೆಗಿಂತ ವಿಭಿನ್ನವಾಗಿದೆ. ಇದನ್ನು ಸಹ ಆಯೋಗ ಮನಗಂಡಿದೆ.
ಮಾಧುಸ್ವಾಮಿ ಸಮಿತಿಯ ಒಳ ಮೀಸಲಾತಿಯು ಕೇವಲ ಜನಗಣತಿ ಆಧಾರಿತ ವಿಭಜನೆಯಾಗಿತ್ತು. ಇತರ ದತ್ತಾಂಶಗಳ ಗೌಣತೆ ಎದ್ದು ಕಾಣುತ್ತಿತ್ತು. ಅದರಲ್ಲಿಯೂ ಸೂಕ್ಷ್ಮ ಜಾತಿಗಳ ವಿಭಜನೆ ತುಂಬಿ ತುಳುಕಾಡುವ ಬಸ್ಸಿನಂತಾಗಿತ್ತು. ಆದರೆ, ನ್ಯಾಯಮೂರ್ತಿ ದಾಸ್ ಆಯೋಗ ಸುಪ್ರೀಂ ಕೋರ್ಟಿನ ನಿರ್ದೇಶಾನುಸಾರ ದತ್ತಾಂಶವನ್ನು ನಿರ್ಧಾರ ಮಾಡುವಾಗ ಜನಸಂಖ್ಯೆ ಜೊತೆ ಅವುಗಳ ಇತರ ಅಭಿವೃದ್ಧಿ ಸೂಚ್ಯಂಕಗಳನ್ನು ಗಮನಿಸಿರುವುದು ವಿಶೇಷವಾಗಿದೆ. ಬಲ ಬಣಕ್ಕೆ ಸೇರಿದ ಸಮಾಜ ಕಲ್ಯಾಣ ಇಲಾಖೆ ಸಚಿವರೇ ಸಮೀಕ್ಷೆಯನ್ನು ಸೂಕ್ಷ್ಮ ವಾಗಿ ನಿರ್ವಹಿಸುತ್ತಿದ್ದರು. ಅವರ ಕಣ್ಣುತಪ್ಪಿಸಿ ಮೋಸವಾಗಲು ಸಾಧ್ಯವಿರಲಿಲ್ಲ. ಅವರು ಆಡಳಿತ ನಿರ್ವಹಣೆಯಲ್ಲಿ ಅತಿಚತುರ ಎಂಬ ಹೆಸರಿದೆ. ಅವರೂ ಸಹ ಪ್ರಭಾವ ಬೀರದೆ ಆಯೋಗವನ್ನು ಸ್ವತಂತ್ರವಾಗಿ ಕಾರ್ಯ ನಿರ್ವಹಿಸಲು ಅವಕಾಶ ನೀಡಿದ್ದಾರೆ. ಹಾಗೆಯೇ ದಾಸ್ ಆಯೋಗ ಕೂಡ ಸಮೀಕ್ಷೆಯ ದತ್ತಾಂಶಗಳನ್ನು ಬೇಕಾಬಿಟ್ಟಿಯಾಗಿ ನೋಡಲು ಯಾರಿಗೂ ಮುಕ್ತ ಅವಕಾಶ ನೀಡಿರಲಿಲ್ಲ. ಮಾದಿಗರು ಅಧಿಕವಾಗಿ ಮೂಡಿದ್ದರೂ ಅವರಲ್ಲಿಯೂ ಇನ್ನಷ್ಟು ಲಕ್ಷಗಳು ನಮಗೆ ಇನ್ನೂ ಬರಬೇಕಿತ್ತು ಎಂದು ಕೊರಗುತ್ತಿದ್ದಾರೆ. ಒಟ್ಟಾರೆ, ಪ್ರತಿಯೊಂದು ಜಾತಿ-ಉಪಜಾತಿಗಳ ಸಂಖ್ಯಾಬಲದ ಯಾದವಿ ಕಲಹ ನಿಲ್ಲದ ಕಿತ್ತಾಟವಾಗಿದೆ. ಈ ಸಂದರ್ಭದಲ್ಲಿ ಸಂಪುಟ ಉಪಸಮಿತಿ ಕಸರತ್ತು ಬೇಡದ ಕಿತ್ತಾಟಕ್ಕೂ ದಾರಿಯಾಗಲಿದೆ. ಈ ಮಧ್ಯೆ ರಾಜ್ಯದ ಸಾಕ್ಷಿಪ್ರಜ್ಞೆಯಂತಿರುವ ಸಾಹಿತಿ ದೇವನೂರು ಮಹಾದೇವ ಅವರು ಮುಖ್ಯ ಮಂತ್ರಿಗಳಿಗೆ ಬಹಿರಂಗ ಪತ್ರ ಬರೆದು ವರದಿಯನ್ನು ಯಥಾವತ್ತಾಗಿ ಅನುಷ್ಠಾನಕ್ಕೆ ತರಲು ಕೋರಿರುವುದು ಶ್ಲಾಘನೀಯ ವಿಚಾರ.
ಮುಕ್ತ ಅನುಸಂಧಾನದಡಿ ಎ, ಬಿ ಮತ್ತು ಸಿ ಗುಂಪುಗಳ ಒಂದಷ್ಟು ಉಪಜಾತಿಗಳನ್ನು ಅದಲುಬದಲು ಮಾಡಿ, ಆಯೋಗದ ಶಿಫಾರಸನ್ನು ಅನುಷ್ಠಾನಕ್ಕೆ ಸರಕಾರ ಸಮ್ಮತಿಸಿದರೆ ಒಳಿತು. ಈ ಮೂಲಕ ದೀರ್ಘಕಾಲ ಮೀಸಲಾತಿ ಹೋರಾಟಕ್ಕೆ ಶಾಶ್ವತ ಪೂರ್ಣವಿರಾಮವಿಟ್ಟು, ಈ ಸಮುದಾಯಗಳ ಮಾನವ ಸಂಪನ್ಮೂಲ ಅವರವರ ಸ್ವಕುಟುಂಬಗಳ ಸೌಖ್ಯಕ್ಕೆ ಲಭಿಸುವುದರ ಜೊತೆ ಅವರ ಸಮಗ್ರ ದುಡಿಮೆ ನಾಡಿನ ಅಭಿವೃದ್ಧಿಗೆ ಸೇರಿಸಲು ಅವಕಾಶವಾದೀತು.







