ಎಸ್ಐಆರ್ ಪ್ರೊಜನಿ ಮ್ಯಾಪಿಂಗ್ನ ‘ಸಂಬಂಧ’ ಕಾಲಂ ಗೊಂದಲ

ಸಾಂದರ್ಭಿಕ ಚಿತ್ರ | Photo credit : PTI
ಕಲಬುರಗಿ : ದೇಶಾದ್ಯಂತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (Special Intensive Revision-SIR) ಪ್ರಕ್ರಿಯೆಯಲ್ಲಿ ಬಳಸಲಾಗುತ್ತಿರುವ ಗಣತಿ (Enumeration) ನಮೂನೆಯ 2002ರ ಮತದಾರರ ಪಟ್ಟಿಯ ಪ್ರೊಜನಿ ಮ್ಯಾಪಿಂಗ್ (Progeny Mapping) ವಿಭಾಗದಲ್ಲಿರುವ ‘ಸಂಬಂಧ’ (Relationship) ಕಾಲಂ ಭರ್ತಿ ಮಾಡುವ ವಿಧಾನ ಕುರಿತು ರಾಜ್ಯಾದ್ಯಂತ ಗೊಂದಲ ಉಂಟಾಗಿದ್ದು, ಈ ಬಗ್ಗೆ ಚುನಾವಣಾ ಆಯೋಗವು ತಕ್ಷಣ ಮಾಹಿತಿ ನೀಡಬೇಕು ಎಂಬ ಆಗ್ರಹ ವ್ಯಕ್ತವಾಗಿದೆ.
ಎಸ್ಐಆರ್ ಗಣತಿ ನಮೂನೆಯಲ್ಲಿ 2002ರ ಮತದಾರರ ಪಟ್ಟಿಯಲ್ಲಿರುವ ಸಂಬಂಧಿಯೊಂದಿಗೆ ಪ್ರೊಜನಿ ಮ್ಯಾಪಿಂಗ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ಇದರಲ್ಲಿ ತಂದೆ, ತಾಯಿ, ತಾತ ಅಥವಾ ಅಜ್ಜಿಯ ವಿವರಗಳನ್ನು ಉಲ್ಲೇಖಿಸಬಹುದಾಗಿದೆ. ನಮೂನೆಯಲ್ಲಿ ಹೆಸರು, ಮತದಾರರ ಗುರುತಿನ ಚೀಟಿ (EPIC) ಸಂಖ್ಯೆ (ಲಭ್ಯವಿದ್ದರೆ), ಸಂಬಂಧಿಯ ಹೆಸರು, ‘ಸಂಬಂಧ’, ಜಿಲ್ಲೆ, ರಾಜ್ಯ, ವಿಧಾನಸಭಾ ಕ್ಷೇತ್ರ, ಭಾಗ ಸಂಖ್ಯೆ ಹಾಗೂ ಕ್ರಮ ಸಂಖ್ಯೆ ಸೇರಿದಂತೆ ವಿವಿಧ ವಿವರಗಳನ್ನು ಭರ್ತಿ ಮಾಡಬೇಕಿದೆ.
ಆದರೆ ‘ಸಂಬಂಧ’ ಕಾಲಂನಲ್ಲಿ ಏನು ನಮೂದಿಸಬೇಕು ಎಂಬುದರ ಬಗ್ಗೆ ಮತದಾರರು ಹಾಗೂ ಬಿಎಲ್ಒಗಳಲ್ಲಿ ಗೊಂದಲ ಮನೆಮಾಡಿದೆ. ಉದಾಹರಣೆಗೆ, ತಾಯಿಯೊಂದಿಗೆ ಪ್ರೊಜನಿ ಮ್ಯಾಪಿಂಗ್ ಮಾಡುವ ಸಂದರ್ಭದಲ್ಲಿ ‘ತಾಯಿ’ ಎಂದು ಬರೆಯಬೇಕೇ ಅಥವಾ 2002ರ ಮತದಾರರ ಪಟ್ಟಿಯಲ್ಲಿ ತಾಯಿಯ ಹೆಸರಿನ ಮುಂದೆ ಪತಿಯ ಹೆಸರು ದಾಖಲಾಗಿರುವ ಕಾರಣ ‘ಗಂಡ’ ಎಂದು ನಮೂದಿಸಬೇಕೇ ಎಂಬ ಪ್ರಶ್ನೆ ಉದ್ಭವಿಸಿದೆ. ಇದೇ ರೀತಿಯ ಗೊಂದಲ ತಾತ ಅಥವಾ ಅಜ್ಜಿಯೊಂದಿಗೆ ಮ್ಯಾಪಿಂಗ್ ಮಾಡುವ ಸಂದರ್ಭದಲ್ಲಿಯೂ ಕಂಡುಬರುತ್ತಿದೆ.
ಈ ಗೊಂದಲದಿಂದ ತಪ್ಪು ಮಾಹಿತಿ ದಾಖಲಾಗುವ ಸಾಧ್ಯತೆ ಇರುವುದಲ್ಲದೆ, ಭವಿಷ್ಯದಲ್ಲಿ ಮತದಾರರ ಪಟ್ಟಿಯಿಂದ ಹೆಸರು ಕೈಬಿಡುವುದು ಅಥವಾ ನೋಟಿಸ್ಗಳನ್ನು ಎದುರಿಸಬೇಕಾಗುವ ಆತಂಕವೂ ಮತದಾರರಲ್ಲಿ ವ್ಯಕ್ತವಾಗುತ್ತಿದೆ.
ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ವ್ಯಕ್ತಿಗಳು ಹಾಗೂ ಸಂಘಟನೆಗಳು ತಮ್ಮದೇ ರೀತಿಯ ಎಸ್ಐಆರ್ ನಮೂನೆ ಭರ್ತಿ ಮಾಡುವ ಮಾದರಿ ವೀಡಿಯೊಗಳು ಮತ್ತು ನಮೂನೆಗಳನ್ನು ಹಂಚಿಕೊಳ್ಳುತ್ತಿದ್ದು, ವಿಶೇಷವಾಗಿ, ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಕಚೇರಿ ಇದುವರೆಗೆ ಅಧಿಕೃತ ಮಾದರಿ ನಮೂನೆ ಅಥವಾ ವಿವರಣಾತ್ಮಕ ವೀಡಿಯೊ ಮಾರ್ಗದರ್ಶಿಯನ್ನು ಪ್ರಕಟಿಸದಿರುವುದು ಗೊಂದಲಕ್ಕೆ ಪ್ರಮುಖ ಕಾರಣವಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಮತದಾರರ ಪಟ್ಟಿಯ ನಿಖರತೆ ಹಾಗೂ ಪಾರದರ್ಶಕತೆಯನ್ನು ಕಾಪಾಡಲು ರಾಜ್ಯಾದ್ಯಂತ ಏಕರೂಪದ ಮಾರ್ಗಸೂಚಿ ಜಾರಿಯಾಗುವುದು ಅಗತ್ಯವಾಗಿದೆ. ಆದ್ದರಿಂದ ‘ಸಂಬಂಧ’ ಕಾಲಂ ಅನ್ನು ಯಾವ ಆಧಾರದ ಮೇಲೆ ಭರ್ತಿ ಮಾಡಬೇಕು ಎಂಬುದರ ಕುರಿತು ಚುನಾವಣಾ ಆಯೋಗವು ತಕ್ಷಣ ಅಧಿಕೃತ ಸುತ್ತೋಲೆ, ಮಾದರಿ ಭರ್ತಿ ನಮೂನೆ ಹಾಗೂ ವಿವರಣಾತ್ಮಕ ವೀಡಿಯೊವನ್ನು ಬಿಡುಗಡೆ ಮಾಡಿ ಗೊಂದಲ ನಿವಾರಿಸಬೇಕು ಎಂದು ಸಾರ್ವಜನಿಕರು ಮತ್ತು ವಿವಿಧ ಸಂಘಟನೆಗಳು ಆಗ್ರಹಿಸಿವೆ.
ಪ್ರೊಜನಿ (Relatives Details) ಕಾಲಂನಲ್ಲಿರುವ ‘ಸಂಬಂಧ’ ವಿವರವನ್ನು ಹೇಗೆ ಭರ್ತಿ ಮಾಡಬೇಕು ಎಂಬ ಬಗ್ಗೆ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗಿದೆ. ತೆಲಂಗಾಣದಲ್ಲಿ ಪ್ರಸ್ತುತ ಮತದಾರರಿಗೆ ಪ್ರೊಜನಿಯೊಂದಿಗೆ ಇರುವ ಸಂಬಂಧವನ್ನು ದಾಖಲಿಸಲಾಗುತ್ತಿದೆ. ಆದರೆ ಕರ್ನಾಟಕದಲ್ಲಿ 2002ರ ಮತದಾರರ ಪಟ್ಟಿಯಲ್ಲಿರುವ ವ್ಯಕ್ತಿಗೆ ಇರುವ ಸಂಬಂಧವನ್ನು ನಮೂದಿಸುವಂತೆ ಸೂಚಿಸಲಾಗುತ್ತಿದೆ. ಈ ಪರಸ್ಪರ ಭಿನ್ನವಾದ ಕ್ರಮದಿಂದ ಮತದಾರರಿಗೆ ಗೊಂದಲ ಉಂಟಾಗಿದೆ. ಆದ್ದರಿಂದ, ‘ಸಂಬಂಧ’ ಕಾಲಂ ಯಾವ ಆಧಾರದ ಮೇಲೆ ಭರ್ತಿ ಮಾಡಬೇಕು ಎಂಬುದನ್ನು ಉದಾಹರಣೆ ಸಹಿತ ಅಧಿಕೃತವಾಗಿ ಸ್ಪಷ್ಟಪಡಿಸಬೇಕು. ಯಾವುದೇ ಮತದಾರರು ಗೊಂದಲ ಅಥವಾ ತಾಂತ್ರಿಕ ತಪ್ಪಿನಿಂದ ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ರಾಜ್ಯ ಮುಖ್ಯ ಚುನಾವಣಾಧಿಕಾರಿ, ಪ್ರಾದೇಶಿಕ ಆಯುಕ್ತ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು.
-ಮುಹಮ್ಮದ್ ರಿಯಾಝ್ ಖತೀಬ್, ಮಾನವ ಹಕ್ಕುಗಳ ಹೋರಾಟಗಾರ






