ಬಿಸಿಲನಾಡಿನಲ್ಲಿ ಎಗ್ಗಿಲ್ಲದೆ ಬೆಳೆದ ಕೋನೊಕಾರ್ಪಸ್

ಬಿಸಿಲ ನಾಡು ರಾಯಚೂರನ್ನು ಹಸಿರು ನಗರವನ್ನಾಗಿ ಮಾಡುವ ಸಂಘ ಸಂಸ್ಥೆಗಳು, ಅನೇಕ ಪರಿಸರ ಪ್ರೇಮಿಗಳು ಗಿಡಗಳನ್ನು ಹಾಕಿ ಪೋಷಣೆ ಮಾಡುತ್ತಿದ್ದರೆ, ಪಾಲಿಕೆ ಮಾತ್ರ ತನಗರಿವಿಲ್ಲದೆ ಪರಿಸರ ಸಂರಕ್ಷಣೆಯ ಹೆಸರಿನಲ್ಲಿ ಕೋನೋಕಾರ್ಪಸ್ ಗಿಡಗಳನ್ನು ಪೋಷಣೆ ಮಾಡಲು ಹೊರಟಿದ್ದು ಅನೇಕರ ಕೆಂಗಣ್ಣಿಗೆ ಗುರಿಯಾಗಿದೆ.
ಹೌದು, ಗಿಡಮರಗಳನ್ನು ಬೆಳೆಸಿ, ಪರಿಸರ ಸಂರಕ್ಷಣೆ ಮಾಡುವುದು ಎಲ್ಲರ ಜವಾಬ್ದಾರಿ. ಆದರೆ ಗಿಡ ಮರಗಳು ಹಾನಿಯನ್ನೂ ಉಂಟು ಮಾಡುತ್ತವೆ.ಅಂತಹ ಸಾಲಿನಲ್ಲಿ ಕೊನೊಕಾರ್ಪಸ್ ಗಿಡಗಳು ಒಂದಾಗಿವೆ. ಕೊನೊಕಾರ್ಪಸ್ ಮರಗಳು (ದುಬೈ ಗಿಡ) ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತವೆ ಮತ್ತು ಇತರ ಗಿಡ ಮರಗಳಿಗೆ ಹಾನಿಕಾರಕ ಎಂದು ತೆಲಂಗಾಣ, ಗುಜರಾತ್ ಹಾಗೂ ಕರ್ನಾಟಕ ರಾಜ್ಯದ ಯಾದಗಿರಿಯಲ್ಲಿ ನಿಷೇಧಿಸಲಾಗಿದೆ.
ನೀರಿಲ್ಲದೆ ಬೆಳೆಯುವ ಕೊನೊಕಾರ್ಪಸ್ ಮರಗಳು ಸುಂದರವಾಗಿ ಕಾಣುವುದರಿಂದ ಇವುಗಳನ್ನು ರಾಯಚೂರಿನ ಲಿಂಗಸುಗೂರು, ಮಂತ್ರಾಲಯ ರಸ್ತೆಯ ಮಧ್ಯದ ವಿಭಜಕದಲ್ಲಿ ಬೆಳೆಸಲಾಗಿದೆ. ಈ ಹಿಂದೆ ನಗರಸಭೆ ಇದ್ದಾಗ ಪ್ರತಿ ದಿನ ಡಿವೈಡರ್ ಮಧ್ಯೆ ಅನೇಕ ಬಗೆಯ ಅಲಂಕಾರಿಕ ಸಸಿಗಳನ್ನು ನೆಟ್ಟು ಪ್ರತಿನಿತ್ಯ ಟ್ಯಾಂಕರ್ ಮೂಲಕ ನೀರುಣಿಸಿ ಪೋಷಣೆ ಮಾಡಲಾಗುತ್ತಿತ್ತು. ಆದರೆ ಈಗ ಅದೇ ಜಾಗದಲ್ಲಿ ಕೋನೊಕಾರ್ಪಸ್ ಮರಗಳು ಬಹಳ ಎತ್ತರಕ್ಕೆ ಬೆಳೆದಿವೆ.
ಬೇರುಗಳನ್ನು ತುಂಬಾ ಆಳಕ್ಕಿಳಿಸುವ ಈ ಮರಗಳು ಹೆಚ್ಚಿನ ಪ್ರಮಾಣದಲ್ಲಿ ಅಂತರ್ಜಲವನ್ನು ಹೀರಿಕೊಳ್ಳುವುದರಿಂದ ಅಂತರ್ಜಲದ ಮಟ್ಟ ಕುಸಿಯುತ್ತದೆ. ಈ ಮರಗಳು ಕಠಿಣ ಪರಿಸ್ಥಿತಿಗಳಲ್ಲಿಯೂ ಬೆಳೆಯುತ್ತವೆ ಮತ್ತು ವರ್ಷವಿಡೀ ಹಸಿರಾಗಿರುತ್ತವೆ. ಇವು ನಗರ ಪ್ರದೇಶಗಳಲ್ಲಿ ವಾಯು ಮಾಲಿನ್ಯ ನಿಯಂತ್ರಿಸಲು ಮತ್ತು ಮರುಭೂಮಿಯಲ್ಲಿ ಮರಳಿನ ಬಿರುಗಾಳಿ ತಡೆಯಲು ಸಹಾಯ ಮಾಡುತ್ತವೆ ಎಂದು ವರದಿಗಳು ತಿಳಿಸಿವೆ.
ಪರಿಸರವಾದಿಗಳ ಪ್ರಕಾರ ಗುಜರಾತಿನ ಕರಾವಳಿ ಮತ್ತು ಕಛ್‌ನಂತಹ ಶುಷ್ಕ ಜಿಲ್ಲೆಗಳಲ್ಲಿ ಈ ಮರಗಳು ವ್ಯಾಪಕವಾಗಿ ಬೆಳೆದಿವೆ. ಈ ಮರವು ವರ್ಷವಿಡೀ ಕಡು ಹಸಿರು ಎಲೆಗಳಿಗೆ ಹೆಸರುವಾಸಿಯಾಗಿದೆ. ಎಂತಹ ಕಠಿಣ ವಾತಾವರಣವನ್ನೂ ಇವು ತಡೆದುಕೊಳ್ಳುತ್ತವೆ. ಇವು ತೀವ್ರ ಲವಣಾಂಶವಿರುವ ಪ್ರದೇಶಗಳಲ್ಲಿಯೂ ಬೆಳೆಯಬಲ್ಲದು.
ಹಸಿರೀಕರಣದ ಹೆಸರಿನಲ್ಲಿ ಎಡವಟ್ಟು: ಬಿಸಿಲನಾಡು ಎಂಬ ಅಪಖ್ಯಾತಿಗೆ ಗುರಿಯಾದ ರಾಯಚೂರು ಜಿಲ್ಲೆಯಲ್ಲಿ ಬೇಸಿಗೆಯ ವೇಳೆ ತಾಪಮಾನ 40ರಿಂದ 45 ಡಿಗ್ರಿವರೆಗೆ ದಾಖಲಾದ ಇತಿಹಾಸ ಇದೆ. ಹೀಗಾಗಿ ಕೆಲ ವರ್ಷಗಳಿಂದ ಗ್ರೀನ್ ರಾಯಚೂರು, ಸೂರ್ಯೋದಯ ವಾಕಿಂಗ್ ಕ್ಲಬ್, ವನಸಿರಿ ಫೌಂಡೇಶನ್, ರಾಯಚೂರು ಹಸಿರುಬಳಗ ಎಂಬ ಸಂಘ ಸಂಸ್ಥೆಗಳು, ಈರಣ್ಣ ಕೋಸಗಿ ಎಂಬವರು ಸಸಿಗಳನ್ನು ನೆಟ್ಟು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ್ದಾರೆ. ಆದರೆ ಇವೆಲ್ಲದರ ನಡುವೆ ಕೋನೊಕಾರ್ಪಸ್ ಗಿಡಗಳನ್ನು ಬೆಳೆಸಲು ಪಾಲಿಕೆ ಮುಂದಾಗಿರುವುದು ಅಪಾಯಕಾರಿ ಬೆಳವಣಿಗೆ ಎಂಬ ಆರೋಪ ಕೇಳಿ ಬಂದಿದೆ.
ಜಿಲ್ಲೆಯಲ್ಲಿ ಪರಿಸರದ ಬಗ್ಗೆ ಕಾಳಜಿ ಮೂಡಿಸುತ್ತಿರುವ ಅನೇಕ ಸಂಘ ಸಂಸ್ಥೆಗಳು ತಮ್ಮದೇ ಆದ ಪರಿಶ್ರಮ ವಹಿಸಿ ರಾಯಚೂರನ್ನು ಸ್ವಚ್ಛ ಹಸಿರುನಗರವನ್ನಾಗಿ ಮಾಡಲು ಪಣ ತೊಟ್ಟಿದ್ದಾರೆ. ಆದರೆ ಮಾನವ ವಿರೋಧಿಯಾಗಿರುವ ಕೊನೊಕಾರ್ಪಸ್ ಗಿಡಗಳನ್ನು ಎಲ್ಲೆಡೆ ಬೆಳೆಸಿದ್ದು ಆಶ್ಚರ್ಯವಾಗಿದೆ.
ದುಬೈ ಗಿಡ ಅಂತಲೂ ಕರೆಯಲ್ಪಡವ ಈ ಸಸ್ಯ, ಅಂತರ್ಜಲ ಮಟ್ಟ ಕುಸಿತಕ್ಕೆ ಕಾರಣವಾಗುವುದಲ್ಲದೆ, ಮನುಷ್ಯರಿಗೆ ಆಸ್ತಮಾ, ಉಸಿರಾಟದ ಸಮಸ್ಯೆಗಳನ್ನು ತಂದಿಡುತ್ತದೆ ಅನ್ನುವುದು ವರದಿಗಳಲ್ಲಿ ಬಹಿರಂಗವಾಗಿದೆ. ಕಡಿಮೆ ನೀರಿನಲ್ಲಿ ಹಚ್ಚ ಹಸಿರಾಗಿ ಕಂಗೊಳಿಸುವ ಈ ಗಿಡದ ನಿರ್ವಹಣೆ ಕೂಡ ಸುಲಭವಾಗಿರುವುದರಿಂದ ಪಾಲಿಕೆ ಇದನ್ನು ನೆಟ್ಟು ಪೋಷಿಸುತ್ತಿರುವುದು ಸರಿಯಲ್ಲ, ಕೂಡಲೇ ಇದನ್ನು ತೆರವುಗೊಳಿಸಬೇಕು.
- ಸುರೇಶ್ ಜಾನೆಕಲ್ ಸಾಮಾಜಿಕ ಕಾರ್ಯಕರ್ತರು, ರಾಯಚೂರು
ಆರೋಗ್ಯ ಸಮಸ್ಯೆ:
ಈ ಮರದ ಬೇರುಗಳು ಆಳಕ್ಕೆ ಹೋಗಿ ಸಂವಹನ ಕೇಬಲ್‌ಗಳು, ಒಳಚರಂಡಿ ಮತ್ತು ಕುಡಿಯುವ ನೀರಿನ ಪೈಪ್‌ಗಳನ್ನು ಹಾನಿಗೊಳಿಸುತ್ತವೆ ಎಂಬ ದೂರುಗಳು ಕೇಳಿಬಂದಿವೆ. ಈ ಮರಗಳು ಹೂಬಿಡುವ ಋತುಗಳಲ್ಲಿ ಪರಾಗವನ್ನು ಬಿಡುಗಡೆ ಮಾಡುತ್ತವೆ. ಇದು ಅಸ್ತಮಾ, ರಿನಿಟಿಸ್ ಮತ್ತು ಇತರ ಅಲರ್ಜಿಯ ಪ್ರತಿಕ್ರಿಯೆಗಳಂತಹ ಉಸಿರಾಟದ ಪರಿಸ್ಥಿತಿಗಳನ್ನು ಉಲ್ಬಣಗೊಳಿಸಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ನಗರದ ಹಲವೆಡೆ ಬೆಳೆಸಿರುವ ಕೋನೊಕಾರ್ಪಸ್ ಗಿಡಗಳ ಬೆಳವಣಿಗೆಗೆ ನಿಯಂತ್ರಣ ಹಾಕಬೇಕು. ಸರಕಾರ ನೇಮಿಸಿದ ಪರಿಸರ ತಜ್ಞರ ಸಮಿತಿಯು, ಕೊನೊಕಾರ್ಪಸ್ ಮರದ ಪ್ರಭೇದವನ್ನು ನಿಷೇಧಿಸಲು ಸುಪ್ರೀಂ ಕೋರ್ಟ್‌ಗೆ ಶಿಫಾರಸು ಮಾಡಿದ್ದು ಇಲ್ಲಿ ಗಮನಿಸಬೇಕು. ಈ ಭಾಗದ ಜನರ ಆರೋಗ್ಯದ ವಿಚಾರದಲ್ಲಿ ಚೆಲ್ಲಾಟವಾಡದೆ ಪಾಲಿಕೆ ಇವುಗಳನ್ನು ತೆರವುಗೊಳಿಸಿ ಪರಿಸರ ಸ್ನೇಹಿ ಗಿಡಗಳನ್ನು ಬೆಳೆಸಬೇಕು.
-ರಾಜೇಂದ್ರ ಶಿವಾಳೆ ‘ಗ್ರೀನ್ ರಾಯಚೂರು’ ಸಂಸ್ಥೆಯ ಸಹ ಸಂಚಾಲಕ
ವಿವಿಧೆಡೆ ನಿಷೇಧ:
ತೆಲಂಗಾಣ, ಗುಜರಾತ್ ಹಾಗೂ ಕರ್ನಾಟಕದ ಯಾದಗಿರಿಗಳಲ್ಲಿ ಈ ಮರಗಳನ್ನು ನಿಷೇಧಿಸಲಾಗಿದೆ. ಬೆಂಗಳೂರು ಸೇರಿದಂತೆ ಹಲವೆಡೆ ಹಾಕಿದ ಗಿಡಗಳನ್ನು ಕಿತ್ತುಹಾಕಲಾಗುತ್ತಿದೆ. ಆದರೆ ರಾಯಚೂರಿನಲ್ಲಿ ಮಾತ್ರ ಇವುಗಳ ಸಂಖ್ಯೆ ಹೆಚ್ಚಾಗುತ್ತಿರುವುದು ದುರ್ದೈವದ ಸಂಗತಿ.







