ಕುಂದಾಪುರ, ಸಿದ್ದಾಪುರಗಳಲ್ಲಿ ಸತತ ಅಗ್ನಿ ದುರಂತಗಳು | ನಗರದಲ್ಲಿ ಅಗ್ನಿಶಾಮಕ ವಾಹನಗಳ ಅಗತ್ಯ: ಚರ್ಚೆ ಮುನ್ನೆಲೆಗೆ

ಕುಂದಾಪುರ : ಒಂದು ವಾರದಲ್ಲಿ ಕುಂದಾಪುರ ಮತ್ತು ಸಿದ್ದಾಪುರಗಳಲ್ಲಿ ಸಂಭವಿಸಿದ ಎರಡು ಭೀಕರ ಅಗ್ನಿ ದುರಂತಗಳಲ್ಲಿ ಕೋಟ್ಯಂತರ ರೂ. ಮೌಲ್ಯದ ಸೊತ್ತುಗಳು ಸುಟ್ಟು ಬೂದಿಯಾದ ಬಳಿಕ ಇಂಥ ಆಕಸ್ಮಿಕ ಅಗ್ನಿ ಅವಘಡಗಳ ಸಂದರ್ಭದಲ್ಲಿ ತ್ವರಿತಗತಿಯಲ್ಲಿ ಹಾಗೂ ಸುಲಭದಲ್ಲಿ ಲಭ್ಯವಾಗಬೇಕಿರುವ ಅಗ್ನಿ ಶಾಮಕ ವಾಹನಗಳ ಕುರಿತ ಚರ್ಚೆಗಳು ಮತ್ತೆ ಮುನ್ನೆಲೆಗೆ ಬಂದಿವೆ.
ಪ್ರಸಕ್ತ ಕುಂದಾಪುರದ ಅಗ್ನಿಶಾಮಕ ದಳ ಕಚೇರಿ ನಗರದ ಹೊರವಲಯ ವಾದ ಕೋಣೆಯಲ್ಲಿದ್ದು ಆಕಸ್ಮಿಕ ಅಗ್ನಿ ಅವಘಡಗಳ ಸಂದರ್ಭಗಳಲ್ಲಿ ತುರ್ತು ಸೇವೆಗೆ ಅನುಕೂಲವಾಗಲು ಕುಂದಾಪುರ ನಗರ ಕೇಂದ್ರದಲ್ಲಿ ಅಗ್ನಿ ಶಾಮಕ ವಾಹನ ನಿಲ್ಲಲು ವ್ಯವಸ್ಥೆ ಮಾಡಿಕೊಡಬೇಕೆಂಬ ಆಗ್ರಹ ಸಾರ್ವಜನಿಕ ವಲಯದಲ್ಲಿ ಮುಂಚೂಣಿಗೆ ಬಂದಿದೆ.
ಡಿ.29ರ ಬೆಳಗಿನ ಜಾವ ಕುಂದಾಪುರದ ಕೇಂದ್ರವಾದ ರಥಬೀದಿಯಲ್ಲಿ ನಡೆದ ಬಾರೀ ಅಗ್ನಿ ಅನಾಹುತ ನಾಲ್ಕಾರು ಅಂಗಡಿಗಳನ್ನು ಸುಟ್ಟು ಭಸ್ಮ ಮಾಡಿದ್ದಲ್ಲದೆ, ಕೋಟ್ಯಂತರ ರೂ.ಗಳ ಹಾನಿ ಸಂಭವಿಸಿದೆ. 20 ವರ್ಷಗಳಲ್ಲಿ ಇಂತಹ ಘೋರ ದುರಂತ ಕಂಡಿಲ್ಲ ಎಂಬುದು ನಗರದ ಹಳೆ ತಲೆಮಾರಿನ ಹಲವರ ಅಭಿಪ್ರಾಯವಾಗಿದೆ.
ಇದಾದ ಎರಡು ದಿನಗಳ ಬಳಿಕ ಸಿದ್ದಾಪುರದ ಜನ್ಸಾಲೆಯ ತೆಂಗಿನ ಎಣ್ಣೆಮಿಲ್ ನಲ್ಲಿ ಕಾಣಿಸಿಕೊಂಡ ಬೆಂಕಿಗೆ ಇಡೀ ಮಿಲ್ ಸುಟ್ಟು ಹೋಗಿದ್ದು, ಐದು ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ಸೊತ್ತುಗಳಿಗೆ ಹಾನಿಯಾಗಿರುವ ಮಾಹಿತಿ ಇದೆ. ಇದಲ್ಲದೆ ಕೆಲ ದಿನಗಳ ಹಿಂದೆ ಕೋಟೇಶ್ವರ ಗ್ರಾಪಂ ಬಳಿ ಎಸ್ ಎಲ್‌ಆರ್‌ಎಂ ಘಟಕದಲ್ಲೂ ಇದೇ ರೀತಿ ಬೆಂಕಿ ಅವಘಡ ಸಂಭವಿಸಿತ್ತು.
ಕಳೆದ ವರ್ಷ ಗಂಗೊಳ್ಳಿಯಲ್ಲಿ ಬೋಟ್ ಅಗ್ನಿ ದುರಂತ, ಒಂದಷ್ಟು ವರ್ಷಗಳ ಹಿಂದೆ ಕುಂದಾಪುರ ನಗರದೊಳಗೆ ಮುಖ್ಯರಸ್ತೆಯಲ್ಲಿದ್ದ ಬೃಹತ್ ವಾಣಿಜ್ಯ ಮಳಿಗೆಗೆ ಬಿದ್ದ ಬೆಂಕಿ ಅನಾಹುತಗಳು ದೊಡ್ಡ ಮಟ್ಟದಲ್ಲಿ ದುರಂತವನ್ನು ಸೃಷ್ಟಿಸಿ ಅಪಾರ ನಷ್ಟಕ್ಕೆ ಕಾರಣವಾಗಿದ್ದವು. ಆಗ್ಗಾಗೆ ನದಿ-ಸಮುದ್ರಗಳಲ್ಲಿ ನಡೆಯುವ ದೋಣಿ ದುರಂತ, ಮಾನವ ಜೀವ ಹಾನಿ ಮೊದಲಾದ ಅವಘಡಗಳ ವೇಳೆ ಆ ಸಮಯಕ್ಕೆ ಅಗತ್ಯವಾಗಿ ಬೇಕಾದ ಅಗ್ನಿಶಾಮಕ ವಾಹನಗಳು ಮತ್ತು ಸಿಬ್ಬಂದಿ ಅಲಭ್ಯತೆ ಹಲವಷ್ಟು ಸಮಸ್ಯೆಗಳಿಗೆ ಎಡೆಮಾಡಿಕೊಡುತ್ತಿವೆ.
ನಗರದಿಂದ ಬಹುದೂರ!
ಪ್ರಸಕ್ತ ಕುಂದಾಪುರದ ಅಗ್ನಿ ಶಾಮಕ ಠಾಣೆಯಿರುವುದು ಕುಂದಾಪುರ ಪೇಟೆಯಿಂದ ನಾಲ್ಕಾರು ಕಿ.ಮೀ. ದೂರದ ಕೋಣಿ ಎಂಬಲ್ಲಿ ಇಲ್ಲಿಂದ ಮುಖ್ಯ ರಸ್ತೆ ಹಾಗೂ ರಾಷ್ಟ್ರೀಯ ಹೆದ್ದಾರಿ ಸಂಪರ್ಕಕ್ಕೆ ಇಕ್ಕಟ್ಟಾದ ಹಾಗೂ ಜನನಿಬಿಡ, ವಾಹನ ನಿಬಿಡ ರಸ್ತೆ ಅಡ್ಡಿ ಯಾಗುತ್ತಿದೆ. ಕೋಣಿಯಿಂದ ಕಟ್ಕೆರೆ ಮೂಲಕ ಸಾಗಿ ಕೋಟೇಶ್ವರಕ್ಕೆ ಬರುವ ರಸ್ತೆ ಹೊಂಡಗುಂಡಿಗಳಿಂದ ಕೂಡಿದೆ.
ಠಾಣೆಯಿಂದ ಅನತಿ ದೂರದಲ್ಲಿರುವ ಕುಂದಾ ಪುರ- ಸಿದ್ದಾಪುರ ರಾಜ್ಯ ಹೆದ್ದಾರಿ ಕೂಡ ಹೆಸರಿಗೆ ಹೆದ್ದಾರಿಯಾಗಿದ್ದು, ಬಹಳಷ್ಟು ಒತ್ತಡದ ಹಾಗೂ ಇಕ್ಕಾಟದ ರಸ್ತೆಯಾಗಿದೆ. ಅಗ್ನಿಶಾಮಕ ವಾಹನ ಬರಲು ವಿಳಂಬವಾಗುವುದನ್ನು ತಪ್ಪಿಸಲು ನಗರ ವ್ಯಾಪ್ತಿಯಲ್ಲಿ ಒಂದಾದರೂ ವಾಹನ ತುರ್ತು ಅವಶ್ಯಕ್ಕೆ ದೊರೆತಲ್ಲಿ ಕೋಟೇಶ್ವರ ಕುಂದಾಪುರ ನಗರಗಳ ನಡುವೆ ಸಂಭವಿಸುವ ಅಗ್ನಿದುರಂತದ ತುರ್ತು ಶಮನಕ್ಕೆ ಅನುಕೂಲವಾಗಲಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ. ಈ ಬಗ್ಗೆ ಕಂದಾಯ ಇಲಾಖೆ ಹಾಗೂ ಪುರಸಭೆ ಅಧಿಕಾರಿಗಳಿಗೂ ಜನಪ್ರತಿನಿಧಿಗಳು ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.







