"ಪತ್ನಿಯ ಚಿಕಿತ್ಸೆಗೆ ಪಡೆದ ಸಾಲ ಇನ್ನೂ ತೀರಿಲ್ಲ": ಮೂಟೆ ಹೊತ್ತು ಬದುಕು ಸಾಗಿಸುತ್ತಿರುವ ಅಂಥೋನಿಯ ಅಳಲು
ಕೊರೋನ ಕರಾಳ ನೆನಪುಗಳ ಸರಣಿ-05

PC: istockphoto.com
ಬೆಂಗಳೂರು: ಕೊರೋನ ಸಂದರ್ಭದಲ್ಲಿ ಇತರ ಖಾಯಿಲೆಗಳಿಗೂ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೂ ಉಚಿತ ಔಷಧಿಗಳಿರಲಿಲ್ಲ. ಕೊರೋನ ಸಂದರ್ಭದಲ್ಲಿ ಮಾರುಕಟ್ಟೆಯಲ್ಲಿ ಮೂಟೆ ಹೊತ್ತು ಜೀವನ ನಡೆಸುತ್ತಿದ್ದ ಕೆ.ಆರ್.ಮಾರ್ಕೆಟ್ ಸಮೀಪದ ನಿವಾಸಿ ಅಂಥೋನಿ ಅವರು ತನ್ನ ಪತ್ನಿಯನ್ನು ಕಳೆದುಕೊಳ್ಳುತ್ತಾರೆ. ಅವರು ಅನುಭವಿಸಿದ ನೋವನ್ನು ‘ವಾರ್ತಾ ಭಾರತಿ’ಯೊಂದಿಗೆ ಹಂಚಿಕೊಂಡಿದ್ದು ಹೀಗೆ.
‘ಪತ್ನಿ ಶುಗರ್ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದರು. ಇದ್ದಕ್ಕಿದ್ದಂತೆ ಎದೆನೋವು ಶುರುವಾಗಿ ಕೆಲವೇ ದಿನಗಳಲ್ಲಿ ದೈಹಿಕವಾಗಿ ಕುಗ್ಗಿದರು. ಆರೋಗ್ಯ ಹದಗೆಟ್ಟು ಬೆಂಗಳೂರಿನ ಕೆಂಪೇಗೌಡ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿ ಸರಿಯಾದ ಚಿಕಿತ್ಸೆ ಸಿಗಲಿಲ್ಲ. ಅಲ್ಲಿಂದ ವಿಕ್ಟೋರಿಯಾ ಆಸ್ಪತ್ರೆಗೆ ಕರೆದುಕೊಂಡು ಹೋದೆ’ ಎನ್ನುತ್ತಾರೆ ಅಂಥೋನಿ.
5 ಕಿ.ಮೀ. ವ್ಯಾಪ್ತಿಗೆ ಆ್ಯಂಬುಲೆನ್ಸ್ಗೆ 3 ಸಾವಿರ ರೂ.!: ಕೆ.ಆರ್.ಮಾರ್ಕೆಟ್ನಲ್ಲಿ ತರಕಾರಿ ಮೂಟೆ ಹೊತ್ತು ಬಂದ ಹಣದಿಂದ ಜೀವನ ನಡೆಸುತ್ತಿದ್ದೆ. ಪತ್ನಿಗೆ ಸರಿಯಾದ ಚಿಕಿತ್ಸೆ ಸಿಗುತ್ತಿರಲಿಲ್ಲ. ಈ ನಡುವೆ ಬೇರೆ ಆಸ್ಪತ್ರೆಗೆ ದಾಖಲಿಸಲು ಆ್ಯಂಬುಲೆನ್ಸ್ ಗಳು ಕೂಡ ಸಿಗುತ್ತಿರಲಿಲ್ಲ. ಸಿಕ್ಕ ಆ್ಯಂಬುಲೆನ್ಸ್ಗೆ 5 ಕಿ.ಮೀ ದೂರದಲ್ಲಿದ್ದ ವಿಕ್ಟೋರಿಯಾ ಆಸ್ಪತ್ರೆಗೆ ಬರೊಬ್ಬರಿ 3 ಸಾವಿರ ರೂ. ಕೊಡಬೇಕಾಯಿತು ಎಂದು ಅಂಥೋನಿ ನೋವು ತೋಡಿಕೊಂಡಿದ್ದಾರೆ.
ಮಾತ್ರವಲ್ಲದೇ ಆಸ್ಪತ್ರೆಯಲ್ಲಿ ಬೆಡ್ ಸಿಗದೇ 5 ಗಂಟೆವರೆಗೂ ಪತ್ನಿಯನ್ನು ಆ್ಯಂಬುಲೆನ್ಸ್ನಲ್ಲಿ ಇಟ್ಟು ಕಾದೆವು. ಬಳಿಕ ರಾತ್ರಿ 8 ಗಂಟೆಯ ಹೊತ್ತಲ್ಲಿ ಆಸ್ಪತ್ರೆಯ ಒಳಗೆ ಚಿಕಿತ್ಸೆಗೆ ಕರೆದುಕೊಂಡು ಹೋಗಿ ಅಂದೇ ರಾತ್ರಿ 11 ಗಂಟೆ ಹೊತ್ತಿಗೆ ಪತ್ನಿ ಮೃತಪಟ್ಟಿರುವುದಾಗಿ ಆಸ್ಪತ್ರೆಯವರು ತಿಳಿಸಿದರು ಎಂದು ಅಂಥೋನಿ ಅಳಲು ತೋಡಿಕೊಳ್ಳುತ್ತಾರೆ
ಮೃತದೇಹ ಕೊಟ್ಟಿಲ್ಲ: ಪತ್ನಿ ಮೃತಪಟ್ಟ ಬಳಿಕ ಅಂತ್ಯಸಂಸ್ಕಾರಕ್ಕೆ ಪಾರ್ಥಿವ ಶರೀರವನ್ನು ನೀಡದೆ ನೇರವಾಗಿ ಬನಶಂಕರಿ ಬಳಿ ಇರುವ ಚಿತಾಗಾರಕ್ಕೆ ಆಸ್ಪತ್ರೆಯವರೇ ಕಳುಹಿಸಿದ್ದರು. ನಾನು ಮತ್ತು ನನ್ನ ಕುಟುಂಬದಿಂದ ಕೇವಲ 15 ಜನ ಮಾತ್ರ ಹೋಗಿ ಮುಖ ನೋಡಿ ಬಂದೆವು ಎಂದು ಹೇಳುತ್ತಾರೆ ಅಂಥೋನಿ.
ಸಾಲದ ಬಡ್ಡಿ ಇನ್ನೂ ಕಟ್ಟುತ್ತಿದ್ದೇನೆ
ಕೊರೋನದಿಂದ ನನ್ನ ಪತ್ನಿಯ ಜೀವ ಉಳಿಸಲಾಗಲಿಲ್ಲ. ಚಿಕಿತ್ಸೆಗೆ ಸುಮಾರು 2 ಲಕ್ಷ ರೂ. ಖರ್ಚಾಗಿದೆ. ಆಸ್ಪತ್ರೆಗೆ ನೀಡಲು ಹಣವನ್ನು ಬಡ್ಡಿಗೆ ಪಡೆದಿದ್ದೆ. ಇಂದಿಗೂ ಆ ಸಾಲದ ಬಡ್ಡಿ ಕಟ್ಟುತ್ತಿದ್ದೇನೆ. ಹಿಂದಿನ ಬಿಜೆಪಿ ಸರಕಾರದಿಂದ ಸರಿಯಾಗಿ ಪರಿಹಾರ ಧನ ಬಂದಿಲ್ಲ. ಈಗ ನನಗೆ ವಯಸ್ಸಾಗಿದೆ ಎಂದು ಯಾರೂ ಕೂಡ ಮಾರುಕಟ್ಟೆಯಲ್ಲಿ ಕೆಲಸ ಕೊಡುತ್ತಿಲ್ಲ ಎಂದು ತಾನು ಅನುಭವಿಸಿದ ಕಷ್ಟಗಳನ್ನು ತೆರೆದಿಟ್ಟಿದ್ದಾರೆ ಅಂಥೋನಿ.