ದೇಶದ ಷೇರು ಮಾರುಕಟ್ಟೆ ನಿರಂತರ ಕುಸಿತ: ಮಧ್ಯಮ ವರ್ಗದ ಕನಸುಗಳಿಗೆ ಕೊಳ್ಳಿ ಇಟ್ಟವರು ಯಾರು?

ದೇಶದ ಷೇರು ಮಾರುಕಟ್ಟೆ ನಿರಂತರ ಕುಸಿಯುತ್ತಿದೆ. ಐದಾರು ದಿನಗಳಲ್ಲಿ, ಮಾರುಕಟ್ಟೆಯಲ್ಲಿ 16 ಲಕ್ಷ ಕೋಟಿಗೂ ಹೆಚ್ಚು ಹೂಡಿಕೆದಾರರ ಹಣ ಭಸ್ಮವಾಗಿದೆ.
2023ರ ಆರಂಭದಿಂದ ಷೇರು ಮಾರುಕಟ್ಟೆ ಏರಲು ಪ್ರಾರಂಭಿಸಿತ್ತು. ನಡುವೆ ಆಘಾತಗಳು ಇದ್ದರೂ, ದೀರ್ಘ ಕಾಲದವರೆಗೆ ಮಾರುಕಟ್ಟೆಯಲ್ಲಿ ಏರುವ ಟ್ರೆಂಡ್ ಒಂದೇ ರೀತಿಯಲ್ಲಿತ್ತು. ಅದನ್ನು ನೋಡಿಯೇ ಹೆಚ್ಚಿನ ಸಂಖ್ಯೆಯ ಹೊಸ ಹೂಡಿಕೆದಾರರು ಮಾರುಕಟ್ಟೆಯ ಕಡೆಗೆ ಓಡಿದ್ದರು. ಅವರು ಅದರಲ್ಲಿ ಪ್ರಯೋಜನಗಳನ್ನು ಸಹ ನೋಡಿದರು.
ಆದರೆ ಈಗ ದೀರ್ಘಕಾಲದವರೆಗೆ ನಷ್ಟಗಳನ್ನು ನೋಡುವುದರಿಂದ ನಿರಾಳವಾಗಿರಲು ಸಾಧ್ಯವೇ ಇಲ್ಲ.
ಕಳೆದ ಸೆಪ್ಟಂಬರ್ ತಿಂಗಳಿನಿಂದ, ಮಾರುಕಟ್ಟೆ ಸಾಂದರ್ಭಿಕವಾಗಿ ಮಾತ್ರ ಏರುತ್ತಿತ್ತು. ಆರು ತಿಂಗಳ ಮಧ್ಯದಲ್ಲಿ ಅದು ಹೆಚ್ಚಾಗಿ ಇಳಿಯುತ್ತಲೇ ಇತ್ತು.
ಈ ಆರು ತಿಂಗಳಲ್ಲಿ ಫೆಬ್ರವರಿ 11ರಂದು ಭಾರತದ ಮಾರುಕಟ್ಟೆ 479 ಲಕ್ಷ ಕೋಟಿಗಳಿಂದ 409 ಲಕ್ಷ ಕೋಟಿಗಳಿಗೆ ಇಳಿಯಿತು. ಅಂದರೆ, ಹೂಡಿಕೆದಾರರು ರೂ. 70 ಲಕ್ಷ ಕೋಟಿಗಳಿಗಿಂತ ಹೆಚ್ಚು ಕಳೆದುಕೊಂಡರು.
ಫೆಬ್ರವರಿ 11 ಮತ್ತು 12ರಂದು ಷೇರು ಮಾರುಕಟ್ಟೆಯ ಬಣ್ಣವೆಲ್ಲಾ ಕೆಂಪಾಗಿ ಹೋಗಿತ್ತು.
ಪ್ರತಿಯೊಂದು ವಲಯದಲ್ಲೂ ಕುಸಿತ ಕಂಡಿತ್ತು,
ಆಟೊಮೊಬೈಲ್, ಲೋಹ, ಬ್ಯಾಂಕ್, ಔಷಧ, ರಿಯಲ್ ಎಸ್ಟೇಟ್, ಗ್ರಾಹಕ ಬಾಳಿಕೆ ಬರುವ ವಸ್ತುಗಳು, ಸಾರ್ವಜನಿಕ ವಲಯದ ಕಂಪೆನಿಗಳು, ಎಲ್ಲಾ ಷೇರುಗಳು ಗಾಢ ಕೆಂಪು ಬಣ್ಣದಲ್ಲಿ ಕಂಡುಬಂದವು. ಜನರು ದಲಾಲ್ ಬೀದಿಯನ್ನು ಕೆಂಪು ಬೀದಿ ಎಂದು ಕರೆಯಲು ಪ್ರಾರಂಭಿಸಿದ್ದಾರೆ. ಅವರ ಹಣ ಮುಳುಗಿ ಹೋಗಿದೆ.
ಭಾರತದ ಅಭಿವೃದ್ಧಿಯ ಕಥೆಯನ್ನು ಬರೆಯಬೇಕಿರುವ ಷೇರು ಮಾರುಕಟ್ಟೆ ಕಳೆದ 6 ತಿಂಗಳಿನಿಂದ ಕುಂಟುತ್ತಿದೆ. ಹಾಗಾದರೆ ಷೇರು ಮಾರುಕಟ್ಟೆಯ ಆದಾಯದ ಆಧಾರದ ಮೇಲೆ ಮಧ್ಯಮ ವರ್ಗ ನಿರ್ಮಿಸಿದ ಕನಸುಗಳಿಗೆ ಏನಾಗುತ್ತದೆ? ಮಾರುಕಟ್ಟೆ ಕುಸಿದಾಗ, ಮಧ್ಯಮ ವರ್ಗ ಈ ಕುಸಿತವನ್ನು ದೀರ್ಘಕಾಲದವರೆಗೆ ತಡೆದುಕೊಳ್ಳಲು ಸಾಧ್ಯವಾಗುತ್ತದೆಯೇ?
ಮಾರುಕಟ್ಟೆಯ ಕುಸಿತಕ್ಕೆ ಹಲವು ನೆಪಗಳಿವೆ. ಅದನ್ನು ಅರ್ಥಮಾಡಿಕೊಳ್ಳುವವನೂ ಗೊಂದಲಕ್ಕೊಳಗಾಗುತ್ತಾನೆ.
ಕೆಲವರು ವಿದೇಶಿ ಹೂಡಿಕೆದಾರರ ನೆಪವನ್ನು ಹೇಳುತ್ತಾರೆ. ದೇಶೀಯ ಹೂಡಿಕೆದಾರರ ನಷ್ಟಗಳ ಬಗ್ಗೆ ಕೇಳಿದಾಗ ಅವರು ಜಾರಿಕೊಳ್ಳುತ್ತಾರೆ. ಯಾರಿಂದ ಮತ್ತು ಯಾವಾಗ ಮಾರುಕಟ್ಟೆ ಕುಸಿಯುತ್ತಿದೆ ಎಂಬುದನ್ನು ಅವರಿಗೆ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ, ಆದರೆ ಕಳೆದ 6 ತಿಂಗಳುಗಳಿಂದ ಮಾರುಕಟ್ಟೆ ಕುಸಿಯುತ್ತಿದೆ. ಇದು ವಾಸ್ತವ.
ಈಗಿನ ಸ್ಥಿತಿಗೆ ಉಕ್ಕಿನ ಆಮದಿನ ಮೇಲೆ ಶೇ.25 ತೆರಿಗೆ ವಿಧಿಸುವ ಟ್ರಂಪ್ ಘೋಷಣೆಯೇ ಕಾರಣವೆಂದು ಉಲ್ಲೇಖಿಸಲಾಗುತ್ತಿದೆ. ಆದರೆ ಟ್ರಂಪ್ ಅವರ ತೆರಿಗೆ ಯೋಜನೆಯಿಂದಾಗಿ ಭಾರತೀಯ ಮಾರುಕಟ್ಟೆ ಕುಸಿಯುತ್ತಿದೆ ಎಂದು ಖಚಿತವಾಗಿ ಹೇಳಬಹುದೇ?
ಅಮೆರಿಕ ತನ್ನ ಹೆಚ್ಚಿನ ಉಕ್ಕನ್ನು ಕೆನಡಾ, ಮೆಕ್ಸಿಕೊ, ಬ್ರೆಝಿಲ್, ದಕ್ಷಿಣ ಕೊರಿಯ ಮತ್ತು ವಿಯೆಟ್ನಾಂನಿಂದ ಆಮದು ಮಾಡಿಕೊಳ್ಳುತ್ತದೆ. ಅಮೆರಿಕ ಭಾರತದಿಂದ ಬಹಳ ಕಡಿಮೆ ಉಕ್ಕನ್ನು ಆಮದು ಮಾಡಿಕೊಳ್ಳುತ್ತದೆ.
ಟ್ರಂಪ್ ಅವರ ತೆರಿಗೆ ಘೋಷಣೆ ಭಾರತೀಯ ಮಾರುಕಟ್ಟೆಯ ಮೇಲೆ ಪರಿಣಾಮ ಬೀರುವುದಿಲ್ಲ ಎಂದಲ್ಲ, ಆದರೆ ಭಾರತೀಯ ಮಾರುಕಟ್ಟೆ ಬಹಳ ಸಮಯದಿಂದ ಕುಸಿಯುತ್ತಿದೆ ಮತ್ತು ಟ್ರಂಪ್ ಕಾರಣವನ್ನು ಉತ್ಪ್ರೇಕ್ಷಿಸಲಾಗುತ್ತಿದೆಯೇ ಎಂಬ ಪ್ರಶ್ನೆಯೂ ಏಳುತ್ತದೆ.
ಷೇರು ಮಾರುಕಟ್ಟೆಯಲ್ಲಿ ಕುಸಿತ ಕಾಣದ ಯಾವುದೇ ವಲಯ ಉಳಿದಿಲ್ಲ. ಕಳೆದ ಆರು ತಿಂಗಳಿನಿಂದ ಮಾರುಕಟ್ಟೆಯಲ್ಲಿನ ಕುಸಿತ ಏನು ಹೇಳುತ್ತದೆ?
ಭಾರತೀಯ ರೂಪಾಯಿ ಕುಸಿಯುತ್ತಿದೆ.
ಬ್ಯುಸಿನೆಸ್ ಸ್ಟ್ಯಾಂಡರ್ಡ್‌ನ ವರದಿ ಪ್ರಕಾರ, ಆರ್‌ಬಿಐ 2 ದಿನಗಳಲ್ಲಿ 12 ಬಿಲಿಯನ್ ಡಾಲರ್‌ಗಳನ್ನು ಮಾರಾಟ ಮಾಡಿದೆ. ಹಾಗಾಗಿಯೇ ರೂಪಾಯಿ ಸ್ವಲ್ಪಮಟ್ಟಿಗೆ ಹಿಡಿದಿಟ್ಟುಕೊಳ್ಳಲು ಸಾಧ್ಯವಾಯಿತು ಎಂಬ ಸುದ್ದಿ ಇದೆ.
ರೂಪಾಯಿ 2 ವರ್ಷಗಳಲ್ಲಿ ಅತ್ಯಂತ ಪ್ರಬಲವಾದ ಚೇತರಿಕೆ ಕಂಡಿದೆ. ಅದು 86ಕ್ಕೆ ತಲುಪಿದೆ. ಆದರೆ ಡಾಲರ್‌ಗಳನ್ನು ಮಾರಾಟ ಮಾಡುವುದರಿಂದ ರೂಪಾಯಿಯನ್ನು ಎಷ್ಟು ಸಮಯದವರೆಗೆ ಉಳಿಸಲಾಗುತ್ತದೆ?
ಏಶ್ಯದಲ್ಲಿ ಕೇವಲ ಎರಡು ಕರೆನ್ಸಿಗಳ ಸ್ಥಿತಿ ಅತ್ಯಂತ ಕೆಟ್ಟದಾಗಿದೆ ಎಂದು ಹೇಳಲಾಗುತ್ತದೆ, ಇಂಡೋನೇಶ್ಯ ರೂಪಾಯಿ ಮತ್ತು ಭಾರತೀಯ ರೂಪಾಯಿ.
ಈ ಕುಸಿತವನ್ನು ಟ್ರಂಪ್‌ಗೆ ಲಿಂಕ್ ಮಾಡಲು ಸಾಧ್ಯವಿಲ್ಲ.
ಆರ್ಥಿಕತೆ ಹೊಳೆಯುತ್ತಿದೆ ಎಂದು ಜನರ ನಂಬಿಕೆ ಉಳಿಯುವಂತೆ ಭಾರತೀಯ ಷೇರು ಮಾರುಕಟ್ಟೆಯನ್ನು ಉದ್ದೇಶಪೂರ್ವಕವಾಗಿ ಹೆಚ್ಚಿಸಲಾಗಿದೆಯೇ?
ವಿದೇಶಿ ಹೂಡಿಕೆದಾರರು ಮಾರುಕಟ್ಟೆಯ ಈ ಸ್ಥಿತಿ ನೋಡಿ ತಮ್ಮ ಹಣವನ್ನು ಹೊರತೆಗೆಯಲು ಪ್ರಾರಂಭಿಸಿದ್ದಾರೆ.
ಭಾರತೀಯ ಆರ್ಥಿಕತೆಯಲ್ಲಿ ನಿಶ್ಚಲತೆಯ ಲಕ್ಷಣಗಳು ತಿಂಗಳುಗಳ ಹಿಂದೆಯೇ ಬರಲು ಪ್ರಾರಂಭಿಸಿದ್ದವು,
ಗ್ರಾಹಕ ಸರಕುಗಳ ಕಂಪೆನಿಗಳ ಷೇರು ಬೆಲೆಗಳು ಇನ್ನೂ ಏಕೆ ಕುಸಿಯುತ್ತಿವೆ?
ಮಾರುಕಟ್ಟೆ ಕುಸಿದಾಗಲೆಲ್ಲಾ, ಹೊಸ ನೆಪ ಬರುತ್ತದೆ. ಫೆಬ್ರವರಿ 11ರಂದು ಭಾರತೀಯ ಮಾರುಕಟ್ಟೆ ಕುಸಿದದ್ದು ಟ್ರಂಪ್ ಕಾರಣದಿಂದಾಗಿ ಎನ್ನುವುದಾದರೆ ಅದಕ್ಕೂ ಮೊದಲು ಮಾರುಕಟ್ಟೆ ಹಲವು ಬಾರಿ ಕುಸಿದಿದೆ ಮತ್ತು ಸೆಪ್ಟಂಬರ್‌ನಿಂದ ಅದು ನಿರಂತರ ಕುಸಿಯುತ್ತಿದೆ. ಇದಕ್ಕೆ ಯಾರನ್ನು ಹೊಣೆ ಮಾಡಬೇಕು?
ಈಗಿನ ನಷ್ಟದಲ್ಲಿ ಯಾರ ಹಣವನ್ನು ಲೂಟಿ ಮಾಡಲಾಯಿತು? ಯಾರ ಹೃದಯ ಒಡೆದುಹೋಯಿತು?
‘‘ವಿದೇಶಿ ಹೂಡಿಕೆದಾರರು ಬರುತ್ತಲೇ ಇರುತ್ತಾರೆ ಮತ್ತು ಹೋಗುತ್ತಲೇ ಇರುತ್ತಾರೆ, ನಾವು ಅವರ ಬಗ್ಗೆ ಏಕೆ ಚಿಂತಿಸಬೇಕು, ನಮ್ಮ ದೇಶೀಯ ಹೂಡಿಕೆದಾರರು ಮಾರುಕಟ್ಟೆಯೊಂದಿಗೆ ನಿಂತಿದ್ದಾರೆ’’ ಎಂದು 2022ರಲ್ಲಿ ಹಣಕಾಸು ಸಚಿವರು ಹೇಳಿದ್ದರು. ಆದರೆ ಅಂದು ಹಣಕಾಸು ಸಚಿವರು ಹೊಗಳುತ್ತಿದ್ದ ದೇಶೀಯ ಹೂಡಿಕೆದಾರರು ಇಂದು ಕೆಟ್ಟ ಸ್ಥಿತಿಯಲ್ಲಿದ್ದಾರೆ. ಈಗ ಹಣಕಾಸು ಸಚಿವರು ಅವರ ಬಗ್ಗೆ ಏಕೆ ಮಾತನಾಡುತ್ತಿಲ್ಲ? ಇಂದು ಅವರು ಮುಳುಗುತ್ತಿರುವಾಗ, ಅವರ ಹಣದ ಕಥೆಯೇನಾಗುತ್ತಿದೆ ಎಂಬುದನ್ನು ಏಕೆ ಹೇಳುತ್ತಿಲ್ಲ?
ವಿದೇಶಿ ಹೂಡಿಕೆದಾರರು ಹಣವನ್ನು ಹಿಂದೆಗೆದು ಕೊಳ್ಳುತ್ತಿದ್ದಾರೆ, ಈ ಸಂಗತಿಯನ್ನು ನಿರಾಕರಿಸಲು ಸಾಧ್ಯವಿಲ್ಲ ಅಥವಾ ಅದನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಅವರು ಹಣ ಹಿಂದೆಗೆದುಕೊಳ್ಳುತ್ತಿರುವುದು ಬಹಳಷ್ಟು ವಿಷಯಗಳನ್ನು ಹೇಳುತ್ತದೆ. ಅರ್ಥಮಾಡಿಕೊಳ್ಳುವುದು ಮುಖ್ಯ.
ವಿದೇಶಿ ಹೂಡಿಕೆದಾರರ ವಿಶ್ವಾಸ ಏಕೆ ಅಲುಗಾಡಿತು?
2024ರ ಸೆಪ್ಟಂಬರ್ ಮೊದಲು, ವಿದೇಶಿ ಹೂಡಿಕೆದಾರರು ಭಾರತದ ಅಭಿವೃದ್ಧಿಯ ಕಥೆಯನ್ನು ಕುರುಡಾಗಿ ನಂಬುತ್ತಿದ್ದರು, ಆದರೆ ಸೆಪ್ಟಂಬರ್ ನಂತರ ವಿದೇಶಿ ಹೂಡಿಕೆದಾರರು ಹಣವನ್ನು ಹಿಂದೆಗೆದುಕೊಳ್ಳಲು ಪ್ರಾರಂಭಿಸಿದರು.
ಭಾರತದ ಬೆಳವಣಿಗೆಯ ನಿರೂಪಣೆ ಹಳಿತಪ್ಪಿದಾಗಿನಿಂದಲೇ ಎಲ್ಲವೂ ಪ್ರಾರಂಭವಾಗುತ್ತದೆ.
ಈ ನಡುವೆ ಮತ್ತೊಂದು ಘಟನೆ ಸಂಭವಿಸಿತು. ಚೀನಾ ತನ್ನ ಆರ್ಥಿಕತೆಗೆ ಉತ್ತೇಜನ ನೀಡಲು ಪ್ರಾರಂಭಿಸಿತು.ಚೀನಾದ ಮಾರುಕಟ್ಟೆಯ ಷೇರುಗಳು ಏರಿದವು ಮತ್ತು ಈ ಸುದ್ದಿ ಚೀನಾದ ಕಥೆಯನ್ನು ಸಂಪೂರ್ಣವಾಗಿ ಬದಲಾಯಿಸಿತು.
ಭಾರತದ ಮಾರುಕಟ್ಟೆಯಿಂದ ಹೊರಹೋದ ಹಣವೂ ಒಂದಷ್ಟು ಚೀನಾದ ಕಡೆಗೆ ತಿರುಗಿತು. ವಿದೇಶಿ ಹೂಡಿಕೆದಾರರ ಆಟದ ಮೈದಾನ ಬದಲಾಗಿತ್ತು.
ಈಗ ಆಟದ ಮೈದಾನ ಅಮೆರಿಕ.
ಎಲ್ಲಾ ಹೂಡಿಕೆದಾರರು ಅಮೆರಿಕನ್ ಮಾರುಕಟ್ಟೆಯ ಕಡೆಗೆ ಓಡಲು ಪ್ರಾರಂಭಿಸಿದರು. ಏಕೆಂದರೆ ಅದರ ಷೇರು ಮಾರುಕಟ್ಟೆ ಏರುತ್ತಿದೆ.
ಇನ್ನೊಂದು ವಿಷಯವೆಂದರೆ, ಡಾಲರ್ ಬಲಗೊಳ್ಳುವ ಸುದ್ದಿ ಬಂದಾಗ, ಹೂಡಿಕೆದಾರರು ಹೆಚ್ಚಾಗಿ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಹೋಗುವುದಿಲ್ಲ. ಡಾಲರ್ ಬಲಗೊಂಡರೆ, ಈ ದೇಶಗಳಲ್ಲಿ ಹೂಡಿಕೆ ಮಾಡುವುದರಿಂದ ಲಾಭ ದೊರೆಯುವುದಿಲ್ಲ ಎಂದು ಅವರಿಗೆ ತಿಳಿದಿದೆ.
ಈ ವರ್ಷ ಇಲ್ಲಿಯವರೆಗೆ, ವಿದೇಶಿ ಹೂಡಿಕೆದಾರರು 1,04,414 ಕೋಟಿ ರೂ. ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ ಮತ್ತು ಈ ವರ್ಷ ಇಲ್ಲಿಯವರೆಗೆ, DII ಅಂದರೆ ದೇಶೀಯ ಹೂಡಿಕೆದಾರರು 99,380 ಕೋಟಿ ರೂ. ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.
ಸೆಪ್ಟಂಬರ್‌ನಿಂದ ಫೆಬ್ರವರಿ ಅವಧಿಯಲ್ಲಿ ವಿದೇಶಿ ಹೂಡಿಕೆದಾರರು ಸುಮಾರು 2,93,000 ಕೋಟಿ ರೂ. ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ ಮತ್ತು ಅದೇ ಅವಧಿಯಲ್ಲಿ, ದೇಶೀಯ ಹೂಡಿಕೆದಾರರು ರೂ. 3,03,000 ಕೋಟಿಗೂ ಹೆಚ್ಚು ಹೂಡಿಕೆ ಮಾಡಿದ್ದಾರೆ.
ಇಲ್ಲಿಯವರೆಗೆ, 20 ಬಿಲಿಯನ್ ಡಾಲರ್‌ಗಿಂತಲೂ ಹೆಚ್ಚು ಮೌಲ್ಯದ ಭಾರತೀಯ ಷೇರುಗಳನ್ನು ಮಾರಾಟ ಮಾಡಲಾಗಿದೆ.
ದೇಶೀಯ ಹೂಡಿಕೆದಾರರು ವಿದೇಶಿ ಹೂಡಿಕೆದಾರರು ಹಿಂದೆೆಗೆದುಕೊಳ್ಳುವ ಮೊತ್ತಕ್ಕಿಂತ ಸ್ವಲ್ಪ ಕಡಿಮೆ ಅಥವಾ ಹೆಚ್ಚು ಹೂಡಿಕೆ ಮಾಡುತ್ತಾರೆ ಎಂಬುದು ಪ್ರಶ್ನೆಯಲ್ಲ. ಪ್ರಶ್ನೆಯೆಂದರೆ, ದೇಶೀಯ ಹೂಡಿಕೆದಾರರು ಏನು ಪಡೆಯುತ್ತಿದ್ದಾರೆ ಎಂಬುದು.
ಅವರ ಹಣ, ಅವರ ಹೂಡಿಕೆ ವ್ಯರ್ಥವಾಗುತ್ತಿದೆಯೇ ಅಥವಾ ಲಾಭ ಗಳಿಸುವ ಭರವಸೆ ಇದೆಯೇ?
ಮ್ಯೂಚುವಲ್ ಫಂಡ್‌ಗಳು DIIನ ದೊಡ್ಡ ಭಾಗವನ್ನು ರೂಪಿಸುತ್ತವೆ. ಆದರೆ, ಅನೇಕ ಮ್ಯೂಚುವಲ್ ಫಂಡ್‌ಗಳ ಆದಾಯ ನಕಾರಾತ್ಮಕವಾಗಿದೆ ಎಂದು ವರದಿಯಾಗಿದೆ.
ಇದರ ನಂತರವೂ, ಜನರು ಡಿಸೆಂಬರ್ ಮತ್ತು ಜನವರಿಯಲ್ಲಿ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಿದ್ದಾರೆ. ಹೂಡಿಕೆ ಮುಂದುವರಿದಿದೆ. ಆದರೆ ಯಾವುದೇ ಲಾಭವಿಲ್ಲ. ಎಲ್ಲರೂ ಕಾಯುತ್ತಿದ್ದಾರೆ,
ಮಾರುಕಟ್ಟೆ ಕುಸಿದರೆ, ಅದು ಒಂದು ದಿನ ಚೇತರಿಸಿಕೊಳ್ಳುತ್ತದೆ ಎಂದು ಎಲ್ಲರೂ ಅಂದುಕೊಳ್ಳುತ್ತಾರೆ, ಆದರೆ ಈಗ ಅದು ಕಳೆದ 6 ತಿಂಗಳಿನಿಂದ ಕುಸಿಯುತ್ತಿದೆ. ತಮ್ಮ ಹೂಡಿಕೆಗೆ ಪ್ರತಿಯಾಗಿ ಹಣವನ್ನು ಬಯಸುತ್ತಿದ್ದವರ ಕನಸುಗಳು ಭಗ್ನಗೊಂಡಿರುತ್ತವೆ.
2023ರ ಆರಂಭದಿಂದಲೂ ಷೇರು ಮಾರುಕಟ್ಟೆಯ ಕಾರ್ಯಕ್ಷಮತೆ ಉತ್ತಮವಾಗಿತ್ತು. ಆದರೆ ಕಳೆದ 6 ತಿಂಗಳುಗಳಿಂದ ಒತ್ತಡ ಏಕೆ ಇದೆ? ಇದು ದೀರ್ಘಕಾಲದವರೆಗೆ ಮುಂದುವರಿದರೆ, ಹೂಡಿಕೆದಾರರು ತಮ್ಮನ್ನು ಹೇಗೆ ನಿಭಾಯಿಸುತ್ತಾರೆ? ಮಾರುಕಟ್ಟೆ ಕುಸಿಯುತ್ತಲೇ ಇರುತ್ತದೆ ಮತ್ತು ಏರುತ್ತಲೇ ಇರುತ್ತದೆ, ಆದರೆ ಕುಸಿತ ದೀರ್ಘಕಾಲದವರೆಗೆ ಮುಂದುವರಿದರೆ, ಹೇಗೆ ತಾಳಿಯಾರು?
ಕಳೆದ ವರ್ಷದ ಆರಂಭದಲ್ಲಿ ಪಟ್ಟಿ ಮಾಡಲಾದ 266 ಸಣ್ಣ ಮತ್ತು ಮಧ್ಯಮ ಉದ್ಯಮಗಳಲ್ಲಿ, ಮೂರನೇ ಒಂದು ಭಾಗದಷ್ಟು ನಷ್ಟದಲ್ಲಿ ನಡೆಯುತ್ತಿದೆ. ಅಂದರೆ, 266 ಕಂಪೆನಿಗಳಲ್ಲಿ 88ರ ಷೇರುಗಳು ನಷ್ಟದಲ್ಲಿವೆ ಎಂದು ಹಿಂದೂ ಬಿಸಿನೆಸ್ ಲೈನ್ ವರದಿ ಮಾಡಿದೆ.
ಷೇರು ಮಾರುಕಟ್ಟೆಯಲ್ಲಿ ಏರಿಳಿತಗಳು ಅದರ ಜೀವನದ ಒಂದು ಭಾಗ, ಆದರೆ ಕುಸಿತದ ಅವಧಿ ದೀರ್ಘವಾದಾಗ, ನೈತಿಕತೆ ಭಗ್ನವಾಗಲು ಪ್ರಾರಂಭಿಸಬಹುದು.
ಹೂಡಿಕೆದಾರರು ಸಹ ಇದನ್ನು ಒಂದು ಅವಕಾಶವಾಗಿ ನೋಡುವುದು ಒಳ್ಳೆಯದು, ಆದರೆ ಅದು ಕೇವಲ ಬೆಟ್ಟಿಂಗ್ ಮತ್ತು ಸೋಲಿನ ಜೂಜಾಟವಾಗಿ ಬದಲಾಗಬಾರದು.
ಮತ್ತೊಂದೆಡೆ, ಚಿನ್ನ ಏಕೆ ದುಬಾರಿಯಾಗುತ್ತಿದೆ ಎಂಬುದು ಸಹ ನಿಗೂಢವಾಗಿದೆ.
ಫೆಬ್ರವರಿ 12ರಂದು, 10 ಗ್ರಾಂ ಚಿನ್ನದ ಬೆಲೆ 85,000 ರೂ.ಗಳಿಗೆ ತಲುಪಿತ್ತು.
ಈಗ ಚರ್ಚೆ ಪ್ರಾರಂಭವಾಗಿದೆ, ಚಿನ್ನ ಕೆಲವೇ ತಿಂಗಳುಗಳಲ್ಲಿ 1 ಲಕ್ಷ ರೂ. ದಾಟಲಿದೆ ಎಂದು.
ಕಳೆದ ವರ್ಷ, ಚಿನ್ನದಲ್ಲಿ ಹೂಡಿಕೆ ಮಾಡುವುದರಿಂದ ಶೇ.27ರಷ್ಟು ಲಾಭವನ್ನು ಪಡೆಯಲಾಗಿತ್ತು.
ಜನರು ತಮ್ಮ ಚಿನ್ನದ ಆಭರಣಗಳನ್ನು ಅಡಮಾನವಿಟ್ಟು ಸಾಲ ಪಡೆಯುತ್ತಿದ್ದಾರೆ ಎಂಬ ಸುದ್ದಿಯೂ ಇದೆ.
ಹಾಗಾದರೆ ಇದನ್ನು ಹೇಗೆ ಅರ್ಥಮಾಡಿಕೊಳ್ಳುವುದು?
ಅಡಮಾನ ಇಡುವುದರಿಂದ ಚಿನ್ನ ದುಬಾರಿಯಾಗುತ್ತಿದೆಯೇ ಅಥವಾ ಜನರು ಷೇರು ಮಾರುಕಟ್ಟೆಯನ್ನು ತೊರೆದು ಚಿನ್ನದಲ್ಲಿ ಹೂಡಿಕೆ ಮಾಡುತ್ತಿದ್ದಾರೆಯೇ?
ಸಾಮಾನ್ಯ ಹೂಡಿಕೆದಾರರು ಈ ವಿಷಯಗಳನ್ನು ಹೇಗೆ ಅರ್ಥಮಾಡಿಕೊಳ್ಳಬೇಕು?
ಸಾಮಾನ್ಯ ಹೂಡಿಕೆದಾರರಿಗೆ ಸರಕಾರ ಹೆಚ್ಚು ಮುಕ್ತವಾಗಿ ಹೇಳಬೇಕು.
ಬ್ಯಾಂಕುಗಳಲ್ಲಿ ಬಡ್ಡಿದರಗಳಲ್ಲಿ ಕಡಿತದ ಬಗ್ಗೆ ಚರ್ಚೆ ನಡೆಯುತ್ತಿದೆ. ಸ್ಥಿರ ಠೇವಣಿ ದರಗಳಲ್ಲಿ ಕಡಿತದ ಬಗ್ಗೆ ಚರ್ಚೆ ನಡೆಯುತ್ತಿದೆ.
ಷೇರು ಮಾರುಕಟ್ಟೆಯಲ್ಲಿ ಲಾಭವಿಲ್ಲದಿದ್ದರೆ, ಮಧ್ಯಮ ವರ್ಗ ಎಲ್ಲಿಗೆ ಹೋಗುತ್ತದೆ?







