ಕೊಡಗಿನ ವಾಹನದಲ್ಲಿ ಯುರೋಪ್ ಸುತ್ತಿದ ದಂಪತಿ
►32 ಸಾವಿರ ಕಿ.ಮೀ. ರಸ್ತೆ ಪ್ರಯಾಣ ►150 ದಿನಗಳ ಸಾಹಸಗಾಥೆ

ಮಡಿಕೇರಿ: ಯುರೋಪಿನ ರಸ್ತೆಗಳಲ್ಲಿ ಸಾಗುವಾಗ ಎಲ್ಲರ ಗಮನ ಸೆಳೆಯುತ್ತಿದ್ದದ್ದು ಕೊಡಗಿನ ನೋಂದಣಿ ಹೊಂದಿರುವ ಕೆಎ 12 ನಂಬರ್ ಪ್ಲೇಟ್ನ ಇಸುಜು ವಿ-ಕ್ರಾಸ್ ಕಾರು. ಆ ವಾಹನದಲ್ಲಿ ಪ್ರಯಾಣಿಸುತ್ತಿದ್ದವರು ಕೊಡಗಿನ ಕುಶಾಲನಗರದ ವಿನಯ್ ಕನ್ನಯನ ಮತ್ತು ಮೌನ ಗೋಪಾಲ್ ದಂಪತಿ. ತಮ್ಮದೇ ವಾಹನದಲ್ಲಿ ಭಾರತದಿಂದ ಸ್ಕಾಟ್ಲೆಂಡ್ವರೆಗೆ ಸುಮಾರು 32 ಸಾವಿರ ಕಿ.ಮೀ. ರಸ್ತೆ ಪ್ರಯಾಣ ಕೈಗೊಳ್ಳುವ ಮೂಲಕ ಈ ದಂಪತಿ ಅಪರೂಪದ ಸಾಹಸಕ್ಕೆ ಸಾಕ್ಷಿಯಾಗಿದೆ.
ಸುಮಾರು 150 ದಿನಗಳ ಕಾಲ 32 ದೇಶಗಳ ಮೂಲಕ ಸಂಚರಿಸಿ ಸ್ಕಾಟ್ಲೆಂಡ್ ತಲುಪಿದ ಇವರ ಪ್ರಯಾಣ ಸಾಹಸ, ಧೈರ್ಯ ಹಾಗೂ ಕನಸಿನ ಬೆನ್ನತ್ತುವ ಛಲಕ್ಕೆ ಉತ್ತಮ ಉದಾಹರಣೆಯಾಗಿದೆ.
ಭಾರತದಿಂದ ಸ್ಕಾಟ್ಲೆಂಡ್ವರೆಗೆ ರಸ್ತೆ ಮಾರ್ಗವಾಗಿ ಪ್ರಯಾಣಿಸಬೇಕೆಂಬ ಕನಸು 2018ರಲ್ಲಿ ಇವರ ಮನಸ್ಸಿನಲ್ಲಿ ಮೂಡಿತ್ತು. ಈ ಕನಸನ್ನು ನನಸಾಗಿಸುವ ಉದ್ದೇಶದಿಂದ 2021ರಲ್ಲಿ ಇಸುಜು ವಿ-ಕ್ರಾಸ್ ವಾಹನವನ್ನು ಖರೀದಿಸಿದರು. ವಾಹನದ ಸಿದ್ಧತೆ, ಮಾರ್ಗದ ಅಧ್ಯಯನ, ವೀಸಾ, ಅಂತರ್ರಾಷ್ಟ್ರೀಯ ವಾಹನ ದಾಖಲೆಗಳು, ಪ್ರಯಾಣದ ಯೋಜನೆ, ಆರ್ಥಿಕ ಸಿದ್ಧತೆ ಮತ್ತು ಅಗತ್ಯ ವ್ಯವಸ್ಥೆಗಳಿಗೆ ಹಲವು ವರ್ಷಗಳನ್ನು ಮೀಸಲಿಟ್ಟರು.
ಎಲ್ಲ ಸಿದ್ಧತೆಗಳನ್ನು ಪೂರ್ಣಗೊಳಿಸಿದ ಬಳಿಕ ಕೊಡಗಿನಿಂದ ತಮ್ಮ ಸಾಹಸಮಯ ಪ್ರಯಾಣ ಆರಂಭಿಸಿದ ದಂಪತಿ, ನೇಪಾಳ, ಚೀನಾ, ಮಧ್ಯ ಏಶ್ಯ, ರಶ್ಯ ಸೇರಿದಂತೆ ಯುರೋಪಿನ ಹಲವು ರಾಷ್ಟ್ರಗಳ ಮೂಲಕ ಸಂಚರಿಸಿದರು. ಅಲ್ಲಿಂದ ಇಂಗ್ಲೆಂಡ್ ಹಾಗೂ ವೇಲ್ಸ್ ಮಾರ್ಗವಾಗಿ ಸ್ಕಾಟ್ಲೆಂಡ್ ತಲುಪಿದರು. ಈ ಸಾಹಸಯಾನದಲ್ಲಿ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಸಾಗುವಾಗ ಅಲ್ಲಿನ ರಸ್ತೆ ವ್ಯವಸ್ಥೆ, ಹವಾಮಾನ, ಸಂಸ್ಕೃತಿ, ಆಹಾರ ಪದ್ಧತಿ ಮತ್ತು ಜನಜೀವನವನ್ನು ಹತ್ತಿರದಿಂದ ಅನುಭವಿಸುವ ಅವಕಾಶ ದೊರೆಯಿತು.
ಯುದ್ಧದ ಪರಿಸ್ಥಿತಿಯಲ್ಲೂ ಬದಲಾಗದ ಸಾಹಸದ ಛಲ: ಪ್ರಾರಂಭದಲ್ಲಿ ರಶ್ಯ ಮೂಲಕ ಯುರೋಪ್ ಪ್ರವೇಶಿಸುವುದು ಇವರ ಯೋಜನೆಯಾಗಿತ್ತು. ಆದರೆ ಯುದ್ಧದ ಪರಿಸ್ಥಿತಿಯಿಂದಾಗಿ ಮೂಲ ಪ್ರಯಾಣದ ಮಾರ್ಗವನ್ನು ಬದಲಾಯಿಸಬೇಕಾಯಿತು. ರಶ್ಯದಲ್ಲಿ ಸಂಚರಿಸುವ ಸಂದರ್ಭದಲ್ಲಿ ಇಂಧನದ ಕೊರತೆ, ಇಂಟರ್ನೆಟ್ ಸಂಪರ್ಕದ ಅಭಾವ ಹಾಗೂ ಮೊಬೈಲ್ ಸಂಪರ್ಕದ ನಿರ್ಬಂಧಗಳಿಂದ ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಯಿತು ಎಂದು ವಿನಯ್ ಮತ್ತು ಮೌನ ತಿಳಿಸುತ್ತಾರೆ.
ಹೊರಜಗತ್ತಿನೊಂದಿಗೆ ಸಂಪರ್ಕ ಸಾಧಿಸುವುದು ಕಷ್ಟವಾಗಿದ್ದರೂ ಧೈರ್ಯ ಕಳೆದುಕೊಳ್ಳದೆ ಪ್ರಯಾಣ ಮುಂದುವರಿಸಿದ ದಂಪತಿ ರಶ್ಯವನ್ನು ದಾಟಿ ಜಾರ್ಜಿಯಾ ಮತ್ತು ಟರ್ಕಿ ಮಾರ್ಗವಾಗಿ ಯುರೋಪ್ ಪ್ರವೇಶಿಸಿದರು. ಯುದ್ಧದ ಪರಿಸ್ಥಿತಿಗೆ ಅನುಗುಣವಾಗಿ ಪ್ರಯಾಣದ ಮಾರ್ಗ ಬದಲಾಯಿಸುವುದು ಈ ಸಾಹಸಯಾನದ ಅತ್ಯಂತ ಸವಾಲಿನ ನಿರ್ಧಾರವಾಗಿತ್ತು.
ಹಿಮಾಲಯದ ಸೌಂದರ್ಯ, ಎವರೆಸ್ಟ್ ದರ್ಶನ: ಚೀನಾದ ಪ್ರಸಿದ್ಧ ಉ318 ಹೆದ್ದಾರಿಯಲ್ಲಿ ಸಂಚರಿಸಿದ್ದು ಇವರ ಪ್ರಯಾಣದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ಟಿಬೆಟ್ನ ಎತ್ತರದ ಪ್ರದೇಶಗಳು, ಸವಾಲಿನ ಪರ್ವತ ರಸ್ತೆಗಳು ಹಾಗೂ ಹಿಮಾಲಯದ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಂಡರು. ಅಲ್ಲದೆ, ಚೀನಾದಲ್ಲಿರುವ ಮೌಂಟ್ ಎವರೆಸ್ಟ್ ಬೇಸ್ ಕ್ಯಾಂಪ್ಗೆ ಭೇಟಿ ನೀಡಿ ವಿಶ್ವದ ಅತ್ಯುನ್ನತ ಶಿಖರ ಎವರೆಸ್ಟ್ ಅನ್ನು ಸಮೀಪದಿಂದ ವೀಕ್ಷಿಸುವ ಅಪರೂಪದ ಅವಕಾಶವನ್ನೂ ಪಡೆದುಕೊಂಡರು.
ಆರ್ಕ್ಟಿಕ್ ವೃತ್ತ ದಾಟಿ ನಾರ್ತ್ ಕೇಪ್ ತಲುಪಿದ ಸಾಧನೆ: ಯುರೋಪಿನ ಉತ್ತರ ಭಾಗದತ್ತ ಸಾಗಿದ ದಂಪತಿ ಫಿನ್ಲ್ಯಾಂಡ್ ಮತ್ತು ನಾರ್ವೆ ಮೂಲಕ ಆರ್ಕ್ಟಿಕ್ ವೃತ್ತವನ್ನು ದಾಟಿದರು. ನಾರ್ವೆಯ ಪ್ರಸಿದ್ಧ ನಾರ್ತ್ ಕೇಪ್ ತಲುಪಿದ್ದು ಇವರ ಸಾಹಸಯಾನದ ಮತ್ತೊಂದು ಮಹತ್ವದ ಮೈಲಿಗಲ್ಲಾಗಿದೆ. ಭಾರತದ ನೋಂದಣಿಯ ವಾಹನದಲ್ಲಿ ಇಷ್ಟೊಂದು ದೂರ ಸಾಗಿ ಉತ್ತರ ಯುರೋಪ್ನ ತುದಿಯನ್ನು ತಲುಪಿರುವುದು ವಿಶೇಷ ಸಾಧನೆಯಾಗಿದೆ.
ಅಂತಿಮ ಗುರಿಯಾದ ಸ್ಕಾಟ್ಲೆಂಡ್ ತಲುಪಿದ ಬಳಿಕ ಅಲ್ಲಿನ ಪ್ರಸಿದ್ಧ ನಾರ್ತ್ ಕೋಸ್ಟ್ 500 (ಓಅ500) ರಸ್ತೆ ಮಾರ್ಗದಲ್ಲಿಯೂ ಇಸುಜು ವಿ-ಕ್ರಾಸ್ ವಾಹನದಲ್ಲಿ ಸಂಚರಿಸಿ ತಮ್ಮ ಸಾಹಸಯಾನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು. ಭಾರತದ ನೋಂದಣಿಯ ವಾಹನದಲ್ಲಿ ಈ ಪ್ರಸಿದ್ಧ ರಸ್ತೆ ಮಾರ್ಗ ವನ್ನು ಕ್ರಮಿಸಿರುವುದು ದಂಪತಿಯ ಪಾಲಿಗೆ ಹೆಮ್ಮೆಯ ಕ್ಷಣವಾಗಿದೆ.
ವಾಹನದ ತಾಂತ್ರಿಕ ಜ್ಞಾನವೇ ಪ್ರಯಾಣಕ್ಕೆ ಆಸರೆ: ವಿನಯ್ ಮತ್ತು ಮೌನ ಅವರು ಕುಶಾಲನಗರದ ಪ್ರಸಿದ್ಧ ಃಖಗಿ ಇxoಣiಛಿs ಒuಟಣi ಃಡಿಚಿಟಿಜ ಅಚಿಡಿ ಅಚಿಡಿe ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ. ವಾಹನಗಳ ಬಗ್ಗೆ ಹೊಂದಿರುವ ಆಳವಾದ ಆಸಕ್ತಿ ಮತ್ತು ತಾಂತ್ರಿಕ ಜ್ಞಾನ ಈ ಸುದೀರ್ಘ ಪ್ರಯಾಣದಲ್ಲಿ ಅವರಿಗೆ ಸಾಕಷ್ಟು ನೆರವಾಗಿದೆ.
ಪ್ರಯಾಣದ ಸಂದರ್ಭದಲ್ಲಿ ವಾಹನದಲ್ಲಿ ಎದುರಾದ ತಾಂತ್ರಿಕ ಸಮಸ್ಯೆಗಳನ್ನು ಸಾಧ್ಯವಾದಷ್ಟು ತಾವೇ ಪರಿಹರಿಸಿಕೊಂಡರು. ಅಗತ್ಯವಿದ್ದಾಗ ಸ್ಥಳೀಯ ಮೆಕ್ಯಾನಿಕ್ಗಳ ಸಹಾಯ ಪಡೆದರು. ಕೆಲವು ಬಿಡಿಭಾಗಗಳನ್ನು ಭಾರತದಿಂದಲೇ ತರಿಸಿಕೊಳ್ಳುವ ವ್ಯವಸ್ಥೆಯನ್ನೂ ಮಾಡಿಕೊಂಡರು. ವಿದೇಶಗಳಲ್ಲಿ ಭಾರತದ ನೋಂದಣಿಯ ವಾಹನಕ್ಕೆ ಸರ್ವಿಸ್ ಹಾಗೂ ಬಿಡಿಭಾಗಗಳನ್ನು ಪಡೆಯುವುದು ಸುಲಭದ ಕೆಲಸವಾಗಿರಲಿಲ್ಲ.
ಇಷ್ಟೊಂದು ಸವಾಲುಗಳ ನಡುವೆಯೂ ಪ್ರಯಾಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ದಂಪತಿ, ವಿವಿಧ ದೇಶಗಳಲ್ಲಿ ಭೇಟಿಯಾದ ಜನರ ಆತಿಥ್ಯ, ಪ್ರೀತಿ ಮತ್ತು ಸಹಕಾರವನ್ನು ಕೃತಜ್ಞತೆಯಿಂದ ಸ್ಮರಿಸುತ್ತಾರೆ. ವಾಹನ ಪ್ರೇಮ, ಸಾಹಸ ಮನೋಭಾವ ಮತ್ತು ಪರಸ್ಪರ ಸಹಕಾರವಿದ್ದರೆ ಗಡಿಗಳನ್ನೂ ದಾಟಿ ಕನಸುಗಳನ್ನು ನನಸಾಗಿಸಬಹುದು ಎಂಬುದಕ್ಕೆ ವಿನಯ್ ಮತ್ತು ಮೌನ ಅವರ ಈ ಸಾಹಸಯಾನ ಸಾಕ್ಷಿಯಾಗಿದೆ.
ರಸ್ತೆಯಲ್ಲೇ ಅರಳುತ್ತಿದೆ ಜಗತ್ತಿನ ಸೌಂದರ್ಯ
ರಸ್ತೆ ಪ್ರಯಾಣದ ಮೂಲಕ ಜಗತ್ತಿನ ಭೌಗೋಳಿಕ ವಿಸ್ತಾರ, ವಿಭಿನ್ನ ಭೂ ಪ್ರದೇಶಗಳು, ಪ್ರಕೃತಿಯ ಸೌಂದರ್ಯ, ವೈವಿಧ್ಯಮಯ ಸಂಸ್ಕೃತಿ ಹಾಗೂ ಜನಜೀವನವನ್ನು ಹತ್ತಿರದಿಂದ ಅರಿಯಲು ಸಾಧ್ಯವಾಗುತ್ತದೆ. ಪ್ರತಿಯೊಂದು ದೇಶವೂ ತನ್ನದೇ ಆದ ವಿಶಿಷ್ಟ ಅನುಭವವನ್ನು ನೀಡುತ್ತದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ದೇಶಗಳನ್ನು ರಸ್ತೆ ಮಾರ್ಗದ ಮೂಲಕ ಸುತ್ತಿ, ಈ ಸುಂದರ ಜಗತ್ತಿನ ವೈವಿಧ್ಯತೆಯನ್ನು ಮತ್ತಷ್ಟು ಅನ್ವೇಷಿಸುವ ಆಸೆ ಹೊಂದಿದ್ದೇವೆ ಎಂದು ವಿನಯ್ ಕನ್ನಯನ ಹಾಗೂ ಮೌನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
32 ದೇಶಗಳ ಸುದೀರ್ಘ ಪಯಣ
ದಂಪತಿಯ ಈ ಸಾಹಸಮಯ ಪ್ರಯಾಣದಲ್ಲಿ ಒಟ್ಟು 32 ದೇಶಗಳನ್ನು ಸುತ್ತುವ ಮೂಲಕ ವಿಶಿಷ್ಟ ಅನುಭವವನ್ನು ತಮ್ಮದಾಗಿಸಿಕೊಂಡರು. ಅವರ ಪ್ರಯಾಣದ ಹಾದಿ ಭಾರತದಿಂದ ಆರಂಭಗೊಂಡು ನೇಪಾಳ, ಚೀನಾ, ಕಝಕಿಸ್ತಾನ್, ಉಝ್ಬೇಕಿಸ್ತಾನ್, ರಶ್ಯ, ಜಾರ್ಜಿಯಾ, ಟರ್ಕಿ ಸೇರಿದಂತೆ ಏಶ್ಯ ಹಾಗೂ ಯುರೋಪ್ ಖಂಡದ ವಿವಿಧ ದೇಶಗಳ ಮೂಲಕ ಸಾಗಿತು. ಬಳಿಕ ಬಲ್ಗೇರಿಯಾ, ರೊಮೇನಿಯಾ, ಹಂಗೇರಿ, ಸ್ಲೋವಾಕಿಯಾ, ಪೋಲೆಂಡ್, ಲಾಟ್ವಿಯಾ, ಲಿಥುವೇನಿಯಾ, ಎಸ್ಟೋನಿಯಾ, ಫಿನ್ಲ್ಯಾಂಡ್, ನಾರ್ವೆ, ಸ್ವೀಡನ್, ಡೆನ್ಮಾರ್ಕ್, ಜರ್ಮನಿ, ಝೆಕ್ ರಿಪಬ್ಲಿಕ್, ಆಸ್ಟ್ರಿಯಾ, ಸ್ಲೊವೇನಿಯಾ, ಕ್ರೊಯೇಶಿಯಾ, ಇಟಲಿ, ಸ್ವಿಟ್ಝರ್ಲೆಂಡ್, ನೆದರ್ಲ್ಯಾಂಡ್ಸ್, ಬೆಲ್ಜಿಯಂ, ಫ್ರಾನ್ಸ್, ಇಂಗ್ಲೆಂಡ್, ವೇಲ್ಸ್ ಹಾಗೂ ಸ್ಕಾಟ್ಲೆಂಡ್ ಅನ್ನು ತಲುಪಿದರು.
2018ರಲ್ಲಿ ಕಂಡ ಕನಸನ್ನು ಹಲವು ವರ್ಷಗಳ ಯೋಜನೆ ಮತ್ತು ಪರಿಶ್ರಮದ ಮೂಲಕ ನನಸಾಗಿಸಿದ್ದೇವೆ. ಪ್ರಯಾಣದ ಉದ್ದಕ್ಕೂ ಅನೇಕ ಸವಾಲುಗಳು ಎದುರಾದರೂ ಅವುಗಳಿಂದ ಹಿಂದೆ ಸರಿಯಲಿಲ್ಲ. ವಾಹನದ ಮೇಲಿನ ಪ್ರೀತಿ, ಪ್ರಯಾಣದ ಆಸಕ್ತಿ ಮತ್ತು ಪರಸ್ಪರ ವಿಶ್ವಾಸ ನಮ್ಮನ್ನು ಗುರಿಯವರೆಗೆ ತಲುಪಿಸಿತು.
-ವಿನಯ್ ಕನ್ನಯನ ಮತ್ತು ಮೌನ






