ಶತಮಾನೋತ್ಸವ ಪೂರೈಸಿದ ಕಬ್ಬನ್ ಪಾರ್ಕ್‌ನ ‘ಕೇಂದ್ರ ಗ್ರಂಥಾಲಯ’
ವಾಸ್ತುಶಿಲ್ಪ ಕಾರಣದಿಂದಲೂ ಕಟ್ಟಡ ಪ್ರಖ್ಯಾತಿ

ಬೆಂಗಳೂರು: ನಗರದ ಹೃದಯಭಾಗದಲ್ಲಿರುವ ಕಬ್ಬನ್ ಪಾರ್ಕ್‌ನಲ್ಲಿರುವ ರಾಜ್ಯ ಕೇಂದ್ರ ಗ್ರಂಥಾಲಯ ಕಟ್ಟಡ ಶತಮಾನೋತ್ಸವವನ್ನು ಪೂರೈಸಿದ್ದು, ಕಟ್ಟಡವು ಪುಸ್ತಕಗಳ ಸಂಗ್ರಹಕ್ಕೆ ಮಾತ್ರ ಸೀಮಿತವಾಗದೆ, ಇತಿಹಾಸ ಮತ್ತು ವಾಸ್ತುಶಿಲ್ಪ ಕಾರಣದಿಂದಲೂ ಗಮನ ಸೆಳೆಯುತ್ತಿದೆ. ಹೀಗಾಗಿ ನಗರಕ್ಕೆ ಬರುವ ವಿದೇಶಿಗರೂ ಗ್ರಂಥಾಲಯಕ್ಕೆ ಭೇಟಿ ನೀಡುತ್ತಿದ್ದಾರೆ.
ಗ್ರಂಥಾಲಯವನ್ನು ಬ್ರಿಟಿಷ್ ಅಧಿಕಾರಿ ಹಾಗೂ ಮಿಲಿಟರಿ ಇಂಜಿನಿಯರ್ ರಿಚಾರ್ಡ್ ಸ್ಯಾಂಕಿ 1908ರಲ್ಲಿ ನಿರ್ಮಿಸಿದರು. ಮೈಸೂರಿನ ದಿವಾನರಾಗಿದ್ದ ಕೆ.ಶೇಷಾದ್ರಿ ಅಯ್ಯರ್ ಸ್ಮರಣಾರ್ಥವಾಗಿ ಕಟ್ಟಡವನ್ನು ಸಮಾರಂಭಗಳಿಗಾಗಿ ನಿರ್ಮಿಸಲಾಗಿತ್ತು. ಕಟ್ಟಡದ ಎದುರು ಗುಲಾಬಿ ಹೂಗಳ ತೋಟವನ್ನು ನಿರ್ಮಿಸಿದ್ದು, ತೋಟದ ಮಧ್ಯೆ ಕೆ.ಶೇಷಾದ್ರಿ ಅಯ್ಯರ್ ಅವರ ಪುತ್ಥಳಿಯನ್ನು ಸ್ಥಾಪಿಸಲಾಗಿದೆ. ಇದು ಕಟ್ಟಡದ ಸೊಬಗನ್ನು ಮತ್ತಷ್ಟು ಹೆಚ್ಚಿಸುತ್ತಿದೆ.
ಕಟ್ಟಡವು ಸಾರ್ವಜನಿಕ ಗ್ರಂಥಾಲಯವಾಗಿ ಮಾರ್ಪಾಡಾಗುವ ಮೊದಲು, ಶೇಷಾದ್ರಿ ಅಯ್ಯರ್ ಸ್ಮಾರಕ ಭವನ ಎಂದೇ ಗುರುತಿಸಲಾಗುತ್ತಿತ್ತು. 1915ರಲ್ಲಿ ಇದನ್ನು ಸಾರ್ವಜನಿಕ ಗ್ರಂಥಾಲಯವಾಗಿ ಮಾರ್ಪಾಡಿಸಲಾಯಿತು. ಆಗ ಗ್ರಂಥಾಲಯದಲ್ಲಿ 4,750 ಪುಸ್ತಕಗಳಿದ್ದು, 215 ಸದಸ್ಯರಿದ್ದರು. ರಾಜ್ಯ ಸರಕಾರದ ಪ್ರೋತ್ಸಾಹದಿಂದ 2025ರ ವೇಳೆಗೆ ಗ್ರಂಥಾಲಯವು 3 ಲಕ್ಷಕ್ಕೂ ಹೆಚ್ಚು ಪುಸ್ತಕಗಳು, ಸುಮಾರು 300 ನಿಯತಕಾಲಿಕೆಗಳು ಮತ್ತು ವಿವಿಧ ಭಾಷೆಗಳ ದಿನಪತ್ರಿಕೆಗಳನ್ನು ಹೊಂದಿವೆ.
ಕಟ್ಟಡದ ವಾಸ್ತುಶಿಲ್ಪ :
ಇಟ್ಟಿಗೆ ಮತ್ತು ಸುಣ್ಣದ ಗಾರೆಯನ್ನು ಬಳಸಿ ಕಟ್ಟಡವನ್ನು ನಿರ್ಮಿಸಲಾಗಿದ್ದು, ದೇಶೀಯ ಮತ್ತು ಯುರೋಪಿಯನ್ ವಾಸ್ತುಶಿಲ್ಪ ಶೈಲಿಗಳ ಮಿಶ್ರಣವಾಗಿದೆ. ಛಾವಣಿಯನ್ನು ಮಂಗಳೂರು ಟೈಲ್ಸ್‌ನಿಂದ ನಿರ್ಮಾಣ ಮಾಡಲಾಗಿದೆ. ವಾಸ್ತುಶಿಲ್ಪ ತಜ್ಞರು ಈ ಕಟ್ಟಡವು ಗೋಥಿಕ್ ಶೈಲಿಯಲ್ಲಿ ನಿರ್ಮಾಣವಾಗಿದೆ ಎಂದು ವಿಶ್ಲೇಷಿಸಿದ್ದಾರೆ. ಕಟ್ಟಡವನ್ನು ಸೂಕ್ಷ್ಮವಾಗಿ ಗಮನಿಸಿದರೆ ಕಟ್ಟಡದ ಕಮಾನುಗಳು ಜನರ ಗಮನವನ್ನು ಒಂದು ಕ್ಷಣ ಸೆರೆಹಿಡಿಯಲಿವೆ.
ಕಟ್ಟಡದ ಮುಂಭಾಗದ ಮಧ್ಯಭಾಗವು ಕಟ್ಟಡದ ಎರಡು ಬದಿಗಳಿಗಿಂತ ಎತ್ತರವಾಗಿದ್ದು, ಕಟ್ಟಡದ ಸೌಂದರ್ಯವನ್ನು ಹೆಚ್ಚಿಸಿದೆ. ಮುಂಭಾಗದ ಮೇಲ್ಛಾವಣಿಯಲ್ಲಿರುವ ತ್ರಿಕೋನಾಕೃತಿಯ ಕಮಾನು ಗ್ರೀಕ್ ಶೈಲಿಯಿಂದ ಪ್ರೇರಣೆ ಪಡೆದು ನಿರ್ಮಿಸಲಾಗಿದೆ. ಕಟ್ಟಡದ ಮುಂಭಾಗ ಎರಡು ಮಂಟಪಗಳಿದ್ದು, ಕಾರಿಡಾರ್‌ಗಳನ್ನು ಹೊಂದಿವೆ. ಮಂಟಪದ ಎತ್ತರವಾಗಿರುವ ಸ್ಥಂಬಗಳು ಯೂರೋಪಿಯನ್ ಶೈಲಿಯ ಟಸ್ಕನ್ ಮತ್ತು ಕೊರಿಂಥಿಯನ್ ಶೈಲಿಯಿಂದ ಅಲಂಕರಿಸಲ್ಪಟ್ಟಿವೆ. ಇನ್ನು ಸಂಪೂರ್ಣ ಕಟ್ಟಡವು ಅರ್ಧವೃತ್ತಾಕಾರದಲ್ಲಿದ್ದು, ಎತ್ತರದ ಗುಮ್ಮಟವನ್ನು ಹೊಂದಿದೆ.
ಕಟ್ಟಡದ ಹೊರ ಮೇಲ್ಮೈ ಆರ್ಕರ್ಷಣೀಯವಾಗಿರುವಂತೆ, ಕಟ್ಟಡದ ಒಳಾಂಗಣವು ವೈಜ್ಞಾನಿಕವಾಗಿಯೂ ನಿರ್ಮಾಣವಾಗಿದೆ. ಕಟ್ಟಡದ ಒಳಗಿನ ಸಭಾಂಗಣ ಅರ್ಧವೃತ್ತಾಕಾರದಲ್ಲಿದ್ದು, ಇಲ್ಲಿ ಪುಸ್ತಕಗಳನ್ನು ಜೋಡಿಸಲಾಗಿದೆ. ಸಭಾಂಗಣದ ಮೇಲ್ಭಾಗದ ಸುತ್ತಲೂ ಕಮಾನಿನ ಕಿಟಕಿಗಳಿವೆ. ಇಲ್ಲಿ ನೈಸರ್ಗಿಕ ಬೆಳಕು ಮತ್ತು ಗಾಳಿ ಬರುವ ರೀತಿಯಲ್ಲಿ ವೈಜ್ಞಾನಿಕವಾಗಿ ನಿರ್ಮಾಣ ಮಾಡಲಾಗಿದೆ.
ಪ್ರಶಸ್ತಿ :
ಸಾರ್ವಜನಿಕ ಗ್ರಂಥಾಲಯ ಕ್ಷೇತ್ರಕ್ಕೆ ನೀಡುವ ಅತ್ಯುನ್ನತ ಪ್ರಶಸ್ತಿಯಾದ ರಾಜಾ ರಾಮಮೋಹನ್ ರಾಯ್ ಗ್ರಂಥಾಲಯ ಪ್ರತಿಷ್ಠಾನ ಪ್ರಶಸ್ತಿಯನ್ನು ರಾಜ್ಯ ಸರಕಾರದ ಅಡಿಯಲ್ಲಿ ನಡೆಯುತ್ತಿರುವ ರಾಜ್ಯ ಕೇಂದ್ರ ಗ್ರಂಥಾಲಯಕ್ಕೆ ನೀಡಲಾಗಿದೆ. 2000ನೇ ವರ್ಷದಲ್ಲಿ ಈ ಪ್ರಶಸ್ತಿ ಗ್ರಂಥಾಲಯಕ್ಕೆ ದೊರೆತಿದ್ದು, ಇದರಿಂದ ರಾಜ್ಯದ ಖ್ಯಾತಿಯನ್ನು ಹೆಚ್ಚಿಸಿದೆ.
ಪುಸ್ತಕಗಳ ಜೋಡಣೆ :
ಕಟ್ಟಡದ ಒಳಗಿನ ಸಭಾಂಗಣದಲ್ಲಿರುವ ಪುಸ್ತಕಗಳ ಜೋಡಣೆ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದು, ವಿವಿಧ ಭಾಷೆಗಳ ಸಾಹಿತ್ಯ, ಇತಿಹಾಸ, ರಾಜಕೀಯ ವಿಜ್ಞಾನ, ಗಣಿತ, ಕೃಷಿ, ಧರ್ಮ ಮತ್ತು ಮುಂತಾದ ವಿಭಾಗಗಳ ಪುಸ್ತಕಗಳನ್ನು ಹೊಂದಿದೆ. ಅದಕ್ಕೆ ಹೊಂದಿಕೊಂಡಂತೆ ಸ್ಪರ್ಧಾತ್ಮಕ ಪರೀಕ್ಷೆಗಳ ಪುಸ್ತಕಗಳನ್ನು ಇಡಲಾಗಿದೆ. ಪ್ರತಿನಿತ್ಯ ಇಲ್ಲಿಗೆ ನೂರಾರು ಓದುಗರು ಭೇಟಿ ನೀಡಿ ಜ್ಞಾನವನ್ನು ವೃದ್ಧಿಸಿಕೊಳ್ಳುತ್ತಾರೆ.
ಇನ್ನು ಅಂಧರಿಗಾಗಿಯೇ ಪ್ರತ್ಯೇಕ ಬ್ರೈಲ್ ವಿಭಾಗದಲ್ಲಿ 802 ಪುಸ್ತಕಗಳನ್ನು ಜೋಡಿಸಲಾಗಿದೆ. ಪ್ರತಿಯೊಂದು ಪುಸ್ತಕಗಳು ಆಡಿಯೊ ಸೀಡಿಯನ್ನು ಹೊಂದಿದೆ. ಪ್ರತೀ ದಿನ ಸುಮಾರು 5-10 ಜನರು ವಿಭಾಗಕ್ಕೆ ಭೇಟಿ ನೀಡುತ್ತಾರೆ. ಇದರ ಜೊತೆಗೆ, ಮಕ್ಕಳಿಗಾಗಿ ಸಣ್ಣ ವಿಭಾಗವನ್ನು ಇಂದಿರಾ ಗಾಂಧಿ ಹೆಸರಿನಲ್ಲಿ ತೆರೆಯಲಾಗಿದೆ. ಇಲ್ಲಿ 5 ಸಾವಿರಕ್ಕೂ ಹೆಚ್ಚು ಪುಸ್ತಕಗಳನ್ನು ಸಂಗ್ರಹಿಸಲಾಗಿದೆ.







