ಸಾಂಸ್ಕೃತಿಕ ಸಂವಿಧಾನ ಶಿಲ್ಪಿ ಬಸವಣ್ಣ

ಸಂಸ್ಕೃತಿ ಎಂಬುದು ಬಹುಮುಖಿಯಾದುದು. ಒಂದು ಸಮುದಾಯದ ಭಾಷೆ, ನಂಬಿಕೆಗಳು, ರೀತಿ ರಿವಾಜು ಮತ್ತು ಹವ್ಯಾಸಗಳಿಂದ ಕೂಡಿದ ಪದ್ಧತಿಗಳು, ವಾಸ್ತುಶಿಲ್ಪ, ಹಾಡುಗಾರಿಕೆ, ನೃತ್ಯ, ಚಿತ್ರಕಲೆ, ಶಿಲ್ಪ, ಪರಂಪರೆ, ಸಂಪ್ರದಾಯ, ಆಹಾರ, ಉಡುಗೆ, ತೊಡುಗೆ, ಉತ್ಪಾದನಾ ವ್ಯವಸ್ಥೆ, ಆರ್ಥಿಕ ವ್ಯವಸ್ಥೆ, ನೈತಿಕತೆ, ಕೌಟುಂಬಿಕ ಮತ್ತು ಸಾಮಾಜಿಕ ಸಂಬಂಧಗಳು ಹಾಗೂ ನಿಯಮಗಳು ಮುಂತಾದ ಬದುಕುವ ಕ್ರಮವನ್ನೊಳಗೊಂಡಿರುವಂಥದ್ದು ಸಂಸ್ಕೃತಿ ಎನಿಸುತ್ತದೆ.
ಈ ಸಂಸ್ಕೃತಿಯು ಒಂದು ಜೀವನವಿಧಾನದ ಉತ್ಪನ್ನವಾಗಿರುತ್ತದೆ. ಉತ್ಪಾದನಾ ವಿಧಾನವೊಂದು ಇದರ ಮೂಲದಲ್ಲಿರುತ್ತದೆ. ಬುಡಕಟ್ಟುಗಳ ಉತ್ಪಾದನಾ ವಿಧಾನ, ಪಾಳೇಗಾರಿ ಯುಗದ ಉತ್ಪಾದನಾ ವಿಧಾನ, ಬಂಡವಾಳಶಾಹಿ ಉತ್ಪಾದನಾ ವಿಧಾನ ಮತ್ತು ಸಮಾಜವಾದಿ ಉತ್ಪಾದನಾ ವಿಧಾನಗಳು ತಮ್ಮದೇ ಆದ ಸಂಸ್ಕೃತಿಯನ್ನು ಬಿಂಬಿಸುತ್ತಿರುತ್ತವೆ. ವಿಜ್ಞಾನ ಮತ್ತು ತಂತ್ರಜ್ಞಾನ ಬೆಳೆದಂತೆಲ್ಲ ಸಂಸ್ಕೃತಿಯ ಹೊಸ ರೂಪುಗಳ ಆವಿಷ್ಕಾರವಾಗುತ್ತಲೇ ಇರುತ್ತವೆ. ಆದರೆ ಹಿಂದಿನ ವ್ಯವಸ್ಥೆಯಲ್ಲಿ ಕಂಡುಬಂದ ಸಂಸ್ಕೃತಿಗಳ ಅನೇಕ ಅಂಶಗಳು ಒಂದಿಲ್ಲೊಂದು ರೀತಿಯಲ್ಲಿ ಮುಂದುವರಿಯುತ್ತಲೇ ಇರುತ್ತವೆ. ಇವುಗಳ ಜೊತೆಗೆ ಬೇರೆ ಬೇರೆ ಸಮುದಾಯ, ಜಾತಿ, ವರ್ಣ, ಧರ್ಮ ಮುಂತಾದವುಗಳ ಸಂಪರ್ಕದೊಂದಿಗೆ ಸಾಂಸ್ಕೃತಿಕ ಕೊಡುಕೊಳ್ಳುವಿಕೆಗಳು ನಡೆದೇ ಇರುತ್ತವೆ. ಒಂದು ಸಮುದಾಯ ಇನ್ನೊಂದು ಸಮುದಾಯದ ಮೇಲೆ ಆಕ್ರಮಣ ಮಾಡಿ, ರಾಜ್ಯಶಕ್ತಿಯನ್ನು ವಶಪಡಿಸಿಕೊಂಡಾಗ ತನ್ನ ಸಂಸ್ಕೃತಿಯನ್ನು ಆಕ್ರಮಣಕ್ಕೆ ಒಳಗಾದವರ ಮೇಲೆ ಹೇರುತ್ತ ತಮ್ಮ ಹಿಡಿತದಲ್ಲಿಟ್ಟುಕೊಳ್ಳುವುದು ಇತಿಹಾಸದುದ್ದಕ್ಕೂ ನಡೆದೇ ಇದೆ.
ಏಶ್ಯಮೈನರ್ (ಇಂದಿನ ಟರ್ಕಿಯ ಭಾಗವಾದ ಅನಾಟೊಲಿಯಾ) ನಿಂದ ಅಫ್ಘಾನಿಸ್ತಾನದ ಮೂಲಕ ವಾಯವ್ಯ ಮಾರ್ಗದಿಂದ ಆರ್ಯರು ಬಂದು ಇಂದಿನ ಪಾಕಿಸ್ತಾನದ ಭಾಗವಾಗಿರುವ ಸಿಂಧೂನದಿ ನಾಗರಿಕತೆಯ ಮೊಹಂಜೊದಾರೊ ಪ್ರದೇಶದ ಮೇಲೆ ದಾಳಿ ಮಾಡಿದರು. ಸಿಂಧೂನದಿ ಪ್ರದೇಶದಿಂದ ಗಂಗಾನದಿ ಪ್ರದೇಶದವರೆಗೆ ಮತ್ತು ದಕ್ಷಿಣದ ಕಡೆಗೆ ವಿಂಧ್ಯಾಪರ್ವತದವರೆಗಿನ ಪ್ರದೇಶವನ್ನು ವಶಪಡಿಸಿಕೊಂಡು ಆರ್ಯಾವರ್ತ ಎಂದು ಸಾರಿದರು.
ವೇದ ಪ್ರಣೀತ ಆರ್ಯರ ಈ ಆಕ್ರಮಣಕಾರಿ ಸಂಸ್ಕೃತಿಯ ವಿರುದ್ಧ ಲೋಕಾಯತರು ಮೊದಲಿಗೆ ಹೋರಾಟ ಮಾಡಿದರು. ಜೈನರು, ಬೌದ್ಧರು, ಶರಣರು ಆಯಾ ಕಾಲದಲ್ಲಿ ಈ ವೈದಿಕ ವ್ಯವಸ್ಥೆಗೆ ಪರ್ಯಾಯವಾದ ಜೀವನ ವಿಧಾನವನ್ನು ರೂಪಿಸಿದರು.
12ನೇ ಶತಮಾನದಲ್ಲಿ ವೈದಿಕರ ಚಾತುರ್ವರ್ಣ, ಜಾತಿ, ಅಸ್ಪಶ್ಯತೆ ಮತ್ತು ಲಿಂಗಭೇದ ವಿರುದ್ಧ ಶರಣರು ಬಸವಣ್ಣ ನವರ ನೇತೃತ್ವದಲ್ಲಿ ವಚನ ಚಳವಳಿಯನ್ನು ಪ್ರಾರಂಭಿಸಿದರು. ಕನ್ನಡದ ನೆಲದಲ್ಲಿ ಇದು ಪುನರುಜ್ಜೀವನದ ಚಳವಳಿಯಾಗಿತ್ತು. ಕಾಯಕಜೀವಿಗಳು ಈ ಅಭೂತಪೂರ್ವ ಚಳವಳಿಯ ಮುಂಚೂಣಿ ಯಲ್ಲಿದ್ದರು. ಕಾಯಕ ಈ ಚಳವಳಿಯ ಅಡಿಪಾಯವಾಗಿತ್ತು. ದುಡಿಮೆಯಿಂದ ದಯನೀಯ ಸ್ಥಿತಿ ದೂರವಾಯಿತು. ಚಳವಳಿಯ ಮೂಲಕ ಕಾಯಕಜೀವಿಗಳ ಆತ್ಮಗೌರವದ ಪ್ರತಿಷ್ಠಾಪನೆಯಾಯಿತು. ಬೇಡುವವರಿಲ್ಲದ ಸಮಾಜ ನಿರ್ಮಾಣವಾಯಿತು. ವ್ಯಕ್ತಿತ್ವ ವಿಕಸನ ಮತ್ತು ವ್ಯಕ್ತಿ ಸ್ವಾತಂತ್ರ್ಯದ ಅನುಭವವಾಯಿತು. ಕಾಯಕದ ಅನುಭವದ ಮೂಲಕ ಅನುಭಾವ ಎಂಬ ಹೊಸ ದರ್ಶನದ ಉದಯವಾಯಿತು. ಈ ದರ್ಶನ ದುಡಿಯುವ ಜನರ ಮಧ್ಯೆ ಹುಟ್ಟಿದ್ದೊಂದು ವಿಶೇಷವಾಯಿತು. ಕಾಯಕ ಜೀವಿಗಳು ತಮ್ಮ ಕಾಯಕದ ಅನುಭವದ ಮೂಲಕ ಅನುಭಾವ ತತ್ವಜ್ಞಾನವನ್ನು ಎತ್ತಿ ಹಿಡಿದರು. ವಚನಗಳಲ್ಲಿ ತಮ್ಮ ಕಾಯಕದ ಪರಿಕರಗಳನ್ನೇ ಪ್ರತಿಮೆ, ಪ್ರತೀಕ, ಸಂಕೇತ ಮತ್ತು ರೂಪಕಗಳಾಗಿ ಬಳಸಿದರು. ಯಾವುದೇ ಕಾಯಕ ಮಾಡಿದರೂ ಆ ಅನುಭವದ ಮೂಲಕ ಮತ್ತು ಕಾಯಕಕ್ಕಾಗಿ ಬಳಸಿದ ವಸ್ತುಗಳ ಮೂಲಕ ಅನುಭಾವದ ದರ್ಶನ ಮಾಡಿಸಿದರು. ಎಲ್ಲ ಮಕರಂದ ಸೇರಿ ಜೇನುತುಪ್ಪವಾಗುವಂತೆ ಎಲ್ಲರ ಅನುಭವ ಒಂದಾಗಿ ಅನುಭಾವ ಎಂಬ ದರ್ಶನದ ಸೃಷ್ಟಿಯಾಯಿತು.
ಬಸವಣ್ಣನವರು ಸಾಧಿಸಿದ ಸಾಧನೆ ಇದಾಗಿದೆ. ಅವರು ದುಡಿಯುವ ಜನರನ್ನು ಒಂದು ವರ್ಗವಾಗಿ ಒಂದುಗೂಡಿಸಿದರು. ಅದಕ್ಕೂ ಮೊದಲು ವಿವಿಧ ಕಾಯಕಜೀವಿಗಳು ತಮ್ಮದೇ ಆದ ಕಾಯಕಕ್ಕೆ ಸಂಬಂಧಿಸಿದ ಜನರ ಜೊತೆ ಇರುತ್ತಿದ್ದರು. ಕಂಬಾರ ಓಣಿ, ಕುಂಬಾರ ಓಣಿ, ನೇಕಾರರ ಓಣಿ, ಅಂಬಿಗರ ಓಣಿ, ಹಡಪದರ ಓಣಿ, ಮಡಿವಾಳರ ಓಣಿ, ಸಮಗಾರ ಓಣಿ, ಮಾದಿಗಗೇರಿ, ಹೊಲಗೇರಿ ಮುಂತಾದ ಓಣಿಗಳಿದ್ದವು. ಅವರೆಲ್ಲ ತಮ್ಮ ತಮ್ಮ ಕಾಯಕಜೀವಿಗಳ ಜೊತೆ ಬದುಕುತ್ತಿದ್ದರು. ಅವರ ಕಾಯಕಗಳೆಲ್ಲ ಜಾತಿಗಳಾಗಿ ಮಾರ್ಪಟ್ಟವು. ಅವರೆಲ್ಲ ಬಡವರೇ ಆಗಿದ್ದರು. ಪ್ರತ್ಯೇಕವಾಗಿ ಬದುಕುತ್ತ ಉಳಿದ ಕಾಯಕ ಜೀವಿಗಳ ಜೊತೆ ವ್ಯಾವಹಾರಿಕ ಸಂಬಂಧ ಮಾತ್ರ ಇಟ್ಟುಕೊಂಡಿದ್ದರು. ಬಸವಣ್ಣನವರು ಈ ಬಡವರನ್ನೆಲ್ಲ ಒಂದುಗೂಡಿಸಿ ‘ಶರಣಸಂಕುಲ’ ಎಂಬ ಮಾದರಿ ಸಮಾಜ ಸ್ಥಾಪಿಸಿದರು. ಸರ್ವ ಮಾನವರು ಜೊತೆಯಾಗಿ ಮತ್ತು ಲಿಂಗವಂತರಾಗಿ ಬದುಕುವ ಸ್ಥಳ ಇದಾಯಿತು.
ಶರಣ ಸಂಕುಲದಲ್ಲಿ ಕುಲಗಳಿಲ್ಲ, ಜಾತಿಗಳಿಲ್ಲ, ಅಸ್ಪಶ್ಯತೆ ಇಲ್ಲ, ಲಿಂಗಭೇದವಿಲ್ಲ, ವರ್ಗಭೇದವಿಲ್ಲ, ಇಂದಿಂಗೆ ನಾಳಿಂಗೆ ಎನ್ನುವ ಸಂಗ್ರಹ ಬುದ್ಧಿಗೆ ಅನುಮತಿ ಇಲ್ಲ. ರಾಜಪುತ್ರರೇ ಆಗಿರಬಹುದು, ವೇಶ್ಯಾಪುತ್ರರೇ ಆಗಿರಬಹುದು, ಇಷ್ಟಲಿಂಗ ಧಾರಣೆ ಮಾಡಿದವರೆಲ್ಲ ಸಮಾನರಾಗಿದ್ದರು.
ಬಸವಣ್ಣನವರ ಮಾರ್ಗದರ್ಶನದಲ್ಲಿ ಕಂಡುಕೊಂಡ ಈ ಜೀವನವಿಧಾನಕ್ಕೆ ಬಸವಧರ್ಮ, ಶರಣಧರ್ಮ, ಕಾಯಕಜೀವಿಗಳ ಧರ್ಮ, ಲಿಂಗವಂತ ಧರ್ಮ, ಲಿಂಗಾಯತ ಧರ್ಮ ಎಂದು ಮುಂತಾಗಿ ಕರೆಯುತ್ತೇವೆ. ಬಸವಣ್ಣನವರ ಈ ಚಿಂತನಾಕ್ರಮ ದೇಶದಲ್ಲಿ ಜಾತಿ ಮತ್ತು ವರ್ಣವ್ಯವಸ್ಥೆಯನ್ನು ತಿರಸ್ಕರಿಸಿದ ಮೊದಲ ಏಕದೇವೋಪಾಸನೆಯ ಧರ್ಮವಾಯಿತು. ಬಸವಣ್ಣನವರು ಪುಣ್ಯ, ಪಾಪ, ಸ್ವರ್ಗ, ನರಕ, ಮೋಕ್ಷ, ಪುನರ್ಜನ್ಮ, ಜಾತಿ ಮತ್ತು ಅಸ್ಪಶ್ಯತೆಯೊಂದಿಗೆ ಅಸಹಾಯಕರನ್ನು ಜನ್ಮಜನ್ಮಾಂತರಗಳ ಬಲೆಯಲ್ಲಿ ಸಿಗಿಸುವ ಇಡೀ ಕರ್ಮಸಿದ್ಧಾಂತವನ್ನು ಅಲ್ಲಗಳೆದರು. ಮರ್ತ್ಯಲೋಕವೆಂಬುದು ಕರ್ತಾರನ ಕಮ್ಮಟವೆಂದು ಸಾರುವ ಮೂಲಕ ಇಡೀ ಪೃಥ್ವಿಯೇ ಪವಿತ್ರ ಕ್ಷೇತ್ರ ಎಂಬುದನ್ನು ಸೂಚಿಸಿದರು. ಭಕ್ತರ ಅಂಗಳವೇ ವಾರಣಾಸಿ ಎಂದರು. ಇಷ್ಟಲಿಂಗ ಪೂಜೆ ಮತ್ತು ಕಾಯಕ ಮಾತ್ರ ಪ್ರಮುಖವಾದವು. ಕಾಯಕವೇ ಕೈಲಾಸವಾಯಿತು. ಅರಿವೇ ಗುರು ಆಯಿತು. ದೇವರು ಮಾತ್ರ ಸ್ವಾಮಿ ಎನಿಸಿಕೊಂಡ. ಮಠ ಮಂದಿರಗಳು ಇಲ್ಲವಾದವು. ಮೂರ್ತಿಪೂಜೆ ನಿಂತುಹೋಯಿತು. ಯಾವುದೇ ಖರ್ಚು ಮತ್ತು ಹರಕೆಗಳಿಲ್ಲದ ಇಷ್ಟಲಿಂಗ ಪೂಜೆಯನ್ನು ಮಾತ್ರ ಜಾರಿಗೊಳಿಸಲಾಯಿತು. ಕಾಯಕ, ಪ್ರಸಾದ ಮತ್ತು ದಾಸೋಹ ಪ್ರಜ್ಞೆಯನ್ನು ಗೌರವಿಸಲಾಯಿತು. ಪ್ರಕೃತಿ ಮತ್ತು ಸಮಾಜಕ್ಕೆ ಚ್ಯುತಿ ಬರದಂಥ ಸತ್ಯಶುದ್ಧ ಕಾಯಕದ ಮೂಲಕ ಯೋಗ್ಯವಾದುದನ್ನೇ ಉತ್ಪಾದಿಸುವುದು. ಉತ್ಪಾದನೆಯಿಂದ ಬಂದದ್ದನ್ನು ದೇವರ ಪ್ರಸಾದವೆಂದು ಸ್ವೀಕರಿಸುವುದು. ಪ್ರಸಾದವಾದ ಕಾರಣ ಹಾಳು ಮಾಡದೆ ಸದ್ಬಳಕೆ ಮಾಡುವುದು. ನ್ಯಾಯಬದ್ಧ ಸಾಮಾಜಿಕ ವಿತರಣೆಯ ಪ್ರಜ್ಞೆಯೊಂದಿಗೆ ದಾಸೋಹ ಮಾಡುವುದು. ಸ್ವಂತಕ್ಕೆ ಸಂಪತ್ತಿನ ಕ್ರೋಡೀಕರಣ ಮಾಡದೆ ‘ಶಿವನಿಧಿ’ ಎಂಬ ಸಾಮಾಜಿಕ ನಿಧಿಗೆ ಅರ್ಪಿಸುವುದು. ಆ ಮೂಲಕ ಶರಣ ಸಂಕುಲದಲ್ಲಿ ಯಾರೂ ಹಸಿವಿನಿಂದ, ರೋಗರುಜಿನಗಳಿಂದ ಮತ್ತು ನಿರ್ವಸಿತರಾಗಿ ಬದುಕದಂತೆ ನೋಡಿಕೊಳ್ಳುವುದಕ್ಕಾಗಿ ಇಡೀ ಶರಣಸಂಕುಲವೆಂಬ ಸಮೂಹ ಪ್ರಜ್ಞೆಯ ಸಮತಾ ಸಮಾಜವನ್ನು ಸದಾ ಜಾಗೃತವಾಗಿರುವಂತೆ ನೋಡಿಕೊಳ್ಳುವುದು ಬಸವಣ್ಣನವರ ಉದ್ದೇಶವಾಗಿತ್ತು.
ಅವರು ಮನುಷ್ಯರನ್ನು ಎಲ್ಲ ಜಾಲಗಳಿಂದ ವಿಮೋಚನೆಗೊಳಿಸಿದರು. ಸ್ವರ್ಗ ನರಕಗಳನ್ನು ನಿರಾಕರಿಸುತ್ತ ನಿರಾಕಾರ ದೇವರು ದೇಹದೊಳಗೇ ಇದ್ದಾನೆ ಎಂದು ಸಾರುತ್ತ ಹೊಸ ಜೀವನವಿಧಾನವನ್ನು ತೋರಿಸಿದವರು ಬಸವಣ್ಣನವರು. ಅದುವೇ ಲಿಂಗಾಯತ ಧರ್ಮ ಎಂದು ಕರೆಯಿಸಿಕೊಂಡಿತು. ತರ್ಕಹೀನವಾದ ಎಲ್ಲವನ್ನೂ ಅಲ್ಲಗಳೆಯುತ್ತ ಅಗಮ್ಮ, ಅಗೋಚರ, ಅಪ್ರತಿಮ, ಅಪ್ರಮಾಣನಾದ ದೇವರು ಅಂತಃಸಾಕ್ಷಿಯ ರೂಪದಲ್ಲಿ ಮನುಷ್ಯರೊಳಗೇ ಇದ್ದಾನೆ ಎಂದು ಹೇಳುವ ಧರ್ಮ ಜಗತ್ತಿನಲ್ಲಿ ಇನ್ನೊಂದಿಲ್ಲ. ಏಕೈಕ ನಿರಾಕಾರ ದೇವರ ಬಗ್ಗೆ ಹೇಳುವ ಧರ್ಮಗಳು ಅನೇಕ ಇದ್ದರೂ ಅವು ಸ್ವರ್ಗ ನರಕಗಳನ್ನು ನಂಬುತ್ತವೆ. ಬಸವಣ್ಣನವರು ಸಕಲಜೀವಾತ್ಮರಿಗೆ ಲೇಸನ್ನೇ ಬಯಸುವಂಥ ದಯಾ ಪ್ರಜ್ಞೆಯ ಇಂಥ ಅದ್ವಿತೀಯ ಧರ್ಮದ ಮೂಲ ಪುರುಷರಾದರು.
ಬಸವಣ್ಣನವರ ಸಮೂಹ ಜ್ಞಾನ ಅಪ್ರತಿಮವಾದುದು. ಈ ಒಂದು ಜೀವನವಿಧಾನ ರೂಪುಗೊಳ್ಳುವಲ್ಲಿ ಸರ್ವ ಸಮಾಜಗಳ ಪಾಲೂ ಇದೆ. ಎಲ್ಲ ಸಮುದಾಯಗಳಿಂದ ತಾವು ಅನುಭವ ಪಡೆದು ಹೊಸ ಚಿಂತನವಿಧಾನವನ್ನು ರೂಪಿಸಿದ್ದರ ಬಗ್ಗೆ ಬಸವಣ್ಣ ನವರು ಬಹಳ ಮಾರ್ಮಿಕವಾಗಿ ಹೇಳಿದ್ದಾರೆ. ‘‘ಸಕಲ ಪುರಾತರು ಭಕ್ತಿಭಿಕ್ಷೆಯನಿಕ್ಕಿದೊಡೆ ಎನ್ನ ಪಾತ್ರೆ ತುಂಬಿತ್ತು’’ ಎಂದು ತಿಳಿಸಿದ್ದಾರೆ.
ಬಸವಣ್ಣನವರು ಸರ್ವಸಮಾಜಗಳಿಂದ 770 ಅಮರಗಣಂಗಳ ನಾಯಕತ್ವದಲ್ಲಿ ಅನುಭವ ಮಂಟಪ ಸ್ಥಾಪಿಸಿದರು. ಅದು ಸಮಾಜೋ ಧಾರ್ಮಿಕ ಚಿಂತನೆಗಳ ಕೇಂದ್ರವಾಗಿತ್ತು. ಸಂಸತ್ತಿನ ರೀತಿಯಲ್ಲಿ ಕಲಾಪಗಳು ನಡೆಯುತ್ತಿದ್ದ ಕಾರಣ ಅಲ್ಲಿನ ಚಿಂತನೆಗಳನ್ನು ಪ್ರಸಾರ ಮಾಡಲು ಲಕ್ಷದ ಮೇಲೆ ತೊಂಭತ್ತಾರು ಸಾವಿರ ಶರಣರಿದ್ದರು. ಅವರನ್ನು ಜಂಗಮರೆಂದು ಕರೆಯಲಾಯಿತು. ಅನುಭವ ಮಂಟಪದ ಚಿಂತನ ಮಂಥನದ ಮೂಸೆಯಲ್ಲಿ ಪರಿಷ್ಕೃತವಾದ ವಚನಗಳನ್ನು ಪ್ರಸಾರ ಮಾಡುವುದು ಅವರ ಕರ್ತವ್ಯವಾಯಿತು. ಈ ಪ್ರಕಾರ ಹೊಸ ಜೀವನವಿಧಾನ ಬಹಳ ಬೇಗ ದೂರದೂರದ ಜನಸಮುದಾಯಗಳಿಗೆ ತಲುಪಿತು. ಶರಣ ತತ್ವಕ್ಕೆ ಮನಸೋತು ಆಸೇತು ಹಿಮಾಚಲದಿಂದ ಜನರು ಕಲ್ಯಾಣಕ್ಕೆ ಬಂದು ಶರಣರಾದರು. ಬಸವ ಸಂಸ್ಕೃತಿಯಿಂದಾಗಿ ಮೊದಲ ಬಾರಿಗೆ ಭಾರತದ ಉದ್ದಗಲಗಳ ಜನ ಒಂದುಗೂಡಿದರು. ಇಂಥ ಒಂದು ಪ್ರಕ್ರಿಯೆ ಭಾರತದ ಇತಿಹಾಸದಲ್ಲಿ ಹಿಂದೆಂದೂ ನಡೆದಿರಲಿಲ್ಲ.
ಹಾಗೆ ನೋಡಿದರೆ ಜಗತ್ತಿನಲ್ಲಿ ಮುಖ್ಯವಾಗಿ ‘ಹೊರಹಾಕುವ ಸಂಸ್ಕೃತಿ ಮತ್ತು ಒಳಗೊಳ್ಳುವ ಸಂಸ್ಕೃತಿ’ ಎಂಬ ಎರಡೇ ಪ್ರಕಾರದ ಸಂಸ್ಕೃತಿಗಳಿವೆ. ಜಾತಿ, ಅಸ್ಪಶ್ಯತೆ, ಶೋಷಣೆ ಮುಂತಾದ ಅನಿಷ್ಟಗಳನ್ನೊಳಗೊಂಡಂಥ ಮನುಸ್ಮತಿಯನ್ನು ನೆಚ್ಚಿಕೊಂಡ ಮನುವಾದಿಗಳು ಹೊರಹಾಕುವ ಸಂಸ್ಕೃತಿಯವರು. ಕೇವಲ ಜೀವಕಾರುಣ್ಯದ ಮೇಲೆ ನಿಂತ ಬಸವ ಸಂಸ್ಕೃತಿಯನ್ನು ಪಾಲಿಸುವವರು ಒಳಗೊಳ್ಳುವ ಸಂಸ್ಕೃತಿಯವರು.
ಬಸವಣ್ಣನವರ ಒಳಗೊಳ್ಳುವ ಸಂಸ್ಕೃತಿಯು ಸಹಸ್ರಾರು ವರ್ಷಗಳಿಂದ ಬೇರುಬಿಟ್ಟಿದ್ದ ಹೊರಹಾಕುವ ಸಂಸ್ಕೃತಿಯ ಮೇಲೆ ಭಾರೀ ಗದಾಪ್ರಹಾರ ಮಾಡಿತು. ತುಳಿತಕ್ಕೊಳಗಾದ ಜನರ ಒಗ್ಗಟ್ಟಿನ ಪರಿಣಾಮ ಅದಾಗಿತ್ತು. ಕಾಯಕಜೀವಿಗಳ ಆ ಚಳವಳಿ ಬದುಕಿನ ಎಲ್ಲ ರಂಗಗಳಲ್ಲಿ ಹೊಸ ಸಂಸ್ಕೃತಿಯ ಪ್ರಭಾವ ಬೀರಿತು. ಎಲ್ಲ ರೀತಿಯಿಂದಲೂ ಮಾನವನ ವಿಮೋಚನೆಯ ಮಾರ್ಗ ತೋರಿಸಿತು. ಕಂದಾಚಾರಗಳನ್ನು ತಿರಸ್ಕರಿಸಿತು. ಪ್ರತಿಶತ 90ಕ್ಕೂ ಹೆಚ್ಚಿಗೆ ಇದ್ದ ದುಡಿಯವ ಜನರ ಬದುಕಿನಲ್ಲಿ ಆಶಾಕಿರಣಗಳು ಮೂಡಿದವು. ಅವರು ಇಷ್ಟಲಿಂಗ ಪೂಜೆಯಲ್ಲಿ ನಂಬಿಕೆ ಇಟ್ಟು ಎಲ್ಲ ದೇವರುಗಳನ್ನು ದೂರ ಸರಿಸಿದರು. ಎಲ್ಲ ತೀರ್ಥಕ್ಷೇತ್ರಗಳಿಂದ ದೂರ ಉಳಿದರು. ಇಷ್ಟಲಿಂಗ ತಮ್ಮೊಳಗಿನ ಆತ್ಮಸಾಕ್ಷಿಯ ಪ್ರತೀಕವಾಗಿರುವುದರಿಂದ ದೇವರಿಗೆ ಬೇಡಿಕೊಳ್ಳುವ ಪ್ರಸಂಗವೂ ಬರುವುದಿಲ್ಲ. ಎಲ್ಲವನ್ನೂ ಕಾಯಕದ ಮೂಲಕವೇ ಪಡೆಯಬೇಕು ಎಂಬ ಛಲ ಅವರ ಜೀವನವಿಧಾನವನ್ನೇ ಬದಲಿಸಿತು. ‘ಕಲ್ಯಾಣದಲ್ಲಿ ಕೊಡುವವರುಂಟು ಬೇಡುವವರಿಲ್ಲ’ ಎಂಬ ವಾತಾವರಣ ನಿರ್ಮಾಣವಾಗಬೇಕಾದರೆ ಅದು ಎಂಥ ಪುನರುಜ್ಜೀವನದ ಕಾಲ ಆಗಿರಬಹುದು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.
‘‘ವೇದ ಶಾಸ್ತ್ರ ಆಗಮಂಗಳನೋದಿದವರು ಹಿರಿಯರೆ?
ಕವಿ ಗಮಕಿ ವಾದಿ ವಾಗ್ಮಿಗಳು ಹಿರಿಯರೆ?
ನಟಿನಿ, ಬಾಣ, ವಿಲಾಸಿ, ಸುವಿದ್ಯವ ಕಲಿತ ಡೊಂಬನೇನು ಕಿರಿಯನೆ?
ಹಿರಿಯತನವಾವುದೆಂದಡೆ ಗುಣಜ್ಞಾನ, ಆಚಾರಧರ್ಮ
ಕೂಡಲಸಂಗನ ಶರಣರು ಸಾಧಿಸಿದ ಹಿರಿಯತನ’’
ಬಸವಣ್ಣನವರು ಹೊರಹಾಕುವ ಮತ್ತು ಒಳಗೊಳ್ಳುವ ಸಂಸ್ಕೃತಿಗಳ ಎರಡು ವಿಭಾಗಗಳನ್ನು ಈ ವಚನದಲ್ಲಿ ಮಾಡಿದ್ದಾರೆ. ಹೊರಹಾಕುವ ಸಂಸ್ಕೃತಿಯ ವೇದ ಶಾಸ್ತ್ರ ಆಗಮಗಳನ್ನು ಓದುವವರು ಹಿರಿಯರೇ? ಎಂದು ಅವರು ಪ್ರಶ್ನಿಸುತ್ತಾರೆ. ಅಂಥವರನ್ನು ಒಪ್ಪಿಕೊಳ್ಳುವ ಕವಿ, ಗಮಕಿ, ವಾದಿ, ವಾಗ್ಮಿಗಳು ಅದು ಹೇಗೆ ಹಿರಿಯರಾಗುವರು ಎಂದು ಕೇಳುತ್ತಾರೆ. ಒಳಗೊಳ್ಳಬಯಸುವ ಸಂಸ್ಕೃತಿಯ ತುಳಿತಕ್ಕೊಳಗಾದ ಬೀದಿ ನರ್ತಕಿಯರು, ಬಿಲ್ವಿದ್ಯೆಯ ಪರಿಣತರು, ಹಾಸ್ಯಗಾರರು, ಡೊಂಬರು ಮುಂತಾದ ಬಡವರು ಕಿರಿಯರೇ? ಎಂದು ಎಚ್ಚರಿಸುತ್ತಾರೆ. ಇಂಥ ನಿತ್ಯ ಬದುಕಿನ ಅನುಭವದಿಂದ ಪ್ರತಿಭೆಯನ್ನು ಸಾಧಿಸಿದ ಜನಸಮುದಾಯಗಳನ್ನು ಒಗ್ಗೂಡಿಸಿದ ಗುಣಗ್ರಾಹಿ ಜ್ಞಾನಿಗಳೆಂದರೆ ಶರಣರು. ಹೀಗೆ ಮಾನವ ಏಕತೆಯ ಅರಿವನ್ನು ಆಚರಣೆಗೆ ತರುವುದೇ ಆಚಾರಧರ್ಮ. ಬಸವಣ್ಣನವರು ಮತ್ತು ಅವರ ಸಂಗಾತಿಗಳಾದ ಶರಣರು ಸಾಧಿಸಿದ ಒಳಗೊಳ್ಳುವ ಸಂಸ್ಕೃತಿಯ ಸಾಧನೆ ಇದಾಗಿದೆ. ಇದುವೇ ನಿಜವಾದ ಹಿರಿಯತನ.
15 ಮತ್ತು 16ನೇ ಶತಮಾನಗಳಲ್ಲಿ ಯುರೋಪಿನಲ್ಲಿ ನವೋದಯ (ರಿನೈಜನ್ಸ್) ಚಳವಳಿ ಪ್ರಾರಂಭವಾಯಿತು. ಅದು ಸಾಂಸ್ಕೃತಿಕ ಪುನರುಜ್ಜೀವನದ ಕಲಿಕೆಯ ಚಳವಳಿಯಾಗಿತ್ತು. ಮಧ್ಯಯುಗದ ಸಾಂಪ್ರದಾಯಿಕ ವ್ಯವಸ್ಥೆಯಿಂದ ಆಧುನಿಕ ಬದುಕಿಗೆ ತೆರೆದುಕೊಳ್ಳುವ ಈ ಚಳವಳಿ ಕಲೆ, ಸಾಹಿತ್ಯ ಮುಂತಾದ ವಿವಿಧ ಕ್ಷೇತ್ರಗಳೂ ಸೇರಿದಂತೆ ಎಲ್ಲಡೆ ಬೃಹತ್ ಸಾಮಾಜಿಕ ಬದಲಾವಣೆಗೆ ಅವಕಾಶ ಕಲ್ಪಿಸಿತು.
1685ರಿಂದ 1815ರವರೆಗೆ ಯುರೋಪಿನಲ್ಲಿ ಬೌದ್ಧಿಕ ಮತ್ತು ಆಧ್ಯಾತ್ಮಿಕ ಚಳವಳಿ ಪ್ರಾರಂಭವಾಯಿತು. ಅದು ಜ್ಞಾನೋದಯ (ಎನ್‌ಲೈಟನ್ಮೆಂಟ್) ಚಳವಳಿ ಎಂದು ಪ್ರಸಿದ್ಧವಾಯಿತು. ಸಮಾನತೆ, ವ್ಯಕ್ತಿಸ್ವಾತಂತ್ರ್ಯ, ವೈಜ್ಞಾನಿಕ ಮನೋಭಾವ ಮತ್ತು ವೈಚಾರಿಕತೆಯ ಜೊತೆಗೆ ಎಲ್ಲವನ್ನೂ ಪ್ರಶ್ನಿಸುವ ವಾತಾವರಣ ಸೃಷ್ಟಿಸುವುದು ಈ ಚಳವಳಿಯ ಮುಖ್ಯ ಉದ್ದೇಶವಾಗಿತ್ತು. ಧರ್ಮ ಮತ್ತು ರಾಜಕಾರಣದ ಮಧ್ಯದ ಸಂಬಂಧವನ್ನು ಈ ಚಳವಳಿ ಅಲ್ಲಗಳೆಯಿತು. ಜಾತ್ಯತೀತ ಮನೋಭಾವ ಬೆಳೆಸಿತು.
ಯುರೋಪಿನಲ್ಲಿ ನಡೆದ ರಿನೈಜನ್ಸ್ ಮತ್ತು ಎನ್‌ಲೈಟನ್ಮೆಂಟ್ ಚಳವಳಿಗಳ ಲಕ್ಷಣಗಳನ್ನು ಬಸವಣ್ಣನವರ ವಚನ ಚಳವಳಿ ಒಳಗೊಂಡಿದೆ. ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪ ಸಾಂಸ್ಕೃತಿಕ ಪುನರುಜ್ಜೀವನದ ಕೇಂದ್ರ ಬಿಂದುವಾಯಿತು. ಜಾತಿ, ಮತಗಳನ್ನು ತೊರೆದ ಎಲ್ಲ ಕಾಯಕಜೀವಿಗಳು ಮತ್ತು ಇತರ ವಿಚಾರವಾದಿಗಳ ಚಿಂತನ ಮಂಥನದ ಸ್ಥಾನ ಅದಾಯಿತು. ದಲಿತರು, ಕಾಯಕಜೀವಿಗಳು ಮಹಿಳೆಯರು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಅನುಭವಿಸಿದರು. ಪತ್ನಿಯರು ತಮ್ಮ ಪತಿಯನ್ನು ಪ್ರಶ್ನಿಸಿದರು. ಯಾರು ಬೇಕಾದರೂ ಬಸವಣ್ಣನವರನ್ನು ಕೂಡ ಪ್ರಶ್ನಿಸುವ ವಾತಾವರಣ ಸೃಷ್ಟಿಯಾಯಿತು. ಸ್ವತಃ ಕಲ್ಯಾಣದ ಪ್ರಧಾನಿಯೂ ಆಗಿದ್ದ ಬಸವಣ್ಣನವರು ಧರ್ಮ ಮತ್ತು ರಾಜಕಾರಣ ಒಂದಾಗದಂತೆ ನೋಡಿಕೊಂಡರು. ಬಿಜ್ಜಳನ ಭಂಡಾರವೆನಗೇಕಯ್ಯಾ ಎಂದು ಸಾರಿದರು. ಕಾಯಕ ಜೀವಿಗಳ ಉತ್ಪನ್ನಗಳು ಉತ್ಕೃಷ್ಟ ಮಟ್ಟವನ್ನು ಹೊಂದಿದವು. ಕುಂಬಾರ ಗುಂಡಯ್ಯನವರು ತಾವು ತಯಾರಿಸಿದ ಮಡಕೆಯ ಗುಣಮಟ್ಟವನ್ನು ಪರೀಕ್ಷಿಸಲು ಬಾರಿಸಿದಾಗ ಕೈಲಾಸದಲ್ಲಿನ ಶಿವನು ಅದರ ನಾದ ಮತ್ತು ಲಯಬದ್ಧವಾಗಿ ಬಾರಿಸುವ ಕ್ರಮದಿಂದಾಗಿ ನಾಟ್ಯವಾಡಲು ಪ್ರಾರಂಭಿಸಿದನು ಎಂದು ಜನಪದರು ಹಾಡಿದ್ದಾರೆ. ಈ ಹಾಡು ಕಾಯಕಜೀವಿಗಳ ಕಲಾತ್ಮಕ ಮತ್ತು ಉತ್ತಮ ಗುಣಮಟ್ಟದ ಉತ್ಪನ್ನಗಳ ಪ್ರತೀಕವಾಗಿದೆ.
ಬಸವಣ್ಣನವರು ಒಲಿದಂತೆ ಹಾಡುವುದಾಗಿ ತಿಳಿಸಿದ್ದಾರೆ. ಬಹುರೂಪಿ ಚೌಡಯ್ಯನವರು ಸಮೂಹ ನೃತ್ಯದ ಮೂಲಕ ಶರಣರ ವಿನೂತನ ತತ್ವಗಳನ್ನು ಪ್ರಚಾರ ಮಾಡಿದರು. ವಿವಿಧ ವಾದ್ಯಗಳನ್ನು ನುಡಿಸುವ ಪರಿಣತರು ಶರಣ ಸಮೂಹದಲ್ಲಿ ಇದ್ದರು. ವೈದ್ಯರು, ರೈತರು ಮುಂತಾದವರು ತಮ್ಮ ಕಾಯಕದಲ್ಲಿ ಹೊಸತನ ತೋರಿಸಿದರು. ಪ್ರತಿಯೊಬ್ಬರ ಕಾಯಕಕ್ಕೆ ಗೌರವ ಮೂಡಿತು. ಅನುಭವ ಮಂಟಪದ ಚಿಂತನ ಮಂಥನದಲ್ಲಿ ಅನುಭಾವ ಎಂಬ ಹೊಸ ದರ್ಶನದ ಉದ್ಭವವಾಯಿತು. ಇದು ಕಾಯಕಜೀವಿಗಳ ತತ್ವಜ್ಞಾನವೆನಿಸಿತು.
ಆತ್ಮಾನುಸಂಧಾನದ ಇಷ್ಟಲಿಂಗವು ವ್ಯಕ್ತಿ ಸ್ವಾಂತಂತ್ರ್ಯ ಸಂಕೇತವಾಗಿದ್ದು ಲೋಕಾನುಸಂಧಾನದ ಜಂಗಮಲಿಂಗವು ಸಾಮಾಜಿಕ ಜವಾಬ್ದಾರಿಯ ಸಂಕೇತವಾಗಿದೆ. ಹೀಗೆ ಬಸವಣ್ಣನವರು ಶರಣಸಂಕುಲವೆಂಬ ಸರ್ವಸಮತ್ವ ಸಮಾಜದ ರೂವಾರಿಗಳಾದರು. ಅಂಥ ಸಮಾಜಕ್ಕೆ ಬೇಕಾದ ನೀತಿ ಮತ್ತು ನ್ಯಾಯದ ರೂಪುರೇಷೆಗಳನ್ನು ವಚನಗಳ ಮೂಲಕ ಸೂಚಿಸಿದರು. ಇತರ ಶರಣರೂ ಆ ಮಾರ್ಗದಲ್ಲಿ ವಚನ ರಚನೆ ಮಾಡುವಂಥ ವಾತಾವರಣ ಸೃಷ್ಟಿಸಿದರು. ಆ ಮೂಲಕ ಸಾಂಸ್ಕೃತಿಕ ಸಂವಿಧಾನ ಶಿಲ್ಪಿ ಎಂಬ ಕೀರ್ತಿಗೆ ಪಾತ್ರರಾದರು.
1215ರಲ್ಲಿ ಇಂಗ್ಲೆಂಡ್ ದೊರೆ ಜಾನ್ ಮತ್ತು ಜಮೀನುದಾರರ ಮಧ್ಯೆ ಮ್ಯಾಗ್ನಾಕಾರ್ಟಾ ಒಪ್ಪಂದವಾಯಿತು. ಆ ಒಪ್ಪಂದದ ಪ್ರಕಾರ ರಾಜನ ಹಕ್ಕುಗಳು ಮೊಟಕುಗೊಂಡವು. ಇದರಿಂದ ಲಾಭವಾದದ್ದು ಜಮೀನುದಾರರಿಗೆ ಮಾತ್ರ. ಆದರೆ ಈ ಒಪ್ಪಂದಕ್ಕಿಂತ ಅರ್ಧ ಶತಮಾನಕ್ಕೂ ಮುಂಚೆಯೇ ನೀತಿ ಮತ್ತು ನ್ಯಾಯಬದ್ಧ ಬಸವಣ್ಣನವರ ವಚನಗಳ ಸೃಷ್ಟಿಯಾಗಿತ್ತು. ಮಾನವ ಹಕ್ಕು ಮತ್ತು ಕರ್ತವ್ಯಗಳನ್ನೊಳಗೊಂಡ ಬಸವಾದಿ ಶರಣರ ವಚನಗಳಿಂದಲೇ ಜಗತ್ತಿನಲ್ಲಿ ಮೊದಲ ಬಾರಿಗೆ ಸಂವಿಧಾನದ ಕಲ್ಪನೆ ಮೂಡಿತು. ವಿಶ್ವಸಂಸ್ಥೆಯ ಮಾನವಹಕ್ಕುಗಳು ಮತ್ತು ನಮ್ಮ ಸಂವಿಧಾನದ ಆಶಯಗಳು ಬಸವಣ್ಣನವರ ವಚನಗಳಲ್ಲಿ ಅಡಕವಾಗಿದ್ದರಿಂದಲೇ ವಚನಕಟ್ಟುಗಳಿಗೆ ‘ವಚನ ಸಂವಿಧಾನ’ ಎಂದು ಕರೆಯಬೇಕು. ಅಭೂತಪೂರ್ವವಾದ ವಚನ ಚಳವಳಿಯ ಕಾರಣದಿಂದಲೇ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಕರೆಯುತ್ತೇವೆ.
ಸಾಂಸ್ಕೃತಿಕ ನಾಯಕನಿಗೆ ಇರಬೇಕಾದ ಎಲ್ಲ ಲಕ್ಷಣಗಳೂ ಬಸವಣ್ಣನವರಲ್ಲಿ ಇವೆ. ಸಾಂಸ್ಕೃತಿಕ ನಾಯಕರಾದವರು ಸಂಸ್ಕೃತಿಗೆ ಗಮನಾರ್ಹ ಕೊಡುಗೆ ನೀಡಬೇಕಾಗುತ್ತದೆ. ಆದರೆ ಬಸವಣ್ಣನವರು ಕಾಯಕಜೀವಿಗಳ ಅನುಭವದ ಮೂಲಕ ಹೊಸ ಮಾನವೀಯ ಸಂಸ್ಕೃತಿಯನ್ನೇ ನಿರ್ಮಿಸಿದರು. ಅವರು ಸಮತಾ ಸಮಾಜದ ನೀಲನಕ್ಷೆ ತಯಾರಿಸಿದ ದೃಷ್ಟಾರರಾಗಿದ್ದರು. ಮನುವಾದಿ ಜಡ ವ್ಯವಸ್ಥೆಯನ್ನು ತಿರಸ್ಕರಿಸಿದರು. ಶರಣಸಂಕುಲದ ಮೂಲಕ ಸಮತಾ ಸಮಾಜದ ಜೀವನ ವಿಧಾನವನ್ನೇ ಕಂಡುಹಿಡಿದರು. ಸೃಜನಶೀಲ ಮತ್ತು ಅಂತಃಸಾಕ್ಷಿಯ ಭಾಷೆಯ ಮೂಲಕ ಜನಮನವನ್ನು ಗೆದ್ದರು. ಅವರು ಜನಸಮುದಾಯದ ಆಕರ್ಷಣೆಯ ಕೇಂದ್ರವಾಗಿದ್ದರು. ಆದರೆ ಸಮೂಹ ನಾಯಕತ್ವದ ಮೂಲಕ ಹೊಸ ವ್ಯವಸ್ಥೆಯ ಕಡೆಗೆ ಜನಸಮೂಹವನ್ನು ಕೊಂಡೊಯ್ಯುವ ಮಾದರಿ ನಾಯಕರಾದರು. ಎಂಥ ಪ್ರಸಂಗದಲ್ಲೂ ನಡೆ ನುಡಿ ಸಿದ್ಧಾಂತಕ್ಕೆ ಬದ್ಧರಾಗಿ ‘ಮರಣವೇ ಮಹಾನವಮಿ’ ಎಂದರು. ಸಾಂಸ್ಕೃತಿಕ ನಾಯಕನಿಗೆ ಇರಬೇಕಾದ ಇಂಥ ಗುಣಗಳಿಂದಾಗಿ ಅವರು ಅಮರರಾಗಿದ್ದಾರೆ. ಎಂಟು ಶತಮಾನ ಕಳೆದರೂ ಅವರ ಪ್ರಭಾವ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದೆ. ಹೊಸ ಸಮಾಜ ನಿರ್ಮಾಣದಲ್ಲಿ ಅವರ ಧೈರ್ಯ ಎಂದಿಗೂ ಮರೆಯುವಂಥದ್ದಲ್ಲ. ಅವರು ಮಹಾಜ್ಞಾನಿಯಾಗಿದ್ದರು. ಅವರ ನಿರ್ಧಾರಗಳು ಅಚಲವಾಗಿದ್ದವು. ಅವರು ತತ್ವನಿಷ್ಠರೂ, ಸಕಲರನ್ನು ಗೌರವದಿಂದ ಕಾಣುವವರೂ ಆಗಿದ್ದರು. ಜನರು ಕೂಡಲೇ ಅವರ ಘನವ್ಯಕ್ತಿತ್ವದ ಪ್ರಭಾವಕ್ಕೆ ಒಳಗಾಗುತ್ತಿದ್ದರು. ಅವರ ದಾರ್ಶನಿಕ ಔನತ್ಯ ಮತ್ತು ಜ್ಞಾನಪೂರ್ಣ ನಡವಳಿಕೆ ಲೋಕಮಾನ್ಯವಾಗಿದ್ದವು. ಮಾನವ ಹಕ್ಕುಗಳ ರಕ್ಷಣೆಯೇ ಅವರ ಬದುಕಿನ ಗುರಿಯಾಗಿತ್ತು. ಅವರು ಆದರ್ಶಗಳ ಸಾಕಾರ ಮೂರ್ತಿಯಾಗಿದ್ದರು. ಸಾಂಸ್ಕೃತಿಕ ನಾಯಕರಿಗೆ ಇರಬೇಕಾದ ಇಂಥ ಎಲ್ಲ ಗುಣಗಳನ್ನು ಬಸವಣ್ಣನವರು ಹೊಂದಿದ್ದರು.
ಅಂತೆಯೇ ಅವರಿಗೆ ಹೊರಹಾಕುವ ಸಂಸ್ಕೃತಿಯ ವಿರುದ್ಧ ಒಳಗೊಳ್ಳುವ ಸಂಸ್ಕೃತಿಯನ್ನು ಕಾಯಕಜೀವಿಗಳ ಸಮೂಹ ಜ್ಞಾನ ಮತ್ತು ಶಕ್ತಿಯ ಮೂಲಕ ಕಾರ್ಯಗತಗೊಳಿಸಲು ಸಾಧ್ಯವಾಯಿತು. ಹೀಗೆ ಅವರು ಮೇದಿನಿಗೆ ಹೊಸ ಬೆಳಕು ತಂದರು ಎಂದು ಜನಪದರು ಕೊಂಡಾಡಿದ್ದಾರೆ. ಈ ಹೊಸ ಬೆಳಕಿನಲ್ಲಿ ದೇಶ ಮುನ್ನಡೆಯಬೇಕಿದೆ.
ಸಾಧು ಸಾಧಲೆ ಬಸವ ಓದು ಕಲಿಯಿತು ಜನವು
ಹೋದ ಹೋದಲ್ಲಿ ಹೊಸ ಮಾತು| ಕೇಳಿದವು
ಮೇದಿನಿಗೆ ಬಂತು ಹೊಸಬೆಳಕು.