ಉದ್ಯಾನದ ಸೌಂದರ್ಯ ಹೆಚ್ಚಿಸಲು 20ಕ್ಕೂ ಹೆಚ್ಚು ಮರಗಳ ಕಡಿತ: ಪರಿಸರ ಪ್ರಿಯರ ಆಕ್ರೋಶ

ಹೊಸಕೋಟೆ: ಪಾರ್ಕ್‌ಗೆ ಅಡ್ಡವಾಗಿದೆ ಎಂಬ ನೆಪವೊಡ್ಡಿ ಹತ್ತಾರು ವರ್ಷಗಳಿಂದ ರಸ್ತೆ ಬದಿಯಲ್ಲಿ ಬೆಳೆದು ನಿಂತಿದ್ದ 20ಕ್ಕೂ ಹೆಚ್ಚು ಮರಗಳ ಮಾರಣ ಹೋಮ ನಡೆಸಿದ್ದರೂ, ಅರಣ್ಯ ಇಲಾಖೆ ಕಣ್ಣುಮುಚ್ಚಿ ಮೌನಕ್ಕೆ ಶರಣಾಗುತ್ತಿದೆ ಎಂದು ಪರಿಸರ ಪ್ರಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು-ಚಿಂತಾಮಣಿ ರಾಜ್ಯ ಹೆದ್ದಾರಿಯಲ್ಲಿ ಸದ್ದಿಲ್ಲದೆ 20ಕ್ಕೂ ಹೆಚ್ಚು ಕಾರ್ಖಾನೆಗಳು ನಿರ್ಮಾಣಗೊಂಡಿದ್ದು, ಸುತ್ತಲಿನ ಪ್ರದೇಶದ ರಸ್ತೆ ಬದಿಯಲ್ಲಿದ್ದ ನೂರಾರು ಮರಗಳ ಸಂಖ್ಯೆ ದಿನಂಪ್ರತಿ ಕ್ಷೀಣಿಸುತ್ತಿದೆ. ಅಭಿವೃದ್ಧಿ, ಸುರಕ್ಷತೆ, ಕಾರ್ಖಾನೆ, ವೇರ್ ಹೌಸ್, ಪಾರ್ಕ್ ಕಾಣುವುದಿಲ್ಲವೆಂದು ಮರ ಕತ್ತರಿಸುವ ಸಂಸ್ಕೃತಿ ದಿನೇ ದಿನೆ ಹೆಚ್ಚುತ್ತಿದೆ. ಆದರೂ ಯಾರೂ ಕೇಳುವರಿಲ್ಲದೇ ಪರಿಸರ ಜಾಗೃತಿ ಬದಲು ದುರ್ಗತಿ ಎದುರಾಗುತ್ತಿದೆ.
ನಂದಗುಡಿ ಹೋಬಳಿಯ ಬೆಂಗಳೂರು-ಚಿಂತಾಮಣಿ ರಾಜ್ಯ ಹೆದ್ದಾರಿ ಶಿವನಾಪುರ ಕ್ರಾಸ್ ಬಳಿ ನೂತನವಾಗಿ ನಿರ್ಮಾಣವಾಗುತ್ತಿರುವ ಪ್ರೋಲೋಗಿಸ್ ಇಂಡಸ್ಟ್ರಿಯಲ್ ಪಾರ್ಕ್ ಎದುರು ರಾಜ್ಯ ಹೆದ್ದಾರಿ ಬದಿಯಲ್ಲಿ ಬೆಳೆದಿದ್ದ 20ಕ್ಕೂ ಹೆಚ್ಚು ಬೇವು, ಹುಣಸೆ, ಹಿಪ್ಪೆ, ಆಲ, ಹೊಂಗೆ, ಬೇಲ, ಅರಳಿ, ನೇರಳೆ, ಬೂರುಗ, ಗುಲ್‌ಮೊಹರ್ ಸೇರಿದಂತೆ ವಿವಿಧ ಜಾತಿಯ ಸಾಲು ಮರಗಳನ್ನು ಯಾರ ಅರಿವಿಗೂ ಬಾರದಂತೆ ಬಲಿ ಪಡೆದಿರುವ ಘಟನೆ ಬೆಳಕಿಗೆ ಬಂದಿದೆ.
ಮರಗಿಡ ಬೆಳೆಸಿ, ಪರಿಸರ ಉಳಿಸಿ ಎಂದು ಸರಕಾರ ಪ್ರತೀ ವರ್ಷ ಸಾವಿರಾರು ಕೋಟ್ಯಂತರ ರೂ.ಗಳನ್ನು ಪರಿಸರ ಸಂರಕ್ಷಣೆಗೆ ಮೀಸಲಿಡುತ್ತಿದೆ. ಗಿಡಗಳನ್ನು ನೆಟ್ಟು ಪೋಷಿಸಲು ಜನರಲ್ಲಿ ಜಾಗೃತಿ ಮೂಡಿಸುವುದು ಕೇವಲ ಔಪಚಾರಿಕ ಸಮಾರಂಭಕ್ಕೆ, ಭಾಷಣಕ್ಕೆ ಸೀಮಿತವಾಗಿ ಮರೆತು ಹೋಗುತ್ತದೆ. ಆದರೆ, ವಾಸ್ತವದಲ್ಲಿ ಮರಗಳನ್ನು ಉಳಿಸುವ ಬದಲು ಉರುಳಿಸುವ ಕೆಲಸವೇ ಹೆಚ್ಚಾಗಿ ಕಂಡುಬರುತ್ತದೆ.
ಇಂಡಸ್ಟ್ರಿಯಲ್ ಪಾರ್ಕ್ ಅಂದ ಹೆಚ್ಚಿಸುವ ಸಲುವಾಗಿ ರಸ್ತೆ ಬದಿಯಲ್ಲಿದ್ದ ಮರಗಳನ್ನು ಕಡಿದು, ಕುರುಹು ಇಲ್ಲದಂತೆ ಮಾಡಿದ್ದು, 20ಕ್ಕೂ ಹೆಚ್ಚು ಮರಗಳ ರೆಂಬೆ ಕೊಂಬೆಗಳನ್ನು ಕತ್ತರಿಸಿ ಹಾಕಿ ವೈಯುಕ್ತಿಕ ಲಾಭಕ್ಕಾಗಿ ನೂರಾರು ಜನರಿಗೆ ಆಮ್ಲಜನಕ ನೀಡಿ, ಸಾವಿರಾರು ಪಕ್ಷಿಗಳಿಗೆ ಆಸರೆಯಾಗಿದ್ದ ಮರಗಳನ್ನು ಕಡಿದು ಹಾಕಿರುವುದನ್ನು ಸಂರಕ್ಷಿಸಬೇಕಾದ ಅರಣ್ಯ ಇಲಾಖೆಯವರು ಪರಿಸರ ಹಾನಿಗೆ ಪರೋಕ್ಷ ಬೆಂಬಲ ನೀಡುತ್ತಿದ್ದಾರೆ ಎಂದು ಸ್ಥಳೀಯರು ಅಸಹನೆ ವ್ಯಕ್ತಪಡಿಸಿದ್ದಾರೆ.
ಅರಣ್ಯ ಇಲಾಖೆಯ ಅನುಮತಿ ಪಡೆಯದೆ ಯಾವುದೇಕಾರಣಕ್ಕೂ ಮರ ಕಡಿಯಲು ಯಾರಿಗೂ ಅವಕಾಶವಿಲ್ಲ. ರೈತರು ತಮ್ಮ ಜಮೀನಿನಲ್ಲಿರುವ ಮರಗಳನ್ನು ಕಡಿಯಲಿಕ್ಕೆ ಅರಣ್ಯ ಇಲಾಖೆ ಅನುಮತಿ ಪಡೆಯಲು ಹರಸಾಹಸ ಪಡಬೇಕು. ಹೀಗಿದ್ದರೂ, ಅರಣ್ಯ ಇಲಾಖೆಯ ಗಮನಕ್ಕೆ ತಾರದೇ ಮರಗಳನ್ನು ನಾಶ ಮಾಡಿ, ರೆಂಬೆ, ಕೊಂಬೆಗಳನ್ನು ಕಡಿದು ಹಾಕಿದ್ದರೂ, ಅರಣ್ಯಾಧಿಕಾರಿಗಳು ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಇನ್ನಾದರೂ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿ, ಮರಗಳ ಮಾರಣ ಹೋಮಕ್ಕೆ ಕಾರಣವಾಗಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಿ ಪರಿಸರ ಸಂರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ರೈತರು ತಮ್ಮ ಜಮೀನಿನಲ್ಲಿರುವ ಮರಗಳನ್ನು ಕಡಿಯಲು ಅನುಮತಿ ಪಡೆಯಲು ನೂರಾರು ತೊಡಕುಗಳಿವೆ. ಉಳ್ಳವರಿಗೊಂದು ಬಡವನಿಗೆ ಬೇರೊಂದು ನ್ಯಾಯವೇ. ಪ್ರಕೃತಿ ಉಳಿಸಿ ಬೆಳೆಸಿ ನೈಸರ್ಗಿಕ ಸಂಪತ್ತಿಗೆ ಹಾನಿಯಾಗದಂತೆ ನಿಗಾ ವಹಿಸಬೇಕಾದ ಪ್ರಜ್ಞಾವಂತರೇ, ಇಂತಹ ಹೀನ ಕೃತ್ಯ ಎಸಗಿದರೆ ಹೇಗೆ?. ಕ್ರಮ ಜರುಗಿಸುವಲ್ಲಿ ಅರಣ್ಯ ಇಲಾಖೆ ಮೀನಮೇಷ ಎಣಿಸುತ್ತಿದೆ.
- ವೆಂಕಟೇಶ್ ಸೊಣ್ಣೆಬೈಚನಹಳ್ಳಿ, ಪರಿಸರ ಪ್ರೇಮಿ
ಇಂಡಸ್ಟ್ರಿಯಲ್ ಪಾರ್ಕ್ ನಿರ್ಮಿಸುತ್ತಿರುವ ಜಾಗದ ರಸ್ತೆ ಬದಿಯಲ್ಲಿದ್ದ ಗಿಡಮರಗಳನ್ನು ಕಡಿಯಲು ಅರಣ್ಯ ಇಲಾಖೆಯಿಂದ ಅನುಮತಿ ನೀಡಿರುವುದಿಲ್ಲ. ಮರಗಳನ್ನು ಕಡಿದಿರುವ ಮಾಹಿತಿ ಬಂದಿಲ್ಲ. ಈ ಬಗ್ಗೆ ಸ್ಥಳ ಪರಿಶೀಲನೆ ನಡೆಸಿ ಮಾಹಿತಿ ಸಂಗ್ರಹಿಸಿ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು. ಸಂಬಂಧಪಟ್ಟವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು.
-ಬಸವರಾಜು, ಉಪ ವಲಯ ಅರಣ್ಯಾಧಿಕಾರಿ ನಂದಗುಡಿ