Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ವರ್ಗ ಮತ್ತು ಜಾತಿ ಸಂಘರ್ಷದ ಫುಲ್ವಾರಿ...

ವರ್ಗ ಮತ್ತು ಜಾತಿ ಸಂಘರ್ಷದ ಫುಲ್ವಾರಿ ರಾಜಕಾರಣದಲ್ಲಿ ದಲಿತರು ಮತ್ತು ಮುಸ್ಲಿಮರು

ನವೀನ್‌ ಸೂರಿಂಜೆನವೀನ್‌ ಸೂರಿಂಜೆ4 Nov 2025 3:16 PM IST
share
ವರ್ಗ ಮತ್ತು ಜಾತಿ ಸಂಘರ್ಷದ ಫುಲ್ವಾರಿ ರಾಜಕಾರಣದಲ್ಲಿ ದಲಿತರು ಮತ್ತು ಮುಸ್ಲಿಮರು
ಬಿಹಾರ ವಿಧಾನಸಭಾ ಚುನಾವಣೆ

ದಲಿತ ಮತ್ತು ಮುಸ್ಲಿಮ್ ಪ್ರಾಬಲ್ಯದ ಫುಲ್ವಾರಿ ಶರೀಫ್ ವಿಧಾನಸಭಾ ಕ್ಷೇತ್ರವು ಬಿಹಾರದ ಜಾತಿ ಮತ್ತು ವರ್ಗ ರಾಜಕಾರಣದ ಅಧ್ಯಯನಯೋಗ್ಯ ಪ್ರದೇಶವಾಗಿದೆ. ದಲಿತ ಮೀಸಲು ಕ್ಷೇತ್ರವಾಗಿರುವ ಫುಲ್ವಾರಿಯಲ್ಲಿ ಸುಮಾರು 25ಶೇ. ಮುಸ್ಲಿಮ್ ಮತದಾರರು, 27ಶೇ. ದಲಿತ ಮತದಾರರು ಮತ್ತು 15ಶೇ. ಯಾದವ ಮತದಾರರಿದ್ದು, ಒಟ್ಟು ಮತದಾರರ ಸಂಖ್ಯೆ 3.51 ಲಕ್ಷದಷ್ಟಿದೆ. ಹಲವು ವರ್ಷಗಳ ಕಾಲ ಕಾಂಗ್ರೆಸ್ ನಿಯಂತ್ರಣದಲ್ಲಿದ್ದ ಪುಲ್ವಾರಿ ವಿಧಾನಸಭಾ ಕ್ಷೇತ್ರದಲ್ಲಿ 1995ರಿಂದ ಶ್ಯಾಮ್ ರಜಕ್ ಶಾಸಕರಾಗಿದ್ದರು. 2020 ರಲ್ಲಿ ಗೋಪಾಲ್ ರವಿದಾಸ್ ಮೊದಲ ಬಾರಿಗೆ ಶಾಸಕರಾದರು.

ಫುಲ್ವಾರಿ ಶರೀಫ್ ಪ್ರದೇಶವು ಬಿಹಾರದ ಇತರ ಭಾಗಗಳಂತೆ ಜಾತಿ ದೌರ್ಜನ್ಯದಿಂದ ನಲುಗುತ್ತಿದೆ. ಇಲ್ಲಿರುವ ಜಮೀನ್ದಾರಿ ಪಳಯುಳಿಕೆಗಳು ಕೇವಲ 10 ಶೇ. ಉಳಿದಿದ್ದರೂ 55 ಶೇ. ದಷ್ಟಿರುವ ದಲಿತರ ಮೇಲೆ, ಹಿಂದುಳಿದ ವರ್ಗ, ಮುಸ್ಲಿಮರ ಮೇಲೆ ಆಗಾಗ ತನ್ನ ಪ್ರತಾಪವನ್ನು ತೋರಿಸುತ್ತವೆೆ. ಇಂತಹ ಜಾತಿ ದೌರ್ಜನ್ಯಗಳು ಜನಸಾಮಾನ್ಯರನ್ನು ಮಾತ್ರವಲ್ಲದೆ, ದಲಿತ ಸಮುದಾಯಕ್ಕೆ ಸೇರಿರುವ ಫುಲ್ವಾರಿಯ ಶಾಸಕರನ್ನೂ ಬಿಟ್ಟಿಲ್ಲ.

ಫುಲ್ವಾರಿಯ ಕರ್ತೌಲ್ ಗ್ರಾಮದಲ್ಲಿ ಶಾಸಕ ಗೋಪಾಲ್ ರವಿದಾಸ್ ಅವರ ಅನುದಾನದಲ್ಲಿ ಶಾಲೆಯ ಹೊಸ ಕಟ್ಟಡ ನಿರ್ಮಿಸಲಾಗಿತ್ತು. ಇದೇ ವರ್ಷದ ಜನವರಿ 26 ರಂದು ಅವರು ಬೆಂಬಲಿಗರೊಂದಿಗೆ ಸರಕಾರಿ ಶಾಲೆಯ ಹೊಸ

ಕಟ್ಟಡವನ್ನು ಉದ್ಘಾಟಿಸಲು ಶಾಲೆಗೆ ಹೋಗಿದ್ದರು. ಶಾಸಕರು ಶಾಲೆಯ ಬಳಿ ತಲುಪುತ್ತಿದ್ದಂತೆ ಆ ಗ್ರಾಮದ ಸುಮಾರು 50ಕ್ಕೂ ಹೆಚ್ಚಿನ ಮೇಲ್ವರ್ಗದ ಜನರು ಶಾಸಕರನ್ನು ಅಡ್ಡಗಟ್ಟಿದರು. ದಲಿತನೊಬ್ಬ ಶಾಲೆಯನ್ನು ಉದ್ಘಾಟಿಸುವುದು ಗ್ರಾಮಕ್ಕೆ ತಕ್ಕುದಾದುದಲ್ಲ ಎಂಬುದು ಅವರ ವಾದವಾಗಿತ್ತು. ಅಂದು ಗಣರಾಜ್ಯೋತ್ಸವ ದಿನ ಕೂಡಾ ಆಗಿತ್ತು. ಶಾಲಾ ಕಟ್ಟಡ ಉದ್ಘಾಟಿಸಿ ಅದೇ ಶಾಲೆಯಲ್ಲಿ ಶಾಸಕರು ಧ್ವಜಾರೋಹಣ ಮಾಡಿ ಗಣರಾಜ್ಯೋತ್ಸವ ಆಚರಿಸುವುದು ಎಂದು ನಿರ್ಧರಿಸಿದ್ದರು. ಆದರೆ ಇಡೀ ಶಾಲೆಯನ್ನು ಕಬ್ಜ ಮಾಡಿಕೊಂಡ ಮೇಲ್ವರ್ಗಗಳು ಶಾಲೆ ಉದ್ಘಾಟಿಸಲು ಮತ್ತು ರಾಷ್ಟ್ರಧ್ವಜಾರೋಹಣ ಮಾಡಲು ಶಾಸಕರನ್ನು ಬಿಡಲಿಲ್ಲ. ಈ ಬಗ್ಗೆ ಶಾಸಕರು ಎಫ್‌ಐಆರ್ ದಾಖಲಿಸಿದರು. ಪಕ್ಷವು ಶಾಸಕರ ಪರವಾಗಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿತ್ತು ಎಂದು ಖಾರ್ದಿಹಾದ ಸಣ್ಣ ವ್ಯಾಪಾರಿ ಮನೋಜ್ ಹೇಳುತ್ತಾರೆ.

‘‘ಇದು ಬಿಹಾರದ ಫುಲ್ವಾರಿ ದಲಿತ ಶಾಸಕರು ಮಾತ್ರ ಎದುರಿಸಿದ ಸಮಸ್ಯೆಯಲ್ಲ. ಬಿಹಾರದ ಬಹುತೇಕ ದಲಿತ ಶಾಸಕರ ದುರಂತ ಕತೆ ಇದು. ಆದರೆ ಮೇಲ್ವರ್ಗದ ವೋಟುಗಳು ಹಾಳಾಗಬಹುದು ಕಾರಣಕ್ಕಾಗಿ ಎಲ್ಲಾ ದಲಿತ ಶಾಸಕರು ಸುಮ್ಮನಿದ್ದಾರೆ. ಮೇಲ್ವರ್ಗಗಳ ವೋಟುಗಳ ಸಂಖ್ಯೆ ಕಡಿಮೆ ಇರಬಹುದು. ಆದರೆ ಅವರು ಸಾಮಾಜಿಕವಾಗಿ, ಧಾರ್ಮಿಕವಾಗಿ ಪ್ರಭಾವ ಹೊಂದಿರುವುದರಿಂದ ದಲಿತ, ಹಿಂದುಳಿದ ಮತಗಳ ಮೇಲೂ ಪ್ರಭಾವ ಹೊಂದಿದ್ದಾರೆ’’ ಎನ್ನುತ್ತಾರೆ ಅವರು.

ದಲಿತ ಸಮುದಾಯದ ಸಿಪಿಐಎಂಎಲ್ ಶಾಸಕರಾಗಿರುವ 52 ವರ್ಷ ವಯಸ್ಸಿನ ಗೋಪಾಲ್ ರವಿದಾಸ್ ಸೈದ್ಧಾಂತಿಕವಾಗಿ ಗಟ್ಟಿಯಾಗಿರುವ ಎಡಪಂಥೀಯ ನಾಯಕ. ಹಾಗಾಗಿಯೇ ವೈಯಕ್ತಿಕ ಜೀವನದಲ್ಲೂ ಕೂಡಾ ಸಿದ್ಧಾಂತವನ್ನು ಬಲವಾಗಿ ಪ್ರತಿಪಾದಿಸುತ್ತಿದ್ದಾರೆ. ರೈಲ್ವೆ ಕೂಲಿ ಕಾರ್ಮಿಕ ತಂದೆ ಮತ್ತು ಪ್ರಸೂತಿ ಕಾರ್ಯಕರ್ತೆಯ ಮಗನಾದ ಗೋಪಾಲ್ ರವಿದಾಸ್ ಅವರು ಸಿಪಿಐಎಂಎಲ್ ಪಕ್ಷದ ಪೂರ್ಣಾವಧಿ ಕಾರ್ಯಕರ್ತರು. ಅವರು ಪೂರ್ಣಾವಧಿ ಕಾರ್ಯಕರ್ತರಾಗಿದ್ದಾಗಲೂ ಅವರ ಪತ್ನಿ ಕಮಲಾವತಿ ದೇವಿಯವರು ಕೂಡಾ ಪ್ರಸೂತಿ ಕಾರ್ಯಕರ್ತೆಯಾಗಿ ಗರ್ಭಿಣಿಯರ ಆರೈಕೆ ಮಾಡಿ ಸಂಬಳ ಪಡೆಯುತ್ತಿದ್ದರು. ಪತಿ ಶಾಸಕರಾದ ಬಳಿಕವೂ ಕಮಲಾವತಿ ದೇವಿಯವರು ಪ್ರಸೂತಿ ಕಾರ್ಯಕರ್ತೆಯಾಗಿಯೇ ಕೆಲಸ ಮುಂದುವರಿಸುತ್ತಿದ್ದಾರೆ.

ನಾವು ಫುಲ್ವಾರಿ ಶಾಸಕ ಗೋಪಾಲ್ ರವಿದಾಸ್ ಅವರನ್ನು ಶಾಸಕರ ಸದನದಲ್ಲಿ ಭೇಟಿಯಾಗಲು ಹೊರಟೆವು. ಮಸೌರಿ ರಸ್ತೆಯಾಗಿ ಹೋಗಿದ್ದರಿಂದ ದಾರಿ ಮಧ್ಯೆ ರೈಲ್ವೆ ಗೇಟ್ ಬಿದ್ದು ನಾವು ಶಾಸಕರ ಸರಕಾರಿ ಮನೆ ತಲುಪುವುದು ತಡವಾಯಿತು. ಹಾಗಾಗಿ ಶಾಸಕರು ನಿಗದಿತ ಚುನಾವಣಾ ಪ್ರಚಾರಕ್ಕೆ ಹೊರಟಿದ್ದರು. ಆದರೆ ಶಾಸಕರ ಪತ್ನಿ ಕಮಲಾವತಿದೇವಿಯವರು ನಮ್ಮನ್ನು ಮನೆಗೆ ಸ್ವಾಗತಿಸಿದರು. ಬಹುಶಃ ಅವರನ್ನು ಬಿಹಾರದ ಹಲವು ಪತ್ರಕರ್ತರು ಕೇಳಿದ ಪ್ರಶ್ನೆಯನ್ನೇ ನಾನೂ ಕೇಳಿದೆ ಅನ್ನಿಸುತ್ತೆ. ಶಾಸಕರ ಪತ್ನಿಯಾಗಿ ಗುಡಿಸಲಲ್ಲಿ ಇರಲು ಬೇಜಾರಾಗುವುದಿಲ್ಲವೇ ? ಶಾಸಕರ ಪತ್ನಿಯಾಗಿ ಈಗಲೂ ಪ್ರಸೂತಿ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತೀರಿ. ಜನ ನಿಮ್ಮ ಜೊತೆ ಹೇಗೆ ಪ್ರತಿಕ್ರಿಯಿಸುತ್ತಾರೆ? ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿದೆ.

ನನ್ನ ಪತಿ ಕಮ್ಯುನಿಷ್ಟ್ ಕಾರ್ಯಕರ್ತ. ಶಾಸಕರಾದ ತಕ್ಷಣ ಬದುಕು ಬದಲಾಗುವುದಿಲ್ಲ ಎಂಬ ಅರಿವು ನನಗೆ ಸ್ಪಷ್ಟವಾಗಿದೆ. ಹಾಗಾಗಿ ಬೇಜಾರಾಗುವ ಪ್ರಸಂಗವೇ ಇಲ್ಲ. ನಾವು ಶಾಸಕರಾದರೂ ಸಮಾಜ ಯಾಕೆ ಬದಲಾವಣೆ ಆಗಿಲ್ಲ. ಅದಕ್ಕಿರುವ ಅಡೆತಡೆಗಳೇನು ಎಂಬುದು ಚರ್ಚೆಯ ವಿಷಯ ಆಗಬೇಕು. ನನ್ನ ಪತಿಗೆ ಪಕ್ಷ ಕೊಡುವ ಹಣ ಮತ್ತು ನನ್ನ ಉದ್ಯೋಗದ ಸಂಬಳವೇ ನಮ್ಮ ಸಂಸಾರ ನಡೆಸಲು ಆದಾಯದ ಮೂಲವಾಗಿದೆ. ಹಾಗಾಗಿ ಉದ್ಯೋಗದ ಬಗ್ಗೆ ಯಾರು ಏನಂತಾರೋ ಎಂದು ನೋಡಲಾಗದು ಎಂದರು.

ಶಾಸಕ ಗೋಪಾಲ್ ರವಿದಾಸ್ ಅವರ ಮೂಲ ಕ್ಷೇತ್ರ ಮಸೌರಿ ವಿಧಾನಸಭಾ ಕ್ಷೇತ್ರ. 2010 ಮತ್ತು 2015 ರಲ್ಲಿ ಅವರು ಮಸೌರಿಯಲ್ಲಿ ಸ್ಪರ್ಧಿಸಿ ಮೂರನೇ ಸ್ಥಾನ ಪಡೆದು ಸೋಲನ್ನಪ್ಪಿದ್ದರು. 2020ರಲ್ಲಿ ಸಿಪಿಐಎಂಎಲ್ ಪಕ್ಷವು ಅವರನ್ನು ತಮ್ಮ ಪಾಟ್ನಾ ಪಕ್ಕದಲ್ಲಿರುವ ಫುಲ್ವಾರಿ ಶರೀಫ್ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವಂತೆ ಸೂಚಿಸಿತು. ಹಾಗಾಗಿ ಫುಲ್ವಾರಿಯಲ್ಲಿ ಸ್ಪರ್ಧಿಸಿ ಶಾಸಕರಾದರು.

ಫುಲ್ವಾರಿ ಶಾಸಕರಾದರೂ ಗೋಪಾಲ್ ರವಿದಾಸ್ ಅವರ ಸ್ವಂತ ಮನೆ ಇರುವುದು ಮಸೌರಿ ಪಟ್ಟಣದ ಗಾಂಧಿ ಮೈದಾನದ ಬಳಿ. ಇಲ್ಲಿರುವ ಶಾಸಕರ ಮನೆ ಸರಕಾರಿ ಜಮೀನಿನಲ್ಲಿದೆ. ನೂರಾರು ಸ್ಲಂ ವಾಸಿಗಳು ವಾಸಿಸುವಂತೆ ಗಾಂಧಿ ಮೈದಾನದ ಬಳಿಯ ಸ್ಲಂನಲ್ಲಿ ಶಾಸಕರು ಗುಡಿಸಲಿನಲ್ಲಿ ವಾಸಿಸುತ್ತಿದ್ದಾರೆ. ಶಾಸಕರ ಗುಡಿಸಲಿನ ಪಕ್ಕದಲ್ಲೇ ಶಾಸಕರ ತಂಗಿ ಮತ್ತು ಅಕ್ಕನವರ ಗುಡಿಸಲುಗಳೂ ಇವೆ. ಶಾಸಕರ ಸಹೋದರ ರವಿಚಂದರ್ ರವಿದಾಸ್ ಅವರು ಈಗಲೂ ಕೂಲಿ ಕೆಲಸಕ್ಕೆ ಹೋಗುತ್ತಾರೆ. ಯಾವಾಗ ಸರಕಾರ ನೋಟಿಸ್ ನೀಡಿ ತೆರವಿಗೆ ಆದೇಶಿಸುತ್ತೋ, ಯಾವಾಗ ಮನೆ ಮೇಲೆ ಜೆಸಿಬಿ ಬರುತ್ತೋ ಗೊತ್ತಿಲ್ಲ. ಹಾಗೇನಾದರೂ ಆದರೆ ಶಾಸಕರು ಮತ್ತು ಅವರ ಅಕ್ಕ ತಂಗಿ ಸೇರಿದಂತೆ ನೂರಾರು ದಲಿತ ಕುಟುಂಬಗಳು ಮನೆ ಕಳೆದುಕೊಳ್ಳುತ್ತವೆ. ಶಾಸಕರಿಗೆ ಸದ್ಯಕ್ಕೆ ಶಾಸಕರ ಭವನ ಇದೆ. ಗೆದ್ದರೆ ಶಾಸಕರ ಭವನದಲ್ಲೊಂದು ಜಾಗ ಇರಲಿದೆ. ಇಲ್ಲದೇ ಇದ್ದರೆ ಈ ಗುಡಿಸಲು ಬಿಟ್ಟರೆ ಬೇರೆ ಗತಿ ಇಲ್ಲ ಎಂದು ಶಾಸಕರ ಸಹೋದರಿ ನುಡಿಯುತ್ತಾರೆ.

ಶಾಸಕರ ಪಕ್ಕದ ಮನೆಯ ಗುಡಿಸಲಿನಲ್ಲಿ ವಾಸವಾಗಿರುವ ಮುಹಮ್ಮದ್ ಮಾತನಾಡುತ್ತಾ ‘ಗೋಪಾಲ್ ಅವರು ಶಾಸಕರಾಗುವುದಕ್ಕಿಂತಲೂ ಮೊದಲೇ ಪ್ರಾಮಾಣಿಕ ಮತ್ತು ಜಾತ್ಯತೀತ ಜನಸೇವಕ. ಅವರು ಮುನ್ನಡೆಸಿದ ಎಲ್ಲಾ ದಲಿತ ಹೋರಾಟ, ಹಿಂದುಳಿದವರ ಹೋರಾಟ, ಮುಸ್ಲಿಮ್ ಪರವಾಗಿನ ಹೋರಾಟದಲ್ಲಿ ನಾವು ಭಾಗಿಯಾಗಿದ್ದೇವೆ. ಹಾಗಾಗಿಯೇ ಅವರ ಗೆಲುವು ನಿಶ್ಚಿತ’ ಎಂದರು. ಫುಲ್ವಾರಿ ಎನ್ನುವುದು ದಲಿತ- ಮುಸ್ಲಿಮ್ ಭಾವೈಕ್ಯದ ಕೇಂದ್ರವಾಗಿದೆ. ಫುಲ್ವಾರಿಯಲ್ಲಿ ಇಮಾರತ್-ಎ-ಷರಿಯಾ ಇರುವ ಸ್ಥಳವಾಗಿದೆ.

ಇಲ್ಲಿನ ಮುಸ್ಲಿಮರು ಬ್ರಿಟಿಷರ ವಿರುದ್ಧದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದ್ದರಿಂದ ಬಹಳ ದೌರ್ಜನ್ಯಗಳನ್ನು ಎದುರಿಸಬೇಕಾಯಿತು. ಅದೇ ಸಂದರ್ಭದಲ್ಲಿ ಫುಲ್ವಾರಿಯ ದಲಿತರು ಜಮೀನ್ದಾರಿಗಳಿಂದ ಪೀಡನೆಗೆ ಒಳಗಾದರು. ಸ್ವಾತಂತ್ರ್ಯದ ಬಳಿಕವೂ ದಲಿತರ ಮೇಲಿನ ಜಮೀನ್ದಾರಿ ಮೇಲ್ವರ್ಗಗಳ ದೌರ್ಜನ್ಯ ಮುಂದುವರಿದಿದ್ದರೆ, ಮುಸ್ಲಿಮರ ಮೇಲೆ ಪ್ರಭುತ್ವದ ದೌರ್ಜನ್ಯ ಮುಂದುವರಿದಿದೆ. ಹಾಗಾಗಿ ಶೋಷಿತರಾಗಿರುವ ದಲಿತ-ಮುಸ್ಲಿಮರೇ ಒಂದು ರಾಜಕೀಯ ಶಕ್ತಿಯಾಗಿ ಹೊರಹೊಮ್ಮಿದ್ದಾರೆ. ಹಾಗಾಗಿ ಇಲ್ಲಿ ಸಿಪಿಐಎಂಎಲ್ ಅಭ್ಯರ್ಥಿ ಯಾವುದೇ ಆಸೆ ಆಮಿಷಗಳನ್ನು ನೀಡದೆ, ಭ್ರಷ್ಟಾಚಾರ ಮಾಡದೇ ಶಾಸಕರಾಗಿದ್ದಾರೆ.

ಶಾಸಕ ಗೋಪಾಲ್ ಹರಿದಾಸ್ ನೇತೃತ್ವದಲ್ಲಿ ಫುಲ್ವಾರಿ ಶರೀಫ್ ಪ್ರದೇಶದಲ್ಲಿ ಸಿಎಎ ವಿರೋಧಿ ಮತ್ತು ಎನ್‌ಆರ್‌ಸಿ ವಿರೋಧಿ ಆಂದೋಲನ ನಡೆಯಿತು. ದೇಶದ ಎಲ್ಲಾ ಕಡೆ ನಡೆದ ಸಿಎಎ ವಿರೋಧಿ ಹೋರಾಟದಲ್ಲಿ ಮುಸ್ಲಿಮರು ಬಹುಸಂಖ್ಯೆಯಲ್ಲಿ ಪಾಲ್ಗೊಂಡಿದ್ದರೆ ಫುಲ್ವಾರಿಯ ಹೋರಾಟದಲ್ಲಿ ಮುಸ್ಲಿಮರು ಮತ್ತು ದಲಿತರು ಸಮ ಸಂಖ್ಯೆಯಲ್ಲಿ ಭಾಗಿಯಾಗಿದ್ದರು.

ಇದು ‘ದಲಿತ ಮುಸ್ಲಿಮ್ ಐಕ್ಯ ರಾಜಕಾರಣ’ದ ಸಂಕೇತವಾಗಿದೆ. ಫುಲ್ವಾರಿಯಲ್ಲಿ ಹಿಂದೂ ಮುಸ್ಲಿಮ್ ಗಲಭೆಗಳ ರಾಜಕಾರಣವಿಲ್ಲ. ಇಲ್ಲಿ ಕೋಮುಗಲಭೆ ಎಂದರೆ ಮೇಲ್ವರ್ಗ ಮತ್ತು ಕೆಳವರ್ಗಗಳ ಗಲಭೆ ಎಂದರ್ಥ.

ಜನವರಿ 2024 ರಲ್ಲಿ ದಲಿತ ಬಾಲಕಿಯರ ಅತ್ಯಾಚಾರ ಮತ್ತು ಕೊಲೆ ಪ್ರಕರಣವು ಫುಲ್ವಾರಿ ಶರೀಫ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಯಿತು. ದಲಿತ ಸಮುದಾಯಕ್ಕೆ ಸೇರಿದ ಇಬ್ಬರು ಬಾಲಕಿಯರನ್ನು ಅಪಹರಿಸಿ, ಗುಂಪು ಅತ್ಯಾಚಾರ ನಡೆಸಲಾಯಿತು. ಅವರಲ್ಲಿ ಒಬ್ಬಳ ಮೃತದೇಹ ಪತ್ತೆಯಾಯಿತು ಮತ್ತು ಮತ್ತೊಬ್ಬಳು ಗಂಭೀರ ಸ್ಥಿತಿಯಲ್ಲಿ ಪತ್ತೆಯಾದಳು.

ಈ ಘಟನೆ ರಾಜ್ಯಾದ್ಯಂತ ಆಕ್ರೋಶ ಉಂಟುಮಾಡಿ ರಾಜಕೀಯ ಬಿಕ್ಕಟ್ಟಿಗೆ ಕಾರಣವಾಯಿತು. ಈ ಸಂದರ್ಭದಲ್ಲಿ ದಲಿತ ಪರವಾದ ಹೋರಾಟವನ್ನು ಶಾಸಕ ಗೋಪಾಲ್ ರವಿದಾಸ್ ಮುನ್ನಡೆಸಿದ್ದರು. ಶಾಸಕರ ಹೋರಾಟಕ್ಕೆ ಮಣಿದ ಸರಕಾರ ಪೊಲೀಸರ ಮೇಲೆ ಕ್ರಮ ತೆಗೆದುಕೊಂಡಿತ್ತು ಎಂದು ಸ್ಥಳೀಯರು ನೆನಪಿಸಿಕೊಳ್ಳುತ್ತಾರೆ. ಸೆಪ್ಟಂಬರ್ 2024 ರಂದು ಮೇಲ್ವರ್ಗ ಮತ್ತು ಶೋಷಿತ ಸಮುದಾಯಗಳ ಮಧ್ಯೆ ಘರ್ಷಣೆ ನಡೆಯಿತು. ಫುಲ್ವಾರಿ ಶರೀಫ್ ಪ್ರದೇಶದಲ್ಲಿ ಎರಡು ಸಮುದಾಯಗಳ ನಡುವೆ ಘರ್ಷಣೆ ನಡೆದು, ಕಲ್ಲೆಸೆತ ಮತ್ತು ಅಶಾಂತಿ ಉಂಟಾಯಿತು.

ಪೊಲೀಸರು 28 ಜನರನ್ನು ಬಂಧಿಸಿದರು. ಈ ಘಟನೆ ಸಂಪೂರ್ಣವಾಗಿ ಜಾತಿ ಆಧಾರಿತವಾಗಿತ್ತು. ಈ ಘಟನೆಗಳು ಫುಲ್ವಾರಿಯಲ್ಲಿ ಮಾತ್ರವಲ್ಲದೇ, ಬಿಹಾರದಾದ್ಯಂತ ಜಾತಿ ಆಧಾರಿತ ಭೇದಭಾವ ಮತ್ತು ಹಿಂಸಾಚಾರವನ್ನು ಸೂಚಿಸುತ್ತದೆ. ಇದು ಇತಿಹಾಸದ ಮುಂದುವರಿಕೆಯಾಗಿದೆ. ರಾಜ್ಯದ ಇತರ ಕ್ಷೇತ್ರಗಳಿಗೂ ಫುಲ್ವಾರಿಗೂ ವ್ಯತ್ಯಾಸವೇನೆಂದರೆ, ಸಮುದಾಯಗಳ ಮಧ್ಯೆ ಘರ್ಷಣೆಗಳಾದಾಗ

ಶಾಸಕರು ಮೇಲ್ವರ್ಗಗಳ ಪರ ನಿಂತರೆ ಫುಲ್ವಾರಿ ಶಾಸಕರು ಮಾತ್ರ ಸ್ಪಷ್ಟವಾಗಿ ಕೆಳವರ್ಗಗಳ ಪರ ನಿಂತುಬಿಡುತ್ತಿದ್ದರು. ಹಾಗಾಗಿಯೇ ಮುಸ್ಲಿಮರು ಮತ್ತು ದಲಿತರು ಸ್ಪಷ್ಟವಾಗಿ ಸಿಪಿಐಎಂಎಲ್ ಜೊತೆಗಿದ್ದಾರೆ. ಶಾಸಕ ಗೋಪಾಲ್ ಹರಿದಾಸ್ ಅವರು ಜನರಿಂದ ಚಂದಾ ಸಂಗ್ರಹಿಸಿ ಚುನಾವಣೆ ಎದುರಿಸುತ್ತಿದ್ದಾರೆ. ಶೋಷಕ ವ್ಯಾಪಾರಿಗಳ ಸಹಾಯಧನವನ್ನು ನಿರಾಕರಿಸಿದ್ದಾರೆ. ಅದು ಆಯ್ಕೆಯಾದ ಬಳಿಕ ಅವರ ಅಧಿಕಾರ ಯಾರ ಪರವಾಗಿರುತ್ತದೆ ಎಂಬುದರ ಸೂಚನೆಯಾಗಿದೆ.

2020ರ ವಿಧಾನಸಭಾ ಚುನಾವಣೆಯಲ್ಲಿ ಸಿಪಿಐಎಂಎಲ್ ಗೋಪಾಲ್ ರವಿದಾಸ್ ಅವರು 91,124 ಮತಗಳನ್ನು ಪಡೆದು ಜಯಶಾಲಿಯಾಗಿದ್ದರು. ಅವರ ಸಮೀಪದ ಪ್ರತಿಸ್ಪರ್ಧಿ ಜೆಡಿ(ಯು)ನ ಅರುಣ್ ಮಾಂಝಿ ಅವರು 77,267 ಮತಗಳನ್ನು ಪಡೆದು ಪರಾಭವಗೊಂಡಿದ್ದರು. 2025ರ ಚುನಾವಣೆಯ ಕಣದಲ್ಲಿ ಮಹಾಘಟಬಂಧನ್ ಪರವಾಗಿ ಸಿಪಿಐಎಂಎಲ್ ಪಕ್ಷದಿಂದ ಶಾಸಕ ಗೋಪಾಲ್ ರವಿದಾಸ್ ಅವರು ಮತ್ತೆ ಸ್ಪರ್ಧಿಸುತ್ತಿದ್ದಾರೆ. ಎನ್‌ಡಿಎ ಭಾಗವಾಗಿರುವ ಜೆಡಿಯು ಪಕ್ಷದಿಂದ ಶ್ಯಾಮ್ ರಜಕ್ ಸ್ಪರ್ಧಿಸುತ್ತಿದ್ದಾರೆ. ಫುಲ್ವಾರಿ ವಿಧಾನಸಭಾ ಕ್ಷೇತ್ರದ ಚುನಾವಣೆಯ ಮೊದಲ ಹಂತ ನವೆಂಬರ್ 6 ರಂದು ನಡೆಯಲಿದೆ. ಈ ಚುನಾವಣೆಯು ಫುಲ್ವಾರಿಯ ದಲಿತ- ಮುಸ್ಲಿಮರ ಮುಂದಿನ ಭವಿಷ್ಯವನ್ನು ನಿರ್ಧರಿಸಲಿದೆ.


share
ನವೀನ್‌ ಸೂರಿಂಜೆ
ನವೀನ್‌ ಸೂರಿಂಜೆ
Next Story
X