ರೂಪಾಯಿಯ ತೀವ್ರ ಕುಸಿತ ಮತ್ತು ಬಿಸಿಲುಗುದುರೆಯಾಗಿರುವ ದಾರಿ

ಮಾಧ್ಯಮಗಳಲ್ಲಿ ಈಗಾಗಲೇ ವರದಿಯಾದಂತೆ ಅಮೆರಿಕದ ಡಾಲರ್ ಮತ್ತು ಭಾರತದ ರೂಪಾಯಿಯ ವಿನಿಮಯ ದರ ತೀವ್ರವಾಗಿ ಕುಸಿದಿದೆ. ಡಿಸೆಂಬರ್ ಮೂರನೇ ತಾರೀಕಿಗೆ ಒಂದು ಡಾಲರಿನ ಬೆಲೆ 90 ರೂಪಾಯಿಗೆ ಏರಿತು, ಮರುದಿನ ಅಂದರೆ ನಾಲ್ಕನೇ ತಾರೀಕಿಗೆ ಅದು 90.40 ರೂಪಾಯಿಯಷ್ಟಾಯಿತು. ಮೂರು ವರ್ಷಗಳ ಹಿಂದೆ ಅಂದರೆ 2022ರ ಸಂದರ್ಭದಲ್ಲಿ ಡಾಲರಿನ ಬೆಲೆ 80 ರೂಪಾಯಿಗೆ ಏರಿದಾಗ ಇಷ್ಟು ಬೇಗ ಅದು 90ರ ಮಟ್ಟವನ್ನು ದಾಟಬಹುದೆಂದು ಯಾರೂ ಊಹಿಸಿರಲಿಲ್ಲ. (ಇದೇ ಲೇಖಕ ಜೂನ್ 27, 2022ರಂದು ಪತ್ರಿಕೆಗೆ ಬರೆದ ಲೇಖನವನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು). ಸರಕಾರವಾಗಲಿ, ಹಣಕಾಸು ವ್ಯವಸ್ಥೆಯ ನಿಯಂತ್ರಕ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಆಗಲಿ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಅತಿ ಶೀಘ್ರವಾಗಿ ರೂಪಾಯಿಯ ಬೆಲೆ ಇನ್ನೂ ಪತನವಾಗಿ 100ನ್ನು ತಲಪಬಹುದು. ಈ ಬೆಳವಣಿಗೆಯಿಂದಾಗಿ ಏಶ್ಯದ ದೇಶದ ಕರೆನ್ಸಿಗಳಲ್ಲಿ ಭಾರತದ ರೂಪಾಯಿಯೇ ಅತ್ಯಂತ ದುರ್ಬಲವೆಂದು ತಜ್ಞರ ಅಭಿಪ್ರಾಯ.
2014ರಲ್ಲಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ ರೂಪಾಯಿಯ ಮೌಲ್ಯವು ನಿರಂತರ ಕೆಳಗಿಳಿಯುತ್ತಲೇ ಇದೆ. ಸುಮಾರು 2010ರ ತನಕ ನಿಧಾನಗತಿಯಲ್ಲಿ ಬೆಲೆಯ ಪತನವಾಗಿತ್ತು. 2000ದಲ್ಲಿ 44.31 ರೂಪಾಯಿಗೆ ಒಂದು ಡಾಲರು ಸಿಗುತ್ತಿದ್ದರೆ 2010ರಲ್ಲಿ ಅದು 46 ನ್ನು ದಾಟಿತು. ಆದರೆ ಮುಂದಿನ ವರ್ಷಗಳಲ್ಲಿ ಕುಸಿತವು ತೀವ್ರವಾಗುತ್ತಲೇ ಬಂತು. 2014ರಲ್ಲಿ ಅದು 60.95ಕ್ಕೆ ಏರಿತು. ಮೋದಿಯವರು ತನ್ನ ಅಧಿಕಾರದ ಮೊದಲ ವಾರ್ಷಿಕೋತ್ಸವವನ್ನು ಆಚರಿಸುವ ಹೊತ್ತಿಗೆ ಅದು 66.79ಕ್ಕೆ ಜಿಗಿಯಿತು. ಎರಡನೇ ಬಾರಿ ಮೋದಿಯವರು ಪ್ರಧಾನಿಯಾಗಿ ಆಯ್ಕೆಯಾದ ಮರುವರ್ಷ ಅಂದರೆ 2020ರಲ್ಲಿ 75.45 ದಾಟಿತು. ತರುವಾಯ ಎರಡೇ ವರ್ಷದಲ್ಲಿ ಅಂದರೆ 2022ಕ್ಕೆ ರೂಪಾಯಿಯ ಬೆಲೆ 81.62 ತಲಪಿತು. ಮುಂದೆ ಮೌಲ್ಯವು ಮತ್ತಷ್ಟು ಕುಸಿಯುತ್ತಾ ಬಂದು ಈ ಡಿಸೆಂಬರ್‌ನಲ್ಲಿ 90ನ್ನು ದಾಟಿತು. ಹಣಕಾಸು ವ್ಯವಹಾರಕ್ಕೆ ಮೀಸಲಾದ ಪ್ರತಿಷ್ಠಿತ ಆಂಗ್ಲ ಪತ್ರಿಕೆ ‘ಫೈನಾನ್ಶಿಯಲ್ ಟೈಮ್ಸ್’ ತನ್ನ ಇತ್ತೀಚಿನ ಸಂಚಿಕೆಯಲ್ಲಿ ಪ್ರಕಟಿಸಿದ ರೇಖಾಚಿತ್ರ ಇದನ್ನು ಸರಳವಾಗಿ ಚಿತ್ರಿಸುತ್ತದೆ.
ಕುಸಿತದ ಕಾರಣಗಳು
ಕೇಂದ್ರ ಸರಕಾರದ ಪ್ರಕಾರ ಈ ಅರ್ಥವರ್ಷದ ಎರಡನೇ ತ್ರೈಮಾಸಿಕದಲ್ಲಿ ದೇಶದ ಜಿಡಿಪಿ (ಸ್ಥೂಲ ದೇಶೀಯ ಉತ್ಪನ್ನ) ಶೇ. 8.2ರಷ್ಟಿತ್ತು-ಹೋದ ಆರು ತ್ರೈಮಾಸಿಕಗಳಲ್ಲಿ ಇದು ಒಂದು ದಾಖಲೆಯ ಹೆಚ್ಚಳ. (ಐಎಂಎಫ್-ಅಂತರ್‌ರಾಷ್ಟ್ರೀಯ ನಾಣ್ಯ ನಿಧಿಯು ಈ ವರದಿ ವಾಸ್ತವದಿಂದ ದೂರವಿದೆ ಎಂದು ಹೇಳಿದೆ). ಮೇಲ್ನೋಟಕ್ಕೆ ಇದು ದೇಶದ ಅರ್ಥವ್ಯವಸ್ಥೆ ಮತ್ತಷ್ಟು ಭದ್ರವಾಗುತ್ತಿದೆ ಎಂಬುದರ ಸೂಚಕ ಮತ್ತು ಸ್ಥಿರವಾದ ವಿನಿಮಯ ದರವು ಸುಭದ್ರ ಆರ್ಥಿಕತೆಯ ಸಂಕೇತ ಎಂದು ಸಾಮಾನ್ಯವಾದ ತಿಳಿವಳಿಕೆ. ಹಾಗಿದ್ದರೆ ಜಿಡಿಪಿಯಲ್ಲಿ ದಾಖಲೆಯ ಹೆಚ್ಚಳವಾದರೂ ಭಾರತದ ರೂಪಾಯಿಯ ಮೌಲ್ಯ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಯಾಕೆ ಅಧೋಮುಖವಾಗಿದೆ?
ರೂಪಾಯಿಯ ಮೌಲ್ಯದ ಎಗ್ಗಿಲ್ಲದ ಕುಸಿತಕ್ಕೆ ಪ್ರಮುಖ ಕಾರಣಗಳು ಹೀಗಿವೆ
1. ಭಾರತದ ವಿದೇಶ ವ್ಯಾಪಾರದಲ್ಲಿ ಹೆಚ್ಚುತ್ತಿರುವ ಕೊರತೆ.
2. ದೇಶಕ್ಕೆ ಬರುವ ಬಂಡವಾಳದ ಪ್ರಮಾಣದಲ್ಲಿ ಕುಸಿತ.
3. ದೇಶದಲ್ಲಿ ವಿದೇಶೀಯರು ಹೂಡಿದ್ದ ಬಂಡವಾಳದ ಹಿಂಪಡೆತ.
4. ಡಾಲರ್ ರೂಪದಲ್ಲಿ ಹೆಚ್ಚಾಗುತ್ತಿರುವ ಹೊರ ಹರಿವು.
5. ದೇಶದ ಆಂತರಿಕ ನಿರ್ಧಾರಗಳಿಂದ ಉಂಟಾಗುವ ಅನಿಶ್ಚಿತತೆಗಳು.
ವರದಿಗಳ ಪ್ರಕಾರ 2024-25ರ ನವೆಂಬರ್-ಅಕ್ಟೋಬರ್ ಒಂದು ವರ್ಷದಲ್ಲಿ ಸರಕುಗಳ ನಿರ್ಯಾತದಲ್ಲಿ ಶೇ. 11.8 ಕುಸಿತವಾಗಿದೆ. ಶುದ್ಧೀಕೃತ ತೈಲ, ಇಂಜಿನಿಯರಿಂಗ್ ಉತ್ಪನ್ನ, ರಾಸಾಯನಿಕ ವಸ್ತು, ಸಿದ್ಧ ಉಡುಪು, ಮುತ್ತು, ರತ್ನ ಮತ್ತು ಸಿದ್ಧಪಡಿಸಿದ ಆಭರಣ ಮುಂತಾದ ರಂಗಗಳು ತೀವ್ರ ಕುಸಿತವನ್ನು ದಾಖಲಿಸಿವೆ. ಇದಕ್ಕೆ ವಿರುದ್ಧವಾಗಿ ಇದೇ ಅವಧಿಯಲ್ಲಿ ಸರಕುಗಳ ಆಯಾತದಲ್ಲಿ ಶೇ. 16.6 ಹೆಚ್ಚಳವಾಗಿದೆ. ಚಿನ್ನದ ಆಮದು ಹೋದ ವರ್ಷ 4.9 ಬಿಲಿಯನ್ ಡಾಲರ್(ಡಾಲರಿನ ಬೆಲೆ 90 ರೂಪಾಯಿ ಎಂದುಕೊಂಡರೆ 44,100 ಕೋಟಿ ರೂಪಾಯಿ) ಇದ್ದರೆ ಈ ಅಕ್ಟೋಬರ್ ವರ್ಷದಲ್ಲಿ ಅದು 14.7 ಬಿಲಿಯನ್ ಡಾಲರಿಗೆ (1,32,300 ಕೋಟಿ ರೂಪಾಯಿಗೆ) ಅಂದರೆ ಒಂದೇ ವರ್ಷದಲ್ಲಿ ಮೂರು ಪಟ್ಟು ಹೆಚ್ಚಾಯಿತು. ಒಟ್ಟಾರೆ ಅಕ್ಟೋಬರ್ ವರ್ಷಾಂತ್ಯಕ್ಕೆ ಭಾರತದ ಚಾಲ್ತಿ ಖಾತೆಯಲ್ಲಿನ ಕೊರತೆ (ರಫ್ತು ಮತ್ತು ಆಮದುಗಳ ಮೌಲ್ಯದ ಅಂತರ) ಸುಮಾರಾಗಿ 3,75,300 ರೂಪಾಯಿಗಳಷ್ಟು ಎಂದು ಅಂದಾಜಿಸಲಾಗಿದೆ.
ಶೇರು ಮಾರುಕಟ್ಟೆಯ ಅನಿಶ್ಚಿತತೆಗಳಿಂದಾಗಿ ಜನವರಿ 2025ರಿಂದ ಈ ತನಕ ಸುಮಾರು 1.48 ಲಕ್ಷ ಕೋಟಿ ರೂ. ಮೌಲ್ಯದ ಬಂಡವಾಳವನ್ನು ವಿದೇಶಿ ಬಂಡವಾಳ ಹೂಡಿಕೆ ಸಂಸ್ಥೆಗಳು ಹಿಂಪಡೆದಿವೆ. ದೇಶದ ಅರ್ಥವ್ಯವಸ್ಥೆಯ ಕುರಿತಾಗಿ ಹುಟ್ಟುವ ಅನಿಶ್ಚಿತತೆಯಿಂದ ವಿದೇಶಿ ಸಂಸ್ಥೆಗಳು ತಮ್ಮ ಹೂಡಿಕೆಯನ್ನು ಹಿಂಪಡೆಯಲು ಮುಂದಾಗುತ್ತವೆ.
ಇದರ ಜೊತೆಗೆ, ನವೋದ್ಯಮ (ಸ್ಟಾರ್ಟ್ ಅಪ್) ಕಂಪೆನಿಗಳು ಹೊಸತಾಗಿ ಶೇರು ಮಾರುಕಟ್ಟೆಗೆ ಪ್ರವೇಶಿಸಿ-ಐಪಿಒ ಆರಂಭಿಕ ಸಾರ್ವಜನಿಕ ಕೊಡುಗೆಗಳ ಮೂಲಕ ಹೆಚ್ಚು ಬಂಡವಾಳವನ್ನು ಪೇರಿಸಲು ಪ್ರಯತ್ನಿಸಿದಾಗ ಹೂಡಿಕೆದಾರರಿಂದ ನಿರೀಕ್ಷಿತ ಸ್ಪಂದನೆ ಇತ್ತೀಚಿನ ವರ್ಷಗಳಲ್ಲಿ ಲಭಿಸಿರಲಿಲ್ಲ. ಪ್ರವರ್ತಕರು ಶೇರು ವ್ಯಾಪಾರದಿಂದ ಲಾಭ ಸಂಪಾದಿಸಿ ತಾವು ಆರಂಭಿಸಿದ ಉದ್ದಿಮೆಗಳನ್ನು ಹೊಸ ಮಾಲಕರಿಗೆ ಹಸ್ತಾಂತರಿಸಿದರು. ಮಾರುಕಟ್ಟೆಯ ಏರಿಳಿತದಿಂದಾಗಿ ಹೊಸ ಮಾಲಕರು ಉದ್ದಿಮೆಗಳಿಗೆ ಬೀಗ ಜಡಿದರೆಂದು ವರದಿಗಳಿವೆ.
ಈ ಬೆಳವಣಿಗೆಗಳ ಹಿಂದೆ ಅಮೆರಿಕದ ಟ್ರಂಪ್ ಸರಕಾರದ ಆರ್ಥಿಕ ನೀತಿಗಳು, ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಸಂಭವಿಸುತ್ತಿರುವ ರಾಜಕೀಯ ವಿದ್ಯಮಾನಗಳು ಮತ್ತು ದೇಶದ ಆಂತರಿಕ ಅರ್ಥವ್ಯವಸ್ಥೆಗೆ ಸಮರ್ಥವಾದ ನಾಯಕತ್ವದ ಕೊರತೆಗಳು ಎದ್ದು ಕಾಣುತ್ತವೆ. ಭಾರತ ಅಮೆರಿಕ ವಾಣಿಜ್ಯ ಒಪ್ಪಂದಕ್ಕೆ ಇನ್ನೂ ಶುಭಗಳಿಗೆ ಒದಗಿಲ್ಲ. ಅದರ ಬಗೆಗೂ ಅನಿಶ್ಚಿತತೆ ಕಾಡುತ್ತಿದೆ.
ಪರಿಣಾಮಗಳು
ಸರಕಾರ, ಅದರ ಅಂಗ ಸಂಸ್ಥೆಗಳು ಹಾಗೂ ವಂದಿಮಾಗಧರು ರೂಪಾಯಿಯ ಬೆಲೆ ಕುಸಿದಾಗ ನಮ್ಮ ರಫ್ತುಗಳು ಅಗ್ಗವಾಗಿ ಅವುಗಳಿಗೆ ಉತ್ತೇಜನ ಸಿಗಲಿದೆ; ಆಮದು ದುಬಾರಿಯಾಗಿ ಅವುಗಳಲ್ಲಿ ಕಡಿತವಾಗಲಿದೆ ಎಂದು ಸಮಜಾಯಿಷಿಯನ್ನು ನೀಡಬಹುದು ಮತ್ತು ಬೆಲೆ ಕುಸಿತ ತಾತ್ಕಾಲಿಕ ಎನ್ನಬಹುದು (ವಿತ್ತ ಮಂತ್ರಿ ನಿರ್ಮಲಾ ಸೀತಾರಾಮನ್ ‘ರೂಪಾಯಿ ಕೃಶವಾಗಿಲ್ಲ, ಬದಲಿಗೆ ಡಾಲರು ಪ್ರಬಲವಾಗಿದೆ’ ಎಂದು ಹಿಂದೊಮ್ಮೆ ಹೇಳಿದ್ದು ಇಲ್ಲಿ ಸಂಗತವಾಗುತ್ತದೆ). ಆದರೆ ಈ ಬೆಳವಣಿಗೆಯಿಂದ ವಿವಿಧ ಕ್ಷೇತ್ರಗಳ ಮೇಲೆ ದುಷ್ಪರಿಣಾಮಗಳು ಆಗಿಯೇ ಆಗುತ್ತವೆ.
ಆಮದು ದುಬಾರಿಯಾದಾಗ ಆಮದು ಮಾಡಿಕೊಂಡ ಕಚ್ಚಾ ವಸ್ತುಗಳ ಬೆಲೆ ಹೆಚ್ಚುತ್ತದೆ. ಇದರ ಪರಿಣಾಮ ಉತ್ಪಾದನಾ ವೆಚ್ಚದ ಮೇಲೆ ಆಗುತ್ತದೆ. ಇದರ ನೇರ ಪ್ರಭಾವ ಸಿದ್ಧಪಡಿಸಿದ ಸರಕುಗಳ ಬೆಲೆಯ ಮೇಲೆ ಆಗುತ್ತದೆ. ಇದರಿಂದ ಸಂಕಷ್ಟಕ್ಕೆ ಈಡಾಗುವವರು ಮಧ್ಯಮ ಮತ್ತು ತಳವರ್ಗದ ನಾಗರಿಕರು.
ಆಮದು ಮಾಡಿದ ಕಚ್ಚಾವಸ್ತುಗಳ ಬೆಲೆ ಹೆಚ್ಚಿದಾಗ ಉತ್ಪಾದನಾ ವೆಚ್ಚ ಏರುತ್ತದೆ. ಗ್ರಾಹಕರ ಆದಾಯ ಸ್ಥಗಿತಗೊಂಡಾಗ ಉದ್ದಿಮೆಗಳ ಉತ್ಪನ್ನಗಳಿಗೆ ಮತ್ತು ಸೇವೆಗಳಿಗೆ ಬೇಡಿಕೆ ಕುಂಠಿತವಾಗಿ ಉತ್ಪಾದನೆಯಲ್ಲಿ ಕುಸಿತವಾಗುವ ಸಾಧ್ಯತೆ ಇದೆ. ಅನಿಶ್ಚಿತತೆಯ ಕಾರಣದಿಂದಾಗಿ ಬಂಡವಾಳದ ಒಳ ಹರಿವು ಕ್ಷೀಣಿಸುತ್ತದೆ.
ವಿದೇಶಿ ವ್ಯಾಪಾರದಲ್ಲಿ ಮಿಗತೆಯ ಬದಲು ಖೋತಾ ಆದಾಗ ಆಮದು ಮಾಡಿಕೊಂಡ ಅಗತ್ಯ ವಸ್ತುಗಳ ಬಿಲ್ಲುಗಳನ್ನು ಸಂದಾಯಿಸಲು ದೇಶದ ವಿದೇಶಿ ವಿನಿಮಯವನ್ನು ಉಪಯೋಗಿಸಬೇಕಾಗುತ್ತದೆ. ಇದರಿಂದಾಗಿ ನಮ್ಮ ವಿದೇಶಿ ವಿನಿಮಯದ ದಾಸ್ತಾನು ಮತ್ತಷ್ಟು ಕ್ಷೀಣಿಸಬಹುದು.
ಸರಕಾರವು ಅಂತರ್‌ರಾಷ್ಟ್ರೀಯ ಹಣಕಾಸು ಸಂಸ್ಥೆಗಳಿಂದ ಡಾಲರು ಮೂಲಕ ಪಡೆದ ಸಾಲಗಳ ಮೇಲಿನ ಬಡ್ಡಿ ಮತ್ತು ಮರುಪಾವತಿಯ ಭಾರ ಹೆಚ್ಚಾಗಿ ನಮ್ಮ ವಿದೇಶಿ ವಿನಿಮಯದ ರಾಶಿಗೆ ಹೊಡೆತ ಬೀಳಬಹುದು. ಅದೇ ರೀತಿ ವಿದೇಶಗಳಲ್ಲಿ ಉಚ್ಚ ಶಿಕ್ಷಣಕ್ಕೆ ಡಾಲರ್ ಸಾಲ ಪಡಕೊಂಡ ಯುವ ಜನರ ಮರುಪಾವತಿ ಹೊರೆಯೂ ಹೆಚ್ಚಾಗಲಿದೆ, ಅವರ ಭವಿಷ್ಯ ಡೋಲಾಯಮಾನವಾಗಲಿದೆ.
ಆರ್ಥಿಕ ಸಮಸ್ಯೆಗಳನ್ನು ಎದುರಿಸುವಲ್ಲಿ ಅಪ್ರಬುದ್ಧತೆ
ಇಂದಿನ ಅತ್ಯಂತ ಕಲುಷಿತ ರಾಜಕೀಯ ಪರಿಸ್ಥಿತಿಯಲ್ಲಿ ಹಿಂದಿನ ನಾಯಕರನ್ನು ದೂಷಿಸುವುದರಲ್ಲಿಯೇ ಕಾಲಹರಣವಾಗುತ್ತದೆ. ಚರ್ಚೆಗಳ ದಿಕ್ಕು ತಪ್ಪಿಸಲು ನಿರಂತರ ಪ್ರಯತ್ನ ನಡೆಯುತ್ತಿದೆ. 2013ರಲ್ಲಿ ರೂಪಾಯಿಯ ಬೆಲೆ ಕುಸಿಯುತ್ತಿದ್ದಾಗ ಅಂದು ಗುಜರಾತಿನ ಮುಖ್ಯಮಂತ್ರಿಗಳಾಗಿದ್ದ ನರೇಂದ್ರ ಮೋದಿ ಅವರು ಆಗಿನ ಪ್ರಧಾನಿ ಮನಮೋಹನ್ ಸಿಂಗ್‌ರ ಮೇಲೆ ಉಗ್ರವಾದ ಟೀಕಾಪ್ರಹಾರವನ್ನೇ ಮಾಡಿದ್ದರು. ಆಗ ಭಾರತೀಯ ಜನತಾ ಪಕ್ಷದ ವಕ್ತಾರೆಯಾಗಿದ್ದ (ಇಂದಿನ ಹಣಕಾಸು ಮಂತ್ರಿ) ನಿರ್ಮಲಾ ಸೀತಾರಾಮನ್ ಸುಮಾರಾಗಿ ಅದೇ ಧಾಟಿಯಲ್ಲಿ ಸರಕಾರವನ್ನು ಪ್ರಶ್ನಿಸಿದ್ದರು. ಅಂದಿನ ಅನೇಕ ಗಣ್ಯರು (ಶ್ರೀಶ್ರೀ ರವಿಶಂಕರ್, ತಾರೆ ಶಿಲ್ಪಾ ಶೆಟ್ಟಿ, ಉದ್ಯಮಿ ಆನಂದ್ ಮಹೀಂದ್ರರನ್ನು ಒಳಗೊಂಡು) ಮೋದಿ ಅವರು ಪ್ರಧಾನಿಯಾದರೆ ರೂಪಾಯಿ ಬೆಲೆ 40ರ ಆಸುಪಾಸಿನಲ್ಲಿಯೇ ಸ್ಥಿರವಾಗಲಿದೆ ಎಂದು ಘಂಟಾಘೋಷವಾಗಿ ಸಾರಿದ್ದರು. ಈಗ ರೂಪಾಯಿಯ ಮೌಲ್ಯವು 90ರನ್ನು ಮೀರಿದರೂ ಈ ಗಣ್ಯರು ಇಂದಿನ ಸರಕಾರವನ್ನು ಪ್ರಶ್ನಿಸುವ ಬದಲು ಜಾಣಮೌನಕ್ಕೆ ಶರಣಾಗಿದ್ದಾರೆ.
2013ರಲ್ಲಿ ರೂಪಾಯಿ ಬೆಲೆ ನಿರಂತರ ಕುಸಿಯುತ್ತಿದ್ದಾಗ ಪ್ರಧಾನಿ ಮನಮೋಹನ್ ಸಿಂಗ್‌ರವರು ಧೈರ್ಯವಾಗಿ ಸಂಸತ್ತನ್ನು ಉದ್ದೇಶಿಸಿ ಮಾತನಾಡಿ ಯಾಕೆ ರೂಪಾಯಿ ಬೆಲೆ ಕುಸಿಯುತ್ತಿದೆ ಮತ್ತು ಸರಕಾರವು ಏನು ಕ್ರಮಗಳನ್ನು ಕೈಗೊಳ್ಳಲಿದೆ ಎಂದು ತಿಳಿಸಿದ್ದರು. ಇದಕ್ಕೆ ವ್ಯತಿರಿಕ್ತವಾಗಿ 11 ವರ್ಷಗಳಲ್ಲಿ ರೂಪಾಯಿಯ ಬೆಲೆ ಸತತವಾಗಿ ಪತನವಾಗುತ್ತಿದ್ದಾಗ ಪ್ರಧಾನಿ ಮೋದಿ ಅವರು ಒಮ್ಮೆಯೂ ಈ ವಿಷಯದ ಬಗ್ಗೆ ಸರಕಾರದ ಅನಿಸಿಕೆಗಳನ್ನು ಮತ್ತು ಪರಿಹಾರೋಪಾಯಗಳನ್ನು ಸಂಸತ್ತಿನ ಮುಂದೆ ಇಡುವ ಸಾಹಸವನ್ನು ಮಾಡಲಿಲ್ಲ.
ಅರ್ಥವ್ಯವಸ್ಥೆಯ ಜ್ವಲಂತ ಸಮಸ್ಯೆಗಳಿಗೆ ಪರಿಹಾರವನ್ನು ಪಕ್ಷಭೇದವನ್ನು ಬದಿಗಿರಿಸಿ ಚರ್ಚಿಸಿ ಕಂಡು ಹುಡುಕಬೇಕು. ಸ್ವತಂತ್ರ ತಜ್ಞರ ಅಭಿಪ್ರಾಯಗಳನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸಬೇಕು. ದೂರದೃಷ್ಟಿ ಹೊಂದಿದ ರಾಜಕೀಯ ನಾಯಕರು ಈ ದಾರಿಯನ್ನು ತುಳಿಯುತ್ತಾರೆ. ಆದರೆ ರಾಜಕೀಯ ಇಬ್ಬಂದಿತನವು ಸಾಮಾನ್ಯವಾದ ಇಂದಿನ ಪರಿಸ್ಥಿತಿಯಲ್ಲಿ ಈ ದಾರಿ ಬಿಸಿಲುಗುದುರೆಯಾಗಿಯೇ ಉಳಿಯುತ್ತದೆ.







