ವಿಧಾನ ಪರಿಷತ್ ಚುನಾವಣೆಯಲ್ಲಿ ಸೋಲು: ಕಾಂಗ್ರೆಸ್ ಆತ್ಮಾವಲೋಕನ ಅಗತ್ಯ

ಶಿಕ್ಷಕರ ಮತ್ತು ಪದವೀಧರರ ನಾಲ್ಕೂ ಕ್ಷೇತ್ರಗಳಲ್ಲಿ ಅನುಭವಿಸಿದ ಸೋಲಿನ ನಂತರ ಕಾಂಗ್ರೆಸ್ ಪಕ್ಷ ‘ಶಿಕ್ಷಣ ಹೃದಯ ತೆರೆಸಬೇಕು ಅಕ್ಷರ’ ಎಂಬ ಆಶಯದೊಂದಿಗೆ 2023ರ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳ ಹಿನ್ನೆಲೆಯಲ್ಲಿ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳಲ್ಲಿ ಹತ್ತನೇ ಒಂದು ಭಾಗವೂ ಸಮರ್ಪಕವಾಗಿ ಈಡೇರಿಲ್ಲವೆಂಬ ನಾಗರಿಕ ಸಮಾಜದ ಟೀಕೆಗೆ ಸರಕಾರ ಉತ್ತರಿಸಬೇಕಾಗಿದೆ. ಪ್ರತೀ ಭರವಸೆ ಈಡೇರಿಸಲು ಕೈಗೊಂಡ ಕ್ರಮ, ಅನುಷ್ಠಾನದ ಆದೇಶ, ಹೂಡಿದ ಹಣ ಮತ್ತು ಸಾಧನೆಯ ವಿವರವನ್ನು ಜನತೆಯ ಮುಂದೆ ಇಡುವ ಮೂಲಕ ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕಿದೆ.
ಪ್ರಣಾಳಿಕೆಯ ಸ್ಪಷ್ಟ ಭರವಸೆ, ಸರಕಾರಿ ಮತ್ತು ಅನುದಾನಿತ ಶಾಲೆಕಾಲೇಜುಗಳ ಎಲ್ಲ ಖಾಲಿ ಶಿಕ್ಷಕ ಮತ್ತು ಬೋಧಕೇತರ ಹುದ್ದೆಗಳನ್ನು ಒಂದು ವರ್ಷದೊಳಗೆ ಭರ್ತಿ ಮಾಡುವುದಾಗಿತ್ತು. ‘ಹಂತ ಹಂತವಾಗಿ’, ‘ಸಾಧ್ಯವಾದಷ್ಟು’ ಅಥವಾ ‘ಹಣಕಾಸಿನ ಲಭ್ಯತೆಗೆ ಅನುಗುಣವಾಗಿ’ ಎಂಬ ಷರತ್ತಿರಲಿಲ್ಲ. ಆದರೆ 2025-26ರಲ್ಲಿ ಪ್ರಾಥಮಿಕ ಶಾಲೆಗಳಲ್ಲಿ 45,179 ಮತ್ತು ಪ್ರೌಢಶಾಲೆಗಳಲ್ಲಿ 13,045 ಶಿಕ್ಷಕರ ಹುದ್ದೆಗಳು ಖಾಲಿಯಾಗಿದ್ದವು; 43,526 ಅತಿಥಿ ಶಿಕ್ಷಕರನ್ನು ಅವಲಂಬಿಸಲಾಗಿತ್ತು ಎಂದು ಇಲಾಖೆಯ ಮಾಹಿತಿಯಾಧಾರಿತ ಅಂಕಿಅಂಶ. ಇಂದಿಗೂ ಈ ಹುದ್ದೆಗಳು ಖಾಲಿ ಇರುವುದು ಭರವಸೆ ಮತ್ತು ವಾಸ್ತವದ ಅಂತರವನ್ನು ತೋರಿಸುತ್ತವೆ. ಬೋಧನೆಯ ಕೊರತೆಯನ್ನು ಮಕ್ಕಳು ಭರಿಸಿದರೆ, ಹೆಚ್ಚುವರಿ ತರಗತಿ ಕೆಲಸದ ಒತ್ತಡವನ್ನು ಹಾಲಿ ಶಿಕ್ಷಕರು ಹೊರುತ್ತಾರೆ. ನೇಮಕಾತಿ ವಿಳಂಬ ಆಡಳಿತಾತ್ಮಕ ವೈಫಲ್ಯ ಮಾತ್ರವಲ್ಲ; ಮಕ್ಕಳ ಕಲಿಕಾ ಅವಕಾಶದ ನಷ್ಟವೂ ಹೌದು. ಕಲಿಕೆಯ ಈ ನಷ್ಟಕ್ಕೆ ಸರಕಾರ ತುರ್ತಾಗಿ ಸ್ಪಂದಿಸಬೇಕಿದೆ.
ಅತಿಥಿ ಶಿಕ್ಷಕರು ಮತ್ತು ಉಪನ್ಯಾಸಕರನ್ನು ಖಾಯಂಗೊಳಿಸಲು ಸೂಕ್ತ ಯೋಜನೆ ರೂಪಿಸುವುದಾಗಿಯೂ ಕಾಂಗ್ರೆಸ್ ಹೇಳಿತ್ತು. ಇದು ಹಲವು ವರ್ಷಗಳಿಂದ ಶಿಕ್ಷಣ ವ್ಯವಸ್ಥೆಯಲ್ಲಿ ದುಡಿಯುತ್ತಿರುವವರ ಶ್ರಮಕ್ಕೆ ಮಾನ್ಯತೆ ನೀಡುವ ನ್ಯಾಯದ ಪ್ರಶ್ನೆ. ಸರಕಾರ ಪುನರ್ನೇಮಕದ ಸಂಖ್ಯೆಯಷ್ಟೇ ಅಲ್ಲದೆ, ಸೇವಾಭದ್ರತೆಯ ಯೋಜನೆ, ಪ್ರಯೋಜನ ಪಡೆದವರು ಮತ್ತು ತಾತ್ಕಾಲಿಕ ಉದ್ಯೋಗದ ಅವಲಂಬನೆ ಕಡಿಮೆಯಾದ ವಿವರ ನೀಡಬೇಕು. ಹಾಲಿ ಶಿಕ್ಷಕರ ಪದೋನ್ನತಿ, ಸೇವಾಜ್ಯೇಷ್ಠತೆ, ವೃಂದದ ಸ್ಥಾನಮಾನದ ವಿವಾದಗಳು, ಹಳೆಯ ಪಿಂಚಣಿಯ ನಿರೀಕ್ಷೆ ಮತ್ತು ಹೆಚ್ಚುತ್ತಿರುವ ಕೆಲಸದ ಹೊರೆ ಅಸಮಾಧಾನವನ್ನು ಗಾಢಗೊಳಿಸುತ್ತವೆ. ಶಿಕ್ಷಕರನ್ನು ಸಾರ್ವಜನಿಕ ಶಿಕ್ಷಣದ ಆಧಾರಸ್ತಂಭವೆನ್ನುವ ಸರಕಾರ ಅವರ ಜೀವನ ಮತ್ತು ವೃತ್ತಿಯನ್ನು ಅನಿಶ್ಚಿತತೆಯಲ್ಲಿ ಇಡಬಾರದು. ಈ ಬೇಡಿಕೆಗಳ ಪರಿಹಾರಕ್ಕೆ ಸ್ಪಷ್ಟ ಕಾಲಮಿತಿ ಅಗತ್ಯವಾಗಿದೆ.
ರಾಜ್ಯ ಶಿಕ್ಷಣ ನೀತಿಯ ಭರವಸೆಯಲ್ಲಿಯೂ ಹೊಣೆಗಾರಿಕೆಯ ಕೊರತೆ ಕಾಣುತ್ತದೆ. ರಾಷ್ಟ್ರೀಯ ಶಿಕ್ಷಣ ನೀತಿ2020ನ್ನು ತಿರಸ್ಕರಿಸಿ ಪ್ರತ್ಯೇಕ ನೀತಿ ಜಾರಿಗೊಳಿಸುವುದಾಗಿ ಅಧಿಕಾರಕ್ಕೆ ಬಂದ ಪಕ್ಷವು ಅನುಷ್ಠಾನಕ್ಕೆ ಸ್ಪಷ್ಟ ದಿಕ್ಕು ನೀಡಬೇಕಿತ್ತು. ನೀತಿ ಇನ್ನೂ ಜಾರಿಯಾಗದಿರುವುದು ವಿಷಾದನೀಯ. ಇನ್ನೊಂದೆಡೆ, ಕರ್ನಾಟಕದ ಸಾರ್ವಜನಿಕ ಶಾಲೆಗಳ ಬಲವರ್ಧನೆಯ ಕಾರ್ಯಕ್ರಮವು ರಾಷ್ಟ್ರೀಯ ಶಿಕ್ಷಣ ನೀತಿ-2020ಕ್ಕೆ ಹೊಂದಿಕೊಂಡಿದೆ ಎಂದು ಎಡಿಬಿಯ ಅಧಿಕೃತ ಪ್ರಕಟಣೆ ಹೇಳುತ್ತದೆ. ಪ್ರಣಾಳಿಕೆಯಲ್ಲಿ ಎನ್ಇಪಿ ತಿರಸ್ಕಾರದ ಭರವಸೆ; ಸಾಲಾಧಾರಿತ ಕಾರ್ಯಕ್ರಮದಲ್ಲಿ ಅದೇ ನೀತಿಯೊಂದಿಗೆ ಹೊಂದಾಣಿಕೆ. ಈ ವೈರುಧ್ಯಕ್ಕೆ ಕಾಂಗ್ರೆಸ್ ಉತ್ತರಿಸಬೇಕು. ರಾಜ್ಯ ಶಿಕ್ಷಣ ನೀತಿಯ ವಿವರಗಳನ್ನು ಜನರಿಗೆ ತಿಳಿಸದೆ, ಬೇರೆ ಕಾರ್ಯಕ್ರಮಗಳ ಮೂಲಕ ಶಿಕ್ಷಣದ ರಚನೆ ಬದಲಾಯಿಸುವುದು ಸಾರ್ವಜನಿಕ ಚರ್ಚೆಯನ್ನು ದುರ್ಬಲಗೊಳಿಸುತ್ತದೆ. ರಾಜ್ಯ ನೀತಿಯ ಬಗ್ಗೆ ಸಾರ್ವಜನಿಕ ವಿಶ್ವಾಸ ಮೂಡಿಸುವುದು ಅಗತ್ಯ.
ಶಾಲೆಗಳ ಮುಚ್ಚುವಿಕೆ ವಿಲೀನದ ವಿರೋಧವನ್ನು ಅಪಪ್ರಚಾರವೆಂದೂ, ವಿರೋಧಿಸುವವರನ್ನು ತಲೆಹರಟೆಗಳೆಂದೂ ತಳ್ಳಿಹಾಕಲಾಗದು. ಚನ್ನಪಟ್ಟಣದಲ್ಲಿ ಸರಕಾರಿ ಶಾಲೆಗಳನ್ನು ಮುಚ್ಚಿ ಮಕ್ಕಳನ್ನು ಹೊಂಗನೂರು ಕೆಪಿಎಸ್ಗೆ ಸ್ಥಳಾಂತರಿಸಿದ್ದು, ಉಳಿದ ಐದು ಶಾಲೆಗಳ ಪಾಲಕರನ್ನು ಒಪ್ಪಿಸದ ಶಿಕ್ಷಕರು ಮತ್ತು ಮುಖ್ಯಸ್ಥರಿಗೆ ನೋಟಿಸ್ ನೀಡಿದ್ದು ವರದಿಯಾಗಿದೆ. ಮತ್ತೊಂದೆಡೆ, ಕನಕಪುರ ತಾಲೂಕಿನ ಹೆಗ್ಗನೂರು ಕೆಪಿಎಸ್ ಮ್ಯಾಗ್ನೆಟ್ ಶಾಲೆಗೆ ಉಯಂಬಳ್ಳಿ ಶಾಲೆಯನ್ನು ಬಿಟ್ಟು ಉಳಿದ 14 ಶಾಲೆಗಳನ್ನು ಕೆಪಿಎಸ್ ಶಾಲೆಗೆ ವಿಲೀನಗೊಳಿಸಲಾಗಿದೆ.ಇದು ಶಾಲಾ ಬಲವರ್ಧನೆಯ ಹೆಸರಿನ ಆಡಳಿತವನ್ನು ಪ್ರಶ್ನಿಸುತ್ತದೆ. ಊರಿನ ಶಾಲೆ ಉಳಿಸಬೇಕೆಂಬ ಪಾಲಕರ ಅಭಿಪ್ರಾಯ ಅಡ್ಡಿಯೇ? ಸ್ಥಳಾಂತರಕ್ಕೆ ಒಪ್ಪಿಸದ ಶಿಕ್ಷಕರೇ ತಪ್ಪಿತಸ್ಥರೇ? ಶಾಲೆ ಮುಚ್ಚಿದಾಗ ಕಳೆದುಹೋಗುವುದು ಕಟ್ಟಡದ ಬಳಕೆಯಷ್ಟೇ ಅಲ್ಲ; ಸಮುದಾಯದ ಹತ್ತಿರದ ಸಾರ್ವಜನಿಕ ಶಿಕ್ಷಣದ ನೆಲೆ. ಮಕ್ಕಳ ವಯಸ್ಸು, ಪ್ರಯಾಣ, ಸುರಕ್ಷತೆ, ಅಂಗವೈಕಲ್ಯ ಮತ್ತು ಕುಟುಂಬದ ಪರಿಸ್ಥಿತಿಯನ್ನು ಪರಿಗಣಿಸದೆ ವಿಲೀನವನ್ನು ಸಂಪನ್ಮೂಲ ನಿರ್ವಹಣೆಯ ಕ್ರಮವಾಗಿ ನೋಡಲಾಗದು. ಪಾಲಕರ ಕಳವಳಕ್ಕೆ ಗೌರವಯುತ ಸಮಾಲೋಚನೆಯ ಮೂಲಕ ಸ್ಪಂದಿಸಬೇಕು.
ಎಡಿಬಿ ಸಾಲದ ಮೂಲಕ ಕೆಪಿಎಸ್ಗಳ ಅಭಿವೃದ್ಧಿ ಅಧಿಕೃತವಾಗಿ ದಾಖಲಾಗಿದೆ. ಬ್ಯಾಂಕ್ 182.89 ಮಿಲಿಯನ್ ಅಮೆರಿಕನ್ ಡಾಲರ್ ಸಮಮೌಲ್ಯದ ಸಾಲಕ್ಕೆ ಅನುಮೋದಿಸಿದ್ದು, 500 ಸಮಗ್ರ ಕೆಪಿಎಸ್ ಶಾಲಾ ಸಮೂಹಗಳನ್ನು ರೂಪಿಸುವ ಗುರಿಯಿದೆ. ಇದು ಫಲಿತಾಂಶಾಧಾರಿತ ಸಾಲ ಕಾರ್ಯಕ್ರಮ. ಸರಕಾರ ಸಾಲದ ಆದ್ಯತೆಗಳು, ಷರತ್ತುಗಳು ಮತ್ತು ಉಳಿದ ನೆರೆಹೊರೆಯ ಶಾಲೆಗಳ ರಕ್ಷಣೆಯನ್ನು ವಿವರಿಸಬೇಕು. ಆಯ್ದ ಶಾಲೆಗಳಿಗೆ ದೊಡ್ಡ ಹೂಡಿಕೆಯಾಗಿ, ಇತರ ಶಾಲೆಗಳಲ್ಲಿ ಶಿಕ್ಷಕರು-ಮೂಲಸೌಕರ್ಯಗಳ ಕೊರತೆ ಮುಂದುವರಿದರೆ ಸಾರ್ವಜನಿಕ ವ್ಯವಸ್ಥೆಯೊಳಗೇ ಅಸಮಾನತೆ ಹೆಚ್ಚುತ್ತದೆ. ಸಾಲದಿಂದ ನಿರ್ಮಿಸಿದ ಉತ್ತಮ ಕಟ್ಟಡ ಸಾಧನೆಯಾಗಬಹುದು; ಸುತ್ತಲಿನ ಊರುಗಳ ಶಾಲೆಗಳು ದುರ್ಬಲಗೊಂಡರೆ ಅದನ್ನು ಸಮಗ್ರ ಶಿಕ್ಷಣ ಸುಧಾರಣೆ ಎನ್ನಲಾಗದು. ಎಲ್ಲ ಶಾಲೆಗಳ ಅಭಿವೃದ್ಧಿಗೂ ಸಮಾನ ಆದ್ಯತೆ ದೊರೆಯಬೇಕು.
ಹನ್ನೆರಡನೇ ತರಗತಿವರೆಗೆ ಕನ್ನಡ-ಇಂಗ್ಲಿಷ್ ಜತೆಯ ಪಠ್ಯಪುಸ್ತಕಗಳ ಭರವಸೆಯ ಆಶಯ ಮಕ್ಕಳಿಗೆ ಎರಡೂ ಭಾಷೆಗಳ ಸಂಪನ್ಮೂಲ ಒದಗಿಸುವುದು. ಇದನ್ನು ಕನ್ನಡ ಮಾಧ್ಯಮದ ಸ್ಥಾನ ಕುಗ್ಗಿಸಲು ಸಮರ್ಥನೆಯಾಗಿಸಬಾರದು. ಇಂಗ್ಲಿಷ್ ಕಲಿಸಬೇಕೆಂಬ ಪಾಲಕರ ಆಶಯಕ್ಕೆ ಭಾಷಾ ಕಲಿಕೆಯ ಗುಣಮಟ್ಟದ ಮೂಲಕ ಸ್ಪಂದಿಸಬೇಕು; ಕನ್ನಡದಲ್ಲಿ ವಿಜ್ಞಾನ, ಗಣಿತ ಮತ್ತು ಸಮಾಜವನ್ನು ಅರ್ಥಮಾಡಿಕೊಳ್ಳುವ ಅವಕಾಶ ದುರ್ಬಲಗೊಳಿಸಬಾರದು. ಪರಿಚಿತ ಭಾಷೆಯಲ್ಲಿ ಕಲಿಕೆಯ ಬುನಾದಿ ಗಟ್ಟಿಗೊಳಿಸುತ್ತಾ ಹೆಚ್ಚುವರಿ ಭಾಷೆಗಳ ಸಾಮರ್ಥ್ಯ ಬೆಳೆಸಲು ಯುನೆಸ್ಕೊ ಒತ್ತು ನೀಡುತ್ತದೆ (ಯುನೆಸ್ಕೊ, 2025). ಮಾಧ್ಯಮದ ಹೆಸರು ಬದಲಿಸಿದರೆ ಶಿಕ್ಷಕರ ಕೊರತೆ ನೀಗುವುದಿಲ್ಲ; ದ್ವಿಭಾಷಾ ಪಠ್ಯಪುಸ್ತಕದಿಂದಲೇ ಪರಿಣಾಮಕಾರಿ ಬೋಧನೆಯಾಗುವುದಿಲ್ಲ. ಸಮರ್ಥ ಶಿಕ್ಷಕರು, ತರಬೇತಿ, ವಿಷಯ ಸಂಪನ್ಮೂಲ ಮತ್ತು ನಿರಂತರ ಶೈಕ್ಷಣಿಕ ನೆರವು ಬೇಕು. ಎರಡೂ ಭಾಷಾ ಕಲಿಕೆಯ ಜೊತೆಗೆ ವಿಷಯಗ್ರಹಿಕೆಯೂ ಗಟ್ಟಿಯಾಗಬೇಕು.
ಅನುದಾನರಹಿತ ಕನ್ನಡ, ಉರ್ದು, ತಮಿಳು ಸೇರಿದಂತೆ ಎಲ್ಲ ಭಾಷಾ ಶಾಲೆಗಳಲ್ಲಿ ಕನ್ನಡ ಶಿಕ್ಷಕರ ನೇಮಕದ ಭರವಸೆಯ ಪ್ರಗತಿಯೂ ಸ್ಪಷ್ಟವಾಗಬೇಕು. ಶಿಕ್ಷಕರಿಲ್ಲದ ಶಾಲೆಗಳು, ಸೃಷ್ಟಿಸಿದ ಹುದ್ದೆಗಳು ಮತ್ತು ನೇಮಕಾತಿಗಳ ಲೆಕ್ಕ ಸರಕಾರ ನೀಡಬೇಕು. ಸಮಾರಂಭಗಳ ಕನ್ನಡಾಭಿಮಾನಕ್ಕಿಂತ ಕನ್ನಡ ಕಲಿಸಲು ಶಿಕ್ಷಕರನ್ನು ಒದಗಿಸುವುದು ಮುಖ್ಯ. ಸರಕಾರಿ-ಅನುದಾನಿತ ಶಾಲೆಗಳಲ್ಲಿ ದೈಹಿಕ ಶಿಕ್ಷಣ, ಸಂಗೀತ ಮತ್ತು ಕಲಾ ಶಿಕ್ಷಕರ ನೇಮಕ ಮಕ್ಕಳ ಸಮಗ್ರ ಬೆಳವಣಿಗೆಗೆ ಸಂಬಂಧಿಸಿದೆ. ಕ್ರೀಡೆ, ಕಲೆ, ಸಂಗೀತದ ಅವಕಾಶ ನೀಡದೆ ಪರೀಕ್ಷೆಯ ಅಂಕಗಳನ್ನೇ ಫಲಿತಾಂಶವೆಂದು ಪರಿಗಣಿಸಿದರೆ ಸಮಗ್ರ ಶಿಕ್ಷಣದ ಆಶಯ ಕುಗ್ಗುತ್ತದೆ. ಹೊಸ ಯೋಜನೆಗಳ ನಡುವೆ ಈ ಮೂಲಭೂತ ಭರವಸೆಗಳು ಮರೆಯಾಗಬಾರದು. ಮಕ್ಕಳ ಬಹುಮುಖ ಪ್ರತಿಭೆಯ ಬೆಳವಣಿಗೆಗೆ ಅವಕಾಶ ಬೇಕು.
ವಿದ್ಯಾರ್ಥಿವೇತನಗಳ ಏಕೀಕೃತ, ಕಾಲಮಿತಿಯ ವಿತರಣೆ, ಶೈಕ್ಷಣಿಕ ಹಣಕಾಸು ನಿಗಮ, ವಿದ್ಯಾಸಿರಿ ನೆರವಿನ ಹೆಚ್ಚಳ, ಪಿಯುಸಿಯಿಂದ ಉನ್ನತ ಶಿಕ್ಷಣದವರೆಗೆ ಎಲ್ಲ ವಿದ್ಯಾರ್ಥಿನಿಯರಿಗೆ ಲ್ಯಾಪ್ಟಾಪ್/ಡಿಜಿಟಲ್ ನೋಟ್ಪ್ಯಾಡ್ ಮತ್ತು ಸರಕಾರಿ ಶಾಲೆಗಳಲ್ಲಿ ಓದಿ ವೃತ್ತಿಪರ ಶಿಕ್ಷಣಕ್ಕೆ ಪ್ರವೇಶಿಸುವ ಅರ್ಹ ವಿದ್ಯಾರ್ಥಿಗಳಲ್ಲಿ ನಿಗದಿತ ಪ್ರಮಾಣದ ಮಂದಿಗೆ ಶುಲ್ಕಸಹಾಯ-ಇವೆಲ್ಲ ಸ್ಪಷ್ಟ ಫಲಾನುಭವಿಗಳಿರುವ ಭರವಸೆಗಳು. ಸಾಧನೆ ಅಳೆಯಲು ಅರ್ಹರು, ನೆರವು ಪಡೆದವರು ಮತ್ತು ಉಳಿದವರ ವಿವರ ಸಾಕು. ಆಯ್ದ ವರ್ಗಗಳ ನೆರವನ್ನು ಎಲ್ಲರಿಗೂ ನೀಡಿದ ಭರವಸೆಯ ಪೂರ್ಣ ಅನುಷ್ಠಾನವೆನ್ನಲಾಗದು. ಅವಕಾಶಗಳ ಸಮಾನತೆಯೆಂದರೆ ಪ್ರತಿಭೆಯ ಪ್ರಶಂಸೆಯಷ್ಟೇ ಅಲ್ಲ; ಬಡತನದಿಂದ ಪ್ರತಿಭಾವಂತ ಮಕ್ಕಳ ಮುಂದಿನ ಓದು ನಿಲ್ಲದಂತೆ ನೋಡಿಕೊಳ್ಳುವುದು. ಪ್ರತೀ ಅರ್ಹ ಮಗುವಿಗೂ ಕಾಲಮಿತಿಯಲ್ಲಿ ನೆರವು ತಲುಪಬೇಕು.
ಶುಲ್ಕ ನಿಯಂತ್ರಣ, ಬಿಪಿಎಲ್ ವಿದ್ಯಾರ್ಥಿಗಳ ಶುಲ್ಕ ಕಡಿತ, ಪರಿಶಿಷ್ಟ ಜಾತಿಪಂಗಡದ ಸಂಘಟನೆಗಳ ಅರ್ಹ ಶಿಕ್ಷಣ ಸಂಸ್ಥೆಗಳಿಗೆ ಅನುದಾನ ಮತ್ತು ಅನುದಾನರಹಿತ ಸಂಸ್ಥೆಗಳ ಶಿಕ್ಷಕ-ಬೋಧಕೇತರರ ಕಲ್ಯಾಣ-ಸೇವಾಭದ್ರತಾ ನಿಧಿಯ ಭರವಸೆಗಳು ವ್ಯಾಪಾರೀಕರಣದೆದುರು ಸರಕಾರದ ಬದ್ಧತೆಯ ಪರೀಕ್ಷೆಗಳು. ಸಾರ್ವಜನಿಕ ಶಾಲೆಯ ಕೊರತೆಯಿಂದ ಖಾಸಗಿಯನ್ನು ಅವಲಂಬಿಸುವ ಕುಟುಂಬಕ್ಕೆ ಶುಲ್ಕ ಏರಿಕೆ ಮನೆಯ ಅಗತ್ಯಗಳನ್ನು ಕಡಿತಗೊಳಿಸುವ ಒತ್ತಡ. ಖಾಸಗಿ ಶಿಕ್ಷಕರ ಸೇವಾಭದ್ರತೆಯನ್ನು ಆಡಳಿತ ಮಂಡಳಿಯ ಇಚ್ಛೆಗೆ ಬಿಡುವುದು ಕಲ್ಯಾಣದ ಭರವಸೆಗೆ ವಿರುದ್ಧ. ಖಾಸಗಿ ಪಾಲ್ಗೊಳ್ಳುವಿಕೆ ಅಸಮಾನತೆ ಹೆಚ್ಚಿಸದಂತೆ ಸಾರ್ವಜನಿಕ ನಿಯಂತ್ರಣಹೊಣೆಗಾರಿಕೆಯನ್ನು ಯುನೆಸ್ಕೊ ಒತ್ತಿಹೇಳುತ್ತದೆ (ಯುನೆಸ್ಕೊ, 2022). ಕಾಂಗ್ರೆಸ್ ಈ ಜವಾಬ್ದಾರಿಯನ್ನು ಅನುಷ್ಠಾನಗೊಳಿಸಿ, ಖಾಸಗೀಕರಣದ ಲಾಬಿಗೆ ಮಣಿಯುತ್ತಿರುವ ಟೀಕೆಗಳಿಗೆ ಉತ್ತರಿಸಬೇಕು. ಶಿಕ್ಷಣದ ವೆಚ್ಚ ಕುಟುಂಬಗಳಿಗೆ ಅನಗತ್ಯವಾಗಿ ಹೊರೆಯಾಗದಂತೆ ನೋಡಿಕೊಳ್ಳಬೇಕು.
ಹಳೆಯ ಕಟ್ಟಡಗಳ ನವೀಕರಣ, ಕುಡಿಯುವ ನೀರು, ಕೈತೊಳೆಯುವ ವ್ಯವಸ್ಥೆ, ಪ್ರತ್ಯೇಕ ಶೌಚಾಲಯಗಳು, ನಿರಂತರ ವಿದ್ಯುತ್, ಶಾಲಾ ಸಾರಿಗೆ, ವಿಶೇಷ ಚೇತನ ಮಕ್ಕಳಿಗೆ ಹತ್ತು ವಸತಿ ಶಾಲೆಗಳು ಮತ್ತು ವಿಶೇಷ ಶಿಕ್ಷಕರ ನೇಮಕ ಮಕ್ಕಳ ಶಿಕ್ಷಣಾನುಭವವನ್ನು ನಿರ್ಧರಿಸುತ್ತವೆ. ವರ್ಷಕ್ಕೆ 2,500 ಸ್ಮಾರ್ಟ್ ಶಾಲೆಗಳ ಭರವಸೆಯ ಮೂರು ವರ್ಷಗಳ ಸಾಧನೆಯನ್ನು 7,500 ಶಾಲೆಗಳ ಗುರಿಗೆ ಹೋಲಿಸಬೇಕು. ಅಲ್ಲಿ ಶಿಕ್ಷಕರು, ನೀರು, ಕಾರ್ಯನಿರ್ವಹಿಸುವ ಶೌಚಾಲಯಗಳಿವೆಯೇ ಎಂಬುದನ್ನೂ ಪರಿಶೀಲಿಸಬೇಕು. ಸಿಎಸ್ಆರ್ ಸಾರ್ವಜನಿಕ ಹೂಡಿಕೆಗೆ ಪೂರಕವಾಗಲಿ; ಮಕ್ಕಳಿಗೆ ಉತ್ತಮ ಶಾಲೆ ದೊರೆಯುವುದನ್ನು ದಾನಿಗಳ ಆಸಕ್ತಿ ನಿರ್ಧರಿಸಬಾರದು. ಗುಣಮಟ್ಟದ ಶಿಕ್ಷಣ ಸರಕಾರದ ಹೊಣೆಗಾರಿಕೆ; ದಾನ ಅಥವಾ ಯೋಜನೆಯ ಅದೃಷ್ಟವಲ್ಲ. ಮೂಲಸೌಕರ್ಯಗಳ ನಿರ್ವಹಣೆಯೂ ಸರಕಾರದ ಅತ್ಯಂತ ನಿರಂತರ ಜವಾಬ್ದಾರಿಯಾಗಿದೆ.
ಬಸವಣ್ಣ, ಕುವೆಂಪು, ಪಂಪ ಮತ್ತು ವೈಜ್ಞಾನಿಕ ಮನೋಭಾವವನ್ನು ಪಠ್ಯದಲ್ಲಿ ಸೇರಿಸುವ ಭರವಸೆಯನ್ನು ಆಡಳಿತದಿಂದ ಬೇರ್ಪಡಿಸಲಾಗದು. ಬಸವಣ್ಣನ ಸಮಾನತೆ ಕಲಿಸುತ್ತಾ ಶಾಲೆಗಳ ಗುಣಮಟ್ಟದಲ್ಲಿ ವರ್ಗಭೇದ ಮುಂದುವರಿಸುವುದು ವಿರೋಧಾಭಾಸ; ಕುವೆಂಪುವಿನ ವಿಶ್ವಮಾನವತೆ ಬೋಧಿಸುತ್ತಾ ಬಡ ಮಗುವಿನ ಅವಕಾಶ ಕುಗ್ಗಿಸುವುದು ಅನ್ಯಾಯ. ಶಿಕ್ಷಣ ಸಂಸ್ಥೆಗಳನ್ನು ಸಾಮಾಜಿಕ ಸಾಮರಸ್ಯ ಕೇಂದ್ರಗಳಾಗಿಸುವುದೆಂದರೆ ಭಿನ್ನ ಹಿನ್ನೆಲೆಯ ಮಕ್ಕಳು ಗೌರವದಿಂದ ಒಟ್ಟಿಗೆ ಕಲಿಯುವ ನೆಲೆ ಬಲಪಡಿಸುವ ಮೂಲಕ ಸಮಾನ ಶಾಲಾ ಶಿಕ್ಷಣ ವ್ಯವಸ್ಥೆಯನ್ನು ಜಾರಿಗೊಳಿಸುವುದು.
ನಿರಂತರ ಮಾಹಿತಿ ಸಲ್ಲಿಕೆ, ಪೋರ್ಟಲ್ ನಿರ್ವಹಣೆ, ಪುನರಾವರ್ತಿತ ದಾಖಲಾತಿ ಮತ್ತು ಆಡಳಿತದ ಹೊರೆ ಶಿಕ್ಷಕರ ಕೆಲಸಗಳಾಗಿವೆ. ಹಾಜರಾತಿ, ಪೌಷ್ಟಿಕ ಆಹಾರದ ಲೆಕ್ಕ, ಮೌಲ್ಯಮಾಪನ ಮತ್ತು ಯೋಜನೆಗಳ ನಮೂದೆಲ್ಲವನ್ನೂ ಶಿಕ್ಷಕರೇ ನಿರ್ವಹಿಸಿದರೆ ಬೋಧನೆಗೆ ಸಮಯವೆಷ್ಟು? ಬೋಧಕೇತರ ಹುದ್ದೆಗಳನ್ನು ತುಂಬುವ ಭರವಸೆ ಇಲ್ಲಿ ಮುಖ್ಯವಾಗುತ್ತದೆ. ಅವುಗಳನ್ನು ಭರ್ತಿಮಾಡದೆ ಆಡಳಿತದ ಕೆಲಸವನ್ನೂ ಶಿಕ್ಷಕರಿಗೆ ವಹಿಸಿ, ಕಲಿಕಾ ಫಲಿತಾಂಶಕ್ಕೆ ಅವರನ್ನೇ ಹೊಣೆಮಾಡುವುದು ಅನ್ಯಾಯ. ಶಿಕ್ಷಕರ ಸಮಸ್ಯೆಗಳನ್ನು ಆಲಿಸಿ, ಸಮಸ್ಯೆಗಳಿಗೆ ಕಾರಣಸಹಿತ ಉತ್ತರಿಸಿ, ನೀತಿ ರೂಪಣೆಯಲ್ಲಿ ಬಗೆಹರಿಸುವುದು ಸಚಿವರು-ಅಧಿಕಾರಿಗಳ ಕರ್ತವ್ಯ. ಇಲಾಖೆಯ ಜೊತೆ ಸಂಪರ್ಕವಿರುವ ಕೆಲವೇ ಶಿಕ್ಷಕರ ಅಭಿಪ್ರಾಯವನ್ನೇ ಸಮಸ್ತ ಶಿಕ್ಷಕರ ಅಭಿಪ್ರಾಯವಾಗಬಾರದು. ಸಾಮಾನ್ಯ ಶಿಕ್ಷಕರ ಅನುಭವಕ್ಕೂ ಸಮಾನ ಮೌಲ್ಯ ದೊರೆಯಬೇಕು. ಅದಕ್ಕಾಗಿ, ಸಚಿವರು ಜಿಲ್ಲಾ ಹಂತದಲ್ಲಿ ಶಿಕ್ಷಣ-ಶಿಕ್ಷಕ ಮತ್ತು ಪಾಲಕರ ಸಮಸ್ಯೆಯನ್ನು ಆಲಿಸುವ ಹೊಸ ಪದ್ಧತಿಯನ್ನು ಜಾರಿಗೊಳಿಸಬೇಕು.
ಒಟ್ಟಾರೆ, ‘ಶಿಕ್ಷಣ ಹೃದಯ ತೆರೆಸಬೇಕು ಅಕ್ಷರ’ ಎಂಬ ಪ್ರಣಾಳಿಕೆಯ ಅಕ್ಷರಗಳು ನಾಯಕತ್ವದ ಹೃದಯ-ಕಣ್ಣುಗಳನ್ನು ತೆರೆಸಬೇಕು. ಸರಕಾರ ತಾನು ಕೊಟ್ಟ ಮಾತು ಮರೆತಾಗ ಮತದಾರರು ತಮ್ಮ ನೆನಪಿನ ಶಕ್ತಿ ತೋರಿಸುತ್ತಾರೆಂಬುದನ್ನು ರಾಜ್ಯದ ಚುನಾವಣಾ ಇತಿಹಾಸ ನಮಗೆ ಪದೇ ಪದೇ ನೆನಪಿಸಿದೆ ಎಂಬುದನ್ನು ನಾಯಕತ್ವ ಮರೆಯಬಾರದು.






