ವಿಳಂಬವಾದ ನಿಂಬರಗಾ ಕೆರೆ ಕಾಮಗಾರಿ

ಆಳಂದ: ರೈತರ ಕೃಷಿಭೂಮಿಗಳಿಗೆ ನೀರು ಒದಗಿಸಬೇಕಿದ್ದ ನಿಂಬರಗಾ ಗ್ರಾಮದ ತಾಂಡಾ ಸಮೀಪ ನಿರ್ಮಾಣಗೊಳ್ಳುತ್ತಿರುವ ಸಣ್ಣ ನೀರಾವರಿ ಇಲಾಖೆಯ ಕೆರೆ ಕಾಮಗಾರಿ ಐದು ವರ್ಷ ಕಳೆದರೂ ಪೂರ್ಣಗೊಳ್ಳದೇ ಉಳಿದಿರುವುದು ರೈತರು ಹಾಗೂ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಸುಮಾರು 2.54 ಕೋಟಿ ರೂ. ವೆಚ್ಚದಲ್ಲಿ ಆರಂಭಗೊಂಡ ಯೋಜನೆ ಅರ್ಧದಲ್ಲೇ ನಿಂತಿದ್ದು, ನೀರಿನ ನಿರೀಕ್ಷೆಯಲ್ಲಿದ್ದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
2021ರ ಸೆಪ್ಟೆಂಬರ್‌ನಲ್ಲಿ ಸಣ್ಣ ನೀರಾವರಿ ಇಲಾಖೆಯು ಕಾಮಗಾರಿಗೆ ಚಾಲನೆ ನೀಡಿತ್ತು. ಮೂಲತಃ ಒಳವಂಡವಾಡಿ ಗ್ರಾಮದ ಕೆರೆಗೆ ಮಂಜೂರಾಗಿದ್ದ ಅನುದಾನವನ್ನು ‘‘ಚೇಂಜ್ ಆಫ್ ವರ್ಕ್’’ ಮೂಲಕ ನಿಂಬರಗಾ ಕೆರೆಗೆ ವರ್ಗಾಯಿಸಿ ಯೋಜನೆ ಆರಂಭಿಸಲಾಗಿತ್ತು. ಆರಂಭದಲ್ಲಿ ವೇಗವಾಗಿ ನಡೆದ ಕಾಮಗಾರಿ ಬಳಿಕ ನಿಧಾನಗೊಂಡು, ಇದೀಗ ಸಂಪೂರ್ಣ ಸ್ಥಗಿತಗೊಂಡಂತಾಗಿದೆ. ಸುಮಾರು 79 ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣಗೊಳ್ಳಬೇಕಿದ್ದ ಕೆರೆಯ ಕಾಮಗಾರಿ ಶೇ.50ರಷ್ಟೂ ಪೂರ್ಣಗೊಂಡಿಲ್ಲ ಎಂದು ರೈತರು ಆರೋಪಿಸಿದ್ದಾರೆ.
ಈಗಾಗಲೇ ನಿರ್ಮಾಣಗೊಂಡ ಭಾಗಗಳಲ್ಲಿಯೇ ಕಳಪೆ ಕಾಮಗಾರಿ ನಡೆದಿರುವುದು ಗೋಚರಿಸುತ್ತಿದೆ ಎಂದು ರೈತರು ದೂರಿದ್ದಾರೆ. ಕೆರೆಯ ಎಡ ಹಾಗೂ ಬಲ ದಂಡೆ ಗೋಡೆಗಳಲ್ಲಿ ಬಿರುಕುಗಳು ಕಾಣಿಸಿಕೊಂಡಿದ್ದು, ಕೆಲವೆಡೆ ಗೋಡೆಗಳು ಉದುರಿ ಬೀಳುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಕಾಲುವೆ ಕಾಮಗಾರಿ ಪೂರ್ಣಗೊಳ್ಳದ ಕಾರಣ ಯೋಜನೆಯ ಮೂಲ ಉದ್ದೇಶವೇ ವಿಫಲವಾಗುತ್ತಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಕೆರೆ ಪೂರ್ಣಗೊಂಡಿದ್ದರೆ ಅಂತರ್ಜಲ ಮಟ್ಟ ಹೆಚ್ಚಾಗಿ ಕೃಷಿಗೆ ಅಗತ್ಯವಾದ ನೀರು ದೊರೆಯುತ್ತಿತ್ತು. ಆದರೆ ವಿಳಂಬದಿಂದ ಬಾವಿ ಹಾಗೂ ಬೋರ್‌ವೆಲ್‌ಗಳು ಒಣಗಿ ಹೋಗಿ ರೈತರು ತೀವ್ರ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಇದರ ಪರಿಣಾಮ ಬೆಳೆ ಉತ್ಪಾದನೆ ಕುಸಿದು, ಅನೇಕರು ಆರ್ಥಿಕ ಸಂಕಷ್ಟಕ್ಕೊಳಗಾಗಿದ್ದಾರೆ.
ಒಳವಂಡವಾಡಿ ಗ್ರಾಮದ ಕೆರೆ ಕಾಮಗಾರಿಗೆ ಮಂಜೂರಾಗಿದ್ದ ಸುಮಾರು 2.5 ಕೋಟಿ ರೂ. ಅನುದಾನವನ್ನು ‘ಚೇಂಜ್ ಆಫ್ ವರ್ಕ್’ ಮೂಲಕ ನಿಂಬರಗಾ ಕೆರೆಗೆ ವರ್ಗಾಯಿಸಿಕಾಮಗಾರಿ ಆರಂಭಿಸಲಾಗಿತ್ತು. ಆದರೆ ಒಳವಂಡವಾಡಿ ಕೆರೆ ವ್ಯಾಪ್ತಿಯ ರೈತರು ಪಿಐಎಲ್ ಸಲ್ಲಿಸಿರುವ ಹಿನ್ನೆಲೆ ಅನುದಾನಕ್ಕೆ ತಡೆ ಹಿಡಿಯಲಾಗಿದೆ.
-ಶಾಂತಪ್ಪ ಜಾಧವ, ಎಇಇ, ಸಣ್ಣ ನೀರಾವರಿ ಇಲಾಖೆ
ಉನ್ನತ ಅಧಿಕಾರಿಗಳು ತಕ್ಷಣ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಕಾಮಗಾರಿಗೆ ವೇಗ ನೀಡಿ ಶೀಘ್ರ ಪೂರ್ಣಗೊಳಿಸದಿದ್ದರೆ ರೈತರು ಹಾಗೂ ಸಾರ್ವಜನಿಕರೊಂದಿಗೆ ಉಗ್ರ ಹೋರಾಟ ನಡೆಸಲಾಗುವುದು.
-ಬಸವರಾಜ ಯಳಸಂಗಿ, ಸಾಮಾಜಿಕ ಹೋರಾಟಗಾರ






