ದಿಲ್ಲಿ ಗಣರಾಜ್ಯೋತ್ಸವ: ಚಾಮರಾಜನಗರ ಜಿಲ್ಲೆಯ ರೈತ ಮಹಿಳೆ ವರ್ಷಾಗೆ ಆಹ್ವಾನ

ಚಾಮರಾಜನಗರ, ಜ.17: ಜಿಲ್ಲೆಯ ರೈತ ಮಹಿಳೆ ವರ್ಷಾ ಅವರು ಜ.26ರಂದು ದಿಲ್ಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ಆಹ್ವಾನ ಪಡೆದಿದ್ದಾರೆ.
ಚಾಮರಾಜನಗರ ತಾಲೂಕಿನ ಉಮ್ಮತ್ತೂರು ಗ್ರಾಮದಲ್ಲಿ ಬಾಳೆ ದಿಂಡಿನಿಂದ ಉತ್ಪನ್ನ ತಯಾರಿಸುತ್ತಿರುವ ವರ್ಷಾ ಜಿಲ್ಲೆಯ ಹಿರಿಮೆಯನ್ನು ಹೆಚ್ಚಿಸಿದ್ದಾರೆ. ರಾಜ್ಯದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವವರಿಗೆ ಈ ಅವಕಾಶ ದೊರೆತಿದೆ. ಕೃಷಿ ವಲಯದಿಂದ ವರ್ಷಾ ಆಯ್ಕೆಯಾಗಿದ್ದು, ಪತಿ ಶ್ರೀಕಂಠ ಅವರೊಂದಿಗೆ ಜ.25ರಂದು ದಿಲ್ಲಿಗೆ ಹೋಗಲು ತಯಾರಿ ನಡೆಸಿದ್ದಾರೆ.
ಎಂಟೆಕ್ ಪದವೀಧರೆಯಾಗಿರುವ ವರ್ಷಾ ‘ಆಕೃತಿ ಇಕೋ ಫ್ರೆಂಡ್ಲಿ ಎಂಟರ್‌ಪ್ರೈಸಸ್’ ಸಂಸ್ಥೆ ಸ್ಥಾಪಿಸಿದ್ದಾರೆ. ಇದಕ್ಕೆ ಸಾಫ್ಟ್‌ವೇರ್ ಉದ್ಯೋಗಿಯಾಗಿರುವ ಪತಿ ಶ್ರೀಕಂಠ ಸಾಥ್ ನೀಡಿದ್ದಾರೆ.
ಕೋವಿಡ್ 2ನೇ ಅಲೆಯ ಲಾಕ್‌ಡೌನ್‌ನಿಂದ ಉದ್ಯಮಗಳು ನಲುಗಿದ್ದ ಸಂದರ್ಭದಲ್ಲಿ ವರ್ಷಾ ಅವರ ಸಂಸ್ಥೆ ಆರಂಭಗೊಂಡಿತು ಎನ್ನುವುದು ಮತ್ತೊಂದು ವಿಶೇಷ. ಪ್ರಸ್ತುತ ಇವರ ಬಳಿ ಹಲವರು ಉದ್ಯೋಗ ಮಾಡುತ್ತಿದ್ದಾರೆ. ವರ್ಷಾ ಅವರ ಸಾಧನೆಗೆ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಸಂಸ್ಥೆಗಳಿಂದ ಪ್ರಶಸ್ತಿ ಲಭಿಸಿದೆ.
ವರ್ಷಾ ತಮ್ಮ ಜಮೀನಿನಲ್ಲಿ ಬಾಳೆ, ಮಾವು, ಅರಿಶಿಣ ಬೆಳೆದಿದ್ದಾರೆ. ಬಾಳೆ ದಿಂಡಿನ ನಾರಿನಿಂದ ಬ್ಯಾಗ್, ಬಾಕ್ಸ್, ಪೂಜೆ ಬ್ಯಾಗ್, ಪರ್ಸ್, ಲ್ಯಾಪ್‌ಟಾಪ್ ಬ್ಯಾಗ್, ಯೋಗ ಮ್ಯಾಟ್, ಕಪ್ ಮತ್ತು ಇನ್ನಿತರ ಕರಕುಶಲ ವಸ್ತುಗಳನ್ನು ತಯಾರು ಮಾಡುತ್ತಿದ್ದಾರೆ. ಬಾಳೆಯ ನಾರು ತೆಗೆದಾಗ ಬರುವ ರಸವನ್ನು ಶೇಖರಣೆ ಮಾಡಿ ಇದರಲ್ಲಿ ಪೊಟ್ಯಾಷಿಯಂ ದ್ರವರೂಪದ ಗೊಬ್ಬರವನ್ನು ತಮ್ಮ ಜಮೀನಿಗೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ.
ಆಕಾಶವಾಣಿಯಲ್ಲಿ 2023ರ ನ.26ರಂದು ಪ್ರಸಾರಗೊಂಡ ಮನ್ ಕಿ ಬಾತ್ 107ನೇ ಆವೃತ್ತಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ವರ್ಷಾ ಬಗ್ಗೆ ಪ್ರಸ್ತಾಪಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಮನ್ ಕಿ ಬಾತ್ ಹಲವರಿಗೆ ಪ್ರೇರಣೆಯಾಗಿದೆ. ವರ್ಷಾ ಅವರು ಬಾಳೆ ದಿಂಡಿನಿಂದ ಜೈವಿಕ ಗೊಬ್ಬರ ತಯಾರಿಸಲು ಆರಂಭಿಸಿದರು. ಪ್ರಕೃತಿ ಬಗ್ಗೆ ಪ್ರೀತಿ ಇರುವ ವರ್ಷಾ ಅವರ ಈ ಕೆಲಸ ಇತರರಿಗೆ ಉದ್ಯೋಗ ನೀಡಿದೆ ಎಂದು ಶ್ಲಾಘಿಸಿದ್ದರು.
ದೇಶದ ರಾಜಧಾನಿ ದಿಲ್ಲಿಯಲ್ಲಿ ನಡೆಯುವ ಗಣರಾಜ್ಯೋತ್ಸವದಲ್ಲಿ ಜಿಲ್ಲೆಯವರಿಗೆ ಭಾಗವಹಿಸುವ ಅವಕಾಶ ಒದಗಿ ಬರುತ್ತಲೇ ಇದೆ. ಪ್ರಧಾನ ಮಂತ್ರಿ ಬೀದಿಬದಿ ವ್ಯಾಪಾರಿಗಳ ಆತ್ಮನಿರ್ಭರ ನಿಧಿ(ಪಿಎಂ ಸ್ವನಿಧಿ) ಯೋಜನೆಯಲ್ಲಿ ಕಿರು ಸಾಲ ಸೌಲಭ್ಯ ಪಡೆದು ನಿಗದಿತ ಅವಧಿಯಲ್ಲಿ ಮರು ಪಾವತಿ ಮಾಡುತ್ತಿದ್ದ ನಗರದ ಗುಂಡ್ಲುಪೇಟೆ ರಸ್ತೆಯ ಬೀದಿಬದಿಯ ಟೀ ಅಂಗಡಿ ವ್ಯಾಪಾರಿ ಸಮೀವುಲ್ಲಾ 2024ರಲ್ಲಿ ದಿಲ್ಲಿಯಲ್ಲಿ ನಡೆದಿದ್ದ ಗಣರಾಜ್ಯೋತ್ಸವದಲ್ಲಿ ಪಾಲ್ಗೊಳ್ಳಲು ಅವಕಾಶ ಪಡೆದಿದ್ದರು. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ವಡ್ಡಗೆರೆಯಲ್ಲಿ ಮಾದರಿ ಕೃಷಿ ಮಾಡುತ್ತಿರುವ ಚಿನ್ನಸ್ವಾಮಿ ಮತ್ತು ಪತ್ನಿ ಗಿರಿಕನ್ಯೆ ಅವರಿಗೆ 2025ರಲ್ಲಿ ಆಹ್ವಾನ ಸಿಕ್ಕಿತ್ತು. ಈ ವರ್ಷ ವರ್ಷಾ ಅವರಿಗೆ ಅವಕಾಶ ದೊರೆತಿದೆ.
ಹೊಸದಿಲ್ಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ಸಿಕ್ಕಿರುವುದಕ್ಕೆ ತುಂಬಾ ಸಂತೋಷವಾಗುತ್ತಿದೆ. ದೇಶದ ಬೇರೆ ಬೇರೆ ಕಡೆಗಳಿಂದ ವಿವಿಧ ಕ್ಷೇತ್ರಗಳ ಸಾಧಕರು ಗಣರಾಜ್ಯೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ಅವರ ಬಗ್ಗೆ ತಿಳಿದುಕೊಳ್ಳುವ ಮತ್ತು ಕಲಿತುಕೊಳ್ಳುವುದಕ್ಕೂ ಅವಕಾಶ ಸಿಗುತ್ತಿರುವುದು ಸಂತಸ ತಂದಿದೆ.
-ವರ್ಷಾ, ರೈತ ಮಹಿಳೆ







