ಜಲಮೂಲಗಳ ಅಭಿವೃದ್ಧಿ ಹೆಸರಿನಲ್ಲಿ ಓಡೋನೇಟಗಳ ಆವಾಸ ಸ್ಥಾನ ನಾಶ
ಶುದ್ಧ ಸಿಹಿನೀರಿನ ಸೂಚಕ ಡ್ರಾಗನ್ ಫ್ಲೈ -ಡ್ಯಾಮ್ಸೆಲ್ ಫ್ಲೈಗಳು!

ಉಡುಪಿ: ನಮ್ಮ ಸುತ್ತಮುತ್ತಲು ಕಂಡುಬರುವ ಸಾಮಾನ್ಯ ಕೀಟಗಳ ಪೈಕಿ ಡ್ರಾಗನ್ ಫ್ಲೈ ಹಾಗೂ ಡ್ಯಾಮ್ಸೆಲ್ ಫ್ಲೈ ಸಾಕಷ್ಟು ಆಕರ್ಷಣೀಯ. ಡ್ರಾಗನ್ ಫ್ಲೈ ಅನ್ನು ಏರೊಪ್ಲೇನ್ ಚಿಟ್ಟೆ, ದುಂಬಿ ಎಂದೆಲ್ಲ ಕರೆಯಲಾಗುತ್ತದೆ. ಬಾಲ್ಯದಲ್ಲಿ ಇದನ್ನು ಹಿಡಿದು ಆಟ ಆಡದ ಮಕ್ಕಳೇ ಇಲ್ಲ. ಅದೇ ರೀತಿ ಡ್ರಾಗನ್ ಫ್ಲೈಗಿಂತ ಸಣ್ಣಗಾತ್ರದಲ್ಲಿರುವ ಡ್ಯಾಮ್ ಸೆಲ್ ಫ್ಲೈ ಕೂಡ ಬಣ್ಣ ಬಣ್ಣಗಳಿಂದ ಗಮನ ಸೆಳೆಯುತ್ತದೆ.
ಪರಿಸರದ ಆಹಾರ ಜಾಲದಲ್ಲಿ ಸಾಕಷ್ಟು ನಿರ್ಣಾಯಕ ಪಾತ್ರಗಳನ್ನು ವಹಿಸುವ ಡ್ರಾಗನ್ ಫ್ಲೈ ಹಾಗೂ ಡ್ಯಾಮ್‌ಸೆಲ್ ಫ್ಲೈಗಳನ್ನು ಒಟ್ಟಾಗಿ ಓಡೋನೇಟಗಳು ಎಂಬುದಾಗಿ ಕರೆಯಲಾಗುತ್ತದೆ. ಇವತ್ತು ಅಭಿವೃದ್ಧಿ ಹೆಸರಿನಲ್ಲಿ ನಡೆಯುತ್ತಿರುವ ಕೆರೆಗಳ ಪುನಶ್ಚೇತನವು ಈ ಕೀಟಗಳಿಗೆ ಕಂಟಕವಾಗಿ ಪರಿಣಮಿಸುತ್ತಿದೆ. ಆ ಮೂಲಕ ಅವುಗಳ ಆವಾಸಸ್ಥಾನವನ್ನೇ ನಾಶ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ
ನೈಸರ್ಗಿಕ ಜಲಮೂಲಗಳನ್ನು ಸಂರಕ್ಷಿಸಬೇಕಾಗಿದೆ. ಆಗ ಮಾತ್ರ ಓಡೋನೇಟಗಳನ್ನು ರಕ್ಷಿಸಲು ಸಾಧ್ಯ ಎಂಬುದು ಪರಿಸರ ತಜ್ಞರು ಅಭಿಪ್ರಾಯ.
ಶುದ್ಧ ನೀರಿನ ಸೂಚಕಗಳು: ಓಡೋನೇಟಗಳಿಗೆ ಆರೋಗ್ಯಕರ ಸಿಹಿ ನೀರಿನ ಪರಿಸರ ವ್ಯವಸ್ಥೆ ಅತೀ ಅಗತ್ಯವಾಗಿದೆ. ಆದುದರಿಂದ ಇವು ಸಿಹಿನೀರಿನ ಪರಿಸರ ವ್ಯವಸ್ಥೆಗಳ ಪ್ರಮುಖ ಸೂಚಕಗಳಾಗಿವೆ. ಇವು ಸ್ವಚ್ಛ ನೀರಿನ ಪರಿಸರದಲ್ಲಿ ಮಾತ್ರ ಕಂಡು ಬರುವುದರಿಂದ ಅಲ್ಲಿ ನೀರು ಸ್ವಚ್ಛವಾಗಿದೆ ಎಂಬುದನ್ನು ಅಂದಾಜಿಸಬಹುದು.
ಓಡೋನೇಟಗಳು ಸೊಳ್ಳೆಗಳು, ನೊಣಗಳು ಮತ್ತು ಇತರ ಸಣ್ಣ ಕೀಟಗಳನ್ನು ತಿನ್ನುತ್ತವೆ. ಆ ಮೂಲಕ ಸೊಳ್ಳೆ ಸೇರಿದಂತೆ ಇತರ ಕೀಟಗಳನ್ನು ನೈಸರ್ಗಿಕವಾಗಿ ನಿಯಂತ್ರಿಸುವ ಕಾರ್ಯ ಮಾಡುತ್ತದೆ. ಅದೇ ರೀತಿ ಇವು ಪಕ್ಷಿಗಳು, ಕಪ್ಪೆಗಳು, ಜೇಡಗಳು ಮತ್ತು ಮೀನುಗಳಿಗೆ ಆಹಾರವಾಗಿಯೂ ಪರಿಸರದ ಆಹಾರ ಜಾಲದಲ್ಲಿ ನಿರ್ಣಾಯಕ ಪಾತ್ರಗಳನ್ನು ವಹಿಸುತ್ತದೆ.
ಅದೇ ರೀತಿ ಇವು ಪರಿಸರ ಮಾಲಿನ್ಯ ಮತ್ತು ಹವಾಮಾನ ವೈಪರೀತ್ಯ ಸೇರಿದಂತೆ ಪರಿಸರದಲ್ಲಿನ ಬದಲಾವಣೆಗಳನ್ನು ಅರಿಯಲು ಪರಿಸರ ವಿಜ್ಞಾನಿಗಳಿಗೆ ಬಹಳಷ್ಟು ಸಹಕಾರಿಯಾಗಿದೆ.
500ಕ್ಕೂ ಅಧಿಕ ಪ್ರಬೇಧಗಳು: ಓಡೋನೇಟ(ಡ್ರಾಗನ್ ಫ್ಲೈ ಹಾಗೂ ಡ್ಯಾಮ್ಸೆಲ್ ಫ್ಲೈ)ಗಳು ಭಾರತದಲ್ಲಿ ಈವರೆಗೆ 500ಕ್ಕೂ ಅಧಿಕ ಪ್ರಭೇದಗಳನ್ನು ಹೊಂದಿದೆ. ಪಶ್ಚಿಮಘಟ್ಟ ಇವುಗಳ ಪ್ರಮುಖ ತಾಣವಾಗಿದ್ದು, ಅಲ್ಲಿ ಅತ್ಯಂತ ಹೆಚ್ಚಿನ ಪ್ರಭೇದಗಳು ಕಂಡುಬಂದಿವೆ.
ಡ್ರಾಗನ್ ಫ್ಲೈ 330 ಪ್ರಭೇದಗಳು ಮತ್ತು ಡ್ಯಾಮ್ಸೆಲ್ ಫ್ಲೈ 170 ಪ್ರಭೇದಗಳನ್ನು ಗುರುತಿಸಲಾಗಿದೆ. ಕೇವಲ ಪಶ್ಚಿಮಘಟ್ಟಗಳಲ್ಲಿಯೇ ಸುಮಾರು 200 ಪ್ರಭೇದಗಳು ಕಂಡುಬಂದಿವೆ. ಇದರಲ್ಲಿ ಬಹುತೇಕ ಪ್ರಭೇದಗಳಲು ಸ್ಥಳೀಯ(ಎಂಡಮಿಕ್)ವಾಗಿದೆ. ಅಂದರೆ ಅವು ಭಾರತ ಪಶ್ಚಿಮ ಘಟ್ಟಗಳನ್ನು ಬಿಟ್ಟರೆ ಜಗತ್ತಿನ ಬೇರೆ ಯಾವ ಪ್ರದೇಶದಲ್ಲೂ ಕಂಡುಬರುವುದಿಲ್ಲ.
ಕರ್ನಾಟಕ ರಾಜ್ಯದಲ್ಲಿ ಪಶ್ಚಿಮ ಘಟ್ಟಗಳು ವ್ಯಾಪಿಸಿರುವುದರಿಂದ ಇಲ್ಲಿ 200ಕ್ಕೂ ಅಧಿಕ ಪ್ರದೇಶಗಳನ್ನು ಗುರುತಿಸಲಾಗಿದೆ. ಇದರಲ್ಲಿ ಪಶ್ಚಿಮ ಘಟ್ಟಗಳ ಬಹಳ ದೊಡ್ಡ ಪಾಲನ್ನು ಹೊಂದಿದೆ. ಇದರಲ್ಲಿ ಸಾಮಾನ್ಯ ಮತ್ತು ಅಪರೂಪದ ಪ್ರಭೇದಗಳೂ ಸೇರಿವೆ.
ಓಡೋನೇಟಗಳ ಜೀವನ ಚಕ್ರ: ಡ್ರಾಗನ್ ಫ್ಲೈ ಮತ್ತು ಡ್ಯಾಮ್ಸೆಲ್ ಫ್ಲೈಗಳ ಜೀವನ ಚಕ್ರ ಮೂರು ಹಂತದಲ್ಲಿ ಕೂಡಿದೆ. ಮೊದಲನೇ ಹಂತ ಮೊಟ್ಟೆ, ಎರಡನೇ ಹಂತ ಮರಿಹುಳು(ನಿಂಫ್) ಹಾಗೂ ಮೂರನೇ ಹಂತ ವಯಸ್ಕ(ಅಡಲ್ಟ್).
ಇವು ನೀರಿನಲ್ಲಿ ಅಥವಾ ಅದರ ಬಳಿ ಮೊಟ್ಟೆಗಳನ್ನು ಇಡಲಾಗುತ್ತದೆ. ಬಳಿಕ ಅದರಿಂದ ಹೊರಬರುವ ಮರಿಹುಳು ನೀರಿನ ಅಡಿಯಲ್ಲಿ ವಾಸಿಸುತ್ತದೆ ಮತ್ತು ಅವು ಕಿವಿರು(ಗಿಲ್ಸ್)ಗಳ ಮೂಲಕ ಉಸಿರಾಡುತ್ತದೆ. ಇವು ಈ ಹಂತದಲ್ಲಿ ನೀರಿನಲ್ಲಿ ವಾಸವಾಗಿರುವ ಕೀಟಗಳು, ಕಪ್ಪೆ ಮರಿಗಳು ಅಥವಾ ಸಣ್ಣ ಮೀನುಗಳನ್ನು ತಿನ್ನುತ್ತದೆ.
ವಾರಗಳಿಂದ ವರ್ಷಗಳ ನಂತರ ಈ ಮರಿಹುಳು ನೀರಿನಿಂದ ಹೊರ ಬರುತ್ತದೆ ಮತ್ತು ವಯಸ್ಕ ಕೀಟ ಹೊರಹೊಮ್ಮುತ್ತದೆ. ಮುಂದೆ ಇವು ಹಾರಾಡುತ್ತದೆ, ಬೇಟೆಯಾಡುತ್ತದೆ, ಮಿಲನ ಮಾಡುತ್ತದೆ ಮತ್ತು ಮೊಟ್ಟೆಗಳನ್ನು ಇಡುತ್ತದೆ. ಇದರ ಜೀವನ ಚಕ್ರವು ಸಿಹಿನೀರಿನ ಗುಣಮಟ್ಟ ಮತ್ತು ಜಲ ಮೂಲಗಳ ಸುತ್ತಲಿನ ಸಸ್ಯವರ್ಗದ ಮೇಲೆ ಹೆಚ್ಚು ಅವಲಂಬಿತವಾಗಿರುತ್ತದೆ.
ವಯಸ್ಕ ಓಡೋನೇಟಗಳು ಕೂಡ ನೀರಿನ ಬಳಿ ಉಳಿಯುತ್ತವೆ. ಯಾಕೆಂದರೆ ಅವು ಅಲ್ಲಿಯೇ ಸಂಯೋಗ ಮಾಡಿ ಮೊಟ್ಟೆಗಳನ್ನು ಇಡುತ್ತವೆ. ಅವು ಸಂತಾನೋತ್ಪತ್ತಿಗಾಗಿ ಹಳ್ಳಗಳು, ಕೊಳಗಳು, ಕೆರೆಗಳು ಮತ್ತು ಸರೋವರಗಳಂತಹ ಸಿಹಿನೀರಿನ ಆವಾಸ ಸ್ಥಾನಗಳನ್ನು ಅವಲಂಬಿಸಿವೆ. ಅಲ್ಲದೇ ಅವುಗಳಿಗೆ ಆ ಪ್ರದೇಶದಲ್ಲಿ ಹೇರಳವಾಗಿ ಕೀಟಗಳು ಕೂಡ ಆಹಾರವಾಗಿ ದೊರೆಯುತ್ತವೆ ಎಂದು ಓಡೋನೇಟ ತಜ್ಞ ಡಾ.ವಿವೇಕ್ ಚಂದ್ರನ್ ತಿಳಿಸಿದ್ದಾರೆ.
ಕೆರೆ ಅಭಿವೃದ್ಧಿಯೇ ಕಂಟಕ: ನಮ್ಮಲ್ಲಿ ನಡೆಯುವ ಕೆರೆಗಳ ಅಭಿವೃದ್ಧಿಯು ಡ್ರಾಗನ್‌ಫ್ಲೈ ಮತ್ತು ಡ್ಯಾಮ್ಸೆಲ್ ಫ್ಲೈಗಳ ಸಂತತಿ ನಾಶವಾಗಿ ಅಳಿವಿನಂಚಿಗೆ ಹೋಗಲು ಕಾರಣವಾಗುತ್ತಿದೆ.
ಕೆರೆಯ ಸುತ್ತಮುತ್ತ ಬೆಳೆದ ಹುಲ್ಲು, ಗಿಡಗಂಟಿ, ಪೊದೆಗಳನ್ನು ಕಿತ್ತು ತೆಗೆದು, ಸುತ್ತ ಕಲ್ಲಿನ ದಿಬ್ಬಗಳನ್ನು, ಕಾಂಕ್ರಿಟ್ ಬಂಡೆಗಳು ನಿರ್ಮಿಸುವುದು ಮತ್ತು ಕೆರೆಯನ್ನು ಇನ್ನಷ್ಟು ಆಳವಾಗಿ ಮಾಡಲು ಹೂಳೆತ್ತುವ ಕಾರ್ಯ ದಿಂದ ಡ್ರಾಗನ್‌ಫ್ಲೈ ಮತ್ತು ಡ್ಯಾಮ್ಸೆಲ್ ಫ್ಲೈಗಳ ಮರಿಹುಳುಗಳು ಅವಲಂಬಿಸಿರುವ ಆವಾಸಸ್ಥಾನ ನಾಶವಾಗುತ್ತದೆ.
ಮರಿಹುಳುಗಳು ಕೆರೆಯಲ್ಲಿನ ಮಣ್ಣು, ಒಣ ಎಲೆಗಳು ಅಥವಾ ನೀರಿನಲ್ಲಿ ಮುಳುಗಿರುವ ಸಸ್ಯಗಳಲ್ಲಿ ಅಡಗಿರುವುದರಿಂದ ಕೆರೆಗಳನ್ನು ಹೂಳೆತ್ತುವಾಗ, ಅವುಗಳಲ್ಲಿ ಬಹು ಸಂಖ್ಯೆಯ ಮರಿಗಳು ಸಾಯುತ್ತವೆ. ಅದೇ ರೀತಿ ನೀರಿನ ಸುತ್ತಲಿನ ಪೊದೆಗಳನ್ನು ತೆರವುಗೊಳಿಸುವುದರಿಂದ ವಯಸ್ಕ ಓಡೋನೇಟಗಳ ಸಂತಾನೋತ್ಪತ್ತಿ ಮತ್ತು ವಿಶ್ರಾಂತಿಗೆ ಜಾಗವೇ ಇಲ್ಲವಾಗುತ್ತದೆ. ಮೊಟ್ಟೆಗಳನ್ನು ಇಡಲು ಸಾಧ್ಯವಾಗದೇ ಅವುಗಳ ಸಂತತಿಯೇ ನಾಶದ ಅಂಚಿಗೆ ತಲುಪುತ್ತದೆ.
ಇದರೊಂದಿಗೆ ರಾಸಾಯನಿಕ ಬಳಕೆ ಹಾಗೂ ಒಳಚರಂಡಿಗಳ ತ್ಯಾಜ್ಯಗಳಿಂದಾಗಿ ಜಲಮೂಲಗಳ ಮಾಲಿನ್ಯ, ನಗರೀಕರಣ ಮತ್ತು ಜೌಗು ಪ್ರದೇಶಗಳ ನಾಶ, ಅರಣ್ಯನಾಶ ಮತ್ತು ಕೀಟನಾಶಕಗಳ ಬಳಕೆ ಹಾಗೂ ಹವಾಮಾನ ಬದಲಾವಣೆಗಳು ಕೂಡ ಇವುಗಳ ಸಂತತಿ ನಾಶಕ್ಕೆ ಕಾರಣವಾಗುತ್ತಿದೆ. ಇವುಗಳ ಪರಿಣಾಮ ಸೊಳ್ಳೆಗಳ ಸಂಖ್ಯೆ ಹೆಚ್ಚಳವಾಗುತ್ತದೆ ಮತ್ತು ಇತರ ಕೀಟಗಳು ಕೂಡ ಜಾಸ್ತಿಯಾಗಿ ಪರಿಸರದಲ್ಲಿ ಅಸಮತೋಲನ ಕಾಡುತ್ತದೆ ಎನ್ನುತ್ತಾರೆ ಓಡೋನೇಟ ತಜ್ಞ ಡಾ.ದತ್ತಪ್ರಸಾದ್ ಅವಿನಾಶ್ ಸಾವಂತ್.
ಡ್ರಾಗನ್ ಫ್ಲೈ ಹಾಗೂ ಡ್ಯಾಮ್ಸೆಲ್ ಫ್ಲೈಗಳು ನೈಸರ್ಗಿಕ ಕೊಳಗಳು, ಕೆರೆಗಳು ಮತ್ತು ಸಸ್ಯವರ್ಗದ ಮೇಲೆ ಅವಲಂಬಿತವಾಗಿವೆ. ಕೆರೆ ಅಭಿವೃದ್ಧಿಯಿಂದ ಅವುಗಳ ಆವಾಸಸ್ಥಾನ ನಾಶವಾಗಬಹುದು ಮತ್ತು ನೀರಿನ ಅಡಿಯಲ್ಲಿರುವ ಮರಿಹುಳುಗಳು ಸಾಯಬಹುದು. ಆದುದರಿಂದ ನೈಸರ್ಗಿಕ ಜಲ ಮೂಲಗಳನ್ನು ಸಂರಕ್ಷಿಸುವುದರಿಂದ ಮಾತ್ರ ಅವುಗಳನ್ನು ರಕ್ಷಿಸಲು ಸಾಧ್ಯವಾಗುತ್ತದೆ.
-ಸಮ್ಮಿಲನ್ ಶೆಟ್ಟಿ, ಚಿಟ್ಟೆ ತಜ್ಞರು







