ದೇವದುರ್ಗ: ಈಗಲೇ ಶುರುವಾಯ್ತು 2028ರ ಚುನಾವಣೆ ಕಸರತ್ತು!
ಬಿಜೆಪಿ-ಜೆಡಿಎಸ್ ಮೈತ್ರಿಯಾದರೆ ಅಭ್ಯರ್ಥಿ ಯಾರು? ಹಾಲಿ ಶಾಸಕಿ ಕರೆಮ್ಮಗೆ ಎದುರಾಳಿಗಳ ಹುಡುಕಾಟ

ದೇವದುರ್ಗ: ವಿಧಾನಸಭಾ ಚುನಾವಣೆಗೆ ಇನ್ನೂ ಎರಡು ವರ್ಷ ಬಾಕಿ ಇರುವಾಗಲೇ ಪರಿಶಿಷ್ಟ ಪಂಗಡಕ್ಕೆ ಮೀಸಲಾದ ದೇವದುರ್ಗ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. 2028ರ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ವಿವಿಧ ಪಕ್ಷಗಳ ಆಕಾಂಕ್ಷಿಗಳು ಈಗಿನಿಂದಲೇ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದು, ಟಿಕೆಟ್ಗಾಗಿ ತೆರೆಮರೆಯ ಕಸರತ್ತು ಆರಂಭಿಸಿದ್ದಾರೆ. ಹಾಲಿ ಶಾಸಕಿಯ ಜನಪ್ರಿಯತೆ, ಮಾಜಿ ಸಚಿವ ಕೆ. ಶಿವನಗೌಡ ನಾಯಕರ ಮುಂದಿನ ರಾಜಕೀಯ ನಡೆ ಹಾಗೂ ಬಿಜೆಪಿ-ಜೆಡಿಎಸ್ ಮೈತ್ರಿಯ ಸಾಧ್ಯತೆಗಳು ಕ್ಷೇತ್ರದಲ್ಲಿ ಚರ್ಚೆಗೆ ಗ್ರಾಸವಾಗಿವೆ.
ಶೈಕ್ಷಣಿಕವಾಗಿ ಹಾಗೂ ಅಭಿವೃದ್ಧಿಯ ದೃಷ್ಟಿಯಿಂದ ಹಿಂದುಳಿದಿರುವ ದೇವದುರ್ಗ ತಾಲೂಕು ರಾಜಕೀಯವಾಗಿ ಮಹತ್ವದ ಕ್ಷೇತ್ರವಾಗಿದೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ನ ಕರೆಮ್ಮ ಜಿ. ನಾಯಕ ಅವರು ಬಿಜೆಪಿಯ ಪ್ರಭಾವಿ ನಾಯಕ, ಮಾಜಿ ಸಚಿವ ಕೆ. ಶಿವನಗೌಡ ನಾಯಕ ಅವರನ್ನು ಭಾರಿ ಮತಗಳ ಅಂತರದಿಂದ ಸೋಲಿಸಿ ಗಮನ ಸೆಳೆದಿದ್ದರು. ರಾಜಕೀಯವಾಗಿ ಪ್ರಬಲ ಎದುರಾಳಿಯ ವಿರುದ್ಧ ಸಾಮಾನ್ಯ ಹಿನ್ನೆಲೆಯ ಮಹಿಳಾ ಅಭ್ಯರ್ಥಿ ಸಾಧಿಸಿದ ಗೆಲುವು ಕ್ಷೇತ್ರದಲ್ಲಿ ಹೊಸ ರಾಜಕೀಯ ಚರ್ಚೆಗೆ ಕಾರಣವಾಗಿತ್ತು. ಕಾಂಗ್ರೆಸ್ ಅಭ್ಯರ್ಥಿ ಶ್ರೀದೇವಿ ನಾಯಕ ಮೂರನೇ ಸ್ಥಾನಕ್ಕೆ ಕುಸಿದಿದ್ದು ಪಕ್ಷಕ್ಕೆ ಹಿನ್ನಡೆಯಾಗಿತ್ತು.
ಬಿಜೆಪಿ-ಜೆಡಿಎಸ್ ಮೈತ್ರಿಯಾದರೆ ಟಿಕೆಟ್ ಯಾರಿಗೆ?
ಕಳೆದ ಚುನಾವಣೆಯಲ್ಲಿ ಸೋಲು ಅನುಭವಿಸಿದ ಮಾಜಿ ಸಚಿವ ಕೆ. ಶಿವನಗೌಡ ನಾಯಕ ಅವರ ಮುಂದಿನ ರಾಜಕೀಯ ನಡೆ ಕುರಿತು ಕ್ಷೇತ್ರದಲ್ಲಿ ಕುತೂಹಲ ಮೂಡಿದೆ. ದೇವದುರ್ಗದಲ್ಲಿ ಮೂರು ಬಾರಿ ಶಾಸಕರಾಗಿ, ಸಚಿವರಾಗಿ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದ ಅವರು, 2023ರ ಚುನಾವಣೆಯಲ್ಲಿ ಸೋಲನುಭವಿಸಿದ್ದರು. ಇದರ ಬೆನ್ನಲ್ಲೇ ಅವರು ಮಾನ್ವಿ ಕ್ಷೇತ್ರಕ್ಕೆ ವಲಸೆ ಹೋಗಬಹುದು ಎಂಬ ಚರ್ಚೆಯೂ ನಡೆದಿತ್ತು.
ಮುಂಬರುವ ಚುನಾವಣೆಯಲ್ಲೂ ಬಿಜೆಪಿ-ಜೆಡಿಎಸ್ ಮೈತ್ರಿ ಮುಂದುವರಿದರೆ ದೇವದುರ್ಗ ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟುಕೊಟ್ಟು ಹಾಲಿ ಶಾಸಕಿ ಕರೆಮ್ಮ ಅವರಿಗೆ ಅವಕಾಶ ನೀಡುವ ಸಾಧ್ಯತೆ ಕುರಿತು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಶಿವನಗೌಡ ನಾಯಕ ಅವರು ಮಾನ್ವಿ ಕ್ಷೇತ್ರದತ್ತ ಮುಖ ಮಾಡಬಹುದು ಎಂಬ ಲೆಕ್ಕಾಚಾರವೂ ಇದೆ. ಆದರೆ ಮಾನ್ವಿಯಲ್ಲಿ ಜೆಡಿಎಸ್ನ ಮಾಜಿ ಶಾಸಕ ಗಂಗಾಧರ ನಾಯಕ ಅವರ ರಾಜಕೀಯ ಪ್ರಾಬಲ್ಯ ಇರುವುದರಿಂದ ಟಿಕೆಟ್ ಪಡೆಯುವುದು ಸುಲಭದ ಮಾತಲ್ಲ ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ. ಮೈತ್ರಿ ಮುಂದುವರಿಯುತ್ತದೆಯೇ, ಕ್ಷೇತ್ರಗಳ ಹಂಚಿಕೆ ಹೇಗಿರಲಿದೆ ಹಾಗೂ ಅಭ್ಯರ್ಥಿಗಳ ಆಯ್ಕೆ ಯಾವ ರೀತಿಯಲ್ಲಿ ನಡೆಯಲಿದೆ ಎಂಬುದು ಮುಂದಿನ ದಿನಗಳಲ್ಲಿ ಸ್ಪಷ್ಟವಾಗಬೇಕಿದೆ.
ದೇವದುರ್ಗ ಕ್ಷೇತ್ರದಲ್ಲಿ ಚುನಾವಣೆ ಕುರಿತ ಚರ್ಚೆ ಜೋರಾಗುತ್ತಿದ್ದರೂ, ತಾಲೂಕಿನ ಮೂಲಸೌಕರ್ಯ ಮತ್ತು ಜನಜೀವನದ ಸಮಸ್ಯೆಗಳು ಇನ್ನೂ ಬಗೆಹರಿದಿಲ್ಲ ಎಂಬ ಅಸಮಾಧಾನ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ. ಸ್ವಾತಂತ್ರ್ಯಾ ನಂತರವೂ ಕೆಲವು ಗ್ರಾಮಗಳು ಸಮರ್ಪಕ ಬಸ್ ಸಂಪರ್ಕ, ಶಾಲೆ, ರಸ್ತೆ ಸೇರಿದಂತೆ ಮೂಲಸೌಕರ್ಯಗಳ ಕೊರತೆ ಎದುರಿಸುತ್ತಿವೆ. ಅನೇಕ ಶಾಲೆ, ಕಾಲೇಜುಗಳಲ್ಲಿ ಶಿಕ್ಷಕರ ಕೊರತೆಯಿಂದ ಶಿಕ್ಷಣ ವ್ಯವಸ್ಥೆ ಅತಿಥಿ ಶಿಕ್ಷಕರನ್ನು ಅವಲಂಬಿಸುವಂತಾಗಿದೆ ಎಂಬ ಆರೋಪಗಳಿವೆ.
ಕೆಲವು ಗ್ರಾಮಗಳಲ್ಲಿ ಮಕ್ಕಳ ಅಪೌಷ್ಟಿಕತೆ, ಗುಣಮಟ್ಟದ ಆಹಾರದ ಕೊರತೆ ಹಾಗೂ ಆರೋಗ್ಯ ಸೇವೆಗಳ ಅಲಭ್ಯತೆ ಗಂಭೀರ ಸಮಸ್ಯೆಗಳಾಗಿವೆ. ಶಿಕ್ಷಣ, ಆರೋಗ್ಯ ಮತ್ತು ಆರ್ಥಿಕ ಪ್ರಗತಿಯ ವಿಚಾರದಲ್ಲಿ ಕ್ಷೇತ್ರ ನಿರೀಕ್ಷಿತ ಮಟ್ಟದ ಅಭಿವೃದ್ಧಿ ಸಾಧಿಸಿಲ್ಲ ಎಂಬುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ. ಜನಪ್ರತಿನಿಧಿಗಳ ಆಸ್ತಿ ಮತ್ತು ಜೀವನಮಟ್ಟದಲ್ಲಿ ಬದಲಾವಣೆ ಕಂಡುಬಂದಿದ್ದರೂ, ಜನಸಾಮಾನ್ಯರ ಬದುಕಿನಲ್ಲಿ ನಿರೀಕ್ಷಿತ ಸುಧಾರಣೆ ಆಗಿಲ್ಲ ಎಂಬ ಟೀಕೆಗಳೂ ಕೇಳಿಬರುತ್ತಿವೆ.
ದೇವದುರ್ಗ ಕ್ಷೇತ್ರದ ರಾಜಕೀಯ ಇತಿಹಾಸ:
ಇಲ್ಲಿ ಆರಂಭಿಕ ಚುನಾವಣೆಗಳಲ್ಲಿ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಅವಕಾಶವಿತ್ತು. ಬಳಿಕ ಕ್ಷೇತ್ರವು ಪರಿಶಿಷ್ಟ ಜಾತಿಗೆ ಮೀಸಲಾಯಿತು. 2008ರ ಕ್ಷೇತ್ರ ಮರುವಿಂಗಡಣೆಯ ನಂತರ ಪ.ಪಂ.ಕ್ಕೆ ಮೀಸಲಾದ ಕ್ಷೇತ್ರವಾಗಿ ಬದಲಾಯಿತು. ಅಂದಿನಿಂದ ಕ್ಷೇತ್ರದ ರಾಜಕೀಯ ಸಮೀಕರಣ ಹೊಸ ಸ್ವರೂಪ ಪಡೆದುಕೊಂಡವು.
1957ರ ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್ನ ಶಿವಣ್ಣ ಗೆಲುವು ಸಾಧಿಸಿದ್ದರು. 1962ರಲ್ಲಿ ಕಾಂಗ್ರೆಸ್ನ ಶರಣಪ್ಪ, 1967ರಲ್ಲಿ ಸ್ವತಂತ್ರ ಪಕ್ಷದ ಎಸ್.ಪಿ.ಬಿ. ಪಾಟೀಲ್ ಗೆದ್ದಿದ್ದರು. 1972ರಲ್ಲಿ ಶರಣಪ್ಪ ಮತ್ತೊಮ್ಮೆ ಗೆಲುವು ಸಾಧಿಸಿದರು. 1978ರಲ್ಲಿ ಕ್ಷೇತ್ರ ಪರಿಶಿಷ್ಟ ಜಾತಿಗೆ ಮೀಸಲಾದ ಬಳಿಕ ಇಂದಿರಾ ಕಾಂಗ್ರೆಸ್ನ ಬಿ. ಶಿವಣ್ಣ ಗೆದ್ದರು. 1982ರಲ್ಲಿಯೂ ಅವರು ಗೆಲುವು ಸಾಧಿಸಿದರೆ, 1985ರಲ್ಲಿ ಜನತಾ ಪಕ್ಷದ ಎ. ಪುಷ್ಪಾವತಿ ಜಯಗಳಿಸಿದರು. 1989ರಲ್ಲಿ ಶಿವಣ್ಣ ಮೂರನೇ ಬಾರಿ ಶಾಸಕರಾದರು.
1994ರಲ್ಲಿ ಜನತಾ ದಳದ ಬಿ.ಟಿ. ಲಲಿತಾ ನಾಯಕ್ ಗೆಲುವು ಸಾಧಿಸಿದರು. 1999ರಲ್ಲಿ ಕಾಂಗ್ರೆಸ್ನ ಅಕ್ಕರಕಿ ಯಲ್ಲಪ್ಪ ಹಾಗೂ 2004ರಲ್ಲಿ ಜೆಡಿಎಸ್ನ ಆಲ್ಕೋಡ್ ಹನುಮಂತಪ್ಪ ಕ್ಷೇತ್ರವನ್ನು ಪ್ರತಿನಿಧಿಸಿದರು. 2008ರಲ್ಲಿ ಎಸ್ಟಿ ಮೀಸಲು ಕ್ಷೇತ್ರವಾದ ಬಳಿಕ ಜೆಡಿಎಸ್ನ ಶಿವನಗೌಡ ನಾಯಕ ಗೆಲುವು ಸಾಧಿಸಿದರು. 2013ರಲ್ಲಿ ಕಾಂಗ್ರೆಸ್ನ ಎ. ವೆಂಕಟೇಶ್ ನಾಯಕ 62,070 ಮತಗಳನ್ನು ಪಡೆದು ಜಯಗಳಿಸಿದರು. 2018ರಲ್ಲಿ ಬಿಜೆಪಿಯ ಶಿವನಗೌಡ ನಾಯಕ ಗೆಲುವು ಸಾಧಿಸಿ ಕ್ಷೇತ್ರದಲ್ಲಿ ಪಕ್ಷದ ಖಾತೆ ತೆರೆದರು. 2023ರಲ್ಲಿ ಜೆಡಿಎಸ್ನ ಕರೆಮ್ಮ.ಜಿ. ನಾಯಕ ಅವರು ಶಿವನಗೌಡ ನಾಯಕ ಅವರನ್ನು ಸೋಲಿಸಿ ಶಾಸಕರಾದರು.
ಮುಂಬರುವ ಚುನಾವಣೆಗೆ ಇನ್ನೂ ಸಮಯವಿದ್ದರೂ, ದೇವದುರ್ಗದಲ್ಲಿ ಆಕಾಂಕ್ಷಿಗಳ ಚಟುವಟಿಕೆಗಳು ಹೆಚ್ಚುತ್ತಿರುವುದು ರಾಜಕೀಯ ವಲಯದ ಗಮನ ಸೆಳೆದಿದೆ. ಅಭ್ಯರ್ಥಿಗಳು ಕ್ಷೇತ್ರದಲ್ಲಿ ತಮ್ಮ ಪ್ರಭಾವ ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿದ್ದು, ಪಕ್ಷದ ಕಾರ್ಯಕರ್ತರಲ್ಲಿಯೂ ಮುಂದಿನ ಅಭ್ಯರ್ಥಿಗಳ ಕುರಿತು ಕುತೂಹಲ ಹೆಚ್ಚಾಗಿದೆ. ಮಾಜಿ ಸಚಿವ ಶಿವನಗೌಡ ನಾಯಕ ಅವರು ಮತ್ತೆ ದೇವದುರ್ಗದಲ್ಲೇ ಸ್ಪರ್ಧಿಸುತ್ತಾರೆಯೇ, ಮಾನ್ವಿಯತ್ತ ಮುಖ ಮಾಡುತ್ತಾರೆಯೇ, ಜೆಡಿಎಸ್ ಹಾಲಿ ಶಾಸಕಿ ಕರೆಮ್ಮ ಅವರಿಗೆ ಮತ್ತೊಮ್ಮೆ ಅವಕಾಶ ನೀಡುತ್ತದೆಯೇ ಅಥವಾ ಹೊಸ ಮುಖಗಳಿಗೆ ಮಣೆ ಹಾಕಲಾಗುತ್ತದೆಯೇ ಎಂಬ ಪ್ರಶ್ನೆಗಳು ಎದುರಾಗಿವೆ.
ಒಟ್ಟಿನಲ್ಲಿ, ದೇವದುರ್ಗ ಕ್ಷೇತ್ರದಲ್ಲಿ 2028ರ ಚುನಾವಣೆಯ ರಾಜಕೀಯ ಲೆಕ್ಕಾಚಾರಗಳು ಈಗಿನಿಂದಲೇ ಆರಂಭವಾಗಿವೆ. ಆದರೆ ಕ್ಷೇತ್ರದ ಮತದಾರರಿಗೆ ಮುಖ್ಯವಾಗಿರುವುದು ಅಭ್ಯರ್ಥಿಗಳ ರಾಜಕೀಯ ಪ್ರಾಬಲ್ಯ ಮಾತ್ರವಲ್ಲ; ಶಿಕ್ಷಣ, ಆರೋಗ್ಯ, ಉದ್ಯೋಗ ಹಾಗೂ ಮೂಲಸೌಕರ್ಯಗಳ ಅಭಿವೃದ್ಧಿಗೆ ಯಾರು ಆದ್ಯತೆ ನೀಡುತ್ತಾರೆ ಎಂಬುದೂ ಆಗಿದೆ. ಮುಂದಿನ ಚುನಾವಣೆಯಲ್ಲಿ ಈ ವಿಚಾರಗಳು ಮತದಾರರ ತೀರ್ಮಾನದ ಮೇಲೆ ಎಷ್ಟರ ಮಟ್ಟಿಗೆ ಪ್ರಭಾವ ಬೀರುತ್ತವೆ ಎಂಬುದನ್ನು ಕಾದುನೋಡಬೇಕಿದೆ.
ಮಹಿಳಾ ನಾಯಕಿಯರ ರಾಜಕೀಯ ಪ್ರಾತಿನಿಧ್ಯ
ದೇವದುರ್ಗ ಕ್ಷೇತ್ರದ ರಾಜಕೀಯ ಇತಿಹಾಸದಲ್ಲಿ ಮಹಿಳಾ ನಾಯಕಿಯರ ಪಾತ್ರವೂ ಗಮನಾರ್ಹ. ಎ. ಪುಷ್ಪಾವತಿ, ಬಿ.ಟಿ. ಲಲಿತಾ ನಾಯಕ್ರಂತಹ ಮಹಿಳಾ ನಾಯಕಿಯರು ಶಾಸಕರಾಗಿ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. ಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯ ದೊರೆತಿರುವುದು ಕ್ಷೇತ್ರದ ವಿಶೇಷತೆ.
2023ರಲ್ಲಿ ಕರೆಮ್ಮ.ಜಿ ನಾಯಕ ಅವರು ಪ್ರಭಾವಿ ಮಾಜಿ ಸಚಿವ ಶಿವನಗೌಡ ನಾಯಕ ಅವರನ್ನು ಸೋಲಿಸಿದ್ದು, ಮಹಿಳಾ ನಾಯಕತ್ವದ ಕುರಿತು ಮತ್ತೊಮ್ಮೆ ಚರ್ಚೆ ಹುಟ್ಟುಹಾಕಿತ್ತು. ರಾಜಕೀಯವಾಗಿ ಪ್ರಬಲ ಅಭ್ಯರ್ಥಿಗಳಿದ್ದರೂ ಮತದಾರರು ಬದಲಾವಣೆಗೆ ಅವಕಾಶ ನೀಡಬಹುದು ಎಂಬುದಕ್ಕೆ ಈ ಫಲಿತಾಂಶ ಉದಾಹರಣೆಯಾಯಿತು.






