ವಿಕಸಿತ ಭಾರತ ಜಿ ರಾಮ್ ಜಿ- ಗ್ರಾಮೀಣ ಭಾರತದ ಸಬಲೀಕರಣಕ್ಕಾಗಿ ಉದ್ಯೋಗ ಖಾತರಿ

Photo Credit : PTI
ಗ್ರಾಮೀಣ ಉದ್ಯೋಗದ ‘ಬೇಡಿಕೆ ಆಧಾರಿತ’ ಸ್ವರೂಪವನ್ನು ವಿಕಸಿತ ಭಾರತ-ಜಿ ರಾಮ್ ಜಿ ದುರ್ಬಲಗೊಳಿಸುತ್ತದೆ ಎಂಬುದು ಅತ್ಯಂತ ಸಾಮಾನ್ಯವಾದ ಟೀಕೆಯಾಗಿದೆ. ಆದರೆ, ಈ ವಿಧೇಯಕವನ್ನು ಸರಿಯಾಗಿ ಓದಿದಾಗ ಈ ವಾದವು ನಿಲ್ಲುವುದಿಲ್ಲ. ವಿಧೇಯಕದ ಕಲಮು 5(1) ರ ಅಡಿಯಲ್ಲಿ, ಕೌಶಲ್ಯರಹಿತ ದೈಹಿಕ ಕೆಲಸ ಮಾಡಲು ಮುಂದೆ ಬರುವ ಯಾವುದೇ ಗ್ರಾಮೀಣ ಕುಟುಂಬದ ವಯಸ್ಕ ಸದಸ್ಯರಿಗೆ ಪ್ರತೀ ಹಣಕಾಸು ವರ್ಷದಲ್ಲಿ ಕನಿಷ್ಠ 125 ದಿನಗಳ ಖಾತರಿ ಉದ್ಯೋಗವನ್ನು ಒದಗಿಸುವುದು ಸರಕಾರದ ಸ್ಪಷ್ಟ ಶಾಸನಬದ್ಧ ಜವಾಬ್ದಾರಿಯಾಗಿದೆ ಎಂದು ಉಲ್ಲೇಖಿಸಲಾಗಿದೆ.
ಉದ್ಯೋಗಕ್ಕಾಗಿ ಬೇಡಿಕೆ ಇಡುವ ಹಕ್ಕನ್ನು ದುರ್ಬಲಗೊಳಿಸುವ ಬದಲು, ಈ ವಿಧೇಯಕವು ಖಾತರಿ ಉದ್ಯೋಗದ ಅವಧಿಯನ್ನು 125 ದಿನಗಳಿಗೆ ವಿಸ್ತರಿಸುವ ಮೂಲಕ ಮತ್ತು ಎಂನರೇಗಾ ಕಾಲದ ‘ಹಕ್ಕು ನಿರಾಕರಣೆ’ ನಿಬಂಧನೆಗಳನ್ನು ತೆಗೆದುಹಾಕುವ ಮೂಲಕ ಅದನ್ನು ಮತ್ತಷ್ಟು ಬಲಪಡಿಸುತ್ತದೆ. ಈ ಮೂಲಕ ನಿರುದ್ಯೋಗ ಭತ್ತೆಯನ್ನು ಒಂದು ನೈಜ ಶಾಸನಬದ್ಧ ಸುರಕ್ಷತೆಯನ್ನಾಗಿ ಪುನಃಸ್ಥಾಪಿಸುತ್ತದೆ. ಶಾಸನಬದ್ಧ ಗ್ಯಾರಂಟಿಗಳು ಮತ್ತು ಜಾರಿಗೊಳಿಸಬಹುದಾದ ಹೊಣೆಗಾರಿಕೆಯ ಕಾರ್ಯವಿಧಾನಗಳಲ್ಲಿ ಅಡಕವಾಗಿರುವ ಹಕ್ಕು ಸಹಜವಾಗಿಯೇ ಪ್ರಬಲವಾಗಿರುತ್ತದೆ - ಮತ್ತು ವಿಕಸಿತ ಭಾರತ ಜಿ ರಾಮ್ ಜಿ ಈ ಕೆಲಸವನ್ನು ವಾಸ್ತವದಲ್ಲಿ ಮಾಡುತ್ತದೆ.
ಜೀವನೋಪಾಯ ಖಾತರಿಯನ್ನು ಬಲಪಡಿಸುವುದು :
ಈ ಸುಧಾರಣೆಯು ಉದ್ಯೋಗಕ್ಕಿಂತ ಹೆಚ್ಚಾಗಿ ಆಸ್ತಿ ಸೃಜನೆಗೆ ಆದ್ಯತೆ ನೀಡುತ್ತದೆ ಎಂಬುದು ಮತ್ತೊಂದು ಟೀಕೆಯಾಗಿದೆ. ಆದರೆ, ಈ ವಿಧೇಯಕವು ಕಾನೂನುಬದ್ಧ ಜೀವನೋಪಾಯದ ಗ್ಯಾರಂಟಿಯನ್ನು ಎತ್ತಿ ಹಿಡಿಯುವುದರ ಜೊತೆಗೆ, ಉದ್ಯೋಗವನ್ನು ಉತ್ಪಾದಕ ಮತ್ತು ಸುಸ್ಥಿರ ಸಾರ್ವಜನಿಕ ಆಸ್ತಿಗಳ ನಿರ್ಮಾಣದೊಂದಿಗೆ ಸ್ಪಷ್ಟವಾಗಿ ಬೆಸೆದಿದೆ.
ಅನುಸೂಚಿ I Schedule I) ರ ಕಲಮು 4(2) ನಾಲ್ಕು ಪ್ರಮುಖ ವಿಷಯಾಧಾರಿತ ಕ್ಷೇತ್ರಗಳನ್ನು ಗುರುತಿಸುತ್ತದೆ: ಜಲ ಭದ್ರತೆ, ಪ್ರಮುಖ ಗ್ರಾಮೀಣ ಮೂಲಸೌಕರ್ಯಗಳು, ಜೀವನೋಪಾಯಕ್ಕೆ ಸಂಬಂಧಿಸಿದ ಮೂಲಸೌಕರ್ಯಗಳು ಮತ್ತು ತೀವ್ರ ಹವಾಮಾನ ವೈಪರೀತ್ಯಗಳ ಪರಿಣಾಮ ತಗ್ಗಿಸುವ ಕಾಮಗಾರಿಗಳು. ಇದು ವೇತನ ಸಹಿತ ಉದ್ಯೋಗವು ಕೇವಲ ತಕ್ಷಣದ ಆದಾಯದ ಬೆಂಬಲವನ್ನು ನೀಡುವುದು ಮಾತ್ರವಲ್ಲದೆ, ದೀರ್ಘಕಾಲದ ಗ್ರಾಮೀಣ ಸ್ಥಿತಿಸ್ಥಾಪಕತ್ವ ಮತ್ತು ಉತ್ಪಾದಕತೆಗೂ ಕೊಡುಗೆ ನೀಡುವುದನ್ನು ಖಚಿತಪಡಿಸುತ್ತದೆ. ಆದ್ದರಿಂದ, ಉದ್ಯೋಗ ಮತ್ತು ಆಸ್ತಿ ಸೃಜನೆಗಳು ಪರಸ್ಪರ ಪೈಪೋಟಿ ನೀಡುವ ಉದ್ದೇಶಗಳಲ್ಲ; ಬದಲಿಗೆ ಅವು ಸಮೃದ್ಧ ಮತ್ತು ಸದೃಢ ಗ್ರಾಮೀಣ ಭಾರತಕ್ಕೆ ಅಡಿಪಾಯ ಹಾಕುವ ಪರಸ್ಪರ ಪೂರಕ ಅಂಶಗಳಾಗಿವೆ.
ಕೇಂದ್ರೀಕರಣವಲ್ಲ, ಸಮನ್ವಯದ ಮೂಲಕ ವಿಕೇಂದ್ರೀಕರಣ :
ಕೇಂದ್ರೀಕರಣದ ಆತಂಕಗಳಿಗೆ ವ್ಯತಿರಿಕ್ತವಾಗಿ, ಕಲಮು 4(1) ರಿಂದ 4(3) ವರೆಗಿನ ನಿಬಂಧನೆಗಳು ಎಲ್ಲಾ ಕಾಮಗಾರಿಗಳನ್ನು ಗ್ರಾಮ ಮಟ್ಟದಲ್ಲಿ ಸ್ಥಳೀಯ ಅಗತ್ಯಗಳಿಗೆ ಅನುಗುಣವಾಗಿ ಸಿದ್ಧಪಡಿಸಲಾದ ಮತ್ತು ಗ್ರಾಮ ಸಭೆಯಿಂದ ಅನುಮೋದಿಸಲ್ಪಟ್ಟ ‘ವಿಕಸಿತ ಗ್ರಾಮ ಪಂಚಾಯತ್ ಯೋಜನೆ’ಗಳ (ವಿಜಿಪಿಪಿ) ಅಡಿಯಲ್ಲಿ ಕಾರ್ಯಗತಗೊಳಿಸಲು ಸೂಚಿಸುತ್ತವೆ. ಹಳೆಯ ಚೌಕಟ್ಟಿನಲ್ಲಿದ್ದ ಪ್ರಮುಖ ರಚನಾತ್ಮಕ ದೋಷವಾದ ‘ವಿಘಟನೆ’ಯನ್ನು ಸರಿಪಡಿಸಲು, ಈ ವಿಧೇಯಕವು ಎಲ್ಲಾ ಕಾಮಗಾರಿಗಳನ್ನು ‘ವಿಕಸಿತ ಭಾರತ ರಾಷ್ಟ್ರೀಯ ಗ್ರಾಮೀಣ ಮೂಲಸೌಕರ್ಯ ಸ್ಟ್ಯಾಕ್’ ಅಡಿಯಲ್ಲಿ ಕ್ರೋಡೀಕರಿಸಲು ನಿರ್ದೇಶಿಸುತ್ತದೆ. ಇದು ಏಕೀಕೃತ ಯೋಜನೆ ಮತ್ತು ಪಾರದರ್ಶಕ ಚೌಕಟ್ಟನ್ನು ಸೃಷ್ಟಿಸುತ್ತದೆ.
ಇದು ಕೇವಲ ಕಟ್ಟಳೆಯ ಮೂಲಕ ಹೇರಿದ ಕೇಂದ್ರೀಕರಣವಲ್ಲ. ಕಲಮು 16, 17, 18 ಮತ್ತು 19ರ ಅಡಿಯಲ್ಲಿ ಯೋಜನೆ, ಅನುಷ್ಠಾನ ಮತ್ತು ಮೇಲ್ವಿಚಾರಣೆಯ ಅಧಿಕಾರವನ್ನು ಪಂಚಾಯತ್ ಗಳು, ಕಾರ್ಯಕ್ರಮ ಅಧಿಕಾರಿಗಳು ಮತ್ತು
ಆಯಾ ಹಂತದ ಜಿಲ್ಲಾ ಅಧಿಕಾರಿಗಳಿಗೆ ನೀಡಲಾಗಿದೆ. ಈ ವಿಧೇಯಕವು ಕೇವಲ ಯೋಜನೆಗಳ ಸ್ಪಷ್ಟತೆ, ಸಮನ್ವಯ ಮತ್ತು ಸುಸಂಬದ್ಧತೆಯನ್ನು ಸುಲಭಗೊಳಿಸುತ್ತದೆಯೇ ಹೊರತು, ನಿರ್ಧಾರ ತೆಗೆದುಕೊಳ್ಳುವ ಅಧಿಕಾರವನ್ನು ಕೇಂದ್ರದ ಕೈಗೆ ನೀಡುವುದಿಲ್ಲ. ಸ್ಥಳೀಯ ಆದ್ಯತೆಗಳ ಆಧಾರದ ಮೇಲೆ ಗ್ರಾಮ ಸಭೆಗಳೇ ಯೋಜನೆಯ ಚಾಲನಾ ಶಕ್ತಿಯಾಗಿ ಮುಂದುವರಿಯಲಿವೆ.
ಕಾರ್ಮಿಕರ ಭದ್ರತೆ ಮತ್ತು ಕೃಷಿ ಉತ್ಪಾದಕತೆಯ ನಡುವಿನ ಸಮತೋಲನ ಕೃಷಿಯ ಬಿಡುವಿಲ್ಲದ ಅವಧಿಯಲ್ಲಿ ಎದುರಾಗುವ ಕಾರ್ಮಿಕರ ಕೊರತೆಯ ಕಾಳಜಿಗಳನ್ನು ಈ ವಿಧೇಯಕದಲ್ಲಿ ಸ್ಪಷ್ಟವಾಗಿ ಪರಿಹರಿಸಲಾಗಿದೆ. ಕಲಮು 6ರ ಅಡಿಯಲ್ಲಿ, ಬಿತ್ತನೆ ಮತ್ತು ಕೊಯ್ಲಿನಂತಹ ಬಿಡುವಿಲ್ಲದ ಸಮಯಗಳನ್ನು ಗುರುತಿಸಿ, ಒಂದು ಹಣಕಾಸು ವರ್ಷದಲ್ಲಿ ಒಟ್ಟು ಅರುವತ್ತು ದಿನಗಳವರೆಗೆ ಈ ಯೋಜನೆಯಡಿ ಯಾವುದೇ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬಾರದು ಎಂದು ಮುಂಚಿತವಾಗಿಯೇ ಅಧಿಸೂಚನೆ ಹೊರಡಿಸಲು ರಾಜ್ಯ ಸರಕಾರಗಳಿಗೆ ಅಧಿಕಾರ ನೀಡಲಾಗಿದೆ.
ಮುಖ್ಯವಾಗಿ, ಕಲಮು 6(3) ರ ಪ್ರಕಾರ, ರಾಜ್ಯಗಳು ಹವಾಮಾನ ಮತ್ತು ಕೃಷಿ ಪರಿಸ್ಥಿತಿಗಳಿಗೆ ಅನುಗುಣವಾಗಿ ಜಿಲ್ಲೆ, ತಾಲೂಕು ಅಥವಾ ಗ್ರಾಮ ಪಂಚಾಯತ್ ಮಟ್ಟದಲ್ಲಿ ವಿಭಿನ್ನ ಅಧಿಸೂಚನೆಗಳನ್ನು ಹೊರಡಿಸಲು ಅವಕಾಶ ನೀಡುತ್ತದೆ. ಈ ಅಂತರ್ಗತ ನಮ್ಯತೆಯು, ಹೆಚ್ಚುವರಿ ಉದ್ಯೋಗ ಖಾತರಿಯು ಕೃಷಿ ಚಟುವಟಿಕೆಗಳಿಗೆ ಅಡ್ಡಿಪಡಿಸುವ ಬದಲು ಅವುಗಳಿಗೆ ಪೂರಕವಾಗಿ ಕಾರ್ಯನಿರ್ವಹಿಸುವುದನ್ನು ಖಚಿತಪಡಿಸುತ್ತದೆ. ಇದು ಕಲ್ಯಾಣ ಕಾನೂನುಗಳಲ್ಲಿ ಬಹಳ ಅಪರೂಪವಾಗಿ ಕಂಡುಬರುವ ಸಮತೋಲಿತ ಕ್ರಮವಾಗಿದೆ.
ನಿಯಮಾಧಾರಿತ ಹಂಚಿಕೆಯ ಮೂಲಕ ಸಮಾನತೆ :
ಹಣಕಾಸಿನ ಹಂಚಿಕೆಯಲ್ಲಿ ಬಿಗಿಯಾದ ನಿಯಮಗಳನ್ನು ಹೇರಬಹುದು ಎಂಬ ಆತಂಕಗಳನ್ನು ಟೀಕಾಕಾರರು ವ್ಯಕ್ತಪಡಿಸಿದ್ದಾರೆ. ಆದರೆ, ಕಲಮು 4(5) ಮತ್ತು ಕಲಮು 22(4) ರ ಪ್ರಕಾರ, ರಾಜ್ಯವಾರು ಅನುದಾನದ ಹಂಚಿಕೆಯನ್ನು ನಿಯಮಗಳಲ್ಲಿ ಸೂಚಿಸಲಾದ ವಸ್ತುನಿಷ್ಠ ನಿಯತಾಂಕಗಳ ಆಧಾರದ ಮೇಲೆ ನಿರ್ಧರಿಸುವುದು ಕಡ್ಡಾಯವಾಗಿದೆ.
ಅದೇ ಸಮಯದಲ್ಲಿ, ಈ ಚೌಕಟ್ಟು ರಾಜ್ಯಗಳನ್ನು ಕೇವಲ ಅನುಷ್ಠಾನಗೊಳಿಸುವ ಸಂಸ್ಥೆಗಳಾಗಿ ನೋಡದೆ, ಅಭಿವೃದ್ಧಿಯ ಪಾಲುದಾರರನ್ನಾಗಿ ಪರಿಗಣಿಸುತ್ತದೆ. ವಿಧೇಯಕದಲ್ಲಿ ನಿಗದಿಪಡಿಸಲಾದ ಕನಿಷ್ಠ ಶಾಸನಬದ್ಧ ಚೌಕಟ್ಟಿಗೆ ಅನುಗುಣವಾಗಿ, ರಾಜ್ಯ ಸರಕಾರಗಳು ತಮ್ಮದೇ ಆದ ಯೋಜನೆಗಳನ್ನು ರೂಪಿಸಲು ಮತ್ತು ಕಾರ್ಯಗತಗೊಳಿಸಲು ಅಧಿಕಾರ ನೀಡಲಾಗಿದೆ. ಇದು ಅನುದಾನದ ಹಂಚಿಕೆಯು ನಿಯಮಾಧಾರಿತ ಮತ್ತು ಸಮಾನವಾಗಿರುವುದನ್ನು ಖಚಿತಪಡಿಸಿಕೊಳ್ಳುವುದರ ಜೊತೆಗೆ, ಅನುಷ್ಠಾನದಲ್ಲಿ ನಮ್ಯತೆಯನ್ನು ಉಳಿಸಿಕೊಳ್ಳುತ್ತದೆ - ಇದು ಪ್ರಾಯೋಗಿಕವಾಗಿ ‘ಸಹಕಾರ ಒಕ್ಕೂಟ ವ್ಯವಸ್ಥೆ’ ಯನ್ನು ಪ್ರತಿಬಿಂಬಿಸುತ್ತದೆ.
ತಂತ್ರಜ್ಞಾನವು ಸಬಲೀಕರಣಕ್ಕಾಗಿ, ಹೊರಗಿಡುವುದಕ್ಕಲ್ಲ :
ತಂತ್ರಜ್ಞಾನದ ಬಳಕೆಯಿಂದ ಕಾರ್ಮಿಕರು ಯೋಜನೆಯಿಂದ ಹೊರಗುಳಿಯಬಹುದು ಎಂಬ ಆತಂಕಗಳು, ವಿಧೇಯಕದಲ್ಲಿ ಅಳವಡಿಸಲಾಗಿರುವ ಸುರಕ್ಷತಾ ಕ್ರಮಗಳನ್ನು ಗಮನಿಸದೆ ವ್ಯಕ್ತಪಡಿಸಿದವುಗಳಾಗಿವೆ. ಕಲಮು 23 ಮತ್ತು 24 ತಂತ್ರಜ್ಞಾನ ಆಧಾರಿತ ಪಾರದರ್ಶಕತೆಯನ್ನು ಕಡ್ಡಾಯಗೊಳಿಸುತ್ತವೆ. ಬಯೋಮೆಟ್ರಿಕ್ ದೃಢೀಕರಣ, ಕಾಮಗಾರಿಗಳ ಜಿಯೋ-ಟ್ಯಾಗಿಂಗ್, ನೈಜ-ಸಮಯದ ಡ್ಯಾಶ್ ಬೋರ್ಡ್ ಗಳು ಮತ್ತು ನಿಯಮಿತ ಸಾರ್ವಜನಿಕ ಪ್ರಕಟಣೆಗಳ ಮೂಲಕ ನಕಲಿ ಹಾಜರಾತಿ, ಅಸ್ತಿತ್ವದಲ್ಲಿಲ್ಲದ ಕಾರ್ಮಿಕರು ಮತ್ತು ಪರಿಶೀಲಿಸಲಾಗದ ದಾಖಲೆಗಳಂತಹ ಸಮಸ್ಯೆಗಳನ್ನು ಇದು ಪರಿಹರಿಸುತ್ತದೆ.
ಇಲ್ಲಿ ತಂತ್ರಜ್ಞಾನವನ್ನು ಕೇವಲ ಪ್ರವೇಶ ನಿರ್ಬಂಧಿಸುವ ಕಠಿಣ ವ್ಯವಸ್ಥೆಯನ್ನಾಗಿ ರೂಪಿಸಿಲ್ಲ, ಬದಲಿಗೆ ಅದೊಂದು ಸಬಲೀಕರಣದ ಸಾಧನವಾಗಿದೆ. ತಾಂತ್ರಿಕ ದೋಷಗಳು ಅಥವಾ ಅನಿವಾರ್ಯ ಸಂದರ್ಭಗಳಲ್ಲಿ ವಿನಾಯಿತಿ ನೀಡುವ ‘ಎಕ್ಸೆಪ್ಶನ್ ಹ್ಯಾಂಡ್ಲಿಂಗ್’ ವ್ಯವಸ್ಥೆಯನ್ನು ಇದರ ಪ್ರಮುಖ ವಿನ್ಯಾಸವನ್ನಾಗಿ ಮಾಡಲಾಗಿದೆ. ಕಲಮು 20 ಗ್ರಾಮ ಸಭೆಗಳ ಮೂಲಕ ನಡೆಸುವ ಸಾಮಾಜಿಕ ಲೆಕ್ಕಪರಿಶೋಧನೆ ವ್ಯವಸ್ಥೆಯನ್ನು ಬಲಪಡಿಸುತ್ತದೆ, ಇದು ಸಮುದಾಯದ ಮೇಲ್ವಿಚಾರಣೆಯನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ. ಇಲ್ಲಿ ತಂತ್ರಜ್ಞಾನವು ಹೊಣೆಗಾರಿಕೆಯನ್ನು ತಪ್ಪಿಸುವುದಿಲ್ಲ; ಬದಲಿಗೆ ಅದಕ್ಕೆ ಭದ್ರವಾದ ಅಡಿಪಾಯವನ್ನು ಒದಗಿಸುತ್ತದೆ.
ನವೀಕರಣದ ರೂಪದಲ್ಲಿ ಸುಧಾರಣೆ :
ಉದ್ಯೋಗ ಖಾತರಿಯನ್ನು ಹೆಚ್ಚಿಸುವ ಮೂಲಕ, ಸ್ಥಳೀಯ ಯೋಜನಾ ಕ್ರಮಗಳನ್ನು ಅಳವಡಿಸುವ ಮೂಲಕ, ಕಾರ್ಮಿಕರ ಭದ್ರತೆ ಮತ್ತು ಕೃಷಿ ಉತ್ಪಾದಕತೆಯ ನಡುವೆ ಸಮತೋಲನ ಸಾಧಿಸುವ ಮೂಲಕ, ವಿವಿಧ ಯೋಜನೆಗಳನ್ನು ಸಮನ್ವಯಗೊಳಿಸುವ ಮೂಲಕ, ಸುಧಾರಿತ ಆಡಳಿತಾತ್ಮಕ ಬೆಂಬಲದೊಂದಿಗೆ ಮುಂಚೂಣಿ ಸಾಮರ್ಥ್ಯವನ್ನು ಬಲಪಡಿಸುವ ಮೂಲಕ ಮತ್ತು ಆಡಳಿತವನ್ನು ಆಧುನೀಕರಿಸುವ ಮೂಲಕ, ಈ ವಿಧೇಯಕವು ಪ್ರಾಯೋಗಿಕವಾಗಿ ಆಗಾಗ ವಿಫಲಗೊಳ್ಳುತ್ತಿದ್ದ ಭರವಸೆಗೆ ವಿಶ್ವಾಸಾರ್ಹತೆಯನ್ನು ಮರುಸ್ಥಾಪಿಸಲು ಪ್ರಯತ್ನಿಸುತ್ತದೆ.
ಆಯ್ಕೆಯು ಸುಧಾರಣೆ ಮತ್ತು ಸಹಾನುಭೂತಿಯ ನಡುವೆ ಅಲ್ಲ; ಬದಲಿಗೆ, ನಿರೀಕ್ಷಿತ ಫಲಿತಾಂಶ ನೀಡದ ಸ್ಥಗಿತಗೊಂಡ ಹಕ್ಕು ಮತ್ತು ಘನತೆ, ನಿರೀಕ್ಷಿತ ಹಾಗೂ ಉದ್ದೇಶದೊಂದಿಗೆ ಫಲಿತಾಂಶ ನೀಡುವ ಆಧುನಿಕ ಚೌಕಟ್ಟಿನ ನಡುವೆ ಇದೆ. ಈ ದೃಷ್ಟಿಕೋನದಲ್ಲಿ ನೋಡಿದಾಗ, ವಿಕಸಿತ ಭಾರತ ಜಿ ರಾಮ್ ಜಿ ಸಾಮಾಜಿಕ ರಕ್ಷಣೆಯಿಂದ ಹಿಂದೆ ಸರಿಯುತ್ತಿಲ್ಲ - ಬದಲಿಗೆ ಇದು ಅದರ ನವೀಕರಣವಾಗಿದೆ.







