ಅವಧಿ ಮೀರಿದ ಮಾತ್ರೆ ವಿತರಣೆ: ಆರೋಪ
ರೋಗಿ ಅಸ್ವಸ್ಥ, ಆಸ್ಪತ್ರೆ ವಿರುದ್ಧ ಕ್ರಮಕ್ಕೆ ಆಗ್ರಹ

ಕುಶಾಲನಗರ : ಅವಧಿ ಮೀರಿದ ಮಾತ್ರೆ ಸೇವಿಸಿ ರೋಗಿ ಅಸ್ವಸ್ಥರಾದ ಘಟನೆ ಕುಶಾಲನಗರದ ಗೋಪಾಲ್ ಸರ್ಕಲ್‌ನಲ್ಲಿ ನಡೆದಿದ್ದು, ಆಸ್ಪತ್ರೆಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಇಲ್ಲಿನ ಗೋಪಾಲ್ ಸರ್ಕಲ್‌ನ 55 ವರ್ಷದ ಮಹಿಳೆಯೋರ್ವರು ನಾಲ್ಕು ದಿನಗಳ ಹಿಂದೆ ಕಾಲುನೋವಿನ ಕಾರಣವಾಗಿ ಕುಶಾಲನಗರದ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆದಿದ್ದಾರೆ. ನಂತರ ಕಾಲು ನೋವು ಕಡಿಮೆಯಾಗದ ಹಿನ್ನೆಲೆ ಶುಕ್ರವಾರ ಮತ್ತೆ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.
ನಂತರ ಶುಕ್ರವಾರ ರಾತ್ರಿ ಆಸ್ಪತ್ರೆಯಲ್ಲಿ ನೀಡಿದ ಮಾತ್ರೆಯನ್ನು ಸೇವಿಸಿದ ಮಹಿಳೆಯು ಅಸ್ವಸ್ಥಕ್ಕೊಳಗಾಗಿದ್ದಾರೆ. ನಂತರ ಮನೆಯವರು ಮಾತ್ರೆಯನ್ನು ಪರಿಶೀಲಿಸಿದಾಗ ದಿನಾಂಕ ಮುಗಿದ ಮಾತ್ರೆಯನ್ನು ಸೇವಿಸಿರುವ ಬಗ್ಗೆ ಮಾಹಿತಿ ತಿಳಿದು ಬಂದಿದೆ. ನಂತರ ತಕ್ಷಣವೇ ಮಹಿಳೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಚಿಕಿತ್ಸೆಯ ನಂತರ ಮಹಿಳೆಯ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಸಾಮಾನ್ಯವಾಗಿ ಬೇರೆ ಆಸ್ಪತ್ರೆಗೆ ತೆರಳುವ ನಾವು, ಅಂದು ಈ ಆಸ್ಪತ್ರೆಗೆ ತೆರಳಿದೆವು. ಅವಧಿ ಮುಗಿದ ಮಾತ್ರೆ ಸೇವಿಸಿ ಅನಾಹುತ ಸಂಭವಿಸಿದರೆ ಯಾರು ಹೊಣೆ. ಆಸ್ಪತ್ರೆಯವರು ನಮ್ಮಿಂದ ತಪ್ಪಾಗಿದೆ ಎಂದು ಕ್ಷಮೆ ಕೇಳಿದ್ದಾರೆ. ಸಂಬಂಧಪಟ್ಟವರು ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮಹಿಳೆಯ ಕುಟುಂಬಸ್ಥರು ಆಗ್ರಹಿಸಿದ್ದಾರೆ.
ಅವಧಿ ಮುಗಿದ ಮಾತ್ರೆ ನೀಡಿರುವ ಬಗ್ಗೆ ದೂರು ಪಡೆದುಕೊಂಡು ಪರಿಶೀಲನೆ ನಡೆಸಲಾಗುವುದು. ತಪ್ಪು ಕಂಡು ಬಂದಲ್ಲಿ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ಮಾತ್ರೆಗಳನ್ನು ಸೇವಿಸುವಾಗ ದಿನಾಂಕ ಮುಗಿದಿರುವ ಬಗ್ಗೆ ಪರಿಶೀಲಿಸಿ ಸೇವಿಸಬೇಕು.
- ಡಾ.ಸತೀಶ್ ಕುಮಾರ್, ಡಿಎಚ್‌ಒ ಕೊಡಗು.
ಅವಧಿ ಮುಗಿದ ಮಾತ್ರೆಗಳನ್ನು ನೀಡಿರುವ ಆಸ್ಪತ್ರೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಮುನ್ನೆಚ್ಚರಿಕೆ ಕ್ರಮದಿಂದ ಹಾಗೂ ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದ ಕುಶಾಲನಗರದ ಎಲ್ಲ ಖಾಸಗಿ ಹಾಗೂ ಸರಕಾರಿ ಆಸ್ಪತ್ರೆಗಳು, ಮೆಡಿಕಲ್‌ಗಳ ಮೇಲೆ ಸಂಬಂಧಪಟ್ಟವರು ದಾಳಿ ನಡೆಸಿ ಪರಿಶೀಲನೆ ನಡೆಸಬೇಕು.
- ಜಂಜೀರ್, ಸಾಮಾಜಿಕ ಕಾರ್ಯಕರ್ತ.







